ಮಂಗಳವಾರ, ಏಪ್ರಿಲ್ 7, 2026

ಬೊಗಸೆ ತುಂಬಾ ನಕ್ಷತ್ರಗಳು (ಪುಸ್ತಕ ಯಾನ - 80)


 ಪುಸ್ತಕದ ಶೀರ್ಷಿಕೆ : ಬೊಗಸೆ ತುಂಬಾ ನಕ್ಷತ್ರಗಳು

ಲೇಖಕರು : ವಸುಮತಿ ಉಡುಪ

ಪ್ರಕಾಶಕರು : ಅಂಕಿತ ಪುಸ್ತಕ

ಮೊದಲನೇ ಮುದ್ರಣ : 2021

ಪುಟಗಳು : 152

ಬೆಲೆ : 150 ರೂ. 


ಮನುಷ್ಯ ಸ್ವಭಾವದ ವೈವಿಧ್ಯಮಯ ಕಥೆಗಳನ್ನು ಮನಮುಟ್ಟುವ ರೀತಿಯಲ್ಲಿ ಕಟ್ಟಿಕೊಡುವವರಲ್ಲಿ ಮುಂಚೂಣಿಯಲ್ಲಿರುವ ವಸುಮತಿ ಉಡುಪರವರು. ಇವರು ನನ್ನಿಷ್ಟದ ಲೇಖಕಿಯರಲ್ಲಿ ಒಬ್ಬರು .


"ಬೊಗಸೆ ತುಂಬಾ ನಕ್ಷತ್ರಗಳು" ಎನ್ನುವ ಕಥಾ ಸಂಕಲನದಲ್ಲಿ ಕೌಟುಂಬಿಕ ಕಥೆಗಳ ಮೂಲಕ ಮನುಷ್ಯನ ವಿವಿಧ ಸ್ವಭಾವಗಳ ಅನಾವರಣಗಳಿವೆ. ಕೊರೋನ ಕಾಲಘಟ್ಟದ ಮೊದಲ ಕೆಲವು ದಿನಗಳ ಸಂದರ್ಭಗಳು ಕೂಡಾ ಕಥೆಗಳಾಗಿ ಹೊರಬಂದಿವೆ. ಇದರಲ್ಲಿ ಒಟ್ಟು 12 ಕಥೆಗಳಿವೆ. 


ಮಡಿ 

30 ವರ್ಷದ ಚಂಪಾಳಿಗೆ ಮದುವೆಯಾಗಿತ್ತು. ಈಗ ಗಂಡನಿರಲಿಲ್ಲ. ಹಾಗಾಗಿ, ಅಣ್ಣನ ಮನೆಯಲ್ಲಿ ಅವಳ ವಾಸ. ಅಣ್ಣನಾದರೂ ಅವಳನ್ನು ಎಷ್ಟು ದಿನ ಸುಮ್ಮನೆ ಸಾಕಿಯಾನು..?? ಹಾಗಾಗಿ, ಮತ್ತೊಬ್ಬರ ಮನೆಯಲ್ಲಿ ಕೆಲಸಕ್ಕೆ ಸೇರುವುದು ಅವಳಿಗೆ ಅನಿವಾರ್ಯ. ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಹಣ ಮುಖ್ಯ.ಅದಕ್ಕಾಗಿ, ದುಡಿಮೆ ಎಲ್ಲರಿಗೂ ಅನಿವಾರ್ಯವೇ.. ಹೌದಲ್ಲವಾ..?? ಹಾಸಿಗೆ ಹಿಡಿದ ಮನೆಯ ಹಿರಿ ಜೀವವನ್ನು ನೋಡಿಕೊಳ್ಳಬೇಕಾದುದೇ ಅವಳ ಕೆಲಸ. ಆದರೆ, ಮಡಿ ಎನ್ನುತ್ತಾ ಜೀವನ ಸಾಗಿಸುತ್ತಿದ್ದವರಿಗೆ ಅವಳ ಆ ಮೂರು ದಿನಗಳಲ್ಲಿ ಕೆಲಸಕ್ಕೆ ರಜೆ. ಅಪರಿಚಿತ ಜನಗಳು, ಅಭ್ಯಾಸವಿಲ್ಲದ ಕೆಲಸ, ಚಂಪಾಳಿಗೆ ದಿನನಿತ್ಯದ ಹೊಕ್ಕು ಬಳಕೆಯಂತೆಯೇ ಆಗಿ ಹೋಯಿತು. ಅವಳು ತನ್ನ ನಿಷ್ಠೆಯನ್ನು ಎಂದಿಗೂ ಕಡಿಮೆ ಮಾಡಲಿಲ್ಲ. ಹಿರಿಜೀವವನ್ನು ನೋಡಿಕೊಂಡು ಉಳಿದ ವೇಳೆಯಲ್ಲಿ ಮನೆಯ ಉಳಿದ ಕೆಲಸಗಳನ್ನು ಮಾಡಿಕೊಡುತ್ತೇನೆ ಅದಕ್ಕಾಗಿ ಅಣ್ಣನಿಗೆ ನೀಡುವ ಬದಲು ಆ ಹಣವನ್ನು ನನಗೆ ನೀಡಿ ಎಂದಳು. ಆದರೆ, ಒಂದು ದಿನ ಆ ಹಣ ತೆಗೆದುಕೊಂಡು ಅಣ್ಣನೊಡನೆ ಹೋದ ಅವಳು ಮಡಿಯಿಂದ ಬೇಸತ್ತಿದ್ದಳು ಎನ್ನುವಷ್ಟರಲ್ಲಿ ಕಥೆ ಬೇರೆಯದ್ದೇ ತಿರುವು ಪಡೆಯುತ್ತದೆ. ಅಂತಃಕರಣ ಮಿಡಿಯುವಂತಹಾ ಈ ನಿರ್ಧಾರಕ್ಕೆ ತ್ಯಾಗವೆನ್ನುವ ಪದ ಬಹಳ ಚಿಕ್ಕದಾಗಬಹುದೇನೋ ಎನ್ನಿಸಿತು. 


ಗುಮಾನಿ: 

ಕೊರೊನಾ ಕಾಲಘಟ್ಟದಲ್ಲಿ ಎಷ್ಟೋ ಜನ ಪಟ್ಟಣದಿಂದ ಅಲ್ಲಿಗೆ ವಲಸೆ ಬಂದರು. ಕಾರಣ ಪಟ್ಟಣದಲ್ಲಿಯೂ ಕೆಲಸವಿರಲಿಲ್ಲ ಆದರೆ ಹಳ್ಳಿಯ ಜನರಿಗೂ ಅವರನ್ನು ಹಠಾತ್ತನೆ ಮನೆಯೊಳಗೆ ಸೇರಿಸಿಕೊಳ್ಳುವುದೆಂದರೆ ಭಯವೇ ..ಹಾಗೆ.. ನರ್ಮದೆ ಹಾಗೂ ರಾಜೀವ ಮಗ ಸಮೀರನೊಂದಿಗೆ ಹಳ್ಳಿಗೆ ಬಂದ ಸಂದರ್ಭ. ಎಂದಿನಂತೆ ಹಳ್ಳಿಯಲ್ಲಿ ಸ್ವಾಗತವಿಲ್ಲ. ಅಷ್ಟು ಅಕ್ಕರೆ ತೋರುತ್ತಿದ್ದ ಅಣ್ಣ, ಅಮ್ಮ ವಾತ್ಸಲ್ಯ ತೋರುತ್ತಿದ್ದ ಅಮ್ಮ ಇಬ್ಬರೂ ಅವರಿಂದ ದೂರವೇ ಉಳಿದರು. ಎರಡು ವಾರ ಅವರು ಕಳೆದ ಆ ದಿನಗಳು ಹೇಗಿತ್ತು..?? ಒಂದು ಗುಮಾನಿ ತಂದಿಟ್ಟ ಭವಣೆಗಳ ಕಥೆ ಇದು. 


ದಾಳಿ:

ಗೋವಿಂದಯ್ಯ ಹಾಗೂ ಗಿರಿಜಮ್ಮ ದಂಪತಿಗಳಿಗೆ ನಾಲ್ಕು ಜನ ಹೆಣ್ಣು ಮಕ್ಕಳು. ಮೊದಲನೆಯವಳು ಭಾಗ್ಯಲಕ್ಷ್ಮಿ. ಕೊನೆಯವಳು ವನಿತಾ. ಭಾಗ್ಯಲಕ್ಷ್ಮಿಗೆ ಹಲವಾರು ಆಸೆಗಳಿದ್ದರೂ.. ಅಪ್ಪ ತೀರಿಹೋಗಿದ್ದರಿಂದ ಆ ಕೆಲಸ ಅವಳಿಗೆ ಸಿಕ್ಕಿ, ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಅಮ್ಮನೂ ಹೋದ ನಂತರ, ಬೆನ್ನಿಗೆ ಬಿದ್ದ ಇಬ್ಬರು ತಂಗಿಯರ ಮದುವೆಯನ್ನು ಮಾಡಿದಳು. ಈಗ ಕೊನೆಯ ತಂಗಿ ವನಿತಾ ಮಾತ್ರ ಅವಿವಾಹಿತೆ. ಅವಳಿಗೂ ಭಾಗ್ ಲಕ್ಷ್ಮಿಗೂ 13 ವರ್ಷಗಳ ವ್ಯತ್ಯಾಸ. ಉಳಿದಿಬ್ಬರು ತಂಗಿಯರಂತೆ ಈಕೆಗೆ ಯಾವುದೋ ಒಂದು ವರವನ್ನು ಹುಡುಕಿಯಾದರೂ ವಿವಾಹ ಮಾಡಲಿಲ್ಲ. ವಯಸ್ಸು ಹಾಗೂ ಬೇರೆಯ ಕಣ್ಣುಗಳು ದಾಳಿ ಮಾಡುತ್ತಿದ್ದವು. ಇದೆಲ್ಲದರಿಂದ ತಪ್ಪಿಸಿಕೊಳ್ಳುವಳೆ ವನಿತಾ..?? ಓದಿ ನೋಡಿ. ಭಾಗ್ಯಲಕ್ಷ್ಮಿಯ ಹಾಗೂ ವನಿತಾಳ ಮನದ ಯೋಚನೆಗಳು ಅವರವರದ್ದೇ ರೀತಿಯಲ್ಲಿ ವ್ಯಕ್ತವಾಗಿವೆ.


ಮೋಹ :

ಪ್ರೀತಿಗೂ, ಮೋಹಕ್ಕೂ ಅದೆಷ್ಟು ವ್ಯತ್ಯಾಸ ಅಲ್ಲವಾ..?? ಈ ಕಥಾ ಸಂಕಲನದಲ್ಲಿ ವಿಭಿನ್ನವೆನಿಸಿದ ಕಥೆ ಇದು. ವೇಣುಮಾಧವ ಹಾಗೂ ಕಿರಣ್ಮಯಿಯದ್ದು ಅನುರೂಪದ ದಾಂಪತ್ಯ. ಹೆಂಡತಿ ಹೇಳಿದ್ದಕ್ಕೆಲ್ಲಾ ಒಂದು ಮಾತೂ ಇಲ್ಲವೆನ್ನದೆ ಬದುಕುತ್ತಿದ್ದಂತಹ ಪತಿ. ಪ್ರೀತಿಸಿ, ಹಿರಿಯರ ಆಶೀರ್ವಾದದೊಂದಿಗೆ ಮದುವೆಯಾಗಿದ್ದ ಜೋಡಿ. ಆದರೆ ವೇಣುಮಾಧವ ಅಕಾಲ ಮೃತ್ಯುವಿಗೆ ಒಳಗಾದ. ಆದರೆ, ಹಿರಣ್ಮಯಿಯ ಪಾಲಿಗೆ ಅವನ ಪ್ರೇಮಪಾಶ ಮುಗಿದಿರಲಿಲ್ಲ. ಇದು ಮೋಹವೋ..?? ಪ್ರೀತಿಯೋ..?? ನೀವೇ ನಿರ್ಧರಿಸಿ. 


ನಂಜಾಗಿ ಕಾಡಿತ್ತು ಮಾತು :

ಒಂದು ಮಾತು ಒಂದು ಸಂಬಂಧವನ್ನೇ ಎಷ್ಟು ಬೇಗ ಇಲ್ಲವಾಗಿಸಿ ಬಿಡುತ್ತದೆ. ನಾಗರಾಜ ಹಾಗೂ ಸೀತೆಯರಿಗೆ ಇಬ್ಬರು ಮಕ್ಕಳು. ಚಿಕ್ಕ ಮಗನ ಕಾರಣದಿಂದಾಗಿ ನಾಗರಾಜ ತನ್ನ ಸ್ವಂತ ತಂಗಿಯಂತೆ ಭಾವಿಸುತ್ತಿದ್ದ ಚಿಕ್ಕಪ್ಪನ ಮಗಳಾದ ಅಮೃತಳಿಗೂ ಮನಸ್ತಾಪವಾಗಿತ್ತು. ಸ್ವಂತ ಅಣ್ಣ-ತಂಗಿಯರಂತಿದ್ದ ನಾಗರಾಜ ಹಾಗೂ ಅಮೃತ ಮದುವೆಯಾದ ನಂತರ ತಮ್ಮ ತಮ್ಮ ಸಂಸಾರಗಳಲ್ಲಿ ವ್ಯಸ್ತವಾದರೂ.. ಅವರ ಪ್ರೀತಿ, ವಾತ್ಸಲ್ಯ, ಮಮತೆಗಳಿಗೇನೂ ಕಡಿಮೆ ಇರಲಿಲ್ಲ. ಮದುವೆಯಾಗಿ 10 ವರ್ಷವಾದರೂ ಇನ್ನೂ ಮಕ್ಕಳಾಗದಿದ್ದ ಅಮೃತ ತನ್ನ ಅಣ್ಣನನ್ನು.. ಅತ್ತಿಗೆ ಎರಡನೇ ಮಗುವಿನ ಗರ್ಭಿಣಿಯಾಗಿದ್ದಾಗ ಆ ಮಗುವನ್ನು ತನಗೆ ನೀಡುವಂತೆ ಕೇಳಿದಳು. ಆಕೆ ಆತನನ್ನು ಚೆನ್ನಾಗಿ ಬೆಳೆಸುವಳು ಎಂಬ ನಂಬಿಕೆ ಇದ್ದರೂ.. ಎಷ್ಟೇ ಆತ್ಮೀಯರಾದರೂ.. ಕರುಳಕುಡಿಯನ್ನು ದೂರ ಮಾಡಿಕೊಳ್ಳುವಷ್ಟು ಕಟುಕಳಾಗಿರಲಿಲ್ಲ ಸೀತಾ. ಆಗ ಬಂದ ಮಾತು, ತಪ್ಪಿದ ಮಾತು, ಆ ಸಂಬಂಧವನ್ನೇ ನಂಜು ಮಾಡಿಬಿಟ್ಟಿತು. ಆದರೆ, ಮುಂದೆ ಆ ಸಂಬಂಧದ ಹಾದಿ ಏನಾಯಿತು..


ಅನುರಕ್ತಿ:

ಸುವರ್ಣರಿಗೆ ಇಬ್ಬರು ಮಕ್ಕಳು. ಮೊದಲನೆಯ ಸೊಸೆ ಚಂಪಕ. ಎರಡನೆಯವಳು ಕಸ್ತೂರಿ. ಇಬ್ಬರು ಮಕ್ಕಳೂ ಅಮ್ಮ ಹೇಳಿದ ಮಾತನ್ನು ಮೀರದಿದ್ದರೂ.. ರಾಜೀವ ಕಸ್ತೂರಿಯನ್ನು ಮದುವೆಯಾಗುವ ವಿಚಾರದಲ್ಲಿ ಅಮ್ಮನ ಮಾತು ಮೀರಿದ್ದ. ಕಸ್ತೂರಿ ನೋಡಲು ಕಪ್ಪು, ಅಷ್ಟೇನೂ ಚಂದವಿಲ್ಲ ಎಂಬುದು ಸುವರ್ಣರ ಮನಸ್ಸಿನಲ್ಲಿ ಕೂತಿದ್ದರಿಂದ ಆಕೆಯನ್ನು ತುಂಬ ಮನಸ್ಸಿನಿಂದ ಸೊಸೆ ಎಂದು ಒಪ್ಪಿಕೊಂಡಿರಲಿಲ್ಲ. ಆದರೆ ಸಮಯ ಅದೆಷ್ಟು ಬೇಗ ಬದಲಾಗಿ ಬಿಡುತ್ತದೆ. ರಾಜೀವ ಹಾಗೂ ಕಸ್ತೂರಿ ಇಬ್ಬರು ವರ್ಗಾವಣೆಯಾದಾಗ ಅಲ್ಲಿಂದ ಹೊರಡುವ ಮಾತನಾಡಿದಾಗ ಸುವರ್ಣ ತೆಗೆದುಕೊಳ್ಳುವ ನಿರ್ಧಾರವೇ ಬೇರೆ. ರಾಜೀವ ಕಸ್ತೂರಿಯನ್ನು ಮದುವೆಯಾದುದೇಕೆ..? ಸುವರ್ಣರ ನಿರ್ಧಾರವೇನಾಗಿತ್ತು..? ಈ ಅನುರಕ್ತಿಯ ಪರಿಣಾಮಗಳು ಎಷ್ಟು ಚೆಂದವಾಗಿ ಚಿತ್ರಿತವಾಗಿವೆ ಈ ಕಥೆಯಲ್ಲಿ.


ಸ್ಪೋಟ: 

ದಂಪತಿಗಳ ನಡುವಿನ ಹೊಂದಾಣಿಕೆಯಲ್ಲಿ ಒಬ್ಬರ ಮುಖ ಅತ್ತ, ಒಬ್ಬರ ಮುಖ ಇತ್ತ ಎಂದು ಕಾಲ ಹಾಕಿ ಕಳೆಯುವವರು.. ಪತಿ ಅಥವಾ ಪತ್ನಿಯ ಪ್ರತಿ ಮಾತು, ವರ್ತನೆಯಲ್ಲೂ ಹುಳುಕಿ ಹುಡುಕಿ, ಕಾಲು ಕೆರೆದು ಜಗಳ ತಿಳಿಯುವವರು ಒಬ್ಬರಾದರೆ.. ಅದನ್ನೆಲ್ಲಾ ಸಹಿಸುತ್ತಾ ಬಂದವರು ಮತ್ತೊಬ್ಬರು. ಆದರೆ, ಒಳಗಿನ ಕಿಡಿಗಳು ಪುಟಗೊಳ್ಳುವುದಕ್ಕೆ ಎಷ್ಟು ಸಮಯ ಬೇಕು..?? ಒಳಗಿನ ಕಿಡಿಯೊಂದು ಸ್ಪೋಟವಾದರೆ.. ಅದರ ಕಿಚ್ಚಿಗೆ ಬೇಯುವವರು ಎಷ್ಟು ಜನ..? ಅಂತಹದ್ದೇ ಕಥೆ ಸ್ಪೋಟ. ಸುಮ್ಮನಿದ್ದ ಮಾತ್ರಕ್ಕೆ ಎಲ್ಲವನ್ನೂ ಸಹಿಸುವುದು ಅಸಾಧ್ಯ. ಹಾಗೆ ಸಹಿಸುತ್ತಾ, ಸಹಿಸುತ್ತಾ ಒಮ್ಮೆಲೆ ಸ್ಪೋಟವಾಗುವ ಪರಿ ಈ ಕಥೆಯಲ್ಲಿದ್ದರೂ ಇದು ನಮ್ಮ ಸುತ್ತಮುತ್ತಲ ದಾಂಪತ್ಯದಲ್ಲೂ ಕಾಣಿಸಬಹುದು. 


ಸ್ತ್ರೀ ಶಾಪ :

ವೆಂಕಟಪ್ಪ ತನಗೆ ಇನ್ನು ನಿರ್ವಾಹವಿಲ್ಲದೆ ಹಳ್ಳಿಗೆ ದುಡಿಯಲು ಬಂದಿದ್ದ. ಮನೆಯ ಯಜಮಾನ ಹಾಗೂ ಯಜಮಾನಿಯರು ಒಳ್ಳೆಯವರಂತೆಯೇ ಕಂಡರು. ಯಜಮಾನಿ ಹಾಕಿದ ಊಟವನ್ನು ಗಡತ್ತಾಗಿ ಉಂಡು ಇನ್ನೇನು ಗಾಢ ನಿದ್ರೆಗೆ ಹೋಗುವ ಸಂದರ್ಭದಲ್ಲಿ ಕೇಳಿದ ಮಾತು ಹಾಗೂ ಸ್ತ್ರೀ ಶಾಪದ ಕುರಿತ ಘಟನೆ ಆತನನ್ನು ಮನೆಯಲ್ಲಿ ಇರುವಂತೆ ಮಾಡಿತೇ ಅಥವಾ ಹಿಂದಿನವರಂತೆಯೇ ಆತನು ಆ ಮನೆ ಬಿಟ್ಟು ಹೋಗುತ್ತಾನೆಯೇ..? ಅತೀಂದ್ರಿಯ ಶಕ್ತಿಯಂತೆ ಕಂಡರೂ.. ಹೆಣ್ಣಿನ ನೋವಿನ ಹೆಣ್ಣಿನ ನೋವು, ಕೋಪಕ್ಕೆ ತಿರುಗಿದಾಗ ಏನೆಲ್ಲವೂ ಆಗಬಹುದು ಎಂಬುದರ ಪುಟ್ಟ ನಿದರ್ಶನದಂತಿದೆ ಈ ಕಥೆ. 


ನಂಟು:

ಇದು ಕರೊನಾ ಕಾಲಘಟ್ಟದ ಕಥೆ. ಹಳೆಯ ಸ್ನೇಹಿತೆಯ ಕರೆಗೆ ಓಗೊಟ್ಟು ಆಕೆಯ ಮಗಳ ಮದುವೆಗೆ ಹೋದ ಸಂದರ್ಭ. ಆದರೆ, ಮದುವೆ ಮುಗಿಸಿ ತಾನು ಇದ್ದ ಹೊರರಾಜ್ಯಕ್ಕೆ ಹೊರಟು ಅರ್ಧ ದಾರಿಯಲ್ಲಿದ್ದಾಗ ಲಾಕ್ ಡೌನ್ ಅನೌನ್ಸ್ ಆಗಿರುತ್ತದೆ. ಮನೆಯಲ್ಲಿ ಬೇಡವೆಂದರೂ ತಾನೇ ಹಠ ಮಾಡಿ ಬಂದದ್ದರ ಫಲ ಎಂದು ತನ್ನನ್ನೇ ಅಳಿದುಕೊಳ್ಳುತ್ತಿರುವಾಗ ಆಕೆಯ ಸ್ನೇಹಿತೆಯ ಗಂಡನ ಬಂಧು ಒಬ್ಬರ ಮನೆಯಲ್ಲಿ ಉಳಿದುಕೊಳ್ಳಬೇಕಾಗುತ್ತದೆ. ರಕ್ತ ಸಂಬಂಧಗಳೇ ಈ ದಿನ ವಿಷ ಕಾರುತ್ತಿರುವಾಗ ಈ ಹೊಸ ನಂಟನ್ನು ಆ ಮನೆಯವರು ಹೇಗೆ ಸ್ವಾಗತಿಸುತ್ತಾರೆ..?? ಈಕೆಯಾದರೂ. ಗೊತ್ತು ಗುರಿ ಇಲ್ಲದವರ ಮನೆಯಲ್ಲಿ ಹೇಗೆ ಹೊಂದಿಕೊಳ್ಳುತ್ತಾಳೆ..?? ನಂಟು ಬೆಸೆಯಿತಾ ಅಥವಾ ಕಳೆದು ಹೋಯಿತಾ ತಿಳಿಯಲು ಈ ಕಥೆ ಓದಿ. 


ಬೊಗಸೆ ತುಂಬಾ ನಕ್ಷತ್ರಗಳು :

ಹೆಣ್ಣು ಮಕ್ಕಳ ಆಸೆಯೇ ಹಾಗೆ ಒಂದು ಚಿಕ್ಕ ಆಸೆ ಕೂಡಾ ಅವರ ಮನಸ್ಸನ್ನು ಮುದಗೊಳಿಸುತ್ತದೆ. ಆದರೆ, ಮದುವೆಯಾದ ಮೇಲೆ ಎಷ್ಟೋ ಜನ ಅವರ ಆಸೆ ಅಥವಾ ಹವ್ಯಾಸಗಳಿಗೆ ಎಳ್ಳುನೀರು ಬಿಟ್ಟು ಸುಮ್ಮನಾಗಿರುತ್ತಾರೆ. ಕಾರಣ ಏನೇ ಇದ್ದರೂ.. ಹೆಚ್ಚಿನವರ ಕಾರಣ ಗಂಡನಿಗೆ ಇಷ್ಟವಿಲ್ಲ ಅಥವಾ ಮಕ್ಕಳಿಗಾಗಿ ಎಂದು ಇದ್ದಿರಬಹುದು. ರೋಹಿಣಿ ಕಥೆ ಕೂಡ ಹೀಗೆಯೇ.. ಆದರೆ ,ಒಂಟಿ ಜೀವನ ಅವಳನ್ನು ಮತ್ತೆ ಅವಳ ಕನಸಿನತ್ತ ಮುಖ ಮಾಡುವಂತೆ ಮಾಡುತ್ತದೆಯಾ..?? ಕನಸಿನ ಆಗಸಕ್ಕೆ ಲಗ್ಗೆ ಇಟ್ಟು ಬೊಗಸೆ ತುಂಬಾ ಕನಸಿನ ನಕ್ಷತ್ರಗಳನ್ನು ತುಂಬಿಕೊಳ್ಳುತ್ತಾಳಾ ರೋಹಿಣಿ..??


ಲೆಕ್ಕಾಚಾರ :

ಕಾವೇರಿ ಗೋಪಾಲಯ್ಯನ ಒಬ್ಬಳೇ ಮಗಳು. ಗೋಪಾಲಯ್ಯ ಹೃದಯಘಾತದಿಂದ ಅಚಾನಕ್ಕಾಗಿ ತೀರಿಕೊಂಡಾಗ.. ತನ್ನ ತಂದೆ ತಾಯಿಗೂ ಖರ್ಚು ಮಾಡದಷ್ಟು ಖರ್ಚು ಮಾಡಿ ಆತನ ಕರ್ಮ ಕ್ರಿಯೆಗಳನ್ನು ಮುಗಿಸಿದ ಕೇಶವ. ಮಾವ ಬದುಕಿರುವಾಗಲೂ ಅಷ್ಟೇ.... ಅವರಿಗೆ ಬೇಕಾದ ಸ್ಥಾನಮಾನಗಳನ್ನು ನೀಡಿ ಅವರನ್ನು ಗೌರವಿಸುತ್ತಿದ್ದ. ಆದರೆ, ಗೋಪಾಲಯ್ಯನ ಲೆಕ್ಕಾಚಾರ ಹಾಗೂ ವಿಧಿಯ ಲೆಕ್ಕಾಚಾರ ಎರಡು ಕೇಶವನಾ ಪರವಾಗಿದೆಯಾ ಅಥವಾ ವಿರೋಧವಾಗಿತ್ತಾ..?? ಗೋಪಾಲಯ್ಯನ ನಿಜ ವಿಚಾರ ತಿಳಿದ ಕಾವೇರಿಯ ಕಥೆ ಏನಾಯ್ತು..??


ಮದರಂಗಿ ಮತ್ತು ಸೋದರ ಮಾವ :

ಪ್ರಭಾವತಿ ತನ್ನ ಬಿಳಿ ಕೂದಲಿಗೆ ಮದರಂಗಿ ಹಚ್ಚಿಕೊಳ್ಳುವ ಸಂಭ್ರಮದಲ್ಲಿದ್ದಳು. ಆದರೆ, ಮದರಂಗಿ ಹತ್ತು ಹಲವು ನೆನಪುಗಳನ್ನು ಮೀಟುತ್ತಿತ್ತು. ಇಳಿವಯಸ್ಸಿನಲ್ಲಿದ್ದ ಅವಳಿಗೆ ಅವಳ ಗಂಡನ ನೆನಪುಗಳು ನುಗ್ಗಿ ಬಂದವು. ಅಂತರ್ಮುಖಿಯಂತಿದ್ದ ಅವಳ ಗಂಡ ಹಾಗೂ ಅವನಿಗೆ ವಿರುದ್ಧ ಎಂಬಂತಿದ್ದ ಸೋದರ ಮಾವ. ಅಕ್ಕನ ಗಂಡನೂ ಹೌದು. ಸಂಸಾರವೆಂಬುದು ಇಬ್ಬರೂ ತಮ್ಮ ತಮ್ಮ ಭಾವನೆಗಳನ್ನು ಹಂಚಿಕೊಂಡಾಗ ಮಾತ್ರ ಸುಖಮಯ. ಪ್ರಭಾವತಿಯ ಬದುಕು ಮದರಂಗಿಯಂತೆಯೇ ಕೆಂಪಾಯಿತೇ..?? ಅಥವಾ ಈಗ ಬಣ್ಣ ಕಳೆದುಕೊಂಡಿದ್ದ ಮದರಂಗಿಯಂತಿದೆಯೇ..?


ಇಲ್ಲಿನ ಕಥೆಗಳು ಕೇವಲ ಸ್ತ್ರೀ ಕೇಂದ್ರಿತವಲ್ಲ. ಹಾಗೆ ಕಂಡರೂ ಗಂಡಿನಲ್ಲಿಯೂ ಇರುವ ಅಂತಹಾ ಹೆಣ್ತನದ ಭಾವಗಳನ್ನು ಅನಾವರಣಗೊಳಿಸುತ್ತವೆ. ಅಷ್ಟೇ ಅಲ್ಲದೆ.. ಮುಚ್ಚಿಟ್ಟ ಎಷ್ಟೋ ಭಾವಗಳಿಗೆ ಪದಗಳ ರೂಪ ದೊರೆತು ಕಥೆಯಾದಂತೆ.. ಬೊಗಸೆ ತುಂಬಾ ನಕ್ಷತ್ರಗಳ ಜೊತೆಗೆ ಎದೆ ತುಂಬುವ ಭಾವಗಳು ಹಾಗು ಕಣ್ತುಂಬುವ ಕಥೆಗಳು ಸಿಕ್ಕಿಯೇ ಸಿಗುತ್ತವೆ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ