ಬುಧವಾರ, ಏಪ್ರಿಲ್ 15, 2026

ನೃತ್ಯ ಸರಸ್ವತಿ (ಪುಸ್ತಕ ಯಾನ - 190)


ಪುಸ್ತಕದ ಶೀರ್ಷಿಕೆ : ನೃತ್ಯ ಸರಸ್ವತಿ

ಲೇಖಕರು : ವೈ. ಕೆ. ಸಂಧ್ಯಾಶರ್ಮ

ಪ್ರಕಾಶಕರು : ಭಾರತೀ ಪ್ರಕಾಶನ

ಪ್ರಥಮ ಮುದ್ರಣ : 1988

ಪರಿಷ್ಕೃತ ತೃತೀಯ ಮುದ್ರಣ : 2022 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 216

ಬೆಲೆ : 200 ರೂ. 


ನಾಟ್ಯ ರಾಣಿ ಶಾಂತಲೆ ಎಂದೇ ಚಿರಪರಿಚಿತವಾಗಿರುವ ಶಾಂತಲೆ ಹೆಚ್ಚು ಆವರಿಸಿ, ಕುತೂಹಲ ಮೂಡಿಸಿದ್ದು ಕೆ. ವಿ ಅಯ್ಯರ್ ರವರ 'ಶ್ರೀ ವಿಷ್ಣುಕಾಂತೆ ಶಾಂತಲಾ' ಓದಿದಾಗ. ಆದರೆ, ಶಾಂತಲೆಯ ಕುರಿತು ಕೆ. ಎನ್. ಗಣೇಶನಯ್ಯನವರ ಕನಕ ಮುಸುಕುವಿನಲ್ಲಿ ಆಕೆ ಸಲ್ಲೇಖನ ಆ ವ್ರತ ಕೈಗೊಂಡಿದ್ದರ ಹಾಗೂ ವಿಷ್ಣುವರ್ಧನ ಹಾಗೂ ಶಾಂತಲೆಯರ ನಡುವಿದ್ದ ಭಿನ್ನಾಭಿಪ್ರಾಯಗಳ ಕುರಿತು ಓದಿದಾಗ ಈ ಕುರಿತ ಪುಸ್ತಕವಿದ್ದರೆ ಓದಬೇಕು ಎಂದುಕೊಂಡಿದ್ದೆ. ಆ ನಿರೀಕ್ಷೆ ಸಾಕಾರವಾದದ್ದು ವೈ. ಕೆ. ಸಂಧ್ಯಾ ಶರ್ಮ ಅವರ ಐತಿಹಾಸಿಕ ಕಾದಂಬರಿ "ನೃತ್ಯ ಸರಸ್ವತಿ"ಯನ್ನು ಓದಿದಾಗ. 


ಚಲನಚಿತ್ರವಾಗುವ ಹಂತದಲ್ಲಿದ್ದ ಕತೆ ಕಾದಂಬರಿಯ ರೂಪದಲ್ಲಿ ಕೈ ಸೇರಲು ಕಾರಣವೇನೆಂಬುದನ್ನು ನೀವೇ ಲೇಖಕಿಯ ಮಾತುಗಳಲ್ಲಿ ಓದಿ ನೋಡಿ. ನನಗೆ ಈ ಕಾದಂಬರಿ ಬಹಳವೇ ಕಾಡಿತು. ದೃಶ್ಯ ರೂಪಕ್ಕಿಂತ ನನಗೆ ಪುಸ್ತಕಗಳೇ ಹೆಚ್ಚು ಹತ್ತಿರ ಹಾಗೂ ಹೆಚ್ಚು ಕಾಡುತ್ತವೆ. ಇಲ್ಲಿ ಹೆಣ್ಮನದ ಏರಿಳಿತ, ಅದರಲ್ಲೂ ಪಟ್ಟದ ರಾಣಿಯೊಬ್ಬಳ ಹೃದಯದ ಭಾವಗಳು, ವೇದನೆ, ನೋವು, ವೈರಾಗ್ಯದ ಹಿಂದಿನ ಮನಸ್ಥಿತಿ ಹೆಚ್ಚು ತಟ್ಟಿತು.


"ನೃತ್ಯ ಸರಸ್ವತಿ" ಎಂಬ ಶೀರ್ಷಿಕೆಯೇ ಒಂದು ರೀತಿಯ ಗೌರವ ಭಾವದ ಜೊತೆಗೆ ಪೂಜನೀಯ ಭಾವವೂ ಮೂಡಿತು. ಇಲ್ಲಿ ನನಗೆ ಭೋಕಿಮಯ್ಯನ ಪಾತ್ರಕ್ಕೆ ವಿಶೇಷ ತೂಕವಿದೆ. ಅಂದಿನ ಹೊಯ್ಸಳ ರಾಜ್ಯದ ಅಧಿಕೃತ ದಾಖಲೆ ಬರೆದಿಟ್ಟಿರುವ ಶಾಸನಕಾರ ಮತ್ತು ಕವಿ ಬೋಕಿಮಯ್ಯ ರಾಣಿ ಶಾಂತಲೆಯನ್ನು ಆರಾಧಿಸಿರುವ ಪರಿ ಹಾಗೂ ಕಂಡ ನೋಟ ಕಥೆಯಲ್ಲಿ ಬರುತ್ತಲೇ.. ಆಕೆಯ ಹೊಗಳಿಕೆ, ಬಿರುದುಗಳು ಅಲ್ಲಲ್ಲಿ ಕಣ್ಸೆಳೆಯುತ್ತವೆ. ಕೆ.ವಿ. ಅಯ್ಯರ್ ಅವರ ಕಾದಂಬರಿಯನ್ನೇ ಓದಿ ಆವರಿಸಿದ್ದ ಶಾಂತಲೆಯ ಜೊತೆ ಕಂಡ ಲಕ್ಷ್ಮಿ ಇಲ್ಲಿಲ್ಲ. ಬದಲಾಗಿ ವಿಷ್ಣುವರ್ಧನನ ಆತ್ಮೀಯ ಗೆಳೆಯ ಬೋಕಿಮಯ್ಯನ ಆತ್ಮೀಯತೆಯಿದೆ. ಜೊತೆಗೆ, ಇಲ್ಲಿ ಕುವರ ವಿಷ್ಣುವಿನ ಪ್ರಸ್ತಾಪವಿಲ್ಲ. ಹಾಗೆ ಶಾಂತಲೆ ಇಲ್ಲಿ ಬಂಜೆಯೂ ಅಲ್ಲ.


ಶಿವಗಂಗೆಯ ಹೆಗಡೆ ಮಾರಸಿಂಗಮಯ್ಯನವರ ಮಗಳು ಶಾಂತಲೆ ಹಾಗೂ ವಿಷ್ಣುವರ್ಧನರ ಪ್ರೇಮ ಅದರಲ್ಲೂ.. ವಿಷ್ಣುವರ್ಧನ ಆಕರ್ಷಿತರಾಗಿದ್ದು.. ಇಬ್ಬರನ್ನೂ ನೃತ್ಯದಿಂದಲೇ ಸೇರಿಸಿದ್ದು ಹೌದಾದರೂ.. ಇಲ್ಲಿ ಇದು ಸಂಪೂರ್ಣ ಪ್ರೇಮ ವಿವಾಹವೂ ಅಲ್ಲ ಅಥವಾ ಸಂಪೂರ್ಣ ಹಿರಿಯರು ನೋಡಿ ಮಾಡಿದ ವಿವಾಹವೂ ಅಲ್ಲ. ಬದಲಾಗಿ, ವಿಷ್ಣುವರ್ಧನನ ಮನದಾಸೆ ಗೆಳೆಯನಿಂದ ಆತನ ತಾಯಿಗೆ ತುಳಿದು ಇಬ್ಬರನ್ನು ಸೇರಿಸಿರುವುದು. 


ಕೇವಲ ರಾಜ ವಂಶದವರು ರಾಜವಂಶದ ಯುವತಿಯರನ್ನೇ ವಿವಾಹವಾಗುವ ಸಂದರ್ಭಕ್ಕಿಂತಲೂ ವಿಭಿನ್ನವಾಗಿ ಚಿತ್ರಿತವಾಗಿದೆ. ಅಲ್ಲದೇ, ಇದು ಅಲ್ಲಲ್ಲಿ ಎದ್ದ ಅಪಸ್ವರ ಹಾಗೂ ಅದನ್ನು ನಿವಾರಿಸಿಕೊಂಡದ್ದರ ಜೊತೆಗೆ ಮತ್ತೆ ಶಾಂತಲೆಯೇ ಅಪವಾದವನ್ನು ತಾಳಲಾರದೆ ಅದನ್ನು ಬೇರೆಯದೇ ರೀತಿಯಲ್ಲಿ ನಿವಾರಿಸಿಕೊಂಡದ್ದು ಕಾಣುತ್ತದೆ.


ಮಹಾರಾಜ ಬಲ್ಲಾಳದೇವರ ವ್ಯಾದಿ ಉಲ್ಭಣಗೊಂಡು ಅವರು ಜಿನಪಾದ ಸೇರಿದ ನಂತರ ವಿಷ್ಣುವರ್ಧನ ಕೈಕೊಳ್ಳುವ ನಿರ್ಧಾರ ಆತನ ಭ್ರಾತೃವಾತ್ಸಲ್ಯವನ್ನು ಎತ್ತಿ ತೋರುತ್ತದೆ. 


ಉದಯಾದಿತ್ಯನನ್ನು ವಿವಾಹವಾಗಿ ಬಂದ ಚಂದಲೆ ಗರ್ಭಿಣಿಯಾದಾಗ ಶಾಂತಲೆ ಆಕೆಯನ್ನು ಆದರಿಸಿದ್ದು ಹಾಗೂ ಆ ಕನಸುಗಳೆಲ್ಲವೂ ಮಣ್ಣುಗೂಡಿ ಉದಯಾದಿತ್ಯ ಶ್ರೀರಂಗಪಟ್ಟಣದ ನಿರ್ಮಾಣ ಕಾರ್ಯಕ್ಕಾಗಿ ತೊಡಗಿಕೊಳ್ಳಲು ವಿರಕ್ತನಾಗಿ ಅತ್ತ ಪಯಾಣಿಸುವುದು ಮನುಷ್ಯನ ಆಸೆಗಳು, ಕನಸುಗಳು ಮಣ್ಣುಗೂಡಿದಾಗ ತಾವು ಪ್ರೀತಿಸುವ ವ್ಯಕ್ತಿ ದೂರವಾದಾಗ.. ಎಷ್ಟೋ ಜರ್ಜರಿತನನ್ನಾಗಿ ಮಾಡುತ್ತದೆ ಎಂಬುದು ಕಾಣುತ್ತದೆ. ಅದಕ್ಕಿಂತಲೂ ದುಃಖಭರಿತ ಸಂಕಷ್ಟವನ್ನೂ ಆತ ಎದುರಿಸಬೇಕಾಗಿ ಬರುತ್ತದೆ.


ವಿಷ್ಣುವರ್ಧನನ ಜೊತೆಯಾದ ಶಾಂತಲೆ ತನ್ನ ತೀರ್ಮಾನಗಳನ್ನು ತಿಳಿಸುವಾಗ ಆಕೆಯ ಉನ್ನತ ವ್ಯಕ್ತಿತ್ವ ಹಾಗೂ ಆಕೆಯ ನಡೆಗಳು ಆಕೆ ಎಷ್ಟು ಪ್ರಬುದ್ಧವಾಗಿ ಆಲೋಚನೆಯನ್ನು ಎತ್ತಿ ತೋರಿಸುತ್ತದೆ. ಅಲ್ಲದೇ.. ನೃತ್ಯ, ಭಕ್ತಿ, ಕಲೆ ಎಲ್ಲದರಲ್ಲಿಯೂ ಮೇಲುಗೈಯಾಗಿದ್ದ ಆಕೆ ರಾಜನಿಗೆ ಅಷ್ಟು ಪ್ರಿಯವಾದದರಲ್ಲಿ ಅಚ್ಚರಿಯೇನಿಲ್ಲ. ಆದರೆ, ಪ್ರಜೆಗಳಿಗೂ ಹತ್ತಿರವಾಗುವುದು ಅಷ್ಟು ಸುಲಭವಲ್ಲ. ವಿವಾಹವಾದ ಹೊಸತರಲ್ಲಿ, ಸಿಂಹಾಸನವನ್ನೇರಿ ಪಟ್ಟಗಟ್ಟಿಸಿಕೊಳ್ಳಲು ನಿರಾಕರಿಸಿದ ಸಂದರ್ಭ ರಾಜನ ಕಣ್ಣಲ್ಲಿ, ಪ್ರಜೆಗಳ ದೃಷ್ಟಿಯಿಂದ ಹಾಗೂ ಆಕೆಯ ಆಲೋಚನೆ ಮೂರೂ ಕಂಡುಬರುತ್ತದೆ.


ತಾನೇ ಮಹಾರಾಜರಿಗೆ ಬಮ್ಮಲೆಯನ್ನು ತಂದು ವಿವಾಹ ಮಾಡಿಸುವ ಸಂದರ್ಭದಲ್ಲಿ ಹಾಗೂ ಅದೇ ದಿನ ತಾನು ಗರ್ಭಿಣಿಯಂದು ತಿಳಿದಾಗ ಆಕೆಯಲ್ಲಿ ಉಂಟಾಗುವ ಭಾವಗಳಲ್ಲಿ ಹಾಗೂ ಆಕೆಯ ಪ್ರೌಢ ನಡೆಯಲ್ಲಿ ಆಕೆಯ ಔನಾತ್ಯ ಎದ್ದು ಕಾಣುತ್ತದೆ. ಆದರೆ, ತನ್ನ ದೇಹದಲ್ಲಿ ಆದ ಬದಲಾವಣೆಗಳನ್ನು ಆಕೆ ಗಮನಿಸಿಕೊಂಡಿರಲಿಲ್ಲವೇ..?? ಎಂಬ ಅನುಮಾನ ಕಾಡಿದರೂ.. ರಾಜ್ಯದ ಹಿತಾಸಕ್ತಿಯ ರಾಜಕಾರ್ಯಗಳಲ್ಲಿ ನಿರತಳಾಗಿದ್ದ ಆಕೆ ತನ್ನ ಕುರಿತು ಸರಿಯಾದ ಗಮನ ಕೊಟ್ಟುಕೊಂಡಿಲ್ಲವೇನೋ ಎಂಬ ಆಲೋಚನೆಯೂ ಮೂಡುತ್ತದೆ. 


ಬಮ್ಮಲೆ ಪತ್ನಿಯಾಗಿ ಬಂದ ನಂತರ ಕ್ಷಣ-ಕ್ಷಣಕ್ಕೂ ಆಕೆ ರಾಜನ ಮೇಲೆ ತನ್ನ ಹಿಡಿತ ಸಾಧಿಸಲ,  ತನ್ನವನನ್ನಾಗಿ ಮಾಡಿಕೊಳ್ಳಲು ಒದ್ದಾಡುವ ಪರಿ ಹಾಗೂ ಇರ್ಷ್ಯೆ ಕಾಣುತ್ತಾ ಹೋದರೂ.. ಶಾಂತಲೆಯ ವ್ಯಕ್ತಿತ್ವ ಆಕೆಯನ್ನು ತಣ್ಣಗಾಗಿಸುವ ಪರಿಯೂ ಕಾಣುತ್ತದೆ.


ಆಪ್ತ ಸಖಿಯಾದ ಚಾಮಲೆಯ ದೃಷ್ಟಿಯಿಂದ ಶಾಂತಲೆಯ ಭಾವಗಳು ಹಾಗೂ ಭೈರಬ್ಭೆಯ ತನ್ನ ಕುಹಕ ಬುದ್ಧಿಯಿಂದ ಬಮ್ಮಲೆಗೆ ನೀಡುವ ಕುಮ್ಮಕ್ಕು ಎರಡೂ ಪರಿಣಾಮಕಾರಿಯಾಗಿ ಚಿತ್ರತವಾಗಿದೆ. 


ಬಿಟ್ಟಿದೇವನಾಗಿದ್ದನು ರಾಜ ವಿಷ್ಣುವರ್ಧನನಾದದ್ದು.. ಹಾಗೂ ಈಗ ಮಗ ಬಿಟ್ಟಿಯಣ್ಣನಾದದ್ದು, ಬಮ್ಮಲೆಯ ಮಗಳಾದ ಪದ್ಮಲೆ ಹಾಗೂ ಮಗ ಬಲ್ಲಾಳನ ಆಗಮನ ರಾಜನಿಗೆ, ಬಮ್ಮಲೆಗೆ ಮಾತ್ರವಲ್ಲದೇ ಶಾಂತಲೆಗೂ ಇಬ್ಬರಿಗೂ ಖುಷಿ ತಂದದ್ದು ನಿಷ್ಕಲ್ಮಶ ಅಂತಃಕರಣವನ್ನು ತೋರುತ್ತದೆ.


ಪದ್ಮಲೆ ಹಾಗೂ ಬಲ್ಲಾಳರು ದೊಡ್ಡಬ್ಬೆ ಶಾಂತಲೆಯ ಕುರಿತು ತೋರುವ ಪ್ರೀತಿ ಹಾಗೂ ಆದರಗಳು ಯಾವುದೇ ಪ್ರೀತಿ, ಗೌರವವನ್ನು ಒತ್ತಾಯವಾಗಿ ಹೇಳುವುದಕ್ಕೂ.. ತಾನಾಗಿ ಮೂಡುವುದಕ್ಕೂ ಇರುವ ವ್ಯತ್ಯಾಸವನ್ನು ತೋರುತ್ತದೆ. ಮಕ್ಕಳ ಮೇಲೆ ಅಷ್ಟು ಛಾಪು ಏರಿದ್ದ ಶಾಂತಲೆಯ ವ್ಯಕ್ತಿತ್ವ ಎಷ್ಟರಮಟ್ಟಿಗಿತ್ತು ಎಂಬುದರ ಅರಿವಾಗುತ್ತದೆ.


ಎರಡು ದೇಹ, ಒಂದೇ ಜೀವ ಎಂಬಂತಿದ್ದ ವಿಷ್ಣುವರ್ಧನ ಹಾಗೂ ಶಾಂತಲೆಯರ ದಾಂಪತ್ಯದ ಅಪಸ್ವರ ನಮ್ಮ ಎದೆಯಲ್ಲಿಯೂ ಕಳವಳ ಹುಟ್ಟಿಸುತ್ತಾ ಸಾಗುತ್ತದೆ. ಹೀಗಾಗದಿರಲಿ ದೇವರೇ ಎಂಬ ಪ್ರಾರ್ಥನೆಯೂ ಅದರೊಟ್ಟಿಗೆ ಸೇರುವಷ್ಟು ಪರಿಣಾಮಕಾರಿಯಾಗಿದೆ. ರಾಜನ ಮನಸ್ಸು ದುರ್ಬಲವಾಗುತ್ತಾ, ಬಮ್ಮಲೆಯ ಹೇಳಿಕೆಯ ಮಾತುಗಳಿಗೆ ಕಿವಿಯಾಗುತ್ತಾ.. ಶಾಂತಲೆಯ ಕುರಿತು ತಳೆಯುತ್ತಿದ್ದ ಭಾವ ಹಾಗೂ ನಿರ್ಲಕ್ಷ ರೊಚ್ಚಿಗೆಬ್ಬಿಸುವಂತಿದೆ.  


ಬಿಟ್ಟಿಯಣ್ಣ ಗರುಡನಾಗುವುದು ಒಂದು ದಿನ ಮುಂದೂಡಲ್ಪಟ್ಟಿದ್ದರೆ ಬಹುಶಃ ಆ ಚರಿತ್ರೆಯ ಬದಲಾಗುತ್ತಿತ್ತೇನೋ.. ಬಿಟ್ಟಿಯಣ್ಣನ ಮೇಲೆ ನಡೆದ ರಾಜಕೀಯ ತಂತ್ರಗಳು.. ಶಾಂತಲೆಯ ನಿರ್ಮಲ ಮನಸ್ಸು, ನಿರ್ಧಾರದಲ್ಲಿಯೂ ಕಲ್ಲಾಗುವ ಸಂಧರ್ಭ ಸೃಷ್ಟಿಸುತ್ತದೆ. ಮೊಸರಿನಲ್ಲೂ ಕಲ್ಲು ಹುಡುಕುವ ಕುತಂತ್ರ ಬುದ್ದಿಯವರು ವಿಷ್ಣುವರ್ಧನನ ಮೇಲೆ ಪ್ರಭಾವ ಬೀರುವಾಗ ಒಮ್ಮೆಯಾದರೂ ಆತ ಬದಲಾಗಲಿ ದೇವರೇ ಎಂದು ಪ್ರಾರ್ಥಿಸುವಂತಾಗುತ್ತದೆ. 


ತಾಳ್ಮೆಯ ಖನಿಯಂತಿದ್ದ ಶಾಂತಲೆ ದುಡುಕುವುದು ಹಾಗೂ ಅವಳ ನಿರ್ಧಾರಗಳು ರೂಪಿತವಾದಾಗ ಅವಳ ಮನಸ್ಸಿನ ಮೇಲೆ ಆಗುವ ಒತ್ತಡ ಹಾಗೂ ಆ ಕ್ಷಣದಲ್ಲಿ ಆಕೆ ತೆಗೆದುಕೊಳ್ಳುವ ನಿರ್ಧಾರಗಳು ಬಹುಶಃ ವಯಸ್ಸಿನ ಪ್ರಭಾವವೂ ಇರಬಹುದು ಎಂದೆನಿಸಿತು. ಹೇಗಿದ್ದ ಶಾಂತಲೆ ಹೇಗಾದಳು ಎನ್ನುತ್ತಾ ಶಾಂತಲೆಯ ಕುರಿತು ಪರಿತಪಿಸುವಂತಾಗುತ್ತದೆ. ಪದೇ ಪದೇ ಅಂತಹಾ ಘಟನೆಗಳು ನಡೆದರೆ ಅವಳು ತಾನೇ ಏನು ಮಾಡುತ್ತಾಳೆ..! ಮಗನನ್ನೇ ಕಳೆದುಕೊಳ್ಳುವ ತಾಯಿಯಾಗಿ, ಪಿತೂರಿಯ ವಿರುದ್ಧ ರಾಜನನ್ನು ಎಚ್ಚರಿಸಲಾಗದ ಅಸಹಾಯಕಳಾಗಿ, ಕೆಲವೊಮ್ಮೆ ರಾಜ್ಯದ ಒಳಿತಿನಿಂದ ತೆಗೆದುಕೊಂಡ ನಿರ್ಧಾರಗಳು ಸ್ವಂತಕ್ಕೆ ಮುಳ್ಳಾದ ಸಂಗತಿಗಳು ಕಣ್ಣಲ್ಲಿ ನೀರು ತರಿಸುತ್ತವೆ. 


ಶಿವಗಂಗೆಗೆ ಹೊರಡುವ ಆಕೆಯ ನಿರ್ಧಾರವನ್ನು ನೀನೇಕೆ ಹೋಗುತ್ತೀಯೆ ಎಂದು ಕೇಳಿ ಆಕ್ಷೇಪಿಸಿಯಾನು ಎಂಬ ಭ್ರಮೆ ಕೇವಲ ಶಾಂತಲೆಗಲ್ಲದೆ ನಮ್ಮ ಮನಸ್ಸಿನಲ್ಲಿಯೂ ಮೂಡುತ್ತದೆ. ಆಕೆಯ ಶೂನ್ಯ ನೋಟ, ವಿರಾಗಿಣಿಯಂತಹಾ ನಿರ್ಗಮನ ನಮ್ಮಲ್ಲೂ ಶೂನ್ಯ ಹುಟ್ಟಿಸುತ್ತದೆ.


ಬೋಕಿಮಯ್ಯನ ಮಾತು "ಆಕೆ ಇಲ್ಲದ ಈ ನಾಡು ದೇವರಿಲ್ಲದ ಗುಡಿ, ದೀಪವಿಲ್ಲದ ಗೃಹ... ಮಹಾರಾಣಿಯವರಿಲ್ಲದ ಈ ನಾಡು ಇನ್ನೂ ಹೊಸತನದ ಕಲೆಯ ಮಿಂಚು ಕಳೆದುಕೊಳ್ಳುವುದು. ಇನ್ನು ಮೇಲೆ ಇದು ದೋರಸಮುದ್ರವಲ್ಲ... ಹಳೆಯ ಬೀಡು... ಹಾಳಾಳು ಬೀಡು..." ಎಂದು ಹೇಳುವ ಮಾತು ಎಷ್ಟೊಂದು ಸತ್ಯ..! 


ಪ್ರತಿ ಗಂಡಿನ ಯಶಸ್ಸಿನ ಹಿಂದೆ ಒಬ್ಬಳು ಮಹಿಳೆ ಇರುತ್ತಾಳೆ ಎಂಬ ಮಾತಿನಂತೆ ಇಲ್ಲಿ ಶಾಂತಲೆಯೇ ಎದ್ದು ಕಾಣುತ್ತಾಳೆ. ಇಲ್ಲಿ ಆಕೆಯಿಂದ ಪ್ರೇರೇಪಿತರಾದ ಪ್ರಜೆಗಳು, ಬಮ್ಮಲೆ ನೃತ್ಯದ ಕುರಿತ ತಾತ್ಸಾರದ ಮಾತುಗಳು, ಪದಕದ ಕುರಿತ ಸಂಗತಿಗಳು.. ಹೀಗೆ ಸಣ್ಣ-ಸಣ್ಣ ಸಂಗತಿಗಳೂ ಮನಸ್ಸಿಗೆ ಮುಟ್ಟುತ್ತವೆ.


ಶಾಂತಲೆಯ ಅಂತ್ಯ ಹೇಗಾಯಿತು..?? ಬಿಟ್ಟಿಯಣ್ಣನ ಸಾವಿಗೆ ಕಾರಣವೇನು...? ಬಮ್ಮಲೆ ವಿಷ್ಣುವರ್ಧನರ ಮೇಲೆ ಅಷ್ಟು ಪ್ರಭಾವ ಬೀರಲು ಕಾರಣವಾದ ಅಂಶಗಳಾವುವು..?? ಪದ್ಮಲೆಯ ಹಾಗೂ ಬಲ್ಲಾಳನ ದೊಡ್ಡಬ್ಭೆಯ ಪ್ರೇಮ ಎಷ್ಟಿತ್ತು.. ಅದಕ್ಕೆ ಶಾಂತಲೆ ನೀಡಿದ ಪ್ರತಿಕ್ರಿಯೆ ಏನು..?? ವೈಷ್ಣವ ಹಾಗೂ ಜೈನ ಮತಗಳ ಕುರಿತು ತಳೆದ ಭಿನ್ನಾಭಿಪ್ರಾಯಗಳು ಹಾಗೂ ಅದರಿಂದಾದ ಪ್ರಭಾವಗಳೇನು..?? ರಾಜಮಾತೆ ಇದಕ್ಕೆಲ್ಲಾ ಪ್ರತಿಕ್ರಿಯಿಸಿದ ಪರಿ, ರಾಜ್ಯದ ಹಿತಕ್ಕಾಗಿ ಗಂಗರಾಜರು ಹಾಗೂ ಅವರ ಪುತ್ರ ಬೊಪ್ಪಣನ ಪಾತ್ರವೆಷ್ಟು..?? ಶಾಂತಲೆ ಗಂಗರಾಜರ ಮಾತಿಗೆ ಅಷ್ಟು ಪ್ರಾಶಸ್ತ್ಯ ನೀಡುತ್ತಿದ್ದದ್ದು.. ಬಮ್ಮಲೆಯನ್ನು ವಿವಾಹವಾಗಲು ಹಿಂದೇಟು ಹಾಕುತ್ತಿದ್ದ ರಾಜ ಇನ್ನುಳಿದ ರಾಣಿಯರನ್ನು ಶಾಂತಲೆಗೆ ತಿಳಿಸದೇ ವಿವಾಹವಾದದ್ದೇಕೆ..?? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ವೈ. ಕೆ. ಸಂಧ್ಯಾಶರ್ಮ ಅವರ "ನೃತ್ಯ ಸರಸ್ವತಿ" ಕಾದಂಬರಿಯನ್ನು. 


ಕಾದಂಬರಿಯಲ್ಲಿ ವಿಷ್ಣುವರ್ಧನ ಹಾಗೂ ಶಾಂತಲೆಯರ ಶೃಂಗಾರದ, ಸರಸದ ಸಂಗತಿಗಳಿದ್ದರೂ.. ಓದುಗರಿಗೆ ಮುಜುಗರವಾಗದಂತೆ ಎಷ್ಟು ಸೊಗಸಾಗಿ ಚಿತ್ರಿತವಾಗಿದೆಯೋ.. ಅವರಿಬ್ಬರ ವಿಷಮ ದಾಂಪತ್ಯ ಅಷ್ಟೇ ತಲ್ಲಣ ಹುಟ್ಟಿಸುತ್ತದೆ. ಇಲ್ಲಿ ಭಾಷೆ ಹಾಗೂ ಭಾವುಕತೆಗಳೆರಡೂ ಮಿಳಿತವಾಗಿ ಈ ಕಾದಂಬರಿ ಕೊಂಚ ಹೆಚ್ಚೇ ಆವರಿಸುತ್ತದೆ. ಸೆಳೆಯುವ ಮುಖಪುಟವೂ ಬಹಳ ಅರ್ಥಪೂರ್ಣವಾಗಿದೆ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ