ಬುಧವಾರ, ಏಪ್ರಿಲ್ 15, 2026

ಮನಸ್ಸಿನ ಕಣ್ಣು (ಪುಸ್ತಕ ಯಾನ - 186)


ಪುಸ್ತಕದ ಶೀರ್ಷಿಕೆ : ಮನಸ್ಸಿನ ಕಣ್ಣು

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ

ಎರಡನೇ ಮುದ್ರಣ : 2022


'ಮನಸ್ಸಿನ ಕಣ್ಣು' ಕಾದಂಬರಿ ನಾನು ಇದುವರೆಗೂ ಓದಿದ  ರಾಧಾದೇವಿ ಮೇಡಂ ಅವರ ಕಾದಂಬರಿಗಳಿಗಿಂತ ವಿಭಿನ್ನವಾದ ಕಥಾವಸ್ತುವನ್ನು ಹೊಂದಿದೆ. ವಿಜ್ಞಾನ ಮುಂದುವರಿದರೆ ಮನುಷ್ಯ ಅದರಿಂದ ಪಡೆಯಬಹುದಾದ ಪ್ರಯೋಜನ ಹಾಗೂ ಪತ್ತೇದಾರಿ ಮೇಳೈಸಿ ಮೆದುಳಿಗೆ ಕಸರತ್ತು ನೀಡುವ ಕೆಲಸವೂ ಆಗಿದೆ. 


ಮನಸ್ಸಿನ ಕಣ್ಣು ಎಂಬ ಶೀರ್ಷಿಕೆಯೇ ವಿಭಿನ್ನವಾಗಿದೆ. ಕಣ್ಣಿನಿಂದ ನಾವು ಕೇವಲ ನೋಡಬಹುದು. ಅಲ್ಲಿ ಏನಾಗಿರಬಹುದು ಎಂಬ ಆಲೋಚನೆ ಮನಸ್ಸಿನಲ್ಲಿ ಮೂಡುತ್ತದೆ. ಆದರೆ, ಮನಸ್ಸಿಗೆ ಕಣ್ಣು ಬಂದರೆ ಅದು ಹೇಗಿರಬಹುದು..?? ಇಲ್ಲಿ ಮನಸ್ಸಿಗೆ ಕಣ್ಣು ಬರುತ್ತದೆ ಆದರೂ ಅದು ಇಲ್ಲಿನ ಮಿತಿಯೂ ಹೌದು ಶಕ್ತಿಯು ಹೌದು. 


ನೋಡಿದ್ದು ಸುಳ್ಳಾಗಬಹುದು.. ಕೇವಲ ನೋಡುವುದರಿಂದ ಅಲ್ಲಿನ ವಸ್ತುಸ್ಥಿತಿಯನ್ನು ತಿಳಿಯಲು ಸಾಧ್ಯವಾಗದು. ಬದಲಾಗಿ ಅದನ್ನು ಕೇಳಿಸಿಕೊಂಡು, ಅದರ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳಬೇಕು. ಅಲ್ಲಿನ ಸಂದರ್ಭವನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು.


ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ಆನಂದ್ ತನ್ನ ವೃತ್ತಿನಿಷ್ಠೆ, ಕಾರ್ಯ ಶ್ರದ್ದೆಗಳಿಗೆ ಹೆಸರುವಾಸಿಯಾಗಿದ್ದ. ಆತನದ್ದು ಪುಟ್ಟ ಕುಟುಂಬ. ಪತ್ನಿ ಸೀತಾ ಹಾಗೂ ಮಗ ಬಾಬು.


ಆನಂದನ ತಂದೆ ಸತ್ತಾಗ ಆತನಿಗಿನ್ನೂ 10 ವರ್ಷ. ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಂಡಿದ್ದ. ತಂದೆಯನ್ನು ಕಳೆದುಕೊಂಡ ನಂತರ ನೆಂಟರಿಷ್ಟರಿಂದ ಮೋಸವಾದಾಗ, ಆತನಿಗೆ ತಂದೆಯ ಸ್ಥಾನದಲ್ಲಿ ನಿಂತು ಬೆಳೆಸಿದವರು ಅವರ ತಂದೆಯ ಸ್ನೇಹಿತರಾದ ಪ್ರೊ|| ರಾಮನ್. ಮದುವೆಯಾಗಿ ಐದು ವರ್ಷದಷ್ಟರಲ್ಲಿ ತಮ್ಮ ಹೆಂಡತಿಯನ್ನು ಕಳೆದುಕೊಂಡಿದ್ದವರು. ತಮ್ಮ ವೈಜ್ಞಾನಿಕ ಸಂಶೋಧನೆಗಳಲ್ಲಿಯೇ ಆಸಕ್ತರಾಗಿ.. ಸ್ನೇಹಿತನ ಮಗನನ್ನೇ ತನ್ನ ಮಗನೆಂದುಕೊಂಡು ಬೆಳೆಸಿದರು. ತಾವೇ ಸೀತಾಳ ಜೊತೆ ವಿವಾಹವನ್ನೂ ಮಾಡಿಸಿದ್ದರು. ಆನಂದ್ ಈಗ ಇನ್ಸ್ಪೆಕ್ಟರ್ ಆಗಿ ಬೆಂಗಳೂರಿನಲ್ಲಿ ನೆಲೆಸಿದ್ದ. 


ರಾಮನ್ ರವರು ಟಾಟಾ ಇನ್ಸ್ಟಿಟ್ಯೂಟ್ ನಲ್ಲಿ ಬಹಳ ವರ್ಷ ಸಂಶೋಧನೆ ಮಾಡಿ ವೈಜ್ಞಾನಿಕ ವಿಷಯಗಳನ್ನು ಅಧ್ಯಯನ ಮಾಡಿದುದರ ಜೊತೆಗೆ, ಅವರ ತಂದೆ ಬರೆದಿದ್ದ ಪುರಾತನ ವೈದ್ಯ ಮೂಲಿಕೆಯ ರಹಸ್ಯಗಳನ್ನು ಓದಿ ಆರಗಿಸಿಕೊಂಡಿದ್ದರು. ಅವೆರಡರ ಫಲವಾಗಿ ಆನಂದನಿಗೆ 'ಮನಸ್ಸಿನ ಕಣ್ಣು' ದೊರೆತಿತ್ತು. 


ದೇಹಕ್ಕಿಂತ ಅಪೂರ್ವ ಶಕ್ತಿ ಮನಸ್ಸಿಗಿದೆ. ಆಲೋಚಿಸಿದ ತಕ್ಷಣ ನಾವು ನೆನೆಸಿಕೊಂಡ ಚಿತ್ರಣವನ್ನು ಕಾಣುವುದಾದರೆ..?! ಅದರ ಆಲೋಚನೆಯೇ ವಿಭಿನ್ನವಲ್ಲವೇ..?! ದೇಹ ಎಲ್ಲೇ ಇದ್ದರೂ.. ಮನಸ್ಸು ಆ ಪರಿಸರವನ್ನು ನೋಡಬಹುದಾಗಿತ್ತು. ಅದನ್ನು ಅವರು ಕಂಡುಹಿಡಿದು ಆನಂದನ ಮೇಲೆ ಪ್ರಯೋಗಿಸಿದ್ದರು. ಅವರು ಮಾಡುವುದಿಲ್ಲ ತನ್ನ ಒಳಿತಿಗಾಗಿಯೇ ಎಂದುಕೊಂಡಿದ್ದವನು ಅದಕ್ಕೆ ಒಪ್ಪಿಕೊಂಡಿದ್ದ. 


ಇದರ ಫಲವಾಗಿ ಆತ ತನ್ನ ಸ್ಟೇಷನಲ್ಲಿಯೇ ಇದ್ದ ರಂಗಯ್ಯನಿಗೂ.. ಪಿಕ್ ಪ್ಯಾಕೆಟ್ ಮಾಡುತ್ತಿದ್ದ ಕರಿಯನಿಗೂ ಇದ್ದ ಸಂಬಂಧದ ಕುರಿತಾಗಿ ಅರಿತು, ಅದರ ಬೆನ್ನತ್ತಿದಾಗ ಆತನಿಗೆ ಅಕ್ರಮ ಕೆಲಸಗಳು ಕಂಡುಬಂದಿದ್ದವು. ಆಗ ಡಿ.ಐ.ಜಿ ನಿರ್ಭಯ್ ಅವರಿಗೆ ಎಲ್ಲಾ ವಿಚಾರವನ್ನೂ ತಿಳಿಸಿದ್ದ. ಅದನ್ನು ಪರೀಕ್ಷಿಸಿ ನಿಜವೆಂದರಿತು ಅದನ್ನು ಇಲಾಖೆಯಲ್ಲಿ ಇನ್ನೂ ಬಿಡಿಸಲಾರದ ಕೇಸುಗಳನ್ನು ಬಿಡಿಸಲು ತೀರ್ಮಾನಿಸಿದ್ದರು. 


ಆ ಊರಿನ ಪ್ರಖ್ಯಾತ ಶ್ರೀಮಂತ ಸೋಹನ್ ರಾಜ್ ಅವರ ಪತ್ನಿಯ ಕೊಲೆಯಾಗಿ ತಿಂಗಳಾದರೂ ಕೊಲೆಗಾರ ಯಾರೆಂದು ತಿಳಿಯಲಿಲ್ಲ. ಆಕೆಯ ಮೈ ಮೇಲಿದ್ದ 10 ಲಕ್ಷಕ್ಕೂ ಹೆಚ್ಚಿನ ಬಂಗಾರ ಕಾಣೆಯಾಗಿದ್ದಲ್ಲದೆ, ಆಯುಧಗಳ ಮೇಲೆ ಕೊಲೆಗಾರನ ಬೆರಳ ಗುರುತು ಸಿಕ್ಕಿರಲಿಲ್ಲ. ಪೋಲೀಸ್ ನಾಯಿಗಳಿಂದ ದೊರೆತ ಸುಳಿವು ಅವರನ್ನು ಕರೆದೊಯ್ದದ್ದು ಹಿಂದೆ ಕೆಲಸಕ್ಕೆ ಇದ್ದ ಒಬ್ಬ ನೌಕರನ ಮನೆಗೆ. ಬೆಳ್ಳಿತಟ್ಟೆ ಕದಿಯಲು ಹೋಗಿ ಸಿಕ್ಕಿ ಬಿದ್ದು ಕೆಲಸದಿಂದ ಬಿಡಿಸಿದ್ದ ಆತನ ಮನೆಯ ಹಿತ್ತಲಿನ ಬಳಿ. ಆತ ಅಪರಾಧಿಯೆಂದು ಸಾಬೀತುಪಡಿಸಲು ಹೆಚ್ಚಿನ ಸಾಕ್ಷಿಗಳಿರಲಿಲ್ಲ. ನಿಜವಾದ ಅಪರಾಧಿ ಯಾರಾಗಿದ್ದರೆಂಬುದನ್ನು ಆನಂದ್ ಕಂಡು ಹಿಡಿದದ್ದೇಗೆ..??


ರಂಗರಾಜ್ ಎಂಬ ಶ್ರೀಮಂತರು ಮೇಲ್ನೋಟಕ್ಕೆ ಒಬ್ಬ ಹೋಟೆಲ್ ಮಾಲೀಕರಾಗಿದ್ದರು. ಥಿಯೇಟರ್, ಹೋಟೆಲ್ ಲಾಡ್ಜಿಂಗ್ ಗಳಿದ್ದರೂ.. ಅವರ ಹೆಸರು ಕಪ್ಪುಹಣದ ಸಂಗ್ರಹಣೆಯಲ್ಲಿ ಕೇಳಿ ಬರುತ್ತಿತ್ತು. ಆದರೆ, ಅವುಗಳನ್ನು ನಿರೂಪಿಸಲು ಯಾವುದೇ ಸಾಕ್ಷಿಗಳಿರಲಿಲ್ಲ. ಅಂತಹಾ ಕ್ಲಿಷ್ಟವಾದ ಕೇಸು ಆನಂದನ ಮನಸ್ಸಿನ ಕಣ್ಣಿನಿಂದ ಬಗೆಹರಿದದ್ದೇಗೆ..??


ಶ್ರೀಮಂತರಾದ ಶಿವಬಸಪ್ಪನವರು ಹಾಗೂ ಶರಣಮ್ಮನವರ ಮಕ್ಕಳಾದ 26 ವರ್ಷದ ಮಗ ಹಾಗೂ 22 ವರ್ಷದ ಮಗಳು ಇಬ್ಬರೂ ಒಟ್ಟಿಗೆ ಕಾಣೆಯಾಗಿದ್ದರು. ಅವರಿಬ್ಬರೂ ವಿದ್ಯಾವಂತರು. ಅಲ್ಲದೆ, ಲೆಕ್ಚರರ್ ಆಗಿ ಕೆಲಸದಲ್ಲಿಯೂ ಇದ್ದವರು. ಅವರಿಬ್ಬರೂ ಹಠಾತ್ತಾಗಿ ಕಾಣೆಯಾಗಿದ್ದರಲ್ಲದೇ ಹಣದ ಬೇಡಿಕೆ ಹಾಗೂ ಬೆದರಿಕೆ ಪತ್ರಗಳು ಬರುತ್ತಿದ್ದವು. ಇವುಗಳ ಹಿಂದಿನ ರಹಸ್ಯವನ್ನು ಭೇದಿಸಿದ್ದು ಆನಂದ್. ಅದರ ಮನಸ್ಸಿನ ಕಣ್ಣಿನಿಂದಲ್ಲ.. ಬದಲಾಗಿ, ಆತನ ಬುದ್ಧಿವಂತಿಕೆಯಿಂದ. ಹೇಗೆ..??


ಪ್ರೊಫೆಸರ್ ರಾಮನ್ ಅವರು ಮನಸ್ಸಿನ ಕಣ್ಣಿನ ಪ್ರಯೋಗವನ್ನು ತಮ್ಮ ಮೇಲೆ ಮಾಡಿಕೊಳ್ಳದೆ ಆನಂದನ ಮೇಲೆ ಪ್ರಯೋಗಿಸಿದ್ದೇಕೆ..?? ಮನೆಯವರಿಗೆ ಹಾಗೂ ಇಲಾಖೆಯ ಉಳಿದವರಿಗೆ ಆನಂದನ ಈ ವಿಶಿಷ್ಟ ಶಕ್ತಿಯ ಬಗ್ಗೆ ಸಂದೇಹ ಬರಲಿಲ್ಲವೇಕೆ..?? ಕ್ಲಿಷ್ಟವಾದ ಬಗೆಹರಿಯದ ಮೂರು ಕೇಸುಗಳು ಬಗೆಹರಿದದ್ದು ಹೇಗೆ..?? ಮನಸ್ಸಿನ ಕಣ್ಣಿನ ಸಹಾಯದಿಂದ ಆತ ಕೇಸ್ ಅನ್ನು ಬಿಡಿಸಬಲ್ಲ ಎಂಬ ರಹಸ್ಯವನ್ನು ಹೊರಗೆಡುವ ಪ್ರಮೇಯ ನಿರ್ಭಯ್ ಗೆ ಬಾರದ್ದು ಏಕೆ..?? ಶರಣಮ್ಮನವರ ಮನೆಯ ಪ್ರಸಂಗದಲ್ಲಿ ಆತ ಮನಸ್ಸಿನ ಕಣ್ಣಿನ ಸಹಾಯ ತೆಗೆದುಕೊಳ್ಳಲಿಲ್ಲವೇಕೆ..?? ಆ ಶಕ್ತಿಗೆ ಮಿತಿ ಏನಾದರೂ ಇದ್ದಿತೇ..?? ರಾಮನ್ ರ ಪ್ರತಿಭೆ ಹೊರಜಗತ್ತಿಗೆ ತಿಳಿಯಿತೇ..?? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ 'ಮನಸ್ಸಿನ ಕಣ್ಣು' ಕಾದಂಬರಿಯನ್ನು. 


ಇಲ್ಲಿ ವಿಜ್ಞಾನವನ್ನು ಮನುಷ್ಯ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳದೆ,ಅದರಿಂದ ಸಮಾಜಕ್ಕೆ ಒಳಿತು ಮಾಡುವ ರೀತಿಯಿಂದ ಅದನ್ನು ಬಳಸಬೇಕಾದ ರೀತಿಯನ್ನು ಸಮರ್ಥವಾಗಿ ಹೇಳಿದ್ದಾರೆ. ವಿಶಿಷ್ಟ ಶಕ್ತಿ ದೊರೆತ ನಂತರವೂ, ಅದನ್ನೇ ನೆಚ್ಚಿಕೊಳ್ಳದೆ ತನ್ನ ಬುದ್ಧಿಮತ್ತೆಯನ್ನು ಬಳಸುವ ಆಲೋಚನೆ ಇಷ್ಟವಾಯಿತು.


ಇಲ್ಲಿ ವಿಜ್ಞಾನದ ಹಾಗೂ ಸಂಶೋಧನೆಯ ಫಲವನ್ನು ಮನುಷ್ಯ ದುರಾಸೆಗೆ ಬಳಸಿಕೊಳ್ಳದೇ ಇರುವುದು ಹಾಗೂ ಆತನ ಮೇಲಧಿಕಾರಿಯೂ ಅವನಂತೆಯೇ ನಿಸ್ವಾರ್ಥಿಯಾಗಿರುವುದು ಮನುಷ್ಯನಲ್ಲಿರುವ ನೈತಿಕತೆಯನ್ನು ಸೂಚಿಸುತ್ತದೆ. ಮನಸ್ಸಿಗೆ ಎಷ್ಟು ಶಕ್ತಿ ಇದೆಯೋ.. ಅದಕ್ಕೆ ಲಗಾಮು ಹಾಕಲು ಅಷ್ಟೇ ವಿವೇಕ ಬೇಕು. ಇಲ್ಲಿ ಮನಸ್ಸಿನ ಕಣ್ಣಿನ ಜೊತೆಗೆ ಮನಸ್ಸಿಗೆ ಲಗಾಮು ಹಾಕಿದ ಪರಿ ಸೆಳೆಯುತ್ತದೆ. ಚಿಕ್ಕದಾದ, ಚೊಕ್ಕದಾದ ಚೆಂದದ ಕಾದಂಬರಿಯ ಓದು


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ