ಗುರುವಾರ, ಏಪ್ರಿಲ್ 16, 2026

ಈ - ರುಪೀ/ ಡಿಜಿಟಲ್ ರುಪೀ ಎನ್ನುವ ಹೊಸ ಡಿಜಿಟಲ್ ಕರೆನ್ಸಿ


ಹಣಕ್ಕೆ ಬೇರೆ ಬೇರೆ ಹೆಸರುಗಳು ಇರುವ ಹಾಗೆ ಈಗ ಬೇರೆ ಬೇರೆ ರೂಪಗಳೂ ಬರುತ್ತಿವೆ. ಈಗಾಗಲೇ ಕೈಯ್ಯಲ್ಲಿ ಹಿಡಿಯುವ ಹಣವನ್ನು ಹಾರ್ಡ್ ಕ್ಯಾಶ್ ಎಂದೂ.. ಯು.ಪಿ.ಐ ಸೇವೆಗಳಲ್ಲಿ ಬಳಕೆಯಾಗುವ ಹಣವನ್ನು ಸಾಫ್ಟ್ ಕ್ಯಾಶ್ ಅಥವಾ ಡಿಜಿಟಲ್ ಕ್ಯಾಶ್ ಎಂದೂ ಕರೆಯುತ್ತಿದ್ದೆವು. ಈಗ ಬಂದಿರುವ ಹೊಸ ಕರೆನ್ಸಿ ಈ ಯು.ಪಿ.ಐ ಕರೆನ್ಸಿಗಳಿಗಿಂತ ವಿಭಿನ್ನ. ಇದುವೇ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿ.ಡಿ.ಬಿ.ಸಿ). ಬ್ಯಾಂಕಿಂಗ್ ಭಾಷೆಯನ್ನು ಹೊರತುಪಡಿಸಿ ನಮಗೆ ಕರೆಯಲು ಅನುಕೂಲವಾಗುವಂತೆ ಹೇಳುವುದಾದರೆ ಡಿಜಿಟಲ್ ರುಪೀ ಅಥವಾ ಈ-ರುಪೀ. ಆರ್.ಬಿ.ಐ ನಿಂದ ಸಿಕ್ಕಿರುವ ಹೊಸ ಡಿಜಿಟಲ್ ಕರೆನ್ಸಿ ವ್ಯವಸ್ಥೆ. 


2017 ಜನವರಿಯಲ್ಲಿಯೇ ಆರ್.ಬಿ.ಐ ಈ ಡಿಜಿಟಲ್ ರುಪೀ ಕುರಿತು ಹೇಳಿತ್ತಾದರೂ.. ಇದು ಟ್ರಯಲ್ ಪಿರಿಯೆಡ್ ಮುಗಿಸಿ 2022 ಡಿಸೆಂಬರ್ ನಿಂದ ಮೊದಲ ಹಂತದಲ್ಲಿ ಮುಂಬೈ, ದೆಹಲಿ, ಬೆಂಗಳೂರು ಹಾಗೂ ಭುವನೇಶ್ವರ ಈ ನಾಲ್ಕು ನಗರಗಳಲ್ಲಿ ಶುರುವಾಗಿದ್ದು ಈ ಹಂತದಲ್ಲಿ ಎಸ್.ಬಿ.ಐ, ಐ.ಸಿ.ಐ.ಸಿ.ಐ, ಯೆಸ್ ಬ್ಯಾಂಕ್, ಐ.ಡಿ.ಎಫ್.ಸಿ ಫಸ್ಟ್ ಬ್ಯಾಂಕ್ ಗಳಲ್ಲಿ ಲಭ್ಯವಿದೆ. ಎರಡನೇ ಹಂತದಲ್ಲಿ ಈ ಡಿಜಿಟಲ್ ರುಪೀ ಇನ್ನೂ ನಾಲ್ಕು ಬ್ಯಾಂಕ್ ಗಳಲ್ಲಿ ಲಭ್ಯವಾಗಲಿದೆ. ಅವುಗಳು ಬ್ಯಾಂಕ್ ಆಫ್ ಬರೋಡ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್.ಡಿ.ಎಫ್.ಸಿ ಬ್ಯಾಂಕ್ ಹಾಗೂ ಕೋಟಕ್ ಮಹಿಂದ್ರಾ ಬ್ಯಾಂಕ್ ಗಳನ್ನು ಒಳಗೊಳ್ಳಲಿವೆ. ಅಹಮದಾಬಾದ್, ಗ್ಯಾಂಗ್ಟಾಕ್, ಗೌಹಾತಿ, ಹೈದರಾಬಾದ್, ಇಂದೋರ್, ಕೊಚ್ಚಿ, ಲಕ್ನೋ, ಪಾಟ್ನಾ, ಶಿಮ್ಲಾ ಮುಂತಾದ 11 ನಗರಗಳಲ್ಲಿ ಶುರುವಾಗಲಿದೆ.


ಅಷ್ಟಕ್ಕೂ ಕೈಯಲ್ಲಿ ಕಾಸು ಇರುವಾಗ, ಕಣ್ಣಿಗೆ ನೋಡಲು ಗ್ಯಾರೆಂಟಿ ಇರುವ ಹಣ ಇರುವಾಗ, ಕಾಂಟ್ಯಾಕ್ಟ್ ಲೆಸ್ ಅಥವಾ ಡಿಜಿಟಲ್ ರೂಪದ ಯು.ಪಿ.ಐ ಇರುವಾಗ ಇದು ಬೇಕಿತ್ತಾ ? ಎಂದು ಎಷ್ಟೋ ಜನರಿಗೆ ಅನ್ನಿಸಿರಬಹುದು. ಆದರೆ, ಮಾಮೂಲಿ ಹಾರ್ಡ್ ಕ್ಯಾಶ್ ಗಿಂತಲೂ , ಯು.ಪಿ.ಐ ಎಂದರೆ ಭೀಮ್, ಪೇಟಿಎಂ, ಗೂಗಲ್ ಪೇ, ಫೋನ್ ಪೇ ಗಿಂತಲೂ ಇದು ವಿಭಿನ್ನವಾಗಿದೆ. ಹೇಗೆ ವಿಭಿನ್ನ ಮತ್ತು ಈ ಡಿಜಿಟಲ್ ರುಪೀ ಯಾಕೆ ಅನುಕೂಲಕರವಾಗುತ್ತದೆ ಎಂದು ಬ್ಯಾಂಕ್ ದೃಷ್ಟಿಯಿಂದ ನೋಡುವುದಾದರೆ :


ನೋಟುಗಳ ಮುದ್ರಣಕ್ಕೆ, ಅವುಗಳ ಸಾಗಣೆಗೆ, ಅವುಗಳನ್ನು ಸಂಗ್ರಹಿಸಿ ಇಡಲು, ಅವುಗಳನ್ನು ಹಂಚಲು ಆಗುವ ಖರ್ಚನ್ನು ಇದರಿಂದ ತಗ್ಗಿಸಬಹುದು. ನೋಟುಗಳನ್ನು ನಕಲಿಸಲು ಸಾಧ್ಯವಾಗುವುದಿಲ್ಲ. ಎ.ಟಿ.ಎಂ ಗಳಲ್ಲಿ ಅಥವಾ ಮನೆಗಳಲ್ಲಿ ಹಣವನ್ನು ದರೋಡೆ ಮಾಡಲು ಸಾಧ್ಯವಾಗುವುದಿಲ್ಲ. 

ಇಷ್ಟೇ ಅಲ್ಲ.. ಇದು ಈಗ ಇರುವ ಪೇಮೆಂಟ್ ಸಿಸ್ಟಮ್ ಗಳ ಜೊತೆಗೆ ಒಂದು ವ್ಯವಸ್ಥೆ ಅಷ್ಟೇ.. ನೆನಪಿರಲಿ.. ಇದು ಬದಲಿ ವ್ಯವಸ್ಥೆ ಅಲ್ಲ. ಒಂದು ರೀತಿಯ ಹೆಚ್ಚುವರಿ ಆಯ್ಕೆ. ಈ ಡಿಜಿಟಲ್ ರುಪೀಯನ್ನು ಬಳಸಲೇ ಬೇಕು ಎಂದು ಯಾರಿಗೂ ಯಾವ ಒತ್ತಾಯವೂ ಇಲ್ಲ. 


ಈ ಡಿಜಿಟಲ್ ರುಪೀ ಯು.ಪಿ.ಐ ಗಳಿಂಗಿಂತ ಹೇಗೆ ಭಿನ್ನ ಎಂದು ತಿಳಿದುಕೊಳ್ಳತ್ತಲೇ ನಮಗೆ ಈ ಆಯ್ಕೆ ಲಭ್ಯವಾದರೆ ನಾವು ಇದನ್ನು ಹೇಗೆ ಬಳಸಬಹುದು ಎಂದು ನೋಡೋಣ. ನಾವು ಯು.ಪಿ.ಐ ನಲ್ಲಿ ಹಣ ಕಳುಹಿಸುವಾಗ ನಮ್ಮ ಆಪ್ ನಲ್ಲಿ ನಮ್ಮ ಬ್ಯಾಂಕ್ ಮೂಲಕ ವ್ಯವಹಾರ ನಡೆಯುತ್ತದೆ. ಅಂದರೆ, ಬ್ಯಾಂಕ್ ಮಧ್ಯವರ್ತಿಯ ಹಾಗೆ ವರ್ತಿಸುತ್ತದೆ. ಆದರೆ, ಡಿಜಿಟಲ್ ರುಪೀ ಯಲ್ಲಿ ಬ್ಯಾಂಕ್ ಗಳು ನಡುವೆ ಬರುವುದೇ ಇಲ್ಲ. ಆರ್.ಬಿ.ಐ ಮೂಲಕವೇ ನೇರಾನೇರ ವ್ಯವಹಾರಗಳು ನಡೆಯುತ್ತವೆ. 


ಡಿಜಿಟಲ್ ರುಪೀ ಎರಡು ಕ್ಯಾಟಗರಿಗಳಲ್ಲಿ ಲಭ್ಯ. ಯು.ಪಿ.ಐ ನಲ್ಲಿ ಪರ್ಸನಲ್ ಹಾಗೂ ಬ್ಯುಸಿನೆಸ್ ಅಕೌಂಟ್ ಇರುತ್ತದಲ್ಲಾ ಹಾಗೆ ಇಲ್ಲಿ ಎರಡು ಕ್ಯಾಟಗರಿಗಳಲ್ಲಿ ಬಳಸಬಹುದು.


ಜನರಲ್ ಪರ್ಪಸ್ ಆಯ್ಕೆಯಲ್ಲಿ ಎಂಟರ್ ಪ್ರೈಸ್ ಗಳು, ಚಿಕ್ಕ - ಚಿಕ್ಕ ವ್ಯವಹಾರಕ್ಕಾಗಿ ಬಳಸಬಹುದು. 

ಮತ್ತೊಂದು ಹೋಲ್ ಸೇಲ್ ಕ್ಯಾಟಗರಿ. ಇಲ್ಲಿ ಹೆಚ್ಚಿನ ವಹಿವಾಟುಗಳು ಅಲ್ಲದೇ ಬೇರೆ ಬ್ಯಾಂಕ್ ಗಾಗಿ ಹಣದ ಸೆಟಲ್ ಮೆಂಟ್ ಗಳನ್ನು ಸಹಾ ಮಾಡಬಹುದು.


ಡಿಜಿಟಲ್ ರುಪೀ ವ್ಯವಹಾರದಲ್ಲಿ ಬ್ಯಾಂಕ್ ಅಕೌಂಟ್ ಇರಬೇಕೆಂದೇನಿಲ್ಲ ಎಂಬ ತಪ್ಪು ಕಲ್ಪನೆಯೊಂದಿದೆ. ಆದರೆ, ಡಿಜಿಟಲ್ ರುಪೀ ಸಿಸ್ಟಮ್ ನಮಗೆ ಬೇಕು ಎಂದಾದರೆ ನಮಗೆ ಒಂದು ಅಕೌಂಟ್ ಇರಲೇಬೇಕು. ಅಕಸ್ಮಾತ್ ನೀವೂ ಈ ಡಿಜಿಟಲ್ ರುಪೀಯನ್ನು ಬಳಸಲು ಅರ್ಹರಾದಿರಿ ಎಂದಾದರೆ ಅದನ್ನು ಹೇಗೆ ಬಳಸಬೇಕು ಎಂಬ ಗೊಂಡಲವಿದೆಯೇ..??


ಮೊದಲಿಗೆ ಸಿ.ಬಿ.ಡಿ.ಸಿ ( ಸೆಂಟ್ರಲ್ ಬ್ಯಾಂಕ್ ಬ್ಯಾಕ್ಡ್ ಡಿಜಿಟಲ್ ಕರೆನ್ಸಿ ) ಆಪ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬೇಕು. ಅದಾದ ನಂತರ ಈ ಆಪ್ ಅನ್ನು ಬಳಸಲು ನೀವು ನಿಮ್ಮ ಮೊಬೈಲ್ ನಂಬರ್ ಲಿಂಕ್ ಆಗಿರುವ ವ್ಯಾಲಿಡ್ ಬ್ಯಾಂಕ್ ಖಾತೆಯ ಮೂಲಕ ಒಳ ಪ್ರವೇಶಿಸಬಹುದು. ನಿಮ್ಮ ಈ ರಿಜಿಸ್ಟ್ರೇಷನ್ ಸಕ್ಸಸ್ ಆದಲ್ಲಿ ನಿಮಗೆ ಒಂದು ವಿಶೇಷ ಐ.ಡಿ ನೀಡಿ ನಿಮಗೆ ಡಿಜಿಟಲ್ ವ್ಯಾಲೆಟ್ ನೀಡಲಾಗುತ್ತದೆ. ಈ ಡಿಜಿಟಲ್ ವ್ಯಾಲೆಟ್ ಮೂಲಕ ನೀವು ನಿಮ್ಮ ವ್ಯವಹಾರಗಳನ್ನು ನಿರ್ವಹಿಸಬಹುದು. ಆದರೆ, ಈ ಡಿಜಿಟಲ್ ವ್ಯಾಲೆಟ್ ನಲ್ಲಿ ಒಂದು ಸ್ವಾರಸ್ಯವಿದೆ.


ಸಾಮಾನ್ಯವಾಗಿ ನಾವು ನಮ್ಮ ಯು.ಪಿ.ಐ ನಲ್ಲಿ ವ್ಯಾಲೆಟ್ ಗಳನ್ನು ಬಳಸುವುದು ಕಡಿಮೆ. ಡೈರೆಕ್ಟ್ ಹಣ ಟ್ರ್ಯಾನ್ಸ್ಫರ್ ಮಾಡಬಹುದು.  ಇಲ್ಲವೇ ಚಿಲ್ಲರೆಯನ್ನು ಸಹಾ ಸೇರಿಸಿಕೊಳ್ಳಬಹುದು.

ಇಲ್ಲಿ.. ಡಿಜಿಟಲ್ ರುಪೀ ವ್ಯಾಲೆಟ್ ನಲ್ಲಿ ನಮ್ಮ ಹಣವನ್ನು ಲೋಡ್ ಮಾಡುವುದೇ ಆದರೆ ಈ ಸಿಸ್ಟಮ್ ಅನ್ನು ನಮ್ಮ ಎ.ಟಿ.ಎಂ ಸಿಸ್ಟಮ್ ಗೆ ಹೋಲಿಕೆ ಮಾಡಿಕೊಳ್ಳಿ. ನಾವು ಎ.ಟಿ.ಎಂ ನಿಂದ ಹಣ ತೆಗೆದುಕೊಳ್ಳುವುದೇ ಆದರೆ 10,000 ರೂಪಾಯಿ ಬೇಕೆಂದರೆ 2000, 500 ಅಥವಾ 100 ರೂಪಾಯಿಯಲ್ಲಿ ಆಯ್ಕೆ ಮಾಡಿ ಎಷ್ಟು ನೋಟುಗಳು ಬೇಕು ಎಂದು ಕೇಳುತ್ತದೆ. 

ಡಿಜಿಟಲ್ ರುಪೀ ವ್ಯಾಲೆಟ್ ಗೆ ಹಣ ಲೋಡ್ ಮಾಡುವಾಗಲೂ ನಾವು 500 ರೂ. ಅಥವಾ 100 ರೂ. ಅಥವಾ 50 ರೂ. ಗಳ ಎಷ್ಟು ನೋಟುಗಳು ಎಂಬುದನ್ನು ನಿರ್ಧರಿಸಿ ಆಯ್ಕೆ ಮಾಡಿಕೊಂಡು ವ್ಯವಹರಿಸಬೇಕಾಗುತ್ತದೆ.


ಹಾಗಾದರೆ, ಇಂಟರ್ನೆಟ್ ಇದ್ದರೆ ಮಾತ್ರ ಹಣದ ವಹಿವಾಟು ನಡೆಸಬಹುದು ಎಂದುಕೊಂಡಿದ್ದರೆ ಅದು ತಪ್ಪು. ಇಂಟರ್ನೆಟ್ ಇಲ್ಲದೆಯೂ ನಾವು ಡಿಜಿಟಲ್ ರುಪೀ ವ್ಯವಹಾರ ನಡೆಸಬಹುದು. ಸ್ಮಾರ್ಟ್ ಫೋನ್ ಇದ್ದರೆ ಕ್ಯೂ.ಆರ್ ಕೋಡ್ ಮೂಲಕ ಇಲ್ಲವಾದಲ್ಲಿ ಮಾಮೂಲಿ ಎಸ್.ಎಂ.ಎಸ್ ಮೂಲಕ ಕೂಡಾ ಈ ವ್ಯವಸ್ಥೆಯನ್ನು ಬಳಸಬಹುದು. ಯು.ಪಿ.ಐ ನಲ್ಲಿ ಸಿಗದ ಆಫ್ ಲೈನ್ ಟ್ರ್ಯಾನ್ ಸ್ಯಾಕ್ಷನ್ ವ್ಯವಸ್ಥೆ ಈಗ ಡಿಜಿಟಲ್ ರುಪೀ ಯಲ್ಲಿ ಲಭ್ಯ. 


ಹಾಗಾಗಿಯೇ ಡಿಜಿಟಲ್ ರುಪೀ ಎರಡು ರೂಪದಲ್ಲಿ ಲಭ್ಯ. ಆಪ್ ಮೂಲಕ ರಿಜಿಸ್ಟ್ರಾರ್ ಮಾಡಿಕೊಂಡು ಟೋಕನ್ ಸಿಕ್ಕ ನಂತರ ಟೋಕನ್ ಮೂಲಕ ಡಿಜಿಟಲ್ ರುಪೀ ಯನ್ನು ಬಳಸಬಹುದು.

ಟೋಕನ್ ಬೇಸ್ಡ್ ವ್ಯವಸ್ಥೆ ಮತ್ತೊಂದು ಅಕೌಂಟ್ ನಂಬರ್ ಆಧರಿಸಿ ಅಕೌಂಟ್ ಬೇಸ್ಡ್.


ಮಾಮೂಲಿನ ಬ್ಯಾಂಕ್ ವ್ಯವಹಾರಗಳಲ್ಲಿ ಸಣ್ಣ - ಪುಟ್ಟ ಹಣದ ವರ್ಗಾವಣೆ ಲೆಕ್ಕವನ್ನೂ ಬ್ಯಾಂಕ್ ರಿಜಿಸ್ಟರ್ ಮಾಡಿಕೊಂಡಿರುತ್ತದೆ.  ಆದರೆ, ಇಲ್ಲಿ ಹಾಗಿರುವುದಿಲ್ಲ. ಅಲ್ಲದೇ, ಬ್ಯಾಂಕ್ ವ್ಯವಹಾರದಲ್ಲಿ 50,000 ಕ್ಕಿಂತ ಹೆಚ್ಚಿನ ವ್ಯವಹಾರ ನಡೆಸುವಾಗ ಕೇಳುವ ಹಾಗೂ ಬಳಸಲಾಗುವ ಪ್ಯಾನ್ ಕಾರ್ಡ್ ಅವಶ್ಯಕತೆಯೂ ಇರುವುದಿಲ್ಲ. ಅಸಲಿಗೆ.. ಇಲ್ಲಿ ಡಿಜಿಟಲ್ ರುಪೀ ಮೂಲಕ ಬ್ಯಾಂಕ್ ವ್ಯವಹಾರ ನಡೆಯುತ್ತಿದೆ ಎಂದಾದಲ್ಲಿ 50,000 ಕ್ಕಿಂತ ಕಡಿಮೆ ಹಣದ ವಹಿವಾಟು ದಾಖಲೆಯೇ ಆಗುವುದಿಲ್ಲ ಎಂದಿದೆ. ಆರ್. ಬಿ. ಐ. ಅದಕ್ಕಿಂತಲೂ ಹೆಚ್ಚಿನ ಹಣದ ವಹಿವಾಟು ನಡೆಸುವುದೇ ಆದಲ್ಲಿ ಅವುಗಳು ದಾಖಲಾಗುತ್ತವೆ. ಟ್ಯಾಕ್ಸ್ ಕಾರಣದಿಂದ 2 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸುವುದೇ ಆದಲ್ಲಿ ಅದನ್ನು ಡಿಕ್ಲೇರ್ ಮಾಡಬೇಕು ಎನ್ನುತ್ತಾರೆ.


ಕೆಲವು ಬ್ಯಾಂಕ್ ಎ.ಟಿ.ಎಂ ಗಳಲ್ಲಿ ರಾತ್ರಿ ಹೊತ್ತಿನಲ್ಲಿ ಅಥವಾ 10,000 ಕ್ಕಿಂತ ಹೆಚ್ಚಿನ ಹಣವನ್ನು ಎ.ಟಿ.ಎಂ ನಿಂದ ಡ್ರಾ ಮಾಡುವಾಗ ನಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ಒಂದು ಓ.ಟಿ.ಪಿ ಬರುತ್ತದೆ. ಇದು ಸಹಾ ನಮ್ಮ ದೃಷ್ಟಿಯಿಂದ ದೊಡ್ಡ ಅಮೌಂಟ್ ಎಂದೇ ಪರಿಗಣಿಸುವಾಗ ಡಿಜಿಟಲ್ ರುಪೀ ಯಲ್ಲಿ 50,000 ಕ್ಕಿಂತ ಕಡಿಮೆ ಮೊತ್ತದ ವಹಿವಾಟು ದಾಖಲೆಗೇ ಸಿಗುವುದಿಲ್ಲ ಎನ್ನುವುದಕ್ಕೆ ಕಾರಣ ಏನಿರಬಹುದು ಎಂದು ಹುಡುಕಿದಾಗ ಸಿಕ್ಕಿದ್ದು ಗೌಪ್ಯತೆಯ ಕಾರಣ. ವಹಿವಾಟು ನಡೆಸುವವರ ವೈಯಕ್ತಿಕ ಮಾಹಿತಿಯ ಗೌಪ್ಯತೆ. ಆದರೆ, ಇದು ಸುರಕ್ಷಿತ ಎನ್ನುತ್ತದೆ ಆರ್. ಬಿ. ಐ.


ಡಿಜಿಟಲ್ ರುಪೀಯಲ್ಲಿ ನಮ್ಮ ಖಾತೆಯಲ್ಲಿ ಹಾರ್ಡ್ ಮನಿ ಬ್ಯಾಕ್ ಅಪ್ ಇರಲೇ ಬೇಕು ಎಂದೇನಿಲ್ಲ. 

ಇನ್ನೊಂದು ವಿಚಾರ ಎಂದರೆ ನಮ್ಮ ಡಿಜಿಟಲ್ ವ್ಯಾಲೆಟ್ ನಲ್ಲಿ ಇರುವ ಹಣ ನಮ್ಮದು. ನಮ್ಮದು ಎಂದರೆ ನಮ್ಮದಷ್ಟೇ ಬ್ಯಾಂಕ್ ನದ್ದಲ್ಲ. ಇನ್ನೂ ಸರಳವಾಗಿ ಹೇಳುವುದಾದರೆ ನಮ್ಮ ಪರ್ಸಿನಲ್ಲಿ ಇರುವ ಹಣದಂತೆ ಅಷ್ಟೇ..


ಇದರಿಂದ ಅನುಕೂಲ ಇರುವ ಹಾಗೆ ಅನಾನುಕೂಲವೂ ಇಲ್ಲದಿಲ್ಲ. ಇದ್ದೂ ಇಲ್ಲದಂತಿರುವ ಹಣ, ಇಲ್ಲದೆಯೂ ಇರುವಂತಿರುವ ಹಣ.. ಭಾರತದ ಡಿಜಿಟಲ್ ಕರೆನ್ಸಿ ವ್ಯವಸ್ಥೆಯೊಂದಕ್ಕೆ ಮುನ್ನುಡಿಯಂತಿದೆ. ಇಷ್ಟವಾದರೆ, ಅವಶ್ಯಕತೆಯಿದೆ ಎಂದಾದರೆ ತಪ್ಪದೇ ನೀವೂ ಈ ಸೌಲಭ್ಯದ ಬಳಕೆಗೆ ಅರ್ಹರಾದಾಗ ಬಳಸಿ. ಇಲ್ಲವಾದಲ್ಲಿ ಎಂದಿನಂತೆ ಇದುವರೆಗೂ ಬಳಸಿದ ವ್ಯವಸ್ಥೆಗಳು ಇದ್ದೇ ಇವೆಯಲ್ಲ. ನೆನಪಿರಲಿ.. ಇದು ಬದಲೀ ವ್ಯವಸ್ಥೆಯಲ್ಲ.. ಹೆಚ್ಚುವರಿ ವ್ಯವಸ್ಥೆ.

- ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ