ಮಂಗಳವಾರ, ಏಪ್ರಿಲ್ 7, 2026

ಬೆಸುಗೆ ( ಪುಸ್ತಕ ಯಾನ - 93)


ಪುಸ್ತಕದ ಶೀರ್ಷಿಕೆ : ಬೆಸುಗೆ

ಲೇಖಕರು : ಅಶ್ವಿನಿ

ಪ್ರಕಾಶಕರು :ಸುರಭಿ ಪ್ರಕಾಶನ

ಮೊದಲನೇ ಮುದ್ರಣ : 1996

ಪುಟಗಳು : 216


ಚಲನಚಿತ್ರ : ಬೆಸುಗೆ

ನಿರ್ದೇಶಕರು : ಗೀತಪ್ರಿಯ

ತಾರಾಗಣ :ಶ್ರೀನಾಥ್, ಮಂಜುಳ, ಎಂ.ವಿ.ರಾಜಮ್ಮ , ಶಿವರಾಂ, ಅಶ್ವಥ್ ಮುಂತಾದವರು


ಲೇಖಕಿ ಅಶ್ವಿನಿಯವರ ನಿಜ ನಾಮಧೇಯ ಎಂ.ವಿ ಕನಕಮ್ಮ. ಖ್ಯಾತ ಲೇಖಕಿಯಾಗಿರುವ ಇವರು ಬೆಂಗಳೂರು  ಕೃಷಿ ವಿಶ್ವವಿದ್ಯಾಲಯದ ಆಡಳಿತಾಧಿಕಾರಿಯಾಗಿಯೂ ಆಗಿ ಸೇವೆ ಸಲ್ಲಿಸಿದ್ದಾರೆ. ತುಪ್ಪದ ದೀಪ ಎನ್ನುವ ಕಥಾಸಂಕಲನ ಹಾಗೂ ಹಲವಾರು ಕಾದಂಬರಿಗಳನ್ನು ಬರೆದಿದ್ದಾರೆ. ಇವರು ಬರೆದಿರುವ ಮೃಗತೃಷ್ಣಾ ಎಂಬ ಕಾದಂಬರಿಯು ಕಾಮನಬಿಲ್ಲು ಎನ್ನುವ ಚಲನಚಿತ್ರವಾಗಿದೆ. ಈ ಕುರಿತು ನಾನು ಈಗಾಗಲೇ ಪರಿಚಯ ಲೇಖನ ಬರೆದಿದ್ದೇನೆ. ಕಪ್ಪು ಕೊಳ, ನಿಲುಕದ ನಕ್ಷತ್ರ ಹಾಗೂ ಬೆಸುಗೆ ಕಾದಂಬರಿಗಳು ಕೂಡ ಚಲನಚಿತ್ರವಾಗಿವೆ.


ಲೇಖಕಿ ಅಶ್ವಿನಿ ಅವರ ಬೆಸುಗೆ ಕಾದಂಬರಿ ಬೆಸುಗೆ ಎನ್ನುವ ಹೆಸರಿನಲ್ಲಿಯೇ ಚಲನಚಿತ್ರವಾಗಿದೆ.


ವೇಣುಮಾಧವ ವಿದೇಶದಿಂದ ಮನೆಗೆ ಹಿಂದಿರುಗುತ್ತಿದ್ದ. ಆತ ಪ್ರೊಫೆಸರ್ ಆದರೂ.. ವಿದೇಶದಲ್ಲಿಯೇ ಇದ್ದರೂ.. ಮಣ್ಣಿನ ಗುಣವನ್ನು, ತಾಯಿ-ತಂದೆಯರ ಮಮತೆಯನ್ನು ಹಾಗೂ ತನ್ನ ಸಾತ್ವಿಕ ಬದುಕನ್ನು ಮರೆತಿರಲಿಲ್ಲ . ತಂದೆ ಅನಂತರಾಯರು ಹಾಗೂ ತಾಯಿ ನಾಗಮ್ಮನವರು ಮಗನನ್ನು ವಿಮಾನ ನಿಲ್ದಾಣದಲ್ಲಿಯೇ ಬರಮಾಡಿಕೊಳ್ಳಲು ಹೋಗಲಿಲ್ಲ. ಅದಕ್ಕೆ ಕಾರಣ ಅನಂತರಾಯರ ಅನಾರೋಗ್ಯ. ಅವರನ್ನು ಬರ ಮಾಡಿಕೊಂಡದ್ದು ಅವರ ಅತ್ತೆ ಯಶೋದಮ್ಮನವರ ಮಗ ಅಂದರೆ ಅನಂತ ರಾಯರ ಅಕ್ಕನ ಮಗ ಬಾಲು ಮತ್ತು ಆನಂತರಾಯರು ಕಟ್ಟಿಸಿದ್ದ ಬಡ ಹುಡುಗರಿಗಾಗಿಯೇ ಇದ್ದ ಹಾಸ್ಟೆಲ್ ನ ಮುಖ್ಯ ವಿದ್ಯಾರ್ಥಿ ಹಾಗೂ ಮನೆಗೂ ಹತ್ತಿರವಾಗಿದ್ದ ವಾಸು ಮತ್ತು  ಕಾಲೇಜಿನ ಸಿಬ್ಬಂದಿ ವರ್ಗದವರು. 


ರಾಯರು ಹಾಗೂ ನಾಗಮ್ಮನವರ ಜೊತೆಗೆ ಸುಮಾ ಒಬ್ಬಳೇ ಮನೆಯಲ್ಲಿ ಉಳಿದವಳು. ಸುಮಾ ಅದೇ ಕಾಲೇಜಿನಲ್ಲಿ ಫೈನಲ್ ಇಯರ್ ಬಿ.ಎಸ್ಸಿ ಓದುತ್ತಿದ್ದಳು. ವೇಣು ಮಾಧವ ಹಾಗೆ ನೋಡಿದರೆ ಅವಳಿಗೆ ಪ್ರೊಫೆಸರ್. ಸಹ ಬಡ ಹುಡುಗಿ ಹಾಗೂ ಅನಾಥೆಯಾಗಿದ್ದ ಆಕೆಗೆ ಈಗ ರಾಯರ ಮನೆಯಲ್ಲಿ ವಾಸ. ಆದರೆ, ಎಂದಿಗೂ ಆಕೆ ಅದನ್ನು ದುರುಪಯೋಗಪಡಿಸಿಕೊಳ್ಳದೆ.. ಅವರ ಅಂತಸ್ತಿಗೆ ಸರಿ ಹೋಗಬೇಕೆಂಬ ಅಥವಾ ಹಣಕ್ಕೆ ಆಸೆ ಪಡದೆ ಅವಳ ಸ್ಥಾನಮಾನವನ್ನು ಅರಿತು ತನ್ನ ಇತಿಮಿತಿಯಲ್ಲಿ ನಡೆದುಕೊಳ್ಳುತ್ತಿದ್ದಳು. ಮನೆಯಲ್ಲಿ ಹೆಚ್ಚಿನ ಕೆಲಸವನ್ನು ಅವಳು ತಾನಾಗಿಯೇ ಮಾಡುತ್ತಿದ್ದಳು. ಸ್ವಾಭಿಮಾನಿ. ತೋಟದ ಕೆಲಸ, ರಾಯರ ಕಛೇರಿಯ ಲೆಕ್ಕ-ಪತ್ರ ನೋಡಿಕೊಳ್ಳುವ ಕೆಲಸ, ಅಡುಗೆ ಮನೆಯ ಕೆಲವು ಕೆಲಸ ಹೀಗೆ.. ಇದಕ್ಕಾಗಿಯಾದರೂ ಹಣ ಕೊಡುವೆನೆಂದ ರಾಯರಿಗೆ.. ಆ ಹಣ ಈಗ ತನಗೆ ಬೇಡವೆಂದು, ಅದೇ ಹಣವನ್ನು ಬ್ಯಾಂಕಿನಲ್ಲಿ ತನ್ನ ಹೆಸರಿನಲ್ಲಿ ಅಕೌಂಟ್ ನಲ್ಲಿ ಹಾಕಿದರೆ ಮುಂದೆ ಪ್ರಯೋಜನಕ್ಕೆ ಬರುತ್ತದೆ ಎಂದು ಹೇಳಿದಳು.


ಅನಂತರ ಮುದ್ದಿನ ಮಗನಾಗಿ ವೇಣು ಎಂದೂ.. ನಾಗಮ್ಮನವರ ಮುದ್ದಿನ ಮಗನಾಗಿ ಮಾಧವ ಎಂದೂ ಕರೆಸಿಕೊಳ್ಳುತ್ತಿದ್ದ. ಹಾಗಾಗಿ, ಎರಡೂ ಹೆಸರು ಸೇರಿ, ಆತ ವೇಣು ಮಾಧವನಾಗಿದ್ದ. ವೇಣು ಎಂಬ ಹೆಸರು ಕರೆಯುವುದಕ್ಕೂ.. ರಾಯರು ಅಷ್ಟು ದಾನ, ಧರ್ಮ ಮಾಡುವುದಕ್ಕೂ.. ಅನಂತರಾಯರ ಹಿಂದಿನ ಬದುಕಿನ ನೆನಪೊಂದು ಕಾರಣವಾಗಿತ್ತು. ಅದೇ ಮಗಳು ಹುಟ್ಟಿದರೆ ಆಕೆಗೆ ವಾಣಿ ಎಂದೇ ಹೆಸರಿಡುತ್ತಿದ್ದರು. ಎಲ್ಲೆಡೆಯೂ ವಾಣಿ ಎಂಬ ಹೆಸರಿನಲ್ಲಿಯೇ ಅವರು ತಮ್ಮ ಸತ್ಕಾರ್ಯಗಳನ್ನು ಮಾಡುತ್ತಿದ್ದರು. ಅದಕ್ಕೆ ಕಾರಣವೇನೆಂದು ನೀವು ಕಾದಂಬರಿಯನ್ನೇ ಓದಿ ತಿಳಿಯಿರಿ. 


ವೇಣು ಮಾಧವ ಮನೆಗೆ ಬಂದ ಮೇಲೆ ಅವಳು ಬಾಲುವಿನ ಪತ್ನಿ ಇರಬಹುದು ಎಂದು ತಪ್ಪು ತಿಳಿದಿದ್ದ.  ಅದಕ್ಕೆ ಕಾರಣ ಬಾಲು ತೋರುವ ದರ್ಪ. ಅನಾಥ ಹುಡುಗಿ ಎಂಬ ಕಾರಣಕ್ಕೆ ಬಾಲುವಿಗೆ ಸುಮಳನ್ನು ಕಂಡರೆ ಅಷ್ಟಕಷ್ಟೇ.. ಆದರೆ, ವಾಸುವಿಗೆ ಸುಮ ಎಂದರೆ ಒಂದು ರೀತಿಯ ಅಕ್ಕರೆ, ಮಮತೆ. ಏಕೆಂದರೆ, ಅವನು ಬಡ ಹುಡುಗ ಜೊತೆಗೆ ಅನಾಥ. ಯಾವ ಹುಡುಗಿಯರೂ ಇಷ್ಟವಾಗದ ವೇಣುಮಾಧವನಿಗೆ ಸುಮ ಒಂದು ರೀತಿಯಲ್ಲಿ ಮನಸ್ಸು ತುಂಬಿದಳು ಎಂದರೂ ತಪ್ಪಾಗಲಾರದು. 


ನಾಗಮ್ಮನವರಿಗೆ ತಮ್ಮ ಮಗ ತಮ್ಮ ಅಂತಸ್ತಿಗೆ ಸರಿಯಾದ ಹುಡುಗಿಯನ್ನೇ ವಿವಾಹವಾಗಬೇಕೆಂದುಕೊಂಡಿದ್ದರು. ಹಾಗಾಗಿ ತಮ್ಮ ಹತ್ತಿರದ ಸಂಬಂಧಿಯಾಗಿದ್ದ ಅಣ್ಣನ ಮಗಳು ಚಂಪಾಳನ್ನೇ ತಮ್ಮ ಸೊಸೆಯೆಂದು ಆರಿಸಿದ್ದರು. ಆದರೆ, ವೇಣುವಿಗೆ ಅದು ಇಷ್ಟವಿರಲಿಲ್ಲ. ಹಾಗೆಂದು ಆಗಲೇ ಪಟ್ ಎಂದು ಹೇಳಿ ತನ್ನ ತಾಯಿಯ ಮನಸ್ಸನ್ನು ನೋಯಿಸಲು ಸಿದ್ಧವಿರಲಿಲ್ಲ. ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಮಾಧುರಿ ಸಹಾ ಒಂದು ಕಾಲದಲ್ಲಿ ವೇಣುವನ್ನು ಪ್ರೀತಿಸಿದ್ದಳು. ವಿದೇಶದಲ್ಲಿ ಇದ್ದಾಗ ಲಿಸ್ ಸಹ ವೇಣುವನ್ನು ಪ್ರೀತಿಸಿದ್ದಳು.

 ಆದರೆ, ವೇಣುವಿಗೆ ಯಾರ ಬಳಿಯೂ ಅಂತಹ ಭಾವನೆ ಮೂಡಲಿಲ್ಲ.

 ಅದಕ್ಕೆ ಕಾರಣವೇ ಬೇರೆ ಇತ್ತು. 


ಹೀಗೆ ದಿನಗಳು ಉರುಳುತ್ತಾ ಹೋದಂತೆ.. ವೇಣುವಿಗೆ ಸುಮಾ ಎಂದರೆ ಅಚ್ಚುಮೆಚ್ಚು, ಅವಳೇ ತನ್ನ ಲವಲವಿಕೆ ಎಂಬಂತಾಯಿತು. ಆದರೆ, ಸುಮಾ ತನ್ನ ಅಂತಸ್ತಿಗೆ ತಕ್ಕದಾಗಿ ನಡೆದುಕೊಳ್ಳುತ್ತಿದ್ದಳು. ವೇಣುವನ್ನು ಸ್ವಲ್ಪ ಅಂತರದಲ್ಲಿಯೇ ಇರಿಸಿದ್ದಳು. ಆದ್ದರಿಂದ, ವೇಣುವಿಗೆ ಅದು ಸಿಟ್ಟು ತರಿಸುತ್ತಿತ್ತು. ಮೊದಲಿಗೆ ವಾಸು ಹಾಗೂ ಸುಮ ಕುರಿತು ತಪ್ಪು ಭಾವನೆ ಮೂಡಿಸಿಕೊಂಡಿದ್ದ. ನಂತರದಲ್ಲಿ ಸುಮಾಳ ಗೆಳತಿ ಊರ್ಮಿಳಾ ಹಾಗೂ ದೇವದಾಸ್ ನಡುವೆ ಏನೋ ಮನಸ್ತಾಪ ಉಂಟಾದಾಗ ಅದನ್ನು ಸರಿ ಮಾಡಲು ಹೋದ ಸುಮಾಳನ್ನು ತಪ್ಪು ಸಂದರ್ಭದಲ್ಲಿ ನೋಡಿ, ತಪ್ಪಾಗಿ ತಿಳಿದು ಅವಳ ಮೇಲೆ ತಪ್ಪು ಭಾವನೆ ಮೂಡಿಸಿಕೊಂಡಿದ್ದ. ಆಗೆಲ್ಲಾ.. ಚಂಪಾ ವೇಣುವಿನ ಜೊತೆಗಿದ್ದಳು. ಹಾಗಾಗಿ, ಸುಮಾಳಿಗೂ.. ವೇಣು ಚಂಪಾಳನ್ನು ಮದುವೆಯಾಗುವಾತ ಎನ್ನುವ ಭಾವನೆ ಇತ್ತು. ಆದರೆ, ಚಂಪಾಳಿಗೆ ಸರಿಯಾದ ಜೋಡಿಯಾಗಿದ್ದು ಬಾಲು. ನಂತರ ವೇಣುವೇ ಮುಂದೆ ನಿಂತು ಅವರಿಬ್ಬರ ಮದುವೆ ಮಾಡಿಸಿದ ಸಹಾ. 


ಆಗಾಗ ನಾಗಮ್ಮನವರಿಗೆ ವೇಣು, ಸುಮಾಳ ಜೊತೆ ಸಲುಗೆಯಿಂದಿರುವುದನ್ನು ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ಆಗೆಲ್ಲಾ, ಸುಮಾಳನ್ನು ಕರೆದು ಕೆಲವು ಬಾರಿ ಬುದ್ಧಿ ಹೇಳಿದ್ದೂ ಇದೆ. ಆದರೆ, ರಾಯರಿಗೆ ಆ ರೀತಿಯ ಯಾವ ಮನೋಭಾವವೂ ಇರಲಿಲ್ಲ. ಮಗ ಮದುವೆಯಾದರೆ ಸಾಕು.. ಸುಮಾಳೇ ತಮ್ಮ ಮನೆ ಸೊಸೆಯಾದರೆ ಎನ್ನುವ ಆಲೋಚನೆ ಮೂಡದಿರಲಿಲ್ಲ. ನಾಗಮ್ಮನವರಿಗೆ ಸುಮ ತಮ್ಮ ಮನೆಯ ಮಗಳಾಗಿ ಒಪ್ಪಿಗೆ. ಆದರೆ ಸೊಸೆಯಾಗಿ ಅಲ್ಲ. 


ಸುಮಾಳಿಗೂ ಈ ಮದುವೆಗೆ ಒಪ್ಪಿಗೆ ಇರಲಿಲ್ಲ. ಏಕೆಂದರೆ, ಆಕೆ ವಿಧವೆಯಾಗಿದ್ದವಳು. ವೇಣುವಿಗೆ ಕಾಡುತ್ತಿದ್ದ ಪುಟ್ಟಿ ಬೇರಾರೂ ಅಲ್ಲದೆ ಸುಮಾಳೇ ಆಗಿದ್ದಳು. ಆ ಸಂದರ್ಭದಲ್ಲಿ ಅವರ ಬದುಕಿನಲ್ಲಿ ನಡೆದಿದ್ದ ಹಿಂದಿನ ಘಟನೆ ಏನು? ಕಾದಂಬರಿ ಓದಿ ತಿಳಿಯಿರಿ. 


ಪುಟ್ಟಿ ಮತ್ತು ವೇಣುವೇ..  ಸುಮಾ ಮತ್ತು ವೇಣುವಾಗಿ ವಿವಾಹವಾಗಲು ನಿಶ್ಚಯವಾದರೂ ಸುಮ ಸಂಪೂರ್ಣ ಮನಸ್ಸಿನಿಂದ ಒಪ್ಪಿರಲಿಲ್ಲ. ಏಕೆಂದರೆ, ಈಗಲೂ ನಾಗಮ್ಮನವರು ಆಕೆ ತಮ್ಮ ಅಂತಸ್ತಿಗೆ ಸರಿ ಹೊಂದುವುದಿಲ್ಲವೆಂದು ಭಾವಿಸಿರುವಂತಿತ್ತು. ಆದರೆ, ನಾಗಮ್ಮನವರೇ ಅದೆಲ್ಲವನ್ನೂ ತೊಡೆದು ಹಾಕಿ, ಅವಳನ್ನು ಸಂಪೂರ್ಣ ಮನಸ್ಸಿನಿಂದ ತಮ್ಮ ಸೊಸೆ ಎಂದು ಒಪ್ಪಿಕೊಂಡರು.


ಕಾದಂಬರಿಯ ಪ್ರಕಾರ ನೋಡುವುದಾದರೆ.. ಬ್ರಹ್ಮ ಎಸೆದ ಬೆಸುಗೆ ಎಷ್ಟೋ ಕಾಲದ ನಂತರ ಬಿಟ್ಟು ಹೋದರೂ. ಮತ್ತೆ ಜೊತೆಗೂಡುತ್ತದೆ. ಅಷ್ಟೇ ಅಲ್ಲದೆ, ಬೆಸುಗೆ ಎಂದರೆ ಕೇವಲ ಗಂಡು-ಹೆಣ್ಣಿನ ಮೂಲಕ ಗಂಡ-ಹೆಂಡತಿಯ ಬೆಸುಗೆಯಲ್ಲ. ಬದಲಾಗಿ ಮನೆ ,ಮನಸುಗಳೆಲ್ಲವನ್ನು ಗೆದ್ದು ಎಲ್ಲರ ನಡುವಿನ ಸಂಬಂಧ ಬೆಸೆಯಬೇಕು. 


ಚಲನಚಿತ್ರದಲ್ಲಿ ಕೊಂಚ ಬದಲಾವಣೆಗಳಿದ್ದರೂ.. ಮೂಲ ಕತೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಆದರೆ, ವಾಣಿಯ ಪ್ರಸಂಗವನ್ನೇ ಇಲ್ಲಿ ಕೈ ಬಿಡಲಾಗಿದೆ. 


ಕಾದಂಬರಿಯಲ್ಲಿ ಹೆಚ್ಚು-ಕಡಿಮೆ ಅರ್ಧದವರೆಗೂ, ಪುಟ್ಟಿಯ ಕುರಿತಾದ ಪ್ರಸ್ತಾಪವೇ ಇಲ್ಲ. ಆದರೆ, ಚಲನಚಿತ್ರದಲ್ಲಿ ಆರಂಭದಲ್ಲಿಯೇ ಲಿಸ್ ಬಳಿ ವೇಣು ಪುಟ್ಟಿಯ ಕುರಿತಾಗಿ ಕನವರಿಸುವುದು ಹಾಗೂ ಪುಟ್ಟಿಯ ಕುರಿತಾದ ಭಾವನೆಗಳನ್ನು ಹೇಳಿಕೊಳ್ಳುವುದರಿಂದ ಈತನ ಜೀವನದಲ್ಲಿ ಏನೋ ಘಟನೆ ನಡೆದಿರಬೇಕು ಎನ್ನುವ ಕುತೂಹಲದಲ್ಲಿಯೇ ಚಲನಚಿತ್ರ ಆರಂಭವಾಗುತ್ತದೆ. 


 ಕಾದಂಬರಿಯಲ್ಲಿ ವೇಣು ಎಲ್ಲಿಯೂ ಸುಮಾಳಿಗೆ ಮೊದಲು ನೋಡಿದಾಗಲೇ ಪ್ರೇಮ ನಿವೇದನೆ ಮಾಡುವುದಿಲ್ಲ. ಆದರೆ, ಚಲನಚಿತ್ರದಲ್ಲಿ ವೇಣು ಆಕೆಗೆ ಡೈರೆಕ್ಟ್ ಆಗಿಯೇ ಪ್ರೇಮ ನಿವೇದನೆ ಮಾಡುವ ದೃಶ್ಯವಿದೆ. 


ಊರ್ಮಿಳಾ ಹಾಗೂ ದೇವದಾಸರ ಪ್ರಸಂಗ ಹಾಗೂ ಸುಮಾಳ ಬದುಕಿನಲ್ಲಿ ಊರ್ಮಿಳೆಯ ಪಾತ್ರ ಕಾದಂಬರಿಯಲ್ಲಿ ದೊಡ್ಡದಿದ್ದರೂ.. ಇಲ್ಲಿ ಊರ್ಮಿಳೆಯ ಪಾತ್ರ ಅಷ್ಟಾಗಿ ಕಾಣುವುದಿಲ್ಲ. ಬಾಲು ಅಲ್ಲಿ ದರ್ಪ ತೋರುವವನಾದರೆ, ಇಲ್ಲಿ ಹೊಂದಿಕೊಂಡು ಹೋಗುವ ಸ್ವಭಾವದವನು. ಕಾದಂಬರಿಯಲ್ಲಿ ವಾಸುವಿನ ಸ್ವಭಾವ ಇಲ್ಲಿ ಬಾಲುವಿನ ಸ್ವಭಾವಕ್ಕೆ ತಾಳೆಯಾಗುತ್ತದೆ. ವಾಸುವಿನ ಕುರಿತಾಗಿ ತಪ್ಪು ಕಲ್ಪನೆ ಮೂಡಿಸಿಕೊಂಡಿದ್ದಾಗ.. ಆತನೇ ತಮ್ಮದು ಅಣ್ಣ-ತಂಗಿಯ ಸಂಬಂಧ ಎಂದು ಹೇಳಿ ಅದನ್ನು ಹೋಗಲಾಡಿಸುವ ಪ್ರಸಂಗ ಒಂದು ಚಲನಚಿತ್ರದಲ್ಲಿದೆ .


ಚಲನಚಿತ್ರದ ಅಂತ್ಯ ಕೊಂಚ ಭಿನ್ನವಾಗಿದೆ. ಮನೆಯಲ್ಲಿ ಎಲ್ಲರೂ ಮದುವೆಗೆ ಒಪ್ಪಿದಾಗಲೂ ಸುಮಾ ತನ್ನ ಹಿಂದಿನ ಬದುಕಿನ ಕುರಿತು ಏನನ್ನು ಹೇಳಿಕೊಂಡಿರುವುದಿಲ್ಲ. ಅವಳು ಮದುವೆಗೆ ಒಪ್ಪಿಗೆ ಕೊಟ್ಟಿದ್ದಾಳೆ ಎಂದೇ ಎಲ್ಲರೂ ಭಾವಿಸಿರುವಾಗ, ಆಕೆ ಮದುವೆಯ ದಿನವೇ.. ಇನ್ನೇನು ತಾಳಿ ಕಟ್ಟುವ ಸಂಧರ್ಭದಲ್ಲಿ.. ತಾಳಿಯನ್ನು ನೋಡಿದಾಗ ತಾನು ವಿಧವೆ ಎನ್ನುವ ಸತ್ಯ ಹೊರಗೆಡವುತ್ತಾಳೆ. ಒಟ್ಟಿನಲ್ಲಿ ಎಲ್ಲವೂ ಸುಖಾಂತ್ಯವಾಗುತ್ತದೆ. ಬ್ರಹ್ಮ ಬೆಸೆದ ಬೆಸುಗೆಯಂತೆ ನಂಟು ಸೇರಿದ್ದು, ಆ ಬೆಸುಗೆ ಎಂದಿಗೂ ಕಳಚಲಾರದು ಎನ್ನುವ ಭಾವ ಮೂಡಿಸುತ್ತದೆ. ನಿರ್ಮಲ ಪ್ರೇಮ, ಪ್ರೀತಿಯ ಬೆಸುಗೆ ಹೆಚ್ಚಾಗಿ ಕಾಣುತ್ತದೆ.


ರಾಯರ ಮನೆಯಲ್ಲಿರುವ ರಂಗ ತನ್ನ ತಿಳಿ ಹಾಸ್ಯದ ಮೂಲಕ ಆಗಾಗ ನಗೆಯ ಕಚಗುಳಿ ಇಡುತ್ತಾನೆ. 


ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಮೌಲ್ಯಗಳು ಬದಲಾಗಬಹುದು.. ಅಥವಾ ಸಿರಿವಂತಿಕೆ ,ವಿದೇಶಕ್ಕೆ ಹೋಗಿ ಬಂದ ಹಮ್ಮು, ಓದಿರುವ ಗರ್ವ, ಇದೆಲ್ಲವೂ ಬರಬಹುದು. ಆದರೆ, ರಾಯರಷ್ಟೇ ಸರಳತೆಯಿಂದ ವೇಣು ಮಾಧವನೂ ಕಾಣುತ್ತಾನೆ. ವೇಣು ಮಾಧವನ ಪಾತ್ರದಲ್ಲಿ ಶ್ರೀನಾಥ್ ರವರು.. ಇದೆಲ್ಲದರ ಗಂಭೀರತೆಯ ಜೊತೆಗೆ ಕೊಂಚ ತುಂಟತನ, ಪ್ರೀತಿಗಾಗಿ ಅಸೂಯೆ ತೋರುವ ಭಾವ ಎಲ್ಲವೂ ಮಿಳಿತವಾಗಿ ಸೊಗಸಾಗಿ ಅಭಿನಯಿಸಿದ್ದಾರೆ. 


ಕಾದಂಬರಿಯಲ್ಲಿ ಕೆಲವೊಮ್ಮೆ ನಾಯಕಿಯ ವರ್ಣನೆ ಮಾಡುವಾಗ ಆಕೆಯ ಮುಖದ ಪಾರ್ಶ್ವವನ್ನು ತೋರಿಸುತ್ತಾರೆ. ಆ ಪಾತ್ರಕ್ಕೆ ಮಂಜುಳಾರವರದ್ದು ಬಹಳ ಹೊಂದಿಕೆಯಾಗುವ ಮುಖ ಎಂದೆನಿಸಿತು. ಅಲ್ಲದೆ ಸೌಮ್ಯ,ಸರಳತೆ, ತನ್ನತನವನ್ನು ಉಳಿಸಿಕೊಂಡು ಯಾರಿಗೂ ಹೊರೆಯಾಗದಂತೆ, ವಾತ್ಸಲ್ಯದಿಂದ, ಯಾರ ಮನಸ್ಸಿಗೂ ನೋವು ಮಾಡದಂತೆ ಹೊಂದಿಕೊಂಡುವ ಹೋಗುವ ಹುಡುಗಿಯ ಪಾತ್ರಕ್ಕೆ ಮಂಜುಳಾ ಜೀವ ತುಂಬಿದ್ದಾರೆ.  


"ಬೆಸುಗೆ ಬೆಸುಗೆ", "ವಸಂತ ಬರೆದನು ಒಲವಿನ ಓಲೆ",  "ಯಾವ ಹೂವು ಯಾರ ಮುಡಿಗೊ" ಹೀಗೆ ಎವರ್ ಗ್ರೀನ್ ಹಿಟ್ ಹಾಡುಗಳು ಈ ಚಿತ್ರದಲ್ಲಿವೆ.


ಕಾದಂಬರಿ ಹಾಗೂ ಚಲನಚಿತ್ರವೆರಡೂ ಇಷ್ಟವಾದವು. ಚಲನಚಿತ್ರಕ್ಕಿಂತ ಕಾದಂಬರಿಯೇ ಹೆಚ್ಚು ಇಷ್ಟವಾಯಿತು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ