ಪುಸ್ತಕದ ಶೀರ್ಷಿಕೆ : ನವಿಲು ಕೊಂದ ಹುಡುಗ
ಲೇಖಕರು : ಸಚಿನ್ ತೀರ್ಥಹಳ್ಳಿ
ಪ್ರಕಾಶಕರು : ಅಂಕಿತ ಪುಸ್ತಕ
ಮೊದಲನೇ ಮುದ್ರಣ : 2018
ಎರಡನೇ ಮುದ್ರಣ : 2021 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 104
ಬೆಲೆ : 95 ರೂ.
ನವಿಲು ಕೊಂದ ಹುಡುಗ ಇದು ಸಚಿನ್ ತೀರ್ಥಹಳ್ಳಿಯವರ ಮೊದಲ ಕಥಾ ಸಂಕಲನ. ಈ ಕಥಾ ಸಂಕಲನದಲ್ಲಿ 10 ಕಥೆಗಳಿವೆ. ಕತೆಯ ಒಳ ಹೊಕ್ಕು ನೋಡಿದರೆ ಮಲೆನಾಡಿನ ತಂಪು ತಾಕುತ್ತದೆ.
ಬಿಡುಗಡೆ :
ವಯಸ್ಸಾದವರಿಗೂ ಹಾಗೂ ಮಕ್ಕಳಿಗೂ ಭಾವನೆಗಳಲ್ಲಿ ಮಾತ್ರ ವ್ಯತ್ಯಾಸವಲ್ಲ, ಆಲೋಚಿಸುವ ವಿಧಾನದಲ್ಲಿಯೂ ಅದೆಷ್ಟು ವ್ಯತ್ಯಾಸ. ಅಜ್ಜಿಯನ್ನು ಎದುರು ಹಾಕಿಕೊಂಡು ನಾಯಿಮರಿಯನ್ನು ಸಾಕಲಾಗದೆ, ಅದನ್ನು ದಟ್ಟ ಕಾಡಿನಲ್ಲಿ ಬಿಟ್ಟು, ಅದೇ ದಾರಿಯಲ್ಲಿ ಹೋಗುವ ಮಕ್ಕಳ ತಾಕಲಾಟ ಕಂಡಿತು. ಇಲ್ಲಿ ಬಿಡುಗಡೆ ಸಿಕ್ಕಿದ್ದು ಯಾರಿಗೆ..?? ಅಜ್ಜಿಗೋ..?? ಮಕ್ಕಳಿಗೋ..?? ನಾಯಿಮರಿಗೋ..?? ಮಕ್ಕಳ ಆಲೋಚನೆಯ ಮುಗ್ಧತೆಯ ತೇವ ಇಲ್ಲಿ ಕಾಣುತ್ತದೆ.
ಒಂದು ಅಪ್ರಸ್ತುತ ಪ್ರಸಂಗ :
ಬಾಲ್ಯದಲ್ಲಿ ನೋಡಿದ ಊರು ಹಾಗೂ ಜಾಗಗಳಿಗೂ.. ಯೌವ್ವನಕ್ಕೆ ಬಂದ ನಂತರ ನೋಡುವ ಜಾಗಗಳಿಗೂ, ಪಾತ್ರಗಳಿಗೂ ಅದೆಷ್ಟು ವ್ಯತ್ಯಾಸ. ಇಲ್ಲಿರುವುದು ಯೌವ್ವನದ ಆಲೋಚನೆಗಳು. ಅಂತೆಯೇ, ಮನಸ್ಸಿಗೆ ಇಷ್ಟವಾದ ಆ ಪೂರ್ವಾಪರ ಗೊತ್ತಿಲ್ಲದ ಹುಡುಗಿಯ ಹಿಂದೆ ಹೋದ ಘಟನೆಯೊಂದು ಇಲ್ಲಿದೆ. ಆಕೆ ಕಾಣುವುದಕ್ಕೂ ಇರುವುದಕ್ಕೂ ಅದೆಷ್ಟು ವ್ಯತ್ಯಾಸ. ಅಷ್ಟಕ್ಕೂ ಈ ಪ್ರಸಂಗ ಅಪ್ರಸ್ತುತವೇ ಏಕೆ ಎಂಬುದನ್ನು ಓದಿ ತಿಳಿಯಿರಿ.
ಕಾಡು ಮಲ್ಲಿಗೆ :
ಪಟ್ಟಣದಿಂದ ಬಂದ ಮೊಮ್ಮಗನಿಗೆ ಅಜ್ಜ ಕಿಚಾಯಿಸಿದ್ದೇ ನೆಪವಾಗಿ, ಆತನ ಶಿಕಾರಿ ಕಥೆಗಳನ್ನು ಕೇಳುತ್ತಾ ಕೇಳುತ್ತಾ.. ತಾನೂ ಸಾಹಸ ಮಾಡಲು ಕಾಡಿಗೆ ಹೊರಟ. ಆದರೆ, ಕಾಡಿನಲ್ಲೊಂದು 'ಮಂದಾರ' ಮಲ್ಲಿಗೆ ಸಿಕ್ಕಿತ್ತು. 'ಮಂದಾರ' ಕಾಡಿಗೆ ಬಂದದ್ದೇಕೆ..?? ಅವಳು ಹಾಗೆ ಸಿಕ್ಕ ಕಾರಣವೇನು ? ಮತ್ತೆ ಆಕೆ ಮನೆಯಿಂದ ವಾಪಸ್ ಕಾಡಿಗೆ ಹೋದಾಗ ಉಂಟಾದ ಭಾವನೆಗಳು.. ಈ ಕಥೆ ಇಬ್ಬನಿ ಹನಿಗಳಂತೆಯೇ ತಾಜಾ ಭಾವಗಳ ಪುಳಕ ಹುಟ್ಟಿಸುತ್ತದೆ.
ನವಿಲು ಕೊಂದ ಹುಡುಗ :
ಈ ಪುಸ್ತಕದ ಶೀರ್ಷಿಕೆ ಇದೇ ಆದುದರಿಂದ ಕಥೆಯ ಕುರಿತು ಕೊಂಚ ಹೆಚ್ಚೇ ಕುತೂಹಲವಿತ್ತು. ಇದು ಯೌವ್ವನದ ಕಥೆ. ಆಕೆಗೆ ಮನೆಯಲ್ಲಿ ಮದುವೆಯ ಪ್ರಯತ್ನ ಸಾಗುತ್ತಿತ್ತು. ಅದಕ್ಕಾಗಿ ವ್ರತಗಳು, ಪೂಜೆಗಳು ಸಾಗುತ್ತಿದ್ದವು. ಹಾಗೆ ಪೂಜೆಗೆ ಬಂದಾಗಲೇ ಅವನು ಕಂಡದ್ದು. ನವಿಲು ಕೊಂದ ಹುಡುಗ. ಇಲ್ಲಿನ ಕಥೆಗಳಲ್ಲಿ ಶಿಕಾರಿ ಎಂಬುದು ಸಾಹಸವೂ ಆಗುತ್ತದೆ. ಅದೇ ಕೆಲವರ ಕಣ್ಣಿನಿಂದ ನೋಡಿದಾಗ ಅದು ಕ್ರೌರ್ಯವೂ ಆಗುತ್ತದೆ. ಇಲ್ಲಿ ಆ ನವಿಲು ಕೊಂದ ಹುಡುಗನನ್ನು ಕಂಡಾಗ ಅವಳಿಗೆ ಬಂದ ಭಾವನೆಗಳೇನು ? ನವಿಲು ಕೊಂದ ಹುಡುಗ ಅದಾದ ನಂತರ ಮತ್ತೆ ಮತ್ತೆ ಕಾಣುತ್ತಿದ್ದರೂ.. ಮುಂದೇನಾಯಿತು ? ಇದು ಪ್ರೇಮ ಕಥೆ ಇರಬಹುದಾ ಎಂದೇ ಕುತೂಹಲದಿಂದ ಓದಿಸಿಕೊಂಡು ಹೋಗುವ ಕಥೆ. ನವಿಲುಗರಿಯನ್ನು ನೇವರಿಸುವವಳಿಗೆ ನವಿಲು ಕೊಂದ ಹುಡುಗನ ಭಾವನೆ ಅರ್ಥವಾಯಿತಾ ಎಂದು ಓದಿ ನೋಡಿ.
ಅತಿಥಿ :
ಈ ಕಥಾ ಸಂಕಲನದಲ್ಲಿ ಕಾಡಿದ ಕಥೆ ಇದು. ವಾರಪೂರ್ತಿ ಮನೆ, ತೋಟ, ಸುಮ್ಮನೆ ಒಬ್ಬರೇ ಕಾಡಲೆಯುವ ಚಂದ್ರೇಗೌಡರು ವಾರಕ್ಕೊಂದು ಬಾರಿಯಷ್ಟೇ ತೀರ್ಥಹಳ್ಳಿಗೆ ಬರುವುದು. ಅದೂ ಸೋಮವಾರದ ಸಂತೆಗೆ. ಆದರೆ, ಹೀಗೆ ಬಂದಾಗ ಈ ಬಾರಿ ಗೌಡರ ಕಣ್ಣಿಗೆ ಕಂಡದ್ದು ಟಿ.ವಿ. ಮಗಳು ಸತ್ತ ನಂತರ ಮನೆಯಲ್ಲಿ ಅದೇ ಏಕಾಂತ, ನೀರವತೆ, ಒಂದು ರೀತಿಯ ವಿಲಕ್ಷಣ ನಡತೆ. ಇದಕ್ಕೆ ಕಾರಣಗಳು ಒಬ್ಬೊಬ್ಬರ ಬಾಯಲ್ಲಿ ಒಂದೊಂದು ರೀತಿ. ಮನೆಗೆ ಟಿ.ವಿ ಯ ಮೂಲಕ ಅತಿಥಿಯೊಬ್ಬ ಪ್ರವೇಶ ಪಡೆದ. ಈ ಅತಿಥಿ ಒಂದು ರೀತಿಯ ವಿಭಿನ್ನ ಅತಿಥಿ ಎಂದರೂ ತಪ್ಪಾಗಲಾರದು. ಅತಿಥಿಸತ್ಕಾರ ಹೇಗಾಯಿತು..??" ಹೇಳದೆಯೂ ಎಲ್ಲವನ್ನೂ ದಾಟಿಸುವಂತಹ ಕಥೆ ಇದು.
ಹಾವು ಮತ್ತು ಹುಡುಗಿ :
ಹುಡುಗಿ ಒಬ್ಬಳೇ ಏಕಾಂತದಲ್ಲಿ ಸಿಕ್ಕರೆ..! ಅದೂ ಮತ್ತಿನಲ್ಲಿ ಇರುವವಳೊಬ್ಬಳು ಏಕಾಂತದಲ್ಲಿ ಸಿಕ್ಕರೆ..! ಸುಮ್ಮನಿರುತ್ತದಾ ಗಂಡು ಜೀವ..? ಹೀಗೆ ಸಿಕ್ಕ ಹುಡುಗಿಯೊಬ್ಬಳನ್ನು ಮನೆಗೆ ಕರೆ ತಂದಾಗ ಕಂಡದ್ದು ಮನೆಯಲ್ಲಿನ ಹಾವು. ಒಂದೇ ದಿನ ಹಾವು ಮತ್ತು ಹುಡುಗಿ ಒಟ್ಟೊಟ್ಟಿಗೆ.. ಹಾಗಾದರೆ, ಈಗ ಹುಡುಗಿ ಮತ್ತು ಹಾವಿನ ಕಥೆ ಏನು..? ಕಥೆಗೂ ಮೀರಿ ರೂಪಕ ಒಂದರ ಮೂಲಕ ಮತ್ತೇನೋ ಹೇಳುವಂತನಿಸಿತು.
ಯಾವತ್ತೂ ಹಾಡುತ್ತಿದ್ದ ಹಾಡು :
"ಪ್ರೀತಿ ಮಾಡುವವನಿಗೆ ಕಾಯುವುದು ಗೊತ್ತಿರಬೇಕು.... ಒಂದು ಮಾತಿಗೆ, ಚೂರು ಸನಿಹಕ್ಕೆ, ಕೊನೆಯದೊಂದು ನೋಟಕ್ಕೆ...' ಅಂತ ಅವನು ಯಾವತ್ತೋ ಹೇಳಿದ ಸಾಲುಗಳು ನೆನಪಾದವು.
ಈ ಸಾಲುಗಳು ನಮಗೂ ಈ ಕಥೆಯ ಮೂಲಕ ನಮಗೂ ಮತ್ತೆ ಮತ್ತೆ ನೆನಪಾಗುತ್ತವೆ.
ಯಾರಿಗೋ.. ಯಾರೋ.. ಎಷ್ಟೋ ಕಾಲ ಕಾದು ಬಿಡುತ್ತಾರೆ. ಈ ಕಾಯುವಿಕೆಗೆ ಅಷ್ಟು ತಾಳ್ಮೆ ಬೇಕು. ಜೊತೆಗೆ ನಿರ್ಮಲವಾದ ಪ್ರೀತಿ ಸಹಾ. ಇದಿಲ್ಲದೇ ಹೋದರೆ ಆ ಕಾಯುವಿಕೆಗೆ ಅರ್ಥವೇನು..?? ಯಾವತ್ತೂ ಹಾಡುತ್ತಿದ್ದ ಹಾಡು ಬದಲಾಯಿತು. ಆತನಿಗೆ ಮಲತಾಯಿಯಾಗಿದ್ದವಳು ತಾಯಿಯಾಗಿದ್ದಳು. ಆದರೆ, ಅವಳ ಹಾಡು-ಪಾಡು ಬೇರೆಯೇ ಇತ್ತು. ಅದಕ್ಕೆ ಕಾರಣೀಕರ್ತರೂ.. ಯಾವತ್ತೂ ಹಾಡುತ್ತಿದ್ದ ಹಾಡು ಒಂದು ದಿನ ಬದಲಾದಲೇಬೇಕೇನೋ..??
ದೀಪಾವಳಿ :
ಅಮ್ಮ ಎಂದಿದ್ದರೂ ಮನೆಯ ಬೆಳಕು. ಆದರೆ, ಅಪ್ಪ ಹಾಗೂ ಅಮ್ಮನ ನಡುವೆ ಆಗುವ ಮುನಿಸು, ಜಗಳ ಒಂದು ದಿನ ಅಮ್ಮ ಮನೆ ಬಿಟ್ಟು ಹೋಗುವಂತೆ ಮಾಡಿದರೆ..?? ಅಮ್ಮ ವಾಪಾಸ್ ಬಂದರೆ..?? ಅಪ್ಪ ಮುನಿಸು ಮರೆತು ರಾಜಿಯಾದನೇ..?? ಬಾಲ್ಯದ ಹುಡುಗನೊಬ್ಬನ ಕಣ್ಣಲ್ಲಿ ದೀಪಾವಳಿಯ ಚಿತ್ರಣ. ಮನೆ ಕತ್ತಲಾಯಿತೇ ಅಥವಾ ಬೆಳಗಿತೇ ನೀವೇ ಓದಿ ನೋಡಿ. ಇಲ್ಲಿನ ದೀಪಾವಳಿಯದ್ದು ದೀಪದ ಸೊಡರಿನಂತಹಾ ಕಥಾನಕ.
ಕನ್ನಡಿ ಹಿಂದಿನ ಹುಡುಗಿ :
ಪ್ರಯಾಣದ ಮಾಡುವಾಗ ಎಷ್ಟೋ ಬಾರಿ ಸಿಗುವ ಪ್ರಯಾಣಿಕರು ಪರಿಚಿತರೇನೋ ಎಂಬಂತೆ ಕಣ್ಣಲ್ಲಿ ನಿಂತುಬಿಡುತ್ತಾರೆ. ಕೆಲವೊಮ್ಮೆ ಮುಗ್ಧತೆಯಿಂದ, ಮತ್ತೆ ಕೆಲವೊಮ್ಮೆ ಸೌಂದರ್ಯದಿಂದ. ಹೀಗೆ ಕಾಡೊಳಗೆ ಸಿಕ್ಕ ಸುಂದರಿಯೊಬ್ಬಳನ್ನು ಕಂಡವನಿಗೆ ಆಕೆ ಕಾಡುತ್ತಾಳೆ. ಆದರೆ, ಅಲ್ಲಿ ಅವಳೊಬ್ಬಳೇ ಇರುವುದಿಲ್ಲ. ಜೊತೆಯಲ್ಲಿ ಮತ್ತೊಬ್ಬಳಿದ್ದಳು. ಹಾಗೆ ಬರುತ್ತಿದ್ದ ಆ ಹುಡುಗಿಯರಿಗೆ ಅಪಘಾತವಾಯಿತು. ಅಪಘಾತದಲ್ಲಿ ಸತ್ತಿದ್ದು ಯಾರು ಹಾಗೂ ಬದುಕಿದ್ದು ಯಾರು ..?? ಅವನ ಕುತೂಹಲವೇ ಓದುಗರದ್ದೂ.. ವಿಭಿನ್ನ ಮುಕ್ತಾಯವನಿಸಿತು.
ಕತೆಗಾರನ ಕತೆ :
ಕತೆಗಾರ ಬರೆದ ಕತೆಯೇ.. ಕತೆಗಾರನ ಪಾತ್ರ ತಳೆದು ತನ್ನ ಮಾತುಗಳನ್ನು ಬಿಚ್ಚಿಟ್ಟರೆ ಹೇಗಿರುತ್ತದೆ. ಶೀರ್ಷಿಕೆ ಕತೆಯ ಒಳಗನ್ನು ತೆರೆದಿಡುತ್ತದೆ ಎಂದುಕೊಂಡರೂ, ಕತೆಯನ್ನು ಊಹಿಸುವುದೇನೂ ಸುಲಭವಿಲ್ಲ. ಕಥೆಗಾರನ ಕಥೆಯಲ್ಲಿನ ಪಾತ್ರಗಳು ಹೀಗೆ ಹೇಳುವುದರ ಕಥೆ ಓದಿದ್ದೆ. ಆದರ, ಇಲ್ಲಿ ಕತೆಯೇ ಕತೆಗಾರನ ಪಾತ್ರ ತಳೆದಿರುವುದು ಬೇರೆ ಅನುಭವ ನೀಡುತ್ತದೆ.
ಈ ಕಥೆಗಳನ್ನು ಓದುತ್ತಾ ಹೋದಂತೆ.. ಯಾವುದೋ ಒಂದು ನಿಗೂಢ ಲೋಕದಲ್ಲಿ.. ಆದರೆ, ತನಗೆ ಗೊತ್ತಿರುವ ಜಾಡಿನಲ್ಲಿ ಕಥೆಯನ್ನು ಹೆಣೆದಂತಿದೆ ಕಥೆಗಾರ. ಮಲೆನಾಡಿನ ಸುಂದರ ದೃಶ್ಯಗಳು ಹಾಗೂ ದನ ಗೋಳಾಗಿ ಸುರಿವ ಮಳೆ ಪುಸ್ತಕ ಮುಚ್ಚಿಟ್ಟ ಮೇಲೂ ಕಾಣುವಂತಿದೆ. ಅದರಲ್ಲಿಯೂ ಮಲೆನಾಡಿನವರಿಗೆ ಆಪ್ತ ಭಾವ ನೀಡುತ್ತವೆ. 'ದನಗೋಳಾಗಿ ಸುರಿವ ಮಳೆ' ಈ ಪದ ನನಗೆ ಹೊಸತು. ಒಂದು ರೀತಿಯಲ್ಲಿ ಈ ಪದ ಇಷ್ಟವಾಯಿತು. ಈ ಪುಸ್ತಕದಲ್ಲಿ ಹೆಚ್ಚು ಆವರಿಸಿದ್ದು.. ಹೇಳಿಯೂ ಹೇಳದಂತಹಾ ಆವರಿಸುವ ನಿಗೂಢತೆ. ಇಲ್ಲಿನ ನಿಗೂಢತೆ ಎಂದರೆ ಮತ್ತೇನಲ್ಲ. ಮಲೆನಾಡಿನವರಿಗೆ ಪರಿಚಿತವಾಗಿರುವ ಕಾಡನ್ನು ಹೊಸಬರೊಬ್ಬರು ಪ್ರವೇಶಿಸಿದಾಗ ಅಲ್ಲಿ ಕಾಣುವ ನೋಟ, ಪುಳಕವಿದೆಯಲ್ಲ ಅಂತಹದ್ದು. ಬಾಲ್ಯ ಹಾಗೂ ಯೌವ್ವನದ ಕಥೆಗಳು ಹೆಚ್ಚಿವೆ. ಬಾಲ್ಯದ ಕಥೆಗಳಲ್ಲಿ ಮುಗ್ಧತೆ ಇದ್ದರೆ, ಯೌವ್ವನದಲ್ಲೊಂದು ತುಂಟಾಟ, ಹುಡುಗುತನ ಹಾಗೆಯೇ ಇವೆ. ಹರೆಯದ ಪುಳಕಗಳಿವೆ. ಕಥೆಯೊಳ ಹೊಕ್ಕು ಕಥೆಯನ್ನು ಬರೆದವರು, ಕಥೆಯನ್ನು ಓದುವವರಿಗೂ ಅದನ್ನು ತಲುಪಿಸಿರುವ ಪರಿ ಇಷ್ಟವಾಯಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ