ಪುಸ್ತಕದ ಶೀರ್ಷಿಕೆ : ಮಧು ತುಂತುರು
ಲೇಖಕರು : ಹೆಚ್.ಕೆ ಅನಸೂಯ ಸಂಪತ್
ಪ್ರಕಾಶಕರು : ಹೇಮಂತ ಸಾಹಿತ್ಯ
ಮೊದಲನೇ ಮುದ್ರಣ : 1988
ಪುಟಗಳು : 174
ಮಧು ತುಂತುರು ಕಾದಂಬರಿ ಎರಡು ಕಿರು ಕಾದಂಬರಿಗಳ ಸಂಯುಕ್ತ ಪುಸ್ತಕ. ಮಧು ತುಂತುರು ಹಾಗೂ ಬೇವು ಬೆಲ್ಲ.
ಮಧು ತುಂತುರು
ಮಧು ತುಂತುರು ಕಾದಂಬರಿಯು ಆ ಕಾಲದಲ್ಲಿ ಸಂಯುಕ್ತ ಕರ್ನಾಟಕದಲ್ಲಿ ದೈನಿಕ ಧಾರವಾಹಿಯಾಗಿ ಪ್ರಕಟವಾಗಿತ್ತು .
ರಾಮರಾಯರು ಹಾಗೂ ಇಂದಿರಾ ದಂಪತಿಗಳಿಗೆ ಮೂವರು ಮಕ್ಕಳು. ಮೂರನೆಯವಳು ವಸುಧ. ಅವಳಿಗೆ ಇದ್ದದ್ದು ಇಬ್ಬರು ಅಣ್ಣಂದಿರು. ಈಗ ವಸುಧಾಳ ಮದುವೆಗಾಗಿ ವರಾನ್ವೇಷಣೆ ನಡೆಯುತ್ತಿತ್ತು. ರಾಯರ ಸ್ನೇಹಿತರೊಬ್ಬರ ಸಲಹೆಯ ಮೇರೆಗೆ ಮೂರ್ತಿ ಹಾಗೂ ಅಂಬುಜಮ್ಮನವರ ಮಗ ಮಧುಸೂದನ್ ರ ಮನೆಗೆ ಅವರ ಮನೆಗೆ ಮಾತುಕತೆಗಾಗಿ ತೆರಳಿದರು.
ವಸುಧಾ ಕೆಮಿಸ್ಟ್ರಿ ಲೆಕ್ಚರರ್ ಆಗಿದ್ದವಳು. ಅಲ್ಲದೆ, ಆಕೆ ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಲೇಖಕಿಯೂ ಆಗಿ ಹೆಸರು ಮಾಡಿದವಳು. ತಾನು ಕಂಡ ಹಾಗೂ ತನ್ನ ಭಾವನೆಗಳನ್ನು ಕಥೆ ಹಾಗೂ ಕವನದ ರೂಪದಲ್ಲಿ ಬರೆಯುತ್ತಾ ಎಲ್ಲರ ಮನಸೆಳೆದವಳು.
ಮಧುಸೂದನ್ ವೃತ್ತಿಯಲ್ಲಿ ಡಾಕ್ಟರ್. ಬಹಳ ಸರಳ ಸ್ವಭಾವದವನು ಹಾಗೂ ಸ್ನೇಹಪೂರ್ವಕ ವ್ಯಕ್ತಿತ್ವ. ಆದರೆ, ಅವನ ತಾಯಿ ಅಂಬುಜಮ್ಮನವರದ್ದು ಅದಕ್ಕೆ ವಿರುದ್ಧದ ಸ್ವಭಾವ. ಮುಖ ಗಂಟು ಹಾಕಿಕೊಂಡೇ ವಸುಧಾ ಮನೆಯವರನ್ನು ಬಿಗುಮಾನದಿಂದಲೇ ಪ್ರಶ್ನಿಸಿದ್ದರು .ಅಷ್ಟೇ ಅಲ್ಲದೆ... ಹಣದ ಆಸೆ ಇರುವವರಂತೆಯೂ ಕಂಡು ವಸುಧಾ ಮನೆಯವರಿಗೆ ಬೇಸರ ಬರಿಸುವಂತೆ ಮಾತನಾಡಿದ್ದರು.
ಹುಡುಗ ಹಾಗೂ ಹುಡುಗಿ ಇಬ್ಬರೂ ಒಪ್ಪಿದ್ದರೆ ಈ ವಿವಾಹಕ್ಕೆ ಮುಂದಡಿ ಇಡೋಣವೆಂದು ವಸುಧಾ ಮನೆಯಲ್ಲಿ ನಿಶ್ಚಯಿಸಿದರು. ವಸುಧಾಳಿಗೆ ಮಧು ಇಷ್ಟವಾಗಿದ್ದ. ಮಧುವಿಗೂ ವಸುಧಾ ತನ್ನ ನೈಜ ಸೌಂದರ್ಯ ಹಾಗೂ ಬುದ್ಧಿವಂತಿಕೆಯಿಂದ ಹಿಡಿಸಿದ್ದಳು. ಆದರೆ, ಇದಕ್ಕೆ ಅಡ್ಡಿಯಾಗಿದ್ದು ಅಂಬುಜಮ್ಮನವರು. ಇವರು ತಮ್ಮ ಶ್ರೀಮಂತಿಕೆಗೆ ಸರಿಸಾಟಿ ಇಲ್ಲದವರೆಂದು ನಿರ್ಧರಿಸಿ.. ತಮ್ಮ ಪತಿಯ ಕಡೆಯಿಂದ ಈ ಜಾತಕ ಕೂಡಿ ಬರುವುದಿಲ್ಲವೆಂದು ಹೇಳಿ ಈ ಮದುವೆ ಮಾತುಕತೆ ಅಲ್ಲಿಯೇ ನಿಲ್ಲುವಂತೆ ನೋಡಿಕೊಂಡರು.
ಮದುವೆ ಮಾತುಕತೆ ಏನೋ ನಿಂತಿತು. ಆದರೆ ,ಮಧು ಹಾಗೂ ವಸುಧಾರ ಸ್ನೇಹ ನಿಲ್ಲಲಿಲ್ಲ. ಹೀಗೆ ತಿರಸ್ಕೃತವಾದ ತನ್ನ ವಿವಾಹದ ಕುರಿತೇ ಬರೆದ ಕಥೆಯೊಂದನ್ನು ಓದಿದ ಅವನು ಇದಕ್ಕೆ ಹೆಣ್ಣಿನ ತ್ಯಾಗದ ಬದಲು ಬೇರೆಯದ್ದೇ ಅಂತ್ಯವಿರಬೇಕೆಂಬ ಅಭಿಪ್ರಾಯ ಪಟ್ಟಿದ್ದನು. ನಿಧಾನವಾಗಿ ಈ ಸ್ನೇಹ ಪ್ರೇಮಕ್ಕೂ ತಿರುಗಿತ್ತು. ಆದರೆ, ಇಬ್ಬರ ಮನೆಯಲ್ಲಿಯೂ ಇದರ ಅರಿವಿರಲಿಲ್ಲ. ಈ ಮಧ್ಯೆ ಮಧುಸೂದನ್ ತನ್ನ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಎರಡು ವರ್ಷ ವಿದೇಶಕ್ಕಾಗಿ ಹೋಗುವ ಸಂದರ್ಭ ಬಂದಿತು. ವಸುಧಾ ಅವನಿಗಾಗಿ ಕಾಯುವೆನೆಂದು ಹೇಳಿದ್ದರೂ.. ಆಕೆಯ ತಂದೆಗೆ ಹೃದಯಾಘಾತವಾಗಿ.. ಅವರು ಹೆಚ್ಚು ದಿನ ಅವರು ಬದುಕಿ ಉಳಿಯಲಾರರು ಎನ್ನುವ ಕಾರಣಕ್ಕಾಗಿ ,ಅವಳ ಮದುವೆಯನ್ನು ನೋಡಲೇಬೇಕೆಂದು ಆಸೆ ಪಟ್ಟಿದರಿಂದ.. ಅನಿರೀಕ್ಷಿತ ಪರಿಸ್ಥಿತಿಯಲ್ಲಿ ಒತ್ತಡಕ್ಕೆ ಸಿಲುಕಿ ಮನೆಯವರು ನಿಶ್ಚಯಿಸಿದ್ದ ವರ ಶ್ರೀಕಾಂತನೊಂದಿಗೆ ವಸುಧಾಳ ಮದುವೆಯಾಯಿತು.
ಶ್ರೀಕಾಂತ ದೂರದ ಮುಂಬೈಯ ಟಾಟಾ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಮದುವೆಯ ನಂತರ ವಸುಧಾ ತನ್ನ ಕೆಲಸವನ್ನು ಬಿಡಬೇಕಾಗಿ ಬಂದಿತು. ಅಲ್ಲದೇ.. ಶ್ರೀಕಾಂತನಿದ್ದಲ್ಲಿಗೆ ಹೋಗಬೇಕಾಗಿ ಬಂದಿತು. ಅವಳ ಬರಹವಂತೂ ಮೂಲೆಗುಂಪಾಯಿತು. ಆದರೆ, ನಿಧಾನವಾಗಿ ವಸುಧಾಳಿಗೆ ಶ್ರೀಕಾಂತನ ಸ್ವಭಾವ ಅರಿವಿಗೆ ಬಂದಿತು. ಶ್ರೀಕಾಂತನೇನೋ ಮಧುಸೂದನಂತೆಯೇ ಉತ್ತಮ ಗುಣವುಳ್ಳವನಾಗಿದ್ದರೆ ಹಾಗೂ ಸ್ನೇಹ ಪ್ರೀತಿಯಿಂದ ಅವಳೊಡನೆ ನಡೆದುಕೊಂಡಿದ್ದರೆ ಅದರ ಕಥೆಯೇ ಬೇರೆ ಇರುತ್ತಿತ್ತು. ಆದರೆ, ಶ್ರೀಕಾಂತನ ರೀತಿ ನೀತಿಗಳೊಂದೂ ಅವಳಿಗೆ ಸರಿ ಬರಲಿಲ್ಲ.
ಮೋಜು, ಕುಡಿತ, ಹೆಣ್ಣು ಹೀಗೆ ಹಲವಾರು ದುಶ್ಚಟಗಳನ್ನು ಹೊಂದಿದ್ದ ಶ್ರೀಕಾಂತನ ಜೊತೆ ತನ್ನ ಮುಂದಿನ ದಿನಗಳನ್ನು ಬಾಳಬೇಕಾಗಿ ಬರುತ್ತದೆ ವಸುಧಾ. ಮನೆಯವರಿಗೆ ಈ ಯಾವ ಸುಳಿವೂ ಸಿಗುವುದಿಲ್ಲ. ವಸುಧಾ ಗರ್ಭಿಣಿಯೂ ಆಗುತ್ತಾಳೆ. ಶ್ರೀಕಾಂತನೊಡನೆ ಸುಖೀ ಸಂಸಾರ ನಡೆಸುತ್ತಾಳಾ...? ಅಪ್ಪನ ಮೇಲಿನ ಅಭಿಮಾನಕ್ಕಾಗಿ ತನ್ನ ಪ್ರೀತಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ಬಂದ ವಸುಧಾ ತಪ್ಪು ಮಾಡಿದಳಾ..?? ಮದುವೆಯಾಗಿ ಮೋಸ ಮಾಡಿದ್ದಾಳೆ ಎಂದು ಡಾಕ್ಟರ್ ಮಧು ವಿದೇಶದಿಂದ ಬಂದ ನಂತರ ತಿಳಿದಾಗ ಏನಾಗುತ್ತದೆ..?? ವಸುಧಾಳ ನಿಜ ಸ್ಥಿತಿ ಅರಿವಾದ ನಂತರ ಅವನ ಪ್ರತಿಕ್ರಿಯೆ ಏನು ಶ್ರೀಕಾಂತ್ ಇದೆಲ್ಲವನ್ನೂ ಹೇಗೆ ನಿಭಾಯಿಸುತ್ತಾನೆ..?? ಇದೆಲ್ಲದಕ್ಕೂ ಉತ್ತರವಾಗಿ ಓದಿ ಮಧು ತುಂತುರು.
ಬೇವು ಬೆಲ್ಲ
ಹೇಮಂತನಿಗೆ ಮದುವೆ ಮಾಡಬೇಕೆಂದು ಆತನ ತಾಯಿ ರಾಜಲಕ್ಷ್ಮಿ ಯೋಚಿಸುತ್ತಿದ್ದರು. ಆದರೆ, ಅವರು ತೋರಿಸಿದ ಯಾವ ಹುಡುಗಿಯನ್ನೂ ಹೇಮಂತ ಒಪ್ಪುತ್ತಿರಲಿಲ್ಲ. ಆತನ ಆಸೆ ಹಾಗೂ ನಿರೀಕ್ಷಗಳು ತಾಯಿಗಿಂತ ವಿಭಿನ್ನವಾಗಿದ್ದವು. ಆತನ ಸೋದರತ್ತೆ ನಾಗಲಕ್ಷ್ಮೀ ಮನೆಗೆ ಬಂದಾಗ.. ಅವರ ಬಳಿ ಆತ ತನ್ನ ನಿರೀಕ್ಷೆಗಳನ್ನು ತಿಳಿಸಿದ. ಹುಡುಗಿ ನೋಡಲು ರೂಪವಂತೆಯಾಗಿದ್ದು, ಆಕೆ ಕೆಲಸದಲ್ಲಿಯೂ ಇರಬೇಕೆಂಬುದು ಆತನ ಅಪೇಕ್ಷೆ.
ಹುಡುಗಿ ಆರ್ಥಿಕವಾಗಿ ತನಗೆ ಸಹಾಯ ಮಾಡಿದರೆ ಕೇವಲ ಒಬ್ಬನಿಂದಲೇ ಮನೆ ನಡೆಯಬೇಕಾಗಿಲ್ಲ ಎಂಬುದು ಅವನ ಮುಂದಾಲೋಚನೆ. ಅವನ ಆಸೆಯಂತೆಯೇ ನಾಗಲಕ್ಷ್ಮಿ ಅವರ ದೂರದ ಸಂಬಂಧದ ಒಂದು ಹುಡುಗಿಯನ್ನು ತೋರಿಸಿದರು. ಅವಳೇ ಹರಿದ್ರಾ. ಆಕೆ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಳು. ಪರಸ್ಪರ ನೋಡಿ ಒಪ್ಪಿದ ನಂತರ, ಹೆಚ್ಚಿನ ಸಮಯವೇನೂ ಬೇಡದೆ.. ಹಿರಿಯರೆಲ್ಲರ ಒಪ್ಪಿಗೆಯ ಮೇರೆಗೆ ಈ ವಿವಾಹ ನಡೆದುಹೋಗಿತ್ತು. ಇದಕ್ಕೆ ಹೇಮಂತನ ಅಕ್ಕ ಮೀನಾಕ್ಷಿಯೂ ಬಂದಿದ್ದಳು.
ಮದುವೆಯ ನಂತರ ತಾನು ಇಲ್ಲಿಯೇ ಕುಟುಂಬದ ಜೊತೆಗೆ ಒಟ್ಟಾಗಿ ಇರಬಹುದು ಎಂದುಕೊಂಡಿದ್ದ ದಂಪತಿಗಳಿಗೆ ಒಂದು ಇಕ್ಕಟಿನ ಪರಿಸ್ಥಿತಿ ಎದುರಾಯಿತು. ಹೇಮಂತನಿಗೆ ಈಗ ಬೆಂಗಳೂರಿಗೆ ವರ್ಗವಾಗಿತ್ತು. ಈಗ ಹೆಂಡತಿ ತನ್ನ ಜೊತೆಯಲ್ಲಿಯೇ ಬರಬೇಕೆಂದರೆ.. ಒಂದೋ ಆಕೆ ಕೆಲಸ ಬಿಡಬೇಕಿತ್ತು, ಇಲ್ಲವೇ.. ಆಕೆಯು ಟ್ರಾನ್ಸ್ಫರ್ ತೆಗೆದುಕೊಂಡು ಅಲ್ಲಿಗೆ ಬರಬೇಕಿತ್ತು. ಹುಡುಕಿ, ಹುಡುಕಿ ಉದ್ಯೋಗಸ್ತೆಯನ್ನೇ ವಿವಾಹವಾಗಿದ್ದ ಅವನು ಹರಿದ್ರಾ ಕೆಲಸ ಬಿಡುವುದು ಬೇಡವೆಂಬ ನಿರ್ಧಾರಕ್ಕೆ ಬಂದು ಆಕೆಗೆ ವರ್ಗಾವಣೆ ತೆಗೆದುಕೊಳ್ಳಲು ತಿಳಿಸಿದನು.
ಆಕೆ ವರ್ಗವಾಗಿ ಬಂದ ನಂತರ ಇಬ್ಬರೂ ಬೆಂಗಳೂರಿನಲ್ಲಿ ಜೊತೆಯಾಗಿ ವಾಸ ಮಾಡಲು ಶುರು ಮಾಡಿದರು. ಆರಂಭದಲ್ಲಿ ಹರಿದ್ರಾಳ ತಾಯಿ ಅವಳ ಜೊತೆಗೆ ಇದ್ದುದರಿಂದ, ಅವಳಿಗೆ ಸಹಾಯವಾಗುತ್ತಿತ್ತು. ಆದರೆ, ಅವರಾದರೂ ಅಲ್ಲಿ ಎಷ್ಟು ದಿನ ನಿಂತಾರು..?? ಹರಿದ್ರಾ ಒಬ್ಬಳೇ ಮಗಳಾಗಿ ಬೆಳೆದಿದ್ದರಿಂದ ಅವಳಿಗೆ ಕೆಲಸ ಮಾಡಿ ಅಭ್ಯಾಸವಿರಲಿಲ್ಲ. ಹೇಮಂತನಿಗೂ ಕೆಲಸ ಮಾಡಿ ಅಭ್ಯಾಸವಿರಲಿಲ್ಲ. ತಾನು ಮಾಡುತ್ತೇನೆ ಎಂದು ಬಾಯಿಯಲ್ಲಿ ನುಡಿದರೂ.. ಆತ ಅವಳಿಗೆ ಯಾವುದೇ ವಿಷಯದಲ್ಲಿಯೂ ಸಹಾಯಕನಾಗಿರಲಿಲ್ಲ.
ಪರಿಸ್ಥಿತಿ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಎಷ್ಟೋ ಬಾರಿ ಕೋಪ ಬಂದರೂ.. ಅದನ್ನು ತೋರಿಸಿಕೊಳ್ಳದೆ ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಳು ಹರಿದ್ರಾ ಆದರೆ ಅವಳು ಗರ್ಭಿಣಿಯಾದಾಗ ಮಾತ್ರ ಅವಳಿಗೆ ಬಹಳಷ್ಟು ತೊಂದರೆಗುತ್ತದೆ. ಅವಳ ಅಪ್ಪ ಅಮ್ಮನಾಗಲಿ, ಅತ್ತೆ ಮಾವನಾಗಲಿ ಅಲ್ಲಿಗೆ ಬಂದು ನಿಲ್ಲಲು ಅವರದ್ದೇ ಆದ ತೊಡಕುಗಳಿದ್ದವು. ಮೀನಾಕ್ಷಿ ಕೆಲ ದಿನ ಇಲ್ಲಿಗೆ ಬಂದರೂ.. ಅವಳಿಂದ ಅನಾನುಕೂಲವಾದದ್ದೇ ಹೆಚ್ಚು.
ಗರ್ಭಿಣಿಯಾಗಿದ್ದ ಹರಿದ್ರಾಳ ಮುಂದಿನ ಬದುಕು ಹೇಗಿತ್ತು..?? ಹೇಮಂತ ಆಕೆಗೆ ಸಹಾಯಕವಾಗಿ ನಿಂತನೆ..?? ಅವರ ಜೀವನ ಬೇವು ಬೇವಿನಂತಾಯಿತೇ ಅಥವಾ ಬೆಲ್ಲದಂತಾಯಿತೇ..??
ತಾನೇ ಸರಿ, ತಾನು ಮಾಡಿದ್ದೇ ಸರಿ.. ಎಂದು ತನ್ನ ಮೂಗಿನ ನೇರಕ್ಕೆ ಯೋಚಿಸುವವರಿಗೆ ಜೀವನ ಬೇವಿನಂತೆ ಕಹಿಯಾಗಿರುತ್ತದೆ. ಅಲ್ಲದೇ, ಬೇವಿನಂತಹ ಕಹಿಗೆ ಬೆಲ್ಲ ಬೆರೆಸಿ ಸಮಾನವಾಗಿ ಹಂಚಿಕೊಂಡು ಬಾಳುವುದು ಅವರವರ ಕೈಯಲ್ಲಿ ಇರುತ್ತದೆ. ಅವರ ಜೀವನ ಬೇವು-ಬೆಲ್ಲದ ಸಮ್ಮಿಶ್ರಣವಾಯಿತೇ..?? ಅಥವಾ ಬೇವಿನಂತಾಯಿತೇ..?? ಅಥವಾ ಬೆಲ್ಲದಂತಾಯಿತೇ..??
ನವ ವಿವಾಹಿತರಿಗೆ ಒಂದು ರೀತಿಯ ನೀತಿ ಪಾಠದಂತಿದೆ ಈ ಬೇವು ಬೆಲ್ಲ ಎನ್ನುವ ಕಿರು ಕಾದಂಬರಿ. ಹೊಂದಾಣಿಕೆಯ ದಾಂಪತ್ಯ ಎಷ್ಟು ಮುಖ್ಯ ಎನ್ನುವುದನ್ನು ಹೇಳುತ್ತದೆ ಈ ಕಾದಂಬರಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ