ಪುಸ್ತಕದ ಶೀರ್ಷಿಕೆ : ಹಳ್ಳಿಗೆ ಬಂದ ಎಳೆಯರು
ಲೇಖಕರು : ಎ.ಪಿ. ಮಾಲತಿ
ಪ್ರಕಾಶಕರು : ಕನ್ನಡ ಸಾಹಿತ್ಯ ಪರಿಷತ್ತು
ಮೊದಲನೇ ಮುದ್ರಣ : 1980
ಮೂರನೇ ಮುದ್ರಣ : 1991(ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 28
ಮಕ್ಕಳ ಕಥೆಗಳನ್ನು ಬರೆಯುವುದು ಕಥಾ ಸಂಕಲನ ಹಾಗೂ ಕಾದಂಬರಿಗಳ ರಚನೆಯಷ್ಟು ಸುಲಭವಲ್ಲ. ಮಕ್ಕಳಿಗೆ ಅರ್ಥವಾಗುವಂತೆ, ಅವರು ಇಷ್ಟಪಟ್ಟು ಓದುವಂತೆ ಮಾಡುವುದರ ಜೊತೆಗೆ ಅವರಿಗೆ ಬೇಕಾದ ಮಾಹಿತಿಗಳನ್ನು ಹಾಗೂ ಅವರಿಗೆ ಅಗತ್ಯವಾಗಿರುವ ಸಂದೇಶಗಳನ್ನು ಕೊಡುವುದು ಸಹಾ ಮಕ್ಕಳ ಕಥೆಗಳ ಮೂಲಕ ಆಗುತ್ತದೆ. ಅಂತಹಾ ಮಕ್ಕಳ ಸಾಹಿತ್ಯ ತುಂಬಾ ದೊಡ್ಡದಾಗಿದ್ದರೆ ಮಕ್ಕಳಿಗೆ ಅದರ ಗಾತ್ರ ನೋಡಿಯೇ ಇಷ್ಟು ದೊಡ್ಡ ಕಥೆಯನ್ನು ಓದಬೇಕಾ ಎಂದೆನಿಸಬಹುದು.. ಗಾತ್ರದಲ್ಲಿ ಚಿಕ್ಕದಾದರೂ.. ಕಥಾ ಪಾತ್ರದಲ್ಲಿ ತೂಕವಿರುವ ಮಕ್ಕಳ ಸಾಹಿತ್ಯದ ಈ ಪುಸ್ತಕ ಎ.ಪಿ ಮಾಲತಿಯವರು ಬರೆದಿರುವ ಹಳ್ಳಿಗೆ ಬಂದ ಎಳೆಯರು.
ಮಕ್ಕಳೆಲ್ಲಾ ಅಜ್ಜ - ಅಜ್ಜಿಯ ಮನೆಗೆ ಬೇಸಿಗೆ ರಜೆಗಾಗಿ ಬಂದಿದ್ದಾರೆ. ಅವರ ಮಗನ ಮಕ್ಕಳಾದ 14 ವರ್ಷದ ಉಲ್ಲಾಸ ಹಾಗೂ ಅವನ ತಂಗಿ 12 ವರ್ಷದ ಸುಷ್ಮ, ಅವರ ಜೊತೆಗೆ ಉಲ್ಲಾಸನ ಗೆಳೆಯರಾದ ನರೇಂದ್ರ ಹಾಗೂ ಸತೀಶನೂ ಇದ್ದಾರೆ. ಸುಷ್ಮಳ ಗೆಳತಿಯಾದ ಜಾನಕಿಯೂ ಬಂದಿದ್ದಾಳೆ. ಇವರೆಲ್ಲರೂ ವಾಸಿಸುತ್ತಿರುವುದು ಬೆಂಗಳೂರಿನಲ್ಲಿ. ಅಜ್ಜ-ಅಜ್ಜಿಯ ಮನೆ ಇರುವುದು ಮಲೆನಾಡಿನಲ್ಲಿ. ಹಾಗಾಗಿ ಪಟ್ಟಣದಿಂದ ಹಳ್ಳಿಗೆ ಬಂದಿರುವವರಿಗೆ ಇಲ್ಲಿನ ವಾತಾವರಣ ವಿಭಿನ್ನ.
ಉಲ್ಲಾಸ ಹಾಗೂ ಸುಷ್ಮಾ ರ ತಂದೆಯ ತಮ್ಮ ಹಾಗೂ ತಮ್ಮನ ಹೆಂಡತಿಯು ಇದೇ ಸಮಯದಲ್ಲಿ ಉತ್ತರ ಭಾರತ ಪ್ರವಾಸಕ್ಕೆ ಹೋಗಿರುವುದರಿಂದ ಮನೆಯಲ್ಲಿ ಅಜ್ಜ-ಅಜ್ಜಿಯರ ಜೊತೆಗೆ ಮಕ್ಕಳದ್ದೇ ರಾಜ್ಯಭಾರ. ಅಲ್ಲದೇ, ಮಕ್ಕಳ ಸೈನ್ಯವೇ ಇಲ್ಲಿ ಬಂದಿರುವುದರಿಂದ ಅವರಿಗೆ ಬೇಕಾದ ಸ್ವಾತಂತ್ರ್ಯ ನೀಡಿ ಮಕ್ಕಳ ಮನಸ್ಸಿಗೆ ಉಲ್ಲಾಸ ಮೂಡಿಸುತ್ತಿದ್ದಾರೆ. ಪಟ್ಟಣದಂತಿಲ್ಲದ ಊರಿನಲ್ಲಿ ಮಕ್ಕಳು ಎಲ್ಲವನ್ನೂ ಗಮಣಿಸುತ್ತಿದ್ದಾರೆ. ಅಲ್ಲಿನ ವಾತಾವರಣ, ಊಟ- ತಿಂಡಿ, ಬೆಳಗಿನ ಸೊಬಗು, ವಿವಿಧ ಹೂಗಳು, ಪಕ್ಷಿಗಳ ಕಲರವ ಅಲ್ಲಿ ಸಾಕಿಕೊಂಡಿರುವ ಪ್ರಾಣಿಗಳು ,ನದಿಗಳು ಎಲ್ಲವನ್ನೂ ಗಮನಿಸುವಾಗ ಮಕ್ಕಳ ಮನಸ್ಸಿನಲ್ಲಿ ಪ್ರಶ್ನೆಗಳು ಹಾಗೂ ಕುತೂಹಲಗಳು ಗರಿಗೆದರಿವೆ. ಮಕ್ಕಳ ಸಂದೇಹಗಳಿಗೆ ಉತ್ತರ ನೀಡಿ, ಅವರ ಕುತೂಹಲ ತಣಿಸುತ್ತಾ, ಅನುಮಾನಗಳನ್ನು ಪರಿಹರಿಸುವ ಅಜ್ಜ, ಜೊತೆಗೆ ಅಲ್ಲಿನ ಸಾಂಸ್ಕೃತಿಕ ವೈಭವಗಳ ಪರಿಚಯವನ್ನೂ ಮಾಡಿಸುತ್ತಾರೆ. ಅಷ್ಟೇ ಅಲ್ಲ, ಮಕ್ಕಳ ತುಂಟಾಟವಿಲ್ಲದಿದ್ದರೆ ರಜೆ ಹೇಗೆ ಸಂಪನ್ನವಾಗುತ್ತದೆ..?? ಇವೆಲ್ಲದರ ಸಂಪೂರ್ಣ ಪರಿಚಯಕ್ಕಾಗಿ ಈ ಪುಸ್ತಕ ಓದಿ ನೋಡಿ.
ಮಕ್ಕಳ ಕೈಯಲ್ಲಿ ಇಡಬಹುದಾದ ಈ ಪುಟ್ಟ ಪುಸ್ತಕ ಮಕ್ಕಳಿಗೆ ಹೊಸದೊಂದು ಲೋಕವನ್ನೇ ತೆರೆದಿಡುವುದರಲ್ಲಿ ಯಾವ ಸಂಶಯವೂ ಇಲ್ಲ. ಒಂದು ತಿಂಗಳ ಮಕ್ಕಳ ಬೇಸಿಗೆಯ ರಜೆಯ ಮಜಾ ಹಾಗೂ ಅವರಿಗೆ ಸಿಕ್ಕ ಅನುಭವಗಳು ನಮ್ಮ ಮಕ್ಕಳಿಗೆ ಈ ಕಥೆಯ ರೂಪದಲ್ಲಿ ದೊರೆಯುತ್ತದೆ. ಮಕ್ಕಳಿಗೆ ಕಥೆಯ ಜೊತೆಗೆ ಇಲ್ಲಿನ ಚಿತ್ರಗಳು ಸಹಾ ಮನಸೆಳೆದು.. ಅವರಿಗೆ ರಸದೌತಣ ಬಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ