ಮಂಗಳವಾರ, ಏಪ್ರಿಲ್ 7, 2026

ಅಲೋಕ (ಪುಸ್ತಕ ಯಾನ - 83)

ಪುಸ್ತಕದ ಶೀರ್ಷಿಕೆ : ಅಲೋಕ

ಲೇಖಕರು : ಎ.ಪಿ ಮಾಲತಿ

ಪ್ರಕಾಶಕರು :ಗೀತಾ ಬುಕ್ ಹೌಸ್

ಮೊದಲನೇ ಮುದ್ರಣ :1984

ಪುಟಗಳು : 78


ಅಲೋಕ ಎಂಬ ಕಿರು ಕಾದಂಬರಿ ಮೊದಲು ರಾಗಸಂಗಮದಲ್ಲಿ ಕಿರು ಕಾದಂಬರಿ ಆಗಿ ಪ್ರಕಟಿತವಾಗಿತ್ತು. 


ಮಕ್ಕಳಿಗೆ ತಂದೆ-ತಾಯಿಯ ಆದರ, ಅಕ್ಕರೆ ಅತ್ಯಗತ್ಯ. ಅಲ್ಲದೇ.. ಚಿಕ್ಕ ವಯಸ್ಸಿನಲ್ಲಿ ಯಾರು ಎಷ್ಟು ಪ್ರೀತಿಸುತ್ತಾರೆಯೋ.. ಹೇಗೆ ಬೆಳೆಸುತ್ತಾರೆಯೋ.. ಮಕ್ಕಳು ಹಾಗೆಯೇ ಬೆಳೆಯುತ್ತಾರೆ. ಇಂದಿನ ಸಮಾಜಕ್ಕೂ ಈ ಕಾದಂಬರಿ ಪ್ರಸ್ತುತ. ಏಕೆಂದರೆ, ಹೆಚ್ಚಿನ ತಂದೆ-ತಾಯಿಗಳು ತಮ್ಮ ವೃತ್ತಿ ಜೀವನಕ್ಕಾಗಿ ತಮ್ಮ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ಅಜ್ಜ-ಅಜ್ಜಿಯರ ಮಡಿಲಿಗೆ ಹಾಕಿ ತಾವು ದುಡಿಯುವುದು ಮಗುವಿಗೋಸ್ಕರ ಅಲ್ಲವೇ ಎನ್ನುವ ಭಾವನೆ ತಳೆದು ಮಕ್ಕಳನ್ನು ತಂದೆ-ತಾಯಿಯ ಪ್ರೀತಿಯಿಂದ ವಂಚಿಸಿ ಬಿಡುತ್ತಾರೆ. ಅವರ ಆಲೋಚನೆಗಳಿಗೂ.. ಮಕ್ಕಳ ಆಲೋಚನೆಗಳಿಗೂ ಭಾವನೆಗಳಲ್ಲಿ ಎಷ್ಟು ಕಂದರವಿರುತ್ತದೆ ಎಂಬುದರ ಚಿತ್ರಣದಂತಿದೆ ಈ ಕಥೆ. 


ಸ್ಮಿತಾ ಹಾಗೂ ಶೇಕರ ಅಮೆರಿಕಾದಿಂದ ಊರಿಗೆ ಬಂದರು .ಶೇಖರ ಬಹಳ ಬುದ್ಧಿವಂತ ಹಾಗೂ ತೀಕ್ಣಮತಿ. ಹಾಗಾಗಿ, ಅವನು ಹೆಚ್ಚಿನ ವ್ಯಾಸಂಗಕ್ಕೆ ಅಮೆರಿಕಾಗೆ ತೆರಳಿದ್ದ. ಸ್ಮಿತ ಕೂಡ ಅವನ ಅರ್ಧಾಂಗಿಯಾಗಿ ಅಲ್ಲಿಗೆ ಹೋಗುವ ಅನಿವಾರ್ಯವಿತ್ತು. ಆದರೆ, ಆ ಸಮಯದಲ್ಲಿ ಗರ್ಭಿಣಿಯಾದ್ದರಿಂದ..ಆಕೆ ಹೋದದ್ದು ನಂತರ. ಮೂರು ತಿಂಗಳ ತನಕ ಪುಟ್ಟ ಕಂದ ಆಲೋಕನನ್ನು ತನ್ನ ತಾಯಿಯ ಮಡಿಲಿಗೆ ಹಾಕಿ  ಹೊರಟಳು. ಸ್ಮಿತಾ ಅಲೋಕನನ್ನು ಕರೆದುಕೊಂಡು ಹೋಗಲು ಸಿದ್ಧಳಿದ್ದರೂ ಶೇಖರನ ಅಭಿಪ್ರಾಯ ಬೇರೆ ಇದ್ದಿತು. ಮಗು ಬರುವುದರಿಂದ ತನ್ನ ಓದಿಗೆ ತೊಂದರೆಯಾಗಬಹುದು.. ಇಲ್ಲವೇ ತಾನು ತನ್ನ ಗುರಿಯಿಂದ ವಿಮುಖನಾಗಬಹುದು ಎನ್ನುವ ಆಲೋಚನೆಯಿಂದ ಮಗುವನ್ನು ಅವರ ಅಜ್ಜ-ಅಜ್ಜಿಯ ಬಳಿಯಲ್ಲೇ ಬಿಟ್ಟು ಸ್ಮಿತಾ ಒಬ್ಬಳನ್ನೇ ಬರುವಂತೆ ಹೇಳಿದ್ದ. 


ಹಾಗೆ, ಮೂರು ತಿಂಗಳಲ್ಲಿ ಬಿಟ್ಟು ಹೋದ ಮಗುವಿಗೆ ಇವರು ವಾಪಸು ಬಂದು ನೋಡಿದಾಗ ಐದು ವರ್ಷ. ಆ ಮಗು ಸ್ಮಿತಾಳ ತಂದೆ ವರದರಾಜು ಅವರನ್ನು ಅಪ್ಪ ಎಂದೂ ಹಾಗೂ ಆಕೆಯ ತಾಯಿ ಯಮುನಮ್ಮನವರನ್ನು ಅಮ್ಮ ಎಂದೇ ಸಂಭೋದಿಸುತ್ತಿದ್ದ. ವರದರಾಜು ಹಾಗೂ ಯಮುನಮ್ಮನವರ ಎರಡನೇ ಮಗ ಸೊಸೆ ಕೂಡ ಅವರೊಂದಿಗೆ ವಾಸವಾಗಿದ್ದರು. ಅವರಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿತ್ತು. ಸ್ಮಿತಾಳಿಗೆ ಇದ್ದದ್ದು ಇಬ್ಬರು ಅಣ್ಣಂದಿರು ಹಾಗೂ ಒಬ್ಬರು ಅಕ್ಕ. ಯಮುನಮ್ಮನವರು ಎಲ್ಲಾ ಮೊಮ್ಮಕ್ಕಳನ್ನು ಒಂದೇ ರೀತಿಯಲ್ಲಿ ನೋಡಿದರೂ.. ಸಹ ಅಲೋಕ ಚಿಕ್ಕಂದಿನಿಂದ ಅವರ ಕೈಯಲ್ಲಿ ಬೆಳೆದನಾದ್ದರಿಂದ ಪ್ರೀತಿ ಒಂದು ಕೈ ಮೇಲೆಯೇ. 


ಸ್ಮಿತ ಹಾಗೂ ಶೇಖರನನ್ನು ಕೇವಲ ಫೋಟೋದಲ್ಲಿ ಮಾತ್ರ ನೋಡಿದ್ದ ಅಲೋಕ ಅವರನ್ನು ಮುಖತಃ ಭೇಟಿಯಾದಾಗ ಅವರನ್ನು ಅಪರಿಚಿತರೆಂದೇ ಭಾವಿಸಿದ. ಅಪ್ಪ-ಅಮ್ಮನೆಂದು ಒಪ್ಪಲು ಸಿದ್ದವಿರಲಿಲ್ಲ. ಅಲ್ಲದೆ, ಶೇಖರನಿಗೆ ಮಗನ ಮೇಲೆ ಕಾಳಜಿಯಿತ್ತೇ ಹೊರತು ಅಂತಹ ವಾತ್ಸಲ್ಯವೇನೋ ಕಾಣಲಿಲ್ಲ. ಸ್ಮಿತ ಮಗುವನ್ನು ತನ್ನ ಬಳಿ ಸೆಳೆಯಲು ಪ್ರಯತ್ನಿಸಿದರೂ.. ಅಲೋಕ ಆಕೆಯ ಬಳಿಗೆ ಬರದೆ ಅವಳನ್ನು ಅಮ್ಮ ಎಂದು ಸಂಬೋಧಿಸದೆ, ಆಕೆಯ ಅಣ್ಣನ ಮಕ್ಕಳು ಸಂಭೋಧಿಸುವಂತೆ ಅತ್ತೆ ಎಂದು ಕರೆಯುತ್ತಾ.. ಯಮುನಮ್ಮನವರನ್ನೇ ಅಮ್ಮ ಎಂದು ಸಂಬೋಧಿಸುತ್ತಾ ಅವರ ಸೆರಗು ಹಿಡಿದು ತಿರುಗುತ್ತಿದ್ದ. ಅಲ್ಲದೆ, ಆತನಿಗೆ ಹಳ್ಳಿಯ ಸ್ವತಂತ್ರ ಜೀವನ ಬಹಳ ಇಷ್ಟವಾಗಿತ್ತು ಹಾಗೂ ಅದೇ ರೂಢಿಯಾಗಿತ್ತು. ಅಲ್ಲಿನ ಕನ್ನಡ ಮೀಡಿಯಂ ಶಾಲೆಗೆ ಸೇರಿದ್ದ ಅವನು ಕಲಿಯುವುದರಲ್ಲಿದ್ದ ಮುಂಚೂಣಿಯಲ್ಲಿದ್ದ .


ಶೇಖರನಿಗೆ ಮುಂಬೈಯಲ್ಲಿ ಕೆಲಸ ಸಿಕ್ಕಿದ್ದರಿಂದ ಸ್ಮಿತಾ ಹಾಗೂ ಶೇಖರ ಇಬ್ಬರೂ ಮುಂಬೈಗೆ ಹೋಗಬೇಕಾಗಿತ್ತು. ಸ್ಮಿತಾಳಿಗೆ ಮೊದಲಿಗೆ ಯಾವುದೇ ಕೆಲಸವಿಲ್ಲದಿದ್ದರೂ ನಂತರ ಕೆಲಸಕ್ಕೆ ಸೇರಿಕೊಳ್ಳುವ ಪ್ಲಾನ್ ಇದ್ದಿತು. ಅಲೋಕ ಅವರಿಬ್ಬರ ಜೊತೆಗೆ ಹೋಗಲು ಒಪ್ಪದ್ದರಿಂದ ಕೆಲವು ದಿನಗಳ ಕಾಲ ಯಮನಮ್ಮನವರು ಸಹಾ ಅವರ ಜೊತೆಯೇ ಹೋದರು. ಆದರೆ ,ಅಲೋಕ ಸ್ಮಿತಾ ಹಾಗೂ ಶೇಖರನಿಂದ ಕೊಂಚ ದೂರವೇ ಉಳಿದುಬಿಟ್ಟ. ಅವರೂ ಅಷ್ಟೇ.. ಅಮೆರಿಕಾದ ಪದ್ಧತಿಗೆ ಪ್ರಾಶಸ್ತ್ಯ ನೀಡುತ್ತಿದ್ದರಿಂದ, ಮಗುವನ್ನು ತಮ್ಮ ಬಳಿ ಉಳಿಸಿಕೊಳ್ಳಬೇಕು, ಎತ್ತಿ ಮುದ್ದಾಡಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಅವರವರ ಪಾಡು ಅವರವರಿಗೆ ಎನ್ನುತ್ತಾ.. ಮಗುವನ್ನು ಸ್ವತಂತ್ರವಾಗಿ ಬೆಳೆಸಲು ಬೇರೆಯದ್ದೆ ಕೋಣೆಯಲ್ಲಿ ಮಲಗಿಸುವುದು ಹಾಗೂ ಆತ ಸ್ವತಂತ್ರವಾಗಿ ಬದುಕಲಿ ಎನ್ನುತ್ತಾ ಆತನನ್ನು ಆತನ ಪಾಡಿಗೆ ಬಿಟ್ಟುಬಿಡುವುದು ಮಾಡುತ್ತಿದ್ದರು. ಅಲ್ಲದೇ, ಶೇಖರನಿಗೆ ಅಲೋಕನ ಕುರಿತು ಹಳ್ಳಿ ಕಗಮಾರನಂತೆ ವರ್ತಿಸುತ್ತಾನೆ. ನಯ ನಾಜೂಕು ಗೊತ್ತಿಲ್ಲ.. ತುಂಟ, ಇಂಗ್ಲೀಷ್ ಗೊತ್ತಿಲ್ಲದ ದಡ್ಡ ಎಂಬ ದೂರು ಕೂಡ ಇದ್ದವು.


ಯಮುನಮ್ಮನವರು ಅಲ್ಲಿಂದ ಹೊರಟ ನಂತರವ ಅಲೋಕ ಮಂಕಾದ. ಆತ ಅಂತರ್ಮುಖಿಯಾಗುತ್ತಾ ಹೋದ. ಸ್ಮಿತಾ ಕೆಲಸಕ್ಕೆ ಸೇರಿದಳು. ಶೇಖರ ತನ್ನ ಪಾಡಿಗೆ ತಾನು ಯಾವುದೋ ಪುಸ್ತಕ ಬರೆಯುತ್ತಾ ಸುಮ್ಮನೆ ಅವನಷ್ಟಕ್ಕೆ ಉಳಿದುಬಿಡುತ್ತಿದ್ದ. ಸ್ಮಿತಾ ಹಾಗೂ ಅಲೋಕನ ನಡುವೆ ಬಾಂಧವ್ಯ ಬೆಳೆದರೂ.. ಅದು ಯಮುನಮ್ಮ ಹಾಗೂ ಅಲೋಕನಂತಹಾ ಬಾಂಧವ್ಯವಾಗಿರಲಿಲ್ಲ . ಎಲ್ಲಿಯೋ ಒಂದು ಕೊರತೆ ಇದ್ದೇ ಇತ್ತು. ಶಾಲೆಯಲ್ಲಿ ಈಗ ಇಂಗ್ಲಿಷ್ ಮೀಡಿಯಂ. ಈತನಿಗೆ ಹೊಸ ವಾತಾವರಣ. ಅಲ್ಲದೇ, ಇವುಗಳೆಲ್ಲ ಅವನಿಗೆ ಬಂಧನದಂತೆನಿಸುತ್ತಿತ್ತು. ಶಿಕ್ಷಕಿಯರು ಕೂಡಾ ಪ್ರೀತಿಯಿಂದ ಕಲಿಸುವುದರ ಬದಲಾಗಿ, ಶಿಸ್ತಿನಿಂದ ಕಲಿಸುವಾಗ ಅವನು ಇಲ್ಲಿಂದ ಎಲ್ಲಿಗಾದರೂ ಹೋಗಬೇಕು ಎಂದುಕೊಂಡು ಅಲ್ಲಿಂದ ಹೋಗುವ ಪ್ರಯತ್ನ ಮಾಡಲು ಮಾಡುತ್ತಿದ್ದ. 


ಟ್ಯೂಷನ್ ಗೆ ಸೇರಿಸಿದರು. ನೆರೆಯವರಾದ ರಾಧಾಬಾಯಿಯವರು ಸಹಾ ಆತನಿಗೆ ಶಿಕ್ಷೆ ನೀಡುತ್ತಿದ್ದರಿಂದ ರಾಧಾಬಾಯಿಯನ್ನು ಸಹಾ ಅವನಿಗೆ ಅರಿವಿಲ್ಲದಂತೆ ದ್ವೇಷಿಸಲು ಶುರು ಮಾಡಿದ. ಅವನನ್ನು ನೋಡಿಕೊಳ್ಳಲೆಂದೇ ಒಬ್ಬಳು ಹೊಸ ಕೆಲಸದ ಹುಡುಗಿಯೂ ಬಂದಳು. ಅವಳೇ ಶ್ಯಾಮಲ. ಅವಳೂ ಮೊದಮೊದಲು ಸರಿ ಇದ್ದವಳು, ಬರುಬರುತ್ತಾ ಅಲೋಕನ ಪಾಲಿಗೆ ಭೀಕರವೆನಿಸಲು ಶುರುವಾದಳು. 


ಶೇಖರನ ತಂದೆ-ತಾಯಿ ಬಂದವರು ಕೂಡ ಮೊಮ್ಮಗನನ್ನು ಗಮನಿಸಿ ಆತ ಮಂಕಾಗಿರುವುದರ ಕುರಿತು ಸ್ಮಿತಾ ಹಾಗೂ ಶೇಖರನಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದರು. ಅಲ್ಲದೆ, ಊರಿಗೆ ಹೋದಾಗ ಯಮುನಕ್ಕ ಹಾಗೂ ವರದರಾಜು ಅವರು ಕೂಡ ಆಲೋಕನ ಮನಸ್ಥಿತಿಯ ಹಾಗೂ ದೇಹಸ್ಥಿತಿಯ ಕುರಿತ ಎಚ್ಚರಿಕೆ ನೀಡಿದರು. ಆದರೂ, ಸ್ಮಿತಾ ಹಾಗೂ ಶೇಖರ ಅದನ್ನು ಪಾಸಿಟಿವ್ ಆದ ರೀತಿಯಲ್ಲಿ ತೆಗೆದುಕೊಳ್ಳಲು ಸಿದ್ಧವಿರಲಿಲ್ಲ. 


ಹಳ್ಳಿಯಲ್ಲಿ ಅವನು ಇಷ್ಟಪಡುತ್ತಿದ್ದ ವಾತಾವರಣದಿಂದ, ಇಷ್ಟಪಡುತ್ತಿದ್ದ ಜನರಿಂದ ದೂರವಾದ ಅಲೋಕನ ಮನಸ್ಥಿತಿ ಏನಾಯಿತು..?? ಅಲೋಕನ ಆ ಸ್ಥಿತಿಗೆ ನಿಜವಾದ ಕಾರಣರು ಯಾರು..?? ಸ್ಮಿತ ಹಾಗೂ ಶೇಖರ ಇಬ್ಬರೂ ಮುಂದೆ ತಮ್ಮ ತಪ್ಪಿನ ಅರಿವಾಗಿ ಬದಲಾದರೆ..?? ಅಥವಾ ಅಲೋಕನೇ ಅವರಿಗೆ ತಕ್ಕ ಹಾಗೆ ಬದಲಾದನೇ..?? ಶ್ಯಾಮಲಾ ಆ ರೀತಿ ವರ್ತಿಸುತ್ತಿದ್ದುದರ ಕಾರಣವೇನು..?? ಶ್ಯಾಮಲ ಹಾಗೂ ರಾಧಾಬಾಯಿಯರಿಂದ ಬಿಡುಗಡೆ ಪಡೆದನೆ ಅಲೋಕ..?? ಸ್ಮಿತ ಹಾಗೂ ಶೇಖರನನ್ನು ಅಪ್ಪ ಹಾಗೂ ಅಮ್ಮ ಎಂದು ತನ್ನ ಮನಸ್ಪೂರ್ವಕವಾಗಿ ಒಪ್ಪಿಕೊಂಡನೇ ಅಲೋಕ..?? ಇದೆಲ್ಲದಕ್ಕೂ ಉತ್ತರವಾಗಿ ಓದಿ ಅಲೋಕ ಕಿರು ಕಾದಂಬರಿಯನ್ನು. 


ಮಕ್ಕಳು ಅಂತರ್ಮುಖಿಯಾಗುವುದರ ಹಿಂದಿನ ರಹಸ್ಯ, ಮಕ್ಕಳ ಮನಸ್ಥಿತಿ ಹಾಗೂ ಅವರನ್ನು ತಿದ್ದುವುದರ ಕುರಿತಾಗಿ ಹಾಗೂ  ಸೂಕ್ಷ್ಮವಾದ ಮಕ್ಕಳನ್ನು ಹೇಗೆ ಬೆಳೆಸುವುದು, ತಂದೆ-ತಾಯಿಯರು ಎಷ್ಟು ಆತ್ಮೀಯವಾಗಿರಬೇಕು ಹಾಗೂ ಮಕ್ಕಳೊಡನೆ ಹೇಗೆ ಹೊಂದಿಕೊಳ್ಳಬೇಕು ಎನ್ನುವುದರ ಚಿತ್ರಣ ಈ ಕಿರು ಕಾದಂಬರಿಯಲ್ಲಿದೆ. ಅದರಲ್ಲೂ ಈ ಜನರೇಷನ್ ನ ಆಧುನಿಕ ಪೇರೆಂಟಿಂಗ್ ನವರು ಓದಲೇಬೇಕಾದ ಕೃತಿ ಇದು ಎಂದೆನಿಸಿತು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ