ಬುಧವಾರ, ಏಪ್ರಿಲ್ 15, 2026

ವಿಜಯದ ಮೆಟ್ಟಿಲು (ಪುಸ್ತಕ ಯಾನ - 176)


ಪುಸ್ತಕದ ಶೀರ್ಷಿಕೆ : ವಿಜಯದ ಮೆಟ್ಟಿಲು

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ

ಎರಡನೇ ಮುದ್ರಣ : 2023


ವಸುಧಾ ಅಂದು ಆಫೀಸ್ ಮುಗಿಸಿ ಅಚ್ಚರಿಯಿಂದ ಹೊರ ಬಂದಾಗ ಸುರೇಶ ಆಕೆಗಾಗಿಯೇ ಕಾಯುತ್ತಿದ್ದ. ಆದರೆ, ಆತ ಹೇಳಿದ ವಿಚಾರ ಆಕೆಯನ್ನು ಕೊಂಚ ಗಲಿಬಿಲಿಗೊಳಿಸಿತ್ತು. 30 ವರ್ಷವಾದರೂ ಅವಿವಾಹಿತೆಯಾಗಿದ್ದ ಅವಳನ್ನು ಅವಳಿಗಿಂತ ಮೂರು ವರ್ಷ ಚಿಕ್ಕವನಾಗಿದ್ದವನು ಮದುವೆಯಾಗಲು ಬಯಸಿ ಇದಕ್ಕೆ ನಿಮ್ಮ ಒಪ್ಪಿಗೆ ಇದೆಯೇ..?? ಎಂದು ಕೇಳಿದಾಗ ಅದರ ಹಿಂದಿನ ಮನಸ್ಸನ್ನು ಅರಿಯಲು ಸೋತಿದ್ದಳು.


ಸುರೇಶ ಇದ್ದದ್ದು ವಸುಧಾರ ಮನೆಯಲ್ಲಿಯೇ ಬಾಡಿಗೆಗಿದ್ದ ಅವನ ಅಕ್ಕ ಸೀತಮ್ಮನ ಮನೆಯಲ್ಲಿ. ಆತನಿಗೆ ಮೂವರು ಅಕ್ಕಂದಿರು ಹಾಗೂ ಮೂವರು ತಂಗಿಯರು. ಈಗಾಗಲೇ ಮೂರು ಅಕ್ಕಂದಿರಿಗೂ ಮದುವೆಯಾಗಿದ್ದು ಮೂವರು ಅವಿವಾಹಿತ ತಂಗಿಯರ ವಿವಾಹದ ಹೊಣೆ ಆತನ ಮೇಲೆಯೇ ಇದ್ದಿತು. ಸೀತಮ್ಮನ ಮಕ್ಕಳಲ್ಲಿ ಮೂವರು ರೂಪವತಿಯರೇ.. ಅವರಲ್ಲಿಯೇ ಯಾರನ್ನಾದರೂ ಆತ ಮದುವೆಯಾಗಬಹುದು ಎಂದುಕೊಂಡಿದ್ದರು ವಸುಧಾ ಮನೆಯವರು. 


ವಸುಧಾಳಿಗೆ ವಯಸ್ಸಿರುವಾಗ ಸುಮಾರಷ್ಟು ಸಂಬಂಧ ಬಂದಿದ್ದರೂ ಆಕೆಯ ತಾಯಿ ಅದಕ್ಕಿಂತ ಚೆಂದದವರು ಸಿಗುತ್ತಾರೆ ಅಥವಾ ಅವರಿಗಿಂತ ನಿರೀಕ್ಷೆಯ ಮಟ್ಟ ಮೇಲಿದ್ದು.. ಸಣ್ಣಪುಟ್ಟ ಕಾರಣ ಹೇಳಿ ನಿರಾಕರಿಸಿದ್ದರು. ವಸುಧಾ ವಿದ್ಯಾವಂತೆ, ಬುದ್ಧಿವಂತೆ ಹಾಗೂ ಸಂಬಳ ತರುತ್ತಿದ್ದ ಹುಡುಗಿ. ಆದರೆ, ರೂಪದಲ್ಲಿ ಕಪ್ಪು. ವಸುಧಾಳ ತಾಯಿ ಕಮಲಮ್ಮ ಆಗಾಗ ಪೇಚಾಡುತ್ತಾ ಇದ್ದರಾದರೂ.. ಈಗ ಹಾಗೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲವೆಂಬುದು ಗೊತ್ತಿತ್ತು. ಸುರೇಶ ವಿವಾಹಕ್ಕಾಗಿ ಒಪ್ಪಿಗೆ ಕೇಳಿದ ಸಂದರ್ಭದಲ್ಲಿಯೇ ಗೋದುಬಾಯಿ ಎಂಬುವವರು ಇಂದಿರಮ್ಮನ ಮೈದುನನನ್ನು ಸೂಚಿಸಿದ್ದರು. ಆದರೆ, ಆತನ ರೂಪ ಅಷ್ಟು ಚೆನ್ನಾಗಿರಲಿಲ್ಲವೆಂದು ವಸುಧಾ ನಿರಾಕರಿಸಿ, ಆತನಿಗಿಂತ ಸುರೇಶನೇ ಮೇಲು ಎಂಬ ತೀರ್ಮಾನಕ್ಕೂ ಬಂದಾಗಿತ್ತು ಮೂವರು. 


ತಂದೆ-ತಾಯಿಯ ಒಬ್ಬಳೇ ಮಗಳಾಗಿದ್ದ ವಸುಧಾಳಿಗೆ ಮನೆಯಲ್ಲಿ ಕೆಲಸ ಮಾಡಿ ರೂಢಿ ಇರಲಿಲ್ಲ. ಅಲ್ಲದೆ, ಸಂಪಾದನೆ ಮಾಡುತ್ತಿದ್ದ ಮೇಲಂತೂ ಕೊಂಚ ದರ್ಪವೂ ಬಂದಿತ್ತು. ವಸುಧಾಳ ತಂದೆ ಶಾಮರಾಯರು ಚೆನ್ನಾಗಿ ಸಂಪಾದನೆ ಮಾಡಿಟ್ಟಿದ್ದರು. ಮಗಳ ಮದುವೆಗೆಂದು 2 ಲಕ್ಷ ರೂಪಾಯಿ ಹಾಗೂ ಚಿನ್ನವನ್ನು ತೆಗೆದಿಟ್ಟಿದ್ದರು. ಮನೆಗೆಯ ಬಾಡಿಗೆಯ ಆಧಾರವೂ ಇತ್ತು.


ಸೀತಮ್ಮನಿಗೆ ತಿಳಿಯದಂತೆ ಸುರೇಶನ ಮನೆಗೆ ಹೋಗಿ ಆತನ ತಂದೆ-ತಾಯಿಯ ಬಳಿ ಮಾತನಾಡಿ ಮದುವೆ ನಿಶ್ಚಯಿಸಿದರು. ಆದರೆ, ಅದಕ್ಕೊಂದು ತೊಡಕಿತ್ತು. ಆತನ ಮೂವರು ತಂಗಿಯರ ವಿವಾಹವಾಗಬೇಕಿತ್ತು. ಒಬ್ಬ ಮಗಳು ರಂಜಿತಾಳಿಗೆ ಅವರ ತಮ್ಮನೇ ಇದ್ದ. ಇನ್ನೊಬ್ಬ ಮಗಳಿಗೂ ವರ ನಿಶ್ಚಯವಾಯಿತು. ಆದರೆ, ಅವರಿಬ್ಬರಿಗಿಂತ ಹಿರಿಯ ಮಗಳಾದ ರಾಜೇಶ್ವರಿಗೆ ಕಂಕಣ ಕೂಡಿ ಬರಬೇಕಿತ್ತು. ಹಾಗಾಗಿ ಕಮಲಮ್ಮನವರು ಯೋಚಿಸಿ ಇಂದಿರಮ್ಮನ ಮೈದುನನಿಗೆ ಆಕೆಯನ್ನು ತೋರಿಸಿದರು. ಬಡವಳಾದರು ಪರವಾಗಿಲ್ಲ ಆದರೆ ರೂಪ ತುಂಬಾ ಚೆನ್ನಾಗಿರಬೇಕು ಎನ್ನುವ ನಿರೀಕ್ಷೆಯಲ್ಲಿದ್ದ ಆತನಿಗೆ ರಾಜೇಶ್ವರಿ ಬಹಳ ಹಿಡಿಸಿದಳು. ರಾಜೇಶ್ವರಿಯ ವಿವಾಹ ಗೋಪಾಲ್ ನೊಂದಿಗೆ ನಡೆಯಿತು. 


ಸುರೇಶನಿಗೆ ವಸುಧಾ ನಿಶ್ಚಯವಾದ ನಂತರ ಸೀತಮ್ಮನಿಗೆ ಆತನ ಕುರಿತು ಅಸಡ್ಡೆಯೂ.. ಕೋಪವೂ ಇತ್ತು. ಅಲ್ಲದೆ, ರಾಜೇಶ್ವರಿ ಮದುವೆಯಾದ ಹುಡುಗ ಆಕೆಯನ್ನು ತೋರಿಸದಿದ್ದರೆ ಸೀತಮ್ಮನ ಮಕ್ಕಳಲ್ಲಿ ಯಾರಾದರೂ ಒಬ್ಬರನ್ನು ಮದುವೆಯಾಗುತ್ತಿದ್ದ ಎನ್ನುವ ಸುದ್ದಿಯು ಕಿವಿಗೆ ಮುಟ್ಟಿದಾಗ ಆಕೆಗೆ ಕೋಪ ಬಂದಿತ್ತು. ಆದರೆ, ಕಮಲಮ್ಮನವರನ್ನು ಎದುರು ಹಾಕಿಕೊಳ್ಳುವಂತಿರಲಿಲ್ಲ. 


ಗೋಪಾಲ್ ಹಾಗೂ ರಾಜೇಶ್ವರಿಯ ಓಡಾಟ, ಒಡನಾಟ ವಸುಧಾಳಲ್ಲಿ ಕೊಂಚ ಇರ್ಷ್ಯೆ ತಂದಿದ್ದೂ ಇದೆ. ಅಲ್ಲದೆ, ಸುರೇಶ ಹಾಗೂ ವಸುಧಾರ ಮದುವೆಯಾದ ನಂತರವೂ ಆತ ಹೆಚ್ಚು ಮನೆಯಲ್ಲಿರದೆ ಹಬ್ಬ-ಹರಿದಿನಗಳಲ್ಲಿಯೂ ಕಚೇರಿಯ ಕೆಲಸವಿದೆ ಎಂದು ಮುಂಬೈಗೆ ಹೋಗುತ್ತಿದ್ದ. ಅಲ್ಲದೆ, ಆತನಿಗೆ ತಾವು ಹಣ ನೀಡಿದ್ದೇವೆ ಎಂದು ತನ್ನ ಶ್ರೀಮಂತಿಕೆಯ ದರ್ಪದಿಂದ ಆಗಾಗ ವಸುಧಾ ಚುಚ್ಚುತ್ತಿದ್ದದ್ದು ಹೌದು. 


ಆತನಿಗೆ ತನ್ನ ಮತ್ತೊಬ್ಬ ಅಕ್ಕನ ಮಗಳಾದ ಜಯಶ್ರೀಯ ಮೇಲೆ ಮೋಹವಿದೆಯೆಂದು ಸುದ್ದಿ ಬಂದಿತ್ತು. ಅದು ಒಡಕು ಸುದ್ದಿಯಿರಬಹುದು ಎಂದುಕೊಂಡಿದ್ದಳು. ಆತನ ಇಬ್ಬರು ತಂಗಿಯರ ಮದುವೆಯಲ್ಲಿ ಜಯಶ್ರೀಯೇ ಭೇಟಿಯಾಗಿ ಆತ ಬರೆದಿದ್ದ ಪ್ರೇಮಕವನಗಳ ಡೈರಿ ನೀಡಿದ್ದಳು. ವಸುಧಾಳಿಗೂ ತನ್ನ ಅತ್ತೆಯ ಮಗನಾದ ಶರತ್ ಮೇಲೆ ಪ್ರೇಮವಿತ್ತು. ಆದರೆ, ಆತ ಅದನ್ನು ಸ್ವೀಕರಿಸಿರಲಿಲ್ಲ. ಹೀಗಾಗಿ ತನ್ನ ಗಂಡನ ಪ್ರೇಮ ಪ್ರಕರಣದ ಕುರಿತು ಹೆಚ್ಚು ಎತ್ತಿ ಆಡುತ್ತಿರಲಿಲ್ಲ ವಸುಧಾ.


ಆದರೆ, ದಿನ ಕಳೆದಂತೆ ಸುರೇಶನ ಕುರಿತು ಬರುತ್ತಿದ್ದ ಸುದ್ದಿ ಆಕೆಯ ಮನಸ್ಥಿತಿಯನ್ನು ಹದಗೆಡಿಸಿತ್ತು. ಜಯಶ್ರೀ ಮದುವೆಯಾಗಿ ಮುಂಬೈಯಲ್ಲಿ ನೆಲೆಸಿದ್ದಳು. ಸುರೇಶ ಆಗಾಗ ಮುಂಬೈಗೆ ಹೋಗುತ್ತಿದ್ದ ಕಾರಣವೇನು..?? ಸುರೇಶ ತನ್ನ ಸ್ವಾರ್ಥಕ್ಕಾಗಿ ವಸುಧಾಳನ್ನು ವಿವಾಹವಾದನೇ ಅಥವಾ ಹಣದಾಸೆಗಾ..?? ಸೀತಮ್ಮನ ಮಗಳು ರಜನಿ ಆತನನ್ನೇ ಪ್ರೇಮಿಸುತ್ತಿದ್ದೇನೆ ಎಂದು ಒಮ್ಮೆ ಆತನ ಜೊತೆ ತಪ್ಪಾಗಿ ನಡೆದುಕೊಳ್ಳಲು ಬಂದಾಗ ನಡೆದದ್ದೇನು..?? ರಾಜೇಶ್ವರಿಗೆ ತನ್ನ ಅಣ್ಣನ ಜೀವನದ ನಿಜಗಳ ಕುರಿತು ಅರಿವಿತ್ತೇ..?? ತನ್ನ ತಂಗಿಯರ ಮದುವೆಗೆ ಎಂದು ತೆಗೆದುಕೊಂಡ ಹಣವನ್ನು ಆತ ಅವರಿಗೆ ಖರ್ಚು ಮಾಡದ್ದು ಏಕೆ..?? ಆತ ತನ್ನ ತಂದೆ-ತಾಯಿಯರಿಗೆ ಕಳುಹಿಸುತ್ತಿದ್ದ ಹಣ ಆತ ಹೇಳಿಕೊಂಡದ್ದಕ್ಕಿಂತ ಕಡಿಮೆ ಇದ್ದದ್ದೇಕೆ..??


ಮೈಸೂರಿನಲ್ಲಿದ್ದ ತನ್ನ ಅಕ್ಕನ ಮನೆಯ ಮುಂಭಾಗದಲ್ಲಿದ್ದ ತಂಗಿಯಂತಹಾ ಹುಡುಗಿ ಗಾಯತ್ರಿಗೆ ವಸುಧಾಳ ಪರಿಚಯವನ್ನು ಮಾಡಿ ಕೊಟ್ಟು ಆಕೆಗೂ ಒಂದು ಜೀವನದ ದಾರಿಯನ್ನು ತೋರಿಸಿದ್ದ. ಗಾಯತ್ರಿ ಮೇಲೆ ಆತನಿಗೆ ಅಷ್ಟು ಮಮತೆ ಇದ್ದದ್ದೇಕೆ.?? ವಸುಧಾಳಿಗೆ ಆತನ ಬಾಳಿನ ಎಲ್ಲಾ ಸತ್ಯಗಳೂ ತಿಳಿದಾಗ ಆಕೆಯ ಪ್ರತಿಕ್ರಿಯೆ ಏನಿತ್ತು..?? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಹೆಚ್.ಜಿ ರಾಧಾದೇವಿಯವರ ಕಾದಂಬರಿ ವಿಜಯದ ಮೆಟ್ಟಿಲು. 


ಮನುಷ್ಯನನ್ನು ರೂಪದಿಂದ ಅಳೆದು ಎಷ್ಟು ತಪ್ಪು ಮಾಡುತ್ತೇವಲ್ಲವಾ ಎನ್ನಿಸಿತು. ಅಲ್ಲದೇ.. ಕೆಲವರ ನಡವಳಿಕೆಗಳು ಅನುಮಾನಾಸ್ಪದವಾಗಿದ್ದಾಗಳ ಅವರ ಬಗ್ಗೆ ತೀರ್ಮಾನಕ್ಕೆ ಬರಲು ಹುಷಾರಾಗಿ ನಡೆದುಕೊಳ್ಳಬೇಕು. ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡಬೇಕು. 


ಮನುಷ್ಯ ವಿಜಯದ ಮೆಟ್ಟಿಲುಗಳನ್ನೇರಲು ಬಹಳವೇ ಕಷ್ಟಪಡಬೇಕು. ಅದಕ್ಕೆ ಅದೃಷ್ಟವೂ ಬೇಕು. ಅದಕ್ಕಿಂತ ಹೆಚ್ಚು ಸಂಗಾತಿಯಲ್ಲಿ ಹಾಗೂ ಮನೆಯವರಲ್ಲಿ ನಂಬಿಕೆ ಇರಬೇಕು. ಆಗ ಮಾತ್ರವೇ ವಿಜಯದ ಮೆಟ್ಟಿಲನ್ನು ಹಂತಹಂತವಾಗಿ ಏರಬಲ್ಲ. ಆದರೆ, ಆ ಸಂದರ್ಭದಲ್ಲಿ ಆತ ಅನುಭವಿಸುವ ಮಾನಸಿಕ ತುಮುಲಗಳು, ಬೇರೆಯವರಿಗೆ ಅದು ಕಂಡು ಬರುವ ರೀತಿ ಎಲ್ಲವೂ ಅವರ ಮೇಲೆ ಅಪನಂಬಿಕೆ ಮೂಡಿಸಬಹುದು ಹಾಗೂ ಪರಿಸ್ಥಿತಿ ತದ್ವಿರುದ್ಧವಾಗಿರಬಹುದು. ಯಾವುದಕ್ಕೂ ಎದೆಗುಂದದೆ ಎಲ್ಲಿಯೂ ಹಳಿ ತಪ್ಪದೇ ಸ್ವಾಭಿಮಾನದಿಂದ ಹೆಜ್ಜೆ ಹಾಕಿದರೆ ಎಲ್ಲದರಲ್ಲಿಯೂ ಜಯ ಸಿಗುತ್ತದೆ. ವಿಜಯದ ಮೆಟ್ಟಿಲು ಹತ್ತುವುದು ಸರಾಗವಾಗುತ್ತದೆ ಎಂದು ಹೇಳುವ ಕಾದಂಬರಿ ಇಷ್ಟವಾಯಿತು.


 ಈ ಕಾದಂಬರಿಯ ನಿಗೂಢ ಶೈಲಿಯಿಂದ ಕಥೆಯ ಮುಂದಿನ ಹಂತವನ್ನು ಊಹಿಸಲು ಸಾಧ್ಯವೇ ಆಗಲಿಲ್ಲ. ವಿಭಿನ್ನ ತಿರುವುಗಳ ಕಥಾಹಂದರದ ಕಾದಂಬರಿಯ ಓದು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ