ಕಳ್ಳರು ತಪ್ಪು/ಅಪರಾಧ ಮಾಡಿದಾಗ ಒಂದಲ್ಲಾ ಒಂದು ಸುಳಿವನ್ನು ಬಿಟ್ಟೇ ಇರುತ್ತಾರಂತೆ. ಪತ್ತೇದಾರಿ ಕತೆಗಳಲ್ಲಿ ನೀವು ಓದಿರಬಹುದು. ಆ ಸುಳಿವಿನ ಜಾಡನ್ನು ಹಿಡಿದು ಪೋಲೀಸರು ಕಳ್ಳರನ್ನು ಹಿಡಿಯುವ ಬಗೆಯನ್ನು. ಅಥವಾ ನಾಯಿ ವಾಸನೆಯಿಂದ ಜಾಡು ಪತ್ತೆ ಮಾಡುವುದನ್ನು. ಮಳೆ ಬಂದು ನಿಂತ ಹಾದಿಯ ಮೇಲೆ ಮೂಡಿದ್ದ ನಿಚ್ಚಳ ಹೆಜ್ಜೆಗಳನ್ನು ಹಿಂಬಾಲಿಸಿ ಹೋಗಿ ಪತ್ತೆ ಮಾಡಿದ ಹಾಗೆ.. ಈಗ ಪತ್ತೆ ಮಾಡಲು ಈ ರೀತಿಯ ಕಳ್ಳತನಗಳು ವಿರಳ. ಈಗ ಕೂತ ಕಡೆಯಿಂದಲೇ ಕಳ್ಳತನ ಮಾಡುವಷ್ಟು ಟೆಕ್ನಾಲಜಿ ಬೆಳೆದಿದೆ. ಹಾಗೆಂದು ಹೆದರಿ ನಾನು ಡಿಜಿಟಲ್ ನಲ್ಲಿ ನನ್ನ ಗುರುತು ಬಿಟ್ಟು ಕೊಡುವುದೇ ಇಲ್ಲ.. ನಾನು ಆನ್ಲೈನ್ ಟ್ರಾನ್ಸ್ಯಾಕ್ಷನ್ ಮಾಡುವುದೇ ಇಲ್ಲ ಎನ್ನುವುದು ನಮ್ಮ ಮೂರ್ಖತನವಾದೀತು ಅಷ್ಟೇ.. ಯಾರು ಎಷ್ಟೇ ಜಾಣ್ಮೆಯಿಂದ ಟೆಕ್ನಾಲಜಿ ಬಳಸಿದರೂ ಇಲ್ಲಿ ಅವರ ಹೆಜ್ಜೆ ಗುರುತು ಅಂದರೆ ಡಿಜಿಟಲ್ ಫೂಟ್ ಪ್ರಿಂಟ್ ಮೂಡಿಯೇ ಇರುತ್ತದೆ.
ಡಿಜಿಟಲ್ ಫೂಟ್ ಪ್ರಿಂಟ್ ಎಂದರೆ ಮತ್ತೇನಲ್ಲ.. ಆನ್ಲೈನ್ ನಲ್ಲಿ ಒಬ್ಬರ ಗುರುತಿಸಬಹುದಾದ ಚಟುವಟಿಕೆ, ಕ್ರಿಯೆ, ಸಂವಹನ ಅಥವಾ ಅವರ ಕೊಡುಗೆ. ಉದಾಹರಣೆಗೆ ನಾವು ಗೂಗಲ್ ಮ್ಯಾಪ್ ಬಳಸಿ ಹುಡುಕುತ್ತಾ ಅದರ ಸಹಾಯದಿಂದ ಸೇರಬೇಕಾದ ಸ್ಥಳ ತಲುಪಿ ನಂತರ ಅದಕ್ಕೆ ರಿವ್ಯೂ ಕೊಡುತ್ತೇವಲ್ಲ ಇಲ್ಲಿ ಹೆಚ್ಚು ಕಡಿಮೆ ಎಲ್ಲವೂ ಡಿಜಿಟಲ್ ಫೂಟ್ ಪ್ರಿಂಟ್.
ಡಿಜಿಟಲ್ ಫೂಟ್ ಪ್ರಿಂಟ್ ನಲ್ಲಿ ಎರಡು ರೀತಿ ಇದೆ. ಆಕ್ಟೀವ್ ಮತ್ತು ಪ್ಯಾಸೀವ್. ಆಕ್ಟೀವ್ ಫೂಟ್ ಪ್ರಿಂಟ್ ನಲ್ಲಿ ನಾವೇ ನಮ್ಮ ಮಾಹಿತಿಯನ್ನು ನೀಡುತ್ತೇವೆ. ಉದಾಹರಣೆಗೆ ಕೆಲವರು ಫೇಸ್ಬುಕ್ನಲ್ಲಿ ತಮ್ಮ ಹೆಸರು, ವಿಳಾಸ, ಮೇಲ್ ಐಡಿ, ಫೋನ್ ನಂಬರ್, ನಿಕ್ ನೇಮ್, ಫ್ಯಾಮಿಲಿ ಮೆಂಬರ್ಸ್ ಎಲ್ಲರ ಕುರಿತು ಮಾಹಿತಿ ಹಂಚಿಕೊಂಡಿರುತ್ತಾರೆ. ಅವರಿಗೆ ಮುಚ್ಚು-ಮರೆ ಬೇಡವಾಗಿರುತ್ತದೆ. ಇನ್ನು ಕೆಲವು ಸೆಲಬ್ರಿಟಿಗಳ ವಿಷಯದಲ್ಲಿ ಇದು ಹೆಚ್ಚು ಕಂಡುಬರುತ್ತಿಲ್ಲ.. ಅವರು ಹೆಚ್ಚೆಚ್ಚಾಗಿ ತಮ್ಮ ಮಾಹಿತಿಗಳನ್ನು ಗೌಪ್ಯವಾಗಿಯೇ ಇಡಲು ಬಳಸುತ್ತಾರೆ. ಆಗ ಇವರ ಹಿಂದೆ ಬೀಳುವ ಪ್ಯಾಪರಾಜಿಗಳು ಅವರ ಅನುಮತಿ ಇಲ್ಲದೇ ಅವರ ಮಾಹಿತಿಯನ್ನು ತಿಳಿದುಕೊಂಡು ಬಹಿರಂಗ ಮಾಡುತ್ತಾರೆ. ಅಥವಾ ಮತ್ತಾವುದೋ ಸಮಯದಲ್ಲಿ ಬಳಸಿಕೊಳ್ಳುತ್ತಾರೆ. ಇದು ಪ್ಯಾಸೀವ್ ಫೂಟ್ ಪ್ರಿಂಟ್ ಗೆ ಉದಾಹರಣೆ. ಇದನ್ನು ಡಿಜಿಟಲ್ ರೂಪದಲ್ಲಿ ನೋಡುವುದಾದರೆ ನಮ್ಮ ಬ್ರೌಸಿಂಗ್ ಆಧಾರದ ಮೇಲೆ ಜಾಹೀರಾತು ನೀಡುವುದು, ಉದ್ಯೋಗದಾತರು ಆನ್ಲೈನ್ ನಲ್ಲಿ ಪರಿಶೀಲಿಸಿದ ನಂತರ ಅಭ್ಯರ್ಥಿಗೆ ಉದ್ಯೋಗ ನೀಡುವುದು. ನಮ್ಮ ಅನುಮತಿಯಿಲ್ಲದೆ ನಮ್ಮ ಸರ್ಚ್ ಇಂಜಿನ್ ಮೇಲೆ ಕಣ್ಣಿಡುವುದು ಇವೆಲ್ಲವೂ ಪ್ಯಾಸೀವ್ ಫೂಟ್ ಪ್ರಿಂಟ್ ಗಳೇ..ಕುಕೀಸ್ ಮೂಲಕ ನಾವು ಒಂದು ವೆಬ್ಸೈಟ್ ಗೆ ಭೇಟಿ ನೀಡಿದಾಗ ಅವರು ನಾವು ಹಿಂದೆ ಹುದುಕಿದ್ದ ವೆಬ್ಸೈಟ್ ಯಾವುದು ಹಾಗೂ ಮುಂದೆ ಹುಡುಕುತ್ತಿರುವುದು ಯಾವುದು ಎಂಬುದನ್ನು ಕೂಡಾ ತಿಳಿಯುತ್ತಾರೆ.
ಇದರಿಂದ ಗೌಪ್ಯತೆಗೆ ಧಕ್ಕೆ ಬರುತ್ತದೆ. 1999 ರಲ್ಲಿ ಈ ಕುರಿತು ಚರ್ಚೆಯಾದಾಗ ಸನ್ ಮೈಕ್ರೋ ಸಿಸ್ಟಮ್ ನ ಸಿ.ಈ.ಓ ಮ್ಯಾಕ್ ನೀಲಿ ಹೇಳುತ್ತಾರೆ. ಈಗ ಜೀರೋ ಇಂಟರ್ನೆಟ್ ಗೌಪ್ಯತೆ ಇದೆ ಎಂದು. ಅದಕ್ಕಾಗಿ ಏನು ಮಾಡಬೇಕೆಂದರೆ "ಜಸ್ಟ್ ಗೆಟ್ ಓವರ್ ಇಟ್" ಎಂದು ಬಿಡುತ್ತಾರೆ. "ಗೆಟ್ ಓವರ್ ಇಟ್" ಎನ್ನುವುದು ಒಂದು ರೀತಿಯ ಘೋಷಣೆಯಂತಾಗಿಬಿಡುತ್ತದೆ. ಕುಕೀಸ್ ಮೂಲಕ ನಾವು ಒಂದು ವೆಬ್ಸೈಟ್ ಗೆ ಭೇಟಿ ನೀಡಿದಾಗ ಅವರು ನಾವು ಹಿಂದೆ ಹುದುಕಿದ್ದ ವೆಬ್ಸೈಟ್ ಯಾವುದು ಹಾಗೂ ಮುಂದೆ ಹುಡುಕುತ್ತಿರುವುದು ಯಾವುದು ಎಂಬುದನ್ನು ಕೂಡಾ ತಿಳಿಯುತ್ತಾರೆ.
ಈ ಗೌಪ್ಯತೆ ಉಲ್ಲಂಘನೆಯಾದಾಗ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತವೆ ಗೊತ್ತೇ..?? ನಮ್ಮ ಸುತ್ತಮುತ್ತಲಿನವರಿಗೆ ತಿಳಿಯದ ಮಾಹಿತಿಗಳು ಯಾರೋ ಅಪರಿಚಿತರಿಗೆ ತಿಳಿದರೆ ಹೇಗಿರುತ್ತದೆ ?
ಫೇಸ್ಬುಕ್ ಹಾಗೂ ಕೇಂಬ್ರಿಡ್ಜ್ ಯೂನಿವರ್ಸಿಟಿ ಕುರಿತ ಡೇಟಾ ಉಲ್ಲಂಘನೆ ಪ್ರಕರಣದ ಕುರಿತು ನೀವು ಈಗಾಗಲೇ 'ಟೆಕ್ -ಟಾಕ್'ನಲ್ಲಿಯೇ ಓದಿದ್ದೀರಿ.
ಕೆನಡಾದ ಪ್ರಜೆ ಎಲ್ಲೆನ್ ರಿಚರ್ಡ್ ಸನ್ ಅಮೆರಿಕಾಕ್ಕೆ ಹೋಗಲು ಕೆನಡಾದ ಗಡಿ ದಾಟಲು ಪ್ರಯತ್ನ ಮಾಡುತ್ತಾಳೆ. ಆದರೆ, ಅಮೆರಿಕಾದ ಭದ್ರತಾ ಪಡೆ ಅವಳಿಗೆ ಅದಕ್ಕೆ ಅವಕಾಶ ನೀಡುವುದಿಲ್ಲ. ಆದರೆ, ಅವಳು ಅದೇ ಮೊದಲ ಬಾರಿಗೆ ಗಡಿ ದಾಟಿ ಅಮೆರಿಕಾಕ್ಕೆ ಹೋಗುತ್ತಿದ್ದುದಲ್ಲ. ಆದರೆ , ಈ ಬಾರಿ ಅವಳಿಗೆ ಪ್ರವೇಶ ನಿರಾಕರಿಸಿದ್ದಕ್ಕೆ ಕಾರಣ ಗೊತ್ತೇ..?? ಅವಳ ಪ್ರೈವೇಟ್ ಕ್ಲಿನಿಕಲ್ ಹಿಸ್ಟರಿ ಕಾರಣದಿಂದ. ಅದೂ, ಪಕ್ಕದ ದೇಶದ ಭದ್ರತಾ ಅಧಿಕಾರಿಗಳ ಕೈಯ್ಯಲ್ಲಿ ಅವಳ ಪ್ರೈವೇಟ್ ಕ್ಲಿನಿಕಲ್ ಹಿಸ್ಟರಿ. ಅದು ಹೇಗೆ ಸಾಧ್ಯವಾಯಿತು ಗೊತ್ತೇ ?
2001 ರ ವಾಷಿಂಗ್ಟನ್ ನ ಭಯೋತ್ಪಾದಕ ದಾಳಿಯ ನಂತರ ಅಮೆರಿಕಾ ತನ್ನ ಪಕ್ಕದ ದೇಶವಾದ ಕೆನಡಾದಿಂದ ಡೇಟಾ ವಿನಿಮಯ ಮಾಡಿಕೊಳ್ಳುತ್ತಿತ್ತು. ಪಕ್ಕದ ದೇಶಗಳ ಮೈತ್ರಿ ಇದು ಬೇಕಾಗಿದ್ದಿರಬಹುದು.
ಎಲ್ಲೆನ್ ರಿಚರ್ಡ್ ಸನ್ ಖಿನ್ನತೆಯಿಂದ ಬಳಲುತ್ತಿದ್ದು 2 ಬಾರಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದಳು. ಆಗ ಅವಳ ಕುಟುಂಬದವರು 911 ಗೆ ಕರೆ ಮಾಡಿದ್ದರು. ಪೋಲೀಸ್ ಡೇಟಾದಲ್ಲಿ ಅವಳ ಹೆಸರು ಸ್ವಯಂಚಾಲಿತವಾಗಿ ರೆಕಾರ್ಡ್ ಆಗಿದ್ದು ಅವಳ ಮೆಡಿಕಲ್ ಹಿಸ್ಟರಿಯನ್ನು ಟ್ರ್ಯಾಕ್ ಮಾಡಲಾಗಿತ್ತು.
ಎಲ್ಲಿಂದ ಎಲ್ಲಿಗೆ ಬೇಕಾದರೂ ಲಿಂಕ್ ಇರಬಹುದು ಎನ್ನುತ್ತೀರಾ.. ಡಿಜಿಟಲ್ ಫೂಟ್ ಪ್ರಿಂಟ್ ಗಳ ಜಾಡು ಹಿಡಿದು ನಡೆದರೆ ಹೀಗೆಯೇ ಆಗುತ್ತದೆ.
ಇನ್ನು ಹೊಸ ವರ್ಷದ ಸಂದರ್ಭದಲ್ಲಿ ಅಥವಾ ಮತ್ತ್ಯಾವುದೋ ಸಂದರ್ಭದಲ್ಲಿ 'ಈ ವರ್ಷ ಹೆಚ್ಚು ಹುಡುಕಾಟ ನಡೆಸಿದ್ದು ಯಾರ ಬಗ್ಗೆ' ಎಂದೋ ಪೋರ್ನ್ ನೋಡುವವರು ಎಷ್ಟು ಜನ ಎಂದು ಮಾಹಿತಿ ನೀಡುತ್ತಲೋ ಅಥವಾ ಈ ಕುರಿತು ಹುಡುಕಾಟ ನಡೆಸಿದರೆ ಜೈಲು ಗ್ಯಾರಂಟಿ ಎಂಬರ್ಥದಲ್ಲಿಯೋ ಪೋಸ್ಟ್ ಹಾಕುತ್ತಾರಲ್ಲಾ.. ಹಾಗೆಯೇ, ಒಂದೆರಡು ವಿವಾದಾತ್ಮಕ ಕೀವರ್ಡ್ ಬಳಸಿದ್ದಕ್ಕೆ ಜರ್ಮನಿಯ ಸಾಮಾಜಿಕ ವಿಜ್ಞಾನಿ ಆಂಡ್ರೇಜ್ ಹೋಲ್ಮ್ ಸುತ್ತ ನ್ಯಾಯಾಂಗ ತನಿಖೆಯಾಗಿತ್ತು.
ನಮ್ಮ ಮಾಹಿತಿಯನ್ನು ಬಳಸಿಕೊಂಡು ನಮಗೆ ಅದರ ಆಧಾರದ ಮೇಲೆ ಮೇಲ್ ಅಥವಾ ಜಾಹೀರಾತು ಬರುತ್ತದಲ್ಲಾ.. ಆಫೀಸ್ ಮ್ಯಾಕ್ಸ್ ಎಂಬ ಕಂಪನಿ ಹಾಗೆ ಮಾಡಿದ್ದಕ್ಕೆ 2014 ರಲ್ಲಿ ಚಿಕಾಗೋದ ಪ್ರಜೆಯಾದ ಮೈಕ್ ಸೀಯೇಗೆ ಕ್ಷಮೆ ಕೇಳಿತು. ಕಾರಣವೇನು ಗೊತ್ತೇ ? ಆತನ ಮಗಳು ಆ ದಿನಾಂಕದಿಂದ ಒಂದು ವರ್ಷ ಹಿಂದೆ ಕಾರ್ ಆಕ್ಸಿಡೆಂಟ್ ನಲ್ಲಿ ತೀರಿ ಹೋಗಿದ್ದಳು. ಅದರ ಆಧಾರದ ಮೇಲೆ "ಡಾಟರ್ ಕಿಲ್ಡ್ ಇನ್ ಕಾರ್ ಕ್ರಾಶ್" ಎನ್ನುವ ಶೀರ್ಷಿಕೆ ಕೊಟ್ಟು ಆಫೀಸ್ ಮ್ಯಾಕ್ಸ್ ಆತನಿಗೊಂದು ಮೇಲ್ ಕಳುಹಿಸಿತ್ತು. ಅದಕ್ಕಾಗಿ ಸಿಟ್ಟಿಗೆದ್ದ ಆತ ತನ್ನ ವೈಯಕ್ತಿಕ ಮಾಹಿತಿಯನ್ನು ತನಗೇ ಗೊತ್ತಿಲ್ಲದ ಹಾಗೆ ಬಳಸುತ್ತಿದ್ದುದಕ್ಕಾಗಿ ಹಾಗೂ ಇಂತಹಾ ಸೂಕ್ಷ್ಮ ವಿಚಾರಗಳನ್ನು ಮೇಲ್ ಮಾಡುತ್ತಿದ್ದುದಕ್ಕಾಗಿ ಆಫೀಸ್ ಮ್ಯಾಕ್ಸ್ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದ. ಅದಕ್ಕೆ ಆಫೀಸ್ ಮ್ಯಾಕ್ಸ್ ಕ್ಷಮೆ ಯಾಚಿಸಿತು. ಇದು ಚಿಕ್ಕ ವಿಚಾರ ಎನ್ನಿಸುತ್ತದೆಯೇ ? ನಿಮಗೆ ತೋರಿಸಿಕೊಳ್ಳಲು ಇಷ್ಟವಿಲ್ಲದ ನಿಮ್ಮ ಮಾಹಿತಿಯನ್ನು ನಿಮ್ಮ ಮುಖಕ್ಕಿಡಿದರೆ ಹೇಗಿರುತ್ತದೆ ಯೋಚಿಸಿ. ಯಾವುದೋ ವಾಟ್ಸಾಪ್ ಗ್ರೂಪ್ ನಿಂದ ನಿಮಗೆ ಗೊತ್ತೇ ಇಲ್ಲದ ಯಾರೋ ಒಬ್ಬರು ನಿಮ್ಮ ನಂಬರ್ ತೆಗೆದುಕೊಂಡು ಏಕಾಏಕಿ ಕಾಲ್ ಮಾಡಿ ಯಾವುದೋ ಸ್ಕೀಮ್ ಕುರಿತು ಹೇಳತೊಡಗಿದರೆ ನಿಮಗೆ ಸಿಟ್ಟು ಬರುತ್ತದೆಯೋ ಇಲ್ಲವೋ..
ನಮ್ಮ ಜನರೇಷನ್ ಕತೆ ಬಿಡಿ. ಮುಂದೆ ಬರುವ ಜನರೇಷನ್ ಅಂದರೆ ನಮ್ಮ ಮಕ್ಕಳ ಅದೆಷ್ಟು ಡಿಜಿಟಲ್ ಫೂಟ್ ಪ್ರಿಂಟ್ ಸೃಷ್ಟಿಯಾಗಿದೆ ಹಾಗೂ ಸೃಷ್ಟಿಯಾಗುತ್ತಿದೆ ಎಂಬುದರ ಅರಿವಿದೆಯೇ.. ಈಗಿನ 11 ರಿಂದ 16 ರ ವಯಸ್ಸಿನ ಮಕ್ಕಳು ಹೆಚ್ಚಿನವರು ಸೋಶಿಯಲ್ ಮಿಡಿಯಾದಲ್ಲಿ ದಿನಕ್ಕೆ ಸರಾಸರಿ 26 ಪೋಸ್ಟ್ ಮಾಡುತ್ತಾರೆ, ಲೈಕ್, ಕಾಮೆಂಟ್ ಮಾಡುತ್ತಾರೆ. ಹೆಚ್ಚು-ಕಡಿಮೆ ಅವರು ತಮ್ಮ 13 ನೇ ವಯಸ್ಸಿಗೆ ಬರುವಷ್ಟರಲ್ಲಿ ಅವರ ಪೋಷಕರು ಸುಮಾರು 1300 ಫೋಟೋಗಳನ್ನು ಹಾಕಿರುತ್ತಾರೆ. ಅವರು 18 ನೇ ವಯಸ್ಸಿಗೆ ತಲುಪುವಷ್ಟರಲ್ಲಿ ಇದು ಸುಮಾರು 70000 ಆಗಿರುತ್ತದೆ.
ಇಷ್ಟೇ ಅಲ್ಲ, ಅನೇಕ ಮಕ್ಕಳು ಈಗ ಈಗ "ಇಂಟರ್ನೆಟ್ ಸಂಪರ್ಕಿತ ಆಟಿಕೆ"ಗಳ ಮೂಲಕ ಆಟವಾಡುತ್ತಿದ್ದಾರೆ. ಅವರ ಧ್ವನಿ, ಧ್ವನಿ ಸಂದೇಶ ಎಲ್ಲವೂ ಡೇಟಾಫೈಡ್ ಆಗಿಬಿಟ್ಟಿದೆ.
ಉದಾಹರಣೆಗೆ ನೀವು ಇತ್ತೀಚಿನ ಜಾಹೀರಾತು ಗಮನಿಸಿದ್ದರೆ ತಂದೆ-ತಾಯಿ ಹಾಡಿದರೆ ಸುಮ್ಮನಾಗದ ಮಗು "ಅಲೆಕ್ಸಾ ಪ್ಲೇ ದ ಸಾಂಗ್" ಎಂದು ಅಲೆಕ್ಸಾ ಮೂಲಕ ಹಾಡು ಹಾಕಿದರೆ ನಗುತ್ತಾ ಸುಮ್ಮನಾಗುತ್ತದೆ. ಇಂತಹ ಸಿರಿ, ಅಲೆಕ್ಸಾ , ಚಾಟ್ ಬಾಟ್ ಗಳಂತಹಾ ಆಟಿಕೆಗಳಿಗೆ ಮರುಳಾಗಿ ತಮಗೇ ಗೊತ್ತಿಲ್ಲದ ರೀತಿಯಲ್ಲಿ ತಮ್ಮ ಡಿಜಿಟಲ್ ಫೂಟ್ ಪ್ರಿಂಟ್ ಗಳನ್ನು ಮಾರ್ಕ್ ಮಾಡುತ್ತಿವೆ. ಅವರು ಅಂತರ್ಮುಖಿ ಸ್ವಭಾವದವರೇ ಅಥವಾ ಬಹಿರ್ಮುಖಿಯೇ.. ಇವರು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಅಳೆಯುವ ಎಷ್ಟೋ ಆನ್ಲೈನ್ ಲರ್ನಿಂಗ್ ಆಪ್ ಗಳಿವೆ. ಅವು ಕೂಡಾ ಮಕ್ಕಳ ಮಾಹಿತಿಯನ್ನು ಅವರಿಗೆ ತಿಳಿಸದೆಯೇ ಟ್ರ್ಯಾಕ್ ಮಾಡುತ್ತಾರೆ.
ಈಗ ಉದ್ಯೋಗಕ್ಕೆ ಈ ಡಿಜಿಟಲ್ ಪ್ರೊಫೈಲ್ ಗಳನ್ನು ಚೆಕ್ ಮಾಡುತ್ತಿದ್ದಾರೆ. ಇಬ್ಬರು ಅಭ್ಯರ್ಥಿಗಳು ಒಂದೇ ರೀತಿಯ ಸಾಮರ್ಥ್ಯ ಹೊಂದಿದ್ದರೆ ಯಾರ ಡಿಜಿಟಲ್ ಫೂಟ್ ಪ್ರಿಂಟ್ ಪಾಸಿಟಿವ್ ಆಗಿದೆ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಿದೆ. ಇದು ಇನ್ನೂ ವಿಸ್ತರಿಸಿ ಮಕ್ಕಳನ್ನು ಕಾಲೇಜಿಗೆ ಸೇರಿಸಿಕೊಳ್ಳುವಾಗ ಕೂಡಾ ಇಂತಹದ್ದೇ ಡಿಜಿಟಲ್ ಫೂಟ್ ಪ್ರಿಂಟ್ ಚೆಕ್ ಮಾಡಿ ದಾಖಲಾತಿ ಮಾಡಿಕೊಳ್ಳುತ್ತಾರೆ ಎನ್ನುವ ಪ್ರಿಡಿಕ್ಷನ್ ಅನ್ನು ತಳ್ಳಿ ಹಾಕುವಂತಿಲ್ಲ. ಈಗಾಗಲೇ ವಿದೇಶಗಳಲ್ಲಿ 33% ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಡಿಜಿಟಲ್ ಫೂಟ್ ಪ್ರಿಂಟ್ ಕುರಿತು ರಿಸರ್ಚ್ ನಡೆಯುತ್ತಿದೆ.
ನೆನಪಿಡಿ.. ಆನ್ಲೈನ್ ಫೂಟ್ ಪ್ರಿಂಟ್ ಅನ್ನು ಯಾವತ್ತೂ ಡಿಲೀಟ್ ಆಗುವುದಿಲ್ಲ ಹಾಗೂ ಅಳಿಸಲು ಸಹಾ ಆಗುವುದಿಲ್ಲ.
ನಾವು ನಮ್ಮ ಬೌಸರ್ ಗೆ ಹೋಗಿ ಮೂರು ಚುಕ್ಕೆ ಇರುವಲ್ಲಿ ಕ್ಲಿಕ್ ಮಾಡಿ ಇನ್ ಕಾಗ್ನಿಟೋ ಮೋಡ್ ವಿಂಡೋಗೆ ಹೋಗಿ ಸೇಫ್ ಸರ್ಚ್ ಮಾಡುತ್ತೇವೆ ಎನ್ನುತ್ತೀರಾ..
ನಾವು ಇನ್ ಕಾಗ್ನಿಟೋ ಮೋಡ್ ನಲ್ಲಿ ಸರ್ಚ್ ಮಾಡುತ್ತೇವೆ. ನಮ್ಮ ಡೇಟಾ ಟ್ರ್ಯಾಕ್ ಆಗುವುದಿಲ್ಲ ಎನ್ನುತ್ತೀರಾ..?? ಇನ್ ಕಾಗ್ನಿಟೋ ಮೋಡ್ ನಲ್ಲಿ ಸರ್ಚ್ ಕೂಡಾ ಸೇಫ್ ಅಲ್ಲ ಇದು ಪ್ರೈವೇಟ್ ಬ್ರೌಸಿಂಗ್ ನಿಜ. ಆದರೆ, ಅದರಲ್ಲಿ ನಾವು ಮಾಡುವ ಸರ್ಚ್ ಅನ್ನು ಇಂಟರ್ನೆಟ್ ಸರ್ವೀಸ್ ಪ್ರೊವೈಡರ್ ಹಾಗೂ ವೆಬ್ಸೈಟ್ ಟ್ರ್ಯಾಕ್ ಮಾಡುತ್ತಾ ಇರುತ್ತದೆ. ನಾವು ಡೇಟಾ ಟ್ರೈಲ್ ಅನ್ನು ಬಿಡಲೇ ಬೇಕು. ಇನ್ ಕಾಗ್ನಿಟೋ ಮೋಡ್ ನಲ್ಲಿ ಸರ್ಚ್ ಮಾಡುವುದರಿಂದ ನಮ್ಮ ಡಿವೈಸ್ ಅನ್ನು ಬಳಸಿ ಮತ್ತೊಬ್ಬರು ಸರ್ಚ್ ಮಾಡುವುದರಿಂದ ನಮ್ಮ ಸೀಕ್ರೇಟ್ ಸರ್ಚ್ ಗಳನ್ನು ತಪ್ಪಿಸಬಹುದಷ್ಟೇ.. ಈಗ ಆಂಡ್ರಾಯ್ಡ್ ಯೂಸರ್ ಗಳಿಗೆ ಕ್ರೋಮ್ ಫಿನ್ಗರ್ ಪ್ರಿಂಟ್ ಪ್ರೊಟೆಕ್ಟ್ ಮಾಡುವ ಇನ್ ಕಾಗ್ನಿಟೋ ಟ್ಯಾಬ್ ಅನ್ನು ಪರಿಚಯಿಸಿದೆ.
ಹಾಗಾದರೆ, ನಾವು ನಮ್ಮ ಡಿಜಿಟಲ್ ಫೂಟ್ ಪ್ರಿಂಟ್ ಮೂಡಿಸದೇ ಸರ್ಚ್ ಮಾಡಲು ಅಥವಾ ಚಟುವಟಿಕೆ ಮಾಡಲು ಸಾಧ್ಯವೇ ಇಲ್ಲವೇ..?? ಯಾಕಿಲ್ಲ.. ಡಾರ್ಕ್ ವೆಬ್ ಇದೆಯಲ್ಲಾ.. ಡೀಪ್ ವೆಬ್ ನ ಒಂದು ಭಾಗವಾದ ಡಾರ್ಕ್ ವೆಬ್ ಬಗ್ಗೆ ತಿಳಿಯೋಣ ಮುಂದಿನ 'ಟೆಕ್-ಟಾಕ್'ನಲ್ಲಿ
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ