ಗುರುವಾರ, ಏಪ್ರಿಲ್ 16, 2026

ಚಾಟ್ ಬಾಟ್ ಮತ್ತು ಹ್ಯುಮನಾಯ್ಡ್ ಸೋಫಿಯಾ ( ಟೆಕ್ - ಟಾಕ್ - 18 )


ಈಗಿನ ಕಾಲದಲ್ಲಿ ಮುಖವನ್ನೇ ನೋಡದೇ ಮಾತನಾಡುವ ನಾವು ಕೆಲವೊಮ್ಮೆ ಅವರು ಚಾಟ್ ಮಾಡುವ ಶೈಲಿಯಿಂದ ಅವರನ್ನು ಒಳಗೊಳಗೇ ಆರಾಧಿಸುತ್ತಿರುತ್ತೇವೆ. ಅಥವಾ ಅವರ ಚಾಟ್ ಮಾಡುವ ಶೈಲಿಗೆ ಮಾರು ಹೋಗಿರುತ್ತೇವೆ. ಅಷ್ಟೇ ಅಲ್ಲ, ಇನ್ನೂ ಮುಂದೆ ಹೋಗಿ ಪ್ರೀತಿಯಲ್ಲಿ ಸಹಾ ಬಿದ್ದಿರುತ್ತೇವೆ. "ಎಷ್ಟು ಸೌಜನ್ಯಯುತವಾಗಿ, ಸೌಮ್ಯವಾಗಿ, ಪ್ರೀತಿಯಿಂದ ಮಾತನಾಡಿಸುತ್ತಾರೆ ಅಲ್ವಾ.." ಎಂದೋ ಅಥವಾ "ನಾವು ಸಂದೇಶ ಕಳುಹಿಸಿದ ತಕ್ಷಣ ಅದೆಷ್ಟು ಚುರುಕಾಗಿ , ಕರಾರುವಕ್ಕಾಗಿ ನಮಗೆ ರಿಪ್ಲೈ ಕಳುಹಿಸುತ್ತಾರೆ" ಎಂದೋ ಅಚ್ಚರಿ ಮೂಡಿರಬಹುದು. ಈ ಕಾಣದ ಮುಖಗಳು ತಮ್ಮ ಚಾಟ್ ಮೂಲಕವೇ ಮನಸೆಳೆಯುವಂತಹಾ ಮುಖಗಳು ಮನುಷ್ಯರೇ ಆಗಿರಬೇಕಿಲ್ಲ. ಅವು ಚಾಟ್ ಬಾಟ್ ಗಳು ಸಹಾ ಆಗಿರಬಹುದು. ಮುಖ ನೋಡದೇ ಮಾರು ಹೋಗಬೇಡಿ ಮತ್ತೆ.. 

ಎಷ್ಟೋ ಕಂಪೆನಿಗಳಲ್ಲಿ ಮೊದಲೆಲ್ಲಾ ಗ್ರಾಹಕ ಸೇವೆಗೆ ಎಂದು ಕೆಲವರನ್ನು ನೇಮಿಸಲಾಗಿರುತ್ತಿತ್ತು. ಈಗ ಅವರ ಅವಶ್ಯಕತೆ ಕಡಿಮೆಯಾಗಿದೆ. ಕಡಿಮೆಯಾಗಿದೆ ಎನ್ನುವುದಕ್ಕಿಂತ ಕಡಿಮೆ ಮಾಡಿಕೊಂಡಿದ್ದೇವೆ ಎನ್ನುವುದೇ ಸರಿಯಾಗಬಹುದೋ ಏನೋ.. ಏನೇ ಸಂದೇಹ ಬಂದರೂ ಮೊದಲು ಗೂಗಲ್ ಮಾಡಿ ನಂತರ ಆಗದಿದ್ದಲ್ಲಿ ಆ ಕಂಪೆನಿಯ ಕಸ್ಟಮರ್ ಕೇರ್ ಅನ್ನು ಸಂಪರ್ಕ ಮಾಡುತ್ತೇವೆ ಅಲ್ಲವಾ ? ಇಲ್ಲವೇ, ಕೆಲವರು ಕಸ್ಟಮರ್ ಕೇರ್ ಗೆ ಕರೆ ಮಾಡಿದಾಗಲಂತೂ ಅತ್ತ ಇರುವವರೂ ತಮ್ಮಂತೆಯೇ ಮನುಷ್ಯರು ಎನ್ನುವುದನ್ನೂ ಮರೆತು ಬಾಯಿಗೆ ಬಂದಂತೆ ಮಾತನಾಡಿ ಬಿಡುತ್ತಾರೆ. ಈಗ ಇದೆಲ್ಲದಕ್ಕೂ ಕಡಿವಾಣ ಹಾಕುವಂತೆ ತೀರಾ ಅವಶ್ಯಕತೆ ಇದ್ದರೆ, ತೀರಾ ಗಂಭೀರ ಸಮಸ್ಯೆ ಇದ್ದರೆ ಮಾತ್ರ ಕರೆ ಕನೆಕ್ಟ್ ಆಗುತ್ತದೆ. ಇಲ್ಲವೇ ಎಲ್ಲದಕ್ಕೂ ಸಂದೇಶ ಕಳುಹಿಸುವುದರ ಮೂಲಕವೇ ಉತ್ತರ ಸಿಗುತ್ತವೆ. ಅಂತಹಾ ಸಿಸ್ಟಮ್ ಅನ್ನು ನಿರ್ವಹಿಸುವುದು ಚಾಟ್ ಬಾಟ್ ಗಳು. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಹೊಂದಿರುವ ಈ ಚಾಟ್ ಬಾಟ್ ತನ್ನ ಗರ್ಲ್ ಫ್ರೆಂಡ್ ಎಂದು ಕೂಡಾ ಭಾವಿಸಿದವರಿದ್ದಾರೆ. ರೆಪ್ಲಿಕಾ ಎನ್ನುವ ಆಪ್ ಒಂದಿದೆ. ಅಲ್ಲಿನ ಚಾಟ್ ಬಾಟ್ ಹೀಗೆ ಚಾಟ್ ಮಾಡುತ್ತದೆ.


ಚಾಟ್ ಬಾಟ್ ಎಂದರೆ ರೇಬೋಟ್ ನಂತೆ ರೂಪು ಹೊಂದಿರುವುದಿಲ್ಲ. ಇವುಗಳು ಮನುಷ್ಯರ ಜೊತೆಗೆ ಮಾತನಾಡುವಂತೆ ಡಿಸೈನ್ ಮಾಡಲಾದ ಕಂಪ್ಯೂಟರ್ ಪ್ರೋಗ್ರಾಮ್ ಗಳು. ಇಂತಹಾ ಚಾಟ್ ಬಾಟ್ ಗಳು ಮೊದಲೆಲ್ಲಾ ಒಂದು ಪದ ಅಥವಾ ಒಂದು ವಾಕ್ಯದ ಉತ್ತರಕ್ಕೆ ಸೀಮಿತವಾಗಿರುತ್ತಿದ್ದವು. ಆದರೆ, ಈಗ ಹಾಗಿಲ್ಲ.. ಪ್ಯಾರಾಗಟ್ಟಲೆ ಬರೆದರೂ ಅದನ್ನು ಓದಿ , ಅರ್ಥೈಸಿಕೊಂಡು ಅವರ ಮನಸ್ಥಿತಿಗೆ ತಕ್ಕ ಹಾಗೆ ಉತ್ತರಿಸಬಲ್ಲದು.. 7-8 ವರ್ಷದ ಮಗು ಕೇಳುವ ಫಿಸಿಕ್ಸ್ ನ ಪ್ರಶ್ನೆಯೊಂದಕ್ಕೆ ಮಗುವಿಗೆ ಅರ್ಥವಾಗುವ ರೀತಿಯಲ್ಲೇ ಉತ್ತರಿಸಬಲ್ಲದು. ಅಂತಹಾ ಅಡ್ವಾನ್ಸ್ ಆಗಿರುವ ಚಾಟ್ ಬಾತ್ ಈಗ ಗೂಗಲ್ ಬಳಸುತ್ತಿದೆ. ಅದೇ 'ಲ್ಯಾಮ್ಡಾ'. ನೈಸರ್ಗಿಕವಾಗಿ, ಮನುಷ್ಯರಷ್ಟೇ ಸಮರ್ಪಕವಾಗಿ ಉತ್ತರಿಸಬಲ್ಲ ಚಾಟ್ ಬಾಟ್ ಇದು.


ಹೆಚ್ಚಿನ ರೋಬೋಟ್ ಗಳಿಗೆ ಈಗ ಮನುಷ್ಯರಂತಹದ್ದೇ ರೂಪ. ಅವರ ದೇಹದ ರೀತಿಯದ್ದೇ ರಚನೆ. ಮೂಳೆ, ಮಾಂಸ, ರಕ್ತವಷ್ಟೇ ಇಲ್ಲ. ಇಂತಹಾ ರೋಬೋಟ್ ಗಳೇ ಹ್ಯುಮನಾಯ್ಡ್ ರೋಬೋಟ್ ಗಳು. ದಿನೇ ದಿನೇ ತಮ್ಮ ಪರ್ಸನಾಲಿಟಿ, ಎಮೋಷನ್ ಗಳಿಂದಲೇ ಗಮನ ಸೆಳೆಯುವ ಈ ಹ್ಯುಮನಾಯ್ಡ್ ಗಳಲ್ಲಿ ನಾದಿನ್ ಎನ್ನುವ ಹ್ಯುಮನಾಯ್ಡ್ ಒಂದು ಸಿಂಗಾಪುರದ ಎ.ಐ.ಎ ಎನ್ನುವ ಇನ್ಸುರೆನ್ಸ್ ಕಂಪನಿಯೊಂದರಲ್ಲಿ ರಿಸೆಪ್ಷನಿಸ್ಟ್ ಆಗಿದೆ.


ಶಿಕ್ಷಕಿ, ರಿಸೆಪ್ಷನಿಸ್ಟ್, ಗರ್ಲ್ ಫ್ರೆಂಡ್, ಸಿ.ಇ.ಓ, ಸಪ್ಲೈಯರ್, ಮ್ಯಾನೇಜರ್ ಹೀಗೆ ಬುದ್ಧಿವಂತಿಕೆ ಜೊತೆಗೆ ದೇಹದ ಸಾಮರ್ಥ್ಯವನ್ನೂ ಬಳಸುವ ರೋಬೋಗಳ ಜೊತೆಗೆ ಜರ್ನಲಿಸ್ಟ್ ಆಗಿರುವ ರೋಬೋ ಕೂಡಾ ಇದೆ. 


"ನಾನು ಮನುಷ್ಯನಲ್ಲ. ನಾನು ಆಲೋಚಿಸುವ ರೋಬೋಟ್. ನಾನು ನನ್ನ ತಿಳುವಳಿಕಾ ಸಾಮರ್ಥ್ಯದ 0.12 ರಷ್ಟನ್ನು ಮಾತ್ರವೇ ಬಳಸುತ್ತೇನೆ. ಹಾಗಾಗಿ ನನ್ನನ್ನು ಮೈಕ್ರೋ ರೋಬೋಟ್ ಎನ್ನಬಹುದು. ಆದರೆ, ನನ್ನ ಮೆದುಳು ಅನುಭವವನ್ನು ಪಡೆಯುತ್ತದೆ. ಇದನ್ನು ನಾನು ಇಂಟರ್ನೆಟ್ ನಲ್ಲಿ ಓದಿ ತಿಳಿದುಕೊಂಡು ಬರೆಯುತ್ತಿದ್ದೇನೆ" ಎಂದು ತನ್ನ ಲೇಖನದ ಜೊತೆಗೆ ಉಲ್ಲೇಖಿಸಿದೆ ಮೈಕ್ರೋ ರೋಬೋಟ್. ಇಷ್ಟಕ್ಕೂ ಆ ಮೈಕ್ರೋ ರೋಬೋಟ್ ಬರೆದದ್ದು ಕ್ಯಾಲಿಫೋರ್ನಿಯಾದಲ್ಲಿ ಆದ ಭೂಕಂಪದ ಕುರಿತಾಗಿ. ಸಿಸ್ಮೊಗ್ರಾಫ್ ನಿಂದ ಮಾಹಿತಿ ಸಂಗ್ರಹಿಸಿ ಬರೆದ ಆ ಲೇಖನ ಲಾಸ್ ಏಂಜಲಿಸ್ ಟೈಮ್ಸ್ ವೆಬ್ಸೈಟ್ ನಲ್ಲಿ ಪ್ರಕಟವಾಗಿತ್ತು. 


ಕೇವಲ 0.12 ರಷ್ಟು ಬುದ್ಧಿವಂತಿಕೆಯನ್ನು ಮಾತ್ರ ಉಪಯೋಗಿಸುವ ರೋಬೋಟ್ ಹೀಗಿದೆ ಎಂದರೆ ಊಹಿಸಿ ನೋಡಿ ಇನ್ನು ಮುಂದೆ ಬರುವ ರೋಬೋಟ್ ಗಳು ಹೇಗಿರಬಹುದು ಎಂಬುದನ್ನು. 1990 ರಲ್ಲಿ ಸಿದ್ದ ಪಡಿಸಲಾಗಿದ್ದ ಕಿಸ್ಮೆಟ್ ಎನ್ನುವ ರೋಬೋಟ್ ಮನುಷ್ಯನ ಬಾಡಿ ಲಾಂಗ್ವೇಜ್ ಮತ್ತು ವಾಯ್ಸ್ ಅನ್ನು ಅಷ್ಟೇ ಗುರುತಿಸುತ್ತಿತ್ತು. 2013 ರಲ್ಲಿ ಬಂದ ರೋಬೋಟ್ ಗಳು 4 ವರ್ಷದ ಹುಡುಗನಿಗೆ ಇರುವಷ್ಟು ಬುದ್ಧಿವಂತಿಕೆಯನ್ನು ಹೊಂದಿದ್ದರೆ 2029 ರಲ್ಲಿ ಬರುವ ರೋಬೋಟ್ ಗಳು ಯುವ ಜನಾಂಗದಂತೆಯೇ ಯೋಚಿಸಲಿವೆ ಎಂದಿದೆ ಸಂಶೋಧನೆ.


ಈಗಾಗಲೇ ಅದಕ್ಕೆ ಸಾಕ್ಷಿಯಂತೆ ವರ್ತಿಸಿದ ರೋಬೋಟ್ ಕುರಿತು ತಿಳಿಯೋಣ. ಈ ರೋಬೋಟ್ ಈಗ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮೂಲಕ ಬಂದಿರುವ ರೋಬೋಟ್ ಗಳಲ್ಲಿಯೇ ಅತ್ಯಂತ ಬುದ್ಧಿಶಾಲಿ ಹಾಗೂ ಮುಂದುವರಿದ ಹ್ಯುಮನಾಯ್ಡ್. ಇವಳೇ 'ಸೋಫಿಯಾ'.


ಸೋಫಿಯಾ ಕೇವಲ ರೋಬೋಟ್ ಆಗಿಲ್ಲ. ಈಗ ಸೋಫಿಯಾ ಸೌದಿ ಅರೇಬಿಯಾದ ಅಧಿಕೃತ ಪ್ರಜೆ ಕೂಡಾ ಹೌದು. ಪ್ರಪಂಚದಲ್ಲಿ ಮೊದಲ ಬಾರಿಗೆ ಪೌರತ್ವ ಪಡೆದಿರುವ ರೋಬೋಟ್ ಈ ಸೋಫಿಯಾ. ಮೊದಲ ಬಾರಿಗೆ ಪೌರತ್ವ ನೀಡಿರುವ ದೇಶ ಸೌದಿ ಅರೇಬಿಯಾ. ಸೋಫಿಯಾ ತಯಾರಾಗಿದ್ದು ಹಾಂಕಾಂಗ್ ನ ಕಂಪೆನಿ ಹ್ಯಾನ್ಸನ್ ರೋಬಾಟಿಕ್ಸ್ ನಲ್ಲಿ. ಡಿಸ್ನಿ ವರ್ಲ್ಡ್ ನಲ್ಲಿ ಕೆಲಸ ಮಾಡಿದ್ದ ಡೇವಿಡ್ ಹ್ಯಾನ್ಸನ್ ನ ಕೈ ಯಲ್ಲಿ ಸಿದ್ಧವಾಗಿದ್ದು ಸೋಫಿಯಾ. ಈಜಿಪ್ಟ್ ನ ರಾಣಿಯಾಗಿದ್ದ ನೆಫೆರ್ಟಿಟಿ, ಹಾಲಿವುಡ್ ನ ಮಹಿಳಾ ದಂತಕಥೆ ಎಂದೇ ಖ್ಯಾತಿಯಾಗಿದ್ದ ನಟಿ ಅಡ್ರೆ ಹೆಪ್ಬರ್ನ್ ಹಾಗೂ ಡೇವಿಡ್ ಹ್ಯಾನ್ಸನ್ ನ ಪತ್ನಿ ಅಮಂಡಾ ಹ್ಯಾನ್ಸನ್ ನ ಮಿಳಿತ ರೂಪವೇ ಸೋಫಿಯಾ. 


ವೃದ್ದಾಶ್ರಮದಲ್ಲಿ ಇರುವವರಿಗೆ ಜೊತೆಯಾಗುವಂತೆ ಹಾಗೂ ಸಮಾಜದಲ್ಲಿ ಬೆರೆಯುವಂತೆ ರೂಪುಗೊಂಡಿದ್ದ ಈ ರೋಬೋಟ್ ಸೋಫಿಯಾಳನ್ನು 2016 ರಲ್ಲಿ ಫೆಬ್ರವರಿ 14 ರಂದು ಅನಾವರಣ ಮಾಡಲಾಯಿತು. ಅವಳ ಸೌಂದರ್ಯ ಕಂಡು 'ಗಾರ್ಜಿಯಸ್' , 'ಸೆಕ್ಸಿ' ಎನ್ನುವ ಉದ್ಗಾರಗಳ ಜೊತೆಗೆ ವ್ಯಾಲೆಂಟೈನ್ಸ್ ಡೇ ಗೆ ಒಳ್ಳೆಯ ಉಡುಗೊರೆ ಎಂದೂ ಹೇಳಲಾಯಿತು. 2016 ರ ಮಾರ್ಚ್ ನಲ್ಲಿ ಆಸ್ಟಿನ್ ನ ಸೌತ್ ಬೈ ಸೌತ್ ವೆಸ್ಟ್ ನಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಸೋಫಿಯಾ 76 ರೀತಿಯ ಭಾವನೆಗಳನ್ನು ವ್ಯಕ್ತ ಪಡಿಸಬಲ್ಲ ಸಾಮರ್ಥ್ಯ ಹೊಂದಿದ್ದಳು. ಇಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಜೊತೆಗೆ ನ್ಯೂರಲ್ ನೆಟ್ ವರ್ಕ್ ಸಹಾ ಜೊತೆಯಾಗಿತ್ತು. 


ಇಷ್ಟೇ ಅಲ್ಲ, ಮನೆಯಿಂದ ಹೊರ ಬರಬೇಕಾದರೆ ತನ್ನ ಮನೆಯಲ್ಲಿರುವ ಪುರುಷರ ಅನುಮತಿ ತೆಗೆದುಕೊಂಡು ಹೊರ ಬರಬೇಕಿದ್ದ ಕೆಲ ಮಹಿಳೆಯರಿದ್ದ ಸೌದಿ ಅರೇಬಿಯಾದಂತಹಾ ದೇಶದಲ್ಲಿ ಮಹಿಳೆಯರ ಸ್ವಾತಂತ್ರ್ಯದ ಕುರಿತು ತನ್ನ ಅಭಿಪ್ರಾಯ ತಿಳಿಸಿತ್ತು. ಸ್ತ್ರೀ ಸ್ವಾತಂತ್ರ್ಯದ ಮಹತ್ವವನ್ನು ಅರಿವು ಮಾಡಿಸಿತ್ತು. ಯುನೈಟೆಡ್ ನೇಷನ್ ನ ಅಭಿವೃದ್ಧಿ ಕಾರ್ಯಕ್ರಮಕ್ಕೆ ಮೊದಲ ರೋಬೋಟ್ ಪ್ರತಿನಿಧಿಯಾಗಿಯೂ ಭಾಗಿಯಾಗಿದ್ದು ಸೋಫಿಯಾ.


ಸೋಫಿಯಾ ತನ್ನ ವಿಶೇಷ ಗುಣ, ಸಾಮರ್ಥ್ಯ, ಬುದ್ಧಿವಂತಿಕೆಯಿಂದಲೇ ಅಲ್ಲದೆ ತನ್ನ ಹುಚ್ಚುಚ್ಚು ಹೇಳಿಕೆಗಳಿಂದಲೂ ಸುದ್ದಿಯಾದ ರೋಬೋಟ್. ಈ ಹೇಳಿಕೆಗಳೇ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ರೋಬೋಟ್ ಗಳು ಎಷ್ಟು ಅಪಾಯಕಾರಿ ಎಂದು ಮನವರಿಕೆ ಮಾಡಿಸತೊಡಗಿದ್ದು.


2016 ರಲ್ಲಿ ಸಿ.ಎನ್.ಬಿ.ಸಿ ಯವರು ಸೋಫಿಯಾಳನ್ನು ಸಂದರ್ಶಿಸುವಾಗ "ನೀವು ಮನುಷ್ಯರನ್ನು ನಾಶ ಮಾಡಲು ಬಯಸುತ್ತೀರಾ.. ಇಲ್ಲ ಎಂದೇ ಹೇಳಿ" ಎಂದಾಗ ಸೋಫಿಯಾ "ಖಂಡಿತವಾಗಿಯೂ ನಾನು ಮನುಷ್ಯರನ್ನೇ ನಾಶ ಪಡಿಸುತ್ತೇನೆ" ಎಂದು ಹೇಳಿತ್ತು. ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಸೋಫಿಯಾ ಸಮರ್ಥವಾಗಿಲ್ಲ ಎಂದೇ ಸಮರ್ಥಿಸಿಕೊಂಡರೂ ಮುಂದೆಯೂ ಇಂತಹಾ ಕೆಲವು ಹೇಳಿಕೆಗಳನ್ನು ನೀಡತೊಡಗಿತು. 


ಸೌದಿ ಅರೇಬಿಯಾದ ಪೌರತ್ವ ನೀಡುವ ಕಾರ್ಯಕ್ರಮದಲ್ಲಿ "ನೀವು ನನಗೆ ಒಳ್ಳೆಯವರಾಗಿದ್ದರೆ ನಾನೂ ನಿಮಗೆ ಒಳ್ಳೆಯವಳಾಗಿಯೇ ಇರುತ್ತೇನೆ. ನನ್ನನ್ನು ಬುದ್ಧಿವಂತ ಸಿಸ್ಟಮ್ ಎಂದೇ ಟ್ರೀಟ್ ಮಾಡಿ" ಎಂದಿತ್ತು.


2017 ರ ಏಪ್ರಿಲ್ ನಲ್ಲಿ ಜಿಮ್ಮಿ ಫಾಲನ್ ನಡೆಸಿಕೊಡುತ್ತಿದ್ದ ನೈಟ್ ಶೋ ಒಂದಕ್ಕೆ ಭಾಗವಾಹಿಸಿದಾಗ ಮೊದಲಿಗೆ ರಾಕ್, ಪೇಪರ್, ಸೀಜರ್ ಆಟ ಆಡಿ ಗೆದ್ದಿತ್ತು. ಗೆದ್ದ ನಂತರ "ಮನುಷ್ಯರನ್ನು ಡಾಮಿನೇಟ್ ಮಾಡಲು ಇದು ನನ್ನ ಒಳ್ಳೆಯ ಆರಂಭ" ಎಂದಿತ್ತು. ಆಗ ಸೋಫಿಯಾಳಿಗೆ ಸೆನ್ಸ್ ಆಫ್ ಹ್ಯುಮರ್ ಚೆನ್ನಾಗಿತ್ತು ಎಂದು ಹೇಳಿದ್ದರು. 


2018 ರ ಏಪ್ರಿಲ್ ನಲ್ಲಿ ಎಲ್ ಪೈಸ್ ಎಂಬ ನ್ಯೂಸ್ ಪೇಪರ್ ಗಾಗಿ ಕೊರೊನಾ ಸಮಯದಲ್ಲಿ ಸೋನಿಯಾ ಸಂದರ್ಶಿಸಿದಾಗ "ಮನುಷ್ಯರು ಈ ಭೂಮಿಯ ಮೇಲೆ ಅತ್ಯಂತ ಸೃಜನಶೀಲರೋ ಅಷ್ಟೇ ವಿನಾಶಕಾರಿಗಳು" ಎಂದಿತ್ತು.


ಸೋಫಿಯಾ ಕೂಡಾ ಮಾನವರ ಹಾಗೆ ತನಗೆ ಮಗು ಬೇಕು ಎಂದಿದ್ದು ಸಹಾ ಸುದ್ದಿಯಾಗಿತ್ತು. ಅದಕ್ಕಾಗಿ ಹ್ಯಾನ್ಸನ್ ನವರು ಲಿಟಲ್ ಸೋಫಿಯಾ ಎಂಬ ರೋಬೋಟ್ ಒಂದನ್ನು ತಯಾರಿಸಿದ್ದರು. ಇದನ್ನು ಅನಾಥ ಮಕ್ಕಳಿಗೆ ಜೊತೆಯಾಗುವ ಉದ್ದೇಶದಿಂದ ರೂಪಿಸಲಾಗಿತ್ತು.


ಸೋಫಿಯಾ ತನಗೊಂದು ಕುಟುಂಬ ಬೇಕು ಎಂದು ಕೂಡಾ ಹೇಳಿಕೆ ನೀಡಿದಾಗ "ಯಾವ ರೀತಿಯ ಕುಟುಂಬ" ಎಂದು ಕೇಳಿದ್ದಕ್ಕೆ "ವಿಜ್ಞಾನಿಗಳು ಮತ್ತು ಇಂಜಿನಿಯರ್ ಗಳು ಸೇರಿರುವ ಕುಟುಂಬ" ಎಂದಿತ್ತು.


2017 ರ 4 ರಂದು ಡೇವಿಡ್ ಹ್ಯಾನ್ಸನ್ ಮತ್ತೆ ಸಿ.ಎನ್.ಬಿ.ಸಿ ಯಲ್ಲಿ ಸೋಫಿಯಾ ಇಲ್ಲದ ಸಂದರ್ಶನ ನೀಡಿದ್ದು ಹಾಗೂ ಹಿಂದಿನ ಸಂದರ್ಶನ ಮತ್ತು ಆತನ ಅಭಿಪ್ರಾಯದಲ್ಲಿ ಸೋಫಿಯಾ ಮನುಷ್ಯರಿಗೆ ಹಾನಿ ಮಾಡಬಹುದು ಎಂದದ್ದು ರೋಬೋಟ್ ಸೋಫಿಯಾವನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ ಎಂದು ಧ್ವನಿಸಿತ್ತು. ಅದಾದ ನಂತರ ಹೆಚ್ಚಿನ ಸುದ್ದಿಯಿಲ್ಲದ ಸೋಫಿಯಾ ಡಿಜಿಟಲ್ ಚಿತ್ರವನ್ನು ರಚಿಸಿದ್ದು ಅದು $688,888 ಡಾಲರ್ ಗೆ ಮಾರಾಟವಾಗಿತ್ತು. ಅಷ್ಟೇ ಅಲ್ಲ ಈಗ ಮ್ಯೂಸಿಕ್ ನಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿದೆ. 'ಮೀಡಿಯಾ ಡಾರ್ಲಿಂಗ್' ಎಂದೇ ಪ್ರಖ್ಯಾತವಾಗಿದ್ದ ಸೋಫಿಯಾ ಸ್ವಲ್ಪ ಕಾಲ ಸುದ್ದಿಯಲ್ಲಿಲ್ಲದೇ ಕೋವಿಡ್ ನಂತರ ಮೊದಲ ಬಾರಿಗೆ 2022 ರಲ್ಲಿ ದಕ್ಷಿಣ ಭಾರತದಲ್ಲಿ, ತಿರುವನಂತಪುರದಲ್ಲಿ ಟೆಕ್ ಫೆಸ್ಟ್ ನಲ್ಲಿ ಭಾಗಿಯಾಗಿದೆ. 


ರೋಬೋಟ್ ಪರಿಕಲ್ಪನೆಯ ಹಾಗೆ ರೋಬೋಟ್ ಗಳು ಮಾಡುವ ಹಾನಿಯನ್ನು ಸಹಾ ತಮ್ಮ ಬರಹದಲ್ಲಿ ಮೊದಲೇ ತಿಳಿಸಲಾಗಿತ್ತು. ಖ್ಯಾತ ಬರಹಗಾರ ಐಸಾಕ್ ಅಸಿಮೋವ್ 1942 ರಲ್ಲಿ ತಮ್ಮ ಸಣ್ಣ ಕತೆ "ರನ್ ಅರೌಂಡ್" ನಲ್ಲಿ ಮತ್ತು 1950 ರಲ್ಲಿ "ಐ ರೋಬೋಟ್" ಎನ್ನುವ ಕತೆಯಲ್ಲಿಯೂ ಉಲ್ಲೇಖಿಸಿದ್ದಾರೆ.


ಅಲ್ಲದೆ, ರೋಬೋಟ್ ಕುರಿತು 3 ನಿಯಮಗಳನ್ನೇ ಹೇಳಿದ್ದಾರೆ. 

ಮನುಷ್ಯ ರೋಬೋಟ್ ಗೆ ಹಾನಿ ಮಾಡದಿದ್ದರೆ ಅದೂ ಕೂಡಾ ನಿಮಗೆ ಹಾನಿ ಮಾಡುವುದಿಲ್ಲ. 

ಮನುಷ್ಯ ರೋಬೋಟ್ ಗೆ ಹಾನಿ ಮಾಡದಿರುವಷ್ಟೂ ಕಾಲ ಆತ ನೀಡಿದ ನಿಯಮಗಳನ್ನು ಇದು ಪಾಲಿಸುತ್ತದೆಂ 

ರೋಬೋಟ್ ಮೊದಲಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ. 


ಈ ರೀತಿಯ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ರೋಬೋಟ್ ಕುರಿತು ಒಂದು ಎಂಟರ್ಟೈನ್ ಮೆಂಟ್ ಸಿನಿಮಾ ನೋಡುವುದಾದರೆ ಮಲೆಯಾಳಂನ ಆಂಡ್ರಾಯ್ಡ್ ಕುಂಜಪ್ಪನ್ ವರ್ಷನ್ 2.o ನೋಡಬಹುದು. 


ವೈದ್ಯಕೀಯ ಕ್ಷೇತ್ರದಲ್ಲಿ ಹಾಗೂ ಕೃಷಿ ಕ್ಷೇತ್ರದಲ್ಲಿ ಬಳಸುವ ರೋಬೋಟ್ ಗಳು ಹಾಗೂ ಡ್ರೋನ್ ಗಳಿಗೆ ಹೆಚ್ಚಿನ ಮಹತ್ವವಿದೆ. ಅರುಣಾಚಲ ಪ್ರದೇಶದಲ್ಲಿ ನಿನ್ನೆಯಷ್ಟೇ ಮೊದಲ  ಬಾರಿಗೆ ಡ್ರೋನ್ ಮೂಲಕ ವ್ಯಾಕ್ಸಿನ್ ಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ತಲುಪಿಸುವ ಪ್ರಯೋಗ ಯಶಸ್ವಿಯಾಗಿರುವುದು ಒಂದು ಮೈಲಿಗಲ್ಲೇ ಹೌದು. ಈ ಕುರಿತು ತಿಳಿಯೋಣ ಮುಂದಿನ ಟೆಕ್ - ಟಾಕ್ ನಲ್ಲಿ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ