64 ವಿದ್ಯೆಗಳಲ್ಲಿ ಕಳ್ಳತನ ಕೂಡಾ ಒಂದು ಎನ್ನುತ್ತಾರೆ. ಹಾಗಾದರೆ, ಹ್ಯಾಕಿಂಗ್ ಎಂಬ ಕಳ್ಳತನ ಎಷ್ಟು ಒಳ್ಳೆಯದ್ದು ಮತ್ತು ಎಷ್ಟು ಕೆಟ್ಟದ್ದು ? ಒಳ್ಳೆಯತನ ಹಾಗೂ ಕೆಟ್ಟತನ ನಿರ್ಧರಿತವಾಗುವುದು ಬಳಕೆಯ ಆಧಾರದ ಮೇಲೆ ಅಲ್ಲವೇ ? ಹಾಗಾದರೆ, ಮಾಹಿತಿಯನ್ನು ಕಳ್ಳತನ ಮಾಡುವುದು ಸರಿಯೋ ಅಥವಾ ತಪ್ಪೋ ?
ಪ್ರತಿಯೊಬ್ಬರಿಗೂ ಅವರವರ ಮಾಹಿತಿ ಗೌಪ್ಯವೇ. ಕೆಲವು ಮಾಹಿತಿಗಳನ್ನು ಓಪನ್ ಅಪ್ ಆಗಿ ತೋರಿಸಿಕೊಂಡರೆ ಕೆಲವನ್ನು ಮುಚ್ಚಿಟ್ಟುಕೊಂಡು ಬದುಕಿಯೇ ರೂಢಿ. ಆದರೆ, ಅಂತಹಾ ಗೌಪ್ಯ ಮಾಹಿತಿಗಳನ್ನು ಮತ್ತೊಬ್ಬರು ಕದ್ದು ಜಗಜ್ಜಾಹೀರು ಮಾಡಿದರೆ ಅಥವಾ ಹಣಕ್ಕಾಗಿ ಪೀಡಿಸಿದರೆ..?? ಇತ್ತೀಚೆಗೆ ಈ ರೀತಿಯ ಕೆಲಸಗಳು ಹೆಚ್ಚಾಗುತ್ತಿರುವುದರಿಂದ ಹ್ಯಾಕಿಂಗ್ ಎಂದರೆ ಈ ರೀತಿ ಮಾಹಿತಿಯನ್ನು ಕದಿಯುವುದು ಎಂದಷ್ಟೇ ಬಿಂಬಿತವಾಗುತ್ತಿದೆ. ಹ್ಯಾಕರ್ ಗಳನ್ನು ಕದೀಮರಂತೆ ನೋಡಲಾಗುತ್ತಿದೆ. ಆದರೆ, ಹ್ಯಾಕರ್ ಗಳಿಗೆ ಅಷ್ಟೇ ಬೇಡಿಕೆಯಿದೆ. ಹಾಗೆಂದು, ಸಿನಿಮಾಗಳಲ್ಲಿ ತೋರಿಸುವ ಹಾಗೆ ಎಲ್ಲಿಯೋ ಕುಳಿತು ಗೌಪ್ಯವಾಗಿ ಯಾರಿಗೂ ಕಾಣದ ಹಾಗೆ ಕಳ್ಳತನ ಮಾಡುವುದಿಲ್ಲ. ಹ್ಯಾಕರ್ ಕೂಡಾ ಒಬ್ಬ ನುರಿತ ಪ್ರೋಗ್ರಾಮರ್. ಸಿನಿಮಾ ಹಾಗೂ ನಿಜ ಜೀವನದ ಹ್ಯಾಕರ್ ಗೂ ಸಾಮ್ಯತೆ ಇರುವುದಿಲ್ಲ.
ಆದರೆ, ಈ ಹ್ಯಾಕಿಂಗ್ ಹಾಗೂ ಹ್ಯಾಕರ್ ಗಳಲ್ಲಿಯೂ ಬೇರೆ ಬೇರೆ ರೀತಿಯ ಹ್ಯಾಕಿಂಗ್ ಮಾಡುವವರಿದ್ದಾರೆ. ಹ್ಯಾಕಿಂಗ್ ಎಂದರೆ ಮತ್ತೇನಲ್ಲ.. ಕಂಪ್ಯೂಟರ್ , ಮೊಬೈಲ್ ಅಥವಾ ನೆಟ್‌ವರ್ಕ್‌ನಲ್ಲಿನ ದೌರ್ಬಲ್ಯಗಳನ್ನು ಗುರುತಿಸುವ ಚಟುವಟಿಕೆಯಾಗಿದ್ದು ಅದು ವೈಯಕ್ತಿಕ ಡೇಟಾ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಡೇಟಾಗೆ ಪ್ರವೇಶವನ್ನು ಪಡೆಯಲು ಸುರಕ್ಷತೆಯನ್ನು ಬಳಸಿಕೊಳ್ಳುತ್ತದೆ. ಹಾಗೆ, ಮಾಹಿತಿ ಸೋರಿಕೆಯಾಗಿರುತ್ತದೆ. ಇಲ್ಲಿ ಮಾಹಿತಿ ಕಳ್ಳತನವಾಗುತ್ತದೆ ಎನ್ನುವುದಕ್ಕಿಂತ ಮಾಹಿತಿ ಸೋರಿಕೆಯಾಗುತ್ತದೆ ಎಂದರೆ ಹೆಚ್ಚು ಸೂಕ್ತವೆನಿಸಬಹುದು.
ಕಳ್ಳತನವೆಂದರೆ ಒಂದು ವಸ್ತುವನ್ನು ಇಟ್ಟಾಗ ಅದನ್ನು ಇಟ್ಟ ಜಾಗದಿಂದ ಕದ್ದು ಮತ್ತೊಂದು ಜಾಗಕ್ಕೆ ಸ್ಥಳಾಂತರ ಮಾಡುವುದು. ಆದರೆ, ಹ್ಯಾಕಿಂಗ್ ಮಾಡಿದಾಗ ಆ ಮಾಹಿತಿಯನ್ನು ನಾಶ ಮಾಡಲಾಗುವುದಿಲ್ಲ. ಬದಲಾಗಿ, ಆ ಮಾಹಿತಿಯ ಮತ್ತೊಂದು ಕಾಪಿ ನಮ್ಮ ಬಳಿ ಉಳಿಯುತ್ತದೆ. ಇದಕ್ಕೆ ಮಾಹಿತಿ ಸೋರಿಕೆಯಾಗಿದೆ ಎನ್ನುವುದೇ ಹೆಚ್ಚು ಸೂಕ್ತ. ನಮ್ಮ ಮಾಹಿತಿಯನ್ನು ಅವರು ಹ್ಯಾಕ್ ಮಾಡಿದ್ದಾರೆ ಎಂದು ಅರ್ಥವಾಗುವುದು ಅವರು ಹ್ಯಾಕ್ ಮಾಡಿರುವ ವಿಚಾರವನ್ನು ಬಹಿರಂಗ ಮಾಡಿದರೆ ಇಲ್ಲವೇ, ನಮ್ಮ ಡೇಟಾದಿಂದ ಯಾವುದಾದರೂ ಅನುಮಾನಾಸ್ಪದ ಚಟುವಟಿಕೆಗಳು ನಡೆದಾಗ ಮಾತ್ರ. ಮನೆಯಲ್ಲಿ ಕಳ್ಳತನವಾದರೆ ಮನೆಯ ಬಾಗಿಲು ಒಡೆದಿರುವುದೋ ಅಥವಾ ಕಿಟಕಿ ಮುರಿದಿರುವುದೋ ಇಲ್ಲವೇ ಬಾಲ್ಕನಿಯಿಂದ ಪ್ರವೇಶಿಸಿರುವಿದೋ ಎಂದು ಗೊತ್ತು ಮಾಡಿಕೊಳ್ಳಬಹುದು. ಮನೆಯ ಒಳಗಡೆಯೇ ಇದ್ದವರು ಕಳ್ಳತನ ಮಾಡಿದರೆ ಜಾಡು ಪತ್ತೆ ಹಚ್ಚುವುದು ಕಷ್ಟ ಅಲ್ಲವಾ ? ಇಲ್ಲಿಯೂ ಹಾಗೆಯೇ.. ಕಳ್ಳತನ ಮಾಡಿದ್ದೇ ಗೊತ್ತಾಗದಿದ್ದಾಗ ಏನು ಕಳ್ಳತನವಾಗಿದೆ ಎಂದು ಕಂಡು ಹಿಡಿಯುವ ಕಷ್ಟದ ಹಾಗೆ.
ಕೇವಲ ಹಣಕಾಸಿನ ಲಾಭದಿಂದ ಹ್ಯಾಕ್ ಮಾಡುವವರು ಕ್ರೆಡಿಟ್ ಕಾರ್ಡ್ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅನ್ನು ಹ್ಯಾಕ್ ಮಾಡುತ್ತಾರೆ.
ಕೆಲವರು ತಮ್ಮ ಸ್ಕಿಲ್ ಅನ್ನು ಪ್ರದರ್ಶಿಸಲು ಹಾಗೂ ಮತ್ತೊಬ್ಬ ಹ್ಯಾಕರ್ ಅನ್ನು ಕೇವಲವಾಗುವಂತೆ ಮಾಡುತ್ತಾ ಅವರ ಸೆಕ್ಯೂರಿಟಿಯನ್ನು ಮುರಿದು ಡೇಟಾ ಹ್ಯಾಕ್ ಮಾಡಿ ತಮ್ಮ ಕುರುಹನ್ನು ಹಾಗೆಯೇ ಬಿಟ್ಟು ಬರುತ್ತಾರೆ. ಇದು ಹೇಗೆಂದರೆ ಒಬ್ಬ ರೌಡಿ ತನ್ನ. ಪ್ರಾಬಲ್ಯವನ್ನು ಮರೆಯಲು ಮತ್ತೊಬ್ಬ ರೌಡಿಯನ್ನು ಕೆಣಕುವ ಹಾಗೆ.
ಕಾರ್ಪೊರೇಟ್ ಹ್ಯಾಕಿಂಗ್ ಎನ್ನುವ ಹೆಸರಿನಲ್ಲಿ ಪ್ರತಿಸ್ಪರ್ಧಿಯ ಡೇಟಾ ಕದಿಯುವುದು..ಪ್ರತಿಸ್ಪರ್ಧಿಯ ಸೇವೆಯ ಮಾಹಿತಿಯನ್ನು, ಉತ್ಪನ್ನಗಳ ವಿಚಾರಗಳನ್ನು ತಿಳಿದುಕೊಳ್ಳುವುದು ಈ ರೀತಿಯ ವಿಚಾರಗಳನ್ನು ತಿಳಿದುಕೊಂಡು ತಮ್ಮ ಸ್ಟ್ರ್ಯಾಟಜಿಯನ್ನು ಬಲಪಡಿಸಿಕೊಳ್ಳುತ್ತಾರೆ.
ರಾಷ್ಟ್ರದಿಂದ ರಾಷ್ಟದ ಮೇಲೆ ಬೇಹುಗಾರಿಕೆ ಮಾಡುವ ಹ್ಯಾಕರ್ ಗಳು ಕೂಡಾ ಇದ್ದಾರೆ. ಕಳೆದ ವಾರ ಪಾಕಿಸ್ತಾನದ ಪ್ರಧಾನಿಯ ಕಚೇರಿಯಿಂದಲೇ ಮಾಹಿತಿಯನ್ನು ಕದ್ದಿದ್ದ ಹ್ಯಾಕಿಂಗ್ ಕುರಿತು ಚರ್ಚಿಸಿದ್ದೆ.
ಹ್ಯಾಕರ್ ಗಳಲ್ಲಿಯೂ ಹಲವು ರೀತಿಯ ಹ್ಯಾಕರ್ ಗಳನ್ನು ಗುರುತಿಸಲಾಗುತ್ತದೆ. ಹ್ಯಾಕರ್ ಗಳು ನುರಿತ ಕಂಪ್ಯೂಟರ್ ಪ್ರೋಗ್ರಾಮರ್ ಗಳೇ ಆಗಿರುತ್ತಾರೆ. ಅಂತಹಾ ಹ್ಯಾಕರ್ ಗಳು ಎಥಿಕಲ್ ಹ್ಯಾಕಿಂಗ್ ಮೂಲಕ ಹ್ಯಾಕ್ ಮಾಡಲು ಕಲಿತಿರುತ್ತಾರೆ. ಹ್ಯಾಕರ್‌ಗಳನ್ನು ಅವರ ಹ್ಯಾಕಿಂಗ್ ಉದ್ದೇಶಕ್ಕೆ ಅನುಗುಣವಾಗಿ ವರ್ಗೀಕರಿಸಲಾಗುತ್ತದೆ. ಎಥಿಕಲ್ ಹ್ಯಾಕಿಂಗ್ ಮಾಡುವವರು ಹ್ಯಾಕ್ ಮಾಡುವ ಮೊದಲು ಕಂಪ್ಯೂಟರ್ ಸಿಸ್ಟಮ್ ಅಥವಾ ನೆಟ್‌ವರ್ಕ್ ಮಾಲೀಕರಿಂದ ಅಥವಾ ಇಬ್ಬರಿಂದಲೂ ಲಿಖಿತ ಅನುಮತಿಯನ್ನು ಪಡೆಯಬೇಕಾಗುತ್ತದೆ. ಹ್ಯಾಕ್ ಮಾಡಿದ ಸಂಸ್ಥೆಯ ಗೌಪ್ಯತೆಯನ್ನು ರಕ್ಷಿಸಬೇಕಾಗುತ್ತದೆ. ಅಲ್ಲದೇ, ಆ ಯಾವುದೇ ಡೇಟಾವನ್ನು ಬಳಸಿಕೊಳ್ಳದೆ, ಕಂಪ್ಯೂಟರ್ ವ್ಯವಸ್ಥೆಯಲ್ಲಿ ಗುರುತಿಸಲಾದ ಎಲ್ಲಾ ದೌರ್ಬಲ್ಯಗಳನ್ನು ಸಂಸ್ಥೆಗೆ ಪಾರದರ್ಶಕವಾಗಿ ವರದಿ ಮಾಡಿ ಗುರುತಿಸಲಾದ ದೌರ್ಬಲ್ಯಗಳ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಮಾರಾಟಗಾರರಿಗೆ ತಿಳಿಸುತ್ತಾರೆ. ಎಥಿಕಲ್ ಹ್ಯಾಕರ್ ಗಳಿಗಾಗಿ ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಇ-ಕಾಮರ್ಸ್ ಕನ್ಸಲ್ಟೆಂಟ್ಸ್ ವ್ಯಕ್ತಿಯ ಕೌಶಲ್ಯಗಳನ್ನು ಪರೀಕ್ಷಿಸುವ ಪ್ರಮಾಣೀಕರಣ ಕಾರ್ಯಕ್ರಮವನ್ನು ಮಾಡುತ್ತದೆ.ನಂತರ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಅವರುಗಳು ಈ ಪ್ರಮಾಣಪತ್ರಗಳನ್ನು ಸ್ವಲ್ಪ ಸಮಯದ ನಂತರ ನವೀಕರಿಸಬೇಕು.
ಕೆಲವೊಮ್ಮೆ ಗೂಗಲ್ ತನ್ನ ಬಗ್ ಅನ್ನು ಅಥವಾ ಎರರ್ ಅನ್ನು ತಿಳಿಸಿದ್ದಕ್ಕೆ ಇಂತಹವರಿಗೆ ಇಷ್ಟು ಹಣದ ಬಹುಮಾನ ನೀಡಿತು ಎಂದೋ.. ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ನೀಡಿತು ಎಂದೋ ಓದಿರುತ್ತೀರಿ. ಅಲ್ಲವೇ..?? ಅವರು ಎಥಿಕಲ್ ಹ್ಯಾಕರ್ ಗಳಲ್ಲದಿದ್ದರೂ ಒಂದು ರೀತಿಯಲ್ಲಿ ಹ್ಯಾಕರ್ ಗಳೇ..
ಎಥಿಕಲ್ ಹ್ಯಾಕರ್ (ವೈಟ್ ಹ್ಯಾಟ್): ಈ ರೀತಿಯ ಹ್ಯಾಕರ್ ಗಳು ಗುರುತಿಸಲಾದ ದೌರ್ಬಲ್ಯಗಳನ್ನು ಸರಿಪಡಿಸುವ ದೃಷ್ಟಿಯಿಂದ ಸಿಸ್ಟಮ್‌ಗಳಿಗೆ ಪ್ರವೇಶವನ್ನು ಪಡೆಯುವ ಭದ್ರತಾ ಹ್ಯಾಕರ್. ಅವರು ಸಿಸ್ಟಮ್ ಅನ್ನು ಪ್ರವೇಶಿಸಿ ದುರ್ಬಲತೆಯ ಮೌಲ್ಯಮಾಪನಗಳನ್ನು ಸಹ ಮಾಡಬಹುದು.
ಕ್ರ್ಯಾಕರ್ (ಬ್ಲ್ಯಾಕ್ ಹ್ಯಾಟ್): ವೈಯಕ್ತಿಕ ಲಾಭಕ್ಕಾಗಿ ಕಂಪ್ಯೂಟರ್ ಸಿಸ್ಟಮ್‌ಗಳಿಗೆ ಅನಧಿಕೃತ ಪ್ರವೇಶವನ್ನು ಪಡೆಯುವ ಹ್ಯಾಕರ್. ಇವರ ಉದ್ದೇಶವು ಸಾಮಾನ್ಯವಾಗಿ ಕಾರ್ಪೊರೇಟ್ ಡೇಟಾವನ್ನು ಕದಿಯುವುದು, ಗೌಪ್ಯತೆ ಹಕ್ಕುಗಳನ್ನು ಉಲ್ಲಂಘಿಸುವುದು, ಬ್ಯಾಂಕ್ ಖಾತೆಗಳಿಂದ ಹಣವನ್ನು ವರ್ಗಾಯಿಸುವುದು ಇತ್ಯಾದಿ.
ಗ್ರೇ ಹ್ಯಾಟ್: ನೈತಿಕ ಮತ್ತು ಬ್ಲ್ಯಾಕ್ ಹ್ಯಾಟ್ ಹ್ಯಾಕರ್‌ಗಳ ನಡುವೆ ಇರುವ ಹ್ಯಾಕರ್. ದೌರ್ಬಲ್ಯಗಳನ್ನು ಗುರುತಿಸಲು ಮತ್ತು ಸಿಸ್ಟಮ್ ಮಾಲೀಕರಿಗೆ ಅವುಗಳನ್ನು ಬಹಿರಂಗಪಡಿಸುವ ದೃಷ್ಟಿಯಿಂದ ಇವರು ಕಂಪ್ಯೂಟರ್ ಸಿಸ್ಟಮ್‌ಗಳಿಗೆ ಪ್ರವೇಶಿಸುತ್ತಾರೆ.
ಸ್ಕ್ರಿಪ್ಟ್ ಕಿಡ್ಡೀಸ್: ಈಗಾಗಲೇ ತಯಾರಿಸಿದ ಪರಿಕರಗಳನ್ನು ಬಳಸಿಕೊಂಡು ಕಂಪ್ಯೂಟರ್ ಸಿಸ್ಟಮ್‌ಗಳಿಗೆ ಪ್ರವೇಶವನ್ನು ಪಡೆಯುವ ಕೌಶಲ್ಯವಿಲ್ಲದ ವ್ಯಕ್ತಿ. ಆಪ್ ಗಳ ಮೂಲಕ ಡೇಟಾ ಹ್ಯಾಕ್ ಮಾಡುವವರು ಈ ಗುಂಪಿಗೆ ಸೇರಿದವರು
ಹ್ಯಾಕ್ಟಿವಿಸ್ಟ್: ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಇತ್ಯಾದಿ ಸಂದೇಶಗಳನ್ನು ಕಳುಹಿಸಲು ಹ್ಯಾಕಿಂಗ್ ಅನ್ನು ಬಳಸುವ ಹ್ಯಾಕರ್. ಇದನ್ನು ಸಾಮಾನ್ಯವಾಗಿ ವೆಬ್‌ಸೈಟ್‌ಗಳನ್ನು ಹೈಜಾಕ್ ಮಾಡುವ ಮೂಲಕ ಮತ್ತು ಹೈಜಾಕ್ ಮಾಡಿದ ವೆಬ್‌ಸೈಟ್‌ನಲ್ಲಿ ಸಂದೇಶವನ್ನು ಬಿಡುವ ಮೂಲಕ ಹ್ಯಾಕ್ ಮಾಡಲಾಗುತ್ತದೆ.
ಫ್ರೇಕರ್: ಕಂಪ್ಯೂಟರ್‌ಗಳ ಬದಲಿಗೆ ಟೆಲಿಫೋನ್‌ಗಳಲ್ಲಿನ ದೌರ್ಬಲ್ಯಗಳನ್ನು ಗುರುತಿಸುವ ಮತ್ತು ಬಳಸಿಕೊಳ್ಳುವ ಹ್ಯಾಕರ್.
ಹೀಗೆ ಹ್ಯಾಕಿಂಗ್ ಮಾಡುವವರು ಹೆಚ್ಚಿನ ಬಾರಿ ಬಳಸುವುದು ಆನ್ಲೈನ್ ಅಂದರೆ ಇಂಟರ್ನೆಟ್ ಅನ್ನೇ.. ಇಂಟರ್ ನೆಟ್ ಬಳಕೆ ಮಾಡಿದರೆ ಸುಲಭ ಎಂಬ ಕಾರಣಕ್ಕೆ ಈ ಮಾರ್ಗವನ್ನೇ ಹ್ಯಾಕಿಂಗ್ ಗೆ ಬಳಸುತ್ತಾರಾದರೂ ಎಸ್.ಎಂ.ಎಸ್ ಕಳುಹಿಸುವುದರ ಮೂಲಕ ಬ್ಲೂಟೂಥ್ ಸಂಪರ್ಕದ ಮೂಲಕ ಸಹಾ ಹ್ಯಾಕಿಂಗ್ ಮಾಡುತ್ತಾರೆ.
ಆನ್ಲೈನ್ ಮೂಲಕ ಹ್ಯಾಕ್ ಮಾಡುವಾಗ ಅವರು ಮೊಬೈಲ್ ಗೆ ವೈರಸ್ ಗಳನ್ನು ಸಹಾ ಕಳುಹಿಸಬಹುದು. ವೈರಸ್ ಹಾಗೂ ಮಾಲ್ ವೇರ್ ಎಂದರೆ ಒಂದೆಯಾ ? ವೈರಸ್ ಗೆ ಆಂಟಿ ವೈರಸ್ ಗಳನ್ನು ಪ್ರೋಗ್ರಾಮ್ ಮಾಡುವಾಗಿನ ವಿಚಾರ , ಮೊದಲು ವೈರಸ್ ಇಂಜೆಕ್ಟ್ ಮಾಡಿದ್ದು ಯಾರು ಮತ್ತು ಯಾವಾಗ ಎನ್ನುವ ಡಿಜಿಟಲ್ ವಾರ್ ಕುರಿತ ಮಾಹಿತಿ ಮುಂದಿನ ವಾರದ ಟೆಕ್ - ಟಾಕ್ ನಲ್ಲಿ
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ