ಎಷ್ಟೋ ಪದಗಳಿಗೆ ವ್ಯಾಖ್ಯಾನ ನಮ್ಮ ಅರಿವಿನ ಹಾಗೂ ಅನುಭವದ ವ್ಯಾಪ್ತಿಗೆ ಮೀರಿದ್ದು. ತರ್ಕಕ್ಕೆ ನಿಲುಕದ್ದು.. ಅಂತಹಾ ಒಂದು ಸುಂದರ ಶಬ್ದ ಪ್ರೇಮ. "ಪ್ರೇಮವೆಂದರೇನು.." ಎಂಬುದಕ್ಕೆ ಹಲವಾರು ಜನರು ಹಲವಾರು ರೀತಿಯ ವ್ಯಾಖ್ಯಾನಗಳನ್ನು ನೀಡಿದ್ದರೂ.. ನಮ್ಮ-ನಮ್ಮ ಅನುಭವಗಳಿಗೆ ಬರುವ ನಿಷ್ಕಲ್ಮಶ ಭಾವ ಬೆರೆಯೇ ತೆರನಾದದ್ದು. ಪ್ರೇಮ ಕೇವಲ ಬದುಕಿನ ಭಾಗವಲ್ಲ.. ಉಸಿರಾಟದಂತೆಯೇ ಅದು ಬದುಕಿನ ಜೊತೆ-ಜೊತೆಗೇ ಸಾಗುವಂತದ್ದು.
ತಂದೆ-ತಾಯಿ, ಅಣ್ಣ-ತಮ್ಮಂದಿರು, ಸ್ನೇಹಿತರು, ಪತಿ-ಪತ್ನಿ, ಮಕ್ಕಳು, ಪ್ರಾಣಿಗಳು, ಹಿರಿಯರು, ಬಂಧುಗಳು, ಕೆಲಸ, ಹವ್ಯಾಸ ಹೀಗೆ ಪ್ರತಿಯೊಬ್ಬರ/ಪ್ರತಿಯೊಂದರ ಕುರಿತು ಪ್ರೇಮದ ಭಾವನೆಯಿದ್ದರೂ.. ಆಯಾ ವ್ಯಕ್ತಿಗೆ ಸಂಬಂಧಿಸಿದಂತೆ ಆಯಾ ಭಾವಗಳ ತೀವ್ರತೆ ಹಾಗೂ ಪರಿಧಿ ಬೇರೆಯದ್ದೆ ಅರ್ಥವನ್ನು ಪಡೆದುಕೊಳ್ಳುತ್ತದೆ. ಹಾಗಾದರೆ ಸಂಬಂಧದ ಪರಿಧಿಯಲ್ಲಿ ಬರುವ ಪ್ರೇಮ ಸಂಕುಚಿತವಾದದ್ದಾ.. ಎಂದರೆ, ಖಂಡಿತವಾಗಿಯೂ ಅಲ್ಲ. ಆದರೆ, ಸಂಬಂಧಗಳಲ್ಲಿ ಪ್ರೇಮ ಏಕಮುಖಿಯೂ ಆಗಿರಬಹುದು ಅಥವಾ ದ್ವಿಮುಖಿಯೂ ಆಗಿರಬಹುದು. ಆದರೆ, ಪ್ರೇಮವೆಂಬುದು ಸರ್ವವ್ಯಾಪಿ. ಎಂತಹಾ ಕಲ್ಲು ಹೃದಯವನ್ನೂ ಕರಗಿಸಿಬಿಡಬಲ್ಲದು. ಜೊತೆಜೊತೆಗೆ ಸಾಗುವ ಸಂದರ್ಭ ಬಂದಾಗ ಒಬ್ಬರ ಕುರಿತಾಗಿ ಪ್ರೇಮವಿಲ್ಲದಿದ್ದರೂ.. ಗಾಢವಾದ ಅನ್ಯೋನ್ಯತೆ ಬೆಳೆಯುತ್ತಿದ್ದಂತೆ ಎಂತಹಾ ಕಲ್ಲು ಹೃದಯವಾದರೂ.. ಅವರ ಪ್ರೇಮಕ್ಕೆ ಕರಗಿ ಬೆರೆಯುವುದರಲ್ಲಿ ಅನುಮಾನವೇ ಇರಲಾರದು. ಏಕೆಂದರೆ, ಪ್ರೇಮಕ್ಕೆ ಎಲ್ಲವನ್ನೂ ಮರೆಸುವ ಶಕ್ತಿಯಿದೆ. ಅದು ಬದುಕಿಗೆ ಗಾಯವೂ ಆಗಬಲ್ಲದು. ಕಾಲಕ್ಕೆ ಮದ್ದು ಆಗಬಲ್ಲದು. ಆ ವ್ಯಕ್ತಿ ಪ್ರೇಮವನ್ನು ತಮ್ಮ ಬದುಕಿನಲ್ಲಿ ಹೇಗೆ ಹಾಸುಹೊಕ್ಕಾಗಿಸಿಕೊಂಡಿದ್ದಾರೆ ಎಂಬುದರ ಮೇಲೆ ಇದು ತೀರ್ಮಾನವಾಗುತ್ತದೆ.
ನನ್ನ ಓದಿನ ಪರಿಧಿಯಲ್ಲಿ ನಾನು ಇತ್ತೀಚಿನ ದಿನಗಳಲ್ಲಿ ಬಹಳ ಹೆಚ್ಚಾಗಿ ಓದಿರುವ ಪುಸ್ತಕಗಳು ಲೇಖಕಿ ಶ್ರೀಮತಿ ಹೆಚ್. ಜಿ. ರಾಧಾದೇವಿಯವರದ್ದು. ಹಾಗಾಗಿ.. ಅವರ ಕಾದಂಬರಿಗಳಲ್ಲಿ ಕಂಡುಬರುವ ಪ್ರೇಮದ ವಿಸ್ತಾರತೆಯನ್ನು ನನ್ನ ಅರಿವಿನ ಮಟ್ಟಿಗೆ ತಕ್ಕಂತೆ ಅವಲೋಕಿಸಲು ಪ್ರಯತ್ನಿಸುತ್ತೇನೆ.
ಪ್ರೇಮ ಹಾಗೂ ತಿರಸ್ಕಾರ : ದುಂಬಿ ಮುಟ್ಟದ ಹೂವು
********************************************
ತಮ್ಮನ್ನು ಇಷ್ಟಪಟ್ಟವರು ತಮ್ಮನ್ನೇ ಪ್ರೇಮಿಸಬೇಕೆಂಬ ಭಾವದಲ್ಲಿದ್ದಾಗ ಆ ಪ್ರೇಮ ಸ್ವಾರ್ಥವಾಗುತ್ತದೆ. ಈ ಕಾದಂಬರಿಯಲ್ಲಿ ಹೂವಿಗೆ ಆನ್ವರ್ಥಕದಂತಿರುವ ಕುಸುಮ ತನ್ನನ್ನು ನೋಡಲು ಬಂದ ರಾಜೇಶನನ್ನು ಮನಸ್ಸಿನಲ್ಲಿಟ್ಟುಕೊಂಡು ಆರಾಧಿಸಿದರೂ.. ಆತನ ಮನಸ್ಸಿಗೆ ಹಿಡಿಸಿ ಪ್ರೇಮಿಸಿ ವಿವಾಹವಾಗಿದ್ದು ಆಕೆಯ ತಂಗಿ ವಿಜಯಳನ್ನು. ಪ್ರೇಮದ ತಿರಸ್ಕಾರವನ್ನು ಸಹಿಸಿ ಬಾಳುವುದು ಎಂದಿಗೂ ಸುಲಭವಲ್ಲ. ಕುಸುಮಾಳ ಪರಿಸ್ಥಿತಿ ಹೇಗೆಂದರೆ.. ತಂಗಿ ತಾನು ಪ್ರೇಮಿಸಿ ಪತಿ ಎಂದು ಭಾವಿಸಿದವನನ್ನೇ.. ಮದುವೆಯಾಗಿ ಸಂತಸದಿಂದಿರುವಾಗ.. ಅವರ ಜೊತೆಯಾಗಿಯೇ ಇರಬೇಕಾದ ಇಕ್ಕಟ್ಟಿನ ಪರಿಸ್ಥಿತಿ. ಆದರೆ, ಅವಳ ಪ್ರೇಮ ಸ್ವಾರ್ಥದ ಪರಮಾವಧಿಯನ್ನು ತಲುಪದೆ, ಇಬ್ಬರಿಗೂ ಒಳಿತಾಗಲೆಂದೇ ಹಾರೈಸಿ ತಾನು ತನ್ನ ಭವಿಷ್ಯವನ್ನು ಬೇರೆಯದ್ದೇ ರೀತಿ ಕಟ್ಟಿಕೊಳ್ಳಲು ಮುಂದಾಗುತ್ತಾಳೆ. ತಿರಸ್ಕಾರವನ್ನು ಮೀರಿ ನಿಂತು ಸಾಧನೆಯತ್ತ ಸಾಗುವ ಮೂಲಕ ತಿರಸ್ಕಾರದ ನಂತರವೂ ಪ್ರೇಮಿಗಳು ಇರಬೇಕಾದ ಪರಿ ಅನುಸರಣೀಯ.
ಅಂತಸ್ತನ್ನು ಮೀರಿ ನಿಂತ ಪ್ರೇಮ ಹಾಗೂ ಅಣ್ಣ-ತಂಗಿಯರ ಒಲವಿನ ಬಾಂಧವ್ಯ : ಪ್ರೇಮ ಸಾಮ್ರಾಜ್ಯ
********************************************
ಪ್ರೇಮವೆಂಬುದು ಹಣ, ಅಂತಸ್ತು, ಬಣ್ಣ, ರೂಪ ಎಲ್ಲವನ್ನು ಮೀರಿ ನಿಲ್ಲುತ್ತದೆ. ಗುಣಕ್ಕಿಂತ ಹಣವೇ ಮುಖ್ಯ ಎನ್ನುವ ಕಾಂತಿಯ ಕುಟುಂಬ ಹಾಗೂ ಹಣಕ್ಕಿಂತ ಗುಣಕ್ಕೆ ಹೆಚ್ಚು ಬೆಲೆ ಕೊಡುವ ಚಂದ್ರು. ಅಚಾನಕ್ಕಾದ ಪರಿಸ್ಥಿತಿಯಲ್ಲಿ ಕಾಂತಿ ಚಂದ್ರುವಿನ ಮನೆಗೆ ಬಂದಾಗ ಬಡತನವಿದ್ದರೂ ಆತನ ಹೃದಯ ಶ್ರೀಮಂತಿಕೆಯನ್ನು ಇಷ್ಟಪಟ್ಟಳು. ಅಲ್ಲಿಂದ ಅವರಿಬ್ಬರ ನಡುವಿನ ಪ್ರೇಮ ಹೆಮ್ಮರವಾಗಿ ವಿವಾಹವಾಗುತ್ತದೆ. ಆ ಪ್ರೇಮವನ್ನು ಉಳಿಸಿಕೊಂಡು ಹೆಜ್ಜೆ-ಹೆಜ್ಜೆಗೂ ಅದನ್ನು ಸಾಬೀತುಪಡಿಸಿಕೊಳ್ಳುವ ಸಂದರ್ಭ ಬಂದಾಗ ಅದನ್ನು ಉಳಿಸಿಕೊಳ್ಳುವ ಇವರಿಬ್ಬರ ಪ್ರೇಮ ಅಂತಸ್ತಿನ ಬೇಲಿಯನ್ನು ದಾಟಿ ಪ್ರೇಮಿಸಿ ವಿವಾಹವಾಗುವವರಿಗೊಂದು ಮಾದರಿ.
ತಂದೆ-ತಾಯಿ ಇಲ್ಲದ ಚಂದ್ರು ತನ್ನ ತಂಗಿ ಶಾಂತವ್ವನನ್ನು ಕಾಳಜಿ ಮಾಡುವಷ್ಟೇ ಕಾಳಜಿಯನ್ನು ಆಕೆಯೂ ಮಾಡುತ್ತಾಳೆ. ಅವರಿಬ್ಬರ ನಡುವಿನ ವಾತ್ಸಲ್ಯದ ಪುಟ್ಟ ಪ್ರೇಮ ಸಾಮ್ರಾಜ್ಯಕ್ಕೆ ಕಾಂತಿ ಬಂದಾಗ ಪ್ರೇಮ ಮತ್ತಷ್ಟು ಹೆಚ್ಚಾಗುತ್ತದೆ. ಅವರಿಬ್ಬರಿಗೂ ಸಮಯ ನೀಡಲು ಸೂಕ್ಷ್ಮವಾಗಿ ನಡೆದುಕೊಳ್ಳುವ ಶಾಂತವ್ವನ ನಡವಳಿಕೆ ಇಷ್ಟವಾಗುತ್ತದೆ.
ಪ್ರೇಮವನ್ನೇ ಹಂಚುವ ಈ ಅಣ್ಣ-ತಂಗಿಯರಿಬ್ಬರೂ ಮನೆಯೊಂದು ನಂದನವನವಾಗಲು..ಇದ್ದುದರಲ್ಲೇ ಅನುಸರಿಸಿಕೊಂಡು ನಡೆಯುವ ಗುಣವನ್ನು ಪಸರಿಸುತ್ತಾರೆ.
ಸಾಹಿತ್ಯವೇ ಪ್ರಧಾನ ಸೇತುವೆಯಾಗಿ ಮೂಡಿದ ಪ್ರೇಮ : ನೀನೇಕೆ ನನ್ನ ಮರೆತೆ ??
********************************************
ಕವಿಗೋಷ್ಠಿಯಲ್ಲಿ ಪದ್ಮಾಸಿನಿ ಪ್ರೇಮಭಾವ ಪ್ರಧಾನ ಕವಿತೆಯೊಂದನ್ನು ವಾಚಿಸಿ, ಶ್ರೀಧನನ ಮನ ಗೆಲ್ಲುತ್ತಾಳೆ. ಆದರೆ ಅಂದಿನ ಕವಿಗೋಷ್ಠಿಯಲ್ಲಿ ಹೆಚ್ಚು ಹೊಗಳಿದ್ದು ಮೋಹನಾಂಗಿಯ ಕವಿತೆಯನ್ನು. ಇವರಿಬ್ಬರ ಪ್ರೇಮಕ್ಕೂ ಅಡ್ಡಿಯಾಗಿ ನಿಲ್ಲುವ ಮೋಹನಾಂಗಿ ಶ್ರೀಧರನ ಅಂತಸ್ತನ್ನು ಇಷ್ಟಪಟ್ಟು ಆತನನ್ನು ಸೆಳೆಯಲು ಪ್ರಯತ್ನಿಸಿತ್ತಾಳಾದರೂ.. ಶ್ರೀಧರನ ಬುದ್ಧಿವಂತಿಕೆಯಿಂದ ಸಾಹಿತ್ಯದ ಮೂಲಕ ಆತನ ಮನಕ್ಕೆ ಲಗ್ಗೆಯಿಟ್ಟ ಪದ್ಮಾಸಿನಿಯೇ ಆತನ ಮನದೊಡತಿಯಾಗುತ್ತಾಳೆ. ನಿಜವಾದ ಪ್ರೀತಿಗೆ ಸಿಕ್ಕ ಗೆಲುವು ಹೃದಯದ ಭಾವಗಳ ವಿನಿಮಯ ಸುಂದರವಾಗಿ ಚಿತ್ರಿತವಾಗಿದೆ.
ಸ್ವಾರ್ಥ ಪ್ರಧಾನ ಪ್ರೇಮ : ಬಣ್ಣದ ಹಸೆಮಣೆ
********************************************
ಜಯವಂತಿ ತನ್ನ ತಾಳಕ್ಕೆ ತಕ್ಕದಾಗಿ ಕುಣಿಯುವ ಹುಡುಗ ಚಂದ್ರು ಎಂದು ಆತನನ್ನು ಪ್ರೇಮಿಸಿದರೆ.. ಆತನ ತಾಯಿ ಅಚ್ಚಮ್ಮ ಸಂಪಾದಿಸುವ ಸೊಸೆ ಎಂದೂ, ಚಂದ್ರು ತನ್ನ ಬಡತನ ಕರಗಲು ಜಯವಂತಿ ನೆರವಾಗುತ್ತಾಳೆಂದು.. ಪ್ರೇಮಿಸಿ ಒಪ್ಪಿ ನಿಶ್ಚಿತಾರ್ಥವೂ ಆಯಿತಾದರೂ.. ಅದು 'ಬಣ್ಣದ ಹಸೆಮಣೆ'. ಆದರೆ, ಈ ಸ್ವಾರ್ಥದಿಂದ ಮೂಡಿದ ಪ್ರೇಮ ಮುರಿದು ಬಿದ್ದರೂ.. ನಂತರ ನಡೆದ ಘಟನೆಗಳು ಹಾಗೂ ಮೋಸದಿಂದ ಉಂಟಾದ ಅರಿವಿನಿಂದ ಹಳೆಯ ಪ್ರೇಮವನ್ನೇ ಮುಂದುವರಿಸಿ, ಪರಿವರ್ತನೆಯಾಗಿ ಬದುಕಿದರೆ ಬದುಕು ಹಸನಾಗುತ್ತದೆ ಎಂದು ಕಂಡುಕೊಂಡವರು. ಸ್ವಾರ್ಥದಿಂದ ಸ್ವಾರ್ಥರಹಿತ ಪ್ರೇಮದತ್ತ ಒಲವು ತೋರಿದವರು.
ಅಂತ್ಯವಿಲ್ಲದ ನಿಸ್ವಾರ್ಥ ಪ್ರೇಮ ಹಾಗೂ ರಾಧಾ-ಮೋಹನರಂತಹಾ ಪ್ರೇಮಿಗಳು : ಎಂದೋ ಕಟ್ಟಿದ ಪುಷ್ಪಮಾಲೆ
********************************************
ಅನುರಾಧ ಹಾಗೂ ಮನಮೋಹನರ ಪ್ರೇಮ ಈ ಕಾದಂಬರಿಯಲ್ಲಿ ರಾಧಾ-ಮೋಹನರ ಪ್ರೇಮದಂತೆಯೇ.. ಪ್ರೇಮಕ್ಕಾಗಿ ಪರಿತಪಿಸಿ ಅಷ್ಟು ವರ್ಷ ಕಾದ ಪ್ರೇಮಿಗಳಿಬ್ಬರ ಪ್ರೇಮ ಸಾರ್ಥಕವಾದ ಪರಿ ಕಾಡುತ್ತದೆ. ಅನುರಾಧ ಮನಮೋಹನರು ಪರಸ್ಪರ ಪ್ರೀತಿಸಿದರೂ.. ಪರಿಸ್ಥಿತಿಯ ಕೈಗೊಂಬೆಯಾಗಿ ಇಬ್ಬರೂ ದೂರವಾಗಿ ಮತ್ತೊಂದು ವಿವಾಹವಾಗುತ್ತಾನೆ. ಆಕೆಗೆ ಮನಮೋಹನನ ಪ್ರೇಮದ ಕುರಿತು ತಿಳಿದಿದ್ದರೂ ಪೂರ್ಣ ತಿಳಿದಿರಲಿಲ್ಲ. ಆದರೆ, ಇವರಿಬ್ಬರ ನಿಷ್ಕಲ್ಮಶ ಪ್ರೇಮದ ಕುರಿತು ತಿಳಿದಾಗ.. ಆಕೆ ಅನುರಾಧಾಳನ್ನು ತಮ್ಮೊಡನೆ ಇರುವಂತೆ ಕೇಳಿಕೊಂಡರೂ ಆಕೆ ಒಪ್ಪುವುದಿಲ್ಲ. ತನ್ನ ಒಡಲಿನ ಕುಡಿಯನ್ನು ಅವರ ಕೈಗಿತ್ತು ಅವರ ಮಧ್ಯದಲ್ಲಿ ತಾನು ಬರಲಾರೆನೆಂದು ಸ್ವಾರ್ಥವಿಲ್ಲದಂತೆ ತೊರೆದು ಹೊರಡುವ ನಿಸ್ವಾರ್ಥ ಪ್ರೇಮಿ ಅನುರಾಧ. 'ಎಂದೋ ಕಟ್ಟಿದ ಪುಷ್ಪಮಾಲೆ'ಯನ್ನು ಕಾದು ತನ್ನ ಪ್ರೇಮಿಗೆ ಅರ್ಪಿಸಿದ ಪರಿ ಹಾಗೂ ಅಂತ್ಯ ಕಾಡುತ್ತದೆ.
ಮಧುರವಾದ, ಮೋಸವಿಲ್ಲದ ಪ್ರೇಮ, ತಂದೆ-ಮಗಳ ಬಾಂಧವ್ಯ, ಉಸಿರುಗಟ್ಟಿಸುವ ಪ್ರೇಮ/ ಪ್ರೇಮದಲ್ಲಿನ ಪೊಸೆಸ್ಸಿವ್ ನೆಸ್, ತಾಯಿಗೆ ಮಗನ ಮೇಲಿನ ಕಾಳಜಿಯುಕ್ತ ವಾತ್ಸಲ್ಯ : ಅಮರ ಪ್ರೇಮದ ಮಧು
********************************************
ರಾಜಸಿಂಹ ಜಯಶ್ರೀಯನ್ನು ಪ್ರೇಮಿಸಿ ವಿವಾಹವಾದವರೂ ನಂತರ ಅದಕ್ಕಾಗಿ ಪರಿತಪಿಸುತ್ತಾನೆ. ಆದರೆ, ತನ್ನ ಮಗಳು ಚಿನ್ನಿಯನ್ನು ಕಂಡು ಎಲ್ಲವನ್ನೂ ಮರೆಯುತ್ತಿರುತ್ತಾನೆ ರಾಜಸಿಂಹ. ಆದರೆ, ಜಯಶ್ರೀಗೆ ಆಕೆಯ ಪ್ರೇಮದ ಹಾಗೂ ಗಂಡನ ಕುರಿತ ಪೊಸೆಸ್ಸಿವ್ ನೆಸ್ ಹೇಗಿರುತ್ತದೆಂದರೆ, ಆತ ಮಗಳ ಬಳಿಯೂ ಪ್ರೇಮದಿಂದಿರುವುದನ್ನು ಸಹಿಸಲಾರದೆ ಅವರಿಬ್ಬರನ್ನೂ ದೂರ ಮಾಡುತ್ತಾಳೆ.
ಮಗನ ಸಂಸಾರದ ಸರಿಗಮ ಹಳಿ ತಪ್ಪಿರುವುದನ್ನು ಕಂಡ ಆತನ ತಾಯಿ.. ಆತನೇ ತನ್ನ ಬಳಿ ಸೇರಿಸಿದ್ದ ಮಧುಮತಿಯನ್ನು ವಿವಾಹ ಮಾಡುತ್ತಾಳೆ. ಮಧುಮತಿ ರಾಜಸಿಂಹನನ್ನು ವಿವಾಹವಾದ ನಂತರ ಜಯಶ್ರೀಗೆ ತಪ್ಪಿನ ಅರಿವಾಗಿ ಮನಃಪರಿವರ್ತನೆಯಾಗುತ್ತದೆ. ಮಧುಮತಿ ಈ ವಿವಾಹಕ್ಕೆ ಅರ್ಥವೇ ಇಲ್ಲವೆಂದುಕೊಂಡು ಬೇರೆಯ ವಿವಾಹವಾಗಬಹುದಾಗಿದ್ದರೂ.. ಹಾಗೆ ಮಾಡದೆ ನಿಷ್ಕಾಮ, ನಿಷ್ಕಲ್ಮಶ ಪ್ರೇಮವನ್ನು ಉಳಿಸಿಕೊಂಡು ಎತ್ತರಕ್ಕೇರುತ್ತಾಳೆ.
ಎಷ್ಟೇ ಪ್ರೇಮವಿದ್ದರೂ.. ಅವರವರಿಗೆ ಅವರವರತನವನ್ನು ಉಳಿಸಿಕೊಳ್ಳುವಷ್ಟು ಸ್ಪೇಸ್ ಇರಬೇಕು. ಆಗಲಷ್ಟೇ ಪ್ರೇಮ ಉಸಿರುಗಟ್ಟಿಸಲಾರದು.
ನಾಟಕದ ಪ್ರೇಮ ಹಾಗೂ ಸೌಂದರ್ಯಪ್ರಧಾನ ಆಕರ್ಷಣೆ : ಕನಸಿನ ಮಧುಚಂದ್ರ
********************************************
ಹರೀಶನಿಗೆ ತನ್ನ ಸೋದರತ್ತೆಯ ಮಕ್ಕಳಾದ ಲಕ್ಷ್ಮಿ ಹಾಗೂ ಸಂಗೀತ ಇಬ್ಬರ ಮೇಲೂ ತೀರಾ ಒಲವೇನೂ ಇರಲಿಲ್ಲ. ಸಂಗೀತಾಳಲ್ಲಿ ಹಣದ ಆಕರ್ಷಣೆ ಇದ್ದರೆ, ಲಕ್ಷ್ಮಿಯಲ್ಲಿ ರೂಪದ ಆಕರ್ಷಣೆಯಿತ್ತು. ಆದರೆ, ಸಂಗೀತ ಮಾಡಿದ ಕುಟಿಲತೆಯಿಂದ ಆತ ಲಕ್ಷ್ಮಿಯನ್ನು ಪ್ರೇಮಿಸುವಂತೆ ನಾಟಕ ಮಾಡಿದರೂ.. ಆಕೆ ಈತನ ಬಲೆಗೆ ಬೀಳದೆ ತನ್ನ ರೂಪವನ್ನು ಮೆಚ್ಚಿ ಪ್ರೇಮಿಸಿದವರ ಜೊತೆಗೆ ವಿವಾಹವಾಗುತ್ತದೆ. ನಾಟಕೀಯ ಪ್ರೇಮದ ಬಲೆ ಬೀಸುವವರ ಕುಟಿಲತೆಯನ್ನು ಗುರುತಿಸುವ, ಧಿಕ್ಕರಿಸುವ ಧೈರ್ಯ ಹೆಣ್ಣುಮಕ್ಕಳಿಗೆ ಬಂದಾಗಲಷ್ಟೇ ಅಂತಹಾ ಮೋಸದಿಂದ ಪಾರಾಗಿ ತಮ್ಮ ನಿಜವಾದ ಪ್ರೇಮಿಯನ್ನು ಪಡೆದುಕೊಳ್ಳಬಹುದು.
ಅತ್ತೆ ಸೊಸೆಯನ್ನು ಮಗಳಂತೆ ಕಾಣುವ ವಾತ್ಸಲ್ಯ : ಒಲಿದು ಬಂದ ಸಿರಿ
********************************************
ತಮ್ಮ ಮಗ ಶ್ರೀಧರನಿಗೆ ಒಳ್ಳೆಯ ರೂಪವಂತ ಹೆಣ್ಣನ್ನೇ ತರಬೇಕೆಂದು ಆಸೆ ಇಟ್ಟುಕೊಂಡಿದ್ದ ಸಾವಿತ್ರಮ್ಮ ಪದ್ಮಿನಿಯನ್ನು ತಮ್ಮ ಸ್ವಂತ ಮಗಳಂತೆಯೇ ಕಾಣುತ್ತಾರೆ. ಆದರೆ, ಲಲಿತಮ್ಮನವರ ದುರ್ಬೋಧನೆಯಿಂದ ಆ ಪ್ರೇಮವನ್ನು ಸರಿಯಾಗಿ ಮನದಟ್ಟು ಮಾಡಿಕೊಳ್ಳದೆ ಅಲ್ಲಿಂದ ಪದ್ಮಿನಿ ಹೊರ ನಡೆದರೂ.. ಹಂತ-ಹಂತವಾಗಿ ಅತ್ತೆಯ ತಾಯಿಯ ಪ್ರೀತಿ, ಕಾಳಜಿ ಅರ್ಥವಾಗುತ್ತದೆ. ಇಂತಹಾ ತಾಯಿಯಂತಹ ಅತ್ತೆಯನ್ನು ಪಡೆಯುವ ಮಗಳಂತಹಾ ಸೊಸೆಯ ಪ್ರೇಮ ಬಾಂಧವ್ಯ ಅಪರೂಪವೇ..
ದುಷ್ಯಂತ ಶಕುಂತಲೆಯನ್ನು ನೆನಪಿಸುವ ಪ್ರೇಮ : ಅದೃಷ್ಟ ತಾರೆ
********************************************
ಈ ಕಾದಂಬರಿಯ ನಾಯಕಿಯ ಹೆಸರು ಶಕುಂತಲಾ. ಆದರೆ, ಆಕೆಯ ಪ್ರೇಮಿಯ ಹೆಸರು ದುಷ್ಯಂತನಲ್ಲ.. ಶ್ರೀಧರ. ತನ್ನ ಪಕ್ಕದ ಮನೆಯ ಅನುಸೂಯಳ ಬಳಿ ಬರುತ್ತಿದ್ದ ಶಕುಂತಲಾಳ ಮುಗ್ಧತೆಗೆ ಮನಸೋತ ಆತ ಪ್ರೇಮಿಸಿ ಆಕೆಯನ್ನು ನಂಬಿಸುತ್ತಾನೆ. ಇನ್ನೇನು ಈ ಪ್ರೇಮವನ್ನು ಆತ ಮರೆತು ಬೇರೆಯ ಹಾದಿಯನ್ನು ಹಿಡಿದನಾ ಎನ್ನುವಷ್ಟರಲ್ಲಿ.. ಆತ ಮಾತು ಕೊಟ್ಟಂತೆ ಆಕೆಯ ಪ್ರೇಮಕ್ಕೆ ಬೆಲೆಕೊಟ್ಟು ಮಲತಾಯಿಯ ಸಂಚಿಗೆ ಒಳಗಾಗದೆ, ಶಕುಂತಲಾಳ ಪ್ರೇಮ ಹಾಗೂ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರೇಮಿಯಾಗುತ್ತಾನೆ. ಹೆಣ್ಣುಮಕ್ಕಳ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳುವ ಹಲವಾರು ಪ್ರೇಮಿಗಳ ನಡುವೆ ಈ ಪ್ರೇಮ ವಿಭಿನ್ನವಾಗಿ ನಿಲ್ಲುತ್ತದೆ.
ದ್ವೇಷ, ತಿರಸ್ಕಾರವನ್ನು ಮೀರಿ ಹುಟ್ಟಿದ ಪ್ರೇಮ : ಸುವರ್ಣ ಸೇತುವೆ
********************************************
ಚಂಪಾರಾಣಿಯ ಅಣ್ಣ ರಾಜಗೋಪಾಲ್ ತನ್ನ ತಂಗಿಯ ಶಿಕ್ಷಕಿಯಾದ ಸರೋಜಿನಿಯ ಸ್ವಾಭಿಮಾನವನ್ನು ಮೊದಲಿಗೆ ತಪ್ಪು ತಿಳಿದು ಆಕೆಯನ್ನು ಹಂತ-ಹಂತವಾಗಿ ದ್ವೇಷಿಸುತ್ತಿದ್ದವನು ಕ್ರಮೇಣ ಆಕೆಯ ಸದ್ಗುಣಗಳಿಗೆ, ಪ್ರತಿಭೆ ಹಾಗೂ ಆಕೆ ತನ್ನ ತಂಗಿಯನ್ನು ಕಾಪಾಡಿದ ಗುಣಕ್ಕೆ ಮನಸೋತು ಅಂತಸ್ತನ್ನೂ ಲೆಕ್ಕಿಸದೆ, ಆಕೆಯನ್ನು ಪ್ರೇಮಿಸುವ ಪರಿ ಮುಸುಕಿನೊಳಗಿದ್ದಂತೆ ಚಿತ್ರಿತವಾದರೂ.. ಆ ಪ್ರೇಮಕ್ಕೆ ಆತ ಕೊಡುವ ಬೆಲೆ ಅಪಾರವಾದದ್ದು. ನಿಜವಾದ ಪ್ರೇಮ ಅರಳುವುದು ಹೀಗೆಯೇ ಅಲ್ಲವಾ..?? ತಪ್ಪು ತಿಳುವಳಿಕೆಗಳು ದೂರಾಗಿ.. ಅರಳುವ ಪ್ರೇಮ, ಮತ್ತೊಬ್ಬರ ಬದುಕಿಗೆ ಆಸರೆಯಾಗುವ ಪರಿ, ಪ್ರೇಮಕ್ಕೂ ಒಂದು ಸಾರ್ಥಕತೆಯನ್ನು ತಂದುಕೊಟ್ಟಿದೆ.
ಕೌಟುಂಬಿಕ ಪ್ರೇಮ ಹಾಗೂ ಸಮಗ್ರ ಪ್ರೇಮ : ಒಲವಿನ ಪೂಜೆ
********************************************
ಪ್ರೀತಿ-ಪ್ರೇಮದ ಪರಿಧಿ ವಿಶಾಲವಾಗಿ ಸಮಗ್ರ ಸಂಸಾರಕ್ಕೆ ಒಲವಿನ ಪೂಜೆಯಂತಾದಾಗ ಸಂಸಾರ ನಂದನವನವಾಗುತ್ತದೆ ಎನ್ನುವ ಆಶಯವಿರುವ ಕಾದಂಬರಿ ಒಲವಿನ ಪೂಜೆ. ಸರೋಜಾ ಮೊದಲಿಗೆ ಶ್ರೀಕಾಂತನನ್ನು ಪ್ರೇಮಿಸಿ ವಿವಾಹವಾಗದಿದ್ದರೂ.. ಆತನ ತಾಯಿ ಕುಮದಮ್ಮ ಆತನನ್ನು ಹೊಗಳುವ ಪರಿಗೆ ಮನಸ್ಸಿನಲ್ಲೆಲ್ಲೂ ಮೆಚ್ಚಿದ್ದಳು. ಗಂಡನನ್ನು ಪ್ರೇಮದಿಂದಲೇ ತಿದ್ದುವ ಪರಿ, ಹಠಕ್ಕೆ ಬಿದ್ದು ಜಿದ್ದು ಸಾಧಿಸುವ ಕುಮುದಮ್ಮನ ಕುರಿತ ವಾತ್ಸಲ್ಯ, ಮಾವನವರಾದ ಶ್ರೀನಿವಾಸರಾಯರ ಬದುಕಿನಲ್ಲಿ, ಆರೋಗ್ಯದಲ್ಲಿ ತಂದ ಬದಲಾವಣೆ ಎಲ್ಲವೂ ಅಭಿನಂದನೀಯ. ಇಂತಹವರೊಬ್ಬರು ಮನೆಯಲ್ಲಿದ್ದರೆ ಪ್ರತಿ ಮನೆಯೂ ನಂದನವನವೇ ಆಗುತ್ತದೆ. ಅಷ್ಟೇ ಅಲ್ಲದೆ, ತನ್ನ ಕಾಯಕವನ್ನು ಪ್ರೇಮದಿಂದಲೇ ಮಾಡುತ್ತಾಳೆ. ಪ್ರತಿಯೊಬ್ಬರನ್ನೂ ಪ್ರೇಮದಿಂದಲೇ ತಿದ್ದುವ ಪರಿ ಅನನ್ಯವಾದುದು.
ಋಣಾನುಬಂಧದ ಸಾರ್ಥಕ ಪ್ರೇಮ : ಸಂಜೆ ಅರಳಿದ ಹೂವು
********************************************
ಲಲಿತಾ ಆಕೆಯ ತಂದೆ-ತಾಯಿಯರ ಬಾಳ ಸಂಜೆಯಲ್ಲಿ ಅರಳಿದ ಹೂವು. ಆಕೆಯ ವಿವಾಹವಾಗದೇ ಅಣ್ಣಂದಿರ ಸುಪರ್ದಿಯಲ್ಲಿದ್ದಾಗ ಡಾಕ್ಟರ್ ವಸುಂಧರಾ ಪರಿಚಯವಾಗಿ, ಆಕೆಯ ಚಿಕ್ಕಪ್ಪನ ಮಗ ಚಂದ್ರಧರನನ್ನು ವಿವಾಹವಾಗುವ ಪ್ರಸ್ತಾಪ ಬರುತ್ತದೆ. ಆದರೆ, ಆತನ ಅಕ್ಕನ ಕುರಿತು ಆತನಿಗೆ ಗೊತ್ತಿದ್ದರಿಂದ ಅವಳನ್ನು ತಪ್ಪು ತಿಳಿಯುತ್ತಾನೆ. ಆದರೆ, ಲಲಿತಾಳ ನಿಜ ವಿಚಾರ ಹಾಗೂ ನೈಜ ಮನಸ್ಸು ತಿಳಿದ ನಂತರ ಆಕೆಯ ಪ್ರೇಮ ಅರಿವಾಗಿ ಎಷ್ಟೋ ಕಾಲದ ನಂತರವೂ ಅವರಿಬ್ಬರೂ ಒಂದಾಗುತ್ತಾರೆ. ಪ್ರೇಮಕ್ಕೆ ಋಣಾನುಬಂಧವೂ ಇರಬೇಕೆಂಬುದು ಸುಳ್ಳಲ್ಲ.
ಕೆಡುಕು ಬಯಸಿದವರಿಗೂ ಪ್ರೇಮವನ್ನೇ ಹಂಚಿದವಳು : ಅಪೂರ್ವ ಬಳುವಳಿ
********************************************
ಶರ್ಮಿಲಾ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದವಳು. ತನ್ನ ತಾಯಿಯ ತಂಗಿಯ ಮನೆಯಲ್ಲಿದ್ದವಳು. ಆದರೆ, ಚಿಕ್ಕಮ್ಮನ ಹಾಗೂ ಆಕೆಯ ಮಕ್ಕಳ ಕುತಂತ್ರಕ್ಕೆ ಅಕ್ಕ ಶಾಂತ ಕುಮ್ಮಕ್ಕು ನೀಡಿದರೂ.. ಮನೆಯಲ್ಲಿದ್ದಾಗ ತನ್ನ ಅಕ್ಕ-ತಂಗಿಯರಾದ ಶಾಂತ ಹಾಗೂ ಶಮಂತ ಏನೇ ಮಾಡಿದರೂ.. ಅದೆಲ್ಲವನ್ನೂ ಮರೆತು ಅವರೆಲ್ಲರಿಗೂ ಸುಂದರವಾದ ಬದುಕು ರೂಪಿಸಿಕೊಟ್ಟವಳು. ಕೆಡುಕು ಬಯಸಿದವರಿಗೂ ಪ್ರೇಮವನ್ನೇ ಹಂಚಿ ಅವರ ಪ್ರೇಮ ಸಫಲವಾಗುವಂತೆ, ಚೆಂದದ ಬದುಕು ರೂಪಿಸಿ ಕೊಟ್ಟವಳು. ಚಿಕ್ಕವಳಾದರೂ ವಯಸ್ಸಿನಿಂದ ಚಿಕ್ಕವಳಾದರೂ ಪ್ರೇಮ ಗುಣದಿಂದ ಹಿರಿಯಳಾಗಿಯೇ ಕಾಣುತ್ತಾಳೆ ಶರ್ಮಿಲಾ.
ಸ್ವಭಾವದಿಂದ ಸೂಜಿಗಲ್ಲಿನಂತೆ ಸೆಳೆದ ಪ್ರೇಮಿ : ಅನುರಾಗದ ಅಂತಃಪುರ
********************************************
ಆಶಾಳಿಗೆ ಹಣದ ದರ್ಪದಿಂದ ಇದ್ದ ಪೂರ್ವಗ್ರಹದ ಮನಸ್ಸಿನಿಂದ ಆಕೆ ರಾಜೇಂದ್ರನನ್ನು ಅಕಾರಣವಾಗಿ ದ್ವೇಷಿಸುತ್ತಲೇ ಇರುತ್ತಾಳೆ. ಆದರೆ, ರಾಜೇಂದ್ರನನ್ನೇ ವಿವಾಹವಾಗುವ ಆಕೆ ಆತನನ್ನು ಮದುವೆಯಾಗಿ ಶಿಕ್ಷೆ ನೀಡಿದ್ದೇನೆ ಎಂದುಕೊಳ್ಳುತ್ತಾಳಾದರೂ.. ಆಕೆ ಶಿಕ್ಷೆ ಕೊಟ್ಟುಕೊಂಡದ್ದು ಅವಳಿಗೂ ಹೌದು. ಆದರೆ, ದಿನ ಕಳೆಯುತ್ತಿದ್ದಂತೆ ರಾಜೇಂದ್ರನ ಸ್ವಾಭಿಮಾನದ ಸ್ವಭಾವದ ಅರಿವಾಗುತ್ತಾ.. ನಿಷ್ಕಲ್ಮಶವಾದ ಹಾಗೂ ಅಂಕೆ ಮೀರದ ತನ್ನ ಶಿಷ್ಟ ನಡವಳಿಕೆಯಿಂದಾಗಿ ಆಶಾ ಕೂಡಾ ಬದಲಾಗುತ್ತಾಳೆ. ಸರಿಯಾದ ಸಂಗಾತಿ ಸಿಕ್ಕರೆ ದ್ವೇಷವೂ ಪ್ರೇಮವಾಗಿ ಪರಿವರ್ತಿತವಾಗಬಲ್ಲದು.
ಬಯಸಿದ ಪ್ರೇಮ ಬಳಿ ಬಂದಾಗ : ಕನಸಿನ ಕಣ್ಮಣಿ
********************************************
ಸರಳಳನ್ನು ಡಾಕ್ಟರ್ ರಾಜೇಶ್ ಪ್ರೇಮಿಸುತ್ತಿದ್ದರೂ.. ಆತನು ತನ್ನ ತಾಯಿಯಂತೆಯೇ ಹಣದ ಮದ ಹಾಗೂ ದರ್ಪವುಳ್ಳವನು ಹಾಗೂ ಹೆಣ್ಣನ್ನು ಸಮಯಕ್ಕೆ ತಕ್ಕಂತೆ ಬಳಸಿಕೊಳ್ಳುವವನು ಎಂದು ತಪ್ಪು ತಿಳಿದುಕೊಂಡಿದ್ದ ಸರಳ ತನ್ನ ಕುರಿತು ತಪ್ಪು ಭಾವನೆ ಬರುವಂತೆ ನಡೆದುಕೊಳ್ಳುತ್ತಾಳೆ. ಆತನ ಪ್ರೇಮಕ್ಕೆ ಕುಮ್ಮಕ್ಕು ನೀಡದೇ, ತಾನು ಹಣಕ್ಕೆ ಹಪಹಪಿಸುವವಳು ಎಂಬ ಭಾವನೆ ಬರುವಂತೆ ಮಾಡುತ್ತಾಳೆ. ಆದರೆ, ನೈಜಪ್ರೇಮ ಎಲ್ಲಿ ಯಾರಿಗೆ ಸೇರಬೇಕೋ ಅವರಿಗೇ ಸೇರುತ್ತದೆ ಎಂಬಂತೆ ಡಾಕ್ಟರ್ ರಾಜೇಶ್ ತನ್ನ ಕನಸಿನ ಕಣ್ಮಣಿಯಾದ ಸರಳಳನ್ನು ತನ್ನವಳನ್ನಾಗಿಸಿಕೊಳ್ಳುತ್ತಾನೆ.
ಸೋತು ಗೆದ್ದ ಪ್ರೇಮ : ವಿಜಯದ ಮೆಟ್ಟಿಲು
********************************************
ಸುರೇಶ್ ತನ್ನ ವಯಸ್ಸಿಗಿಂತ ಹಿರಿಯರಾದ ವಸುಧಾಳನ್ನು ವಿವಾಹವಾಗಲು ಒಪ್ಪಿದ್ದರೂ.. ವಸುಧಾಳಿಗೆ ಆತ ತನ್ನನ್ನು ಒಪ್ಪಿದ್ದು ತನ್ನ ಶ್ರೀಮಂತಿಕೆಯಿಂದ. ತಾನೇ ಮೇಲು ಎನ್ನುವ ಸಣ್ಣ ಅಹಂಭಾವವೂ ಇರುತ್ತದೆ. ಈ ನಂಬಿಕೆ ಬಲವಾಗಿದ್ದಾಗ ಆತನ ಕುರಿತಾದ ಒಡಕು ಮಾತುಗಳು ಹಾಗೂ ಆತನ ನಡವಳಿಕೆಗಳು ಆಕೆಯ ಧೃತಿಗೆಡಿಸುತ್ತದೆ. ಆದರೆ, ಸುರೇಶನ ನಿಜ ಮನಸ್ಥಿತಿಯ ಅರಿವಾದ ನಂತರ ತಾನು ತನ್ನ ತಪ್ಪು ತಿಳುವಳಿಕೆ ಹಾಗೂ ಅಹಂಕಾರವನ್ನು ಬಿಟ್ಟು, ಸಂಸಾರದಲ್ಲಿ ತಾನೇ ಸೋತು, ಪ್ರೇಮವನ್ನು ಗೆಲ್ಲಿಸಿ ಅವರಿಬ್ಬರ ನಡುವಿನ ಸಂಸಾರವನ್ನು ಮತ್ತಷ್ಟು ಚೆಂದವಾಗಿಸಿಕೊಳ್ಳುತ್ತಾಳೆ. ಪ್ರೇಮ ಗೆಲ್ಲಲು ಯಾರಾದರೊಬ್ಬರು ಸೋಲಲೇಬೇಕು. ಅದಕ್ಕೆ ಅವರು-ಇವರು ಎನ್ನುವ ಪ್ರತಿಷ್ಠೆಯನ್ನು ಬಿಟ್ಟಾಗಲಷ್ಟೇ ಸಾಧ್ಯ.
ಹುಡುಕುತ್ತಾ ಹೋದರೆ.. ಇಂತಹಾ ಹಲವಾರು ಒಲವಿನ ಮಗ್ಗುಲುಗಳು ಹೆಚ್.ಜಿ ರಾಧಾದೇವಿಯವರ ಕಾದಂಬರಿಗಳಲ್ಲಿ ಸಿಗುತ್ತಾ ಹೋಗುತ್ತದೆ. ಒಂದು ಕಾದಂಬರಿ ಕೇವಲ ಕೌಟುಂಬಿಕ ಅಥವಾ ಸಾಮಾಜಿಕ ಮಾತ್ರವಲ್ಲದೆ, ಅದರಲ್ಲಿ ವಿವಿಧ ಭಾವಗಳನ್ನೂ.. ಪ್ರೇಮವನ್ನೂ ಬಿಂಬಿಸುತ್ತದೆ. ಒಲವೆಂದರೆ, ಕೇವಲ ಗಂಡು-ಹೆಣ್ಣಿನ ನಡುವಿನ ಭಾವನೆಯಲ್ಲ ಒಲವೆಂದರೆ.. ಎಲ್ಲಾ ಕಾಲಕ್ಕೂ ಸಲ್ಲುವ ಸಾರ್ವತ್ರಿಕವಾದ ಭಾವ. ಒಲವೆಂದರೆ, ವ್ಯಾಖ್ಯಾನಕ್ಕೆ ಮೀರಿದ್ದು, ತರ್ಕಕ್ಕೆ ನಿಲುಕದ್ದು ಹಾಗೂ ಅರಿತಷ್ಟು ಅರಿಯುವುದಿದೆ ಎನ್ನುವ ಅರಿವು ಮೂಡಿಸುವುದು.
ಒಲವು ಇಷ್ಟೇ ಅಲ್ಲ.. ಅನನ್ಯ ಹಾಗೂ ಅನೂಹ್ಯವಾದ ಭಾವ. ಬದುಕಿನ ಕುರಿತು ಹಾಗೂ ಓದಿನ ಕುರಿತು ಹುಟ್ಟುವ ಒಲವು ಎಂದೆಂದೂ ಮುಗಿಯದಿರಲಿ ಎನ್ನುವ ಹಂಬಲ ನನ್ನದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ