ಬುಧವಾರ, ಏಪ್ರಿಲ್ 15, 2026

ಡೇಟಾ ನಮ್ಮದಾದರೂ.. ಲಾಭ ಅವರಿಗೆ ( ಟೆಕ್ - ಟಾಕ್ - 4 )


ಮೊನ್ನೆ ವೀಣಕ್ಕ ಕಾಲ್ ಮಾಡಿದ್ರು. ಅವರ ನಂಬರ್ ನನ್ನ ಬಳಿ ಇರಲಿಲ್ಲ ಆದರೂ ಅವರ ಹೆಸರು ಗೊತ್ತಾಯಿತು. ಕಾರಣವಿಷ್ಟೇ, ಟ್ರ್ಯೂ ಕಾಲರ್ ನಲ್ಲಿ ಅವರ ಹೆಸರು ತೋರಿಸುತ್ತಾ ಇತ್ತು. ಅಷ್ಟೇ ಅಲ್ಲ, ನೀವು ಗಮನಿಸಿದ್ದರೆ ಬೇರೆಯವರ ನಂಬರ್ ಹತ್ತಿರವೂ ಕೊನೆಯ ಬಾರಿ ಅವರು ಫೋನ್ ಕಾಲ್ ನಲ್ಲಿ ಮಾತನಾಡಿದ್ದು ಯಾವಾಗ, ಮೊಬೈಲ್ ಸೈಲೆಂಟ್ ನಲ್ಲಿ ಇದೆಯಾ ಅಥವಾ ಕಾಲ್ ನಲ್ಲಿ ಇದ್ದಾರೆಯೇ, ಅವರ ಪ್ರೊಫೆಶನ್ ಹಾಗೂ ಅವರ ಸ್ಥಳ, ಕೆಲವರ ಜಿ-ಮೇಲ್ ಕೂಡಾ ಗೊತ್ತಾಗಿರುತ್ತದೆ.


'ಮಧು, ಈಗ ಕಾಫಿಯ ಸಮಯ' 

'ರೂಪ, ಈಗ ರಾತ್ರಿ ಊಟಕ್ಕೆ ನೀವೇನು ತೆಗೆದುಕೊಳ್ಳಲು ಇಚ್ಛಿಸುತ್ತೀರಿ ?'

'ಸಹನಾ, ಇಂದಿನ ತಿಂಡಿಗೆ ನಿಮ್ಮಿಷ್ಟದ ಇಡ್ಲಿ ಆರ್ಡರ್ ಮಾಡಲು ಕ್ಲಿಕ್ ಮಾಡಿ' ಎಂದು ಜೊಮ್ಯಾಟೋ ಅಥವಾ ಸ್ವಿಗ್ಗಿಯಲ್ಲಿ ನೋಟಿಫಿಕೇಶನ್ ಬರುತ್ತಿದೆಯಾ..??


ಈಗ ವರಮಹಾಲಕ್ಷ್ಮಿ ಹಬ್ಬ, ಗೌರಿ ಹಬ್ಬ ಎಂದು ಹಬ್ಬದ ತಯಾರಿಗೆ ಆನ್ಲೈನ್ ಶಾಪಿಂಗ್ ಮಾಡಲು ತೊಡಗಿದ್ದೀರಾ.. ಹಾಗಾದರೆ, ನೀವು ಗೂಗಲ್, ಮೀ ಶೋ, ಅಮೆಜಾನ್, ಫ್ಲಿಪ್ ಕಾರ್ಟ್ ಇವುಗಳಲ್ಲಿ ಹುಡುಕಿದ್ದು ಫೇಸ್ಬುಕ್ ಅಡ್ವರ್ಟೈಸ್ ಮೆಂಟ್ ನಲ್ಲಿ , ಯೂ ಟ್ಯೂಬ್ ಅಡ್ವರ್ಟೈಸ್ ಮೆಂಟ್ ನಲ್ಲಿ ತೋರಿಸುತ್ತಾ ಇದೆ ತಾನೇ ? 


ನೀವು ಫೇಸ್ಬುಕ್ ನಲ್ಲಿ ಇಷ್ಟಪಟ್ಟು ಹುಡುಕಿ ನಾಯಿಯ ಒಂದೆರಡು ವಿಡಿಯೋ ನೋಡಿದ್ದರೆ.. ಅದೇ ರೀತಿಯ ಸಾಕಷ್ಟು ವಿಡಿಯೋಗಳು ಬರುತ್ತಿರುವುದು ಕಂಡು ನೀವು ಖುಷಿ ಪಟ್ಟಿರಾ ?


'ವಿಭಾ, ಇಲ್ಲಿದೆ ನಿಮ್ಮ ಜುಲೈ ತಿಂಗಳ ಓಡಾಟದ ಮಾಹಿತಿ' ಎಂದು  ಹೋದ ಕಡೆಯ ಮಾಹಿತಿಯನ್ನೆಲ್ಲಾ ನನಗೇ ಜಿ-ಮೇಲ್ ಮೂಲಕ ತೋರಿಸುತ್ತಿತ್ತು ಗೂಗಲ್ ಮ್ಯಾಪ್. 


'ನೀವು ಹಾಸನ ಬಸ್ ಸ್ಟ್ಯಾಂಡ್ ನಲ್ಲಿ ಇದ್ದೀರಾ. ಅದರ ರೇಟಿಂಗ್ ನೀಡಿ' ಎನ್ನುತ್ತಾ ಕೆಲವು ಸ್ಥಳಗಳ ರಿವ್ಯೂ ಕೇಳುತ್ತದೆ ಗೂಗಲ್ ಮ್ಯಾಪ್. 


ನೀವು ನಡೆಯುವುದರಿಂದಲೇ ಹಣ ಮಾಡಿ ಎಂದೆನ್ನುವ ಆಸೆ ತೋರಿಸಿ ವಾಕಿಂಗ್ ಸ್ಟೆಪ್ ಗಳ ಮೂಲಕ ನಿಮ್ಮ ಓಡಾಟದ, ನಿಮ್ಮ ದೇಹದ ಉಷ್ಣತೆ, ಹಾರ್ಟ್ ಬೀಟ್, ಬರ್ನ್ ಆಗುತ್ತಿರುವ ಕ್ಯಾಲೋರಿ ಹೀಗೆ ನಿಮ್ಮ ಮಾಹಿತಿಯನ್ನು ನೀವೇ ಬಿಟ್ಟು ಕೊಡುತ್ತಿರುತ್ತೀರಿ.


ಒಂದೇ ತರಕಾರಿ ಬುಟ್ಟಿಯಲ್ಲಿದ್ದ ತರಕಾರಿಗಳು ಒಂದಕ್ಕೊಂದು ಮಾತನಾಡುತ್ತಿದ್ದವು ಎಂದು ಚಿಕ್ಕಂದಿನಲ್ಲಿ ಒಂದು ಕತೆ ಕೇಳುತ್ತಿದ್ದಿರಿ. ನೆನಪಿದೆಯಾ..?? ಹಾಗೆಯೇ ಈ ಆಪ್ ಗಳು ಮಾತನಾಡುತ್ತಿವೆಯಾ ಹೇಗೆ..! ಎನ್ನುವ ಸಂದೇಹ ಬಂತಾ..?? ಹಾಗಾದರೆ, ಒಂದರಲ್ಲಿ ಹುಡುಕಿದ್ದು ಮತ್ತೊಂದಕ್ಕೆ ತಿಳಿದದ್ದು ಹೇಗೆ ? ಈ ಜಾಹೀರಾತಿನ ರೆಕಮೆಂಡೇಶನ್ ಏನಾದರೂ ಕಾಕತಾಳೀಯವಾ ಹೇಗೆ ??


ಇದು ಖಂಡಿತಾ ಕಾಕತಾಳೀಯವಲ್ಲ. ಹಾಗೆಯೇ ಆಪ್ ಗಳು ಮಾತನಾಡುವುದೂ ಇಲ್ಲ. ನಮಗೆ ಅರಿವಿಲ್ಲದೆಯೇ ನಾವೇ ನಮ್ಮ ಕುರಿತ ಮಾಹಿತಿಗಳನ್ನು ಇವುಗಳಿಗೆ ನೀಡುತ್ತಿದ್ದೇವೆ ಎಂಬ ಅರಿವಿದೆಯಾ..?? ಯೋಚನೆ ಮಾಡಲು ಜೇಡ ಕಟ್ಟಿರುವ ಮೂಲೆ ನೋಡುವುದು ಬೇಡ. ಒಮ್ಮೆ ನೀವು ಈ ಆಪ್ ಅನ್ನು ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡುವಾಗ ನಿಮ್ಮ ಮಾಹಿತಿ ಪಡೆಯಲು ಅವಕಾಶ ಕೊಟ್ಟಿರುತ್ತೀರ. ನೆನಪಾಯಿತಾ..??

ಉದಾಹರಣೆಗೆ : ನೋಟ್ ಮಾಡಿಕೊಳ್ಳುವ ಆಪ್ ಡೌನ್ಲೋಡ್ ಮಾಡಿಕೊಳ್ಳುವಾಗಲೂ ಅದು ಕ್ಯಾಮೆರಾ, ಬ್ರೌಸರ್, ಲೋಕೇಶನ್ ಎಲ್ಲವನ್ನೂ ಕೇಳಿದರೂ ಸುಮ್ಮನೆ ಅದನ್ನು ಗಮನಿಸದೆ ಸಮ್ಮತಿಸಿ ಮುಂದೆ ಹೋಗಿಬಿಟ್ಟಿರುತ್ತೇವೆ. 


ಅಯ್ಯೋ.. ಈ ಮಾಹಿತಿಗಳಿಂದ ಎಲ್ಲಾ ಏನಾಗುತ್ತೆ ? ಅಷ್ಟಕ್ಕೂ ಈ ಮಾಹಿತಿಗಳನ್ನು ಇಟ್ಟುಕೊಂಡು ಅವರೇನು ಮಾಡಲು ಸಾಧ್ಯ ಎನ್ನುತ್ತೀರಾ..?? 


ಮೊದಲಿಗೆ ನಾವಾಗಿಯೇ ನೀಡಿದ ಡೈರೆಕ್ಟ್ ಮಾಹಿತಿಗಳಿಂದ ಉಂಟಾಗುವ ಸಮಸ್ಯೆಗಳನ್ನು ಗಮನಿಸೋಣ. ನಂತರ ನಮಗೆ ಅರಿವಿಲ್ಲದೇ ಆಗುವುದನ್ನು ಗಮನಿಸೋಣ.


ಫೇಸ್ಬುಕ್ ನಲ್ಲಿ ಲತಾ ಅವರು ತಾವು ಪ್ರವಾಸಕ್ಕೆ ಹೋದ ಕುರಿತು, ಹೋಗುತ್ತಿರುವ ಜಾಗಗಳ ಕುರಿತು ಮಾಹಿತಿ ಹಂಚಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದಾಗ ಇಲ್ಲಿ ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಕಳ್ಳನಿಗೆ ಮಾಹಿತಿ ತಿಳಿದದ್ದು ಆ ಫೇಸ್ಬುಕ್ ಪೋಸ್ಟ್ ನಿಂದ.


ನೀವು ಯಾವುದೋ ಒಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದಾಗ ಅವರು ನಿಮ್ಮನ್ನು ಪರಿಶೀಲಿಸಲು ನಿಮ್ಮ ಸೋಶಿಯಲ್ ಮೀಡಿಯಾ ಪ್ರೊಫೈಲ್ ಗಳನ್ನು ನೋಡಬಹುದು. ಹಿಂದಿನ ಉದ್ಯೋಗ ಮತ್ತು ಅವರ ಕುರಿತು ನೀವೇನಾದರೂ ನಕಾರಾತ್ಮಕವಾಗಿ ಮಾತನಾಡಿದ್ದೀರಾ ಎಂದು ತಿಳಿದುಕೊಳ್ಳಬಹುದು.. ವಿವಾಹ ನಿಶ್ಚಯವಾಗುವ ಮುನ್ನ ಕೂಡಾ ಪ್ರೊಫೈಲ್ ಚೆಕ್ ಮಾಡುವ ಪರಿಪಾಠ ಬೆಳೆದು ಬರುತ್ತಿದೆ ಎಚ್ಚರ.


ನಿಮ್ಮ ಫೋಟೋ ಹಾಗೂ ನಿಮ್ಮ ಟೈಮ್ ಲೈನ್ ಮಾಹಿತಿ ಬಳಸಿಕೊಂಡು ನಕಲಿ ಪ್ರೊಫೈಲ್ ನಿರ್ಮಾಣ ಮಾಡಿ ಸ್ಕ್ಯಾಮ್ ಮಾಡಬಹುದು.


ನೀವು ಫೇಸ್ಬುಕ್ ನಲ್ಲಿ ಗಮನಿಸಿದ್ದೀರಾ ?

ನೀವು ಇನ್ನು 50 ವರ್ಷದ ನಂತರ ಹೇಗಿರುತ್ತೀರಿ..?

ನೀವು ಹಿಂದಿನ ಜನ್ಮದಲ್ಲಿ ಏನಾಗಿದ್ದಿರಿ ತಿಳಿಯಬೇಕೇ..? 

ನಿಮ್ಮ ಸಾವು ಹೇಗೆ ಸಂಭವಿಸುತ್ತದೆ ತಿಳಿಯುವ ಆಸಕ್ತಿ ಇದೆಯೇ ? ಎನ್ನುತ್ತಾ ಒಂದು ಲಿಂಕ್ ನೀಡಿರುತ್ತಾರೆ. ಲಿಂಕ್ ಕ್ಲಿಕ್ ಮಾಡಿದಾಗ ನಿಮ್ಮ ಮೊಬೈಲ್ ಗೆ ಯಾವುದಾದರೂ ವೈರಸ್ ಬರಬಹುದು. ಇಲ್ಲವೇ, ಆ ಲಿಂಕ್ ಕ್ಲಿಕ್ ಮಾಡಿದಾಗ ಮತ್ತೊಂದು ಪಾಪ್-ಅಪ್ ಬಂದು ಮತ್ತೊಮ್ಮೆ ಲಾಗಿನ್ ಕೇಳುತ್ತದೆ. ನೀವು ಲಾಗಿನ್ ಮಾಡಲು ಈ-ಮೇಲ್/ಫೋನ್ ನಂಬರ್ ಹಾಗೂ ಪಾಸ್ವರ್ಡ್ ಟೈಪ್ ಮಾಡಿದಿರೋ ಆಗ ಪ್ರೊಫೈಲ್ ಸ್ಕ್ಯಾಮರ್ ಕೈಗೆ ಸಿಕ್ಕಿ ಬಿಡುತ್ತದೆ. ಅರ್ಥಾತ್ ಹ್ಯಾಕ್ ಮಾಡಿ ಬಿಡುತ್ತಾರೆ.


ಪಾಸ್ವರ್ಡ್ ಬದಲಾಯಿಸುವುದು, ಆ್ಯಂಟಿವೈರಸ್ ಗಳನ್ನು ಹಾಕಿಸಿಕೊಳ್ಳುವುದರಿಂದ, ಬೇಡದ ಲಿಂಕ್ ಗಳನ್ನು ಕ್ಲಿಕ್ ಮಾಡದಿರುವುದು, ಎಲ್ಲಾ ಮಾಹಿತಿಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದನ್ನು ತಡೆಯುವುದರಿಂದ ಡೈರೆಕ್ಟ್ ಮಾಹಿತಿ ನೀಡುವುದನ್ನು ತಪ್ಪಿಸಬಹುದು.


"ಮೂರು ಹೊತ್ತು ಫೇಸ್ಬುಕ್, ಇನ್ಸ್ಟಾ ಅಂತಾ ಇರುತ್ತೀಯಲ್ಲ. ಅದೇನು ನಿನಗೆ ದುಡ್ಡು ಕೊಡುತ್ತಾ..?? ಹೋಗಿ ಕೆಲಸ ಮಾಡಿದರೆ ಸಂಪಾದನೆ ಮಾಡಬಹುದು" ಎಂದು ಬೈಯಿಸಿಕೊಂಡಿದ್ದೀರಾ..??


ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾಗಳು ನಮಗೆ ಬಳಸಿದ್ದಕ್ಕೆ ಪಾವತಿ ಮಾಡುವುದಿಲ್ಲ. ಹಾಗೆಂದು ನಾವು ಹಣ ಕೊಟ್ಟು ಬಳಸುತ್ತಿದ್ದೀವಾ ? ಇಲ್ಲ ತಾನೇ..?? ಹಾಗಾದರೆ ಅವರು ನಮಗೆ ಉಚಿತ ಫ್ಲ್ಯಾಟ್ ಫಾರ್ಮ್ ಕೊಟ್ಟದ್ದು ಯಾಕೆ ? ಅವರೇನು ಸಮಾಜ ಸೇವೆ ಮಾಡುತ್ತಿಲ್ಲ. ಬದಲಾಗಿ ಕೋಟಿಗಟ್ಟಲೆ ಲಾಭ ಗಳಿಸುತ್ತಿದ್ದಾರೆ. ಹೇಗೆ ಗೊತ್ತಾ..?? ಅದರಲ್ಲಿ ಮುಕ್ಕಾಲು ಅಂಶ ಲಾಭ ಬರುವುದೇ ಜಾಹೀರಾತುಗಳಿಂದ. ಜಾಹೀರಾತುದಾರರು ಹಾಗೂ ಬಳಕೆದಾದರರಿಗೆ ಮಾಧ್ಯಮವಾಗಿರುವುದು ಈ ಸೋಶಿಯಲ್ ಮೀಡಿಯಾಗಳು. 


ಫೇಸ್ಬುಕ್ ನಲ್ಲಿ ನೀವು ಲೈಕ್ ಮಾಡದೆಯೇ ನಿಮಗೆ ಗೊತ್ತಿಲ್ಲದವುಗಳಿಂದ ಪೋಸ್ಟ್ ನೋಡಿರುತ್ತೀರಿ. ಕಾರಣವನ್ನು ಅಲ್ಲೇ ಮೇಲೆ ಮೂರು ಚುಕ್ಕಿ ಇರುವಲ್ಲಿ ಕ್ಲಿಕ್ ಮಾಡಿ "ವೈ ಈ ಆಮ್ ಸೀಯಿಂಗ್ ದಿಸ್" ಎಂದು ನೋಡಬಹುದು. ಇದೆಲ್ಲದರ ಹಿಂದಿರುವುದು ಡೇಟಾ ಪೂರೈಕೆದಾರರು. ಫೇಸ್ಬುಕ್ ಜೊತೆ ಕೈ ಜೋಡಿಸಿರುವವುಗಳಲ್ಲಿ ಪ್ರಮುಖವಾದವು ಆಕ್ಸಿಯಾನ್, ಎಫ್ಸಿಲಾನ್, ಟ್ರಾನ್ಸ್ ಯೂನಿಯನ್ ಗಳು.


ಫೇಸ್ಬುಕ್ ಪ್ರೈವೆಸಿ ಪಾಲಿಸಿ ಹೇಳುವ ಪ್ರಕಾರ ಅದು ಯಾವ ವೈಯಕ್ತಿಕ ಡೇಟಾವನ್ನೂ ಯಾರಿಗೂ ತಲುಪಿಸುವುದಿಲ್ಲ. ಆದರೆ, 2010 ರಿಂದ ನಡೆದ ಕೆಲ ಘಟನೆಗಳು ಇದನ್ನು ಸಂಶಯಿಸುವಂತೆ ಮಾಡುತ್ತವೆ. 


ಬ್ರಿಟಿಷ್ ಸಲಹಾ ಕೇಂದ್ರ ಕೇಂಬ್ರಿಡ್ಜ್ ಅನಾಲಿಟಿಕಾ ರಾಜಕೀಯ ಜಾಹೀರಾತಿಗಾಗಿ ಕೆಲ ಮಾಹಿತಿಗಳನ್ನು ಬಳಸಿಕೊಳ್ಳುತ್ತದೆ. ಈ ಮಾಹಿತಿಗಳು ದೊರೆತದ್ದರ ಮೂಲ ಫೇಸ್ಬುಕ್. 2013 ರಲ್ಲಿ ಡೇಟಾ ಸೈನ್ಟಿಸ್ಟ್ ಅಲೆಗ್ಸಾಂಡರ್ ಕೋಗನ್ ಹಾಗೂ ಗ್ಲೋಬಲ್ ಸೈನ್ಸ್ ರಿಸರ್ಚ್ ಅಭಿವೃದ್ಧಿಪಡಿಸಿದ "ದಿಸ್ ಇಸ್ ಯುವರ್ ಡಿಜಿಟಲ್ ಲೈಫ್' ಎನ್ನುವ ಆಪ್ ನಿರ್ಮಾಣವಾಗುತ್ತದೆ. ಈ ಆಪ್ ನ ಉದ್ದೇಶ ನಿಮ್ಮ ಮಾನಸಿಕ ಪ್ರೊಫೈಲ್ ನಿರ್ಮಿಸಲು. ಹೇಗೆ ಗೊತ್ತಾ ?? ನಮ್ಮ ಕುರಿತ ವೈಯಕ್ತಿಕ ಮಾಹಿತಿ, ಹವ್ಯಾಸ, ಇಷ್ಟ-ಕಷ್ಟ, ಒಡನಾಟ ಎಲ್ಲವನ್ನೂ ತಿಳಿದುಕೊಂಡು ನಾವು ಹೇಗೆ ಆಲೋಚಿಸುತ್ತೇವೆ ಎಂದು ನಮ್ಮ ಮನೆಯವರು ಹಾಗೂ ಪರಿಚಿತರಿಗಿಂತಲೂ ಕರಾರುವಕ್ಕಾಗಿ ಅಂದಾಜಿಸಿ ಮಾಹಿತಿ ನೀಡುವ ಆಪ್. ಇದರಲ್ಲಿ ಮಾಹಿತಿ ಕೊಟ್ಟವರು ತಮ್ಮ ಮಾಹಿತಿ ಜೊತೆಗೆ ತಮ್ಮ ಸ್ನೇಹಿತರ ಮಾಹಿತಿಯನ್ನೂ ಬಿಟ್ಟು ಕೊಟ್ಟಿದ್ದರು. ಇದೆಲ್ಲದಕ್ಕೂ ಫೇಸ್ಬುಕ್ ನ ಓಪನ್ ಗ್ರಾಫ್ ಫ್ಲ್ಯಾಟ್ ಫಾರಂ ಸಾಕ್ಷಿಯಾಗಿತ್ತು. ಈ ಮಾಹಿತಿಯನ್ನು 2016 ರಲ್ಲಿ ಟೆಡ್ ಕ್ರೂಜ್ ಹಾಗೂ ಟ್ರಂಪ್ ತಮ್ಮ ರಾಜಕೀಯ ಪ್ರಚಾರಕ್ಕಾಗಿ ಜಾಹೀರಾತು ನೀಡಲು ಬಳಸಿಕೊಂಡರು. ಈ ಕುರಿತು ದ ಗಾರ್ಡಿಯನ್ ಹಾಗೂ ನ್ಯೂಯಾರ್ಕ್ ಟೈಮ್ ನಲ್ಲಿ ಒಂದು ಸಂದರ್ಶನ ಬರುತ್ತದೆ. ಅದನ್ನು ಸಾಕ್ಷಿ ಸಮೇತ ನೀಡಿದ್ದು ಕೇಂಬ್ರಿಡ್ಜ್ ನ ಮಾಜಿ ಅನಾಲಿಟಿಕ್ ಉದ್ಯೋಗಿ ಕ್ರಿಸ್ಟೋಫರ್ ವೈಲಿ. ಈ ಕುರಿತು ವಿಚಾರಣೆ ನಡೆಸಿ ಜುಲೈ 2019 ರಲ್ಲಿ 'ಡೇಟಾ ಗೌಪ್ಯತೆ' ಉಲ್ಲಂಘನೆಗಾಗಿ $5 ಬಿಲಿಯನ್ ದಂಡ ವಿಧಿಸಲಾಗುತ್ತದೆ. ಇದಕ್ಕಾಗಿ ಮಾರ್ಕ್ ಜುಗರ್ ಬರ್ಗ್ ಕ್ಷಮೆ ಯಾಚಿಸಿ 2019 ಅಕ್ಟೊಬರ್ ನಲ್ಲಿ $100 ಮಿಲಿಯನ್ ದಂಡವನ್ನು ಯು.ಕೆ ಮಾಹಿತಿ ಆಯುಕ್ತರ ಕಚೇರಿಗೆ ದಂಡ ಕಟ್ಟಿರುತ್ತಾರೆ. ದಂಡದ ಹಣ ಕಡಿಮೆ ಮಾಡಿದ್ದಕ್ಕೆ ಕಾರಣ 'ಡೇಟಾ ಬ್ರಿಚ್' ಆಗಿದ್ದರೂ ಅದು ವೈಯಕ್ತಿಕ ಡೇಟಾ ಅಲ್ಲ. ಬಳಕೆದಾರರ ವೈಯಕ್ತಿಕ ಡೇಟಾ ನೀಡಲಾಗಿಲ್ಲವಾದ್ದರಿಂದ ಅದು ಅನೈತಿಕವಲ್ಲ ಎಂದು. ಇದರ ನಂತರ 3 ತಿಂಗಳು ಫೇಸ್ಬುಕ್ ನ ಶೇರ್ ವ್ಯಾಲ್ಯೂ ಕುಸಿದರೂ ನಂತರ ಕ್ರಮೇಣವಾಗಿ ಅಧಿಕವಾಗುತ್ತದೆ. 2019 ರಲ್ಲಿ ನೆಟ್ ಪ್ಲಿಕ್ಸ್ ನಲ್ಲಿ 'ದಿ ಗ್ರೇಟ್ ಹ್ಯಾಕ್' ಎನ್ನುವ ಡಾಕ್ಯುಮೆಂಟರಿ ಬಂದಿದೆ. ಆಸಕ್ತರು ವೀಕ್ಷಿಸಬಹುದು. 


ಹಾಗಾದರೆ, ವೈಯಕ್ತಿಕ ಮಾಹಿತಿಯಲ್ಲದೆ ಮತ್ತೆ ಯಾವ ಮಾಹಿತಿಯನ್ನು ಜಾಹೀರಾತುದಾರರು ಬಯಸುತ್ತಾರೆ ಗೊತ್ತಾ..? ನ್ಯೂಸ್ ಲೆಟರ್ ಕಳುಹಿಸಲು, ಬಹುಮಾನ ಕಾರ್ಯಕ್ರಮಗಳಿಗೆ, ಸಮೀಕ್ಷಣೆಗಳಿಗೆ ಜಾಹೀರಾತು ಕಳುಹಿಸಲು ಬಳಕೆದಾರರು ಹೆಚ್ಚು ಆ್ಯಕ್ಟೀವ್ ಆಗಿರುವ ಸಮಯ, ಹೆಚ್ಚು ಬಳಸುವ ಹ್ಯಾಶ್ ಟ್ಯಾಗ್, ಯಾವ ವಿಷಯ ಹೆಚ್ಚು ಇಷ್ಟ ಪಡುತ್ತಾರೆ, ಫೋಟೋ ಅಥವಾ ವೀಡಿಯೋ ವೀಕ್ಷಣೆಯ ಸಮಯ, ಸ್ಥಳ, ಎಷ್ಟು ಹೊತ್ತು ಲಾಗಿನ್ ಆಗಿರುತ್ತಾರೆ ಎಂಬುದರ ಮಾಹಿತಿ ಬೇಕಿರುತ್ತದೆ.


ಇದಕ್ಕಾಗಿ ಬಳಕೆದಾರರ ಹೆಸರು, ಮೊಬೈಲ್ ನಂಬರ್, ಮೇಲ್, ಅಪ್ಲೋಡ್ ಮಾಡಿರುವ ಫೋಟೋ, ವೀಡಿಯೋ , ಅವರ ನೆಟ್ವರ್ಕ್ ಹಾಗೂ ಕಾಂಟ್ಯಾಕ್ಟ್, ಹವ್ಯಾಸ, ಬಳಸುತ್ತಿರುವ ಫೋನ್ ಐ.ಪಿ ನಂಬರ್, ಭಾಷೆ, ದಿನಕ್ಕೆ ಎಷ್ಟು ಬಾರಿ, ಎಷ್ಟು ಹೊತ್ತು ಬಳಸುತ್ತಾರೆ ಇದೆಲ್ಲವೂ ನಮಗೆ ಗೊತ್ತಿಲ್ಲದೆಯೇ ನಾವು ಒದಗಿಸುವ ಮಾಹಿತಿಗಳು. ಇದೆಲ್ಲದರ ಸರಾಸರಿ ಫಲಿತಾಂಶವೇ ನಾವು ನೋಡುವ ಜಾಹೀರಾತುಗಳು. ಇಷ್ಟೆಲ್ಲಾ ಇದ್ದರೂ ಫೇಸ್ಬುಕ್ ನಲ್ಲಿ ಈಗ ಶೇಕಡಾ ಎಂಟರಷ್ಟು ನಕಲಿ ಖಾತೆಗಳಿವೆ. 


ಇಷ್ಟೆಲ್ಲಾ ಡೇಟಾವನ್ನು ಅವರು ಸಂಗ್ರಹ ಮಾಡುವುದು ಎಲ್ಲಿ, ಹೇಗೆ ಗೊತ್ತಾ ? ನಾವು ಸೋಶಿಯಲ್ ಮೀಡಿಯಾಗಳಿಗೆ ತುಂಬುವ ಮಾಹಿತಿಯ ಓನರ್ ಯಾರು ? ಗೌಪ್ಯತೆ ಉಲ್ಲಂಘನೆ ಆದಾಗ ದೂರು ನೀಡುವುದು ಯಾರಿಗೆ ? ನಮ್ಮ ವೈಯಕ್ತಿಕ ಡೇಟಾ ಎಷ್ಟು ಸಮಯದವರೆಗೂ ಅವರ ಬಳಿ ಇರುತ್ತದೆ. ನಾವು ಅಕೌಂಟ್ ಡಿಲೀಟ್ ಮಾಡಿದಾಗ ಈ ಡೇಟಾ ಏನಾಗುತ್ತದೆ? ಈ ಮಾಹಿತಿಗಳು ಮುಂದಿನ 'ಟೆಕ್-ಟಾಕ್'ನಲ್ಲಿ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ