ಪುಸ್ತಕದ ಶೀರ್ಷಿಕೆ : ಎರಡು ಕನಸು
ಲೇಖಕರು : ವಾಣಿ
ಪ್ರಕಾಶಕರು :ಡಿ.ವಿ.ಕೆ ಮೂರ್ತಿ ಪ್ರಕಾಶನ
ಮೊದಲನೇ ಮುದ್ರಣ : 1960
ಒಂಬತ್ತನೇ ಮುದ್ರಣ : 2023 ( ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 179
ಬೆಲೆ : 160 ರೂ.
ಚಲನಚಿತ್ರ : ಎರಡು ಕನಸುನಿರ್ದೇಶಕರು : ದೊರೆ - ಭಗವಾನ್
ತಾರಾಗಣ : ಡಾ|| ರಾಜ್ ಕುಮಾರ್, ಕಲ್ಪನಾ, ಮಂಜುಳ, ರಾಮಗೋಪಾಲ್, ಕೆ.ಎಸ್.ಅಶ್ವಥ್, ಪಂಡರೀ ಬಾಯಿ, ಅದವಾನಿ ಲಕ್ಷ್ಮೀದೇವಿ ಮುಂತಾದವರು
ವಾಣಿಯವರ ಎರಡು ಕನಸು ಎನ್ನುವ ಕಾದಂಬರಿಯು ಅದೇ ಹೆಸರಿನ ಚಲನಚಿತ್ರವಾಗಿದೆ. ಎರಡು ಕನಸು ಕಾದಂಬರಿ ಹಾಗೂ ಚಲನಚಿತ್ರಕ್ಕೂ ಅಂತಹ ಹೆಚ್ಚಿನ ವ್ಯತ್ಯಾಸವಿಲ್ಲ. ನನಗೆ ವ್ಯತ್ಯಾಸ ಎನಿಸಿದ್ದು ಕೇವಲ ಅಂತ್ಯದಲ್ಲಿ ಮಾತ್ರವೇ.. ಪಾತ್ರಗಳಲ್ಲಿ ಹಾಗೂ ಅವುಗಳ ಗುಣ ಸ್ವಭಾವಗಳಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ.. ವೃತ್ತಿಯ ಬದಲಾವಣೆಯಷ್ಟೇ ಸಿನಿಮಾದಲ್ಲಿ ಕಾಣುವ ಅಂಶ. ಮೊದಲಿಗೆ ಕಾದಂಬರಿಯ ಪುಟ್ಟ ಪರಿಚಯ ಮಾಡಿಬಿಡುತ್ತೇನೆ.
ಮೊದಲು ಗೌರಿಯ ಕಾಲೇಜಿನ ಒಂದು ಚಿತ್ರಣವಿದೆ. ಆ ಸಂದರ್ಭದಲ್ಲಿ ಗೌರಿ ಯಶೋಧರೆಯ ಪ್ರೇಮದ ವಿಚಾರವಾಗಿ ಒಂದು ಪ್ರಬಂಧ ಬರೆಯುತ್ತಾಳೆ. ಅದರಲ್ಲಿ "ತಾನು ಒಲಿದವನು ವಿಮುಖನಾದರೂ ಪ್ರೇಮ ಅಳಿಯುವುದಿಲ್ಲ. ಅದೇ ಅವಳ ಉಸಿರು. ಅವನನ್ನು ಪ್ರೀತಿಸುವುದರಲ್ಲಿ ಅವಳ ಸುಖ ಶಾಂತಿ ಇರುತ್ತದೆ. ಗೌತಮನು ತಪಸ್ಸಿನಿಂದ ಹೊರಗೆ ಸಾಧಿಸಿದ್ದನ್ನು, ಅವಳು ಅರಮನೆಯಲ್ಲೇ ತನ್ನ ಪ್ರೀತಿಯಿಂದ ಕಂಡುಕೊಂಡಳು" ಎಂಬ ಟಿಪ್ಪಣಿ ಇರುತ್ತದೆ.
ಸಾಹಿತ್ಯದ ವಿಚಾರ ಬಂದಾಗ ಹೆಚ್ಚಿನವರು ಬರೆಯುವುದು ತಮ್ಮ ಮನಸ್ಸಿನ ಮಾತುಗಳನ್ನು. ಹೆಚ್ಚಿನವರ ಮನಸ್ಥಿತಿ ಅವರ ಬರವಣಿಗೆಯಲ್ಲಿ ಕಂಡುಬರುತ್ತದೆ.ಗೌರಿಯ ಮನಸ್ಥಿತಿ, ಸಹನೆ, ಉದಾತ್ತ ವಿಚಾರಧಾರೆಯನ್ನು ಹಾಗೂ ಪ್ರೇಮದ ಕುರಿತ ಅವಳ ವಿಚಾರವನ್ನು ಈ ವಾಕ್ಯದಿಂದಲೇ ತಿಳಿದುಕೊಳ್ಳಬಹುದು.
ಗೌರಿಯ ಗೆಳತಿಯೊಬ್ಬಳಿಗೆ ವಿವಾಹ ನಿಶ್ಚಯವಾಗಿರುತ್ತದೆ. ಅದಕ್ಕಾಗಿ ಇನ್ನೋರ್ವ ಗೆಳತಿಯೊಬ್ಬಳ ಮನೆಯಲ್ಲಿ ಟೀ ಪಾರ್ಟಿ ಇಟ್ಟುಕೊಂಡಿದ್ದ ಸಮಯದಲ್ಲಿ ಗೌರಿ ಮನೆಯಲ್ಲಿಲ್ಲದಾಗ, ಗೌರಿಯ ಮನೆಗೆ ಸೇತುರಾಮಯ್ಯನವರು ಅವರ ಅಕ್ಕ ಸೀತಮ್ಮ ಹಾಗೂ ಭಾವ ಶಿವರಾಮಯ್ಯನವರ ಜೊತೆ ಬರುತ್ತಾರೆ. ಗೌರಿಯ ತಂದೆಯಾದ ರಾಯರು ಹಾಗೂ ಜಯಮ್ಮನವರು, ಅದನ್ನು ನಿರೀಕ್ಷಿಸಿರಲ್ಲವಾದರೂ.. ಒಳ್ಳೆಯ ಸಂಬಂಧವೆಂದು.. ನೋಡಿಕೊಂಡು ಹೋಗಲಿ ಎಂದು ತಮ್ಮ ಹಾಗೂ ಮಗಳ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಾರೆ.
ಶಿವರಾಮಯ್ಯ ಹಾಗೂ ಸೀತಮ್ಮನವರ ಏಕಮಾತ್ರ ಪುತ್ರನೇ ರಾಮಚಂದ್ರ. ರಾಮು ಆಗ ಇಂಜಿನಿಯರಿಂಗ್ ಮೂರನೇ ವರ್ಷದಲ್ಲಿ ಓದುತ್ತಿದ್ದನೆಂಬುದಷ್ಟೇ ಗೊತ್ತಿದ್ದದ್ದು.ವಧು ಪರೀಕ್ಷೆಗೆ ಬರದೆ ತನ್ನನ್ನು ವರನನ್ನು ಫೋಟೋದಲ್ಲಿ ನೋಡಿಯೇ ಗೌರಿ ಹಾಗೂ ಆಕೆಯ ತಂದೆ ತಾಯಿ ಈ ಮದುವೆಗೆ ಒಪ್ಪುತ್ತಾರೆ. ಇನ್ನು 15 ದಿನಗಳಲ್ಲಿ ವಿವಾಹವೆಂದಾಗ ಗಾಬರಿಯಾದರ.. ರಾಯರು ಈ ಮದುವೆಯನ್ನು ಅದ್ದೂರಿಯಾಗಿಯೇ ಮಾಡುತ್ತಾರೆ.
ರಾಮುವಿನ ಮದುವೆ ಹಾಗೆ 15 ದಿನಕ್ಕೆ ಅರ್ಜೆಂಟ್ ಆಗಿ ನಿಶ್ಚಯವಾಗುವುದಕ್ಕೆ ಬೇರೆಯದ್ದೇ ಕಾರಣವಿರುತ್ತದೆ. ರಾಮುವಿನ ತಂದೆ-ತಾಯಿ ಇದ್ದ ಊರಿನಲ್ಲಿಯೇ ಆತನ ಅಜ್ಜಿಯ ಮನೆಯೂ ಇದ್ದದ್ದು. ರಾಮುವಿನ ಅಮ್ಮನ ಅಣ್ಣನ ಮಗಳು ಅಂದರೆ ಸೋದರ ಮಾವನ ಮಗಳು ಲಲಿತ ಹುಟ್ಟಿದಾಗಲೇ ಅವರಿಬ್ಬರಿಗೂ ಗಂಡ ಹೆಂಡತಿ ಎಂದು ಹಿರಿಯರೆಲ್ಲರೂ ಕರೆಯುತ್ತಾ ಮಕ್ಕಳ ಮನಸ್ಸಿನಲ್ಲಿಯೂ ಅದೇ ವಿಚಾರವನ್ನು ಬಿತ್ತಿರುತ್ತಾರೆ. ಮಕ್ಕಳ ಮನಸ್ಸಿನಲ್ಲಿಯೂ ಅದೆಷ್ಟು ಆಳವಾಗಿ ಕೂತಿರುತ್ತದೆ ಎಂದರೆ ಅವರಿಬ್ಬರೂ ಮಾನಸಿಕವಾಗಿ ವಿವಾಹವಾಗಿರುತ್ತಾರೆ. ಆದರೆ, ಲಲಿತಯ ತಂದೆಗೂ ಹಾಗೂ ರಾಮುವಿನ ತಂದೆಗೂ ನಡೆದ ಜಟಾಪಟಿಯೊಂದು ಕುಟುಂಬ ವೈಷಮ್ಯಕ್ಕೆ ತಿರುಗಿ ಈ ಮದುವೆಯನ್ನೇ ನಿಲ್ಲಿಸುವಂತಾಗಿರುತ್ತದೆ.
ಹಾಗಾಗಿ, ರಾಮುವಿನ ತಂದೆ ಅವರ ಮುಂದೆ ಸೋಲದೆ, ಆದಷ್ಟು ಬೇಗ ರಾಮುವಿಗೆ ಮದುವೆ ಮಾಡಬೇಕೆಂದು ನಿಶ್ಚಯಿಸಿ ಸೀತಮ್ಮನವರ ಅಣ್ಣನಾದ ಸೇತುರಾಮಯ್ಯನವರ ಬಳಿ ಇದನ್ನು ಹೇಳಿರುತ್ತಾರೆ. ಹುಡುಗಿಯ ಮನೆಯವರಿಗೆ ಇದಾವುದೂ ತಿಳಿಯದೇ ತರಾತುರಿಯಲ್ಲಿಯೇ ಮದುವೆ ನಡೆದು ಹೋಗುತ್ತದೆ. ವರನ ಸ್ವಭಾವ ಒಂದು ರೀತಿಯಾಗಿದ್ದರೂ.. ಯಾರಿಗೂ ಅಷ್ಟು ಹಿಡಿಸದಿದ್ದರೂ.. ರಾಮುವಿನ ಹಾಗೂ ಲಲಿತೆಯ ಯಾವ ವಿಚಾರವೂ ಗೊತ್ತಿಲ್ಲದಿದ್ದರಿಂದ ಹುಡುಗನ ಸ್ವಭಾವವೇ ಹಾಗಿರಬಹುದೆಂದು ತೀರ್ಮಾನಿಸುತ್ತಾರೆ.
ಮದುವೆಯಾಗಿ ಕೆಲಸ ಸಿಕ್ಕಿ, ಮನೆ ಮಾಡಿದ ನಂತರವೂ ಗೌರಿಯನ್ನು ರಾಮು ಹಾಗೂ ಆತನ ತಂದೆ ತಾಯಿಗಳು ಕರೆಸಿಕೊಳ್ಳದರಿಂದ ಸ್ವತಃ ಗೌರಿಯ ತಂದೆಯೇ ಆಕೆಯನ್ನು ಕರೆದುಕೊಂಡು ಹೋಗಿ ಬಿಟ್ಟು ಬರುತ್ತಾರೆ. ಅಲ್ಲಿಂದ ಶುರುವಾಗುತ್ತದೆ ಅವಳ ವೈವಾಹಿಕ ಬದುಕು. ಲಲಿತೆಯನ್ನು ತನ್ನ ಜೊತೆ ವಿವಾಹ ಮಾಡದ್ದಕ್ಕಾಗಿ ತಂದೆಯ ಮೇಲೆ ಜಿದ್ದು ಸಾಧಿಸುತ್ತಾ.. ಅದನ್ನೇ ಗೌರಿಯ ಮೇಲೆಯೂ ಪ್ರಯೋಗಿಸುವ ರಾಮು ಗೌರಿಯನ್ನು ದೂರದಲ್ಲಿಡುತ್ತಾನೆ. ಇದನ್ನು ಕಂಡು ಬೇಸರವಾಗಿ ರಾಮುವಿನ ತಂದೆ-ತಾಯಿ ಊರಿಗೆ ಹೊರಟ ಮೇಲೆ ಇವರಿಬ್ಬರೂ ಸರಿಯಾಗಬಹುದೆಂಬ ಆಶಯವಿದ್ದರೂ.. ಅವರ ಸಂಬಂಧ ಅದೇ ಸ್ಥಿತಿಯಲ್ಲಿರುತ್ತದೆ. ರಾಮುವಿಗೆ ಪದೇ ಪದೇ ಲಲಿತೆಯ ನೆನಪಾಗುತ್ತಿರುತ್ತದೆ. ಮೇಲಿಂದ ಮೇಲೆ ನೆನಪುಗಳ ದಾಳಿ. ಹಾಗಾಗಿ, ಎಷ್ಟೇ ಪ್ರಯತ್ನಿಸಿದರೂ ಆತನಿಗೆ ಗೌರಿಯ ಹತ್ತಿರವಾಗಲು ಸಾಧ್ಯವೇ ಆಗುವುದಿಲ್ಲ. ಆತನಿಗೆ ಗೌರಿಯ ಸಹನೆ ,ಪ್ರೀತಿ, ತಾಳ್ಮೆ, ತ್ಯಾಗ ಎಲ್ಲದರ ಅರಿವಾದರೂ ಆಕೆಗೆ ಸನಿಹವಾಗಲು ಯತ್ನಿಸಿದಾಗಲೆಲ್ಲಾ ಲಲಿತೆಯ ನೆನಪುಗಳಿಂದಲೇ ಆತ ಆಕೆಯಿಂದ ದೂರ ಸರಿಯುತ್ತಿರುತ್ತಾನೆ. ಆತನ ಮೌನ ಗೌರಿಗೆ ನಿರ್ಲಿಪ್ತತೆಯನ್ನು ಮಾತ್ರ ತೋರಿಸಿರುವುದರಿಂದ, ಅವನಲ್ಲಿ ಮೂಡಿದ ಹೊಸ ಭಾವವಾದ ನಿರ್ಮಲ ಪ್ರೀತಿ ಕಾಣಿಸುವುದೇ ಇಲ್ಲ.
ತನ್ನ ವಿವಾಹವಾದ ನಂತರ ಲಲಿತೆಯ ಪರಿಸ್ಥಿತಿ ಹೇಗಿತ್ತು ಎಂಬುದು ಮಾತ್ರ ರಾಮವಿಗೆ ಗೊತ್ತಿತ್ತು. ನಂತರದ ಪರಿಸ್ಥಿತಿಗಳಾವುವೂ ಗೊತ್ತಿರಲಿಲ್ಲ. ಆದರೆ, ಮತ್ತೆ ಆತ ಲಲಿತೆಯನ್ನು ನೋಡಿದ್ದು ತನ್ನ ಗೆಳೆಯ ವಕೀಲನಾದ ಅನಂತರಾಮುವಿನ ಹೆಂಡತಿಯಾಗಿ ಹಾಗೂ ಒಂದು ಹೆಣ್ಣು ಮಗುವಿನ ತಾಯಿಯಾಗಿ. ಆಗ ಜ್ಞಾನೋದಯವಾದ ರಾಮು ಗೌರಿಯನ್ನರಸಿ ಬರುತ್ತಾನೆ.
ಆದರೆ, ಇನ್ನೆಲ್ಲಿಯ ಗೌರಿ..?? ಅದಾಗಲೇ ಅಪಘಾತವಾಗಿದ್ದ ಗೌರಿ ಪ್ರೇಮದ ಬದುಕನ್ನು ಪಡೆಯಲು ಉಳಿಯಲೇ ಇಲ್ಲ.
ರಾಮು ಕಂಡ ಎರಡು ಕನಸುಗಳು ಆತನ ಪಾಲಿಗೆ ಕನಸುಗಳಾಗಿಯೇ ಉಳಿದು ಹೋದವು. ಇಬ್ಬರ ಪ್ರೀತಿಯೂ ಆತನಿಗೆ ಸಂಪೂರ್ಣವಾಗಿ ದಕ್ಕಲೇ ಇಲ್ಲ. ಒಂದನ್ನು ವಿಧಿ ಅಥವಾ ಆತನ ತಂದೆಯ ದೆಸೆಯಿಂದ ಹಾಳಾದರೆ ಮತ್ತೊಂದನ್ನು ಆತ ತನ್ನ ಕೈಯ್ಯಾರೆ ಕಳೆದುಕೊಂಡಿದ್ದ. ಎರಡು ದೋಣಿಯ ಮೇಲಿನ ಪಯಣ ಅಸಾಧ್ಯ ಎನ್ನುತ್ತಾರೆ. ಹೀಗೆ ಲಲಿತೆಯ ಮೇಲಿನ ಪ್ರೀತಿಯ ಹಾಗೂ ಗೌರಿಯ ಜೊತೆಗಿನ ದಾಂಪತ್ಯ ಎರಡು ಸಹ ಫಲಿಸಲಿಲ್ಲವಾದ್ದರಿಂದ ಇದನ್ನು ಅದಕ್ಕೂ ಸಮೀಕರಿಸಬಹುದೇನೋ ಎನ್ನಿಸುತ್ತದೆ.
ಚಲನಚಿತ್ರದಲ್ಲಿ ಅಂತ್ಯ ಸುಖಾಂತ್ಯವಾಗುತ್ತದೆ. ಇದು ನನಗೆ ಹೀಗೆ ಅರ್ಥವಾಯಿತು. ಒಂದು ಕನಸು ಕಹಿಯಾಯಿತು, ಅದು ಸಫಲವಾಗಲಿಲ್ಲ ಎಂದ ಮಾತ್ರಕ್ಕೆ ಮತ್ತೊಂದು ಕನಸು ಕಾಣಲೇಬಾರದು ಎಂದಲ್ಲ. ಮತ್ತೊಂದು ಕನಸು ಸಿಹಿಯಾಗಿರಲೂಬಹುದು. ಅದನ್ನು ಸಫಲಗೊಳಿಸಿಕೊಳ್ಳುವಷ್ಟು ಪ್ರಬುದ್ಧತೆ ಮೊದಲ ಕನಸಿನಿಂದ ಬೆಳೆದಿರುತ್ತದೆ ಎಂದು ಅರ್ಥೈಸಿಕೊಳ್ಳಬಹುದು.
ಸಿನಿಮಾದಲ್ಲಿ ರಾಮುವಿನ ತಂದೆಯ ಹಟಕ್ಕಿಂತ ರಾಮುವಿನ ತಾಯಿಯ ಅನಾರೋಗ್ಯದ ಕಾರಣದಿಂದ ಇದೆಲ್ಲವೂ ಆಯಿತು ಎಂಬಂತಿದೆ. ಜೊತೆಗೆ ಇಲ್ಲಿ ರಾಮು ಇಂಜಿನಿಯರ್ ಅಲ್ಲ. ಬದಲಾಗಿ ಪ್ರಾಧ್ಯಾಪಕ. ಅನಂತರಾಮು ಕೂಡಾ ವಕೀಲನಲ್ಲ. ಆತ ಪ್ರಾಧ್ಯಾಪಕ.
ರಾಮುವಿನ ಪಾತ್ರದಲ್ಲಿ ಡಾಕ್ಟರ್ ರಾಜಕುಮಾರ್, ಗೌರಿಯ ಪಾತ್ರದಲ್ಲಿ ಕಲ್ಪನಾರವರು ಹಾಗೂ ಲಲಿತೆಯ ಪಾತ್ರದಲ್ಲಿ ಮಂಜುಳಾ ರವರು ಪಾತ್ರಗಳಿಗೆ ಜೀವ ತುಂಬಿ ನಟಿಸಿದ್ದಾರೆ. ಎಲ್ಲಾ ಹಾಡುಗಳು ಮನಸ್ಸಿನಲ್ಲಿ ಉಳಿಯುವಂತಹದ್ದು.
ಡಾಕ್ಟರ್ ರಾಜಕುಮಾರ್ ಅವರ ನಟನೆಯಲ್ಲಿ ಆ ನಿರ್ಲಿಪ್ತತೆ, ಪ್ರೇಮ ಕಳೆದುಕೊಂಡ ನೋವು, ಅನ್ಯಮನಸ್ಕತೆ, ಹಳೆಯ ನೆನಪುಗಳು, ಪ್ರೇಮದ ತಾಕಲಾಟ ಕೇವಲ ಭಾವನೆಗಳಿಂದಲೇ ಪ್ರೇಕ್ಷಕರಿಗೆ ತಲುಪುತ್ತದೆ. ಇನ್ನು ಕಲ್ಪನಾರ ನಟನೆಯಲ್ಲಿ ಸಹನೆ, ತಪನ, ಪ್ರೀತಿಗಾಗಿನ ಹಂಬಲ, ನಂಬಿಕೆ ಎಲ್ಲವೂ ಚಿತ್ರಿತವಾಗಿದೆ.
ಚಲನಚಿತ್ರದಲ್ಲಿ ಅವರು ಮುಖಭಾವದಲ್ಲಿ ಹಾಗೂ ದೇಹಭಾಷೆಯಲ್ಲೇ ಪ್ರೇಕ್ಷಕರಿಗೆ ತಮ್ಮ ಭಾವನೆಗಳನ್ನು ತಲುಪಿಸುವ ಪರಿ ಇಷ್ಟವಾಯಿತು. ಕಾದಂಬರಿ ವಿಷಾದವನ್ನು ತುಂಬಿದರೆ.. ಚಲನಚಿತ್ರ ಸುಖಾಂತ್ಯದಿಂದ ನೆಮ್ಮದಿ ನೀಡುತ್ತದೆ. ಎರಡೂ ಅಷ್ಟೇ ಇಷ್ಟವಾದವು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ