ಗುರುವಾರ, ಏಪ್ರಿಲ್ 16, 2026

5ಜಿ ಯುಗದಲ್ಲಿ.. ( ಟೆಕ್ - ಟಾಕ್ - 24)


ಈಗ 4ಜಿ ಕೂಡಾ ಔಟ್ ಡೇಟೆಡ್ ಎನ್ನುತ್ತಾ 5ಜಿ ಯುಗಕ್ಕೆ ಕಾಲಿಟ್ಟಿದ್ದೇವೆ. 5ಜಿ ಈಗ ಕೇವಲ ನೆಟ್ವರ್ಕ್ ಸ್ಪೀಡ್ ಗೆ ಮಾತ್ರ ಸೀಮಿತವಾಗದೇ ಎಲ್ಲೆಡೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ.  ನಮ್ಮ ದೇಶದಲ್ಲಿ ಇದೀಗ 5ಜಿ ಇನ್ನೂ ಅಂಬೆಗಾಲಿಟ್ಟು ಕೆಲವು ನಗರಗಳಲ್ಲಿ ಮಾತ್ರ ಲಭ್ಯವಾಗುತ್ತಿದ್ದರೆ ಪ್ರಪಂಚದಾದ್ಯಂತ ಈಗಾಗಲೇ 72 ದೇಶಗಳಲ್ಲಿ, 2000 ನಗರಗಳಲ್ಲಿ ಈಗಾಗಲೇ 5ಜಿ ಯನ್ನು ಬಳಸಲಾಗುತ್ತಿದೆ. ಮೊದಲು 5ಜಿ ಶುರುವಾದದ್ದು ಸೌತ್ ಕೊರಿಯಾದಲ್ಲಿ.. ಮಾರ್ಚ್ 2019 ರಲ್ಲಿ.


4ಜಿ ಗಿಂತ 5ಜಿ ಹೇಗೆ ಭಿನ್ನ ಎಂದರೆ ಮೊದಲು ಬರುವ ಅಂಶವೇ ಸ್ಪೀಡ್. 5ಜಿ ಯ ವೇಗ 50 ಎಂ.ಬಿ.ಪಿ.ಎಸ್ ನಿಂದ 1000 ಎಂ.ಬಿ.ಪಿ.ಎಸ್. ಇದು 4ಜಿ ಯ ಸ್ಪೀಡ್ ಗಿಂತ 20 ಪಟ್ಟು ಅಧಿಕ. ಇದು ನಮ್ಮ ದೇಶದಲ್ಲಿ ಸದ್ಯಕ್ಕೆ ಇರುವ 5ಜಿ ಸ್ಪೀಡ್. ಇದು ನಗರದಿಂದ ನಗರಗಳಿಗೆ ಬದಲಾಗಬಹುದು. ಆದರೆ, ಈಗ 5ಜಿ ಅಳವಡಿಸಿಕೊಂಡಿರುವ ದೇಶಗಳಲ್ಲಿ ಅತಿ ಹೆಚ್ಚು ಸ್ಪೀಡ್ ನೀಡುತ್ತಿರುವ ದೇಶ ಕೆನಡಾ. 169.46 ಎಂ.ಬಿ.ಪಿ.ಎಸ್


ಈ 5ಜಿ ಎಷ್ಟು ಸಾಮರ್ಥ್ಯವುಳ್ಳದ್ದು ಎಂದರೆ ಇದರಿಂದ ಕೇವಲ ಇಂಟರ್ನೆಟ್ ಸ್ಪೀಡ್ ಮಾತ್ರವಲ್ಲ ಇಡೀ ಜಗತ್ತನ್ನೇ ಜೋಡಿಸುತ್ತಿದೆ. ಇದನ್ನು "4ನೇ ಇಂಡಸ್ಟ್ರಿಯಲ್ ರೆವೆಲ್ಯೂಷನ್" ಎಂದೇ ಗುರುತಿಸಲಾಗುತ್ತದೆ. ಇಂಟರ್ನೆಟ್ ಆಫ್ ಥಿಂಗ್ಸ್ (ಐ.ಓ.ಟಿ) ಯಲ್ಲಿ ಈಗ ಇದರ ಪಾತ್ರ ಬಹಳ ದೊಡ್ಡದು. ಅಷ್ಟೇ ಅಲ್ಲ.. ಮೆಡಿಕಲ್ ಪ್ರೊಸಿಜರ್ ಹಾಗೂ ಸೆಲ್ಫ್ ಡ್ರೈವಿಂಗ್ ವಾಹನಗಳಲ್ಲಿಯೂ ಇದು ಬಹಳ ಪ್ರಮುಖ ಪಾತ್ರ ವಹಿಸುವುದರಿಂದ ಮಿಷನ್ ಕ್ರಿಟಿಕಲ್ ಕಮ್ಯುನಿಕೇಶನ್ ನ ಅಪ್ಲಿಕೇಶನ್ ಗಳು ಹೆಚ್ಚಾಗಬಹುದು. 


ಈ ಎಲ್ಲಾ 5ಜಿ ಸೇವೆಗಳನ್ನು ಇಂಡಸ್ಟ್ರಿ ಮಟ್ಟದಲ್ಲಿ ಉಪಯೋಗಿಸಲು ಕ್ವಾಲ್ಕಂ ಪಾತ್ರ ಹೆಚ್ಚು. ಇಂದಿನ 5ಜಿ ಸೇವೆಗಳನ್ನು ಬಳಸಲು ಬಳಸುವ ಮೊಬೈಲ್ ಗಳಲ್ಲಿ ಇರುವುದು ಸಹಾ ಕ್ವಾಲ್ಕಮ್ ಸ್ನಾಪ್ ಡ್ರ್ಯಾಗನ್. 


5ಜಿ ಸೇವೆಯನ್ನು ಬಳಸಲು ಮೊಬೈಲ್ ಅನ್ನು ಕೂಡಾ ಅಪ್ಗ್ರೇಡ್ ಮಾಡಿಕೊಳ್ಳಬೇಕಿದೆ. ಈಗ ನಾವು ಬಳಸುವ 4ಜಿ ಸಿಮ್ ಹಾಗೂ 4ಜಿ ಮೊಬೈಲ್ ಅನ್ನು 5ಜಿ ಗೆ ಬದಲಾಯಿಸಿಕೊಳ್ಳಬೇಕಿದೆ. ಭಾರತದಲ್ಲಿ ಏರ್ ಟೆಲ್ 5ಜಿ ಯನ್ನು ಲಾಂಚ್ ಮಾಡಿದ ಮೊದಲ ಟೆಲಿಕಾಂ ಕಂಪೆನಿಯಾದರೂ ಸಹಾ ಈಗ ಬೇರೆ ಎಲ್ಲಾ ಟೆಲಿಕಾಂ ಕಂಪೆನಿಗಳೂ 5ಜಿ ಸೇವೆಯನ್ನು ನೀಡುತ್ತಿವೆ. ಹಾಗಾಗಿ ಸಿಮ್ ಅಪ್ಗ್ರೇಡ್ ಮಾಡುವಾಗ ಅದೇ ಟೆಲಿಕಾಂನ ಸೇವೆಯನ್ನು ಮುಂದುವರಿಸಲು ಅದೇ ನಂಬರ್ ಗೆ 5ಜಿ ಸಿಮ್ ಅನ್ನು ತೆಗೆದುಕೊಂಡರಾಯಿತು. ಹಾಗೆಂದು ಮಾರ್ಕೆಟ್ ನಲ್ಲಿ ಇರುವ ಯಾವುದೋ ಒಂದು 5ಜಿ ಮೊಬೈಲ್ ತೆಗೆದುಕೊಂಡರಾಯಿತು ಎನ್ನುವ ನಿರ್ಲಕ್ಷ್ಯ ಬೇಡ. 5ಜಿ  ಮೊಬೈಲ್ ಅನ್ನು ಆಯ್ದುಕೊಳ್ಳುವ ಮುನ್ನ ಈ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಿ.


5ಜಿ ಮೊಬೈಲ್ ಎಷ್ಟು ಬ್ಯಾಂಡ್ ಗಳಿಗೆ ಸಪೋರ್ಟ್ ಮಾಡುತ್ತದೆ ಎನ್ನುವುದನ್ನು ಪರಿಶೀಲಿಸಿಕೊಳ್ಳಿ. 8-12 ಇದ್ದರೆ ಉತ್ತಮ. 

ಮೊಬೈಲ್ ನ ಚಿಪ್ ಸೆಟ್ ಹಾಗೂ ಆಂಟೆನಾ ಕೂಡಾ 5ಜಿ ಫೋನ್ ಆಯ್ದುಕೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಚಿಪ್ ಸೆಟ್ ಉತ್ತಮವಾಗಿದ್ದಷ್ಟು ಒಳ್ಳೆಯ ಎಫಿಶಿಯೆನ್ಸಿ ಇರುತ್ತದೆ. ಚಿಪ್ ಸೆಟ್ ಗಳಲ್ಲಿ 5ಜಿ ನೆಟ್ವರ್ಕ್ ಅನ್ನು ಗುರುತಿಸಿ ರಿಸೀವ್ ಮಾಡಿಕೊಳ್ಳಲು ಬ್ಯುಲ್ಟ್ ಇನ್ ಮಾಡ್ಯೂಲ್ ಇರುತ್ತದೆ. ಇತ್ತೀಚಿನ ಮೊಬೈಲ್ ನ ಚಿಪ್ ಸೆಟ್ ಗಳನ್ನು 5ಜಿ ಗೆ ಎಂದೇ ತಯಾರಿಸಲಾಗಿದೆ. 5ಜಿ ಯ ಸ್ಪೀಡ್ ಮತ್ತು ಕವರೇಜ್ ಹೆಚ್ಚು ಇರಲು ಆಂಟೆನಾದ ಪಾತ್ರ ಹಿರಿಯದ್ದು. 5ಜಿ ಮೊಬೈಲ್ ನ ಬ್ಯಾಟರಿಯ ಸಾಮರ್ಥ್ಯ ಹೆಚ್ಚಿರುವಂತೆ ನೋಡಿ ಆಯ್ಕೆ ಮಾಡಿಕೊಳ್ಳಿ. ಇಂಟರ್ನೆಟ್ ಎಷ್ಟು ವೇಗವೋ.. ಹಾಗೆಯೇ ಬ್ಯಾಟರಿ ಕೂಡಾ ಬೇಗನೆ ಖಾಲಿಯಾಗುತ್ತಾ ಬರುತ್ತದೆ. ಅಷ್ಟೇ ಅಲ್ಲ, 5ಜಿಯ ಸೇವೆ ಇಲ್ಲಿ ಇನ್ನೂ ಆರಂಭಿಕ ಹಂತದಲ್ಲಿ ಇರುವುದರಿಂದ ಆಗಾಗ ಸಾಫ್ಟ್ವೇರ್ ಅಪ್ಡೇಟ್ ನೀಡುವಂತಹಾ ಮೊಬೈಲ್ ಗಳನ್ನೇ ನೋಡಿ ಆಯ್ಕೆ ಮಾಡಿಕೊಳ್ಳಿ. ಆದಷ್ಟು, ಗೊತ್ತಿರುವ ಬ್ರಾಂಡ್ ನ ಹೊಸ ಮೊಬೈಲ್ ಗಳಿರಲಿ. 


ಸ್ವಲ್ಪವೂ ಡಿಲೇ ಇರದಂತೆ ಇಂಟರ್ನೆಟ್ ವೇಗ ಇರುವ ಈ 5ಜಿ ಆನ್ಲೈನ್ ಗೇಮ್ ಗಳನ್ನು ಆಡುವವರಿಗೂ ಒಂದು ಅಡಿಷನಲ್ ಅಡ್ವಾನ್ಟೇಜ್. ಈಗಲೇ ಒಬ್ಬರು ಎರಡೆರಡು ಸಿಮ್ ಇರುವ ಎರಡೆರಡು ಮೊಬೈಲ್ ಗಳನ್ನು ಬಳಸುತ್ತಿರುವಾಗ 5ಜಿ ಬಂದರೆ 5ಜಿ ಬಳಕೆದಾರರು ಎಷ್ಟಾಗಬಹುದು ? 2024 ರ ಹೊತ್ತಿಗೆ ಜಗತ್ತಿನ 65% ಜನರು 5ಜಿ ಬಳಕೆದಾರರಾಗಲಿದ್ದಾರೆ. 2024 ರ 35% ನೆಟ್ವರ್ಕ್ ಟ್ರಾಫಿಕ್ ಗೆ ಕಾರಣವಾಗಲಿದೆ ಈ 5ಜಿ. 


5ಜಿ ನೆಟ್ವರ್ಕ್ ಗಾಗಿ ಕೆಲವು ಸ್ಪೇಸ್ ಆರ್ಗನೈಸೇಷನ್ ಗಳು ಕೂಡಾ ಟ್ರೆಂಡ್ ಸೆಟ್ಟರ್ ಗಳಾಗುತ್ತಿವೆ. ಈ ನಿಟ್ಟಿನಲ್ಲಿ ಸ್ಪೇಸ್ ಎಕ್ಸ್ ಮೊದಲ 60 ಸ್ಟಾರ್ ಲಿಂಕ್ ಕ್ರಾಫ್ಟ್ ಗಳನ್ನು ಮೇ ಯಿಂದಲೇ ಕಾರ್ಯಪ್ರವೃತ್ತಗೊಳಿಸಿದೆ. ಅಲ್ಲದೇ, 12,000 ಸ್ಟಾರ್ ಲಿಂಕ್ ಕ್ರಾಪ್ಟ್ ಗಳಿಗೆ ಲೈಸೆನ್ಸ್ ತೆಗೆದುಕೊಂಡಿದ್ದು.. ಇನ್ನೂ 30,000 ಸ್ಟಾರ್ ಲಿಂಕ್ ಕ್ರಾಫ್ಟ್ ಗಳಿಗೆ ಅರ್ಜಿ ಸಲ್ಲಿಸಿದೆ. 


5ಜಿ ವೇಗದ ಕುರಿತು ಅಮೆರಿಕಾದಲ್ಲಿ ಕೆಲವರು ತಕರಾರು ವ್ಯಕ್ತ ಪಡಿಸುತ್ತಿದ್ದಾರೆ. 4ಜಿ ವೇಗಕ್ಕೆ 5ಜಿ ಎಂಬ ಹೊಸ ಹಣೆಪಟ್ಟಿ ನೀಡಿದ್ದಾರೆ ಅಷ್ಟೇ.. 5ಜಿ ನೆಟ್ವರ್ಕ್ ನಲ್ಲಿಯೂ ನಮಗೆ 4ಜಿ ವೇಗವಷ್ಟೇ ಸಿಗುತ್ತಿದೆ ಎಂದಿದ್ದಾರೆ. ನಮ್ಮಲ್ಲಿಯೂ ಸಹಾ ಎಷ್ಟೋ ಜನರಿಗೆ ಇದೇ ರೀತಿಯ ಸಮಸ್ಯೆಗಳು ಉಂಟಾಗುತ್ತಿರಬಹುದು. ನಾವು ಹಾಕಿಸಿಕೊಂಡದ್ದು 100 ಎಂ.ಬಿ.ಪಿ.ಎಸ್ ಸ್ಪೀಡ್ ಆದರೂ ನಮಗೆ ಅಷ್ಟು ವೇಗವಾದ ಇಂಟರ್ನೆಟ್ ಸಿಗುತ್ತಿಲ್ಲ ಎನ್ನುತ್ತಾರೆ. ವೈರ್ ಲೆಸ್ ಡೇಟಾ ಹಾಗೂ ವೈಯರ್ಡ್ ವೈ-ಫೈ ಕನೆಕ್ಷನ್ ಗಳಿಗೆ ಬಹಳ ವ್ಯತ್ಯಾಸವಿದೆ. ವೈರ್ ಲೆಸ್ ವೈ-ಫೈ ನಲ್ಲಿ ಪ್ಯಾಕೆಟ್ ಡ್ರಾಪ್ ಸರ್ವೇಸಾಮಾನ್ಯ ಸಮಸ್ಯೆ. ಹಾಗಾಗಿಯೇ.. ಇಥರ್ ನೆಟ್ ನ ಮೂಲಕ ನಾವು ಬಳಸುವ ಇಂಟರ್ನೆಟ್ ವೇಗಕ್ಕೂ.. ವೈರ್ ಲೆಸ್ ವೈ-ಫೈ ವೇಗಕ್ಕೂ ಬಹಳ ವ್ಯತ್ಯಾಸವಿದೆ. ಇಷ್ಟೇ ಅಲ್ಲದೆ, ಇಂಟರ್ನೆಟ್ ಸ್ಪೀಡ್ ಕಡಿಮೆ ಸಿಗುವುದಕ್ಕೆ ಇನ್ನೂ ಕೆಲವು ಕಾರಣಗಳಿವೆ. 


ನಾವು ಬಳಸುವ 4ಜಿ ಅಥವಾ 5ಜಿ ಯಾವುದೇ ನೆಟ್ವರ್ಕ್ ನಲ್ಲಿಯೂ ಡೇಟಾ ಪ್ಲಾನ್ ನ ಸ್ಪೀಡ್ ಕಡಿಮೆ ಇದ್ದಿರಬಹುದು. ಅಥವಾ ವೈ-ಫೈ ಸಿಗ್ನಲ್ ಗಳು ವೀಕ್ ಇರಬಹುದು. ಅಥವಾ ಬಳಕೆದಾರರು ಬಳಸುವ ಡಿವೈಸ್ ಗಳು ನಿಧಾನ ಇರಬಹುದು ಅಥವಾ ಔಟ್ ಡೇಟೆಡ್ ಆಗಿರಬಹುದು. ಅಥವಾ ನೆಟ್ವರ್ಕ್ ಪ್ರೊವೈಡರ್ ನ ಸಮಸ್ಯೆ ಕೂಡಾ ಇರಬಹುದು. ಹೀಗೆ ವಿವಿಧ ಸಮಸ್ಯೆಗಳು ಇದ್ದಿರಬಹುದು. ಅವುಗಳನ್ನು ಪರಿಶೀಲಿಸಿ ನಮ್ಮ ನೆಟ್ವರ್ಕ್ ಸ್ಪೀಡ್ ಕಡಿಮೆಯಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಅಷ್ಟೇ.. ಅದರ ಬದಲಾಗಿ 4ಜಿ ಮತ್ತು 5ಜಿ ವೇಗದಲ್ಲಿ ಬದಲಾವಣೆ ಇಲ್ಲ ಎಂದು ಹೇಳಲಾಗದು. 


5ಜಿ ನಂತರ ಮುಂದೇನು‌ ಎಂದು ಕೇಳುವುದಾದರೆ ಇದಕ್ಕಿಂತ ಮುಂದಿನ ಜನರೇಶನ್ ಗಳು ಸಹಾ ಬರಲೇ ಬೇಕಲ್ಲಾ..‌ ಭಾರತದಲ್ಲಿ 6ಜಿ ಕಾಲ 2030 ರಿಂದ ಶುರುವಾಗಬಹುದು ಎಂದಿದ್ದರೂ ಚೀನಾ ಈಗಾಗಲೇ 6ಜಿ ಕುರಿತು ಪ್ರಯೋಗಗಳು ನಡೆದು  ಈಗ 6ಜಿ ಸ್ಯಾಟಲೈಟ್ ಕೂಡಾ ಚಾಲ್ತಿಯಲ್ಲಿದ್ದು 6ಜಿ ಪ್ರಾಯೋಗಿಕವಾಗಿ ಬಳಸಲ್ಪಡುತ್ತಿದೆ ಎನ್ನಲಾಗಿದೆ. ಇದಕ್ಕಾಗಿ ಟೆಕ್ ಬೆಹೆಮೊತ್ಸ್ ಎನ್ನುವ ಕಂಪೆನಿಯಿಂದ ಟೆರಾಹರ್ಡ್ಸ್ ಎನ್ನುವ ಟೆಕ್ನಾಲಜಿಯನ್ನು ಲಾಂಚ್ ಮಾಡಿದ್ದಾರೆ. ಈಗ 5ಜಿ ಬಳಸಲ್ಪಡುತ್ತಿರುವ ದೇಶಗಳಲ್ಲಿ ಮುಂಚೂಣಿಯಲ್ಲಿರುವ ಚೀನಾ 6ಜಿ ಬಳಸುವುದರಲ್ಲಿ ಕೂಡಾ ಮುಂಚೂಣಿಯಲ್ಲಿದ್ದರೆ ಅಚ್ಚರಿಯೇನಿಲ್ಲ.


ಬರೀ 6ಜಿ ಟೆಕ್ನಾಲಜಿ ಮಾತ್ರವಾ.. ಅದಕ್ಕೂ ಮುಂದುವರಿದ ಟೆಕ್ನಾಲಜಿ ಇದೆಯಾ..?? ಅಷ್ಟು ಇಂಟರ್ನೆಟ್ ಸ್ಪೀಡ್ ಅನ್ನು ಯಾರಾದರೂ ಕೊಡುತ್ತಾರಾ ಎಂದು ಕೇಳುವುದಾದರೆ... 7ಜಿ ಹಾಗೂ 8ಜಿ ಟೆಕ್ನಾಲಜಿ ಕುರಿತು ಇನ್ನೂ ಅಧಿಕೃತವಾಗಿ ಬಳಕೆಯ ಮಾಹಿತಿ ಹೊರ ಬಂದಿಲ್ಲವಾದರೂ.. 7ಜಿ ಹಾಗೂ 8ಜಿ ಬಂದಾಗ ಅದರ ಮುಂಚೂಣಿಯಲ್ಲಿರಲಿವೆ ಈ ಮೂರು ದೇಶಗಳು. ನೆದರ್ಲ್ಯಾನ್ಡ್ಸ್, ಹಂಗೇರಿ ಹಾಗೂ ನಾರ್ವೆ. 


ಟೆಕ್ನಾಲಜಿ ಎಷ್ಟು ಮುಂದುವರಿದರೂ.. ಅನುಕೂಲಗಳಷ್ಟೇ..‌ ಅನಾನುಕೂಲಗಳೂ ಇವೆ‌. ಹೆಚ್ಚು ಹೊತ್ತು ಮೊಬೈಲ್ ಅಥವಾ ಸಿಸ್ಟಮ್ ಬಳಸುತ್ತಿದ್ದರೆ.. ಎಂದರೆ ಸ್ಕ್ರೀನ್ ಟೈಮ್ ಹೆಚ್ಚು ಬಳಸಿದರೆ ಡ್ರೈ ಐ ಸಿಂಡ್ರೋಮ್ ಕಾಣಿಸಿಕೊಳ್ಳಬಹುದು. ಇದೊಂದು ಉದಾಹರಣೆ ಅಷ್ಟೇ.. ಇದನ್ನು ಏಕೆ ಈಗ ಹೇಳುತ್ತಿದ್ದೇನೆ ಎಂದರೆ ಟೆಕ್ - ಟಾಕ್ ನಲ್ಲಿ ನಾನು ಹೆಚ್ಚಿನಂಶ ಚರ್ಚೆ ಮಾಡಿರುವುದು ಟೆಕ್ನಾಲಜಿ ಹಾಗೂ ಅದರ ಬಳಕೆಯ ಕುರಿತು, ಅನುಕೂಲಗಳನ್ನು ಕುರಿತು ಮಾತ್ರವೇ.. ಅದರಿಂದ ಆಗಿರುವ ಮೋಸ ಹಾಗೂ ಅದನ್ನು ತಡೆಗಟ್ಟುವ ಬಗೆಗೆ ಮಾತ್ರವೇ. ಈಗ ನಾನು ಎಚ್ಚರಿಸಲು ಹೊರಟಿರುವುದು ಆರೋಗ್ಯದ ಕುರಿತು. 


ಟೆಕ್ನಾಲಜಿಯಂತೂ ಈಗ ವೇಗವಾಗಿ ಬೆಳೆಯುತ್ತಿದೆ. ಈ 5ಜಿ ಯುಗದಲ್ಲಿ ಎಲ್ಲವೂ ಈಗ ಬೆರಳಂಚಿನಲ್ಲಿಯೇ.. ಅದನ್ನು ಹೇಗೆ ಮತ್ತು ಎಷ್ಟು ಬಳಕೆ ಮಾಡಿಕೊಳ್ಳುತ್ತೇವೆ ಎನ್ನುವುದು ನಮಗೆ ಅರಿವಿರಬೇಕು. ಆರೋಗ್ಯ ಸಮಸ್ಯೆಗಳಿಗೆ ಇಂಟರ್ನೆಟ್ ನಲ್ಲಿ ಪರಿಹಾರ ಹುಡುಕಬೇಡಿ. ಹಾಗೆಯೇ.. ಇಂಟರ್ನೆಟ್ ಅನ್ನು ಅತಿಯಾಗಿ ಬಳಸಿ ಅಥವಾ ಅತಿಯಾಗಿ ಹಚ್ಚಿಕೊಂಡು ನಿಮಗೆ ನೀವೇ ತೊಂದರೆ ತಂದುಕೊಳ್ಳಬೇಡಿ. 


ಇಷ್ಟು ಕಾಳಜಿಯ ಮಾತು ಇಂದೇಕೆ ಎಂಬ ಪ್ರಶ್ನೆ ಹುಟ್ಟಿತೇನು ? ಟೆಕ್ನಾಲಜಿ ಎಷ್ಟೇ ಮುಂದುವರಿದರೂ.. ಎಷ್ಟೇ ಅಗತ್ಯತೆಯನ್ನು ಪೂರೈಸಿದರೂ ಮನುಷ್ಯ ಮನುಷ್ಯರ ಬಾಂಧವ್ಯ, ಕಾಳಜಿ ಅದೆಲ್ಲವನ್ನೂ ಮೀರಿದ್ದು. ಅದನ್ನು ವೃದ್ಧಿಗೊಳಿಸಿಕೊಳ್ಳಲು ಪ್ರಯತ್ನಿಸೋಣ. ಅಲ್ಲದೇ, ವಿದಾಯ ಹೇಳುವಾಗ ಇಷ್ಟು ಕಾಳಜಿಯ ಮಾತನ್ನೂ ಹೇಳದಿದ್ದರೆ ಹೇಗೆ ?


ಹೌದು, ವಿದಾಯವೇ..! 2022 ಕ್ಕೆ ವಿದಾಯ ಹೇಳುತ್ತಿದ್ದೇವೆ. ಹಾಗೆಯೇ, ಟೆಕ್ - ಟಾಕ್ ಕೂಡಾ ಕೊನೆಯಾಗುತ್ತಿದೆ. ಇದು ಪೂರ್ಣ ವಿರಾಮವಾ ಅಥವಾ ತಾತ್ಕಾಲಿಕ ವಿರಾಮವಾ..?? ಹೇಳಲಾರೆ. 24 ಸಂಚಿಕೆಗಳ ಈ ಟೆಕ್ - ಟಾಕ್ ನಿಮ್ಮ ಕೆಲವು ಸಂದೇಹಗಳನ್ನು ನಿವಾರಿಸಿ, ಒಂದಿಷ್ಟಾದರೂ ಮಾಹಿತಿ ನೋಡಿದೆ ಎಂದು ಭಾವಿಸಿದ್ದೇನೆ. ಟೆಕ್ - ಟಾಕ್ ಮೂಲಕ ಟೆಕ್ನಾಲಜಿ ಎಂಬ ಸಾಗರದ ಕೆಲವು ಹನಿಗಳು ನಿಮ್ಮ ಮುಂದೆ ಬಂದಿದ್ದವು. ಈಗ 5ಜಿ ಯುಗ.. ಮತ್ತು ಈಗ ಎಲ್ಲವೂ ಬೆರಳಂಚಿನಲ್ಲಿಯೇ ಸಿಗುತ್ತದೆ. ಎಲ್ಲರ ನಿರಂತರ ಓದು, ತಿದ್ದುವಿಕೆ, ಪ್ರೋತ್ಸಾಹಕ್ಕೆ ನಾನು ಚಿರಋಣಿ.  ಓದುಗರೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ