ಬುಧವಾರ, ಏಪ್ರಿಲ್ 15, 2026

ನೆಲದಾಸೆಯ ನಕ್ಷತ್ರಗಳು (ಪುಸ್ತಕ ಯಾನ - 183)


ಪುಸ್ತಕದ ಶೀರ್ಷಿಕೆ : ನೆಲದಾಸೆಯ ನಕ್ಷತ್ರಗಳು

ಲೇಖಕರು : ಎಂ. ಆರ್. ಕಮಲ 

ಪ್ರಕಾಶಕರು : ಕಥನ ಪ್ರಕಾಶನ

ಪ್ರಥಮ ಮುದ್ರಣ : 2021

ಪುಟಗಳು : 72

ಬೆಲೆ : 70 ರೂ.


ಈ ವಿಶಿಷ್ಟ ಸಂಕಲನವನ್ನು ಕೇವಲ ಗದ್ಯವೆಂದೋ ಅಥವಾ ಪದ್ಯವೆಂದೋ ವಿಂಗಡಿಸಲಾಗದು. 'ಗದ್ಯಗಂಧಿ' ಬರಹಗಳು ಎಂದು ಹೇಳಬಹುದು. ಇಲ್ಲಿನ ಕೆಲ ಬರಹಗಳನ್ನು ಕಮಲಾ ಮೇಡಂ ಅವರ ಫೇಸ್ಬುಕ್ ವಾಲ್ ನಲ್ಲಿ ಓದಿದ್ದೆನಾದರೂ.. ಈ ಸಂಕಲನವನ್ನು ಓದುವಾಗ ಇಲ್ಲಿನ ರೂಪಕಗಳು ಕೊಟ್ಟ ಓದಿನ ಖುಷಿ ವಿಭಿನ್ನವಾದದ್ದು. ಇಲ್ಲಿ 'ನಾನು' ಹಾಗೂ 'ಅವಳು' ಎನ್ನುವ ಸಾರ್ವತ್ರಿಕ ಪ್ರತಿಮೆಗಳು ಆ ಅನುಭವವನ್ನು ನಮ್ಮದೂ ಆಗಿಸುತ್ತವೆ. 'ವಿಸ್ಮೃತಿ ಸಮಯದ ರೂಪಕ' ಎಂಬ ಅಡಿಬರಹವಿದ್ದರೂ.. ನಮ್ಮೊಳಗಿನ ಹಲವಾರು ನೆನಪುಗಳನ್ನು ಬಡಿದೆಬ್ಬಿಸುತ್ತವೆ.


"ನಿಮ್ಮನ್ನು ಪ್ರೀತಿಸಲಾರೆ, ಪ್ರೀತಿಸದಿರಲಾರೆ !" ಎಂಬ ಮೊದಲ ಶೀರ್ಷಿಕೆಯೇ ತನ್ನ ಒಳಾರ್ಥದಿಂದ ಆಕರ್ಷಿಸುತ್ತದೆ. ಬಾಲ್ಯದಿಂದ ಇಂದಿನವರೆಗೂ ಕಂಡದ್ದನ್ನೆಲ್ಲಾ ವಿಭಿನ್ನವಾಗಿ ನೆನಪಿಸಿಕೊಳ್ಳುವ ಪರಿ ಅನನ್ಯ. ಇಂತಹಾ ಹಲವಾರು ಚಿತ್ರಣಗಳು ಇಲ್ಲಿ ಕಂಡುಬರುತ್ತವೆ. ನನ್ನನ್ನು ಸೆಳೆದ ಈ ಸಂಕಲನದ ಕೆಲ ಸಾಲುಗಳನ್ನು ನನಗೆ ದಕ್ಕಿದಂತೆ ನಿಮ್ಮ ಮುಂದಿಡುತ್ತಾ ಹೋಗುತ್ತೇನೆ. 


ಹೊಲೆಯಲಾಗುವುದು ಕೇವಲ ಬಟ್ಟೆಗಳನ್ನು ಮಾತ್ರವೇ..?? ಖಂಡಿತವಾಗಿಯೂ ಇಲ್ಲ. ಹಾಗೆಂದು, ಎಲ್ಲರೂ ಹೊಲೆಯುವುದನ್ನು ಮೈಗೂಡಿಸಿಕೊಳ್ಳುವುದೂ ಸಾಧ್ಯವಿಲ್ಲ. ಅದರ ಗುಟ್ಟು ಗೊತ್ತಿದ್ದವರಷ್ಟೇ ಅದನ್ನು ವಿನ್ಯಾಸ ಮಾಡಲು ಸಾಧ್ಯ ಎನ್ನುತ್ತಾ ಹೀಗೂ ಹೇಳುತ್ತಾರೆ.

'ಅವಳು ಹೊಲಿಯುತ್ತಲೇ ಇದ್ದಾಳೆ. ವಾಸ್ತವದೊಂದಿಗೆ ಕನಸುಗಳನ್ನು, ಭೂತದೊಂದಿಗೆ ವರ್ತಮಾನವನ್ನು, ವಿಸ್ಮೃತಿಗೆ ನೆನಪುಗಳನ್ನು, ಇರುವುದರೊಂದಿಗೆ ಇಲ್ಲದುದನ್ನು !' 


'ಅವಳು-ಅವನು' ಇಬ್ಬರ ಕುರಿತೂ ಹೇಳುತ್ತಾ.. ಕೊನೆಗೆ ಅವರಿಬ್ಬರ ಪಾತ್ರದ ಪಲ್ಲಟಗಳ ಬಗ್ಗೆ ಎಷ್ಟು ಚೆಂದವಾಗಿ ಹೇಳುತ್ತಾರೆಂದರೆ.. ಈ ರೂಪಕಗಳು ಬಹಳವೇ ಅರ್ಥಪೂರ್ಣ ಎನ್ನಿಸಿದವು.

"ಹೀಗೆ ಒಂದು ದಿನ ಇಬ್ಬರೂ ಜೋಳಿಗೆಯೊಳಗಿದ್ದನ್ನು ಸುರಿದರು. ಹಠಕಿರೀಟಿ ಅವನು, ತಲೆತಗ್ಗಿಸಿ ನಿಂತ ಭರತನಾಗಿದ್ದ. ನೆಲದಲ್ಲೆಲ್ಲ ನಕ್ಷತ್ರ ನೆಟ್ಟಿದ್ದವಳು ಆಗಸಕ್ಕೆ ಏರಿ ಬಾಹುಬಲಿಯಾಗಿದ್ದಳು!"


ಮೌನವೆಂದರೆ ಮಾತಿಲ್ಲದ ಧ್ಯಾನಸ್ಥ ಸ್ಥಿತಿ ಮಾತ್ರವೇ ಅಥವಾ ಕೇವಲ ಮಾತನಾಡದೇ ಉಳಿಯುವುದೇ..?? ಮೌನದಲ್ಲಿಯೂ ಹಲವಾರು ಬಗೆಗಳಿವೆ. ಮಾತಲ್ಲಿನ ಬಗೆಗಳು, ನಗು-ಅಳುವಿನ ತರಹೇವಾರಿ ಭಾವಗಳನ್ನು ಗುರುತಿಸಿದಷ್ಟು ಸುಲಭವಲ್ಲ ಮೌನದ ಭಾವವನ್ನು ಗುರುತಿಸುವುದು.

"ಇದು ಎಚ್ಚೆತ್ತ ಮೌನ, ನಿದ್ರಿಸುವ ಮೌನ, ನುಡಿವೆತ್ತ ಮೌನ, ಚಿಗುರಿದ ಮೌನ, ಸೋಜಿಗದ ಮೌನ, ಸುಂದರ ಮೌನ, ಸವಿ ಮೌನ, ಮಾಗಿಯ ಮೌನ, ನಿರ್ಭರ ಮೌನ, ಘನ ಮೌನ, ಜೀವನ್ಮೌನ, ಚಿನ್ಮೌನ ಹೀಗೆ ಕವಿ ಪುತಿನ ಹೇಳುವ 'ಮೌನ ವಿಕಾಸ'ವಲ್ಲವೇ ಅಲ್ಲ." ಎನ್ನುತ್ತಲೇ ಮೌನದ ಚಿಪ್ಪಿನಿಂದ ಹೊರಬರುವ ಹಂಬಲವನ್ನೂ.. ಅದಕ್ಕೆ ಸಿಕ್ಕ ಪ್ರತಿಕ್ರಿಯೆಯನ್ನೂ ಹೇಳುತ್ತಾರೆ.

"ಚಿನ್ಮೌನ ಚಿತ್ತಾದ ಬಗೆಯೇ ? ಅವಳಿಗೀಗ ಮಾತಿನ ಹಂಬಲಿಕೆ. ಎಲ್ಲರೆದೆಯಲ್ಲೂ ಅದೇಕೋ ಅನಂತ ಮೌನ!" ಎನ್ನುವ ವಾಸ್ತವದ ಸ್ಥಿತಿಯನ್ನು ಚಿತ್ರಿಸುತ್ತಾರೆ.


ಬದುಕು ಅಥವಾ ಸಾವು ಎರಡರಲ್ಲೂ ಭಯ ಪಡಿಸುವುದು ಯಾವುದು ಎಂದರೆ ಸಾಮಾನ್ಯವಾಗಿ ಸಾವು ಎನ್ನುತ್ತೇವೆ. ಆದರೆ, ನನಗೆ ಹೆಚ್ಚು ಅನ್ನಿಸುವುದೆಂದರೆ ಭಯಪಡಿಸುವುದು ಬದುಕು. ಸಾವಿನ ಜೊತೆ ಗುದ್ದಾಡುತ್ತಾ ಸೋತರೆ ಸಾವು ಅಪ್ಪಿಕೊಂಡು ಅಲ್ಲಿಗೆ ಸಾವಿನ ತೆಕ್ಕೆ ಸೇರುತ್ತೇವೆ. ಆದರೆ, ಬದುಕಿನಲ್ಲಿ ಪ್ರತಿನಿತ್ಯ ಪ್ರತಿಕ್ಷಣ ಹೋರಾಡುತ್ತಲೇ ಬದುಕಬೇಕು. ಸೋತರೂ.. ಗೆದ್ದರೂ.. ಅವರೊಂದಿಗೇ ನಿತ್ಯ ಪಯಣ. ಪ್ರತಿದಿನ ಸವಾಲುಗಳು. ಅತ್ಯಾಪ್ತರ ಸಾವಿನ ನಂತರದ ಬದುಕು ಇನ್ನೂ ಭಯಪಡಿಸುತ್ತದೆ.

ರೆಕ್ಕೆ ಹೆಜ್ಜೆಯವರ ಬದುಕಿನ ಕುರಿತು ಹೇಳುತ್ತಾ "ಅವರಿಗೀಗ ಅರ್ಥವಾಗಿ ಹೋಗಿದೆ, ಬದುಕಷ್ಟು ಸಾವು ಭಯಪಡಿಸುವುದಿಲ್ಲವೆಂದು!" ಎನ್ನುತ್ತಾರೆ. ಇಲ್ಲಿ ರೆಕ್ಕೆ ಹೆಜ್ಜೆಯವರ ಕುರಿತು ತಿಳಿಯಲು ಓದಿ ನೋಡಿ.


ನಮ್ಮನ್ನು ಸಾಬೀತುಪಡಿಸಿಕೊಳ್ಳಬೇಕಾಗಿಲ್ಲ ಎಂದು ಬಹಿರಂಗವಾಗಿ ಘೋಷಿಸಿಕೊಳ್ಳಲು, ಒಪ್ಪಿಕೊಳ್ಳಲು ಹೊರಡುವವರೆಷ್ಟು ಜನ..?? ಅದನ್ನೂ ಸಾಬೀತು ಪಡಿಸಲೇಬೇಕಲ್ಲ. 'ಬಟಾಬಯಲಲ್ಲಿ ಸಾಬೀತುಪಡಿಸಬೇಕಾಗಿದೆ' ಎಂಬ ಸಂಧಿಗ್ಧಕ್ಕೆ ಸಿಕ್ಕರೇ..??

"ಮಣ್ಣಿಗೂ ಬಣ್ಣ ಕೊಟ್ಟು ಮೂರ್ತಿಗಳಿಗೆ ದೈವತ್ವ ತುಂಬಿದವನು, ನವಿಲುಗರಿಯ ಎಳೆಯಲ್ಲಿ ಕಣ್ಣ ಬಿಡಿಸಿ, ರೂಪ ಕೊಟ್ಟವನು ತನ್ನ ಮಣ್ಣ ಪ್ರೇಮವನ್ನು ಈಗ ಬಟಾಬಯಲಿನಲ್ಲಿ ನಿಂತು ಸಾಬೀತುಪಡಿಸಬೇಕಿದೆ!" 


ಇಂತಹಾ ಹಲವಾರು ರೂಪಕಗಳು, ಹಿಡಿದಿಡುವ ಸಾಲುಗಳು ಸಿಗುತ್ತಾ ಹೋಗುತ್ತವೆ. ಮರೆತ ಎಷ್ಟೋ ಕತೆಗಳನ್ನು ನೆನಪಿಸುತ್ತವೆ. ಅನಾಸಿ ಜೇಡದ ಕತೆ, ಹಂದಿ ಮರಿಗಳು ಮನೆ ಕಟ್ಟಿದ ಕತೆ, ಮಂಗ ಮತ್ತು ಟೋಪಿಯ ಕತೆ.. ಕರಡಿ-ನರಿ ಕೃಷಿ ಮಾಡಿದ ಕತೆ..


ಬಾಲ್ಯದಲ್ಲಿ ಆಡುತ್ತಿದ್ದ 'ಅಪ್ಪೇರುಪ್ಪಿನಕಾಯಿ' ಹಾಗೂ 'ಮಳ್ಳ ವಂದು ಗಿಳ್ಳಿ ಪೋ ಪೋ' ಆಟಗಳನ್ನು ಕಂಡ ಬಗೆ ಅಚ್ಚರಿಯುಟ್ಟಿಸುತ್ತದೆ. 


ಅಜ್ಜಿಯೊಬ್ಬಳು ಮೊಮ್ಮಗುವಿನ ಮೂಲಕ ತನ್ನೊಳಗಿನ ಮಗುತನವನ್ನು ಹೊರಹಾಕುವ ಬಗೆ ಕಂಡು ಅಚ್ಚರಿಯಾಗುತ್ತದೆ. ಸ್ವಯಂಸಂಭ್ರಮೆಯ ಹಾದಿಯಲ್ಲಿರುವವರು, ಬಯಲು ಸೀಮೆಯ ಸೂರ್ಯಸ್ಪಷ್ಟ ಹುಡುಗಿ, ನಮ್ಮನ್ನು ನಿರ್ದೇಶಿಸಬೇಡಿ ಎನ್ನುವವರು, ಹೆಣ್ಣು ಹಾಗೂ ಸಂಕ್ರಾಂತಿಯ ಎಳ್ಳು ಎರಡರ ಹೋಲಿಕೆ ಎಲ್ಲವೂ ಸಿಗುತ್ತವೆ.


ಕಳೆದು ಹೋದ ಬಾಲ್ಯ, ಕಳೆದು ಹೋದ ಅಂಗಳದಿಂದ.. ಮರೆತ ಎಷ್ಟೋ ಸಂಗತಿಗಳು ನೆನಪಾಗುತ್ತವೆ. ಇಂದಿನ ಮನಸ್ಸುಗಳು, ಮನುಷ್ಯರ ನಡುವಿನ ಗೋಡೆ ಎಲ್ಲವನ್ನೂ ದಾಟುವ ಹಂಬಲವಾಗುತ್ತದೆ. 


"ಹಳೆಯ ರೂಪಕಗಳು ಹೊಸದಾಗುವುದು, ಹಳೆಯ ಅನ್ಯಾಯಗಳು ಹೊಸ ನ್ಯಾಯಗಳಾಗುವುದು ಒಂದು ಅಚ್ಚರಿಯೇ ಸರಿ" ಎನ್ನುವ ಲೇಖಕಿ ಹಳೆಯದನ್ನು, ಹೊಸದರ ಜೊತೆಗೆ ತೋರುವ ದೃಷ್ಟಿಕೋನ ಓದುಗರಾದ ನಮಗೆ ಅಚ್ಚರಿಯೇ ಸರಿ.


"ಸಮಾನಾರ್ಥಗಳು 'ವಿರುದ್ದಾರ್ಥ'ಗಳಾಗುವ ವಿಸ್ಮಯದಲ್ಲಿ ವಿವರಣೆಗೆ ಪರದಾಡುತ್ತಿದ್ದಾಳೆ" ಎನ್ನುವ ಮಾತನ್ನು ಕೊಂಚ ಬದಲಾಯಿಸಿಕೊಂಡು ಹೀಗೆ ಹೇಳುತ್ತೇನೆ. ಇಲ್ಲಿ ಯಾವುದನ್ನು ಮಾತ್ರ ಉಲ್ಲೇಖಿಸಲಿ ಹಾಗೂ ಯಾವುದನ್ನು ಬಿಡಲಿ ಎಂಬ ದ್ವಂದ್ವದಲ್ಲಿ ಪರದಾಡುತ್ತಿದ್ದೇನೆ.


ಈ ಪ್ರಯೋಗಶೀಲತೆಯ ಸಂಕಲನ ಬಹಳ ಇಷ್ಟವಾಯಿತು. 'ಗದ್ಯಗಂಧಿ' ಕವಿತೆಗಳ ವಿಸ್ತರಣೆ ಇದು ಎಂದಿದ್ದಾರೆ ಲೇಖಕಿ. ಆ ಪುಸ್ತಕವನ್ನಿನ್ನೂ ಓದಬೇಕಿದೆ. ಅಂದಿನಿಂದ ಇಂದಿನವರೆಗಿನ ಎಲ್ಲವೂ ಹೇಳಿರುವ ಪರಿ ತುಂಬಾ ಸೊಗಸಾಗಿದೆ. ವಿಭಿನ್ನವಾದ ಓದಿನ ಅನುಭವವಾಯಿತು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ