ಲೇಖಕರು : ತ್ರಿವೇಣಿ
ಪ್ರಕಾಶಕರು : ಭಾರತೀ ಪ್ರಕಾಶನ
ಮರು ಮುದ್ರಣ : 2023
ಪುಟಗಳು : 200
ಬೆಲೆ : 160 ರೂ.
ರಮೇಶ ಹಾಗೂ ಶಾಂತರ ನಡುವಿನ ಅತ್ತಿಗೆ ಹಾಗೂ ಮೈದುನರ ಸ್ನೇಹ ಸಂಬಂಧ ನಿಜಕ್ಕೂ ಮನಸೆಳೆಯುವಂತಿದೆ. ಅಷ್ಟು ನಿಷ್ಕಲ್ಮಶವಾದ ಪ್ರೀತಿ, ಜೊತೆಗೆ ಕಾಲೆಳೆಯುತ್ತಾ ಇರುವ ಅವರ ಸ್ನೇಹದ ಪರಿ ವಿಸ್ಮಯವನ್ನು ತರಿಸುತ್ತದೆ. ಮೆಡಿಕಲ್ ಓದುತ್ತಿದ್ದ ರಮೇಶನಿಗೆ ಊಟ, ತಿಂಡಿ, ಓದು, ಏಳಿಸುವುದರ ಕಡೆಗೆ ಗಮನ ಕೊಡುವುದು, ಬೇರೆ ವಿಚಾರದಲ್ಲಿಯೂ ಎಚ್ಚರಿಸುವುದು ಹೀಗೆ ಪ್ರತಿಯೊಂದರ ಕಾಳಜಿ ಮಾಡುತ್ತಿದ್ದ ಶಾಂತ ಅವನ ಪಾಲಿಗೆ ಎರಡನೆಯ ತಾಯಿಯಂತೆ ಎಂದರೂ ತಪ್ಪಾಗಲಾರದು. ಅಣ್ಣನೊಡನೆ ಮನ ಬಿಚ್ಚಿ ಮಾತನಾಡದ ರಮೇಶ ಅವರಿಬ್ಬರ ರೂಮಿಗೆ ನುಗ್ಗಿ ಆಕೆಯೊಡನೆ ಗಂಟೆಗಟ್ಟಲೆ ಹರಡುವಷ್ಟು ಸ್ನೇಹಮಯವಾಗಿದ್ದರು.
ಆದರೆ, ರಮೇಶನ ಮಾತುಗಳು ಕೊಂಚ ಒರಟು. ಮೃದು ಸ್ವಭಾವದ ಶಾಂತಳಿಗೆ ಆತ ಎಷ್ಟೇ ಸ್ನೇಹಮಯಿಯಾಗಿದ್ದರೂ.. ಅಂತಹಾ ದುಡುಕು, ಕಟು ಮಾತುಗಳನ್ನು ತಡೆದುಕೊಳ್ಳಲು ಕಷ್ಟವೇ ಆಗುತ್ತಿತ್ತು. ಅಂತಹಾ ಸಂದರ್ಭದಲ್ಲಿ ಅವಳು ಮನಸ್ಸು ಬಾಡಿಸಿಕೊಳ್ಳುತ್ತಿದ್ದಳಾದರೂ.. ಮತ್ತೆ ಆತ ಬಂದು ಕ್ಷಮೆ ಕೇಳಿದ ತಕ್ಷಣ ಕೋಪ ಮುನಿಸು ಮಾಯವಾಗಿ ಮತ್ತೆ ಮೊದಲಿನಂತೆ ಆಗಿಬಿಡುತ್ತಿದ್ದಳು. ಚಿಕ್ಕ ಮಗ ಹಾಗೂ ಹಿರಿಯ ಸೊಸೆಯ ಸ್ವಭಾವ ತಿಳಿದವರೇ ಆದ ಸುಶೀಲಮ್ಮನವರು ಶಾಂತಳ ಸೂಕ್ಷ್ಮಸ್ವಭಾವದ ಪರಿಚಯವನ್ನು ರಮೇಶನಿಗೆ ನೆನಪಿಸುತ್ತಿದ್ದರು. ಹಾಗಾಗಿ ಇಂತಹಾ ಘಟನೆಗಳು ನಡೆದರೂ.. ನಂತರ ಅವರಿಬ್ಬರು ಮತ್ತಷ್ಟು ಆಪ್ತವೇ ಆಗಿಬಿಡುತ್ತಿದ್ದರು.
ರಾಮಣ್ಣನ ಹೆಂಡತಿ, ಸುಶೀಲಮ್ಮನವರ ಸೊಸೆಯಾದರೂ.. ರಮೇಶನ ಅತ್ತಿಗೆಯಾಗಿಯೇ ಶಾಂತ ಹೆಚ್ಚು ಸೆಳೆಯುತ್ತಾಳೆ. ಆಕೆ ರಾಮಣ್ಣನನ್ನು ಮದುವೆಯಾಗಿ ಮನೆಗೆ ಕಾಲಿಟ್ಟು 12 ವರ್ಷವಾಗಿತ್ತು. ಆಕೆ ಬಂದಾಗ ರಮೇಶನಿಗೆ 11 ವರ್ಷ. ಆದರೆ, ಶಾಂತಳಿಗೆ ಇನ್ನೂ ಮಕ್ಕಳಾಗದಿದ್ದದ್ದು ಒಂದು ಕೊರತೆ. ಕೊರತೆಯಾದರೂ ಅದನ್ನು ರಮೇಶ ಮದುವೆಯಾಗಿ ಆತನ ಮಗುವಿನಲ್ಲಿ ಕಾಣುವ ಆಸೆಯೂ ಇಲ್ಲದ್ದಿಲ್ಲ ಶಾಂತಳಿಗೆ. ರಮೇಶನಿಗಾಗಿ ಹುಡುಗಿ ಹುಡುಕುವ ಅವಳ ಉತ್ಸಾಹವು ಹೆಚ್ಚೇ ಇದ್ದಿತು.
ಆಗಾಜಿಗೆ ಹೆಚ್ಚಿನ ತಲೆನೋವು ಬರುಲು ಶುರುವಾಗಿದ್ದರಿಂದ ಕಸೂತಿ ಹಾಕುವುದು, ಪುಸ್ತಕಗಳನ್ನು ದೂರ ಇಡುವುದು ಮಾಡಿದರೂ.. ಅದು ಕಡಿಮೆಯಾಗಲೇ ಇಲ್ಲ. ಕಣ್ಣಿನ ಯಾವ ದೋಷವೂ ಇಲ್ಲದೆ ಇದ್ದಾಗ.. ಮಾನಸಿಕ ಕೊರಗಿರಬಹುದು ಎಂದು ಚಿಂತೆಯಾಗಿತ್ತು. ಕೆಲ ದಿನಗಳು ತವರು ಮನೆಗೆ ಹೋಗಿ ಬಂದರೆ ಅದು ಸರಿಯಾಗಬಹುದೇನೋ ಎಂದು ತವರಿಗೆ ಹೊರಟರೂ.. ರಮೇಶನದ್ದು ಹೋಗಬೇಡಿ ಎನ್ನುವ ವರಾತವೇ.. ಆತನ ಮುನಿಸಿನ ನಡುವೆಯೂ ಆಕೆ ತವರಿಗೆ ಹೊರಟಳು.
ಆದರೆ, ದಿನೇ-ದಿನೇ ನವೆಯುತ್ತಿದ್ದ ಶಾಂತಳನ್ನು ಮತ್ತೆ ಕರೆತಂದು ಆಸ್ಪತ್ರೆಗೆ ಸೇರಿಸಿದರು. ರಮೇಶ ಬಂದು ಮಾತನಾಡುತ್ತಿದ್ದಾಗ ಕೊಂಚ ಲವಲವಿಕೆಯಿಂದ ಇರುತ್ತಿದ್ದಳು. "ನಾಲಿಗೆಯು ಇರುವವರಿಗೆ ಮಾತು, ಕಣ್ಣಿರುವವರೆಗೆ ನೋಟ" ಎಂದು ಯಾವುದೋ ಘಳಿಗೆಯಲ್ಲಿ ಆಡಿದ ಮಾತು ಅವಳ ಪಾಲಿಗೆ ನಿಜವಾಯಿತು. ಮಾತು ನಿಂತ ನಂತರ ಮತ್ತಷ್ಟು ಪರೀಕ್ಷೆ ಮಾಡಿದ ನಂತರ ಅವಳ ಕಾಯಿಲೆಗೊಂದು ಹೆಸರು ಸಿಕ್ಕಿತು. ಅದೇ 'ಬ್ರೈನ್ ಟ್ಯೂಮರ್'. ದುರ್ಬಲಳಾಗಿದ್ದ ಅವಳು ಮೃತ್ಯುವಿನೊಡನೆ ಹೋರಾಡುತ್ತಲೇ ಶಾಂತವಾಗಿ ಹೊರಟು ಹೋದಳು.
ಶಾಂತ ಸಾವು ರಮೇಶನ ಮನಸ್ಸಿನ ಮೇಲೆ ಪರಿಣಾಮ ಬೀರಿತು. ಆಕೆಯನ್ನು ತವರಿಗೆ ಕರೆದುಕೊಂಡು ಹೋದುದರಿಂದ ಆಕೆ ಸರಿಯಾದ ಚಿಕಿತ್ಸೆ ಇಲ್ಲದೆ ಸತ್ತಳು ಎಂಬ ಭಾವದಲ್ಲಿ ಅವಳ ತಂದೆ-ತಾಯಿಯನ್ನು ಸಹ ದೂಷಿಸಿದ್ದ. ಕೊನೆಗೆ, ಮಗನ ದುಡುಕು ಮಾತಿಗೆ ಶೇಷಗಿರಿರಾಯರೇ ಬೀಗರ ಬಳಿ ಕ್ಷಮಾಪಣೆ ಯಾಚಿಸಿದ್ದರು. ಶಾಂತನನ್ನು ಉಳಿಸಿಕೊಳ್ಳಲಾಗದ ತನ್ನ ವೈದ್ಯಕೀಯದ ಓದನ್ನು ಮುಂದುವರೆಸದಾದ ರಮೇಶ. ಒಮ್ಮೆ ಆಕೆಯ ಭಾವಚಿತ್ರಕ್ಕೆ ಹಾಕಿದ ಹಾರವನ್ನು ತೆಗೆದುಹಾಕಿ ರಂಪ ಮಾಡಿದ್ದ. ತಿನ್ನಲಿಕ್ಕೆ ಆಹಾರವಿಲ್ಲದವರು ಸೊರಗಿದಂತೆ, ಕುಗ್ಗಿದ್ದ ರಮೇಶ ದಿನೇದಿನೇ ಬಡವಾಗುತ್ತಾ ಬಂದ. ಎಲ್ಲದರಲ್ಲಿಯೂ ಆಸಕ್ತಿ ಕಡಿಮೆಯಾಗಿತ್ತು.
ರಾಮಣ್ಣನಿಗೆ ಮತ್ತೊಂದು ಮದುವೆಯ ಪ್ರಸ್ತಾಪ ಬಂದಾಗ ರಮೇಶ ಎಲ್ಲರ ಮುಂದೆ ಕೂಗಾಡಿದ್ದ. ಇಷ್ಟು ಬೇಗ ಶಾಂತಳನ್ನು ಮರೆತು ಅಣ್ಣ ವಿವಾಹವಾಗಲು ಮನಸ್ಸು ಮಾಡಿದ್ದು ಆತನಿಗೆ ಸರಿ ಕಂಡಿರಲಿಲ್ಲ. ಹಾಗೆಂದು ರಾಮಣ್ಣ ಅದನ್ನು ಆಶಿಸಿರಲಿಲ್ಲವಾದರೂ.. ರಮೇಶನ ನಡವಳಿಕೆಯಿಂದ ಅವನಿಗೆ ಸ್ವಲ್ಪ ಸ್ಥಳ ಬದಲಾವಣೆಯಾದರೆ ಸರಿಯಾಗಬಹುದೇನೋ ಎಂಬ ಸಂದರ್ಭದಲ್ಲಿ ರಾಮಣ್ಣನಿಗೆ ಗೆಳೆಯ ಶೇಷಾದ್ರಿಯ ನೆನಪಾಗಿತ್ತು. ಶಾಂತ ತವರಿಗೆ ಹೋಗಿದ್ದ ಸಂದರ್ಭದಲ್ಲಿ ಅವರು ಕುಟುಂಬ ಸಮೇತ ಮನೆಗೂ ಬಂದು ಹೋಗಿದ್ದರು. ರಮೇಶ ತಮ್ಮಲ್ಲಿಗೆ ಬರಲು ಅಡ್ಡಿಯಿಲ್ಲವೆಂದೂ ತಿಳಿಸಿದ್ದರು.
ಮುಂಬೈಯಲ್ಲಿ ವಾಸವಾಗಿದ್ದರು ಶೇಷಾದ್ರಿ ಹಾಗೂ ಆತನ ಪತ್ನಿ ರತ್ನ ಜೊತೆಗೆ ಮುದ್ದು ಮಗಳು ಆಶಾ. ಆಶಾ ಇನ್ನು ಪುಟ್ಟ ಮಗು. ಯಾವುದೋ ಮನಸ್ಸಿನಿಂದ ಅಲ್ಲಿಗೆ ಹೋಗಲು ಒಪ್ಪಿಗೆ ಕೊಟ್ಟಿದ್ದ. ರಮೇಶ ಹೊರಟು ನಿಂತನಾದರೂ.. ಹೋಗುವವರೆಗೂ ಇದ್ದ ಮನಸ್ಸು ಅಲ್ಲಿಗೆ ಹೋದ ಮೇಲೆ ಯಾಕಾದರೂ ಇಲ್ಲಿಗೆ ಬಂದೆನೋ ಎಂಬಂತಾಗಿತ್ತು. ಎಲ್ಲದರಲ್ಲಿಯೂ ಮತ್ತದೇ ಮೌನ, ನಿರ್ಲಕ್ಷ್ಯ, ಜೊತೆಗೆ ವಿಮನಸ್ಕತೆ. ರತ್ನ ಎಷ್ಟೇ ಮಾತನಾಡಿಸಿದರೂ ಅವನ ಅನ್ಯಮನಸ್ಕತೆ ಅವಳನ್ನು ಸುಮ್ಮನಿರುವಂತೆ ಮಾಡುತ್ತಿತ್ತು.
ಶೇಷಾದ್ರಿಯು ಕೆಲಸದ ಒತ್ತಡದಿಂದ ಅವರ ಫಾರ್ಮಸಿಯಲ್ಲಿ ಇರುತ್ತಿದ್ದರು. ಬೇಡವೆಂದರೂ ರತ್ನಳೊಟ್ಟಿಗೆ ಮಾತನಾಡಲೇಬೇಕಾಗುತ್ತಿತ್ತು. ಅದು ಕೆಲವೊಮ್ಮೆ ಅವನಿಗೆ ಶಾಂತಳ ನೆನಪನ್ನು ತರುತ್ತಿತ್ತು.
ರತ್ನಳ ಜೊತೆಗೆ ಇದ್ದರೂ.. ಆಕೆ ನಿರೀಕ್ಷಿಸಿದಂತೆ, ಬಯಸಿದಂತೆ ಪೂರ್ಣ ಪ್ರೇಮವನ್ನೇನು ನೀಡಿರಲಿಲ್ಲ ಶೇಷಾದ್ರಿ. ಬದಲಾಗಿ ಆತನಿಗೆ ರೋಗಿಗಳ ಕುರಿತಾಗಿ ಸೇವೆಯಲ್ಲಿ ಹೆಚ್ಚು ಆಸಕ್ತಿ. ಹಾಗಾಗಿ ಆಕೆ ಒಡನಾಡಲು ಬಯಸುತ್ತಿದ್ದ ಜೀವವಾಗಿ ರಮೇಶ ಸಿಕ್ಕಿದ್ದ.
ರಮೇಶನಿಗೆ ನಳಿನಿಯ ಪರಿಚಯವನ್ನು ಮಾಡಿಸಿದರೆ ನಳಿನಿಯ ಒಡನಾಟದಿಂದ ಆತನ ಮನಸ್ಸು ಪ್ರೇಮದೆಡೆಗೆ ತಿರುಗಬಹುದೆಂಬ ನಿರೀಕ್ಷೆ ಇದ್ದರೂ ಅದು ಸಾಧ್ಯವಾಗಲಿಲ್ಲ. ಬದಲಾಗಿ ರಮೇಶ ರತ್ನಳತ್ತ ಹೆಚ್ಚು ಆಕರ್ಷಿತವಾಗುತ್ತಿದ್ದ.
"ಪ್ರೇಮ ತಾವರೆಯ ಬೇರಿನಂತೆ, ತಾವರೆಯ ಬೇರಿಗೆ ಸಿಕ್ಕಿದ ಮನುಷ್ಯ ಅದರ ಗೋಜಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಬೇರು ಅವನನ್ನು ಮತ್ತಷ್ಟು ಬಂಧಿಸಿ ಕೆಸರಿನಾಳದೊಳಕ್ಕೆ ಸೆಳೆಯುವಂತೆ, ರಮೇಶ ಪ್ರೇಮದ ತಿಳಿನೀರಿನ ಕೊಳದೊಳಗೆ ಕಾಲಿರಿಸಿ ನಂತರ ಬೇರಿನ ರುದ್ರಾಲಿಂಗನಕ್ಕೆ ಸಿಕ್ಕಿ ವಿವಶವಾಗುತ್ತಿದ್ದ."
ಈ ಪ್ರೇಮದಿಂದ ರತ್ನ ಹಾಗೂ ರಮೇಶನ ಬದುಕಿನಲ್ಲಿ ಆದ ಬದಲಾವಣೆಗಳೇನು..?? ಇದು ರತ್ನಳ ಸಂಸಾರದ ಮೇಲೆ ಪರಿಣಾಮವನ್ನೇನಾದರೂ ಉಂಟು ಮಾಡಿತೇ..?? ಶೇಷಾದ್ರಿಗೆ ಇದರ ಸುಳಿವಿತ್ತೇ..?? ಆಶಾಳ ಅನಾರೋಗ್ಯ ರಮೇಶನನ್ನು ಮತ್ತೆ ಯಾವ ರೀತಿ ವೈದ್ಯಕೀಯದತ್ತ ಸೆಳೆದು ತಂದಿತು..?? ಆತನ ನೆನಪಿನಲ್ಲಿದ್ದ ಶಾಂತ ಮಸುಕಾಗುತ್ತಿದ್ದಾಳೆ ಅಥವಾ ಶಾಂತಲಳ ಛಾಯೆಯೇ ಆತನನ್ನು ಬೇರೆಯ ಬದುಕಿನತ್ತ ಕರೆದೊಯ್ಯಿತೇ..??
ಈ ಕಾದಂಬರಿ ಬೇರೆಯದ್ದೇ ರೀತಿಯ ಆಲೋಚನೆಯನ್ನು ಮೂಡಿಸಿತು. ವ್ಯಕ್ತಿಗಳ ನಡವಳಿಕೆಗಳ ತಪ್ಪು-ಸರಿಗಿಂತಲೂ ಅವರ ಭಾವನಾತ್ಮಕ ಆಲೋಚನೆಯ ಕುರಿತು ಆಲೋಚಿಸುವಂತಾಯಿತು. ಸಂಬಂಧಗಳ ಆಳಕ್ಕಿಳಿದಷ್ಟು ನಾವು ಅವರೊಡನೆ ಬೆರೆಯುವ ಸಂದರ್ಭಗಳು ಅವರ ಸಾವಿನಿಂದ ಮನಸ್ಥಿತಿಯ ಮೇಲಾಗುವ ಪರಿಣಾಮವನ್ನು, ಅದರಿಂದ ಉಂಟಾಗುವ ಪರಿಣಾಮಗಳನ್ನು ಗಾಢವಾಗಿ ಚಿತ್ರಿಸಿದ್ದಾರೆ. ಇಲ್ಲಿ ನನಗೆ ರತ್ನಳಿಗಿಂತಲೂ.. ಮೊದಲರ್ಧದಲ್ಲಿ ಕಾಡಿದ ಶಾಂತಳೇ ಮನಸ್ಸಿನಲ್ಲಿ ಹೆಚ್ಚು ನೆಲೆಯಾದಳು. ಶಾಂತಳೇ ಹೆಚ್ಚು ಕಾಡುತ್ತಾಳೆ. ಓದುಗಳಾಗಿ ನನಗೇ ಹೀಗೆನ್ನಿಸಿದಾಗ ಇನ್ನು ರಮೇಶನ ಮನಸ್ಥಿತಿಯನ್ನು ಆಲೋಚಿಸಬಹುದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ