ಪುಸ್ತಕದ ಶೀರ್ಷಿಕೆ : ವಸಂತದ ಹೂವುಗಳು
ಲೇಖಕರು : ಎ.ಪಿ ಮಾಲತಿ
ಪ್ರಕಾಶಕರು : ಕನ್ನಡ ಪುಸ್ತಕ ಪ್ರಪಂಚ
ಮೊದಲನೇ ಮುದ್ರಣ : 1998
ಪುಟಗಳು : 122
ಎಪಿ ಮಾಲತಿ ಅವರ ಕಾದಂಬರಿಗಳನ್ನು ಓದಿದ್ದೆನಷ್ಟೇ.. ಅವರ ಈ ಸಣ್ಣ ಕಥೆಗಳ ಸಂಕಲನ ಬೇರೆಯದೇ ರೀತಿಯ ಅನುಭವ ನೀಡುತ್ತದೆ. ಇಲ್ಲಿನ ಕಥಾವಸ್ತುಗಳು ಹಾಗೂ ಕಥೆಯನ್ನು ಹೆಣೆದಿರುವ ರೀತಿ ವಾಸ್ತವಾದಲ್ಲಿ ನಾವು ಕಾಣದ ಕೆಲವು ಭಾಗಗಳನ್ನು ಹಾಗೂ ಗಮನಿಸಿ ನಿರ್ಲಕ್ಷಿಸಿ ಸುಮ್ಮನಾದ ಘಟನೆಗಳನ್ನು ನಮ್ಮ ಮುಂದೆ ಹರವಿಡುತ್ತದೆ. ವಸಂತದ ಹೂವುಗಳು ಎನ್ನುವ ಈ ಕಥಾ ಸಂಕಲನದಲ್ಲಿ 12 ಕಥೆಗಳಿವೆ. ಈ ಕಥೆಗಳಲ್ಲಿ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದಂತಹವು ಹಾಗೂ ಆಕಾಶವಾಣಿಯಲ್ಲಿಯೂ ಪ್ರಸಾರವಾಗಿರುವ ಕಥೆಗಳಿವೆ.
ಸ್ನೇಹ ಪಲ್ಲವಿ : ಪ್ರಭಾ ಯಾವುದೋ ವಾರ್ತಾ ಪತ್ರಿಕೆಯಲ್ಲಿ ಯಾವುದೋ ಪರಿಚಿತ ಮುಖವನ್ನು ಕಂಡಂತಾಗಿ ಅದು ಆಕೆಯ ಬಾಲ್ಯದ ಗೆಳತಿಯ ಪತಿ ಎಂದು ಗುರುತಿಸುತ್ತಾಳೆ. ಆ ಕಳೆದು ಹೋಗಿದ್ದ ತನ್ನ ಬಾಲ್ಯದ ಆತ್ಮೀಯ ಗೆಳತಿ ಸುಮನಾಳನ್ನು ಹುಡುಕಿಕೊಂಡು ಹೊರಡುತ್ತಾಳೆ. ಮೊದಲಿನ ಆತ್ಮೀಯತೆ ಅಲ್ಲಿತ್ತಾ ಅಥವಾ ಬದಲಾದ ಮನಸ್ಥಿತಿ, ವಾತಾವರಣ, ಅಂತಸ್ತು ಎಲ್ಲವೂ ಸ್ನೇಹ ಪಲ್ಲವಿ ಮಿಡಿಯುವಂತೆ ಮಾಡಿತಾ ಅಥವಾ ಸ್ನೇಹ ಕಮರಿ ಹೋಯಿತಾ..? ಒಂದು ಸ್ನೇಹ ಪಲ್ಲವಿಯ ಕಾಣದ ಕಥೆ ಇದು.
ಅವನು ಮತ್ತು ಮಗು : ಮಗು ಅಪ್ಪನಂತಿದೆಯಾ ಇಲ್ಲವೇ ಅಮ್ಮನಂತಿದೆಯಾ ಎಂದು ಜನರು ಸುಲಭವಾಗಿ ನಿರ್ಧರಿಸಿಬಿಡುತ್ತಾರೆ. ಅದರಲ್ಲಿಯೂ ಮಗು ಕೊಂಚ ಚೆನ್ನಾಗಿ ಕಂಡು, ಅಪ್ಪ ಅಥವಾ ಅಮ್ಮ ಅದಕ್ಕಿಂತ ಕಪ್ಪು ಅಥವಾ ಸಾಧಾರಣ ರೂಪಿನವರಾಗಿದ್ದರೆ ಇದು ಅವರದ್ದೇ ಮಗು ಎನ್ನುವ ಅನುಮಾನ ಮೂಡಿಬಿಡುತ್ತದೆ. ದಾದರ್ ರೈಲ್ವೆ ನಿಲ್ದಾಣದಲ್ಲಿ ಚೆಂದದ ಮಗುವನ್ನು ಎತ್ತಿಕೊಂಡ ಅವನು ಅದನ್ನು ಸಂಭಾಳಿಸದೆ ಒದ್ದಾಡುತ್ತಿರುವುದನ್ನು ಕಂಡು ಒಬ್ಬ ಯುವಕನಿಗೂ ಈ ಅನುಮಾನವೇ ಬಂದಿತು. ಅದು ಅವನದೇ ಮಗುವಾ ಅಥವಾ ಅವನು ಮಗುವನ್ನು ಕದ್ದುಕೊಂಡು ಬಂದು ಅದನ್ನು ಸಂಭಾಳಿಸಲಾಗದೆ ಒದ್ದಾಡುತ್ತಿರುವನಾ ಎಂದು. ಈ ಕಥೆ ನಮ್ಮ ನೋಡುವ ಕಣ್ಣಿಗೂ ಅಲೋಚಿಸುವ ಮನಸ್ಥಿತಿಗೂ ಹಿಡಿದ ಕನ್ನಡಿಯಂತಿದೆ.
ವಸಂತದ ಹೂವುಗಳು: ಯುವತಿಯರು ಅದರಲ್ಲಿಯೂ ವಯಸ್ಸಿಗೆ ಬಂದ ಹುಡುಗಿಯರು ಹೂವುಗಳಿದ್ದಂತೆ. ಹೀಗೆ ಅರಳುವ ವಸಂತದ ಹೂವುಗಳನ್ನು ಜೋಪಾನ ಮಾಡುವುದು ಕೇವಲ ತಂದೆ-ತಾಯಿಗೆ ಮಾತ್ರವಲ್ಲ.. ಪರಿಸರದಲ್ಲಿರುವ ಎಲ್ಲರಿಗೂ ಸೇರಿದ್ದು. ಪ್ರೊಫೆಸರ್ ಮಧುಸೂದನ ಅವರಿಗೆ ತಮ್ಮ ತರಗತಿಯ ಹುಡುಗಿಯರು ಹುಡುಗರೊಡನೆ ಬೆರೆಯುವುದು ಇಷ್ಟವಿರಲಿಲ್ಲ. ಪಾಠದ ವಿಚಾರದಲ್ಲಿ ಬಹಳ ಚೆನ್ನಾಗಿ ಪಾಠ ಮಾಡುವ ಪ್ರೊಫೆಸರ್ ಈ ವಿಚಾರ ಬಂದರೆ ಕೆಂಡದಂತಹಾ ಕೋಪ ಮಾಡಿಕೊಳ್ಳುತ್ತಿದ್ದರು. ಇದರ ಹಿಂದಿನ ಕಾರಣ ಏನಿತ್ತು..?? ವಸಂತದ ಹೂವುಗಳ ರಕ್ಷಣೆಯ ಭಾರವನ್ನು ಅವರು ಅವರಾಗಿಯೇ ಹೊತ್ತದಕ್ಕೆ ಕಾರಣ ತಿಳಿದಾಗ ಹಾಗೆ ವರ್ತಿಸುವವರ ಹಿಂದಿನ ಮನಸ್ಥಿತಿ ಅರಿವಾಗುತ್ತದೆ.
ರಕ್ಷಣೆ : ಚಂದ್ರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಆತನ ಅಣ್ಣ ಗೋಪಾಲ ಬಂದದನ್ನು ಕಂಡು ವಾಣಿ ಪೆಚ್ಚಾದಳು. ಆತ ಒಬ್ಬನೇ ಬಂದಿರಲಿಲ್ಲ. ತನ್ನ ಕಿರಿಯ ಮಗ ಆನಂದನನ್ನೂ ಜೊತೆಯಲ್ಲಿಯೇ ಕರೆದುಕೊಂಡು ಬಂದಿದ್ದನು. ತಮ್ಮನಿಗೆ ಆಸ್ತಿಯಲ್ಲಿ ಸರಿಯಾದ ಪಾಲು ನೀಡದೆ ಹೊರ ದೂಡಿದ್ದ ಅಣ್ಣ ಈಗ ತಮ್ಮನ ಮನೆಗೆ ಬಂದದ್ದು ಮಗನಿಗಾಗಿ. ಮಗನ ರಕ್ಷಣೆಯ ಭಾರ ಹೊರಲು ಇವರು ಸಿದ್ಧವಾದರೆ ??
ಮಾನ ತೆಗೆದ ಉಡುಪು: ಮನುಷ್ಯರು ಹೀಗೆಯೇ ಎಂದು ಅವರ ಉಡುಪಿನ ಮೇಲೆ ನಿರ್ಧರಿಸುವವರಿಗೆ ಏನೂ ಕಡಿಮೆ ಇಲ್ಲ. ಇದು ಅವನು ಮತ್ತು ಮಗು ಎಂಬ ಕಥೆಯ ಮತ್ತೊಂದು ರೂಪಿನಂತೆಯೇ ಅನ್ನಿಸಿದರೂ.. ಇಲ್ಲಿ ಹೆಣ್ಣೊಬ್ಬಳ ತಲ್ಲಣ ಕಾಣಿಸಿತು. ಸಾಧಾರಣವಾಗಿ ಹೆಚ್ಚು ತಯಾರಾಗುವುದನ್ನು ಇಷ್ಟಪಡದ ಪಾರ್ವತಿ ಅಂದು ಅಮ್ಮನ ಅನಾರೋಗ್ಯದ ಸುದ್ದಿ ಕೇಳಿ ತಾನಿದ್ದ ಸಾದಾ ಉಡುಪಿನಲ್ಲಿಯೇ ಇದ್ದಂತೆಯೇ ಹೊರಟುಬಿಟ್ಟಿದ್ದಳು. ಮಗು ಹೆಚ್ಚು ಅಳುತ್ತಿದ್ದಾಗ ಮಗುವಿಗಾಗಿ ಹಾಲು ತರಲು ಅವಳ ಗಂಡ ಹೋಗಿದ್ದಾಗ.. ಬಸ್ ಸ್ಟ್ಯಾಂಡ್ ನಲ್ಲಿ ಕುಳಿತಿದ್ದವಳ ಬಳಿ ಬಂದ ಭಿಕ್ಷುಕಿಯೊಬ್ಬಳು ಅವಳನ್ನೂ ಭಿಕ್ಷುಕಿ ಎಂಬಂತೆಯೇ ಭಾವಿಸಿದಳು. ಅಷ್ಟೇ ಆಗಿದ್ದರೆ ಪರವಾಗಿರಲ್ಲವೇನೋ.. ಅಲ್ಲಿ ನಡೆದ ಘಟನೆಯೊಂದು ಇಂದಿನ ಜನರ ಮನಸ್ಥಿತಿಯನ್ನು, ಅವರು ನೋಡುವ ಬಗೆಯನ್ನು ತೆರೆದಿಟ್ಟಿತು.
ಈ ರೀತಿಯ ಪರಿಸ್ಥಿತಿ ಎಲ್ಲರಿಗೂ ಅಲ್ಲದಿದ್ದರೂ ತೀರಾ ಸಾದಾ ಉಡುಪು, ಮೈ ಮೇಲೆ ಚಿನ್ನವಿಲ್ಲದೆ, ಕೆದರಿದ ಕೂದಲು, ಅಲಂಕಾರದ ಕುರಿತು ಗಮನ ಕೊಡದವರಿಗೆ ಅನುಭವಕ್ಕೆ ಬಂದಿರುತ್ತದೆ. ತೀಕ್ಷ್ಣತೆ ಕೊಂಚ ಕಡಿಮೆಯಿರಬಹುದೇನೋ.. ಉಡುಪು ಮಾನ ಮುಚ್ಚುವುದಕ್ಕಾಗಿ ಎಂದು ಭಾವಿಸುತ್ತೇವೆ. ಆದರೆ, ಕೆಲವೊಮ್ಮೆ ನಮ್ಮ ಉಡುಪಿನಿಂದಲೇ ನಮ್ಮ ಮರ್ಯಾದೆ ಕಡಿಮೆಯಾಗಿರುವುದೂ ಇಲ್ಲದಿಲ್ಲ.
ಮುದಿನಾಯಿ : ಎಷ್ಟೋ ಪ್ರಾಣಿಗಳು ಮುದಿಯಾದಾಗ ಅವುಗಳನ್ನು ಮಾರುವುದು ಅಥವಾ ಬೇರೆಲ್ಲಿಯೋ ಬಿಟ್ಟು ಬರುವುದನ್ನು ಜನ ಮಾಡುತ್ತಾರೆ. ವಿನಯ ತಾನೇ ತಂದ ನಾಯಿಯನ್ನು ಮದುವೆಯಾದ ನಂತರ ಅಮ್ಮನ ಮನೆಯಲ್ಲಿಯೇ ಬಿಟ್ಟು ಹೋಗಿದ್ದಳು. ಮನೆಯವರು ಅದನ್ನು ಚೆನ್ನಾಗಿಯೇ ನೋಡಿಕೊಂಡಿದ್ದರು. ಈಗ ಅವಳು ತನ್ನ ಎರಡನೇ ಬಾಣಂತನಕ್ಕಾಗಿ ಮನೆಗೆ ಬರುತ್ತಿರುವ ಸಂದರ್ಭ. ಅಳಿಯನಿಗೆ ನಾಯಿ ಎಂದರೆ ಆಗುತ್ತಿರಲಿಲ್ಲ. ಒಂದೆರಡು ದಿನಕ್ಕೇನೋ ಸಂಭಾಳಿಸಬಹುದಾಗಿತ್ತು. ಆದರೆ, ಈಗ ಎಷ್ಟೋ ದಿನಗಳು.. ಅಲ್ಲದೆ, ನಾಯಿಯೂ ಮೊದಲಿನಂತಿರಲಿಲ್ಲ. ಈ ಕಥೆಯ ಕೊನೆಯಲ್ಲಿ ಬಳಸಿರುವ ಉಪಮೆಯೊಂದು ಮುದಿತನದ ಅರ್ಥ ಹಾಗೂ ದೈನ್ಯತೆಯ ಬದುಕನ್ನು ತೆರೆದಿಟ್ಟಂತಾಗಿ ಮನಸ್ಸು ಆರ್ದ್ರವಾಯಿತು.
ಜೋಡೆತ್ತಿನ ಗಾಡಿ : ಇಲ್ಲಿ ಜೋಡೆತ್ತುಗಳು ನನಗೆ ಕೇವಲ ಜೋಡೆತ್ತುಗಳಂತೆ ಮಾತ್ರ ಕಾಣಲಿಲ್ಲ .ಈ ಮನೆಯ ಅಣ್ಣ-ತಮ್ಮಂದಿರಾಗಿಯೂ ಕಂಡರು. ಅತ್ತ ಸಂಸಾರಕ್ಕೆ ಆಧಾರವಾಗಿದ್ದ ಜೋಡೆತ್ತಿನ ಗಾಡಿಯ ಜೋಡೆತ್ತುಗಳಲ್ಲಿ ಒಂದು ಎತ್ತು ಸತ್ತು ಹೋಗಿತ್ತು. ಇತ್ತ ಹಣ ಕಾರಣಕ್ಕೆ ಅಣ್ಣತಮ್ಮಂದಿರಲ್ಲಿ ವೈಮನಸ್ಸು ಮೂಡಿತ್ತು. ಆ ಜೋಡೆತ್ತಿಗೆ ಜೋಡಿ ಸಿಕ್ಕಿತೇ..?? ಅಣ್ಣ-ತಮ್ಮಂದಿರು ಜೋಡೆತ್ತುಗಳಂತೆ ಮನೆಯನ್ನು ಮುಂದೆ ಸಂಭಾಳಿಸಿದರೇ..?? ಬಡ ಮಧ್ಯಮ ವರ್ಗದ ಕಥೆಯನ್ನು ಓದಿ ಮನಸ್ಸು ತೇವವಾಗುತ್ತದೆ.
ತಿರುವು : ಮಗಳನ್ನು ಹಾಸ್ಟೆಲ್ ನಲ್ಲಿ ಬಿಡಲು ಇಷ್ಟವಿಲ್ಲದೆ, ಬಾಲ್ಯದ ಸ್ನೇಹಿತ ಅಭಯ ಚಂದ್ರನ ಮನೆಗೆ ಆಕೆಯನ್ನು ಬಿಡಲು ನಿರ್ಧರಿಸಿ ಒಮ್ಮೆ ಆತನೊಡನೆ ಮಾತನಾಡಿಕೊಂಡು ಬರೋಣ ಎಂದು ಹೋಗುತ್ತಾನೆ. ಆತನ ಮಗ ತುಷಾರ ಹಾಗೂ ಅಭಯ ಚಂದ್ರನನ್ನು ಕಂಡ ನಂತರ ಅವರ ಬದುಕಿನಲ್ಲಿ ಬಂದ ತಿರುವುಗಳನ್ನು ಕಂಡು ಬದಲಾಗುವ ಆಲೋಚನೆ ಎಂದರೆ ತಿರುವು ಇಲ್ಲಿದೆ.
ಹೊಣೆ : ರಜನಿ ಹಾಗೂ ಶಂಕರ ಇಬ್ಬರು ದುಡಿಯುತ್ತಿದ್ದರೂ.. ಮುಂಬಯಿಯಲ್ಲಿ ಜೀವನ ಸಾಗಿಸುವುದು ಅಷ್ಟು ಸರಾಗವಿರಲಿಲ್ಲ. ಅವರ ಕುಟುಂಬದಲ್ಲಿ ಅವರಿಗೆ ಅವರದ್ದೇ ಆದ ಹೊಣೆಗಳಿದ್ದವು . ಅತ್ತೆ, ಮಾವ, ಮೈದುನ, ನಾದಿನಿ ಅಷ್ಟೇ ಅಲ್ಲದೆ ತಮ್ಮ ಅವಳಿ-ಜವಳಿ ಹೆಣ್ಣು ಮಕ್ಕಳು. ಜೊತೆಗೆ ರಜನಿಯ ಈಗಿನ ಪರಿಸ್ಥಿತಿ. ಎಲ್ಲಾ ಹೊಣೆಗಳನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಆದರೆ, ಆ ಹೊಣೆಗಳನ್ನು ಬಿಟ್ಟು ಹೊರಡುವುದೂ ಸಹಾ ಅಷ್ಟು ಸುಲಭವಿಲ್ಲ ಎನ್ನುವುದನ್ನು ಅರಿವಾಗಿಸುತ್ತದೆ ಈ ಕಥೆ.
ದೊಂಬರಾಟ: ವಯಸ್ಸಾದ ನಂತರದ ಬದುಕು ಅಷ್ಟು ಸುಲಭವಲ್ಲ. ಮಕ್ಕಳು ದೂರವಾಗಿ, ಹೆಂಡತಿಯರ ಮಾತು ಕೇಳುತ್ತಾ ಅವರಿಗೆ ತಕ್ಕಂತೆ ಬದಲಾಗಿ ಹೊರಗೆ ಉಳಿದರಂತೂ.. ಹಿರಿಯರ ಪಾಡು ಅವರಿಗೇ ಪ್ರೀತಿ. ಇಲ್ಲಿನ ಹಿರಿಯರೊಬ್ಬರು ತಮ್ಮ ಜೀವನವನ್ನು ದೊಂಬರಾಟದೊಂದಿಗೆ ಸಮೀಕರಿಸಿಕೊಂಡಿದ್ದಾರೆ. ಆದರೆ, ನಿಜಕ್ಕೂ ಇಲ್ಲಿನ ದೊಂಬರಾಟ ಯಾರದ್ದು ಓದಿ ನೋಡಿ.
ಮನೆಮಗಳು : ಮನೆಮಗಳು ಬಾಣಂತನಕ್ಕೆ ಬರುವಾಗ ಹಸುವಿನ ಹಾಲಿಲ್ಲದಿದ್ದರೆ ಹೇಗೆ ಎನ್ನುವ ಚಿಂತೆಯಲ್ಲಿ ಪ್ರಭಾ ರಾಮಕೃಷ್ಣನಿಗೆ ಹಸುವನ್ನು ತರಲು ಒತ್ತಾಯಿಸುತ್ತಲೇ ಇದ್ದಳು. ಹಾಗೆಯೇ.. ಸಂತೆಗೆ ಹೋದ ರಾಮಕೃಷ್ಣನಿಗೆ ಸಿಕ್ಕಿದ್ದು ಹಾಲು ಕೊಡುವ ಹಸುವಲ್ಲ. ಬದಲಿಗೆ, ಮನೆಮಗಳಾಗಿದ್ದ ಹಸು ಕಪಿಲೆ. ಅವಳೀಗ ಹಾಲು ಕೊಡುವ ಸ್ಥಿತಿಯಲ್ಲಿರಲಿಲ್ಲ. ಮುದಿ ಗೊಡ್ಡು. ಮನೆಮಗಳು ಮತ್ತೆ ಮನೆಗೆ ಬಂದರೆ..?? ರಾಮಕೃಷ್ಣನ ಭಾವುಕತೆಯ ನಿರ್ಧಾರ ಹಾಗೂ ಪ್ರಭಾಳ ವಾಸ್ತವಿಕತೆಯ ಮಾತುಗಳು ಇಲ್ಲಿ ಯೋಚನೆಗೆ ಹಚ್ಚುತ್ತವೆ.
ಮೊಂಬತ್ತಿ : ಸುಶೀಲ ತನ್ನ ಗಂಡ ಹಾಗೂ ಇಬ್ಬರು ಮಕ್ಕಳ ಜೊತೆ ಬೇರೆ ಹೋಗಲು ನಿರ್ಧರಿಸಿದ್ದಳು. ಆದರೆ, ಅವಳಿಗೆ ಭೇಟಿಯಾದ ಅವಳ ಗೆಳತಿ ಆಕೆಯ ಯೋಚನಾ ಲಹರಿಯನ್ನೇ ಬದಲಿಸುವಂತೆ ಬದುಕುತ್ತಿದ್ದಳು. ಮೊಂಬತ್ತಿಯೊಂದು ತಾನು ಕರಗಿ, ಎಲ್ಲರಿಗೂ ಬೆಳಕು ನೀಡುತ್ತದೆ. ಕೇವಲ ಸ್ವಾರ್ಥದಿಂದಲೇ ಬದುಕು ಸಾಧ್ಯವಿಲ್ಲ. ನಿಸ್ವಾರ್ಥವಾಗಿ ಬದುಕುವುದೇ ಜೀವನ. ಸುಶೀಲ ತ್ಯಾಗದಿಂದ ಮೊಂಬತ್ತಿಯಾಗಲು ನಿರ್ಧರಿಸಿದಳೇ ಅಥವಾ ಮನೆಯನ್ನು ಸುಡುವ ಬೆಂಕಿಯಾದಳೇ..?? ನೀವೇ ಓದಿ ನೋಡಿ.
ಇಲ್ಲಿನ ಕೆಲವು ಕಥೆಗಳು ಮುಂಬೈಯ ಜೀವನದ್ದಾದರೆ, ಇನ್ನೂ ಹೆಚ್ಚಿನವು ಹಳ್ಳಿಯವು ಹಾಗೂ ನಾವು ಸುತ್ತಮುತ್ತ ನೋಡುವ ಸಮಾಜದ್ದು. ವಾಸ್ತವಿಕ ನೆಲೆಗಟ್ಟಿನಲ್ಲಿ ಹರಡಿರುವ ಕಥೆಗಳಿಲ್ಲಿವೆ. ಹೆಚ್ಚಿನ ಕಥೆಗಳು ಎರಡೆರಡು ಪಾತ್ರಗಳೊಂದಿಗೆ ವೈರುಧ್ಯದ ಆಲೋಚನೆಗಳನ್ನು ಮೂಡಿಸುತ್ತಾ.. ಯಾವುದು ಸರಿ ಯಾವುದು ತಪ್ಪು ಎನ್ನುವ ಆಲೋಚನೆಗೆ ಹಚ್ಚುತ್ತವೆ. ಮಧ್ಯ ವಯಸ್ಕರು ಹಾಗೂ ಹಿರಿ ಜೀವಗಳು ಎಷ್ಟೋ ಕಥೆಗಳಿಗೆ ತಮ್ಮನ್ನು ತಾವು ಸಮೀಕರಿಸಿಕೊಳ್ಳುವಂತಿದೆ ಇಲ್ಲಿ. ಇಲ್ಲಿನ ಕಥೆಗಳಲ್ಲಿ ಅತಿರೇಕದ ಸಂಗತಿಗಳಿಲ್ಲ. ಬದಲಿಗೆ, ಎಲ್ಲವನ್ನೂ ವಿಷದವಾಗಿ ತೆರೆದಿಟ್ಟಿರುವ ವಾಸ್ತವದ ಕಥೆಗಳಿವೆ. ಕೆಲವು ಕಥೆಗಳನ್ನು ಓದುತ್ತಾ ಓದುತ್ತಾ ಮನಸ್ಸು ಭಾರವಾದಂತನಿಸಿದರೂ.. ನಂತರ ಕೆಲವು ಕಥೆಗಳನ್ನು ಓದಿದಾಗ ಮನಸ್ಸು ಹಗುರವೆನಿಸುತ್ತದೆ. ಒಂದೊಳ್ಳೆ ಕಥಾ ಸಂಕಲನದ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ