ಯುದ್ದಗಳು ಇಂದು ಜನರ ಹೊಡೆದಾಟದ ರಕ್ತಪಾತಗಳೇ ಆಗಬೇಕಿಲ್ಲ. ಇಂದು ಡಿಜಿಟಲ್ ಮಾಧ್ಯಮದ ಮೂಲಕ ಸಹಾ ಕಿತ್ತಾಡಬಲ್ಲರು. ಬರೀ ಒಬ್ಬ ಮನುಷ್ಯನನ್ನು ಮಣಿಸಲು ಮಾತ್ರವಲ್ಲ.. ದೇಶಗಳನ್ನೇ ಮಣಿಸಲು ವೈರಸ್ ಗಳೆಂಬ ಅಸ್ತ್ರಗಳನ್ನು ಬಳಸಬಲ್ಲರು.
ವೈರಸ್, ಬ್ಯಾಕ್ಟೀರಿಯಾಗಳು ಹೇಗೆ ಸೂಕ್ಷ್ಮಾಣು ಜೀವಿಗಳಾಗಿ ನಮ್ಮ ಕಣ್ಣಿನಿಂದ ತಪ್ಪಿಸಿಕೊಂಡು ನಮ್ಮ ದೇಹವನ್ನು ಪ್ರವೇಶಿಸಿ ಸಂಕಷ್ಟ ತಂದೊಡ್ಡುತ್ತವೆಯೋ ಹಾಗೆ ಈ ವೈರಸ್ ಗಳು ಎಂಬ ದುರುದ್ದೇಶದ ಸಾಫ್ಟ್ವೇರ್ ಪ್ರೋಗ್ರಾಮ್ ಗಳನ್ನು ದುರುದ್ದೇಶದಿಂದ ನಮಗೇ ಅರಿವಿಲ್ಲದಂತೆ ನಮ್ಮ ಕಂಪ್ಯೂಟರ್ ಸೇರಿ ಸಂಕಷ್ಟ ತಂದೊಡ್ಡುತ್ತವೆ. ಹಾಗೆಂದು ಇವುಗಳು ತಮ್ಮಿಂದ ತಾನೇ ಸೃಷ್ಟಿಯಾಗುವುದಿಲ್ಲ. ಇವುಗಳನ್ನು ಸೃಷ್ಟಿ ಮಾಡಿ ಗೊತ್ತಿಲ್ಲದ ಹಾಗೆ ನಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಗೆ ಸೇರಿಸಿ ಬಿಡುತ್ತಾರೆ.
ವೈರಸ್ ಎಂಬ ಪದ ಜಾರಿಗೆ ಬಂದದ್ದು 1983 ರಲ್ಲಿ. ಫ್ರೆಡ್ ಕೋಚೆನ್ ನಿಂದ. ಈ ಕಂಪ್ಯೂಟರ್ ವೈರಸ್ ಗಳು ಸ್ವಾಭಾವಿಕವಾಗಿ ತಮ್ಮಿಂದ ತಾವೇ ಉಗಮವಾಗುವುದಿಲ್ಲ ಎಂಬುದು ಸತ್ಯವಾದರೂ ಒಂದು ಬಾರಿ ಕಂಪ್ಯೂಟರ್ ಅನ್ನು ಸೇರಿ ಸಾಫ್ಟ್ವೇರ್, ಫೈಲ್ ಗಳ ಮೇಲೆ ತಮ್ಮ ಅಧಿಪತ್ಯ ಸಾಧಿಸಿದ ನಂತರ ತಮ್ಮನ್ನು ತಾವು ಹೆಚ್ಚು ಮಾಡಿಕೊಳ್ಳಬಲ್ಲವು. ಹೀಗೆ ತಮ್ಮಿಂದ ತಾವೇ ಹೆಚ್ಚಾಗುವ ವೈರಸ್ ಗಳನ್ನು 'ವರ್ಮ್' ಎನ್ನುತ್ತಾರೆ. ಹೀಗೆ ಹೆಚ್ಚಾದ ವೈರಸ್ ಗಳು ಅಥವಾ ವರ್ಮ್ ಗಳು ಯಾವ ರೀತಿ ಬೇಕಾದರೂ ವರ್ತಿಸಬಲ್ಲವು. ವರ್ಮ್ ಗಳು ಕೇವಲ ನೆಟ್ ವರ್ಕ್ ಗಳ ಮೂಲಕ ಮಾತ್ರ ಹರಡಬಲ್ಲವು. ಆದರೆ, ವೈರಸ್ ಗಳು ನಾವು ಕಂಪ್ಯೂಟರ್ ಗಳಿಗೆ ಇನ್ಸರ್ಟ್ ಮಾಡುವ ಡಿ. ವಿ.ಡಿ, ಪೆನ್ ಡ್ರೈವ್, ಇಮೇಲ್ ಮೂಲಕ ಕಳಿಸುವ ಅಟ್ಯಾಚ್ ಮೆಂಟ್, ಯಾವುದೋ ಲಿಂಕ್ ಕ್ಲಿಕ್ ಮಾಡಿದಾಗ ಕೂಡಾ ಕಂಪ್ಯೂಟರ್ ಅನ್ನು ಸೇರಬಲ್ಲವು. ಇವು ಕೇವಲ ನಮ್ಮ ಡೇಟಾವನ್ನು ಹಾಳು ಮಾಡುವುದು ಮಾತ್ರವಲ್ಲ.. ನಮ್ಮ ಕಂಪ್ಯೂಟರ್ ನಿಂದ ನಮ್ಮ ಡೇಟಾವನ್ನು ಕದಿಯಬಲ್ಲವು. ಫೈಲ್ ಗಳನ್ನು ತೆರೆಯದಂತೆ ಮಾಡಬಲ್ಲವು, ಬೇರೆ ವೈರಸ್ ಅಥವಾ ಮಾಲ್ವೇರ್ ಗಳನ್ನು ತಾವೇ ಡೌನ್ಲೋಡ್ ಮಾಡಿ ಸೇರಿಸಬಲ್ಲವು.
ನಮ್ಮ ಆರೋಗ್ಯಯುತ ಜೀವನದಲ್ಲಿ ವೈರಸ್ ಗಳಿಂದ ರೋಗ ಬಂದಾಗ ದೇಹಕ್ಕೆ ಹೇಗೆ ಪರಿಣಾಮವಾಗುತ್ತದೆಯೋ ಇಲ್ಲಿಯೂ ಹಾಗೆಯೇ.. ನಂತರ ಡಾಕ್ಟರ್ ಬಳಿ ಹೋಗಿ ಮೆಡಿಸಿನ್ ತೆಗೆದುಕೊಂಡು ಅದರಿಂದ ಬಿಡುಗಡೆ ಪಡೆಯುತ್ತೇವೆಲ್ಲಾ.. ಇಲ್ಲಿಯೂ ಕಂಪ್ಯೂಟರ್ ವೈರಸ್ ನಿಂದ ಬಿಡುಗಡೆ ಪಡೆಯಲು ಮದ್ದಾಗಿ ಮತ್ತೊಂದು ಸಾಫ್ಟ್ವೇರ್ ಪ್ರೋಗ್ರಾಮ್ ಬೇಕಾಗುತ್ತದೆ. ಅದೇ ಆಂಟಿ ವೈರಸ್. ಆಂಟಿ ವೈರಸ್ ಕೂಡಾ ಒಂದು 'ವರ್ಮ್'.
"ವರ್ಮ್" ಎಂಬ ಪದವನ್ನು ಮೊದಲು ಬಳಸಿರುವುದು ಜಾನ್ ಬ್ರನ್ನರ್ ಅವರ 1975 ರ ಕಾದಂಬರಿ ದಿ ಶಾಕ್‌ವೇವ್ ರೈಡರ್‌ನಲ್ಲಿ. ಈ ಕಾದಂಬರಿಯಲ್ಲಿ, ನಿಚ್ಲಾಸ್ ಹ್ಯಾಫ್ಲಿಂಗರ್ ಸಾಮೂಹಿಕ ಅನುಸರಣೆಯನ್ನು ಪ್ರೇರೇಪಿಸುವ ರಾಷ್ಟ್ರೀಯ ಎಲೆಕ್ಟ್ರಾನಿಕ್ ಮಾಹಿತಿ ವೆಬ್ ಅನ್ನು ನಡೆಸುವ ಶಕ್ತಿಶಾಲಿಗಳ ವಿರುದ್ಧ ಸೇಡು ತೀರಿಸಿಕೊಳ್ಳುವ ಕ್ರಿಯೆಯಲ್ಲಿ ವಿನ್ಯಾಸಗೊಳಿಸುವುದೇ ಡೇಟಾ-ಸಂಗ್ರಹಿಸುವ ವರ್ಮ್ ಅನ್ನು. ಆದರೆ, ಮೊದಲ ಕಂಪ್ಯೂಟರ್ ವರ್ಮ್ ಬಂದದ್ದು 1971 ರಲ್ಲಿ. ಅದೇ ಜಗತ್ತಿನ ಮೊಟ್ಟ ಮೊದಲ ವೈರಸ್. ಅದರ ಹೆಸರು 'ಕ್ರೀಪರ್'. ಬಾಬ್ ಥಾಮಸ್ ಇದರ ಸೃಷ್ಟಿಕರ್ತ. ಸೆಕ್ಯೂರಿಟಿ ಕಾರಣಗಳಿಗಾಗಿ ಒಂದು ಕಂಪ್ಯೂಟರ್ ಪ್ರೋಗ್ರಾಮ್ ತನ್ನಿಂದ ತಾನೇ ಕೆಲವು ಬಾರಿ ಮರು ಸೃಷ್ಟಿ ಮಾಡಿಕೊಳ್ಳಬಲ್ಲದಾ ಎಂಬ ಕಾರಣಕ್ಕೆ ಪರೀಕ್ಷಿಸಲು ಉಪಯೋಗಿಸಿದ ಪ್ರೋಗ್ರಾಮ್ ವೈರಸ್ ನ ವರ್ಮ್ ಆಗಿ ರೂಪುಗೊಂಡಿತು. ಎರಡನೇ ಕಂಪ್ಯೂಟರ್ ವರ್ಮ್ ಅನ್ನು ಆಂಟಿ ವೈರಸ್ ಸಾಫ್ಟ್‌ವೇರ್ ಆಗಿ ರೂಪಿಸಲಾಗಿದೆ. ಇದನ್ನು ರೀಪರ್ ಎಂದು ಹೆಸರಿಸಲಾಗಿದೆ. ಕ್ರೀಪರ್ ಅನ್ನು ತೆಗೆದು ಹಾಕಲು ಆರ್ಫಾನೆಟ್ ರೀಪರ್ ಅನ್ನು ಸೃಷ್ಟಿಸಿತು.
1988 ರ ನವೆಂಬರ್ 2 ರಲ್ಲಿ ಕಾರ್ನೆಲ್ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ಪದವೀಧರ ವಿದ್ಯಾರ್ಥಿ ರಾಬರ್ಟ್ ಟಪ್ಪನ್ ಮೋರಿಸ್ ಅವರು ಮೋರಿಸ್ ವರ್ಮ್ ಎಂದು ಕರೆಯಲ್ಪಡುವ ವೈರಸ್ ಅನ್ನು ಬಿಡುಗಡೆ ಮಾಡಿದರು. ಅದು ಆ ಸಮಯದಲ್ಲಿ ಇಂಟರ್ನೆಟ್‌ನಲ್ಲಿ ಇದ್ದ ಅನೇಕ ಕಂಪ್ಯೂಟರ್‌ಗಳನ್ನು ಸೇರಿ ಅವುಗಳ ಕಾರ್ಯಗಳನ್ನು ಅಡ್ಡಿಪಡಿಸಿತು. ಇದಾದ ನಂತರ ಸ್ವತಃ ಮೋರಿಸ್ US ಕೋರ್ಟ್ ಆಫ್ ಅಪೀಲ್ಸ್ ಗೆ ಈ ಕುರಿತು ತಿಳಿಸಿದಾಗ.. ಆ ವರ್ಮ್ ಅನ್ನು ತೆಗೆದುಹಾಕುವ ವೆಚ್ಚವನ್ನು ಸುಮಾರು $53,000 ಎಂದು ಅಂದಾಜಿಸಲಾಯಿತು. ಮೋರಿಸ್ ಸ್ವತಃ 1986 ರ ಕಂಪ್ಯೂಟರ್ ವಂಚನೆ ಮತ್ತು ದುರುಪಯೋಗ ಕಾಯಿದೆಯಡಿಯಲ್ಲಿ ವಿಚಾರಣೆಗೆ ಒಳಗಾದ ಮತ್ತು ಶಿಕ್ಷೆಗೊಳಗಾದ ಮೊದಲ ವ್ಯಕ್ತಿಯಾದರು.
ಮುಖ್ಯವಾಗಿ 9 ರೀತಿಯ ವೈರಸ್ ಗಳನ್ನು ವಿಂಗಡಿಸಲಾಗಿದೆ.
ಬೂಟ್ ಸೆಕ್ಟರ್ ವೈರಸ್ : ಸಾಮಾನ್ಯವಾಗಿ ಈ ರೀತೀಯ ವೈರಸ್ ಗಳು ಯು.ಎಸ್.ಬಿ ಡಿವೈಸ್ ಅಂದರೆ ಪೆನ್ ಡ್ರೈವ್ ಗಳನ್ನು ಹಾಕಿದಾಗ ಬರುವಂತಹವು. ಆದರೆ, ಇವು ಕಂಪ್ಯೂಟರ್ ರೀಬೂಟ್ ಆಗುತ್ತದಲ್ಲಾ.. ಇನ್ನೂ ಸಿಂಪಲ್ ಆಗಿ ಹೇಳಬೇಕೆಂದರೆ ಕಂಪ್ಯೂಟರ್ ಮತ್ತೆ ಸ್ಟಾರ್ಟ್ ಆಗುತ್ತದಲ್ಲಾ.. ಆಗ ಆಕ್ಟೀವ್ ಆಗುತ್ತವೆ
ವೆಬ್ ಸ್ಕ್ರಿಪ್ಟಿಂಗ್ ವೈರಸ್ : ಈ ವೈರಸ್ ಗಳು ಬರುವುದು ವೆಬ್ ಬ್ರೌಸರ್ ಗಳಿಂದ. ಈಗಿನ ಹೆಚ್ಚಿನ ವೆಬ್ ಬ್ರೌಸರ್ ಗಳು ಇವುಗಳಿಗೆ ತಡೆ ಉಂಟು ಮಾಡುತ್ತವೆ. ಆದರೆ, ಹಿಂದಿನ ವೆಬ್ ಬ್ರೌಸರ್ ಗಳು ಇದಕ್ಕೆ ಅಡ್ಡಿಯೇ..
ಬ್ರೌಸರ್ ಹೈಜಾಕರ್ : ಯಾವುದೋ ಒಂದು ವೆಬ್ಸೈಟ್ ಲಿಂಕ್ ಕ್ಲಿಕ್ ಮಾಡಿದಾಗ ಅದು ಮತ್ತೊಂದು ಸೈಟ್ ಗೆ ರಿಡೈರೆಕ್ಟ್ ಆಗಿ ಅಲ್ಲಿಂದ ನಮಗೆ ಹಣದ ಬೇಡಿಕೆ ಬರುವುದು ಇಲ್ಲವೇ ನಮ್ಮ ಡೇಟಾ ಕಳ್ಳತನ ಆಗುವುದೂ ಇದೆ.
ಈಗ ವಾಟ್ಸಾಪ್ ಮೂಲಕ ಕೆಲವು ಲಿಂಕ್ ಬರುತ್ತವೆ. ದೀಪಾವಳಿಗೆ, ಕ್ರಿಸ್ ಮಸ್ ಗೆ , ಹೊಸವರ್ಷಕ್ಕೆ ಎನ್ನುತ್ತಾ ಹಣದ ಆಮಿಷವನ್ನೋ ಅಥವಾ ಐಫೋನ್ ಆಮಿಷವನ್ನೋ ಒಡ್ಡಿ ಇಂತಿಷ್ಟು ಜನರಿಗೆ ಅಥವಾ ಗ್ರೂಪ್ ಗಳಿಗೆ ಫಾರ್ವರ್ಡ್ ಮಾಡಿ. ನಂತರ ನಿಮ್ಮ ಫೋನ್ ನಂಬರ್, ಅಡ್ರೆಸ್ ಪಡೆಯುವ ಮೂಲಕ ನಿಮಗೇ ಗೊತ್ತಿಲ್ಲದ ಹಾಗೆ ನಿಮ್ಮ ಡೇಟಾವನ್ನು ಕದಿಯಲಾಗಿರುತ್ತದೆ.
ರೆಸಿಡೆಂಟ್ ವೈರಸ್ : ಈ ವೈರಸ್ ಗಳು ಕಂಪ್ಯೂಟರ್ ನ ಮೆಮೊರಿ ಜಾಗವನ್ನು ಆಕ್ರಮಿಸಿ ಒಂದಿಷ್ಟು ಕಾಲದವರೆಗೆ ಸುಮ್ಮನೆ , ತಣ್ಣಗೆ ಕುಳಿತು ಬಿಡುತ್ತವೆ. ಆ ಸಮಯದಲ್ಲಿ ನಮಗೆ ಆ ಮೆಮೋರಿಯನ್ನು ಉಪಯೋಗಿಸಿಕೊಳ್ಳಲು ಅಸಾಧ್ಯ.
ಡೈರೆಕ್ಟ್ ಆಕ್ಷನ್ ವೈರಸ್ : ನೇರವಾಗಿ ದಾಳಿ ಮಾಡಿ ಕಂಪ್ಯೂಟರ್ ವ್ಯವಸ್ಥೆಯನ್ನು ಅಸ್ತವ್ಯಸ್ತ ಮಾಡುವ ವೈರಸ್ ಗಳು ಇವು. ಹೆಚ್ಚಿನ ಅಟ್ಯಾಕ್ ನಡೆಯುವುದು ಈ ಕಂಪ್ಯೂಟರ್ ವೈರಸ್ ಗಳಿಂದಲೇ..
ಪಾಲಿಮಾರ್ಫಿಕ್ ವೈರಸ್ : ಈ ವೈರಸ್ ಗಳು ತಾವು ಬಂದ ಹೆಜ್ಜೆ ಜಾಡನ್ನು ಅಳಿಸಿ ಹಾಕುತ್ತವೆ. ಹಾಗಾಗಿ, ಈ ವೈರಸ್ ಗಳನ್ನು ಕಂಡು ಹಿಡಿಯುವುದು ಆಂಟಿ ವೈರಸ್ ಗಳಿಗೂ ಸುಲಭವಿಲ್ಲ.
ಫೈಲ್ ಇನ್ಫೆಕ್ಟರ್ ವೈರಸ್ : ಆಪರೇಟಿಂಗ್ ಸಿಸ್ಟಮ್ ನ ಮುಖ್ಯವಾದ ಫೈಲ್ ಗಳು ಅಥವಾ ಮುಖ್ಯವಾದ ಫೈಲ್ ಗಳನ್ನು ಬದಲಾಯಿಸಬಲ್ಲ ವೈರಸ್ ಗಳು ಇವು.
ಮಲ್ಟಿಪರ್ಟೈಟ್ ವೈರಸ್ : ನೆಟ್ವರ್ಕ್ ಮೂಲಕ ಹರಡುವ ಹಾಗೂ ತಮ್ಮಿಂದ ತಾವೇ ಹೆಚ್ಚಾಗುವ ವೈರಸ್ ಗಳು ಇವು. ವರ್ಮ್ ಗಳು ಇವುಗಳಿಗೆ ಉತ್ತಮ ಉದಾಹರಣೆ.
ಮ್ಯಾಕ್ರೋ ವೈರಸ್ : ಮೈಕ್ರೋಸಾಫ್ಟ್ ಆಫಿಸ್ ಮಾತ್ರ ಈ ಮ್ಯಾಕ್ರೊಗಳನ್ನು ರನ್ ಮಾಡಬಲ್ಲದು.
ನಮ್ಮ ಸಿಸ್ಟಮ್ ಗೆ ಕಂಪ್ಯೂಟರ್ ವೈರಸ್ ಅಟ್ಯಾಕ್ ಆಗಿದೆ ಎಂದು ತಿಳಿಯಲು ಕೆಲವು ಲಕ್ಷಣಗಳಿವೆ.
ಕೆಲವು ಜಾಹೀರಾತು ಅಥವಾ ಯಾವುದೋ ದುರುದ್ದೇಶದ ವೆಬ್ಸೈಟ್ ಗಳಿಗೆ ಲಿಂಕ್ ಆಗುವ ಲಿಂಕ್ಗಳು ಪಾಪ್ ಅಪ್ ಆಗುತ್ತಿರಬಹುದು..
ನಿಮ್ಮ ವೆಬ್ ಬ್ರೌಸರ್ ಹೋಮ್ ಪೇಜ್ ಬದಲಾವಣೆಗಳು ನೀವಾಗಿಯೇ ಬದಲಾಯಿಸದಿದ್ದರೂ ಬದಲಾಗಿದೆ ಎಂದಾದಲ್ಲಿ..
ನಿಮ್ಮ ಪರಿಚಿತರಿಗೆ ಅಥವಾ ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಇದ್ದವರಿಗೆ ನೀವು ಕಳುಹಿಸದಿದ್ದರೂ ತಾನಾಗಿಯೇ ನಿಮ್ಮ ಖಾತೆಯಿಂದ ಮೇಲ್ ಅಥವಾ ಮೆಸೇಜ್ ಹೋಗಿದೆ ಎಂದಾದಲ್ಲಿ..
ನಿಮ್ಮ ಕಂಪ್ಯೂಟರ್ ನಲ್ಲಿ ಕೆಲವೇ ಪ್ರೋಗ್ರಾಮ್ ಗಳನ್ನು ಬಳಸಲಾಗುತ್ತಿದ್ದರೂ ಮೆಮೊರಿ ಇಲ್ಲ ಎಂದು ಬರುತ್ತಿದ್ದಲ್ಲಿ.. ಕಂಪ್ಯೂಟರ್ ನಲ್ಲಿ ಏನೂ ಮಾಡಲಾಗದಂತೆ ಬ್ಲ್ಯೂ ಸ್ಕ್ರೀನ್ ಬಂದಲ್ಲಿ.. ಕಂಪ್ಯೂಟರ್ ಕ್ರ್ಯಾಶ್ ಆದಲ್ಲಿ..
ಈಗಷ್ಟೇ ಸರ್ವೀಸ್ ಮಾಡಿಸಿದ್ದರೂ, ಕೆಲವೇ ಪ್ರೋಗ್ರಾಮ್ ಗಳು ಆಕ್ಟೀವ್ ಆಗಿದ್ದರೂ ಕಂಪ್ಯೂಟರ್ ಬಹಳ ನಿಧಾನವಾಗಿ ವರ್ಕ್ ಆಗುತ್ತಿದ್ದಲ್ಲಿ..
ನೀವು ಓಪನ್ ಮಾಡದಿದ್ದರೂ, ರನ್ ಮಾಡದಿದ್ದರೂ ಯಾವ್ಯಾವುದೋ ಪ್ರೋಗ್ರಾಮ್ ಗಳು ತಮ್ಮಷ್ಟಕ್ಕೆ ರನ್ ಆಗುತ್ತಿದ್ದಲ್ಲಿ..
ಪಾಸ್ವರ್ಡ್ ಗಳನ್ನು ನೀವಾಗಿಯೇ ಬದಲಾಯಿಸದಿದ್ದರೂ ಅವುಗಳು ಬದಲಾಗಿದ್ದಲ್ಲಿ..
ನಿಮ್ಮ ಕಂಪ್ಯೂಟರ್ ಗೆ ವೈರಸ್ ಅಟ್ಯಾಕ್ ಆಗಿರಬಹುದು. ಇದು ಮೊಬೈಲ್ ಗೆ ಅನ್ವಯವೇ.. ಅದಕ್ಕೆ ಹೆದರುವ ಅವಶ್ಯಕತೆ ಇಲ್ಲ. ಒಮ್ಮೆ ಸರ್ವೀಸ್ ಮಾಡಿಸಿ ಈ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಿ.
ನಿಮ್ಮ ಸಿಸ್ಟಮ್ ಗೆ ಆಂಟಿ ವೈರಸ್ ಅನ್ನು ಹಾಕಿಸಿಕೊಳ್ಳಿ. ಮತ್ತದನ್ನು ಅಪ್ಡೇಟ್ ಮಾಡುತ್ತಿರಿ. ಹೊಸ ಹೊಸ ವೈರಸ್ ಗಳು ಸೃಷ್ಟಿಯಾದಂತೆಲ್ಲಾ ಹೊಸ ಹೊಸ ಆಂಟಿ ವೈರಸ್ ಗಳ ಪ್ರೋಗ್ರಾಮ್ ಮಾಡಿ ಅಪ್ಡೇಟ್ ಮಾಡಲಾಗುತ್ತದೆ.
ಪೈರೇಟೆಡ್ ಸಾಫ್ಟ್ವೇರ್ ಅಥವಾ ಪೈರೇಟೆಡ್ ವೆಬ್ಸೈಟ್ ಗಳನ್ನು ಬಳಸಬೇಡಿ.
ನಿಮ್ಮ ಸಿಸ್ಟಮ್ ನ ಆಪರೇಟಿಂಗ್ ಸಿಸ್ಟಮ್ ಅಂದರೆ ಓ.ಎಸ್ ಅನ್ನು ಅಪ್ಡೇಟ್ ಮಾಡುತ್ತಿರಿ.
ಆದಷ್ಟು ಪ್ರಶ್ನೆ ಕೇಳುವ, ಪ್ರಶ್ನಿಸುವ ವೆಬ್ಸೈಟ್ ಬಳಕೆಯನ್ನು ಕಡಿಮೆ ಮಾಡಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಾಗೂ ಹಣದ ವಹಿವಾಟಿನ, ಪಾಸ್ವರ್ಡ್ ಮಾಹಿತಿಯನ್ನು ಅನಾಮಿಕ ಸೈಟ್ ಗಳಲ್ಲಿ ದಾಖಲಿಸಬೇಡಿ.
ಗೊತ್ತಿಲ್ಲದ ಈ- ಮೇಲ್ ಮೂಲಕ ಬರುವ ಎಕ್ಸಿಕ್ಯೂಟ್ ಆಗುವ ಲಿಂಕ್ ಗಳನ್ನು ಕ್ಲಿಕ್ ಮಾಡದಿರಿ.
ಇದಿಷ್ಟೂ ವೈಯಕ್ತಿಕವಾಗಿ ಸಿಸ್ಟಮ್ ಗೆ ಆಗುವ ವೈರಸ್ ಅಟ್ಯಾಕ್ ಅನ್ನು ತಡೆಯಲು.
ವೈಯಕ್ತಿಕ ಮಟ್ಟದ ಹಾನಿಯನ್ನು ಹೇಗಾದರೂ ಸರಿಪಡಿಸಿಕೊಳ್ಳಬಹುದು. ಅಥವಾ ಅವುಗಳಿಂದ ಉಂಟಾಗುವ ಹಾನಿ ಕಡಿಮೆ ಮಟ್ಟದ್ದು. ದೇಶ - ದೇಶಗಳ ನಡುವೆ ಈ ಹಾನಿ ಉಂಟಾದಲ್ಲಿ ಆಗುವ ನಷ್ಟ ದೊಡ್ಡದೇ.. ಇತ್ತೀಚೆಗೆ ನಡೆದ ರಷ್ಯಾ - ಉಕ್ರೇನ್ ಯುದ್ಧದಲ್ಲಿ ಕೂಡಾ ಡಿಜಿಟಲ್ ವಾರ್ ನಡೆದಿದೆ. ಅದರ ಕುರಿತು ವಿಸ್ಕೃತ ಮಾಹಿತಿ ಮುಂದಿನ ಟೆಕ್ - ಟಾಕ್ ನಲ್ಲಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ