ಪುಸ್ತಕದ ಶೀರ್ಷಿಕೆ : ಶುಭಮಂಗಳ
ಲೇಖಕರು : ವಾಣಿ
ಪ್ರಕಾಶಕರು :ಡಿ.ವಿ.ಕೆ ಮೂರ್ತಿ ಪ್ರಕಾಶನ
ಮೊದಲನೇ ಮುದ್ರಣ : 1962
ಏಳನೆಯ ಮುದ್ರಣ : 2023 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 208
ಬೆಲೆ : 180 ರೂ.
ವಾಣಿಯವರ 'ಶುಭಮಂಗಳ' ಎಂಬ ಕಾದಂಬರಿಯನ್ನು ಆಧರಿಸಿ ಚಲನಚಿತ್ರ ಕೂಡ ಬಂದಿದೆ. ಆದರೆ, ನಾನಿಲ್ಲಿ ಅದರ ಉಲ್ಲೇಖವನ್ನು ಮಾಡದೆ ಕೇವಲ ಕಾದಂಬರಿಯ ಕುರಿತಾಗಿ ಮಾತ್ರ ಹೇಳುತ್ತಾ ಹೋಗುತ್ತೇನೆ.
ಕಾದಂಬರಿಯ ಶೀರ್ಷಿಕೆಯನ್ನು ನೋಡಿದಾಗ ಇದು ದುರಂತದ ಅಂತ್ಯವಿರುವ ಕಾದಂಬರಿಯಲ್ಲ..ಸುಖಾಂತ್ಯದ ಕಥೆಯೇ ಎನಿಸಿದರೂ.. ಇಲ್ಲಿ ಈ ಕಥೆ ಕೇವಲ ಸುಖದ ಹಾದಿಯಲ್ಲಿ ನಡೆದದ್ದೇನಲ್ಲ. ಸುಖ-ದುಃಖಗಳ ನಡುವೆ ತೇಲುತ್ತಾ, ಮುಳುಗುತ್ತಾ ಕೊನೆಗೆ ಏನಾಗುತ್ತದೆ ಎಂಬ ಕುತೂಹಲವನ್ನು ಮೂಡಿಸಿಕೊಂಡು ಸರಾಗವಾಗಿ ಓದಿಸಿಕೊಂಡು ಹೋಗುವ ಕಾದಂಬರಿ.
ಶ್ರೀನಿವಾಸಯ್ಯ ಹಾಗೂ ಹಾಗೂ ಸೀತಮ್ಮನವರ ಏಕೈಕ ಸಂತಾನವೇ ಹೇಮಾ. ತಂದೆಗೆ ಮಗಳ ಮೇಲೆ ಅಪರಿಮಿತ ಪ್ರೀತಿ. ಅವರ ಜೀವನದ ಬೆಳಕು ಅವಳು. ಮನೆ ಮನಗಳೆರಡನ್ನು ತುಂಬಿರುವ ಏಕೈಕ ಆಧಾರಸ್ತಂಭ. ಸೀತಮ್ಮನವರು ಶ್ರೀನಿವಾಸರಾಯರ ಕೈಹಿಡಿದು ಮನೆಯನ್ನು ತುಂಬಿದ್ದರೂ ಮನಸ್ಸಿಗೆ ಬರಲು ಅವರಿಗೆ ಅವಕಾಶವನ್ನೇ ನೀಡಿರಲಿಲ್ಲ ಶ್ರೀನಿವಾಸಯ್ಯ. ಇದಕ್ಕೆ ಒಂದು ಕಾರಣವೂ ಇದ್ದಿತು.
ಶ್ರೀನಿವಾಸಯ್ಯನವರು ಮೊದಲು ಸಿರಿವಂತರೇನಾಗಿರಲಿಲ್ಲ.. ಮೊದಲು ಅವರಿಗೆ ನಿಶ್ಚಯವಾಗಿದ್ದ ಹುಡುಗಿಯನ್ನು ಮಾಧವರಾಯರು ಮದುವೆಯಾದರು. ಮಾಧವರಾಯರ ಶ್ರೀಮಂತಿಕೆಯೂ ಇದಕ್ಕೆ ಕಾರಣ. ಈ ಮಾಧವ ರಾಯರ ತಂಗಿಯ ಮಗಳೇ ಸೀತಮ್ಮ. ತಂದೆ-ತಾಯಿ ಇಲ್ಲದೆ ಮಾವನ ಆಶ್ರಯದಲ್ಲಿಯೇ ಬೆಳೆದಿದ್ದಳು ಸೀತಮ್ಮ. ಮಾಧವರಾಯರ ಮೇಲೆ ಸೇಡು ತೀರಿಸಿಕೊಳ್ಳಲು ಈಕೆಯನ್ನು ಮದುವೆಯಾಗಿ ಹಿಂಸಿಸಬೇಕು ಎಂದು ಸೀತಮ್ಮನನ್ನು ಮದುವೆಯಾದರು. ಆದರೆ, ಮೂಕ ಪ್ರಾಣಿಯಂತಹಾ.. ಮುಗ್ಧ ಸೀತಮ್ಮನ ಮೇಲೆ ದರ್ಪ ತೋರಿದರೆ ತಮ್ಮ ಪುರುಷತ್ವಕ್ಕೆ ಅವಮಾನ ಎಂದೆನಿಸಿ ಆಕೆಯನ್ನು ಕೇವಲ ಮನೆಯ ಒಬ್ಬ ಸದಸ್ಯರಂತೆ ಮಾತ್ರ ಭಾವಿಸಿದ್ದರು. ಆದರೆ, ಇದಾವುದನ್ನೂ ಮನಸ್ಸಿಗೆ ತೆಗೆದುಕೊಳ್ಳದೆ ಆಕೆ ಮನೆಯ ಒಳಿತಿಗಾಗಿ ಶ್ರಮಿಸುತ್ತಾ ಮನೆಯ ಎಲ್ಲಾ ಕೆಲಸಗಳ ಭಾರವನ್ನು ಹೊತ್ತು ಮನೆಯನ್ನು ಸರಾಗವಾಗಿ ನಡೆಸುತ್ತಾ ಹೋಗುತ್ತಿದ್ದರು. ಆದರೆ, ಹೇಮಾ ಹುಟ್ಟಿದ ಮೇಲೆ ಶ್ರೀನಿವಾಸಯ್ಯನವರ ನಡತೆಯಲ್ಲಿ ದೊಡ್ಡ ಬದಲಾವಣೆ ಬಂದಿತ್ತು ಹೇಮಾ ಎಂದರೆ ಅವರ ಪ್ರಾಣ ಎಂಬಂತೆ ಅವರ ಏಕೈಕ ಪುತ್ರಿಯನ್ನು ಎಲ್ಲಾ ಸೌಲಭ್ಯಗಳನ್ನು ನೀಡಿ ಬೆಳೆಸಿದ್ದರು.
ಅವಳು ಕೇಳದೆಯೂ ಆಟದ ಸಾಮಾನು ಮನೆ ತುಂಬಾ ತುಂಬುತ್ತಿದ್ದವು. ಅವಳು ಕೇಳದೆಯೂ ತಿಂಡಿ ತಿನಿಸುಗಳು ಮನೆಗೆ ಬರುತ್ತಿದ್ದವು. ಮಕ್ಕಳನ್ನು ಸಾಕುವ ಕುರಿತು ಹಾಗೂ ಅವರ ಎಳೆಯ ಮನಸ್ಸನ್ನು ಸರಿಯಾಗಿ ರೂಪಿಸುವುದಕ್ಕೆ ಹಲವಾರು ಮನಃಶಾಸ್ತ್ರದ ಪುಸ್ತಕಗಳನ್ನು ಓದಿದ್ದರು. ಹೇಮಾ ಮಗು ಸಹಜ ಕುತೂಹಲದಿಂದ ಒಂದು ಪ್ರಶ್ನೆ ಕೇಳಿದರೆ, ಅದಕ್ಕೆ ತಕ್ಷಣ ಅರ್ಥವಾಗುವಂತೆ ಸರಳವಾದ ಉತ್ತರ ಕೊಡುವ ಬದಲು ಬೀರುವಿನಿಂದ ದೊಡ್ಡ ದೊಡ್ಡ ಪುಸ್ತಕಗಳನ್ನು ತೆಗೆದು ಆ ಪ್ರಶ್ನೆಗೆ ಏನು ಉತ್ತರ ಕೊಡಬಹುದೆಂದು ಯೋಚಿಸುತ್ತಿದ್ದರು ಶ್ರೀನಿವಾಸಯ್ಯ. ಅದಕ್ಕೆ ಉತ್ತರ ಹುಡುಕಿ ಹೇಳುವ ಮುನ್ನವೇ ಹೇಮಾ ಅದನ್ನು ಮರೆತು ಹೊಸ ಪ್ರಶ್ನೆಯೊಂದನ್ನು ಹುಡುಕಿರುತ್ತಿದ್ದಳು.
ಮಗಳಿಗೆ ಯಾವ ಕಷ್ಟದ ಅರಿವೂ ಇರದಂತೆ ಬೆಳೆಸಿದ್ದರು. ಆಕೆಗೆ ಸಂಗೀತ ಕಲಿಸಿ, ನೃತ್ಯಾಭ್ಯಾಸ ಮಾಡಿಸಿ ಗಂಡು ಮಕ್ಕಳಂತೆಯೇ ಅವಳು ಕೇಳಿದ್ದನ್ನೆಲ್ಲ ತಂದು ಕೊಡುತ್ತಾ ಯಾವುದಕ್ಕೂ ತಡೆಯೊಡ್ಡದೆ ಗಂಡು ಮಕ್ಕಳಂತೆಯೇ ಪೋಷಿಸುತ್ತಿದ್ದರು. ಅಮ್ಮನ ದೃಷ್ಟಿಯಲ್ಲಿ ಕೂಡ ಅವಳು ಗಂಡುಭೀರಿಯಂತೆಯೇ.. ಪ್ರತಿದಿನವೂ ವ್ಯಾಯಾಮ ಮಾಡಿಸುತ್ತಾ, ಆಕೆಯ ದೇಹ ಸ್ಥಿತಿ ಆರೋಗ್ಯವಾಗಿರುವಂತೆ ನೋಡಿಕೊಂಡಿದ್ದರು. ಅವಳ ಪ್ರತಿಯೊಂದು ಕೆಲಸವು ಇವರ ಮೇಲ್ವಿಚಾರಣೆಯಲ್ಲಿಯೇ ಅವಳ ಎಲ್ಲಾ ವೇಳಾಪಟ್ಟಿಯನ್ನು ಸಿದ್ದ ಮಾಡಿಟ್ಟಿರುತ್ತಿದ್ದರು. ಆ ಊರಿನಲ್ಲಿ ಇದ್ದದ್ದು ಹೈಸ್ಕೂಲಿನವರೆಗೆ ಮಾತ್ರವೇ.. ಹಾಗಾಗಿ ಹೇಮಾ ಅಲ್ಲಿಯವರೆಗೆ ಮಾತ್ರ ಓದಿದಳು. ಆದರೆ, ನಾಗರಿಕ ಸಮಾಜದಲ್ಲಿ ಬದುಕಬಹುದಾದ ಎಲ್ಲಾ ಬಗೆಯನ್ನು ಶ್ರೀನಿವಾಸಯ್ಯನವರು ಅವಳಿಗೆ ಕಲಿಸಿದ್ದರು.
ತಂದೆ ಇದೆಲ್ಲ ಇಷ್ಟೆಲ್ಲಾ ಒಳ್ಳೆಯದನ್ನು ಕಳಿಸಿದ್ದರೂ.. ಅದಕ್ಕೆ ಕಪ್ಪು ಚುಕ್ಕಿ ಎಂಬಂತೆ ಮಾಧವರಾಯರು ಹಾಗೂ ಅವರಿಗಿದ್ದ ಏಕಮಾತ್ರ ಪುತ್ರ ಪ್ರಭಾಕರನ ಮೇಲೆ ಜಿದ್ದು ಸಾಧಿಸುವುದನ್ನು ತಮಗೇ ತಿಳಿಯದಂತೆ ಮಗಳ ಮನಸ್ಸಿನಲ್ಲಿಯೂ ತುಂಬಿ ಬಿಟ್ಟಿದ್ದರು.
ಹಳ್ಳಿಯಲ್ಲಿ ಶ್ರೀನಿವಾಸರಾಯರ ಮನೆಯ ಮುಂದಿನ ಮನೆ ಮಾಧವರಾಯರದ್ದು. ಅವರ ಹೆಚ್ಚಿನ ಆಸ್ತಿ ಹಳ್ಳಿಯಲ್ಲಿ ಇದ್ದುದರಿಂದ ಅವರು ವರ್ಷಕ್ಕೊಮ್ಮೆ ಬಂದು ಅಲ್ಲಿನ ಕಾರುಭಾರನ್ನು ನೋಡಿಕೊಳ್ಳುತ್ತಿದ್ದರು. ಮಾಧವರಾಯರ ಹೆಂಡತಿ ತೀರಿಹೋಗಿದ್ದರು. ಅವರಿಗಿದ್ದ ಏಕೈಕ ಮಗನಾದ ಪ್ರಭಾಕರನನ್ನು ಚಿಕ್ಕಂದಿನಲ್ಲಿ ಒಮ್ಮೆಕರೆತಂದಿದ್ದರು. ಮರಕೋತಿ ಆಟ ಆಡುವಾಗ ಹೇಮಾಳಿಂದಾಗಿ ಬಿದ್ದು, ಅವನು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ. ಅದಾದ ನಾಲ್ಕು ವರ್ಷದ ನಂತರ ಒಮ್ಮೆ ಬಂದಿದ್ದು ಬಿಟ್ಟರೆ ಮತ್ತೆ ಬಂದಿರಲೇ ಇಲ್ಲ.
ಕಾಲ ಬದಲಾಗಿತ್ತು. ಮಾಧವರಾಯರು ತೀರಿಕೊಂಡಿದ್ದರು. ಪ್ರಭಾಕರ ಈಗ ಬೆಂಗಳೂರಿನಲ್ಲಿ ಲಾಯರ್ ಆಗಿ ಪ್ರಾಕ್ಟೀಸ್ ಮಾಡುತ್ತಿದ್ದ. ಹಳ್ಳಿಯ ಉಸ್ತುವಾರಿಯನ್ನೆಲ್ಲಾ ನೋಡಿಕೊಳ್ಳಲು ಪ್ರಭಾಕರ ಮತ್ತೆ ಹಳ್ಳಿಗೆ ಬರುತ್ತಾನೆ ಎಂದು ಆ ಮನೆಗೆ ಸುಣ್ಣಬಣ್ಣವಾಗುತ್ತಿತ್ತು.ಸೀತಮ್ಮನವರು ತವರಿಗೆ ಹೋಗಿದ್ದೇ ಇಲ್ಲವಾದರೂ ಪ್ರಭಾಕರನಿಗೆ ಅತ್ತೆಯ ಮೇಲೆ ಪ್ರೀತಿ ಇದ್ದೇ ಇತ್ತು.
ಇತ್ತ ಶ್ರೀನಿವಾಸಯ್ಯನವರಿಗೆ ಮಗಳ ಮೇಲಿನ ಅಪರಿಮಿತ ಪ್ರೀತಿ ಎಷ್ಟಿತ್ತು ಎಂದರೆ ಮಗಳಿಗೆ ಮದುವೆ ಮಾಡಿಕೊಟ್ಟರೆ ತಾವು ಇಲ್ಲಿ ಒಂಟಿಯಾಗಿ ಇರಲಾರೆನು ಎಂದು ಅವರಿಗೆ ತಿಳಿದಿತ್ತು. ಹಾಗಾಗಿ, ಅದಕ್ಕೆ ತಮ್ಮ ರೀತಿಯಲ್ಲಿಯೇ ಒಂದು ಉಪಾಯವನ್ನು ಕಂಡುಕೊಂಡಿದ್ದರು. ಒಂದೋ ತಾವು ಹೇಮಾಳಿಗೆ ಮನೆಯಲ್ಲಿ ಇರುವ ಅಳಿಯನನ್ನು ತರಬೇಕಿತ್ತು. ಆದರೆ, ಓದಿರುವ..ಕೆಲಸದಲ್ಲಿರುವ ಹುಡುಗರು ಬಂದು ಹಳ್ಳಿಯ ಕೊಂಪೆಯಲ್ಲಿ ಇರುವುದು ಕಷ್ಟವಿತ್ತು. ಅದಕ್ಕಾಗಿ, ಬೆಂಗಳೂರಿನಲ್ಲಿ ಒಂದು ಸಂಬಂಧವನ್ನು ಹುಡುಕಿದ್ದರು.
ಬೆಂಗಳೂರಿನಲ್ಲಿ ದೊಡ್ಡ ಜವಳಿ ಅಂಗಡಿ ಹಾಗೂ ಸ್ವಂತ ಫ್ಯಾಕ್ಟರಿ ಇಟ್ಟಿದ್ದ ಹೆಸರಾಂತ ವ್ಯಾಪಾರಸ್ಥರಾದ ನೀಲಕಂಠರಾಯರ ಮಗ ಮಹೇಶನಿಗೆ ತಮ್ಮ ಮಗಳನ್ನು ಕೊಡಲು ಇಚ್ಚಿಸಿದ್ದರು. ಐದು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳಿದ್ದ ಅವರ ಮನೆಯಲ್ಲಿ ಎಲ್ಲಾ ಹೆಣ್ಣು ಮಕ್ಕಳಿಗೂ ಮದುವೆಯಾಗಿ ದೊಡ್ಡ ಮಗ ಮಹೇಶನ ಮದುವೆಗೆ ವಧು ಹುಡುಕುತ್ತಿದ್ದರು. ಇನ್ನೂ.. ಈ ವಿಚಾರವನ್ನು ಮನೆಯಲ್ಲಿ ಹೇಳಿರಲಿಲ್ಲ. ಏಕೆಂದರೆ, ಶ್ರೀನಿವಾಸಯ್ಯನವರೇ ಇನ್ನೂ ಸ್ವತಃ ಅವರನ್ನು ನೋಡಿರಲಿಲ್ಲ. ಆತ ಹೆಚ್ಚಿನ ವ್ಯಾಸಂಗ ಎಂದು ಜಪಾನಿಗೆ ಹೋಗಿದ್ದ. ನೀಲಕಂಠರಾಯರು ಹಾಗೂ ಶ್ರೀನಿವಾಸಯ್ಯನವರ ಹಣಕಾಸಿನ, ಅಂತಸ್ತಿನ ವಿಚಾರವೂ ಕೂಡಿಬಂದಿತ್ತು.
ಅವರ ಮನೆಯ ಮಗ್ಗುಲಲ್ಲಿ ಇದ್ದ ಮತ್ತೊಂದು ಮನೆಯನ್ನು ತಾವು ಕೊಂಡು, ಅದರ ಅರ್ಧವನ್ನು ಬಾಡಿಗೆಗೆ ಕೊಟ್ಟು, ಮಗಳ ಮದುವೆಯ ನಂತರ ತಾವು ಅಲ್ಲಿಗೆ ಹೋಗುವುದೆಂದು ತೀರ್ಮಾನಿಸಿದ್ದರು, ಇದಕ್ಕಾಗಿ ಊರಿನಲ್ಲಿ ಈಗ ತಾವು ಈಗ ಇದ್ದ ಮನೆ, ಹೊಲ, ತೋಟ ಹಾಗೂ ಎಲ್ಲಾ ಆಸ್ತಿಪಾಸ್ತಿಗಳನ್ನೂ ಮಾರಿ ಬಡ್ಡಿ ಗೋವಿಂದರಾಯರ ಬಳಿ ತಮ್ಮ ದುಡ್ಡನ್ನು ಇಟ್ಟಿದ್ದರು. 30% ಬಡ್ಡಿ ಬರುತ್ತದೆ ಎಂಬುದೇ ಇದಕ್ಕೆ ಕಾರಣ. ಎಂದು ಹೆಂಡತಿ ಹಾಗೂ ಮಗಳಿಗೂ ಈ ವಿಚಾರ ತಿಳಿಸದೆ, ಅವರು ಎಲ್ಲವನ್ನೂ ಮಾರಿ ಪಟ್ಟಣ ಸೇರಲು ಗಟ್ಟಿ ಮನಸ್ಸು ಮಾಡಿ ಆಗಿತ್ತು. ಇದನ್ನೆಲ್ಲಾ ತನ್ನ ಆಪ್ತಮಿತ್ರ ನರಹರಿ ಬಂದಾಗ ಅವರ ಬಳಿ ಚರ್ಚಿಸಿದರು.
ನರಹರಿಗೆ ವಿಷಯ ತಿಳಿದು ಆಘಾತವಾಗಿ ಮೊದಲು ಆ ಹಣವನ್ನು ಹಿಂದಕ್ಕೆ ಪಡೆ ಎಂದು ಸ್ನೇಹಿತನಿಗೆ ಒತ್ತಾಯ ಮಾಡಿದರು. ಸ್ನೇಹಿತನ ಒತ್ತಾಯಕ್ಕೆ ಮಣಿದು ನಾಳೆಯೇ ಹೋಗೋಣವೆಂದು ತೀರ್ಮಾನಿಸಿದ್ದರು. ಆದರೆ, ಅಷ್ಟರಲ್ಲೇ ನಡೆದು ಹೋಗಿತ್ತು ಅನರ್ಥ. ನರಹರಿ ಯಾವುದು ಆಗಬಾರದು ಎಂದುಕೊಂಡಿದ್ದರೋ.. ಅದೇ ಆಗಿಹೋಗಿತ್ತು. ಬ್ಯಾಂಕರ್ ಆಗಿದ್ದ ಬಡ್ಡಿ ಗೋವಿಂದರಾಯರು ದಿವಾಳಿಯಾಗಿದ್ದರು. ಈ ಸುದ್ದಿಯನ್ನು ಓದಿದ ಶ್ರೀನಿವಾಸಯ್ಯನವರಿಗೆ ಹೃದಯ ಸ್ತಂಭನವಾಗಿತ್ತು.
ಈಗ ತಾಯಿ ಮಗಳ ಮುಂದಿನ ಹಾದಿ ಕಠಿಣವೇ ಇದ್ದಿತು. ನರಹರಿಯವರಿಗೆ ಈ ಎಲ್ಲ ವಿಚಾರವೂ ಗೊತ್ತಿದ್ದು ಈ ಸಮಯದಲ್ಲಿ ಅವರಿಗೆ ನೆರವಾಗಿ ನಿಲ್ಲುವವನು ಪ್ರಭಾಕರನೊಬ್ಬನೇ ಎಂಬ ಅರಿವಿದ್ದಿತು. ಆದರೆ, ಪ್ರಭಾಕರ ಇದಕ್ಕೆ ಒಪ್ಪುತ್ತಾನಾ..?? ಎಂಬ ಅವರ ಸಂದೇಹ ಸುಳ್ಳಾಗಿತ್ತು. ಆತನೇ ಶ್ರೀನಿವಾಸಯ್ಯನವರ ಅಂತ್ಯಸಂಸ್ಕಾರಕ್ಕೆ ಹಣ ನೀಡಿ ಅವರ ಅಂತಿಮ ಯಾತ್ರೆಗೆ ನೆರವಾದನು. ತನಗೂ ಮನೆಯಲ್ಲಿ ಹಿರಿಯರು ಯಾರು ಇಲ್ಲದ್ದರಿಂದ..ಜೊತೆಗೆ ವಾವೆಯಲ್ಲಿ ಸೀತಮ್ಮ ಅತ್ತೆಯು ಆಗಬೇಕಾದ್ದರಿಂದ ಅವರನ್ನು ಹಾಗೂ ಹೇಮಾಳನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂಬ ಆಹ್ವಾನ ನೀಡಿ ನಾಜೂಕಾಗಿಯೇ ಸಂದರ್ಭವನ್ನು ತಿಳಿಗೊಳಿಸುತ್ತಾನೆ.
ಸಹೃದಯಿ, ಮೃದು ಮನಸ್ಸಿನ ಪ್ರಭಾಕರ ಅತ್ತೆಯನ್ನು ಒಪ್ಪಿಸಲು ಸಫಲನಾದ. ಆದರೆ, ಹೇಮಾ ಇದಕ್ಕೆ ಒಪ್ಪುತ್ತಾಳಾ ? ಎಂಬ ಪ್ರಶ್ನೆ ಇತ್ತು. ಆದರೆ ಹೆಚ್ಚು ಹೇಳಿಸಿಕೊಳ್ಳದೆ ಹೇಮಾ ಕೂಡ ಅವನ ಮನೆಗೆ ಹೊರಟದ್ದು ಅಚ್ಚರಿಯೇ.. ಆದರೆ, ಅವಳದ್ದೊಂದು ಶರತ್ತು ಇತ್ತು.
ಆ ಶರತ್ತು ಏನು ? ಪ್ರಭಾಕರನಿಗೆ ಆ ಶರತ್ತಿನ ಬಗ್ಗೆ ನರಹರಿ ಹೇಳುತ್ತಾರಾ ? ಅದಕ್ಕೆ ಪ್ರಭಾಕರ ಒಪ್ಪುತ್ತಾನಾ..?? ಹಠಮಾರಿಯಾಗಿ ತನ್ನಿಷ್ಟದಂತೆಯೇ ಬೇಕಾದ್ದನ್ನು ಮಾಡಿಕೊಂಡು, ಎಲ್ಲರ ಮೇಲೆ ರೇಗಾಡುತ್ತಾ ಬೆಳೆದಿದ್ದ ಹೇಮಾ.. ಪ್ರಭಾಕರನ ಮನೆಯಲ್ಲಿ ಎಲ್ಲವನ್ನು ಸೈರಿಸಿಕೊಂಡು ಇರುತ್ತಾಳಾ ಅಥವಾ ಅವಳ ಸ್ವಾಭಿಮಾನಕ್ಕೆ ಪೆಟ್ಟಾಗುತ್ತದಾ ? ಪ್ರಭಾಕರನಿಗೂ ಶ್ರೀನಿವಾಸಯ್ಯನಂತೆ ಸೇಡು ತೀರಿಸಿಕೊಳ್ಳುವ ಯಾವುದಾದರೂ ಹುನ್ನಾರವಿತ್ತೇ..?? ಬಡ್ಡಿ ಗೋವಿಂದಯ್ಯನವರಿಂದ ಬರಬೇಕಾದ ಹಣ ದೊರೆಯಿತೇ ? ಹೇಮಳಿಗೆ ವಿವಾಹವಾಯಿತೇ ? ನೀಲಕಂಠರಾಯರ ಮನೆಯ ಮದುವೆಯ ಪ್ರಸ್ತಾಪ ಏನಾಯಿತು ? ಈ ಎಲ್ಲದಕ್ಕೂ ಉತ್ತರವಾಗಿ ಈ ಕಾದಂಬರಿ ಓದಿ.
ಈ ಕಾದಂಬರಿಯಲ್ಲಿ ಹೇಮಾಳ ಸ್ವಾಭಿಮಾನ, ಸೀತಮ್ಮನವರ ದೊಡ್ಡಗುಣ, ಪ್ರಭಾಕರನ ಸಹೃದಯತೆ, ನರಹರಿಯ ಆಪ್ತತೆ, ಶ್ರೀನಿವಾಸಯ್ಯನವರ ಅಪರಿಮಿತ ಪ್ರೀತಿ ಎಲ್ಲವೂ ಕಾದಂಬರಿಯ ಓದನ್ನು ಮತ್ತಷ್ಟು ಭಾವುಕವನ್ನಾಗಿ ಮಾಡುತ್ತವೆ. ಕೆಟ್ಟದ್ದರ ನಡುವೆಯೂ... ಒಳ್ಳೆಯತನವೇ ಶ್ರೀರಕ್ಷೆಯಾಗಿ ಕಾಪಾಡುವ ಗುಣ ಕಾದಂಬರಿಯ ಓದನ್ನು ಮತ್ತಷ್ಟು ಆಪ್ತವಾಗಿಸಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ