ಡೇಟಾ ಸೆಂಟರ್ ಎಂದರೇನು.. ಸರ್ವರ್ ಎಂದರೇನು ಎಂಬುದನ್ನು ಈಗಾಗಲೇ ಹಿಂದಿನ ಸಂಚಿಕೆ ಓದಿ ತಿಳಿದುಕೊಂಡಿದ್ದೀರಿ. ಆದರೆ, ಒಂದೆರಡು ದಿಗ್ಗಜ ಕಂಪೆನಿಗಳ ಸರ್ವರ್ ಗಳ ಕುರಿತು ಅಚ್ಚರಿಯ ಮಾಹಿತಿಯನ್ನು ತಿಳಿಯೋಣ.
ಯಾರಿಗೆ ಯಾವ ಪ್ರಶ್ನೆ ಕೇಳಿದರೂ ಅವರು ಮೊರೆ ಹೋಗುವುದು ಗೂಗಲ್ ಅನ್ನೇ.. ಹಾಗಾದರೆ ಗೂಗಲ್ ನ ಡೇಟಾ ಸೆಂಟರ್ ನಲ್ಲಿ ಎಷ್ಟು ಸರ್ವರ್ ಗಳಿರಬಹುದು ? ಅಧಿಕೃತವಾಗಿ ಈಗ ಅವರು ಈ ಕುರಿತು ಹೇಳಿಲ್ಲವಾದರೂ 2016 ರ ಜುಲೈನಲ್ಲಿಯೇ 2.5 ಮಿಲಿಯನ್ ಸರ್ವರ್ ಗಳಿದ್ದವು. ಈಗ ಎಷ್ಟು ಹೆಚ್ಚಿರಬಹುದು ಅಲ್ಲವಾ..?? ಗೂಗಲ್ ಗೆ 21 ಡೇಟಾ ಸೆಂಟರ್ ಗಳಿವೆ. ಅದರಲ್ಲಿ ಏಷ್ಯಾದಲ್ಲಿ ಏಳು ಡೇಟಾ ಸೆಂಟರ್ ಗಳಿದ್ದು.. ಅವುಗಳಲ್ಲಿ ಎರಡು ಭಾರತದಲ್ಲಿವೆ. 2019 ರಲ್ಲಿ ಮುಂಬೈಯಲ್ಲಿ ಹಾಗೂ 2021 ರಲ್ಲಿ ನವದೆಹಲಿಯಲ್ಲಿ ಇವುಗಳನ್ನು ಸ್ಥಾಪಿಸಲಾಯಿತು. ಮುಂಬೈ, ನವದೆಹಲಿಯದ್ದು ಎರಡಾದರೆ ಮತ್ತೊಂದನ್ನು 2013 ರಲ್ಲಿ ಸಿಂಗಾಪುರದ ಜುರಾಂಗ್ ವೆಸ್ಟ್ ನಲ್ಲಿ ಸ್ಥಾಪಿಸಲಾಗಿದೆ. ಇನ್ನುಳಿದ ನಾಲ್ಕರಲ್ಲಿ ಮೂರು ತೈವಾನ್ ನಲ್ಲಿಯೇ ಚಂಗುವಾ ಕೌಂಟಿ, ಟೈಟಾನ್ ಸಿಟಿ ಹಾಗೂ ಯುನ್ಲಿನ್ ಕೌಂಟಿ ಎಂಬ ಸ್ಥಳದಲ್ಲಿವೆ. ಮತ್ತೊಂದು ಇಂಡೋನೇಷ್ಯಾದ ಜಕಾರ್ತದಲ್ಲಿದೆ.
ಇನ್ನು ಈಗ ಮೆಟಾ ಎಂದು ಕರೆಸಿಕೊಳ್ಳುವ ಫೇಸ್ಬುಕ್ ಒಡೆತನದಲ್ಲಿ ಒಟ್ಟು 18 ಡೇಟಾ ಸೆಂಟರ್ ಗಳಿದ್ದು ಅವೂ ಸಾಲುತ್ತಿಲ್ಲ. ಅದರಲ್ಲಿ 14 ಯು.ಎಸ್.ಎ ದಲ್ಲಿಯೇ ಇವೆ. ಇನ್ನುಳಿದ ನಾಲ್ಕರಲ್ಲಿ ಯುರೋಪ್ ನಲ್ಲಿ ಮೂರು ಹಾಗೂ ಏಷ್ಯಾದಲ್ಲಿ ಒಂದಿದೆ. ಅದು ಸಿಂಗಾಪುರದಲ್ಲಿದೆ.
2019 ರ ಮಾರ್ಚ್ 19 ರಂದು ಸ್ಯಾನ್ ಫ್ರ್ಯಾನ್ಸಿಸ್ಕೋದಲ್ಲಿ ವಾರ್ಷಿಕ ಗೇಮ್ ಡೆವಲಪರ್ಸ್ ಕಾನ್ಫರೆನ್ಸ್ ನಡೆಯುತ್ತದೆ. ಅಲ್ಲಿ ಡೇಟಾ ಸೆಂಟರ್ ಗಳಲ್ಲಿ ಬಳಕೆಯಾಗುತ್ತಿರುವ ನೀರಿನ ಕುರಿತಂತೆ ಕೆಲವು ವಿಚಾರಗಳು ಪ್ರಸ್ತಾಪವಾಗುತ್ತದೆ. 2019 ರಲ್ಲಿ ಯು.ಎಸ್.ಎ ನಲ್ಲಿರುವ ಮೂರು ರಾಜ್ಯಗಳ ಡೇಟಾ ಸೆಂಟರ್ ಗಳು ಕೇಳಿ ಅವುಗಳಿಗೆ ಕೊಡಲಾಗಿದ್ದ ನೀರು 2.3 ಬಿಲಿಯನ್ ಗ್ಯಾಲನ್ ಗಳು. ಇದು ಲೀಗಲ್ ಆಗಿ ಸಾರ್ವಜನಿಕವಾಗಿ ದೊರೆತಿರುವ ಮಾಹಿತಿ. ಇದನ್ನು ಆ ದಿನ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದ ಗೂಗಲ್ ನ ವೈಸ್ ಪ್ರೆಸಿಡೆಂಟ್ ಮಜ್ಡ್ ಬಕರ್ ಕೂಡಾ ಒಪ್ಪುತ್ತಾರೆ. ಬರೀ ಮೂರು ರಾಜ್ಯಗಳಿಗೇ ಅಷ್ಟು ಎಂದರೆ ಉಳಿದ ಡೇಟಾ ಸೆಂಟರ್ ಗಳಿಗೆ ಇನ್ನೆಷ್ಟಿರಬೇಡ.. ನೀವೇ ಲೆಕ್ಕ ಹಾಕಿ.
ಗ್ಯಾಲನ್ ಎಂದರೆ ಎಷ್ಟು ಲೀಟರ್ ಗೊತ್ತೇ..?? ಅಮೆರಿಕನ್ ಹಾಗೂ ಕೆಲವು ಕೆರಿಬಿಯನ್ ರಾಷ್ಟ್ರಗಳ ಪ್ರಕಾರ 3.78 ಲೀಟರ್ ಗಳು. ನಮ್ಮ ಭಾರತದ ಲೆಕ್ಕಾಚಾರವೂ ಇದೇ.. ಆದರೆ, ಐರ್ಲೆಂಡ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಕೆಲವು ರಾಷ್ಟ್ರಗಳ ಪ್ರಕಾರ ಒಂದು ಗ್ಯಾಲನ್ ಎಂದರೆ 4.51 ಲೀಟರ್.
2021 ರಲ್ಲಿ ಯು.ಎಸ್.ಎ ನಲ್ಲಿ ಡೇಟಾ ಸೆಂಟರ್ ಗೆ ಎಂದೇ ಬಳಸಲಾಗುವ ನೀರು ದಿನಕ್ಕೆ 1.7 ಬಿಲಿಯನ್ ಲೀಟರ್ . ಹೌದು ಇದು ದಿನವೊಂದಕ್ಕೆ.. ಹಾಗೂ ಪ್ರತಿದಿನ. ಡೇಟಾ ಸೆಂಟರ್ ಗಳಿಗೆ ಯಾಕಿಷ್ಟು ನೀರು ಬೇಕಾಗುತ್ತದೆ ಗೊತ್ತೇ..?? ಕೂಲ್ ಮಾಡಲು. ಒಂದು ಫೋನ್ ನಲ್ಲಿ ಹೆಚ್ಚು ಹೊತ್ತು ಮಾತನಾಡಿದರೆ.. ಅಥವಾ ಹೆಚ್ಚು ಹೊತ್ತು ಇಂಟರ್ನೆಟ್ ಬಳಸಿದರೆ ಆ ಫೋನ್ ಎಷ್ಟೊಂದು ಬಿಸಿಯಾಗುತ್ತದೆ ಅಲ್ಲವೇ..? ಇನ್ನು ಲ್ಯಾಪ್ಟಾಪ್ ಕೂಡಾ ಅದೇ ಕತೆಯೇ.. ಆದರೆ, ಇವುಗಳನ್ನು ನಾವು ಬಳಸುವುದು ಕೆಲವೇ ಹೊತ್ತು. ಆದರೆ, ಡೇಟಾ ಸೆಂಟರ್ ಗಳಲ್ಲಿ ಇರುವ ಸರ್ವರ್ ದಿನದ 24 ಗಂಟೆಯೂ ಓಡುತ್ತಲೇ ಇರುತ್ತದೆ. ಹಾಗಿದ್ದಾಗ ಅದೆಷ್ಟು ಬಿಸಿಯಾಗಬೇಡ..?? ಇದರ ಜೊತೆಗೆ ಜನರಿಗೆ ವೇಗವಾಗಿ ಡೇಟಾ ಬಳಕೆಗೆ ಸಿಗಲಿ ಎಂದು ಕೆಲವು ಡೇಟಾ ಸೆಂಟರ್ ಗಳನ್ನು ಜನರ ವಸತಿಗೆ ಹತ್ತಿರವಾಗಿ ನಿರ್ಮಾಣ ಮಾಡಿರುತ್ತಾರೆ. ಇದರಿಂದ ಹೊರಗಿನಿಂದ ಇರುವ ಉಷ್ಣತೆ ಕೂಡಾ ಹೆಚ್ಚೇ ಇರುತ್ತದೆ. ಈ ಎಲ್ಲಾ ಉಷ್ಣಾಂಶವನ್ನು ಕಡಿಮೆ ಮಾಡಿ 18 -22 ಡಿಗ್ರಿ ಸೆಲ್ಸಿಯಸ್ ನಲ್ಲೇ ಇಡಲು ನೀರು ಅವಶ್ಯಕ. ಅದರಲ್ಲಿಯೂ ಇಲ್ಲಿಗೆ ಬಳಸಲಾಗುತ್ತಿರುವ ನೀರು ಬಹಳ ಶುದ್ಧವಾದ ನೀರು. ಹಾಗಿದ್ದಲ್ಲಿ ಇದಕ್ಕೆ ಪುನರ್ಬಳಕೆಯ ನೀರನ್ನು ಬಳಸಲು ಸಾಧ್ಯವಿಲ್ಲವೇ..??
ಖಂಡಿತಾ ಸಾಧ್ಯವಿದೆ. ಈ ನಿಟ್ಟಿನಲ್ಲಿ ಹಲವಾರು ಪ್ರಯೋಗಗಳಾಗುತ್ತಿದ್ದು ಈಗಾಗಲೇ ಫಿನ್ ಲ್ಯಾಂಡ್ ನ ಗೂಗಲ್ ಡೇಟಾ ಸೆಂಟರ್ ನಲ್ಲಿ ಸಮುದ್ರದ ನೀರನ್ನು ಇದಕ್ಕೆ ಬಳಕೆ ಮಾಡಲಾಗುತ್ತಿದೆ. ಕರೆಂಟ್ ಗೆ ಪರ್ಯಾಯವಾಗಿ ಸೋಲಾರ್ ಬಳಸುವಂತೆ ನೀರಿಗೆ ಬದಲೀ ವ್ಯವಸ್ಥೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಹೀಗೆಯೇ ಮುಂದುವರಿದರೆ ನೀರಿಗೆ ಹಾಹಾಕಾರ ಉಂಟಾಗಬಹುದು ಎಂದು ನಿರ್ಧರಿಸಿ ಮರು ಬಳಕೆಯ ನೀರನ್ನೂ ಕೂಲೆಂಟ್ ಗಳಾಗಿ ಬಳಸಲಾಗುತ್ತಿದೆ. 2030 ರ ಹೊತ್ತಿಗೆ ನೀರಿನ ಬಳಕೆಯನ್ನು ಸಂಪೂರ್ಣ ಕಡಿಮೆ ಮಾಡಲು ಆಲೋಚಿಸುತ್ತಿದ್ದಾರೆ.
ಸರ್ವರ್ ಗಳಲ್ಲಿ ಡೇಟಾವನ್ನು ಸಂಗ್ರಹ ಮಾಡಿದರೆ ಕ್ಲೌಡ್ ಡೇಟಾಗಳಲ್ಲಿ ಹೇಗೆ ಸಂಗ್ರಹವಾಗುತ್ತದೆ ಎಂಬ ಮಾಹಿತಿ ತಿಳಿಯೋಣ ಬನ್ನಿ.
ನೀವೂ ಕ್ಲೌಡ್ ಡೇಟಾ ಬಳಸುತ್ತಿದ್ದೀರಿ. ನೀವು ಗೂಗಲ್ ಡ್ರೈವ್ ಗೆ ನಿಮ್ಮ ಡೇಟಾ ಅಂದರೆ ಫೋಟೋ, ಮೀಡಿಯಾ, ಫೈಲ್, ಪಿ.ಡಿ.ಎಫ್ ಗಳನ್ನು ಅಪ್ಲೋಡ್ ಮಾಡಿದ್ದೀರಿ ತಾನೇ..??
ಮತ್ತೊಂದು ಉದಾಹರಣೆ ನೀಡುತ್ತೇನೆ. ನೀವು ವಾಟ್ಸಾಪ್ ಮತ್ತು ಟೆಲಿಗ್ರಾಂ ಆಪ್ ಗಮನಿಸಿದ್ದರೆ ತಿಳಿಯುತ್ತದೆ. ವಾಟ್ಸಾಪ್ ನ ಬ್ಯಾಕಪ್ ಎಲ್ಲಿಗೆ ಸ್ಟೋರ್ ಆಗುತ್ತಿರುತ್ತದೆ ? ಮೊದಲು ಫೋನ್ ಗೆ ನಂತರ ಡ್ರೈವ್ ಗೆ. ಸರಿಯಾ..??
ಇನ್ನು ಟೆಲಿಗ್ರಾಂ ಆಪ್ ನಲ್ಲಿ ವಾಟ್ಸಾಪ್ ನಷ್ಟು ಸ್ಟೋರೇಜ್ ಸ್ಪೇಸ್ ಬೇಕಾಗುವುದಿಲ್ಲ. ಟೆಲಿಗ್ರಾಮ್ ನಲ್ಲಿ ಡೇಟಾ ಫೋನ್ ನಲ್ಲಿ ಸ್ಟೋರ್ ಆಗುವುದಕ್ಕಿಂತ ಹೆಚ್ಚು ಕ್ಲೌಡ್ ನಲ್ಲಿಯೇ ಸ್ಟೋರ್ ಆಗಿರುತ್ತದೆ.
ಇನ್ನು ಇದರ ಕುರಿತು ಸರಳವಾಗಿ ಹೇಳುವುದಾದರೆ ನಾವು ಯಾವುದೇ ಡೇಟಾವನ್ನು ನಮ್ಮ ಬಳಿ ಅಂದರೆ ಫೋನ್, ಪೆನ್ ಡ್ರೈವ್ , ಹಾರ್ಡ್ ಡಿಸ್ಕ್, ಲ್ಯಾಪ್ಟಾಪ್ ಇವುಗಳಲ್ಲಿ ನಮ್ಮ ಡೇಟಾವನ್ನು ಸೇವ್ ಮಾಡುವ ಬದಲಾಗಿ ಇಂಟರ್ನೆಟ್ ನಲ್ಲಿ ನಮ್ಮ ಡೇಟಾವನ್ನು ಸ್ಟೋರ್ ಮಾಡುವುದು. ಇದರಿಂದ ನಮಗೆ ಬೇಕಾದ ಡೇಟಾ ಕ್ಷಣ ಮಾತ್ರದಲ್ಲಿ ಸಿಗುತ್ತದೆ.
ಉದಾಹರಣೆಗೆ ನೀವು ಭಾನುವಾರ ಯಾವುದೋ ಸಿನಿಮಾ ನೋಡಲು ಬೈಕ್ ನಲ್ಲಿ ಹೋಗುತ್ತಿರುತ್ತೀರಿ. ಆಗ, ಮಾರ್ಗ ಮಧ್ಯದಲ್ಲಿ ಟ್ರಾಫಿಕ್ ಪೊಲೀಸ್ ನಿಮ್ಮನ್ನು ಡ್ರೈವಿಂಗ್ ಲೈಸೆನ್ಸ್ ಕೇಳುತ್ತಾರೆ. ನೀವು ಅದನ್ನು ಮನೆಯಲ್ಲಿಯೇ ಬಿಟ್ಟು ಬಂದಿರುತ್ತೀರಿ. ಅದನ್ನು ಎಲ್ಲಿಟ್ಟಿದ್ದೀರಿ ಎಂಬುದನ್ನು ಮರೆತಿರುತ್ತೀರಿ. ಮತ್ತೊಂದು ಕಾಪಿ ನಿಮ್ಮ ಬಳಿ ಇರುವ ಪೆನ್ ಡ್ರೈವ್ ನಲ್ಲಿತ್ತು. ಆದರೆ, ನೀವು ಅದನ್ನು ಬೇರೆ ಯಾರಿಗೂ ಸಿಗದಂತೆ ನೀವು ಕೆಲಸ ಮಾಡುವಲ್ಲಿ ಡ್ರಾಯರ್ ನಲ್ಲಿಟ್ಟು ಬೀಗ ಹಾಕಿರುತ್ತೀರಿ. ಮತ್ತೊಂದು ನಿಮ್ಮ ಲ್ಯಾಪ್ಟಾಪ್ ನಲ್ಲಿದೆ. ಸರಿ, ಅದರ ಪಾಸ್ವರ್ಡ್ ಕೂಡಾ ಹೇಳಿದರೂ ಮನೆಯಲ್ಲಿ ಅದನ್ನು ಕೊಡಲು ಮತ್ತೊಬ್ಬರು ಬೇಕು. ಅದೇ, ಇದರ ಬದಲಾಗಿ ನೀವು ಡ್ರೈವಿಂಗ್ ಲೈಸೆನ್ಸ್ ಸಾಫ್ಟ್ ಕಾಪಿ ಅನ್ನು ಫೋನ್ ನಲ್ಲಿ ಇಟ್ಟಿದ್ದರೆ.. ಅಕಸ್ಮಾತ್ ಫೋನ್ ಕೂಡಾ ಕಳೆದು ಹೋಯಿತು. ಆಗ.. ?? ಇದೆಲ್ಲದಕ್ಕಿಂತಲೂ ಅದನ್ನು ಸ್ಟೋರ್ ಮಾಡಲು ಉತ್ತಮ ಮಾರ್ಗ ಇಂಟರ್ನೆಟ್. ಎಲ್ಲಿಂದ, ಯಾವಾಗಲಾದರೂ ತೆಗೆಯಬಹುದಲ್ಲವೇ..?? ನಮ್ಮದೇ ಫೋನ್ ಆಗಬೇಕೆಂದಿಲ್ಲ. ಅಲ್ಲದೇ, ಇಂತಹದ್ದೇ ಜಾಗ ಎಂಬ ಕಿರಿಕಿರಿಯಿಲ್ಲ. ಇದಕ್ಕೇ ಹೇಳಿದ್ದು ಕ್ಲೌಡ್ ಸ್ಟೋರೇಜ್ ನಲ್ಲಿ ಸೇವ್ ಮಾಡಿ ಎಂದು.ಈ ವ್ಯವಸ್ಥೆ ನಾವು ಡೇಟಾವನ್ನು ರಿಮೋಟ್ ಕಂಟ್ರೋಲ್ ಮಾಡಿದಂತೆ. ಬರೀ ಡ್ರೈವಿಂಗ್ ಲೈಸೆನ್ಸ್ ಎಂದಲ್ಲ. ನಮ್ಮ ಫೋಟೋಗಳು, ವಿಡಿಯೋಗಳು, ಕಾಂಟ್ಯಾಕ್ಟ್ ನಂಬರ್ ಗಳು, ಫೈಲ್ ಗಳು, ಡಾಕ್ಯುಮೆಂಟ್ ಗಳು, ಡೇಟಾ ಬೇಸ್ , ಆರ್ಚಿವ್ ಹೀಗೆ ಏನೆನೆಲ್ಲಾ ಡೇಟಾಗಳನ್ನು ತುಂಬಬಹುದು.
ಆದರೆ, ಇದನ್ನು ಎಲ್ಲೆಲ್ಲಿ ಸೇವ್ ಮಾಡಬಹುದು ಗೊತ್ತೇ..?? ಗೂಗಲ್ ಡ್ರೈವ್ , ಡ್ರಾಪ್ ಬಾಕ್ಸ್, ಒನ್ ಡ್ರೈವ್, ಪಿ ಕ್ಲೌಡ್, ಅಮೆಜಾನ್ ಡ್ರೈವ್, ಅಮೆಜಾನ್ ಎಸ್ 3, ಬ್ಲ್ಯಾಕ್ ಬೇಜ್, ಐ ಕ್ಲೌಡ್ ಹೀಗೆ ಹತ್ತು ಹಲವು ಪ್ಲಾಟ್ ಫಾರಂಗಳಿವೆ. ಹಾಗೆಂದು ಈ ಕ್ಲೌಡ್ ಸ್ಟೋರೇಜ್ ಪ್ಲಾಟ್ ಫಾರಂ ಗಳು ಸಂಪೂರ್ಣ ಉಚಿತವೇನಲ್ಲ. 2 ಜಿಬಿ, 5 ಜಿಬಿ, 15 ಜಿಬಿ, 25 ಜಿಬಿ ಯಷ್ಟು ಡೇಟಾವನ್ನು ಇದರಲ್ಲಿ ಸೇವ್ ಮಾಡಬಹುದು. ನಂತರ, ಇದು ಉಚಿತವಂತೂ ಅಲ್ಲ.
ಹಾಗಿದ್ದರೆ, ಇದರಲ್ಲಿ ಗೌಪ್ಯತೆ ಉಲ್ಲಂಘನೆಯಾಗುವುದಿಲ್ಲವಾ..? ಈ ಕ್ಲೌಡ್ ನಲ್ಲಿ ಎಲ್ಲವೂ ಸುರಕ್ಷಿತವಾ ? ಯಾವ ಯಾವ ರೀತಿಯ ಕ್ಲೌಡ್ ಇದೆ ? ಹಾಗಾದರೆ ಕ್ಲೌಡ್ ಗೆ ಫಿಸಿಕಲ್ ಸರ್ವರ್ ಬೇಡವಾ ? ಇದೆಲ್ಲಾ ಮುಂದಿನ ಟೆಕ್-ಟಾಕ್ ನಲ್ಲಿ. ಮುಂದಿನ ಬಾರಿ ಆಕಾಶಕ್ಕೆ ಅಲ್ಲಲ್ಲ ಕ್ಲೌಡ್ ಗೆ ಲಗ್ಗೆ ಹಾಕೋಣ.
- ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ