ಪುಸ್ತಕದ ಶೀರ್ಷಿಕೆ : ಸಮಾನಾಂತರ ರೇಖೆಗಳು
ಲೇಖಕರು : ಡಾ. ಆರತಿ ವೆಂಕಟೇಶ್
ಪ್ರಕಾಶಕರು : ಓಂ ಶಕ್ತಿ ಪ್ರಕಾಶನ
ಪ್ರಥಮ ಮುದ್ರಣ : 2004
ದ್ವಿತೀಯ ಮುದ್ರಣ : 2016 (ನನ್ನ ಓದಿಗೆ ಸಿಕ್ಕಿದ್ದು)
ದಾಂಪತ್ಯದಲ್ಲಿ ಪತಿ-ಪತ್ನಿ ಎರಡು ರೇಖೆಗಳು ಎಂದು ಭಾವಿಸಿದಾಗ ಆ ರೇಖೆಗಳೆರಡು ಸಮಾನಾಂತರವಾಗಿ ಚಲಿಸುವ ರೇಖೆಗಳಾಗದೆ, ಅವೆರಡು ಒಂದಾಗುವ ದಾರಿಯತ್ತ ಸಾಗಿದರೆ ಅಂತಹಾ ಸಂಸಾರ ಅನುರೂಪವಾದ ದಾಂಪತ್ಯವಾಗುತ್ತದೆ. ಸಂಸಾರಗಳಲ್ಲಿ ಹಾಗಾಗದೇ ಪತಿ-ಪತ್ನಿಯರು ತಮ್ಮದೇ ಆದ ಕಾರಣಗಳಿಂದ ತಮ್ಮದೇ ಮೇಲುಗೈಯಾಗಲೆಂದು, ಒಬ್ಬರಿಗೊಬ್ಬರು ಅನುಸರಿಸಿಕೊಂಡು ಹೋಗದೆ.. ವಿವಿಧ ಕಾರಣಗಳಿಗೆ ವಿಚ್ಛೇದನ ಪಡೆಯಲು ಹೊರಡುತ್ತಾರೆ. ಇದರಿಂದ ಭವಿಷ್ಯದಲ್ಲಿ ಉಂಟಾಗುವ ಪರಿಣಾಮಗಳು ಸಹಾ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ. ಡಾ. ಆರತಿ ವೆಂಕಟೇಶ್ ಅವರು ಬರೆದಿರುವ ಈ ಕಾದಂಬರಿ ಹಂಸರಾಗ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಕೆಲವು ವಿವಾಹಗಳು ಪ್ರೇಮ ವಿವಾಹವಾದರೆ, ಕೆಲವು ಹಿರಿಯರೇ ನೋಡಿ ಮಾಡಿದ ವಿವಾಹಗಳು. ಆದರೆ, ವಿಚ್ಛೇದನಕ್ಕೆ ಇಂತಹದ್ದೇ ಕಾರಣಗಳು ಎಂದಿಲ್ಲ. ಹಿರಿಯರು ನೋಡಿ ಮಾಡಿದ ವಿವಾಹದಲ್ಲಿಯೂ ಉಂಟಾಗಬಹುದು ಅಥವಾ ಪ್ರೇಮ ವಿವಾಹದಲ್ಲಿಯೂ.. ಆದರೆ, ಅವರ ಮಕ್ಕಳು ತಪ್ಪು ದಾರಿಯಲ್ಲಿ ಹೋಗುತ್ತಿದ್ದಾಗ ಅದನ್ನು ತಿದ್ದುವುದರ ಬದಲು ಅವರೇ ಅದಕ್ಕೆ ಪ್ರೇರೇಪಿಸಿದರೆ ಅದರ ಪರಿಣಾಮ ಇನ್ನೂ ಘೋರವಾಗಿರುತ್ತದೆ.
ಲಾಯರ್ ಅನುಪಮಾ ಬಳಿಗೆ ಬಂದ ಕೇಸು ಸಹ ಇಂತಹದ್ದೇ. ವಿಚ್ಛೇದನ ತೆಗೆದುಕೊಳ್ಳುವುದಕ್ಕೆ ಅನಾವಶ್ಯಕವಾಗಿ ಆಕೆ ಆತುರಪಡುತ್ತಿದ್ದಾಳೆ ಎನ್ನುವ ತನ್ನ ಜೂನಿಯರ್ ಮೀರಾಳ ಅನಲೈಜೇಷನ್ ಅನ್ನು ಕಂಡು ಆಕೆಯೂ ಮೆಚ್ಚುಗೆ ವ್ಯಕ್ತಪಡಿಸುತ್ತಾಳೆ. ಮದುವೆಯಾಗಿ ಇನ್ನೂ ಒಂದು ವರ್ಷವೂ ಆಗದೆ, ಪತಿ-ಪತ್ನಿಯರಿಗೆ ವಿಚ್ಛೇದನ ಕೊಡುವುದು ಸೂಕ್ತವಲ್ಲ ಎಂಬುದು ಅವಳ ಅನಿಸಿಕೆ. ಅದು ಅನಿಸಿಕೆ ಮಾತ್ರವಲ್ಲದೆ ಅವಳ ಅನುಭವವೂ ಆಗಿತ್ತು. 'ಡೈವೋರ್ಸ್ ಲಾಯರ್' ಎಂದೇ ಪ್ರಸಿದ್ಧಿಯಾಗಿದ್ದ ಅವಳು ಕೇಸನ್ನು ಪರಿಶೀಲಿಸದೆ ಆ ಕೇಸ್ ಅನ್ನು ತೆಗೆದುಕೊಳ್ಳುತ್ತಿರಲಿಲ್ಲ. ಆಕೆಗೆ ಆ ಹೆಸರಿದ್ದರೂ.. ಚಿಕ್ಕ-ಪುಟ್ಟ ಮನಸ್ತಾಪವಿದ್ದರೆ ಅದು ಕಾನೂನಿನ ಕಟ್ಟಡದವರೆಗೂ ಬರಬಾರದೆಂದು ಅವಳ ಸಲಹೆಯ ಮೇರೆಗೆ ಎಷ್ಟೋ ಜನರು ಹೊಸ ಜೀವನವನ್ನು ಆರಂಭಿಸಿದ್ದರು. ಆದರೆ ಅನ್ಯಾಯ ಮಾಡಿದ, ಕಿರುಕುಳದ ಕೇಸುಗಳು ವಿಚ್ಛೇದನದಲ್ಲಿ ಕೊನೆಯಾಗುತ್ತಿದ್ದವು.
ಈ ಕೇಸಿನ ಕಾರಣದಿಂದಾಗಿ ಅನುಪಮಾ ತನ್ನ ಜೀವನವನ್ನೊಮ್ಮೆ ಹಿಂತಿರುಗಿ ನೋಡಿಕೊಂಡಳು. ಭರಧ್ವಾಜ್ ಹಾಗೂ ನಿರ್ಮಲರ ಅನ್ಯೋನ್ಯ ದಾಂಪತ್ಯದಲ್ಲಿ ತುಂಬಾ ಮುದ್ದಾಗಿ ಬೆಳೆದಿದ್ದಳು ಅನುಪಮಾ. ಮಗ ಅಭಿಷೇಕನಿಗಿಂತಲೂ ತಂದೆಗೆ ಮಗಳೆಂದರೆ ಅಚ್ಚುಮೆಚ್ಚು. ಮಗನಿಗಿಂತ ಹೆಚ್ಚಿನ ಪ್ರೀತಿಯನ್ನು ಮಗಳಿಗೆ ತೋರುತ್ತಿದ್ದರು. ಇದರಿಂದಾಗಿ ಅಭಿಷೇಕ್ ವಿಧೇಯನಾಗಿ ಬೆಳೆದರೆ, ಅನುಪಮಾ ಹಠಮಾರಿಯಾಗಿ ಬೆಳೆಯುತ್ತಿದ್ದಳು.
ಚೆಲುವು ಹಾಗೂ ಸಿರಿವಂತಿಕೆಯಿಂದ ಹಠವೂ ಸ್ವಾಭಾವಿಕವಾಗಿ ಬಂದಿತ್ತು. ಆಕೆಯ ಹಠದಿಂದ ಆಕೆಗೆ ಹೆಚ್ಚು ಗೆಳೆಯರಿರಲಿಲ್ಲ. ನಿರ್ಮಲಾರ ಅಣ್ಣ ನಂದೀಶ್ ಹಾಗೂ ಅತ್ತಿಗೆ ಪಾರ್ವತಿ ಇಬ್ಬರಿಗೂ ಆಕೆ ತಮ್ಮ ಮಗ ಸಂದೀಪನನ್ನು ಮದುವೆಯಾಗಲಿ ಎನ್ನುವ ಆಸೆಯಿತ್ತು. ಆತನಿಗೆ ರೂಪ ಹಾಗೂ ಒಳ್ಳೆಯ ಉದ್ಯೋಗವಿದ್ದರೂ.. ಇವರು ತಮ್ಮಷ್ಟು ಸಿರಿವಂತರಲ್ಲ ಎಂಬ ಕಾರಣದಿಂದ ಭರದ್ವಾಜ್ ಇವರ ಸಂಬಂಧವನ್ನು ನಿರಾಕರಿಸಿದರು.
ಆದರೆ, ಆಕೆ ಬ್ಯಾಂಕಿಗೆ ಹೋದಾಗ ಪರಿಚಯವಾದ ಅಲ್ಲಿನ ಉದ್ಯೋಗಿ ಮನೋಹರನನ್ನು ಪ್ರೇಮಿಸಿ ತಂದೆಯ ಇಷ್ಟದ ವಿರುದ್ಧ ಮದುವೆಯಾದಳು. ಮಗಳು ತಮಗಿಂತ ಬಡವರನ್ನು ಮದುವೆಯಾದಳೆಂಬ ಕೋಪವಿದ್ದರೂ.. ಶಾಸ್ತ್ರೋಕ್ತವಾಗಿಯೇ ವಿವಾಹವನ್ನು ನೆರವೇರಿಸಿದ್ದರು.
ಮನೋಹರನ ತಾಯಿ ಶಾರದಮ್ಮನಿಗೆ ಸಂತೋಷಕ್ಕಿಂತ ಈ ಮದುವೆ ಆತಂಕವನ್ನೇ ತಂದು ಕೊಟ್ಟಿತ್ತು. ಆತನ ತಂಗಿ ಮಹಿಮಾ ಮೇಲೆ ಆತನಿಗೆ ಪ್ರೀತಿ ಹೆಚ್ಚು. ಆಕೆ ಶಶಿಧರ್ ನೊಂದಿಗೆ ಮದುವೆಯಾಗಿ ಮೈಸೂರಿನಲ್ಲಿ ನೆಲೆಸಿದ್ದಳಾದರೂ.. ತನಗಿಂತ ತನ್ನ ತಾಯಿ, ತಂಗಿಗೆ ಹೆಚ್ಚು ಪ್ರೀತಿ ಹಾಗೂ ಪ್ರಾಮುಖ್ಯತೆ ನೀಡುತ್ತಿರುವುದು ಮದುವೆಯ ಮೊದಮೊದಲಲ್ಲಿಯೇ ಅನುಪಮಾಳಿಗೆ ಕೋಪ ತರಿಸಿತ್ತು. ತಂದೆಯ ಮುದ್ದಿನ ಮಗಳು ಹಾಗೂ ಶ್ರೀಮಂತಿಕೆಯಲ್ಲಿ ಬೆಳೆದಿದ್ದವಳು ಇಲ್ಲಿಗೆ ಹೊಂದಿಕೊಳ್ಳಲಿಲ್ಲ. ಹೊಂದಿಕೊಳ್ಳಲಿಲ್ಲ ಎನ್ನುವುದಕ್ಕಿಂತ ಹೊಂದಿಕೊಳ್ಳುವ ಗೋಜಿಗೆ ಹೋಗಲಿಲ್ಲ.
ನಿಧಾನವಾಗಿ ತಂದೆಯ ಕೋಪ, ಮುನಿಸು ಕರಗಿ ಮಗಳ ಮೇಲಿನ ಪ್ರೀತಿ ಹೆಚ್ಚಿ ಅಳಿಯನನ್ನು ತಮ್ಮ ಟ್ರಾವೆಲ್ಸ್ ನ ಬಿಸಿನೆಸ್ ನೋಡಿಕೊಳ್ಳಲು ಹೇಳುತ್ತಿದ್ದರೂ.. ಸ್ವಾಭಿಮಾನಿಯಾದ ಮನೋಹರ ಅದನ್ನು ಒಪ್ಪಿರಲಿಲ್ಲ.
ಆಕೆಯ ಹುಟ್ಟುಹಬ್ಬದ ದಿನ ಮನೋಹರನ ತಂಗಿಯ ಗಂಡನಿಗೆ ಅಪಘಾತವಾಗಿ ಅಲ್ಲಿಗೆ ಹೊರಟು ನಿಂತಿದ್ದಕ್ಕೆ, ಅನುಪಮಾ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ಕೋಪ ಮಾಡಿಕೊಂಡು ಜಗಳವಾಡಿದ್ದಳು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ತಾಳ್ಮೆಗೆಟ್ಟು ಆಕೆಗೆ ಕೋಪದಿಂದ ಹೊಡೆದಿದ್ದನು.
ಹೀಗೆ ಹಿಂದೆಲ್ಲಾ ಆಕೆ ದುಡುಕಿದ್ದರೂ ಸುಮ್ಮನಿದ್ದವನು ಅಂದು ತಾಳ್ಮೆ ಕಳೆದುಕೊಂಡಿದ್ದ. ಅದೇ ಅವರಿಬ್ಬರ ದಾಂಪತ್ಯಕ್ಕೆ ಮುಳ್ಳಾಗಿತ್ತು. ಅವರಿಬ್ಬರ ದಾಂಪತ್ಯ ಕೋಟಿನ ಮೆಟ್ಟಿಲು ಹತ್ತಿ, ಮುಗಿದಾಗಿತ್ತು.
ಓದಿನ ಕಡೆ ಹೆಚ್ಚು ಆಸಕ್ತಿ ತೋರಿರದ ಅನುಪಮಾಳಿಗೆ ತನ್ನ ತಪ್ಪಿನ ಅರಿವಾಗುವಷ್ಟರಲ್ಲಿ, ಆಕೆಯ ದಾಂಪತ್ಯವೇ ಮುಗಿದಿತ್ತು. ಹಾಗೆಂದು ಆಕೆಯ ತಪ್ಪಿನ ಅರಿವಾದರೂ ಮತ್ತೊಮ್ಮೆ ಅದನ್ನು ತಿದ್ದಿಕೊಳ್ಳುವ ಅವಕಾಶ ಆಕೆಗೆ ಸಿಗಲಿಲ್ಲವೇಕೆ..?? ಅಷ್ಟು ಹಠದಿಂದ ಹಾಗೂ ದರ್ಪದಿಂದ ವಿಚ್ಛೇದನ ಕೊಡಿಸಿದ್ದ ತಂದೆ ಮೆತ್ತಗಾದದ್ದೇಕೆ..?? ದಾಂಪತ್ಯ ಜೀವನದಲ್ಲಿ ಮಕ್ಕಳೂ ಇಲ್ಲದೆ ವರ್ಷ ಕಳೆಯುವಷ್ಟರಲ್ಲಿ ಮುಗಿದಿದ್ದ ದಾಂಪತ್ಯ ಆಕೆಯ ಮೇಲೆ ಬೀರಿದ ಪರಿಣಾಮಗಳೇನು..?? ಆಕೆಯ ತಮ್ಮ ಅಭಿಷೇಕ್ ಇದಕ್ಕೆ ಪ್ರತಿಕ್ರಿಯೆಸಿದ್ದು ಹೇಗೆ..?? ಮನೋಹರನ ಮನೆಯಲ್ಲಿ, ಜೀವನದಲ್ಲಿ ಆದ ಬದಲಾವಣೆಗಳೇನು..?? ಅನುಪಮಾ ಅವಿವಾಹಿತಳಾಗಿಯೇ ಉಳಿದಿದ್ದೇಕೆ..?? ಮನೋಹರನ ಮುಂದಿನ ಬದುಕು ಹೇಗಿತ್ತು..??
ಈಗ ಆಕೆಯ ಬಳಿಗೆ ಬಂದಿದ್ದ ವಿಚ್ಛೇದನದ ಕೇಸಿಗೂ ಮನೋಹರನ ಮನೆಯವರಿಗೂ ಒಂದು ಸಂಬಂಧವಿತ್ತು. ಆ ಸಂಬಂಧವೇನು.?? ಅನುಪಮಾ ಈ ಕೇಸ್ ಅನ್ನು ಹೇಗೆ ನಿರ್ವಹಿಸುತ್ತಾಳೆ..??
ಇಲ್ಲಿ ಹೆಚ್ಚು ಸೆಳೆದದ್ದು ಅಭಿಷೇಕ್ ಹಾಗೂ ಆತನ ಪತ್ನಿಯ ನಡವಳಿಕೆಗಳು ಹಾಗೂ ತಾಳ್ಮೆಯ ತೀರ್ಮಾನಗಳು. ಅಷ್ಟೇ ಅಲ್ಲದೆ, ವಿಚ್ಛೇದನವಾದ ನಂತರ ಗಂಡಿನ ಬದುಕಿಗೂ ಹಾಗೂ ಹೆಣ್ಣಿನ ಬದುಕುವುದು ಇರುವ ಅಜಗಜಾಂತರ ವ್ಯತ್ಯಾಸ ಹಾಗೂ ಬದಲಾಗುವ ಬಗೆ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ.
ರೈಲು ಕಂಬಿಯ ಹಳಿಗಳಂತೆ ಪಥ ಒಂದೇ ದಿಕ್ಕಿಗೆ ಸಾಗಿದರೂ ಅವು ಎಂದು ಸೇರುವುದೇ ಇಲ್ಲ. ಬದುಕಿನ ಹಾದಿಯೂ ಹಾಗೆಯೇ.. ಯುವ ಜನತೆಗೆ ಉತ್ತಮ ಸಂದೇಶ ನೀಡುವ ಚಿಕ್ಕ ಚೊಕ್ಕ ಕಾದಂಬರಿ ಇದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ