ಇವತ್ತು 5-ಜಿ ಯುಗಕ್ಕೆ ಬಂದು ನಿಂತಿದ್ದೀವಿ. ನಾವು ಬದಲಾಗುತ್ತಿರುವ, ಬೆಳೆಯುತ್ತಿರುವ ಹಾಗೆಯೇ ಇಂಟರ್ನೆಟ್ ಕೂಡಾ ಬೆಳೆಯುತ್ತಿದೆ. 2030 ರ ಹೊತ್ತಿಗೆ ನಾವು 6-ಜಿ ಟೆಕ್ನಾಲಜಿ ಬಳಸುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಈಗ ಸುಮಾರು ನಲವತ್ತು ವರ್ಷಗಳಲ್ಲಿ ನಾವು 1-ಜಿ ಯಿಂದ 5-ಜಿ ವರೆಗೂ ಪ್ರಯಾಣಿಸಿದ್ದೇವೆ. ಆದರೆ, ಸಾಮಾನ್ಯವಾಗಿ ನಾವು ಮಾತನಾಡುವುದು 2-ಜಿ ಯಿಂದಲೇ ಹೊರತು 1-ಜಿ ಯಿಂದಲ್ಲ. ಅಡಿಪಾಯವೇ ಇಲ್ಲದೇ ಮನೆ ನಿರ್ಮಾಣ ಸಾಧ್ಯವೇನು ? 1-ಜಿ ಯಿಂದ 5-ಜಿ ವರೆಗೂ ಎನ್ನುತ್ತೇವಲ್ಲಾ ಅದರಲ್ಲಿ ಜಿ ಎಂದರೆ ಮತ್ತೇನಲ್ಲ 'ಜನರೇಶನ್' ಎಂದರ್ಥ. 90ಸ್ ಕಿಡ್ಸ್ , 2000 ಕಿಡ್ಸ್ ಎಂದೆಲ್ಲಾ ನಮ್ಮನ್ನು ನಾವು ಒಂದೊಂದು ಜನರೇಶನ್ ಜೊತೆಗೆ ಗುರುತಿಸಿಕೊಳ್ಳುತ್ತೇವಲ್ಲಾ ಇಲ್ಲಿಯೂ ಹಾಗೆಯೇ.. ನಮ್ಮ ಅಭಿಪ್ರಾಯ, ಉಡುಗೆ-ತೊಡುಗೆ, ಮಾತು, ಆಲೋಚನೆ ಎಲ್ಲದರಲ್ಲಿಯೂ ನಾವು ಒಂದು ಜನರೇಶನ್ ನಿಂದ ಮತ್ತೊಂದು ಜನರೇಷನ್ ಗೆ ವಿಭಿನ್ನವಾಗಿ ಕಾಣುತ್ತೇವೆ. ಇದೇ ಜನರೇಶನ್ ಗ್ಯಾಪ್ ಇಲ್ಲಿಯ 1-ಜಿ ಯಿಂದ 5-ಜಿ ವರೆಗೂ ಇದೆ. ಈ ಜನರೇಶನ್ ಗಳಿಗೆ ಕಾರಣವಾದ ಇಂಟರ್ನೆಟ್ ಕುರಿತು ಹಾಗೆಯೇ ತಿಳಿದು ಬರೋಣ ಬನ್ನಿ.
ಸಾಮಾನ್ಯವಾಗಿ ನಾವು 'ನೆಟ್' ಎಂದು ಕರೆಯುವ ಇಂಟರ್ನೆಟ್ ಮೊದಲು ಬಳಕೆಗೆ ಬಂದದ್ದು 1969 ರಲ್ಲಿ. ಯು.ಎಸ್ ಸರ್ಕಾರದ ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿ ಇದಕ್ಕೆ ಈ ಹೆಸರು ನೀಡಿದ್ದು. ಮೊದಲಿದ್ದ ಹೆಸರು ಇದೇ ಏಜೆನ್ಸಿಯ ಹೆಸರಿನ ಸಂಕ್ಷಿಪ್ತ ರೂಪ ಆರ್ಪಾನೆಟ್ ಎಂಬುದಾಗಿ. ಯೂನಿವರ್ಸಿಟಿಯ ಒಳಗಿನ ಕಂಪ್ಯೂಟರ್ ಗಳ ನಡುವೆ ಮಾಹಿತಿ ರವಾನೆಗಾಗಿ ವೈರ್ ಲೆಸ್ ಮಾಧ್ಯಮದ ಮೂಲಕ ಸಂದೇಶ ಕಳುಹಿಸಲು ಕಂಡುಹಿಡಿದದ್ದೇ ಈ ಇಂಟರ್ನೆಟ್ ಅನ್ನು. ತದನಂತರ ನ್ಯಾಷನಲ್ ಸೈನ್ಸ್ ಫೌಂಡೇಶನ್ ಎಲ್ಲೆಡೆಯೂ ಬಳಸುವಂತೆ ಅನುಕೂಲ ಮಾಡಿಕೊಟ್ಟಿತು. ಇಂಟರ್ನೆಟ್ ಎಂದರೆ ಮತ್ತೇನಲ್ಲ.. ಎರಡು ಸಿಸ್ಟಮ್ (ಕಂಪ್ಯೂಟರ್ ಅಥವಾ ಮೊಬೈಲ್) ಗಳ ನಡುವೆ ಬಳಸಲಾಗುವ ನೆಟ್ವರ್ಕ್ ನ ಜಾಗತಿಕ ವ್ಯವಸ್ಥೆ.
ಹಾಗಾದರೆ , ಮೊದಲು ವೈರ್ ಲೆಸ್ ಕನೆಕ್ಷನ್ ಬಂದದ್ದು ಯಾವಾಗ ಗೊತ್ತೇ ? 1895 ರಲ್ಲಿ. ಮಾರ್ಕೋನಿ ಎನ್ನುವ ಇಟಾಲಿಯನ್ ಸಂಶೋಧಕ ಮೊದಲ ಬಾರಿಗೆ ರೇಡಿಯೋ ವೇವ್ ಗಳಿಂದ ಮೋರ್ಸ್ ಕೋಡ್ ಸಿಗ್ನಲ್ ಗಳನ್ನು ಬಳಸಿ 3.2 ಕಿ.ಮೀ ದೂರಕ್ಕೆ ವೈರ್ ಲೆಸ್ ಸಿಗ್ನಲ್ ಗಳನ್ನು ಕಳುಹಿಸಿದ್ದನು. ಇದೇ ರೇಡಿಯೋದ ಆವಿಷ್ಕಾರದ ಮೂಲ ಹಾಗೂ ಮೊದಲ ವೈರ್ ಲೆಸ್ ಬಳಕೆ. ಆದರೆ, ಇದರಲ್ಲಿ ಧ್ವನಿಯ ಮೂಲಕ ಮಾತ್ರ ಸಂದೇಶವನ್ನು ಕಳುಹಿಡಲಾಗುತ್ತಿತ್ತು. ಅಷ್ಟೇ ಅಲ್ಲದೆ, ಇದು ಒಬ್ಬರು ಸಂದೇಶವನ್ನು ಕಳುಹಿಸಿದಾಗ ಮತ್ತೊಬ್ಬರು ಅದನ್ನು ಕೇಳಿಸಿಕೊಳ್ಳಬಹುದಾಗಿತ್ತು ಅಷ್ಟೇ.. ಮತ್ತೊಂದು ಕಡೆಯಿಂದ ಸಂದೇಶ ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಇದು ಒನ್ - ವೇ ಟ್ರಾನ್ಸ್ ಮಿಷನ್.
ಇದರ ಮುಂದುವರಿದ ಆವಿಷ್ಕಾರದಲ್ಲಿ ಬಂದದ್ದು ಒಬ್ಬರು ಒಂದು ಕಡೆಯಿಂದ ಸಂದೇಶ ಕಳುಹಿಸಿದ ನಂತರ ಅದನ್ನು ಮತ್ತೊಬ್ಬರು ಸಂಪೂರ್ಣವಾಗಿ ಕೇಳಿಸಿಕೊಂಡ ನಂತರ ಅವರು ಆ ಕಡೆಯಿಂದ ಸಂದೇಶ ಕಳುಹಿಸಬಹುದಾಗಿತ್ತು. ಎರಡೂ ಕಡೆಯಿಂದಲೂ ಸಂದೇಶಗಳನ್ನು ಕಳುಹಿಸಬಹುದಾಗಿದ್ದರೂ ಒಬ್ಬರು ಸಂದೇಶ ಕಳುಹಿಸುತ್ತಿರುವಾಗ ಮತ್ತೊಬ್ಬರು ಸಂದೇಶ ನೀಡುವಂತಿರಲಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ವಾಕಿ-ಟಾಕಿ.
ಇದಾದ ನಂತರ 1985 ರಿಂದ ವ್ಯಾಪಕವಾಗಿ ಜಾರಿಗೆ ಬಂದದ್ದು ಇಂಟರ್ನೆಟ್. ಈಗ ಎರಡೂ ಕಡೆಯಿಂದಲೂ ಸಂದೇಶಗಳನ್ನು ಬದಲಾಯಿಸಿಕೊಳ್ಳಬಹುದಾಗಿತ್ತು ಅದೂ ಮತ್ತೊಬ್ಬರಿಗೆ ಕಾಯದಂತೆ. ಈ ಸಿಸ್ಟಮ್ ಹೇಗೆ ವರ್ಕ್ ಆಗುತ್ತಿತ್ತು ಎಂದರೆ..
ಉದಾಹರಣೆಗೆ ಒಂದು ಅಪಾರ್ಟ್ಮೆಂಟ್ ನ ಒಂದು ಮನೆಯಿಂದ ಅದೇ ಅಪಾರ್ಟ್ಮೆಂಟ್ ಅಥವಾ ಬೇರೆ ಅಪಾರ್ಟ್ಮೆಂಟ್ ನ ಮತ್ತೊಂದು ಮನೆಗೆ ಏನನ್ನೋ ಕಳುಹಿಸಬೇಕು. ಆದರೆ, ಏನು ಕಳುಹಿಸುತ್ತಿದ್ದೇವೆ ಎಂದು ತೆಗೆದುಕೊಂಡು ಹೋಗುತ್ತಿರುವವರಿಗೆ ಗೊತ್ತಾಗಬಾರದು. ಈ ಮನೆಯವರು ಕೊಟ್ಟದನ್ನು ಆ ಮನೆಗೆ ಒಯ್ದು ತಲುಪಿಸುವುದಷ್ಟೇ ಕೆಲಸ. ಹಾಗಾಗಿ, ಅದನ್ನು ಕೊಡುವ ಮನೆಯವರು ಅದನ್ನು ಪ್ಯಾಕೆಟ್ ಮಾಡಿ ಕೊಡುತ್ತಾರೆ. ಆ ಪ್ಯಾಕೆಟ್ ಗೆ ಒಂದು ನಂಬರ್ ಲಾಕ್ ಇರುತ್ತದೆ. ಅದು ಆ ಮತ್ತೊಂದು ಮನೆಯವರಿಗೂ ಗೊತ್ತಿರುವ ನಂಬರ್ ಲಾಕ್. ಏನು ಕೊಟ್ಟಿದ್ದಾರೆ ಎಂಬುದನ್ನು ಅವರ ಮನೆಯಲ್ಲಿರುವವರಿ ಮಾತ್ರ ನೋಡಬಲ್ಲರು ಅಷ್ಟೇ.
ಈಗ ಇಂಟರ್ನೆಟ್ ಹೇಗೆ ವರ್ಕ್ ಆಗುತ್ತದೆ ಎಂಬುದನ್ನು ನೋಡುವುದಾದರೆ, ಅಪಾರ್ಟ್ಮೆಂಟ್ ನ ಒಂದು ಮನೆಯನ್ನು ಒಂದು ಕಂಪ್ಯೂಟರ್ ಎಂದುಕೊಳ್ಳೋಣ. ಅಪಾರ್ಟ್ಮೆಂಟ್ ನ ಮನೆಗೆ ಒಂದು ನಂಬರ್ ಇರುತ್ತದಲ್ಲಾ ಹಾಗೆಯೇ ನೆಟ್ವರ್ಕ್ ನಲ್ಲಿ ಒಂದು ಸಿಸ್ಟಮ್ ಗೆ ಒಂದು ವಿಭಿನ್ನ ನಂಬರ್ ನೀಡಿರುತ್ತಾರೆ. ಮನುಷ್ಯನ ಬೆರಳ ಗುರುತು ಹೇಗೆ ಒಬ್ಬರಿಗಿಂತ ಒಬ್ಬರದ್ದು ವಿಭಿನ್ನವೋ ಈ ನಂಬರ್ ಗಳು ಸಹಾ ಹಾಗೆಯೇ.. ಒಂದು ನಂಬರ್ ಮತ್ತೊಮ್ಮೆ ರಿಪೀಟ್ ಆಗುವುದಿಲ್ಲ. ಈ ಯುನಿಕ್ ನಂಬರ್ ಗಳೇ ಆ ಸಿಸ್ಟಮ್ ನ ಐ.ಪಿ ಅಡ್ರೆಸ್. ಕಳುಹಿಸಬೇಕಾದನ್ನು ಒಂದು ಮನೆಯಿಂದ ಪ್ಯಾಕ್ ಮಾಡಿ ಮತ್ತೊಂದು ಮನೆಗೆ ಕಳುಹಿಸುವ ಹಾಗೆ ಇಲ್ಲಿ ಸಂದೇಶಗಳನ್ನು ಪ್ಯಾಕೆಟ್ ಮೂಲಕ ಕಳುಹಿಸಲಾಗುತ್ತದೆ. ಪ್ರತಿ ಪ್ಯಾಕೆಟ್ ಗೂ ಸೀಕ್ರೆಟ್ ಕೋಡ್ ಇರುವಂತೆ ಪೋರ್ಟ್ ನಂಬರ್ ಇರುತ್ತದೆ. ಹೀಗೆ ಇಂಟರ್ನೆಟ್ ಮೂಲಕ ಯಾರ ಸಹಾಯವೂ ಇಲ್ಲದೇ ವೈರ್ ಲೆಸ್ ಆಗಿ ಸಂದೇಶಗಳನ್ನು ಒಂದು ಸಿಸ್ಟಮ್ ನಿಂದ ಮತ್ತೊಂದು ಸಿಸ್ಟಮ್ ಗೆ ತಲುಪಿಸಬಹುದು.
ಇವತ್ತಿನ ಇಂಟರ್ನೆಟ್ ಕನೆಕ್ಷನ್ ವೈರ್ ಕನೆಕ್ಷನ್ ಮೂಲಕ ಅಂದರೆ ಕೇಬಲ್ ಗಳು ಅಥವಾ ಆಪ್ಟಿಕ್ ಕೇಬಲ್ ಗಳ ಮೂಲಕ ಇಲ್ಲವೇ ಸೆಲ್ ಫೋನ್ ಟವರ್ ಅಥವಾ ಸ್ಯಾಟಲೈಟ್ ಸಿಗ್ನಲ್ ಗಳ ಮೂಲಕ ವೈರ್ ಲೆಸ್ ಆಗಿಯೂ ಲಭ್ಯವಿದೆ. ಇವತ್ತು ಎಲ್ಲೆಲ್ಲಿ ನೋಡಿದರೂ ಇಂಟರ್ನೆಟ್ ಕನೆಕ್ಷನ್ ಇರುವ ಮೊಬೈಲ್ ಗಳು , ಕಾಲೇಜು, ಕಂಪೆನಿ , ಮೆಟ್ರೋ , ರೈಲುಗಳಲ್ಲಿ ವೈ-ಫೈ ಕನೆಕ್ಷನ್ ಗಳು. ಅದೂ ನೆಟ್ವರ್ಕ್ ವೇಗದ ಮೇಲೆ ಅಗ್ಗಿನಿಂದಾಗ್ಗೆ ಬದಲಾಗುವ ವೈ-ಫೈ ಗಳು. ಇಂದು ನೆಟ್ವರ್ಕ್ ವೇಗವಿಲ್ಲದಿದ್ದರೆ ಯಾವುದೂ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ. ಆದರೆ, ನಮ್ಮ ಡೇಟಾ ಪ್ಯಾಕ್ ಅಥವಾ ವೈ-ಫೈ ಪ್ರೊವೈಡರ್ ಗಳು ಅವರು ಹೇಳುವಷ್ಟೇ ವೇಗದ ನೆಟ್ವರ್ಕ್ ಸ್ಪೀಡ್ ಅನ್ನು ನಮಗೆ ನೀಡುತ್ತಿದ್ದಾರಾ ?
ಸ್ಪೀಡ್ ಎಂದರೆ ಮೀಟರ್, ಕಿಲೋಮೀಟರ್ ನೆನಪಾಗುತ್ತದೆ. ಉದಾಹರಣೆಗೆ ಬಸ್ಸಿನ ವೇಗ ಒಂದು ಗಂಟೆಗೆ 60 ಕಿಲೋ ಮೀಟರ್ ಇದ್ದರೆ ಅದನ್ನು 60 ಕಿಲೋ ಮೀಟರ್ ಪರ್ ಅವರ್ ಎನ್ನುತ್ತೇವೆಯೋ ಹಾಗೆ ಇಂಟರ್ನೆಟ್ ಸ್ಪೀಡ್ ಅನ್ನು ನಾವು ಎಂ.ಬಿ.ಪಿ.ಎಸ್ ಮೂಲಕ ಅಳೆಯುತ್ತೇವೆ. ಮೆಗಾ ಬೈಟ್ ಪರ್ ಸೆಕೆಂಡ್. ಒಂದು ಸೆಕೆಂಡ್ ಗೆ ಎಷ್ಟು ಮೆಗಾ ಬೈಟ್ ಡೇಟಾ ಸಿಗುತ್ತದೆ ಎಂದು.
ಇಂಟರ್ನೆಟ್ ಅನ್ನು ಒಂದು ರೋಡ್ ಎಂದು ಪರಿಗಣಿಸಿದರೆ ಡೇಟಾವನ್ನು ಅದರಲ್ಲಿ ಪ್ರಯಾಣಿಸುತ್ತಿರುವ ಕಾರ್ ಗಳು ಎಂದುಕೊಳ್ಳೋಣ. ಆ ಕಾರ್ ಅಂದರೆ ಆ ಡೇಟಾಗಳು ಎಷ್ಟು ವೇಗದಲ್ಲಿ ಚಲಿಸುತ್ತವೆಯೋ ಅದೇ ನೆಟ್ವರ್ಕ್ ಸ್ಪೀಡ್. ನೂರು ಕಾರ್ ಗಳು ಒಂದೇ ವೇಗದಲ್ಲಿ ಚಲಿಸುತ್ತಾ ಬರುತ್ತಿದ್ದರೆ ಡೇಟಾ ಸ್ಪೀಡ್ ಸರಿಯಾಗಿ ಹಾಗೂ ವೇಗವಾಗಿದೆ ಎಂದುಕೊಳ್ಳಬಹುದು.
ಈ ಸ್ಪೀಡ್ ನಲ್ಲಿ ಎರಡು ವಿಧಗಳಿವೆ. ಒಂದು ಅಪ್ಲೋಡ್ ಸ್ಪೀಡ್ ಮತ್ತೊಂದು ಡೌನ್ಲೋಡ್ ಸ್ಪೀಡ್. ನಮಗೆ ಕೊಡುವ ನೆಟ್ವರ್ಕ್ ಸ್ಪೀಡ್ ಅಳತೆ ಮಾಡುವುದು ಹಾಗೂ ಅದನ್ನು ಹೇಳುವುದು ಡೌನ್ಲೋಡ್ ಸ್ಪೀಡ್ ಆಧಾರದ ಮೇಲೆ ಮಾತ್ರವೇ, ಡೌನ್ಲೋಡ್ ಸ್ಪೀಡ್ ಗೆ ಹೋಲಿಸಿದರೆ ಅಪ್ಲೋಡ್ ಸ್ಪೀಡ್ ಯಾವತ್ತಿಗೂ ಕಡಿಮೆಯೇ. ಕಾರಣವೆಂದರೆ, ಹೆಚ್ಚಿನವರು ಇಂಟರ್ನೆಟ್ ಬಳಸುವುದು ಡೌನ್ಲೋಡ್ ಬಳಕೆಗೆ ಮಾತ್ರವೇ. ಹೆಚ್ಚೆಂದರೆ ಆನ್ಲೈನ್ ಮೀಟಿಂಗ್ ಮಾಡಲು, ಸೋಶಿಯಲ್ ಮೀಡಿಯಾಗೆ ಫೋಟೋ, ವಿಡಿಯೋ ಅಪ್ಲೋಡ್ ಮಾಡಲು, ಲೈವ್ ವಿಡಿಯೋ ಸ್ಟ್ರಿಮಿಂಗ್ ಮಾಡಲು. ಇಲ್ಲವೇ, ಲಾರ್ಜ್ ಫೈಲ್ ಗಳನ್ನು ಅಪ್ಲೋಡ್ ಮಾಡಲು.
ಉದಾಹರಣೆಗೆ 10 ಎಂ.ಬಿ.ಪಿ.ಎಸ್ ಡೌನ್ಲೋಡ್ ಸ್ಪೀಡ್ ಇದ್ದರೆ ಅಪ್ಲೋಡ್ ಸ್ಪೀಡ್ ಇರುವುದು 1 ಎಂ.ಬಿಂಪಿ.ಎಸ್ ಮಾತ್ರವೇ.. ಎರಡನ್ನೂ ಸೇರಿಸಿ ಆವರೇಜ್ ಸ್ಪೀಡ್ ಅನ್ನೇ ಆಗಲಿ ಅಥವಾ ಡೌನ್ಲೋಡ್ ಸ್ಪೀಡ್ ಎಂದು ನಮೂದಿಸುವುದನ್ನೇ ಆಗಲಿ ಅಥವಾ ಅದರ ಜೊತೆಗೆ ಅಪ್ಲೋಡ್ ಸ್ಪೀಡ್ ಅನ್ನು ನಮೂದಿಸುವುದನ್ನು ಯಾರೂ ಮಾಡುವುದಿಲ್ಲ. ಇಲ್ಲಿ ಒಂದರ್ಥದಲ್ಲಿ ಎಲ್ಲರೂ ಒಂದೇ ಅಲಿಖಿತ ನಿಯಮದಂತೆ ಇದನ್ನು ಪಾಲಿಸುತ್ತಿದ್ದಾರೆ.
ಹಾಗಾದರೆ, ಗುಡ್ ಇಂಟರ್ನೆಟ್ ಸ್ಪೀಡ್ ಎಷ್ಟು ಗೊತ್ತೇ ?
2022 ರ ಬ್ರಾಡ್ ಬ್ಯಾಂಡ್ ಸ್ಟ್ಯಾಂಡರ್ಡ್ ಪ್ರಕಾರ 100 ಎಂ.ಬಿ.ಪಿ.ಎಸ್ ಡೌನ್ಲೋಡ್ ಸ್ಪೀಡ್ ಹಾಗೂ 10 ಎಂಬಿ.ಪಿ.ಎಸ್ ಅಪ್ಲೋಡ್ ಸ್ಪೀಡ್.
ಫೆಡರಲ್ ಕಮ್ಯುನಿಕೇಶನ್ ಕಮಿಷನ್ ಪ್ರಕಾರ ಕಡಿಮೆ ಎಂದರೆ 25 ಎಂ.ಬಿ.ಪಿ.ಎಸ್ ಡೌನ್ಲೋಡ್ ಸ್ಪೀಡ್ ಹಾಗೂ 3 ಎಂ.ಬಿ.ಪಿ.ಎಸ್ ಅಪ್ಲೋಡ್ ಸ್ಪೀಡ್. ಹೆಚ್ಚು ಎಂದರೆ 1000 ಎಂ.ಬಿ.ಪಿ.ಎಸ್ ಡೌನ್ಲೋಡ್ ಸ್ಪೀಡ್ ಅಥವಾ ಒಂದು ಜಿ.ಬಿ.ಪಿ.ಸ್
ಗೂಗಲ್ ಫೈಬರ್ , ಎ.ಟಿ & ಟಿ, ವೆರಿಜೋನ್, ಫ್ರಂಟಿಯರ್, ಎಕ್ಸ್ ಫಿನಿ ಮುಂತಾದವು ಒಂದು ಸೆಕೆಂಡ್ ಗೆ 2 ಜಿಬಿ ಯಿಂದ 10 ಜಿಬಿ ವರೆಗೂ ಸ್ಪೀಡ್ ನೀಡುತ್ತಿವೆ.
ಹಾಗಾದರೆ, ನಾವು ಮನೆಗೆ ವೈ-ಫೈ ಕನೆಕ್ಷನ್ ತೆಗೆದುಕೊಳ್ಳುತ್ತೇವೆ ಎಂದರೆ ಯಾವ ಪ್ಲಾನ್ ಆರಿಸಿಕೊಳ್ಳಬೇಕು ಎನ್ನುವ ಗೊಂದಲವಿದ್ದರೆ ನಿಮ್ಮ ಆಯ್ಕೆ ನಿಮ್ಮ ಬಳಕೆ ಹಾಗೂ ನೀವು ಎಷ್ಟು ಡಿವೈಸ್ ಗಳನ್ನು ಬಳಸುತ್ತೀರಿ ಎಂಬುದನ್ನು ಆಧರಿಸಿದೆ.
0-5 ಎಂ.ಬಿ.ಪಿ.ಎಸ್ ಸ್ಪೀಡ್ ನಲ್ಲಿ ನೀವು ಮೇಲ್ ಚೆಕ್ ಮಾಡಬಹುದು. ಒಂದು ಡಿವೈಸ್ ನಲ್ಲಿ ಯಾವುದಾದರೂ ಮ್ಯೂಸಿಕ್ ಕೇಳಬಹುದು. ಜೊತೆಗೆ ಗೂಗಲ್ ನಲ್ಲಿ ಏನನ್ನಾದರೂ ಹುಡುಕಬಹುದು.
5 - 40 ಎಂ.ಬಿಂ.ಪಿ.ಎಸ್ ಸ್ಪೀಡ್ ನಲ್ಲಿ ಒಂದು ಡಿವೈಸ್ ನಲ್ಲಿ ವಿಡಿಯೋ ಸ್ಟ್ರೀಮ್ ಮಾಡಬಹುದು ಇಲ್ಲವೇ ವಿಡಿಯೋ ಕಾನ್ಫರೆನ್ಸ್ ನಡೆಸಬಹುದು ಇಲ್ಲವೇ ಆನ್ಲೈನ್ ನಲ್ಲಿ ಗೇಮಿಂಗ್ ಆಡಬಹುದು.
40 - 100 ಎಂ.ಬಿಂ.ಪಿ.ಎಸ್ ಸ್ಪೀಡ್ ನಲ್ಲಿ ಒಂದು ಡಿವೈಸ್ ನಲ್ಲಿ ಹೆಚ್.ಡಿ ವಿಡಿಯೋ ನೋಡಬಹುದು. ಲಾರ್ಜ್ ಫೈಲ್ ಗಳನ್ನು ಡೌನ್ಲೋಡ್ ಮಾಡಬಹುದು. ಇಲ್ಲವೇ.. ಮಲ್ಟಿಪ್ಲೇಯರ್ ವಿಡಿಯೋ ಗೇಮ್ ಆಡಬಹುದು.
100 - 500 ಎಂ.ಬಿಂ.ಪಿ.ಎಸ್ ಸ್ಪೀಡ್ ನಲ್ಲಿ ಮಲ್ಟಿಪಲ್ ಸ್ಕ್ರೀನ್ ಗಳಲ್ಲಿ ಅಲ್ಟ್ರಾ ಹೆಚ್.ಡಿ ವಿಡಿಯೋ ನೋಡಬಹುದು. ಲಾರ್ಜ್ ಫೈಲ್ ಗಳನ್ನು ವೇಗವಾಗಿ ಡೌನ್ಲೋಡ್ ಮಾಡಬಹುದು. ಇಲ್ಲವೇ.. ಮಲ್ಟಿಪ್ಲೇಯರ್ ವಿಡಿಯೋ ಗೇಮ್ ಆಡಬಹುದು.
100 - 1000 ಎಂ.ಬಿಂ.ಪಿ.ಎಸ್ ಸ್ಪೀಡ್ ನಲ್ಲಿ ಮೇಲಿನ ಎಲ್ಲವನ್ನೂ ಹೆಚ್ಚಿನ ಡಿವೈಸ್ ಗಳಲ್ಲಿ ಬಳಸಬಹುದು.
ಇವತ್ತು ಟೆಕ್ನಾಲಜಿ ಇಷ್ಟು ಮುಂದುವರಿದಿದ್ದರೂ ನೆಟ್ವರ್ಕ್ ನಲ್ಲಿ ಎಲ್ಲವೂ ಶುರುವಾಗಿದ್ದು 1- ಜಿ ಯಿಂದ. ಇಂದಿಗೂ 1-ಜಿ ಸೆಲ್ಯುಲಾರ್ ನೆಟ್ವರ್ಕ್ ಅನ್ನು ಆಪರೇಟ್ ಮಾಡುತ್ತಿರುವ ಜಗತ್ತಿನ ಏಕೈಕ ದೇಶ ರಷ್ಯಾ. ಮೊದಲಿಗೆ 1-ಜಿ ಮೊಬೈಲ್ ಫೋನ್ ಕಂಡು ಹಿಡಿದದ್ದು ಅದನ್ನು ಕಾರ್ ನಲ್ಲಿ ಬಳಸಲು ಮಾತ್ರ. 2 ಕಡೆಯಿಂದ ವರ್ಕ್ ಆಗುವ ವೈರ್ ಲೆಸ್ ಡಿವೈಸ್ ಅನ್ನು ಕಂಡು ಹಿಡಿದದ್ದು ಮೊಟೊರೋಲಾದ ಇಂಜಿನಿಯರ್ ಮಾರ್ಟಿನ್ ಕೂಪರ್. 1970 ರಲ್ಲಿ. ಮೊದಲು ಈ ಡಿವೈಸ್ ಅನ್ನು ಟೆಸ್ಟ್ ಮಾಡಲಾಗಿದ್ದು 1974. ಜನರ ಬಳಕೆಗೆ ಅನುಕೂಲವಾಗುವಂತೆ ಸೆಲ್ ಫೋನ್ ತಯಾರಿಸಿದ್ದೇ ಮೊಟೊರೋಲಾ. ಜನರಿಗೆ ಬಳಕೆಗೆ ದೊರೆಯುವಂತಾಗಿದ್ದು 1983 ರಿಂದ. ಜಪಾನ್ ನಲ್ಲಿ 1979 ರಲ್ಲಿ ನಿಪ್ಪಾನ್ ಟೆಲಿಫೋನ್ ಹಾಗೂ ಟೆಲಿಗ್ರಾಫ್ ಸಂಸ್ಥೆ ಇದನ್ನು ವ್ಯಾಪಕಗೊಳಿಸಿತು.
ಅಮೆರಿಕಾದಲ್ಲಿ 1986, ಮಾರ್ಚ್ 6 ರಿಂದ ಅಮೆರಿಟೆಕ್ ಎನ್ನುವ ಕಂಪೆನಿ ಇದನ್ನು ಬಳಸುವಂತೆ ಮಾಡಿತು. ನಂತರದಲ್ಲಿ ಯು.ಎಸ್, ಫಿನ್ ಲ್ಯಾನ್ಡ್, ಯು.ಕೆ , ಯುರೋಪ್ ಗಳಲ್ಲಿಯೂ ಬಳಕೆ ಹೆಚ್ಚಿತು.
1-ಜಿ ಯ ಅನಾನುಕೂಲಗಳು ಏನಾಗಿದ್ದವು ಎಂದು ತಿಳಿದುಕೊಂಡು 2-ಜಿ ಗೆ ಹಾರೋಣ. 2-ಜಿ ಹಾಗೂ 3-ಜಿ ಗೂ ಮಧ್ಯೆ ಇನ್ನೊಂದು ಜನರೇಶನ್ ಇದೆ. ಅದರ ಕುರಿತು ಸಹಾ ತಿಳಿಯೋಣ ಮುಂದಿನ ಟೆಕ್ - ಟಾಕ್ ನಲ್ಲಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ