ಗುರುವಾರ, ಏಪ್ರಿಲ್ 16, 2026

ಎನ್ ಲೈಟಿಂಗ್ ಆನ್ ಮೂನ್ ಲೈಟಿಂಗ್


ಇತ್ತೀಚಿಗೆ ಐ.ಟಿ ಕಂಪೆನಿಗಳಿಗೆ ತಲೆಬಿಸಿಯಾಗಿ ಪರಿಣಮಿಸಿರುವ ಈ ಮೂನ್ ಲೈಟಿಂಗ್ ಬೆಳದಿಂಗಳಂತೆ ತಂಪಾಗಿಲ್ಲ. ಇನ್ಪೋಸಿಸ್ ಹಾಗೂ ಐ.ಬಿ.ಎಂ ಗಳು ಮೂನ್ ಲೈಟಿಂಗ್ ಕುರಿತು ತನ್ನ ಕಂಪೆನಿಯ ಉದ್ಯೋಗಿಗಳಿಗೆ ವಾರ್ನಿಂಗ್ ನೀಡಿದ್ದರೆ, ವಿಪ್ರೋ ತನ್ನ ಮುನ್ನೂರು ಉದ್ಯೋಗಿಗಳನ್ನು ವಜಾ ಮಾಡಿದೆ. ಯಾಕೆ ? ಯಾವಾಗ ? ಇದರ ಪರ-ವಿರೋಧಗಳೇನು ಎಂಬುದರ ಕುರಿತು ತಿಳಿಯೋಣ ಬನ್ನಿ.


ಮೂನ್ ಲೈಟಿಂಗ್ ಎಂಬುದು ಭಾರತದ ಪದವಲ್ಲ. ಇದು ಯು.ಎಸ್ ನ ಪದ. ಮೂನ್ ಲೈಟಿಂಗ್ ಅಂದರೆ ಮತ್ತೇನಲ್ಲ.. ತಾನು ಈಗ ಮಾಡುತ್ತಿರುವ ಒಂದು ಉದ್ಯೋಗದ ಜೊತೆಗೆ ಮತ್ತೊಂದು ಉದ್ಯೋಗ ಮಾಡುವುದು. ಹಣದ ಆವಶ್ಯಕತೆಗೆ ಅಥವಾ ತಮ್ಮ ಸ್ಕಿಲ್ ಗಳನ್ನು ಉಪಯೋಗಿಸಿಕೊಳ್ಳಲು ಉದ್ಯೋಗಿಗಳು ಕೆಲಸದ ಅವಧಿಯ ತರುವಾಯ ಮತ್ತೊಂದು ಕೆಲಸ ಹಿಡಿಯುವುದೇ ಮೂನ್ ಲೈಟಿಂಗ್. ಸಾಮಾನ್ಯವಾಗಿ ಕೆಲಸಗಳು 9 ರಿಂದ 5 ರ ವರೆಗೆ ಇರುವಾಗ ಉದ್ಯೋಗಿಗಳು ರಾತ್ರಿ ಪಾಳಿಯ ಮತ್ತೊಂದು ಕೆಲಸವನ್ನು ಹಿಡಿದಾಗ ರಾತ್ರಿಯನ್ನು ಸೂಚಿಸುವ ಪದವಾಗಿ ಮೂನ್ ಲೈಟಿಂಗ್ ಬಳಕೆಯಲ್ಲಿದೆ. ಹೆಚ್ಚಿನ ಐ.ಟಿ ಕಂಪೆನಿಗಳಲ್ಲಿ ವಾರದ ಐದು ದಿನಗಳಲ್ಲಿ ಮಾತ್ರ ಕೆಲಸವಿದ್ದು ಮತ್ತೆರಡು ದಿನ ರಜೆ ಇರುವಾಗ ಬೇರೆ ಚಿಕ್ಕ - ಪುಟ್ಟ ಪ್ರಾಜೆಕ್ಟ್ ಗಳಲ್ಲಿ ಅಥವಾ ಫ್ರೀ ಲ್ಯಾನ್ಸಿಂಗ್ ವರ್ಕ್ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವವರೂ ಇದ್ದರು.


ಆದರೆ, ಕೋವಿಡ್ ಬಂದು ಲಾಕ್ ಡೌನ್ ಶುರುವಾದ ನಂತರ ಹೆಚ್ಚು ಕಡಿಮೆ ಎಲ್ಲರೂ ವರ್ಕ್ ಫ್ರಮ್ ಹೋಮ್ ಪದ್ಧತಿಯನ್ನು ಅನುಸರಿಸಲು ಆರಂಭಿಸಿದರು. ಆಗಿನಿಂದ ಮೂನ್ ಲೈಟಿಂಗ್ ಪದ್ದತಿ ಹೆಚ್ಚಿತು. 


ಈ ಕುರಿತು ಕಳೆದ ತಿಂಗಳು ವಿಪ್ರೋ ಅಧ್ಯಕ್ಷ ಅಜಿಂ ಪ್ರೇಮ್ ಜೀ ಮಾಡಿದ್ದ ಟ್ವೀಟ್ ನಲ್ಲಿ ಮೂನ್ ಲೈಟಿಂಗ್ ಮೋಸ ಎಂದಿದ್ದರು. ಕಳೆದ ಬುಧವಾರ 46 ನೇ ಆಲ್ ಇಂಡಿಯಾ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನಲ್ಲಿ ವಿಪ್ರೊದ ಎಕ್ಸಿಕ್ಯೂಟಿವ್ ಚೇರ್ ಮನ್ ರಿಷಧ್ ಪ್ರೇಮ್ ಜೀ ಯವರು ಮೂನ್ ಲೈಟಿಂಗ್ ಅನುಸರಿಸಿದ ವಿಪ್ರೋದ 300 ಜನ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ ಎನ್ನುವ ಅಧಿಕೃತ ಮಾಹಿತಿ ತಿಳಿಸಿದರು. 


ಇದಕ್ಕಾಗಿ ವ್ಯಾಪಕ ಪರ - ವಿರೋಧಗಳ ಅಭಿಪ್ರಾಯಗಳು ಉಂಟಾಗಿವೆ. ಪ್ರಸ್ತುತ ಕಂಪನಿಗೆ ರಾಜೀನಾಮೆ ನೀಡದೆ ಮತ್ತೊಂದು ಕೆಲಸ ಮಾಡುತ್ತಾ ನಮ್ಮ ಕಂಪೆನಿಯ ಡೇಟಾಗಳನ್ನು ನಮ್ಮ ವಿರುದ್ಧದ ಮತ್ತೊಂದು ಕಂಪೆನಿಗೆ ಮೇಲ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಒಬ್ಬ ಉದ್ಯೋಗಿಯಂತೂ ಒಟ್ಟಿಗೆ 7 ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದದ್ದು ಗೊತ್ತಾಗಿದೆ. ಇದು ಕಂಪೆನಿಯ ನಿಯಮಗಳಿಗೆ ವಿರುದ್ಧ ಎನ್ನುವ ಪುಷ್ಟಿಕರಣ ಕೂಡ ನೀಡಿದ್ದಾರೆ. 


ಈ ಕುರಿತು ಉದ್ಯೋಗಿಗಳು ತಾವು ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎನ್ನುವ ವಾದವನ್ನೂ ಮುಂದಿಟ್ಟಿದ್ದಾರೆ. ನಮ್ಮ ಸ್ಕಿಲ್ ಗಳನ್ನು ನಮಗೆ ಅನುಕೂಲಕರವಾಗುವಂತೆ ಬಳಸಿಕೊಳ್ಳಲಾಗಿದ್ದು ಕಂಪನಿಯ ಸಮಯದಲ್ಲಿ ಬೇರೆ ಕೆಲಸ ಮಾಡುತ್ತಿರಲಿಲ್ಲ ಎಂದು ಕೆಲವರು ಹೇಳಿದ್ದರೆ.. ಇನ್ನು ಕೆಲವರು ಹಣದ ಅವಶ್ಯಕತೆ ಇದ್ದುದರಿಂದ ಕಂಪನಿಯ ಸಮಯ ಹೊರತು ಪಡಿಸಿ ಈ ಕೆಲಸ ಮಾಡುತ್ತಿದ್ದೆವು ಎಂದಿದ್ದಾರೆ. 

ನಾಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಎಂಪ್ಲಾಯಿಸ್ ಸೆನೆಟ್ ಈ ಕುರಿತು ಪ್ರತಿಕ್ರಿಯೆ ನೀಡಿ ವಿಪ್ರೋದ ಈ ನಡೆ ಅನ್ ಎಥಿಕಲ್ ಎಂದಿದೆ. 


ಈ ಕುರಿತು ಕಾನೂನು ಹೇಗಿದೆ ಗೊತ್ತೇ..??

ಕಾರ್ಖಾನೆಗಳ ಕಾಯಿದೆ, ಸೆಕ್ಷನ್ 60 ರ ಪ್ರಕಾರ ಭಾರತದಲ್ಲಿ ದ್ವಿ - ಉದ್ಯೋಗಕ್ಕೆ ನಿಷೇಧವಿದೆ. ಈ ಕಾನೂನು ಇದ್ದರೂ.. ರಾಜ್ಯದಿಂದ ರಾಜ್ಯಕ್ಕೆ ಇದು ಬದಲಾಗಬಹುದು. ರಾಜ್ಯಗಳ ಅನುಕೂಲದನ್ವಯ ಇದನ್ನು ಬದಲಾಯಿಸಿಕೊಳ್ಳಬಹುದಾಗಿದೆ. 


ಐ.ಟಿ ದಿಗ್ಗಜರ ಭಯವೇನು ಗೊತ್ತೇ ? 

ಬೇರೆ ಎಲ್ಲಾ ಕ್ಷೇತ್ರಕ್ಕಿಂತಲೂ ಡೇಟಾ ಟ್ರ್ಯಾನ್ಸ್ಫರ್ ಹಾಗೂ ಡೇಟಾ ಕಳ್ಳತನ ವೇಗವಾಗಿ ಆಗುವುದು ಐ.ಟಿಯಲ್ಲಿಯೇ.. ಇಂಟಲೆಕ್ಚುಯಲ್ ಪ್ರಾಪರ್ಟಿಗಳ ಕಳ್ಳತನದ ಭಯವೂ ಇವುಗಳಿಗೆ ಕಾಡುತ್ತಿದೆ. ತನ್ನ ವಿರುದ್ದದ ಕಂಪೆನಿಯೂ, ತಾನು ಒಂದೇ ರೀತಿ ಆಲೋಚನೆ ಮಾಡಿದರೆ ಹೇಗಿರುತ್ತದೆ. ಉದ್ಯೋಗಿಗಳ ದ್ವಿಪಕ್ಷೀಯ ಕೆಲಸದಿಂದ ಆಗುತ್ತಿರುವುದೂ ಅದೇ.. 


ಅಷ್ಟೇ ಅಲ್ಲ, ಇಲ್ಲಿ ಮತ್ತೊಂದು ಟ್ರಿಕ್ ಇದೆ. ಕೆಲವು ಉದ್ಯೋಗಿಗಳಿಗೆ ತಾನು ವರ್ಕ್ ಮಾಡುತ್ತಿರುವ ಕಂಪೆನಿ ತನ್ನ ಕಂಪನಿಯ ರೈವರ್ಲಿ ಕಂಪೆನಿ ಎಂದು ಗೊತ್ತೇ ಇರುವುದಿಲ್ಲ. ಗೊತ್ತಾಗದೇ ಕೆಲಸ ಮಾಡುತ್ತಾರಾ..! ಎಂದು ಅಚ್ಚರಿಗೊಳಗಾದಿರಾ ? ಫ್ರೀ ಲ್ಯಾನ್ಸಿಂಗ್ ಮೂಲಕ ಸಿಗುವ ಕೆಲಸವನ್ನು/ ಪ್ರಾಜೆಕ್ಟ್ ಅನ್ನು ಅಷ್ಟೇ ಮಾಡುತ್ತಾರೆ ಉದ್ಯೋಗಿಗಳು. ಹೀಗಿದ್ದಾಗ ಇದರ ಹಿಂದಿರುವ ನಿಜವಾದ ಕಂಪನಿ ಯಾವುದೆಂದು ಗೊತ್ತೇ ಇರುವುದಿಲ್ಲ ಅವರಿಗೆ. 


ಈ ಕುರಿತು ಬೇರೆ ಬೇರೆ ಕಂಪನಿಗಳು ಹಾಗೂ ಮುಖ್ಯಸ್ಥರ ನಿಲುವುಗಳೇನಿದೆ ತಿಳಿಯೋಣ ಬನ್ನಿ

 

ಟಿ.ಸಿ.ಎಸ್ ನ  ಎನ್.ಜಿ ಸುಬ್ರಮಣಿಯನ್ ಮೂನ್ ಲೈಟಿಂಗ್ ಎಥಿಕಲ್ ಇಷ್ಯೂ ಎಂದಿದ್ದಾರೆ.


ಕಳೆದ ವಾರದಲ್ಲಿ ಇನ್ಪೋಸಿಸ್ ತನ್ನ ಉದ್ಯೋಗಿಗಳಿಗೆ ವಾರ್ನಿಂಗ್ ರೀತಿಯ ಮೇಲ್ ಒಂದನ್ನು ಕಳುಹಿಸಿದೆ. 

"ನೋ ಟೂ ಟೈಮಿಂಗ್

ನೋ ಮೂನ್ ಲೈಟಿಂಗ್

ನೋ ಡಬಲ್ ಲೈವ್ಸ್ " ಎಂದಿದೆ.

ಇನ್ಪೋಸಿಸ್ ನ ಮಾಜಿ ಡೈರೆಕ್ಟರ್ ಮೋಹನ್ ದಾಸ್ ಪೈ ಮೂನ್ ಲೈಟಿಂಗ್ ಚೀಟಿಂಗ್ ಅಲ್ಲ ಎಂದಿದ್ದಾರೆ. ಅವರ ಪ್ರಕಾರ "ಉದ್ಯೋಗ ಎನ್ನುವುದು ಉದ್ಯೋಗಿಗಳು ಹಾಗೂ ಅವರಿಗೆ ಸಂಬಳ ನೀಡುವ ಉದ್ಯೋಗದಾತರ ನಡುವಿನ ಕಾಂಟ್ರ್ಯಾಕ್ಟ್ ಇದ್ದಂತೆ. ಈ ಒಪ್ಪಂದದ ಪ್ರಕಾರ ನಾನು ಮಾಡುವ ಇಂತಿಷ್ಟು ಗಂಟೆ ಕೆಲಸಕ್ಕೆ ಇಂತಿಷ್ಟು ಎಂದು ಸಂಬಳ ನೀಡುತ್ತಾರೆ. ಅದರಾಚೆಗಿನ ನನ್ನ ಸಮಯ ನನ್ನ ಸ್ವಾತಂತ್ರ್ಯ. ಆ ಸಮಯದಲ್ಲಿ ನನಗೇನು ಬೇಕೋ ಅದನ್ನು ಮಾಡುವ ಸ್ವಾತಂತ್ರ್ಯ ನನಗಿದೆ" ಎನ್ನುತ್ತಾರೆ.

ಇನ್ಪೋಸಿಸ್ ಆ ಮೇಲ್ ನಲ್ಲಿ ಮತ್ತೊಂದು ವಿಚಾರವನ್ನು ಸಹಾ ನಮೂದಿಸಿದೆ. ನೀವು ಕೆಲಸಕ್ಕೆ ಸೇರಿದಾಗ ಸಹಿ ಮಾಡಿರುವ ಅಗ್ರಿಮೆಂಟ್ ಅನ್ನು ಮತ್ತೊಮ್ಮೆ ಓದಿ ಎಂದಿದೆ. ಆ ಅಗ್ರಿಮೆಂಟ್ ನ ಪ್ರಕಾರ ಎರಡು ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ.


ಮೀಡಿಯಾ ಮಂತ್ರದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹೆಚ್. ಆರ್ ಪ್ರೇರಣಾ ಚೌಹಾಣ್ ಪ್ರಕಾರ "ಮೂನ್ ಲೈಟಿಂಗ್ ಅನ್ ಎಥಿಕಲ್ ಹಾಗೂ ಹೆಚ್ಚು ರಿಸ್ಕ್. ಉದ್ಯೋಗಿಗಳು ತನ್ನ ಕಂಪನಿ ನೀಡಿರುವ ಟೂಲ್ ಗಳು ಹಾಗೂ ಸಾಫ್ಟ್ವೇರ್ ಅನ್ನು ಸ್ವಂತಕ್ಕೆ ಬಳಸಿಕೊಳ್ಳುವುದು ನೈತಿಕವಾಗಿ ತಪ್ಪು. ಅಲ್ಲದೇ ಭಾರತದ ಕಾನೂನಿನ ಪ್ರಕಾರ ಎರಡು ಉದ್ಯೋಗವನ್ನು ಏಕಕಾಲದಲ್ಲಿ ಮಾಡುವುದಕ್ಕೆ ಅವಕಾಶವಿಲ್ಲ."


ಟೆಕ್ ಮಹಿಂದ್ರಾದ ಸಿ.ಈ.ಓ ಹಾಗೂ ಎಂ.ಡಿ ಸಿ.ಪಿ ಗೌರಾನಿ ಬೇರೆಯದ್ದೇ ರೀತಿಯಾಗಿ ಪ್ರತಿಕ್ರಿಯೆ ನೀಡುತ್ತಾರೆ. 

"ಯಾವ ಉದ್ಯೋಗಿಗಳೇ ಆಗಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಪ್ರೊಡಕ್ಟೀವಿಟಿ ರೀಚ್ ಮಾಡಿದ ನಂತರ ಹೆಚ್ಚಿನ ಹಣದ ಅವಶ್ಯಕತೆ ಇದ್ದಾಗ ಮತ್ತೊಂದು ಕೆಲಸ ಮಾಡಿದರೆ ತಪ್ಪಿಲ್ಲ. ಆದರೆ, ಅದು ನಮ್ಮ ಕಂಪನಿಯ ಕೆಲಸದ ಮೇಲೆ ಪರಿಣಾಮ ಬೀರಬಾರದು. 

ಅಷ್ಟೇ ಅಲ್ಲ, ಈ ರೀತಿಯ ಪಾಲಿಸಿ ಮಾಡಲು ಸಹಾ ನಾನು ಸಿದ್ದ. ಯಾರಾದರೂ ಈ ರೀತಿ ಕೆಲಸ ಮಾಡುತ್ತಿದ್ದರೆ ತಿಳಿಸಿ ಅದಕ್ಕೆ ನಾನು ಪ್ರೋತ್ಸಾಹ ನೀಡುತ್ತೇನೆ. ಯಾವುದೇ ಮುಚ್ಚು-ಮರೆ ಮಾಡಬೇಡಿ. ಪಾರದರ್ಶಕತೆ ಇರಲಿ. " ಎಂದಿದ್ದಾರೆ.


ಲೀಗಲ್ ವಿಜ್.ಇನ್ ನ ಸ್ಥಾಪಕರಾದ ಶ್ರೀಜೇ ಶೇಥ್ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ "ಇದು ಉದ್ಯೋಗಿಗಳು ಕೆಲಸದ ಕುರಿತ ವರ್ಕ್ ಎಥಿಕ್ಸ್, ಇಂಟೆಗ್ರಿಟಿ ಹಾಗೂ ಪ್ರಿಯಾರಿಟಿಗಳ ಆಧಾರದ ಮೇಲೆ ಎದುರಿಸುವ ದೊಡ್ಡ ಸಮಸ್ಯೆಯಾಗಿದೆ. ವರ್ಕ್ ಫ್ರಮ್ ಹೋಮ್ ನಿಂದ ಇದು ಸಾಮಾನ್ಯವಾಗಿದೆ. ಕೆಲವರಿಗೆ ಇದು ಓ.ಕೆಯಾದರೆ ಮತ್ತೆ ಕೆಲವರಿಗೆ ಸಮಸ್ಯೆ" ಎಂದಿದ್ದಾರೆ.


ಆದರೆ, ಸ್ವಿಗ್ಗಿ ಮೂನ್ ಲೈಟಿಂಗ್ ಪರವಾಗಿ ತನ್ನ ವರ್ಕ್ ಪಾಲಿಸಿಯನ್ನು ಬದಲಾಯಿಸಿದೆ. ಸ್ವಿಗ್ಗಿಯ ಹೆಚ್. ಆರ್ ಹೆಡ್ ಗಿರೀಶ್ ಮೆನನ್ ಈ ಕುರಿತು ಐ.ಟಿ ಯ ಹೇಳಿಕೆಗಳಿಗೆ ವ್ಯತಿರಿಕ್ತವಾದ ನಿಲುವನ್ನು ವ್ಯಕ್ತ ಪಡಿಸಿದ್ದಾರೆ. ಸಾಮಾನ್ಯ ಕೆಲಸದ ಜೊತೆಗೆ ಎರಡನೇ ಕೆಲಸವನ್ನು ಮಾಡಲಿ ಎಂದಿದ್ದಾರೆ.

ಪೂರ್ಣ ಪ್ರಮಾಣದ ಕೆಲಸವಿದ್ದರೂ.. ಎನ್.ಜಿ.ಓ ಜೊತೆಗೆ ವಾಲೆಂಟಿಯರಿಂಗ್ ಮಾಡಬಹುದು. ಡ್ಯಾನ್ಸ್ ಇನ್ಸ್ಟ್ರಕ್ಟರ್ ಆಗಿಯೂ ಕೆಲಸ ಮಾಡಬಹುದು. ಅಥವಾ ಸೋಶಿಯಲ್ ಮೀಡಿಯಾಗಳ ಕಂಟೆಂಟ್ ಕ್ರಿಯೇಟರ್ ಆಗಿಯೂ ಕೆಲಸ ಮಾಡಬಹುದು. ಅದು ಅವರ ಹವ್ಯಾಸಗಳನ್ನು ಪೋಷಿಸಿಕೊಳ್ಳಲು ಅವರ ಆಯ್ಕೆ ಎನ್ನುತ್ತಾರೆ.


ಭಾರತದಲ್ಲಿ ಹೀಗಿರುವಾಗ, ಕಳೆದ ವಾರ ಕ್ಲೌಡ್ ನ ಮೇಜರ್ ಕಂಪೆನಿಯಾಗಿರುವ ಐ.ಬಿ.ಎಂ ಇದು ಎಥಿಕಲ್ ಅಲ್ಲ ಮತ್ತು ಕಂಪನಿ ಈ ಕುರಿತ ಬಿಹೇವಿಯರ್ ಅನ್ನು ಪ್ರಮೋಟ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 


ಈಗ ವರ್ಕ್ ಫ್ರಮ್ ಹೋಮ್ ಕೊಟ್ಟಿರುವ ಕಂಪೆನಿಗಳು ಕಡ್ಡಾಯವಾಗಿ ಮೂರು ದಿನ ಕೆಲಸಕ್ಕೆ ಬರಲೇ ಬೇಕೆನ್ನುವ ನಿಯಮ ರೂಪಿಸುತ್ತಿವೆ.


ತಪ್ಪು - ಸರಿಗಳ ನಡುವೆ :


ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಅಥಾರಿಟಿಯ ಟರ್ಮ್ಸ್ ಹಾಗೂ ಕಂಡೀಷನ್ಸ್, ನಾನ್- ಡಿಶ್ ಕ್ಲೋಶರ್ ಅಗ್ರಿಮೆಂಟ್ ಅನ್ನು ಉಲ್ಲಂಘಿಸಿದ್ದಕ್ಕೆ ನೋಯ್ಡಾದ ಟ್ವಿನ್ ಟವರ್ ಗಳನ್ನು ನೆಲಸಮ ಮಾಡಲಾಯಿತು. ಯಾವುದೇ ಕಾನೂನನ್ನು ಉಲ್ಲಂಘಿಸಿದರೂ ಕ್ರಮ ಕೈಗೊಳ್ಳಲೇಬೇಕು ಅಲ್ಲವೇ ??


ಕೆಲಸದ ನಂತರದ ಸಮಯದಲ್ಲಿ ಮಾಡುವ ಮತ್ತೊಂದು ಕೆಲಸ ಈ ಪ್ರಸ್ತುತ ಕೆಲಸದ ಮೇಲೆ ಎಫೆಕ್ಟ್ ಆದಾಗ..

ನನ್ನ ಕಾಲೇಜ್ ಹಾಸ್ಟೆಲ್ ನಲ್ಲಿರುವಾಗ ನೈಟ್ ಶಿಫ್ಟ್ ಕೆಲಸಕ್ಕೆಂದು ಬರುತ್ತಿದ್ದ ವಾಚ್ ಮ್ಯಾನ್ ಅನ್ನು ಒಂದೇ ವಾರಕ್ಕೆ ವಜಾ ಮಾಡಿದರು. ಕಾರಣ ಗೊತ್ತೇ ? ಬೆಳಿಗ್ಗೆ ಪಾಳಿಯಲ್ಲಿ ಮತ್ತೊಂದು ಕೆಲಸ ಮಾಡಿ ಬಂದು ರಾತ್ರಿ ಪಾಳಿ ಕೆಲಸದಲ್ಲಿ ಆಯಾಸದಿಂದ ನಿದ್ದೆ ಹೋಗಿರುತ್ತಿದ್ದ. ಆತನಿಗೆ ಹಣದ ಅವಶ್ಯಕತೆ ಇದ್ದದ್ದು ನಿಜ. ಹಾಗಾಗಿ ಎರಡು ಕೆಲಸದ ನಿರ್ವಹಣೆ ಮಾಡಲು ಯತ್ನಿಸುತ್ತಿದ್ದ. ಆದರೆ, ಮನುಷ್ಯನ ದೇಹದ ಎನರ್ಜಿಗೂ, ಆರೋಗ್ಯಕ್ಕೂ ಒಂದು ಮಿತಿ ಇದೆ ಅಲ್ಲವೇ ?? ಆತನ ಸ್ವಂತ ಸಮಸ್ಯೆಗಳಿಗೆ ಸಂಸ್ಥೆಯನ್ನು ಹೊಣೆ ಮಾಡಲಾಗುತ್ತದಾ ? ಮಾನವೀಯತೆ ಹಾಗೂ ವರ್ಕ್ ಎಥಿಕ್ಸ್ ಎರಡೂ ಬೇರೆ ಬೇರೆಯೇ ಅಲ್ಲವಾ..


ಇನ್ನು ಹೈಸ್ಕೂಲ್ ನಲ್ಲಿ ನನ್ನ ಗಣಿತದ ಸರ್ ಒಬ್ಬರು ಟ್ಯೂಷನ್ ಸೆಂಟರ್ ನಡೆಸುತ್ತಿದ್ದರು. ಹಾಗಾಗಿ, ಶಾಲೆಯಲ್ಲಿ ಅರ್ಧಂಬರ್ಧ ಪಾಠ ಮಾತ್ರ ನಡೆಯುತ್ತಿತ್ತು. ಹಣ ಉಳ್ಳವರು ಟ್ಯೂಷನ್ ಗೆ ಹೋಗುತ್ತಿದ್ದರು ಸರಿ. ಇಲ್ಲವಾದವರಿಗೆ ಕಲಿಯುವ ಹಕ್ಕಿರಲಿಲ್ಲವೇ ? ಪಡೆವ ಸಂಬಳಕ್ಕೆ ಸರಿಯಾಗಿ ಪಾಠ ಮಾಡಬೇಕು ಎನ್ನುವುದು ಆತನ ನೈತಿಕ ಹೊಣೆ ಅಲ್ಲವಾ..??


ಉದ್ಯೋಗದ ನಂತರ ಹವ್ಯಾಸಗಳನ್ನು ಮುಂದುವರಿಸಲು ಅಡ್ಡಿ ಇಲ್ಲ. ಆದರೆ, ಮತ್ತೊಂದು ಕೆಲಸ ಮಾಡುವಾಗ ಜವಾಬ್ದಾರಿಯನ್ನು ಎಷ್ಟು ಸಮರ್ಥವಾಗಿ ನಿಭಾಯಿಸಬಲ್ಲೆವು ಎನ್ನುವುದು ಸಹಾ ಮುಖ್ಯ ಅಲ್ಲವಾ ? 


ಅಷ್ಟಕ್ಕೂ ಈಗಿನ ವರ್ಕ್ ಎಥಿಕ್ಸ್ ಹೇಗಿದೆ ಗೊತ್ತೇ..?? 

ನನ್ನ ಅಪ್ಪನ ಕಾಲದವರು ಕಾಯಕವೇ ಕೈಲಾಸ ಎನ್ನುತ್ತಿದ್ದರು. ಸರ್ಕಾರಿ ಅಥವಾ ಪ್ರೈವೇಟ್ ಕೆಲಸ ಯಾವುದೇ ಆಗಲಿ ಮೋಸ ಮಾಡುತ್ತಿರಲಿಲ್ಲ. ಸಂಬಳಕ್ಕಿಂತ ಕೆಲಸ ನೀಡಿದವರಿಗೆ ಹಾಗೂ ಕೆಲಸಕ್ಕೆ ಹೆಚ್ಚು ಋಣಿಯಾಗಿರುತ್ತಿದ್ದರು. ಈಗ ಹಾಗಿಲ್ಲ. ನೀನು ಕೆಲಸ ಕೊಡ್ತೀಯ, ನಾನು ಮಾಡ್ತೀನಿ. ನಾನು ಮಾಡಿದ ಕೆಲಸಕ್ಕೆ ನೀನು ಸಂಬಳ ಕೊಡುತ್ತೀಯ ಅಷ್ಟೇ ಎಂಬ ಭಾವ. ಕಂಪನಿಯ ಜೊತೆ ಭಾವನಾತ್ಮಕ ನಂಟುಗಳಿಲ್ಲ. ಹಣ ಹಾಗೂ ಕೆಲಸದ ವಿಚಾರವಷ್ಟೇ. ಅಲ್ಲಿ ಋಣವಿಲ್ಲ. ಮೂರು ವರ್ಷಕ್ಕೆ ಆರಕ್ಕಿಂತ ಕಂಪೆನಿ ಜಿಗಿದು ಸಂಬಳ ಹಾಗೂ ವೃತ್ತಿಯಲ್ಲಿಯೂ ಜಿಗಿದಾಗಿರುತ್ತದೆ.

ಯಾವುದು ಸರಿ ಯಾವುದು ತಪ್ಪು.?? ನೀವೇ ನಿರ್ಧರಿಸಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ