ಮಂಗಳವಾರ, ಏಪ್ರಿಲ್ 7, 2026

ಅಂಜನ (ಪುಸ್ತಕ ಯಾನ - 82)


ಪುಸ್ತಕದ ಶೀರ್ಷಿಕೆ : ಅಂಜನ

ಲೇಖಕರು : ಎ.ಪಿ. ಮಾಲತಿ

ಪ್ರಕಾಶಕರು : ಗೀತಾ ಬುಕ್ ಹೌಸ್

ಮೊದಲನೇ ಮುದ್ರಣ : 1986

ಪುಟಗಳು : 104


ಎ ಪಿ ಮಾಲತಿಯವರ ಅಂಜನ ಕಾದಂಬರಿ ರಾಗಸಂಗಮದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು.


ಅಂಜನಳಿಗೆ ತನ್ನ ತಾಯಿ ಪತ್ರದಲ್ಲಿ ಬರೆದಿದ್ದ ಸುದ್ದಿ ಕೇಳಿ ಮತ್ತೊಮ್ಮೆ ಅಚ್ಚರಿಯಾದರೂ.. ಆ ಸುದ್ದಿ ನೋಡಿ ವಿಮನಸ್ಕಳಾದಳು. ಏಕೆಂದರೆ, ಅದು ಆಕೆಯ ಪತಿಯಾಗಿದ್ದ ನಂಜುಂಡನ ಕುರಿತಾದ ಸುದ್ದಿ. ನಂಜುಂಡ ಹದಿನಾರರ ವರ್ಷದ ಹರೆಯದ ಹುಡುಗಿಯನ್ನು ಮದುವೆಯಾದ ಸುದ್ದಿ ಅವಳಲ್ಲಿ ಅಚ್ಚರಿ ಮೂಡಿಸಿರಲಿಲ್ಲ. ಆದರೆ, ಈಗ ಅವಳಿಗೆ ಮಗುವಾಯಿತು ಎನ್ನುವ ಸುದ್ದಿ ಕೇಳಿ ಆಕೆಗೆ ಒಂದು ರೀತಿಯ ಅನ್ಯಮನಸ್ಕತೆ ಕಾಡಿತು. ಅಲ್ಲದೆ, ಹಿಂದಿನ ದಿನಗಳು ನೆನಪಾದವು. 


ಸುಭದ್ರ ಹಾಗೂ ವೆಂಕಟಣ್ಣನವರ ಏಕೈಕ ಪುತ್ರ ನಂಜುಂಡನ ಜೊತೆಗೆ ಅಂಜನಳ ಮದುವೆಯಾಗಿತ್ತು. ಆತನಂತೆ ಆಕೆಯೂ ಉದ್ಯೋಗಕ್ಕೆ ಹೋಗುತ್ತಿದ್ದಳು. ಇಬ್ಬರೂ ಬೇರೆ ಬೇರೆ ಕಡೆಯಲ್ಲಿ ಬ್ಯಾಂಕ್ ಉದ್ಯೋಗಿಗಳಾಗಿದ್ದವರು. ಸೊಸೆ ಉದ್ಯೋಗಕ್ಕೆ ಹೋಗಲೇಬೇಕು ಎನ್ನುವ ಮನಸ್ಥಿತಿಯವರೇನೂ ಆಗಿರಲಿಲ್ಲ ಅತ್ತೆ-ಮಾವ. ಆದರೆ, ಅಂಜನಳಿಗೆ ಕೆಲಸ ಬಿಟ್ಟು ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವುದು ಆಗದ ಮಾತು. ಹಾಗಾಗಿ, ಮಗುವಾಗುವವರೆಗೂ ತಾನು ಈ ಕೆಲಸಕ್ಕೆ ರಾಜೀನಾಮೆ ನೀಡುವುದಿಲ್ಲ ಎನ್ನುತ್ತಾ.. ಮನೆಯ ಕೆಲಸಗಳನ್ನೂ ಸಂಭಾಳಿಸಿಕೊಂಡೇ ಕೆಲಸಕ್ಕೆ ಹೋಗುತ್ತಿದ್ದಳು. ಆದರೆ, ಅವಳಿಗೆ ಮಗುವಾಗುವ ವಿಚಾರದಲ್ಲಿ ಕೊಂಚ ತೊಡಕಿತ್ತು. ಆದರೆ, ಅಂಜನಳಿಗೆ ಅದರ ಅರಿವಿರಲಿಲ್ಲ.


ಅತ್ತೆ-ಮಾವನ ಮುದ್ದಿನ ಕಣ್ಮಣಿಯಾಗಿ ಗಂಡನಿಗೂ ಪ್ರಿಯವಾದ ಪತ್ನಿ ಆಗಿರುವುದನ್ನು ನೋಡಿ ಅಂಜನಳ ತಾಯಿ ವಿಶಾಲಾಕ್ಷಿ ಹಾಗೂ ತಂದೆ ಶಿವರಾಮನವರು ಬಹಳ ನೆಮ್ಮದಿಯಿಂದ ಇದ್ದರು. ಮೊದಮೊದಲಿಗೆ ಎಲ್ಲವೂ ಚೆನ್ನಾಗಿಯೇ ಇತ್ತು. ನಂಜುಂಡನ ನಡವಳಿಕೆಯ ವಿಚಾರದಲ್ಲಿ ಅವಳಿಗೆ ಕೊಂಚ ಅನುಮಾನವಿದ್ದರೂ.. ಅದಕ್ಕೆ ಯಾವುದೇ ಆಧಾರವಿಲ್ಲದ್ದರಿಂದ ಎಲ್ಲವೂ ಸರಿಯಾಗಿಯೇ ಇತ್ತು. ಪ್ರಕಾಶ ಬರುವವರೆಗೂ..


 ಪ್ರಕಾಶ ಸುಭದ್ರಮ್ಮನ ತಮ್ಮ. ಮನೆಯಲ್ಲಿ ಎಲ್ಲರೂ ತಾವಾಗಿಯೇ ಅಂಜನ ಹಾಗೂ ಪ್ರಕಾಶನ ಸ್ನೇಹ ಬೆಳೆಯಲಿ ಎಂದು ಬಯಸಿರುವಂತಿತ್ತು. ಅವರ ನಡವಳಿಕೆ ಮೊದಮೊದಲಿಗೆ ಅವಳಿಗೆ ಇದು ಅನುಮಾನ ತರಿಸಿದರೂ.. ಅಷ್ಟು ಒಳ್ಳೆಯ ಮನಸ್ಸಿನ ಮನುಷ್ಯರ ಮೇಲೆ ಅನುಮಾನ ಪಡುವುದು ತರವಲ್ಲ ಎಂದುಕೊಂಡಿದ್ದಳ.  ಆದರೆ, ಪದೇಪದೇ ಅಂತಹದ್ದೇ ಘಟನೆಗಳಾದಾಗ ಅವಳ ಮನಸ್ಸಿನಲ್ಲಿಯೂ ಅನುಮಾನ ಮೂಡಿತ್ತು. 


ತನ್ನ ಗೆಳತಿ ದೇವಕಿ ಹಾಗೂ ನಂಜುಂಡನ ಬ್ಯಾಂಕ್ ಗೆ ಹೊಸದಾಗಿ ಬಂದಿದ್ದ ಮ್ಯಾನೇಜರ್ ಅಂಜನಾಳ ಸಹಪಾಠಿಯಾಗಿದ್ದ ವರದಪ್ಪಗೌಡ. ಇವರ ಜೊತೆಗೂ ಅವಳ ಆತ್ಮೀಯತೆ ಹೆಚ್ಚು ಸಾಗದಂತೆ ಸುಭದ್ರ ತಡೆಯಾಗಿದ್ದರು. ಅಷ್ಟೇ ಅಲ್ಲದೆ, ಬೇರೆ ಗಂಡಸರೊಡನೆ ಅಥವಾ ಬೇರೆ ಸ್ನೇಹಿತ ಅಥವಾ ಸ್ನೇಹಿತೆಯರೊಡನೆ ಬೆರೆಯಲು ಬಿಡದ ಗಂಡ, ಅತ್ತೆ-ಮಾವ ಕೇವಲ ಪ್ರಕಾಶನೊಡನೆ ಮಾತ್ರ ತನ್ನ ಸ್ನೇಹ ಗಟ್ಟಿಯಾಗಲಿ ಹಾಗೂ ಆತ್ಮೀಯತೆ ಬೆಳೆಯಲಿ ಎನ್ನುವ ಮನಸ್ಥಿತಿ ಅವಳಿಗೆ ಅಯೋಮಯವೆನಿಸುತ್ತಿತ್ತು.   


ಪುರಾಣಗಳಲ್ಲೆಲ್ಲ ನಿಯೋಗ ಪದ್ಧತಿ ನಿಶಿದ್ಧವೇನೂ ಆಗಿರಲಿಲ್ಲ. ಮಹಾಭಾರತದಲ್ಲಿಯೂ ಅಂಬಿಕೆ ಹಾಗೂ ಅಂಬಾಲಿಕೆಯರಿಗೆ ಧೃತರಾಷ್ಟ್ರ ಹಾಗೂ ಪಾಂಡುವಿನ ಜನನವಾದದ್ದು ವ್ಯಾಸರಿಂದಾಗಿಯೇ.. ಅಂಜನಾಳ ಬದುಕಿನಲ್ಲಿಯೂ ಇಂತಹದ್ದೇ ಒಂದು ಸಂದರ್ಭ ಒದಗಿತ್ತು .ನಂಜುಂಡನಿಗೆ ಮಕ್ಕಳಾಗುವಂತಿರಲಿಲ್ಲ. ಇದನ್ನು ಮುಚ್ಚಿಟ್ಟ ಅವನ ತಂದೆ-ತಾಯಿ ಅಂಜನಾಳನ್ನು ಅವನಿಗೆ ಮದುವೆ ಮಾಡಿಸಿದ್ದರು. ಆದರೂ.. ಅವರಿಗೆ ತಮ್ಮ ವಂಶ ಬೆಳೆಯುವ ಆಸೆ. ತಮ್ಮ ಆಸ್ತಿಪಾಸ್ತಿ ಗೆಲ್ಲ ತಮ್ಮ ಸೊಸೆಯ ಹೊಟ್ಟೆಯಲ್ಲಿ ಹುಟ್ಟುವ ಮಗುವೇ ವಾರಸುದಾರ ಎನ್ನುವ ನಿರ್ಧಾರ ಮಾಡಿಕೊಂಡಿದ್ದರು. ನೋಡುವವರ ಕಣ್ಣಿಗೆ ಇದು ನಂಜುಂಡನ ಮಗುವಾದರೂ ಅದು ಪ್ರಕಾಶನಿಂದ ಆಗುವ ಕೆಲಸವಾಗಿತ್ತು. ಅದಕ್ಕಾಗಿ ಉಪಾಯವಾಗಿ ಪ್ರಕಾಶನನ್ನು ಅಂಜನಾಳಿಗೆ ಹತ್ತಿರವಾಗುವಂತೆ ಮಾಡಿದರು. ಪ್ರಕಾಶನೂ ಅಕ್ಕನಿಂದ ಹಿಂದೆ ಸಹಾಯ ಪಡೆದಿದ್ದರಿಂದ ಅವನೂ ಇದನ್ನು ಧಿಕ್ಕರಿಸಲು ಅಶಕ್ತ.


ಎಷ್ಟಾದರೂ.. ಅಂಜನ ಈ ಕಾಲದ ಹೆಣ್ಣು. ಅಷ್ಟೇ ಅಲ್ಲದೆ, ಅವಳ ಮನಸ್ಸು ಈ ರೀತಿಯ ಕಳ್ಳ ಸಂಬಂಧಗಳಿಗೆ ಒಪ್ಪುವುದು ಸರಿಯಲ್ಲ ಎಂದೇ ಹೇಳುತ್ತಿತ್ತು. ಹಾಗಾಗಿ, ನಂಜುಂಡನಿಂದ ತನಗೆ ಮಕ್ಕಳಾಗದಿದ್ದರೂ.. ತಾನು ಅವನನ್ನು ಮೊದಲಿನಷ್ಟೇ ಪ್ರೀತಿಸುತ್ತೇನೆ ಎನ್ನುವ ನಿರ್ಧಾರಕ್ಕೆ ಬಂದಿದ್ದಳು. ಆದರೆ, ಅವಳ ಅತ್ತೆ ಮಾವ ತಮಗೆ ವಾರಸುದಾರ ಬೇಕೇ ಬೇಕು ಎನ್ನುವ ಆಸೆಯಿಂದ ಇದಕ್ಕೆ ಕಿವುಡಾಗಿದ್ದರು. ದತ್ತು ಮಗು ಯಾವತ್ತಿಗೂ ತಮ್ಮ ಮೊಮ್ಮಗು ಆಗುವುದಿಲ್ಲ ಎನ್ನುವ ಅವರ ನಿರ್ಧಾರಕ್ಕೆ ಅಂಜನ ಸೋತು ಸುಣ್ಣವಾದಳು. ಅಂಜನ ಪ್ರಕಾಶನ ಜೊತೆ ಸೇರಲು ಒಪ್ಪದಿದ್ದಾಗ ಅವರು ಬಲವಂತವಾಗಿಯಾದರೂ ಇದನ್ನು ಸಾಧಿಸುವ ಪ್ರಯತ್ನ ಮಾಡಿದರು. ಆದರೆ, ನಂಜುಂಡನಿಗೆ ಇದೆಲ್ಲವನ್ನು ಸಹಿಸಲಾಗಲಿಲ್ಲ. ಅವಳ ಸ್ಥಿತಿಗೆ ಮರುಗಿ ಅಂಜನಳನ್ನು ತನ್ನ ಮನೆಯಿಂದ ಉಪಾಯವಾಗಿ ಅಪ್ಪ-ಅಮ್ಮನ ಬಿಗಿ ಹಿಡಿತದಿಂದ ಪಾರು ಮಾಡಿದ. ಇದಕ್ಕೆ ದೇವಕಿ ಹಾಗೂ ವರದಪ್ಪಗೌಡರು ಕೂಡಾ ಸಹಾಯ ಮಾಡಿದರು. 


ಅಂಜನ ಅಮ್ಮನ ಮನೆ ಸೇರಿದಳು. ತಮ್ಮ ರಹಸ್ಯ ಬಯಲಾಗುವುದೆಂದು ಹೆದರಿ ಅವಳ ಅತ್ತೆ-ಮಾವ ಅವಳನ್ನು ಉಪಾಯವಾಗಿ ಕರೆದೊಯ್ಯಲು ಬಂದರು. ಅವಳು ಅಲ್ಲಿಂದ ಹೋಗಲು ಒಪ್ಪಲಿಲ್ಲ. ಅವರ ಭೀಷಣ ಕೃತ್ಯಕ್ಕೆ ಬೆದರಿದ್ದಳು. ಅವಳು ಅವರ ಗುಟ್ಟನ್ನು ತಾನು ಎಲ್ಲಿಯೂ ರಟ್ಟು ಮಾಡುವುದಿಲ್ಲ ಎನ್ನುವ ಮಾತು ನೀಡಿ ನಂಜುಂಡನಿಂದ ವಿಚ್ಛೇದನ ಪಡೆದಳು. 


ವಿಚ್ಛೇದನಕ್ಕೆ ಕಾರಣವನ್ನೂ ನೀಡದೆ, ತನ್ನ ಮೇಲೆಯೇ ಆಪಾದನೆ ಹೊತ್ತುಕೊಂಡ ಅವಳನ್ನು ಸಮಾಜವೇಕೆ, ಮನೆಯವರೇ ಮೊದಲಿಗೆ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ವಿಚ್ಛೇದನ ಪಡೆದ ಹೆಣ್ಣಿನ ಬದುಕು ಅಷ್ಟು ಸರಾಗವೇ..?? ಏನೇ ಹಣ ಸಂಪಾದನೆ ಮಾಡುತ್ತಿದ್ದರೂ ಸಹಾ.... ಒಂದು ಗಂಡಿನ ಆಸರೆ ಇಲ್ಲದ ಅವಳ ಜೀವನದ ಮುಂದಿನ ಗತಿ ಏನು..?? ನಂಜುಂಡನಿಗೇನೋ ಸುಲಭವಾಗಿ ಮತ್ತೊಂದು ವಿವಾಹವೂ ಆಯಿತು. ಆದರ, ಅಂಜನಳ ಬದುಕು ಅಷ್ಟು ಸುಲಭವಿತ್ತೇ..?? ಅಂಜನಾಳ ಬದುಕಿನ ದಿಕ್ಕು ಬದಲಾಗಿದ್ದರಲ್ಲಿ ದೇವಕಿಯ ಜೊತೆಗೆ ಆಕೆಯ ಅಕ್ಕನ ಮಗನಾದ ಹರಿಶ್ಚಂದ್ರ ಕೂಡ ಅಷ್ಟೇ ಕಾರಣನು. ಹರಿಶ್ಚಂದ್ರ ಅವಳಿಗೆ ಮಾಡಿದ ಸಹಾಯವೇನು..?? ಅವಳ ಬದುಕಲ್ಲಿ ಆತನ ಪಾತ್ರವೇನು..??

ಈ ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಅಂಜನ ಕಾದಂಬರಿಯನ್ನು.


ಅಂಜನ ಇಲ್ಲಿ ಕೇವಲ ದಿಟ್ಟ ಹೆಣ್ಣು ಮಾತ್ರವಲ್ಲ.. ಹೆಣ್ತನದ ಪಾವಿತ್ರ್ಯತೆಯನ್ನು ಸಾಬೀತು ಮಾಡುತ್ತಾ.. ಜೀವನದ ಮೌಲ್ಯಗಳನ್ನು ಉಳಿಸಿಕೊಂಡು, ಜೊತೆಗೆ ಗಟ್ಟಿತನವನ್ನೂ ತೋರಿಸುವ ಧೀಮಂತ ಪಾತ್ರ. ನಂಜುಂಡನದು ಅಸಹಾಯಕ ಪಾತ್ರವಾದರೂ.. ಆತನ ನಡೆ ಮೆಚ್ಚುವಂತಹದ್ದೇ.. ಆದರೆ, ತಂದೆ-ತಾಯಿಯ ನಿಲುವನ್ನು  ಆತ ಧಿಕ್ಕರಿಸಿದ್ದಿದ್ದರೆ ಕಥೆಯ ದಿಕ್ಕೇ ಬದಲಾಗುತ್ತಿತ್ತಲ್ಲವಾ.. ಎಂದೂ ಅನ್ನಿಸುತ್ತದೆ. ಇಂತಹ ಅಗ್ನಿದಿವ್ಯವನ್ನು ಹಾಯಲು ಹೊರಡುವ ಎಷ್ಟೋ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಕಥೆಯಾಗಬಲ್ಲದು ಈ ಕಾದಂಬರಿ. ಸೂಕ್ಷ್ಮ ಒಳನೋಟ, ಹೆಣ್ಣಿನ ಮನಸ್ಸಿನ ತುಮುಲಗಳನ್ನು ಬಿಚ್ಚಿಡುತ್ತಾ ಸರಾಗವಾಗಿ ಓದಿಸಿಕೊಂಡು ಹೋಗುತ್ತಾ.. ಆತ್ಮವಿಶ್ವಾಸವನ್ನು ತುಂಬುವಂತಿದೆ ಈ ಕಾದಂಬರಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ