ಮಂಗಳವಾರ, ಏಪ್ರಿಲ್ 7, 2026

ನಮ್ಮಮ್ಮ ಅಂದ್ರೆ ನಂಗಿಷ್ಟ (ಪುಸ್ತಕ ಯಾನ - 75)


ಪುಸ್ತಕದ ಶೀರ್ಷಿಕೆ : ನಮ್ಮಮ್ಮ ಅಂದ್ರೆ ನಂಗಿಷ್ಟ

ಲೇಖಕರು : ವಸುಧೇಂದ್ರ

ಪ್ರಕಾಶಕರು : ಛಂದ ಪುಸ್ತಕ

ಮೊದಲನೇ ಮುದ್ರಣ : 2006

ಹದಿನೇಳನೇ ಮುದ್ರಣ : 2016 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 104

ಬೆಲೆ : 90 ರೂ.


ವಸುಧೇಂದ್ರ ಅವರ 'ನಮ್ಮಮ್ಮ ಅಂದ್ರೆ ನಂಗಿಷ್ಟ' ಪುಸ್ತಕ ಸುಲಲಿತ ಪ್ರಬಂಧಗಳನ್ನು ಒಳಗೊಂಡಿದೆ. ಈ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಕೂಡ ಬಂದಿದೆ. 


"ನಮ್ಮಮ್ಮ ಅಂದ್ರೆ ನಂಗಿಷ್ಟ" ಎನ್ನುವ ಶೀರ್ಷಿಕೆ ಈ ಪುಸ್ತಕವನ್ನು ಕೈಗೆತ್ತಿಕೊಂಡು ಓದುವಂತೆ ಪ್ರೇರೇಪಿಸುತ್ತದೆ. ಅಮ್ಮನ ಕುರಿತಾದ ನೆನಪುಗಳು ,ಬಾಲ್ಯ ಎಲ್ಲವೂ ಆಪ್ತವಾದ ಭಾವವನ್ನು ಕಟ್ಟಿಕೊಡುತ್ತವೆ. ಅಮ್ಮ ಎನ್ನುವ ಪದವೇ ಹಾಗಲ್ಲವೇ..?? ಅಮ್ಮ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ..?? ಇಲ್ಲಿ ಅವರ ತಾಯಿಯ ನೆನಪನ್ನು ಹೇಳುತ್ತಾ.. ಎಲ್ಲರಿಗೂ ಅವರವರ ಅಮ್ಮಂದಿರ ಕುರಿತಾದ ಭಾವಗಳನ್ನು ಮೆಲ್ಲಗೆ ಮೀಟುತ್ತಾರೆ. ಈ ಪುಸ್ತಕದಲ್ಲಿ ಉಳಿದ ಲಲಿತ ಪ್ರಬಂಧಗಳೂ ಸಹ ಇದ್ದು.. ಮೊದಲ ಕೆಲವು ಲಲಿತ ಪ್ರಬಂಧಗಳು ಅಮ್ಮನ ಕುರಿತಾಗಿದೆ.


ತಿಳಿ ಹಾಸ್ಯವನ್ನು ಹೊಂದಿರುವ ರೀತಿಯ ಈ ಬರಹಗಳು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ. ಅಷ್ಟೇ ಅಲ್ಲ, ಮತ್ತೆ ಮತ್ತೆ ಓದಿ ಮೆಲುಕು ಹಾಕುವಂತೆ ಮಾಡುತ್ತವೆ. ಇಲ್ಲಿ ಅವರು ಪ್ರಸಂಗಗಳನ್ನು ಹೇಳಿರುವ ರೀತಿ ನನಗೆ ಬಹಳ ಇಷ್ಟವಾಯಿತು. ಏಕೆಂದರೆ, ಹೇಳಲು ಮುಜುಗರ ಪಡುವ ವಿಚಾರಗಳನ್ನು ಎಷ್ಟು ಸರಳವಾಗಿ , ಓದಲು ಮುಜುಗರವಿಲ್ಲದಂತೆ ತಿಳಿ ಹಾಸ್ಯದಿಂದ ರಂಜನೀಯವಾಗಿಸಿದ್ದಾರೆ ಎಂದೆನಿಸಿತು.


ಒಬ್ಬಳು ತಾಯಿ ಸಾಕಿ ಚಿಕ್ಕಂದಿನಲ್ಲಿ ನಮ್ಮನ್ನು ಸಲಹುವಾಗ ಇಷ್ಟವಾಗುತ್ತಾಳೆ. ಅದೇ ಅಮ್ಮನನ್ನು ನಾವು ಸಾಕುವಂತಾದಾಗ..? ಅಮ್ಮ ಮಗುವಿನ ಸ್ಥಿತಿಗೆ ಬಂದರೆ...? ಆಗಲೂ ಅವಳನ್ನು ಸುಧಾರಿಸಿಕೊಂಡು, ಇಷ್ಟಪಡುವ ರೀತಿ ಇಲ್ಲಿ ವ್ಯಕ್ತವಾಗಿದೆ. ಮಕ್ಕಳು ಚಿಕ್ಕಂದಿನಲ್ಲಿ ಅನುಭವಿಸುವ ಪೇಚಾಟಗಳಲ್ಲಿ ಒಂದಾದ ಮಲ, ಮೂತ್ರ ವಿಸರ್ಜನೆಯ ಸಮಸ್ಯೆಯನ್ನು "ಚಡ್ಡಿ ರ್ಯಾಸ್ಕಲ್" ಎಂದು ಹೇಳಿಕೊಳ್ಳುತ್ತಾ.. ತಮ್ಮ ಪೇಚಾಟದ ಚಿಕ್ಕಂದಿನ ದಿನಗಳು ಹಾಗೂ ಅಮ್ಮನ ವಯಸ್ಸಾದ ದಿನಗಳಲ್ಲಿ, ಆಕೆಗೆ ಡಯಾಬಿಟೀಸ್ ಬಂದು ಮಲ,ಮೂತ್ರ ವಿಸರ್ಜನೆಗೆ ತೊಂದರೆಯಾದ ಸಂದರ್ಭಗಳು, ಆ ಸಂದರ್ಭವನ್ನು ನಿವಾರಿಸಲು ಹೋದಾಗ ಆದ ತೊಂದರೆಗಳು ಹಾಗೂ ಅದೆಲ್ಲವನ್ನೂ ಮೀರಿದ ಅವರಿಬ್ಬರ ನಡುವಿನ ಭಾಂದವ್ಯವನ್ನು ಬಿಂಬಿಸುತ್ತಾರೆ. ಆಗಲೂ "ನಮ್ಮಮ್ಮ ಅಂದ್ರೆ ನಂಗಿಷ್ಟ" ಎನ್ನುತ್ತಲೇ ಹೇಳುವ ಲೇಖಕರ ಮೊದಲ ಪ್ರಬಂಧವೇ ಮನಸ್ಸು ಮುಟ್ಟುವಂತಿದೆ. 


ಅಮ್ಮಂದಿರಿಗೆ ಪಾತ್ರೆಗಳೆಂದರೆ ಮೋಹ. ಈ ಮಾತು ನನ್ನ ಅಮ್ಮನನ್ನೂ ನನಗೆ ನೆನಪು ಮಾಡಿಸಿತು. ತಾಮ್ರ, ಹಿತ್ತಾಳೆ, ಕಂಚಿನ ಪಾತ್ರೆಗಳೇ ಇದ್ದ ಹಳ್ಳಿಯ ಮನೆಗೆ "ಸ್ಟೇನ್ ಲೆಸ್ ಸ್ಟೀಲ್ ಪಾತ್ರೆಗಳ"ನ್ನು ತಂದ ಅಮ್ಮ ಯಾವುದೋ ಯುದ್ಧವನ್ನು ಗೆದ್ದು ಬೀಗುವ ಅನುಭವದಂತೆ ಕಂಡರೆ.. ಆ ಸ್ಟೇನ್ ಲೆಸ್ ಸ್ಟೀಲ್ ಪಾತ್ರೆಗಳ ವ್ಯಾಮೋಹ ಹೇಗೆ ಬೆಳೆಯುತ್ತಾ ಹೋಯಿತು.. ಹಾಗೆಯೇ ಆಗಿನ ಅಮ್ಮಂದಿರಿಗೂ ಈಗಿನ ಮಕ್ಕಳಿಗೂ ಇರುವ ವ್ಯತ್ಯಾಸಗಳೇನು ಎಂಬುದು ಸ್ಪಷ್ಟವಾಗುತ್ತದೆ. ಅವರು ತನ್ನ ಅಮ್ಮನನ್ನು ಒಂದು ಪಾತ್ರೆ ಅಂಗಡಿಗೆ ಕರೆದುಕೊಂಡು ಹೋಗಿ ಬಿಟ್ಟಾಗ ಆಕೆ ಮಕ್ಕಳಂತೆ ಯಾವುದನ್ನು ಕೊಳ್ಳಲಿ ಎಂದು ಪರದಾಡುತ್ತಾ ಬಹಳ ಖುಷಿ ಪಟ್ಟ ಕ್ಷಣಗಳನ್ನು ಓದಿ ಆ ಕ್ಷಣ ಕಣ್ಮುಂದೆ ಬಂದಂತಾಯಿತು. ಅಮ್ಮನನ್ನು ಖುಷಿ ಪಡಿಸಲು ಅವರು ಕಂಡ ಕಂಡುಕೊಂಡ ಮಾರ್ಗವು ಇಷ್ಟವಾಯಿತು. ಅಲ್ಲದೇ, ಅಮ್ಮನ ದೃಷ್ಟಿಯಲ್ಲಿ ಮಗನ ಬಗ್ಗೆ ಇದ್ದ ಹೆಮ್ಮೆಯ ಭಾವವೂ ಚೆಂದವೆನಿಸಿತು.


"ನಮ್ಮೂರಿಗೂ ಅಣ್ಣಾವ್ರು ಬಂದಿದ್ರು" ಎನ್ನುತ್ತಾ ಆ ಸಂದರ್ಭವನ್ನು ಹೇಳುವಾಗ ಅಮ್ಮ ಸಿನಿಮಾ ನೋಡಿ ಬೆಳೆದವಳಾದ್ದರಿಂದ.. ಅಣ್ಣಾವ್ರನ್ನು ನೋಡಲು ಮಗನನ್ನು ಕರೆದುಕೊಂಡು ತಾನೂ ಹೊರಡುತ್ತಾಳೆ. ಇನ್ನೂ ಪುಟ್ಟ ಮಗನನ್ನು ಕಟ್ಟಿಕೊಂಡು ಹೋದ ಅವಳು.. ಆ ಜನ ಜಂಗುಳಿಯಲ್ಲಿ ತನಗೆ ಕಾಣದಿದ್ದರೂ ಪರವಾಗಿಲ್ಲ.. ತನ್ನ ಮಗನಿಗೆ ಕಾಣಲಿ ಎನ್ನುವ ನಿಸ್ವಾರ್ಥ ಭಾವನೆಯಿಂದ ಆತನನ್ನು ಹೆಗಲೇರಿಸಿಕೊಂಡು ಅವನಿಗೆ ಎಲ್ಲವೂ ದಕ್ಕಲಿ ಎಂಬ ತ್ಯಾಗದ ಪ್ರತಿಫಲವೇನೋ ಎಂಬಂತೆ ಅಣ್ಣಾವ್ರು ಅವಳಿಗೆ ದರ್ಶನ ಕೊಟ್ಟ ರೀತಿ ಇಲ್ಲಿ ಪುಳಕಿತರಾಗುವಂತೆ ಮಾಡುತ್ತದೆ. 


"ಹಾಡು ಹೇಳಿದ ನೆನಪು" ಮಾಡಿಕೊಳ್ಳುವಾಗ ನಾವೂ ಹೀಗೆ ಯಾವುದಾದರೂ ಒಂದು ಹಾಡನ್ನು ಗುನುಗುತ್ತಿರುತ್ತೇವಲ್ಲವಾ ಎನ್ನಿಸಿದರೂ.. ಅದು ಹೆಚ್ಚಾಗಿ, ಅಮ್ಮನ ದೆಸೆಯಿಂದ ನೆನಪಿಸಿಕೊಳ್ಳುವಂತಹ ಹಾಡಾಗಿರುತ್ತದೆ. ಇದು ನಮ್ಮ ಅನುಭವಕ್ಕೂ ಬಂದಿರಬಹುದು. ಅಮ್ಮನಿಗೆ ಸಿನಿಮಾವೆಂದರೆ ಮೋಹವೆನ್ನುವ ಅವರ ಸಿನಿಮಾ ಪ್ರೀತಿಯ ಕುರಿತು ವರ್ಣಿಸುತ್ತಲೇ.. "ಶಂಕರಾಭರಣಂ" ಎನ್ನುವ ಅದ್ಭುತ ಸಿನಿಮಾ ಒಂದಕ್ಕೆ ಸಿನಿಮಾ ದ್ವೇಷಿಯಾಗಿದ್ದ ಅವರ ಪತಿಯನ್ನು ಕರೆದುಕೊಂಡು ಹೋಗಿ ಸಿನಿಮಾ ತೋರಿಸುವ ಹಾಗೂ ಅವರಲ್ಲಿಯೂ ಆ ಸಿನಿಮಾದ ಹಾಡನ್ನು ಗುನುಗುವಂತೆ ಮಾಡುವುದಕ್ಕೆ ಆಕೆ ಮಾಡಿದ ಸರ್ಕಸ್, ಆಕೆಯಲ್ಲಿ ಸಿನಿಮಾ ಪ್ರೀತಿ ಹಾಗೂ ಕೆಚ್ಚನ್ನು ತೋರಿಸುತ್ತದೆ. ಅದೇ ಪ್ರಬಂಧದಲ್ಲಿ ಬರುವ ಮತ್ತೊಂದು ಪ್ರಸಂಗ ಮನ ಮುಟ್ಟುವಂತಿದೆ. ತಿಪ್ಪೇಶಿಯ ಮಲತಾಯಿಯೇ ಅವನನ್ನು ಹೊಡೆದು ಸಾಯಿಸುವ ಪ್ರಸಂಗ ಯಾಕೋ ಆ ಸಂದರ್ಭದಲ್ಲಿ ಬರುವ ಹಾಡಿಗೂ ಕರುಳು ಕಿವಿಚಿದಂತಹ ಅನುಭವವಾಗುತ್ತದೆ. 


"ನಮ್ಮದಲ್ಲದ ಪಾತ್ರವನ್ನು ನಿಭಾಯಿಸುವುದು" ಎಷ್ಟು ಕಷ್ಟ.. ಹಾಗೆ ನಿಭಾಯಿಸಲು ಹೋಗಿ ಸೋತ ಲೇಖಕರನ್ನು ಅವರ ತಾಯಿ ವಹಿಸಿಕೊಂಡು ಮರ್ಯಾದೆ ಕಳೆದುಕೊಳ್ಳುವ ಸಂದರ್ಭದಲ್ಲಿ ಕಾಪಾಡುವ ಸನ್ನಿವೇಶವು ಅಮ್ಮನೆಂಬ ಆಪದ್ಬಾಂಧವಳ ನೆನಪು ತರುತ್ತದೆ. 


ಈ ಪುಸ್ತಕದಲ್ಲಿ ಇವಿಷ್ಟು ಅಮ್ಮನನ್ನು ಗಾಢವಾಗಿ ನೆನಪಿಸಿಕೊಳ್ಳುವಂತೆ ಮಾಡುವ ಸುಲಲಿತ ಪ್ರಬಂಧಗಳು. 


ಅಮ್ಮ ಎನ್ನುವ ವಿಶೇಷ ವ್ಯಕ್ತಿಯನ್ನು ಕೇವಲ ಪದಗಳಲ್ಲಿ ಹಿಡಿದಿಡಲಾಗದು. ಕೆಲವೊಮ್ಮೆ, ಹಾಗೆ ಮಾಡಲು ಹೊರಟಾಗ ನಮ್ಮನ್ನು ಅತಿ ಭಾವುಕರನ್ನಾಗಿ ಮಾಡುತ್ತಾ.. ಅಮ್ಮನಲ್ಲದ ಅಮ್ಮನೇ ಚಿತ್ರಿತವಾಗುವುದು ಹೆಚ್ಚು. ಆದರೆ, ಇಲ್ಲಿ ಹಾಗಾಗದೆ.. ಅಮ್ಮನ ಮಗುತನ, ಕೆಚ್ಚು, ಆಕೆಯ ಸಂಕಟಗಳು,ನೋವು, ಸಣ್ಣಪುಟ್ಟ ಖುಷಿ, ಮಗುವಿನಂತಹ ಮನಸ್ಸು, ತ್ಯಾಗ, ಕಣ್ಣೀರು ಎಲ್ಲವನ್ನೂ ಸಹಜವಾಗಿ ಹಾಗೂ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕರು. 


 ಈ ಪುಸ್ತಕದಲ್ಲಿ ಲೇಖಕರ ಬಾಲ್ಯದಿಂದ ಹಂತ ಹಂತವಾಗಿ ಅವರ ಉದ್ಯೋಗದವರೆಗೂ ನಡೆದಿರುವ ಘಟನೆಗಳ ಅನುಭವವೇ ಲಲಿತ ಪ್ರಬಂಧಗಳ ರೂಪದಲ್ಲಿ ಮೂಡಿಬಂದಿದೆ. 

 "ರೂಢಿ ಮರೆಯುವುದು ಕಷ್ಟ" ಎಂಬ ಮಾತು ನಿಜವಾಗಿಯೂ ಸತ್ಯ. ಬಳ್ಳಾರಿ ಜಿಲ್ಲೆಯ ಪುಟ್ಟ ಸಂಡೂರಿಗೆ.. ಬೆಂಗಳೂರಿನಿಂದ ಬಂದ ಮುಖ್ಯೋಪಾಧ್ಯಾಯರೊಬ್ಬರ ಕನಸುಗಳು ಹಾಗೂ ಅದನ್ನು ನನಸಾಗಿಸಲು ಅವರು ನಡೆದುಕೊಂಡ ರೀತಿ ಮಂದೆ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಶಾಲಾ ಬಾಲಕರಾಗಿ ಕಂಡುಕೊಂಡ ರೀತಿಯಲ್ಲಿ ಹೇಳಿದ್ದಾರೆ. ಶಿಕ್ಷಕರಾಗಿ ತಾವು ನಡೆದುಕೊಳ್ಳುತ್ತಿದ್ದ ಸ್ಟ್ರಿಕ್ಟ್ ಆದ ರೂಢಿಯನ್ನು ತಪ್ಪಿಸುವುದು ಕಷ್ಟವಾಗಿ, ಹಾಗೂ ವಿದ್ಯಾರ್ಥಿಗಳು ತಮ್ಮ ತುಂಟಾಟದ ರೂಢಿಯನ್ನು ತಪ್ಪಿಸಲು ಆಗದೇ ಇದ್ದಾಗ ನಡೆದ ಘಟನೆ ಇಲ್ಲಿದೆ.


 "ಸ್ಮೈಲ್ ಪ್ಲೀಸ್" ಎಂದರೆ ಫೋಟೋಗೆ ನಗುತ್ತಾ ನಿಲ್ಲುವುದು ನಮಗೆ ಅಭ್ಯಾಸವೇ ಆಗಿಬಿಟ್ಟಿರುತ್ತದೆ. ಈಗೀಗ ಮೊಬೈಲ್ ತೆರೆದು ಕ್ಯಾಮೆರಾ ಆನ್ ಮಾಡಿದರೆ ನಗುಮುಖ ತಾನಾಗಿಯೇ ಬಂದುಬಿಡುತ್ತದೆ. ಆದರೆ, ಈ ರೂಢಿ ಒಂದು ಸಂದರ್ಭದಲ್ಲಂತೂ ತಪ್ಪಿಸಲೇ ಬೇಕು. ಅದು ನಮ್ಮ ಆತ್ಮೀಯರು ತೀರಿಕೊಂಡಾಗ, ಆದರೆ ಅಂತಹಾ ಸಂದರ್ಭದಲ್ಲಿ ಕೂಡಾ ಕೆಲವೊಮ್ಮೆ ಸಹಜವಾಗಿಯೇ ವರ್ತಿಸುವಾಗ.. ರೂಢಿ ತಪ್ಪುವುದು ಎಷ್ಟು ಕಷ್ಟ ಎನ್ನುವ ನಿದರ್ಶನವೊಂದನ್ನು ರಾಗಮ್ಮನ ಪ್ರಸಂಗದಲ್ಲಿ ಹೇಳಿದ್ದಾರೆ.

 

 ನಮಗೆ ಪರಿಚಿತವಾದ ಊರಿನಲ್ಲಿ ಯಾವುದೋ ವಿಳಾಸವನ್ನು, ಯಾರಾದರೂ ಅಪರಿಚಿತರು ಕೇಳಿದಾಗ ಅತ್ಯಂತ ಉತ್ಸಾಹದಿಂದ ಹೇಳಿಬಿಡುತ್ತೇವೆ. ಆದರೆ, ಕೆಲವೊಮ್ಮೆ ಇದು ಎಡವಟ್ಟಿಗೂ ಕಾರಣವಾಗಬಹುದು. ಕಲಕತ್ತಾದ ಹೌರಾ ಸೇತುವೆಯ ಹಾಗೂ ಕಲ್ಕತ್ತಾದ ದರ್ಶನವಾದಂತಿದೆ.


 "ಅತಿಥಿ ಮತ್ತು ಕೋತಿ" ಈ ಲಲಿತ ಪ್ರಬಂಧವನ್ನು ನಾನು ಬಹಳಷ್ಟು ಸಲ ಓದಿದ್ದೇನೆ. ಇದು ನನಗೆ ಬಹಳ ಇಷ್ಟವಾದ ಲಲಿತ ಪ್ರಬಂಧ. ವಿದೇಶಿಯರು ಬಂದಾಗ ಭಾರತೀಯರ ರೀತಿ-ನೀತಿಗಳು ಹಾಗೂ ಇಲ್ಲಿನ ಪರಿಸರವನ್ನು ಬಹಳವೇ ಇಷ್ಟಪಡುತ್ತಾರೆ ಹಾಗೂ ಇಲ್ಲಿನ ಕುರಿತು ಕುತೂಹಲದಿಂದ ತಿಳಿದುಕೊಳ್ಳುತ್ತಾರೆ. ಆದರೆ, ಕೆಲವೊಮ್ಮೆ ಅವರ ಆ ಕುತೂಹಲ.. ಅವರ ಜೊತೆಗಿರುವವರಿಗೆ ಪೇಚಾಟವನ್ನು ತಂದಿಡುವುದೂ ಇಲ್ಲದ್ದಿಲ್ಲ.. ಹಿಂದಿನ ಬಾರಿ ಭಾರತಕ್ಕೆ ಬಂದಾಗ ಸಹೋದ್ಯೋಗಿಯೊಬ್ಬ ನೋಡಿದ್ದ ಟ್ರಾಫಿಕ್ ದಾಟುವ ಆನೆಯನ್ನು ನೋಡಲೇ ಬೇಕೆಂದು ಪಟ್ಟು ಹಿಡಿದು ಬಂದವನು, ಕೋತಿ ನೋಡಬೇಕೆಂದು ಇಚ್ಚಿಸುವ ಝಾನ್ಗ್ ನ ಆಸೆ ಏತಕ್ಕೆಂದು ತಿಳಿದಾಗ ಆಗುವ ಕಕ್ಕಾಬಿಕ್ಕಿ, ಹಾವಿನ ಹುತ್ತಗಳನ್ನು ಕಂಡು ಕಲಾಕೃತಿ ಎಂದು ಭಾವಿಸುವವರು.. ಹೀಗೆ ಇನ್ನೂ ಒಂದೆರಡು ಪ್ರಸಂಗಗಳು ಮಜಾ ಕೊಡುತ್ತದಾದರೂ.. ಎಲ್ಲವೂ ಹೀಗೆಯೇ ಹಾಸ್ಯದಲ್ಲಿಯೇ ಅಂತ್ಯವಾಗುವುದಿಲ್ಲ. ಒಂದೇ ಒಂದು ಪ್ರಸಂಗ ಒಬ್ಬರ ಕೆಲಸವನ್ನೂ ಕಿತ್ತುಕೊಳ್ಳುತ್ತದೆ. 


 ನಮಗೇನಾದರೂ ಕಷ್ಟ ಬಂದಾಗ ನಾವು ಮೊದಲು ಗಮನಿಸುವುದೇ ಅಕ್ಕಪಕ್ಕದವರನ್ನು. ಅವರಿಗೂ ಈ ರೀತಿ ಏನಾದರೂ ಆಗಿದ್ದರೆ, ನಮ್ಮನ್ನು ನಾವು ಸಮಾಧಾನಿಸಿಕೊಳ್ಳಲು ಅವರಿಗೂ ಆಗಿದೆ ಬಿಡು ಎಂದುಕೊಳ್ಳುವುದು ಸಾಮಾನ್ಯ. ಹೀಗೆ "ಎಲ್ಲರ ಮನೆ ಕಾರಿಗೂ ನೆಗ್ಗು ಇದ್ದಾಗ" ಅವರ ಪರಿಸ್ಥಿತಿಯನ್ನು ಕಂಡು ಇವರ ಮನಸ್ಸಿನಲ್ಲಿ ಮೂಡಿದ  ಭಾವಗಳ ಅನಾವರಣವಿದೆ. 


 ಹದಿಹರೆಯದ ವಯಸ್ಸಿನಲ್ಲೊಂದು ಆಸೆ ಇರುತ್ತದೆ. ಅದರಲ್ಲೂ.. ಗೆಳೆಯರು ಸೇರಿದರೆ ಸಿನಿಮಾ ನೋಡುವ ಆಸೆಯನ್ನು ಹತ್ತಿಕ್ಕಲಂತೂ ಸಾಧ್ಯವೇ ಇಲ್ಲ. ಹೀಗೆ ಸುಭಗರಂತೆ ಇಂಪ್ರೆಶನ್ ಮೂಡಿಸಿದ್ದ ಗೆಳೆಯರು 'ರಾಮೇಶ್ವರದಲ್ಲೊಂದು ಪೋಲಿ ಸಿನಿಮಾ' ನೋಡಿ ಬಂದಾಗಿನ ಪ್ರಸಂಗವಿದೆ. ಅದರಲ್ಲೂ, ಗೆಳೆಯನೊಬ್ಬ ಹೆಣೆಯುವ ಜಪಾನ್ ಭಾಷೆಯಲ್ಲಿ ಶಿವ ಪಾರ್ವತಿಯರ ಕಥೆ ಕೇಳುವುದಂತೂ.. ಆತನ ಮಾತಿನ ಚಮತ್ಕಾರಕ್ಕೆ ಹಿಡಿದ ಕೈಗನ್ನಡಿಯಂತೆ ಕಂಡಿತು. 


 "ಮುಸ್ಸಂಜೆ ಮುರುಳಿ"ಯಲ್ಲಿ ಬೆಂಗಳೂರು ನಗರದಲ್ಲಿ ಕಂಡು ಬರುವ ನಿವೃತ್ತರ ಕುರಿತ ವಿವಿಧ ಸನ್ನಿವೇಶಗಳು ಹಾಗೂ ವಿವಿಧ ಭಾವಗಳು ಸೊಗಸಾಗಿ ಅನಾವರಣವಾಗಿವೆ. ಹೀಗೆಯೇ ಇರುವ ಮತ್ತೊಂದು ಲಲಿತ ಪ್ರಬಂಧ "ತತ್ತಿ ಇಡದ ಹಕ್ಕಿಗಳ ತಂಗುದಾಣದಲ್ಲಿ". ಈ ಶೀರ್ಷಿಕೆಯಂತೂ ಬಹಳ ಅರ್ಥಪೂರ್ಣವಾಗಿದೆ ಹಾಗೂ ಸೆಳೆಯುವಂತಿದೆ. ಇಲ್ಲಿ ವಿಮಾನ ನಿಲ್ದಾಣದಲ್ಲಿ ಕಂಡು ಬರುವ ಚಿತ್ರಣಗಳಿವೆ. 


 ವಿದೇಶಗಳಿಗೆ ಹೋದಾಗ ಅಲ್ಲಿ ನಡೆಯುವ ವಿವಿಧ ಇವೆಂಟ್ ಗಳನ್ನು ಕಣ್ತುಂಬಿಸಿಕೊಳ್ಳುವ ಸಹಜ ಕುತೂಹಲವಂತೂ ಇದ್ದೇ ಇರುತ್ತದೆ. ಹಾಗೆಯೇ, ಅಮೆರಿಕಾದ ಕಾನ್ ಸಾಸ್ ಎನ್ನುವ ಪಟ್ಟಣಕ್ಕೆ ಹೋದ ಲೇಖಕರು ಕಂಡ "ಅಮೆರಿಕಾದಲ್ಲೊಂದು ದನದ ಪೇರಿಯ" ಕುರಿತು ಹೇಳಿದ್ದಾರೆ. 


 ಇವು ಕೇವಲ ಲಲಿತ ಪ್ರಬಂಧಗಳಲ್ಲ... ಸುಲಲಿತ ಪ್ರಬಂಧಗಳು ಎಂದು ಮುಖಪುಟದಲ್ಲಿಯೇ ಅಚ್ಚಾಗಿರುವ ಹಾಗೆಯೇ ಎಲ್ಲಿಯೂ ತಡೆಯೊಡ್ಡದಂತೆ ಸರಾಗವಾಗಿ ಓದಿಸಿಕೊಂಡು ಹೋಗುವ ಪ್ರಬಂಧಗಳು. ಯಾವುದಾದರೂ ಗಂಭೀರ ಪುಸ್ತಕದ ಓದಿನ ನಂತರ ಲೈಟ್ ಆದ ಪುಸ್ತಕದ ಓದಿಗೆ ಹಾಗೂ ಬೇಸರದ ಸಂದರ್ಭದಲ್ಲಿ ನವಿರಾದ ಅನುಭವದ ಓದಿಗೆ ಈ ಪುಸ್ತಕ ಬಹಳ ಸೂಕ್ತ ಎಂದು ನನ್ನ ಅಭಿಪ್ರಾಯ. ಮರು ಓದಿನಲ್ಲಿಯೂ ಬೇಸರವಾಗದಂತೆ ಮತ್ತೆ ಮತ್ತೆ ಓದಿಸಿಕೊಳ್ಳುವ ಪುಸ್ತಕ ಇದು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ