"ಇವತ್ತು ಬ್ಯಾಂಕ್ ಅಲ್ಲಿ ಕೆಲಸ ತುಂಬಾ ಲೇಟಾಯ್ತು ಮಾರಾಯ್ತಿ. ಏನೋ ಸರ್ವರ್ ಡೌನ್ ಅಂತೆ"
"ಅಯ್ಯೋ , ಇವತ್ತೇ ಈ ಎಕ್ಸಾಂಗೆ ಅಪ್ಲಿಕೇಶನ್ ಸಲ್ಲಿಸಲು ಲಾಸ್ಟ್ ಡೇಟ್. ಎಷ್ಟು ಹೊತ್ತು ತಗೊಳ್ತಾ ಇದೆ. ಸರ್ವರ್ ಡೌನ್ ಆಗಿರಬೇಕು"
"ಇವತ್ತು ಎಕ್ಸಾಂ ರಿಸಲ್ಟ್ ನೋಡಬೇಕು. ಆದರೆ, ಎಷ್ಟು ಟ್ರೈ ಮಾಡಿದರೂ ಬರ್ತಾ ಇಲ್ಲ. ನನ್ನ ಇಂಟರ್ನೆಟ್ ಸ್ಪೀಡ್ ಆಗಿಯೇ ಇದೆ. ಮೋಸ್ಟ್ಲಿ ಸರ್ವರ್ ಡೌನ್ ಆಗಿರಬೇಕು"
"ಈ ಗೂಗಲ್ ಪೇ ಇವತ್ತು ಸರ್ಯಾಗಿ ಕೈ ಕೊಡ್ತು ಮಾರಾಯ. ಜೇಬಲ್ಲಿ ದುಡ್ಡು ಬೇರೆ ಇರಲಿಲ್ಲ. ಪುಣ್ಯಕ್ಕೆ ಒಂದತ್ತು ನಿಮಿಷ ಬಿಟ್ಟು ವರ್ಕ್ ಆಯ್ತು. ಎಂತ ಸಾವ ಈ ಸರ್ವರ್ ದು. "
"ಟ್ರೈನ್ ಟಿಕೆಟ್ ಬುಕ್ ಮಾಡಬೇಕು. ಆದರೆ, ಇದ್ಯಾಕೋ ವರ್ಕ್ ಆಗ್ತಾನೇ ಇಲ್ಲ. ಬಹುಶಃ, ಸರ್ವರ್ ಡೌನ್ ಆಗಿರಬೇಕು"
"ಅಯ್ಯೋ ರೇಷನ್ ತರೋಕೆ ಹೋಗಿದ್ದೆ ಕಣ್ರೀ.. ಆ ಹೆಬ್ಬೆಟ್ಟು ಕೊಡೋ ಮಿಷನ್ ಅಲ್ಲಿ ಅದೇನು ಲೇಟಾಗಿ ತಗೊತ್ತಿತ್ತು ಅಂತೀರಿ. ನಾಳೆ ಹೋಗೋಣ ಅಂದರೆ ಅವರು ಹೇಳಿದ ಟೈಮ್ ಗೆ ಹೋಗಬೇಕು.. ಇಲ್ಲಾ ಅಂದರೆ ರೇಷನ್ ಸಿಗಲ್ಲ. ಏನೋ ಸರ್ವರ್ ಬ್ಯುಸಿ ಅಂತೆ. ಏನು ಸುಡುಗಾಡು ಸರ್ವರೋ ಏನು ಕತೆನೋ..
ಇದ್ಯಾವ ಅನುಭವ ಕೂಡಾ ನಿಮಗಾಗಿಲ್ವಾ.. ಇದರ ಬಿಸಿ ತಟ್ಟಿಲ್ವಾ..??
ಹಾಗಾದ್ರೆ, 2021 ರ ಅಕ್ಟೊಬರ್ 4 ರಂದು ನಿಮಗಾಗಿದ್ದ ಅನುಭವವನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ವಾಟ್ಸಾಪ್ ನಲ್ಲಿ ಹಾಕಿದ ಸ್ಟೇಟಸ್ ಅಪ್ಲೋಡ್ ಆಗ್ತಿಲ್ಲ. ಅದರಲ್ಲಿ ಹಾಕಿದ ಮೆಸೇಜ್ ಹೋಗ್ತಿಲ್ಲ. ಬೇರೆಯವರಿಂದ ಮೆಸೇಜ್, ಆಡಿಯೋ, ವಿಡಿಯೋ ಏನೂ ಬರ್ತಿಲ್ಲ. ಬಹುಶಃ ನನ್ನ ಫೋನಲ್ಲಿ ವಾಟ್ಸಾಪ್ ಏನೋ ಆಗಿರಬೇಕು ಅಂತಾ ಫೇಸ್ಬುಕ್ ನೋಡೋದಕ್ಕೆ ಹೋದರೆ ಅಲ್ಲಿಯೂ ಏನೂ ಅಪ್ಲೋಡ್ ಆಗ್ತಿಲ್ಲ. ಹೊಸ ಅಪ್ಡೇಟ್, ನೋಟಿಫಿಕೇಶನ್ ಬರ್ತಿಲ್ಲ. ಅದೂ ಹಾಳಾಗಿ ಹೋಗ್ಲಿ.. ಇನ್ಸ್ಟಾ ನೋಡೋಣ ಅಂದರೆ ಅಲ್ಲಿಯೂ ಅದೇ ಕತೆ. ಬಹುಶಃ, ನನ್ನ ಫೋನ್ ಏನೋ ಆಗಿರಬಹುದು ಅಂತಾ ಅಂದುಕೊಂಡು ಫೋನ್ ಅನ್ನು ಸ್ವಿಚ್ ಆಫ್ ಮಾಡಿ ಆನ್ ಮಾಡಿ, ಏರೋಪ್ಲೇನ್ ಮೋಡ್ ಗೆ ಹಾಕಿ ತೆಗೆದು ಟ್ರೈ ಮಾಡುತ್ತೀರಿ. ಏನೂ ಪ್ರಯೋಜನವಿಲ್ಲ. ಬಹುಶಃ, ಇಂಟರ್ನೆಟ್ ಸಮಸ್ಯೆ ಇರಬಹುದಾ ಎಂದು ನೋಡಿದರೆ... ಇಂಟರ್ನೆಟ್ ಸ್ಪೀಡ್ ಇದೆ. ಯೂಟ್ಯೂಬ್, ಗೂಗಲ್ ಕ್ರೋಮ್ ವರ್ಕ್ ಆಗ್ತಿವೆ. ಹಾಗಾದರೆ, ಆ ಅಪ್ಲಿಕೇಶನ್ ಗಳನ್ನು ಅಪ್ಡೇಟ್ ಮಾಡಬೇಕಾ ಅಂದುಕೊಂಡು ಅದನ್ನೂ ಮಾಡಿಯಾಯ್ತು. ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ಬೇಸತ್ತು ನೀವು ಮಲಗಿಕೊಂಡಿರಿ. ಹೌದಾ..??
ಇದನ್ನು ನೀವು ಮಾಡಿದ್ರಾ ? ಯಾಕೆ ಈ ಸಮಸ್ಯೆ ಎಂದು ತಲೆ ಕೆಡಿಸಿಕೊಂಡವರಿಗೆ ಬೆಳಿಗ್ಗೆ ಗೊತ್ತಾದದ್ದು ಜಗತ್ತಿನ ದೊಡ್ಡ ಸೋಶಿಯಲ್ ಮೀಡಿಯಾ ನೆಟ್ವರ್ಕ್ ನ ಸರ್ವರ್ ಸತತ ಆರು ಗಂಟೆಗಳ ಕಾಲ ಡೌನ್ ಆಗಿತ್ತು. ನಮ್ಮ ಡೇಟಾ ಸೇಫ್ ಆಗಿದೆಯಾ ಅಥವಾ ಡಿಲೀಟ್ ಆಗಿದೆಯಾ ಎಂದು ನೋಡಿದಾಗ ಎಲ್ಲವೂ ಸರಿಯಿತ್ತು. ಕೆಲವರು ಫೇಸ್ಬುಕ್ ಸರ್ವರ್ ಏನಾದರೂ ಹ್ಯಾಕ್ ಆಗಿತ್ತಾ ಎಂಬ ಗುಮಾನಿಯನ್ನೂ ವ್ಯಕ್ತ ಪಡಿಸಿದ್ದರು. ಆದರೆ, ಹಾಗಾಗಿರಲಿಲ್ಲ. ತಪ್ಪು ಕಾನ್ಪಿಗರೇಷನ್ ನಿಂದ ಸರ್ವರ್ ಡೌನ್ ಆಗಿತ್ತು ಎಂದು ಸ್ಪಷ್ಟ ಪಡಿಸಿತ್ತು ಫೇಸ್ಬುಕ್. ಇದರಿಂದ ಅವರಿಗೆ ಉಂಟಾದ ನಷ್ಟ ಎಷ್ಟು ಗೊತ್ತಾ ? ಬರೋಬ್ಬರಿ 7 ಬಿಲಿಯನ್ ಡಾಲರ್.
ಏನಿದು ಸರ್ವರ್ ? ಡೇಟಾ ಸೆಂಟರ್ ಬಗ್ಗೆ ಹೇಳ್ತೀನಿ ಅಂದವಳು ಈ ಸರ್ವರ್ ಬಗ್ಗೆ ಮಾತನಾಡುತ್ತಿದ್ದಾಳಲ್ಲಾ ಅಂದುಕೊಂಡಿರಾ ?
ಡೇಟಾ ಸೆಂಟರ್ ಎಂದರೆ ಇಂತಹಾ ನೂರಾರು, ಸಾವಿರಾರು ಸರ್ವರ್ ಗಳನ್ನು ಹೊಂದಿರುವ ಜಾಗ.
ಅಷ್ಟಕ್ಕೂ.. ಸರ್ವರ್ ಎಂದರೆ ಏನೆಂದು ಯೋಚಿಸುತ್ತಿದ್ದೀರಾ..?? ಸರ್ವರ್ ಕೂಡಾ ಒಂದು ರೀತಿಯ ಕಂಪ್ಯೂಟರ್. ಆದರೆ ಇದು ಸೂಪರ್ ಫಾಸ್ಟ್, ಹೆಚ್ಚಿನ ಲೋಡ್ ತಡೆಯುವಂತಹಾ ಹಾಗೂ ಸ್ಟೋರ್ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಇದು ತುಂಬಾ ದುಬಾರಿ. ಇದು ಬಹಳಷ್ಟು ಕಂಪ್ಯೂಟರ್, ಮೊಬೈಲ್ ಅಪ್ಲಿಕೇಶನ್, ಎ.ಟಿ.ಎಂ ಹೀಗೆ ಮುಂತಾದವುಗಳಿಂದ ಬರುವ ರಿಕ್ವೆಸ್ಟ್ ಗೆ ತಕ್ಕ ಹಾಗೆ ಕಾರ್ಯ ನಿರ್ವಹಿಸುತ್ತದೆ. ಉದಾಹರಣೆ ಹೇಳಬೇಕೆಂದರೆ, ನೀವು ದಿನಸಿ ಅಂಗಡಿಗೆ ಹೋಗಿ ಅಲ್ಲಿ ಇರುವವರಲ್ಲಿ ನಿಮಗೆ ಬೇಕಾದ್ದನ್ನು ಕೇಳಿದಾಗ ಅವರು ನಿಮಗೆ ಬೇಕಾದ್ದನ್ನು ಆಯ್ಕೆ ಮಾಡಿ ನಿಮಗೆ ತಂದು ತಲುಪಿಸುತ್ತಾರಲ್ಲವಾ..?? ಸರ್ವರ್ ಹಾಗೂ ಕ್ಲೈಂಟ್ ನ ಕಾರ್ಯವೈಖರಿ ಥೇಟ್ ಹೀಗೆಯೇ ಇರುತ್ತದೆ.
ಸರ್ವರ್ ಗಳನ್ನು ಡೇಟಾ ಸೆಂಟರ್ ಗಳಲ್ಲಿಯೇ ಇಡಬೇಕು ಎಂದರೆ ಅದು ತಪ್ಪು. ಕಾಲೇಜ್ ಕಟ್ಟಡದ ಒಂದು ಮೂಲೆಯಲ್ಲಿ ಹೆಚ್ಚಿನ ಸಾಮರ್ಥ್ಯ ಇರುವ ಒಂದು ಸರ್ವರ್ ಸಾಕಾಗಬಲ್ಲದು ಕಾಲೇಜ್ ನ ಅವಶ್ಯಕತೆಗೆ. ಇನ್ನು ಎಕರೆಗಟ್ಟಲೆ ಜಾಗ ಬೇಕಾಗಬಹುದು ಕೆಲವು ದೈತ್ಯ ಕಂಪನಿಯ ಸರ್ವರ್ ಗಳಿಗೆ.. ಕೆಲಸದ ಆಧಾರದ ಮೇಲೆ ಸರ್ವರ್ ನ ಆಯ್ಕೆ.
ನೀವು ಅಂಗಡಿಗೆ ಹೋದಾಗ ಅಲ್ಲಿ ನಿಮಗೆ ಸರ್ವಿಸ್ ಕೊಡಲು 5 ಜನ ಇರುತ್ತಾರೆ. ಆದರೆ, 50 ಜನ ಗ್ರಾಹಕರ ಗುಂಪು ಇರುವಾಗ ಆದ್ಯತೆಯ ಮೇರೆಗೆ ಸರ್ವೀಸ್ ನೀಡುತ್ತಾರೆ. ಹೌದಲ್ಲವಾ..?? ಸರ್ವೀಸ್ ಸಿಗದೇ ನೀವು ಕಾಯುತ್ತಿರುತ್ತೀರಲ್ಲ ಅದೇ ಸರ್ವರ್ ನಲ್ಲಿ ಉಂಟಾದಾಗ ಸರ್ವರ್ ಬ್ಯುಸಿ ಎನ್ನುತ್ತಾರೆ. ನಿಮ್ಮ ಪಾಲಿಗೆ ಅದು ಟೈಮ್ ವೇಸ್ಟ್. ನೀವು ಕಾಯುತ್ತಲಿದ್ದರೂ ಸರ್ವಿಸ್ ಸಿಗದೆ ಇರುವ ಆ ಸಮಯವನ್ನೇ ಸರ್ವರ್ ಡೌನ್ ಆಗಿದೆ ಎನ್ನುವುದು. ಈ ಸರ್ವರ್ ಡೌನ್ ಗೆ ಹಲವು ಕಾರಣಗಳಿವೆ. ತಿಳಿಯೋಣವಾ ?
ಸರ್ವರ್ ಗೆ ನಿರಂತರ ಕರೆಂಟ್ ಸಪ್ಲೈ ಆಗುತ್ತಲೇ ಇರಬೇಕು. ಇಲ್ಲವಾದಲ್ಲಿ ಅದು ಕಾರ್ಯ ಸ್ಥಗಿತಗೊಳಿಸುತ್ತದೆ. ಅದೇ ಸರ್ವರ್ ಡೌನ್.
ಸಾಫ್ಟ್ವೇರ್ ಅಥವಾ ಹಾರ್ಡ್ವೇರ್ ಸಮಸ್ಯೆಯಾದಾಗ ಸರ್ವರ್ ಡೌನ್ ಆಗುತ್ತದೆ. 2021 ರ ಅಕ್ಟೊಬರ್ ನಲ್ಲಿ ಫೇಸ್ಬುಕ್ ಸರ್ವರ್ ಡೌನ್ ಆದದ್ದೂ ಇದೇ ಕಾರಣಕ್ಕೆ. 2010 ರಲ್ಲಿ ಅಮೆಜಾನ್ ನಲ್ಲಿ ಕೂಡಾ ಹೀಗಾಗಿತ್ತು.
ವೆಬ್ಸೈಟ್ ಅನ್ನು ಮಾಡುವಾಗ ಸರ್ವರ್ ಯಾವುದು ಎಂದು ಸರಿಯಾಗಿ ನಿರ್ಧಾರ ಮಾಡಬೇಕು. ಇಲ್ಲವಾದರೆ ಕಳಪೆ ಕಾರ್ಯ ನಿರ್ವಹಿಸುವ ಸರ್ವರ್ ಗಳಿಂದ ಹಾಗಾಗುತ್ತದೆ. ಇದಕ್ಕೆ ಉದಾಹರಣೆ ಎಂದರೆ ಸರ್ಕಾರದ ಕೆಲವು ವೆಬ್ಸೈಟ್ ಗಳು. ಸರ್ಕಾರ ಕಾಂಟ್ರ್ಯಾಕ್ಟ್ ಕೊಟ್ಟವರು ತಾವು ಹಣ ಉಳಿಸಿಕೊಳ್ಳಲು ಕಳಪೆ ಮಟ್ಟದ ಸರ್ವರ್ ಅನ್ನು ಬಳಸಿದಾಗ ಹೀಗಾಗುತ್ತದೆ.
ಸರ್ವರ್ ಗೆ ಹೆಚ್ಚು ರಿಕ್ವೆಸ್ಟ್ ಬಂದಾಗ, ಓವರ್ ವರ್ಕ್ ಆದಾಗ ಅದನ್ನು ಪೂರೈಸುವ ಸಾಮರ್ಥ್ಯವಿಲ್ಲದೆ ಡೌನ್ ಆಗುತ್ತದೆ. ಸರ್ವೀಸ್ ಕೋರಿ ರಿಕ್ವೆಸ್ಟ್ ಗಳ ಪ್ರವಾಹ ಹರಿದಾಗ ಸರ್ವರ್ ನಲ್ಲಿ ಸುನಾಮಿಯಾಗಿಬಿಡುತ್ತದೆ. ಯಾವುದಾದ್ರೂ ಎಕ್ಸಾಂಗಳಿಗೆ ಕೊನೆಯ ದಿನ ಅಪ್ಲಿಕೇಶನ್ ಹಾಕುವಾಗ, ರಿಸಲ್ಟ್ ನೋಡುವಾಗ ಹೀಗಾಗುತ್ತದೆ. ಹೆಚ್ಚಿನ ಡೇಟಾ ಟ್ರಾಫಿಕ್ ನಿಂದಾಗಿ ಸರ್ವರ್ ಡೌನ್ ಆಗುತ್ತದೆ.
ಸೈಬರ್ ಅಟ್ಯಾಕ್ ಗಳಿಂದ ಸರ್ವರ್ ಡೌನ್ ಆಗುತ್ತದೆ. ಆದರೆ, ಇದು ತುಂಬಾ ವಿರಳ. ಏಕೆಂದರೆ, ಎಲ್ಲಾ ಡೇಟಾ ಸೆಂಟರ್ ಗಳಲ್ಲಿ ಫೈರ್ ವಾಲ್ ಹಾಗೂ ಹೆಚ್ಚಿನ ಸೆಕ್ಯೂರಿಟಿ ಇರುತ್ತದೆ. ಕಾಲೇಜಿನ ಸರ್ವರ್ ಗಳಲ್ಲಿ ಈ ಸಮಸ್ಯೆ ಉಂಟಾಗಬಹುದು.
ಕೆಲವೊಮ್ಮೆ ಆಕಸ್ಮಿಕವಾಗಿ ಯಾವುದಾದರೂ ಡೇಟಾ ಕಾರ್ಡ್ ಅನ್ನು ತೆಗೆದಾಗ, ಸ್ವಿಚ್ ತೆಗೆದಾಗ ಸರ್ವರ್ ಡೌನ್ ಆಗಬಹುದು. ತಪ್ಪಾಗಿ ಅಥವಾ ಒರಟಾಗಿ ಹ್ಯಾಂಡಲ್ ಮಾಡುವಾಗಲೂ ಹೀಗಾಗಬಹುದು. ಯಾರಾದರೂ ಅಜಾಗರೂಕತೆಯಿಂದ ಕೋಡ್ ಮಾಡಿದರೆ ಅಥವಾ ಕೋಡ್ ಟೆಸ್ಟ್ ಮಾಡಿದರೆ ಹೀಗಾಗುತ್ತದೆ. 2017 ರಲ್ಲಿ ಅಮೆಜಾನ್ ನಲ್ಲಿ ಒಬ್ಬರ ಅಜಾಗರೂಕತೆಯಿಂದ ಒಂದು ಲೈನ್ ಹೆಚ್ಚಿನ ಕೋಡ್ ಸೇರಿ ಅಮೆಜಾನ್ ಸರ್ವರ್ ಡೌನ್ ಆಗಿತ್ತು.
ಸರ್ವರ್ ಡೌನ್ ಆದರೆ ಅದಕ್ಕೆ ಪರಿಹಾರಗಳಿವೆ. ಹಾರ್ಡ್ವೇರ್ ಅಥವಾ ಸಾಫ್ಟ್ವೇರ್ ತೊಂದರೆಗಳಾಗದ ಹಾಗೆ ನೋಡಿಕೊಳ್ಳಲು ಇಂಜಿನಿಯರ್ ಗಳ ಟೀಮ್ 24 ಗಂಟೆಗಳೂ ಸಿದ್ಧವಾಗಿರುತ್ತಾರೆ. ಡೇಟಾದ ಅಪ್ ಟೈಮ್ ಹಾಗೂ ಡೌನ್ ಟೈಮ್ ಗಳನ್ನು ಯಾವಾಗಲೂ ಮಾನಿಟರ್ ಮಾಡುತ್ತಿರುತ್ತಾರೆ. ಕನಿಷ್ಟ ಎರಡು ಕಡೆ ಡೇಟಾ ಬ್ಯಾಕಪ್ ಇರುತ್ತದೆ. ಸೈಬರ್ ಅಟ್ಯಾಕ್ ಆಗದಂತೆ ತಡೆಯುವ ಎಲ್ಲಾ ವ್ಯವಸ್ಥೆಗಳೂ ಇರುತ್ತವೆ.
ಸರ್ವರ್ ಡೌನ್ ಆದರೆ ಪರವಾಗಿಲ್ಲ. ಕ್ರ್ಯಾಶ್ ಆದರೆ ಮುಗಿಯಿತು ಕತೆ. ವಿಡಿಯೋ ವೆಬ್ಸೈಟ್ ಗಳಾದರೆ ಅಥವಾ ವೆಬ್ಸೈಟ್ ಗಳಾದರೆ ಯಾವ ಡೇಟಾವೂ ಸಿಗುವುದಿಲ್ಲ. ಹಣಕಾಸಿನ ವಹಿವಾಟಿನ ಸರ್ವರ್ ಕ್ರ್ಯಾಶ್ ಆದರೆ ಸೆಕೆಂಡ್ ಗೆ ಮಿಲಿಯನ್ ಗಟ್ಟಲೆ ನಷ್ಟ. ಆದರೆ, ಹೀಗಾಗುವುದು ವಿರಳ.
ಬಳಕೆದಾರರು ಹೆಚ್ಚಿದಂತೆ ಸರ್ವರ್ ಸಾಮರ್ಥ್ಯ ಹಾಗೂ ಸರ್ವರ್ ಸಂಖ್ಯೆ ಕೂಡಾ ಹೆಚ್ಚಳವಾಗುತ್ತದೆ. ಅದಕ್ಕಾಗಿಯೇ ಹೆಚ್ಚಿನ ಡೇಟಾ ಸೆಂಟರ್ ಗಳು ಬೇಕಾಗುತ್ತವೆ. ಡೇಟಾ ಸೆಂಟರ್ ಗಳನ್ನು ನಿರ್ಮಿಸುವುದು ಎಂದರೆ ಸುಲಭದ ಮಾತಲ್ಲ. 2005 ರಲ್ಲಿ ಅಮೆರಿಕನ್ ನ್ಯಾಷನಲ್ ಸ್ಟ್ಯಾಂಡರ್ಡ್ ಇನ್ಸ್ಟಿಟ್ಯೂಟ್ ಹಾಗೂ ಟೆಲಿ ಕಮ್ಯೂನಿಕೇಶನ್ಸ್ ಇಂಡಸ್ಟ್ರಿ ಅಸೋಸಿಯೇಷನ್ ಸೇರಿ ಅದಕ್ಕೊಂದಷ್ಟು ನಿಯಮಗಳನ್ನು ರೂಪಿಸಿವೆ.
ಪ್ರಮುಖವಾಗಿ ಭದ್ರತೆ ಇರುವಂತಹಾ ಸರ್ವರ್ ರೂಮ್ , ತಡೆಯೇ ಇಲ್ಲದಂತೆ ಕರೆಂಟ್ ಗಾಗಿ ಯು.ಪಿ.ಎಸ್ , ಜನರೇಟರ್ ಗಳು. ವೆಂಟಿಲೇಶನ್, ಬೆಂಕಿ ಹತ್ತಿದರೆ ಅದನ್ನು ಕಂಡು ಹಿಡಿಯಲು ಹಾಗೂ ಆರಿಸಲು ವ್ಯವಸ್ಥೆ, ಸೆಕ್ಯೂರಿಟಿ, ನೆಟ್ವರ್ಕ್ ಕನೆಕ್ಟಿವಿಟಿ, ಸೈಬರ್ ಸೆಕ್ಯೂರಿಟಿ, ಒಂದಕ್ಕಿಂತ ಹೆಚ್ಚಿನ ಪವರ್ ಸಪ್ಲೈಯರ್ ಗಳಿಂದ ಪವರ್ ಸಪ್ಲೈ, ಬ್ಯಾಕಪ್ ವ್ಯವಸ್ಥೆಯ ಜನರೇಟರ್ ಗಳು, ಟೆಲಿ ಕಮ್ಯುನಿಕೇಶನ್ ಗಳಿಂದ ಬರುವ ಹೆಚ್ಚಿನ ಕ್ಯಾರಿಯರ್ ಲೈನ್ ಗಳು ಹೀಗೆ ಹಲವಾರು ಮಾನದಂಡಗಳಿದ್ದು ಕೆಲವು ಸರ್ಟಿಫಿಕೇಟ್ ಗಳನ್ನು ಹೊಂದಿರಬೇಕು.
ಈ ಡೇಟಾ ಸೆಂಟರ್ ಗಳಲ್ಲಿಯೂ ನಾಲ್ಕು ರೀತಿಯ ಡೇಟಾ ಸೆಂಟರ್ ಗಳಿವೆ.
ಒಂದೇ ಒಂದು ದೈತ್ಯ ಕಂಪನಿ ಬಳಸುವಂತಹಾ ಎಂಟರ್ಪ್ರೈಸ್ ಡೇಟಾ ಸೆಂಟರ್. ಡೇಟಾ ಸೇಂಟರ್ ಗಳ ಕೆಲವು ಜಾಗ ಮತ್ತು ರಿಸೋರ್ಸ್ ಗಳನ್ನು ಬಾಡಿಗೆಗೆ ಕೊಡುವಂತಹಾ ಕೊಲೊಕೇಶನ್ ಡೇಟಾ ಸೆಂಟರ್. ಕಸ್ಟಮರ್ ಗಳ ಡೇಟಾವನ್ನು ಸಂಗ್ರಹಿಸುವಾಂತಹಾ ಮ್ಯಾನೇಜ್ ಡ್ ಸರ್ವಿಸ್ ಡೇಟಾ ಸೆಂಟರ್ ಹಾಗೂ ಕ್ಲೌಡ್ ಡೇಟಾ ಸೆಂಟರ್.
ಕ್ಲೌಡ್ ಡೇಟಾ ಸೆಂಟರ್ ಅಂದರೆ ಆಕಾಶದಲ್ಲಿ ಡೇಟಾ ಸಂಗ್ರಹಿಸುತ್ತಾರಾ..?? ಇಲ್ಲ, ಸಾಫ್ಟ್ವೇರ್ ನಲ್ಲಿ ಕ್ಲೌಡ್ ಗೆ ಬೇರೆಯೇ ಅರ್ಥವಿದೆ. ಡೇಟಾ ಸೆಂಟರ್ ನಿಂದ ಕ್ಲೌಡ್ ವರೆಗೂ..
2019 ರಲ್ಲಿ ಮೂರು ಗೂಗಲ್ ಡೇಟಾ ಸೆಂಟರ್ ಗೆ 2.3 ಬಿಲಿಯನ್ ಗ್ಯಾಲನ್ ನಷ್ಟು ನೀರು ಬಳಸಲಾಗಿದೆಯಂತೆ. ಇದು ಹೌದಾ..?? ಹಲವು ಅಚ್ಚರಿಯ ಮಾಹಿತಿಗಳು ಮುಂದಿನ ವಾರದ ಟೆಕ್ - ಟಾಕ್ ನಲ್ಲಿ
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ