ಬುಧವಾರ, ಏಪ್ರಿಲ್ 15, 2026

ದೌರ್ಬಲ್ಯದ ದೋಣಿ (ಪುಸ್ತಕ ಯಾನ - 195)


ಪುಸ್ತಕದ ಶೀರ್ಷಿಕೆ : ದೌರ್ಬಲ್ಯದ ದೋಣಿ

ಲೇಖಕರು : ಮೀನಾ ಹರೀಶ್ ಕೋಟ್ಯಾನ್

ಪ್ರಕಾಶಕರು : ಓಂ ಶಕ್ತಿ ಪ್ರಕಾಶನ

ಪ್ರಥಮ ಮುದ್ರಣ :2007

ಬೆಲೆ : 60 ರೂ. 


ಮೀನಾ ಹರೀಶ್ ಕೋಟ್ಯಾನ್ ಅವರ ದೌರ್ಬಲ್ಯದ ದೋಣಿ ಕಾದಂಬರಿ 'ನವರಾಗ ಸಂಗಮ' ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. 


ವ್ಯಾಪಾರೋದ್ಯಮಿ ಶೇಷಗಿರಿರಾಯರದ್ದು ಶ್ರೀಮಂತಿಕೆಯ ಸಮೃದ್ಧಿಯ ಸುಂದರ ಕುಟುಂಬ. ಪತ್ನಿ ಗೌರಮ್ಮ. ಇವರಿಗೆ ಮೂವರು ಹೆಣ್ಣು ಮಕ್ಕಳು. ಪ್ರಶಾಂತಿ ಹಾಗೂ ಪ್ರತಿಭಾ ಇಬ್ಬರು ಎರಡೆರಡು ವರ್ಷದ ಅಂತರದಲ್ಲಿ ಹುಟ್ಟಿದ್ದರು. ಪ್ರಶಾಂತಿ ಹುಟ್ಟಿದ ಮೇಲೆ ತಮ್ಮ ವ್ಯಾಪಾರ ಅಭಿವೃದ್ಧಿ ಹೊಂದಿದ್ದು ಮತ್ತು ಅದೃಷ್ಟ ಬಂದಿದ್ದು ಎಂಬ ಕಾರಣಕ್ಕಾಗಿ ಪ್ರಶಾಂತಿಯ ಮೇಲೆ ವಿಪರೀತ ಪ್ರೀತಿ. ಗೌರಮ್ಮನವರಿಗೆ ತಮಗೆ ಗಂಡು ಮಗುವಾಗಲಿ ಎಂಬ ಆಸೆಯಿತ್ತು. ಆದರೆ, ಶೇಷಗಿರಿರಾಯರ ಆಲೋಚನೆಯೇ ಬೇರೆ. "ಹೆಣ್ಣಾದರೇನು.. ಗಂಡಾದರೇನು.. ಒಂದೇ ಅಲ್ವಾ..!? ಇವರಿಬ್ಬರನ್ನೇ ಚೆನ್ನಾಗಿ ಓದಿಸಿ ಬೆಳೆಸಿದರಾಯ್ತು" ಎನ್ನುತ್ತಿದ್ದರು.


ಚಿಕ್ಕಮಗಳು ಪ್ರತಿಭಾ ಗೆ 8 ವರ್ಷವಿರುವಾಗ ಗೌರಮ್ಮ ಮತ್ತೊಮ್ಮೆ ತಾಯಿಯಾಗಿದ್ದರು. ಶೇಷಗಿರಿರಾಯರ ವಿರೋಧದ ನಡುವೆಯೂ ಗಂಡು ಮಗುವಿನ ಹಂಬಲದಲ್ಲಿದ್ದ ಗೌರಮ್ಮನವರಿಗೆ ಹುಟ್ಟಿದ್ದು. ಹೆಣ್ಣು ಮಗು. ಅದರಲ್ಲಿಯೂ.. ಮಗುವಿನ ಆರೋಗ್ಯ ಅಷ್ಟಕಷ್ಟೇ ಎಂದು ತಿಳಿದು ಮಗುವಿನ ಕುರಿತು ತಾತ್ಸಾರ ತಳೆದಿದ್ದರು. ಪುಟ್ಟ ಕಂದಮ್ಮನ ಮೇಲೆ ಆಕೆಯ ಮಾತೃ ಹೃದಯ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿತ್ತು. ತಮ್ಮ ಮೊದಲಿಬ್ಬರು ಹೆಣ್ಣು ಮಕ್ಕಳ ಮೇಲೆ ಹೆಚ್ಚಿನ ಅಕ್ಕರೆ ತೋರುತ್ತಿದ್ದರು.


ವ್ಯಾಪಾರ ವ್ಯವಹಾರದಲ್ಲಿ ತೊಡಗಿದ್ದ ರಾಯರಿಗೆ ಮಗುವಿನ ಹೆಸರೇ ನೆನಪಿಲ್ಲವೆಂದು ಪತ್ನಿಯನ್ನು ವಿಚಾರಿಸಿದಾಗ ಮಗುವಿಗೆ ತೊಟ್ಟಿಲಿಗೆ ಹಾಕುವ ಕಾರ್ಯಕ್ರಮವೂ ನಡೆದಿಲ್ಲವೆಂಬುದು ತಿಳಿದಿತು. ಜೊತೆಗೆ ಪತ್ನಿಯ ನೀರಸವಾದ ಪ್ರತಿಕ್ರಿಯೆ ಕಂಡು ಅಚ್ಚರಿಯಾಗಿತ್ತು. ಮಗುವಿನ ಕುರಿತ ಅಸಡ್ಡೆ, ತಿರಸ್ಕಾರದಿಂದಾಗಿ.. ಆಕೆಯನ್ನು ತಿದ್ದಲು ಸಾಧ್ಯವಾಗದೇ ತಮ್ಮ ಕೆಲಸದ ನಡುವೆಯೂ ಮಗುವಿನ ಮೇಲೆ ಕಾಳಜಿ ತೋರಲು ಒಂದಿಷ್ಟು ಹೊತ್ತು ಮೀಸಲಿಟ್ಟಿದ್ದರು. ಅಂತೂ ತಂದೆಯ ಅಕ್ಕರೆಯಲ್ಲಿ ಜೊತೆಗೆ ವೀರಾಜಮ್ಮನ ಮಮತೆಯಲ್ಲಿ ಹಿತಾ ಬೆಳೆದು ದೊಡ್ಡವಳಾಗುತ್ತಿದ್ದಳು. 


ತಾಯಿ ಅಸಡ್ಡೆ ತಡೆದ ಮೇಲೆ ಆಕೆಯ ಅಕ್ಕಂದಿರು ಅಸಡ್ಡೆ ತೋರುವುದರಲ್ಲಿ ಅಚ್ಚರಿಯೇನಿರಲಿಲ್ಲ. ಪ್ರಶಾಂತಿಯದ್ದು ಕೊಂಚ ಶಾಂತ ಸ್ವಭಾವದವರಾದರೂ.. ಪ್ರತಿಭಾ ಸಿಡಿಯುತ್ತಿದ್ದಳು. ತಮ್ಮ ಶಾಲೆಗೆ ಸೇರಿದರೆ, ತಮ್ಮ ತಂಗಿ ಎಂದು ತಿಳಿದರೆ ಗೆಳತಿಯರು ಆಡಿಕೊಂಡು ನಗುತ್ತಾರೆ ಎಂದಾದಾಗ ಪ್ರತಿಭಾ ಉಪಾಯದಿಂದ ಅಲ್ಲಿಯೇ ಹತ್ತಿರದಲ್ಲಿದ್ದ ಕನ್ನಡ ಮೀಡಿಯಂ ಸೇರುವಂತೆ ಮಾಡಿದಳು. ಮೊದಮೊದಲು ವೀರಾಜಮ್ಮನವರೇ ಕರೆದುಕೊಂಡು ಹೋಗಿ ಬರುತ್ತಿದ್ದರಾದರೂ.. ಬೆಳೆದ ಹಿತಾ ಅವರ ಪಾಲಿಗೆ ಕಷ್ಟವಾಗತೊಡಗಿದಳು.


ಬುದ್ಧಿವಂತೆ ಹಿತಾಳ ಕುರಿತು ಶಾಲೆಯಲ್ಲಿ ಶಿಕ್ಷಕಿರೆಲ್ಲರಿಗೂ ವಿಪರೀತ ಪ್ರೇಮ, ಮಮತೆ ಹಾಗೂ ವಿಶೇಷ ಕಾಳಜಿ. ದೈಹಿಕ ಕ್ರೀಡೆಗಳನ್ನು ಹೊರತುಪಡಿಸಿ ಉಳಿದ ಸ್ಪರ್ಧೆಗಳೆಲ್ಲದರಲ್ಲಿಯೂ ಆಕೆಯೇ ಮುಂದು. ಈಗ ಶಾಲೆ ಬಿಡಿಸುವ ಸನ್ನಾಹದಲ್ಲಿದ್ದಾಗ, ಪ್ರಬುದ್ಧ ಹಿತಾಳಿಗೆ ಜಗತ್ತೇ ಶೂನ್ಯ ಎನ್ನಿಸಿತೊಡಗಿತ್ತು. ಆಗ ಶೇಷಗಿರಿರಾಯರ ದೃಷ್ಟಿಗೆ ಬಿದ್ದದ್ದು ಪೇಪರ್ ಹಾಕುವ ಹುಡುಗ ರವಿಶಂಕರ್. ಬಡತನದಲ್ಲಿದ್ದ ಅವನು ತಂದೆಯನ್ನು ಕಳೆದುಕೊಂಡು, ತಾಯಿಯ ಆಶ್ರಯದಲ್ಲಿ ಬೆಳೆಯುತ್ತಾ ಎಸ್.ಎಸ್.ಎಲ್.ಸಿ ಪರೀಕ್ಷೆ ಕಟ್ಟಿದ್ದ. ಆತನಿಗೂ ಇದರಿಂದ ಹಣಕಾಸಿನ ಸಹಾಯವಾಗಿ ಹಿತಾಳ ಜೊತೆಗೆ ಆತ್ಮೀಯತೆ, ಸಲುಗೆ ಬೆಳೆಯುತ್ತಾ ಹೋಯಿತು. ಹಿತಾಳಿಗೆ ಒಳ್ಳೆಯ ಗೆಳೆಯನೂ ಆದ.


ಹಿತ ಯೌವ್ವನಾವಸ್ಥೆಗೆ ತಲುಪಿದ ನಂತರ ರವಿಶಂಕರ್ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದದ್ದು ತಪ್ಪಿ ಹೋಗಿತ್ತು. ಬದಲಾಗಿ, ತಂದೆಯ ಆಣತಿಯಂತೆ ಪ್ರಶಾಂತಿಯೇ ಆಕೆಯನ್ನು ತನ್ನ ಕೈನೆಟಿಕ್ ಹೋಂಡಾದಲ್ಲಿ ಕರೆದುಕೊಂಡು ಹೋಗಿ ಬಂದು ಮಾಡುತ್ತಿದ್ದಳು. ರವಿಶಂಕರ್ ಕುರಿತು ಆತ್ಮೀಯತೆ, ಗೆಳೆತನ ಹಿತಾಳಲ್ಲಿಯೂ.. ಆತನಲ್ಲಿಯೂ.. ಹಾಗೆಯೇ ಇತ್ತಾದರೂ ಹಿತಾ ಮನೆಯವರು ಬಡತನದಿಂದ ಕಾರಣದಿಂದ ಸ್ನೇಹವನ್ನು ಪ್ರೋತ್ಸಾಹಿಸಲಿಲ್ಲ. 


ಪ್ರಶಾಂತಿಗೆ ವಿವಾಹದ ವಯಸ್ಸಾಗಿತ್ತು. ಆಕೆಗೆ ಸೂಕ್ತ ವರನೆಂದು ದಯಾನಿಧಿಯನ್ನು ನಿಶ್ಚಯಿಸಿದ್ದರು. ಅವರ ತಂದೆಯ ಪ್ರಯತ್ನಕ್ಕೆ ಪ್ರಶಾಂತಿಯ ಪ್ರೇಮ ಅಡ್ಡಿಯಾಗಿತ್ತು. ಆಕೆ ತಾನು ಪ್ರೇಮಿಸಿದ್ದ ಶ್ರೀಕಾಂತ್ ನನ್ನು ಭೇಟಿಯಾಗಿ ವಿಚಾರ ತಿಳಿಸಿದಳಾದರೂ.. ಮನೆಯಲ್ಲಿಯೂ ಒಪ್ಪದೇ ಹೋಗಿದ್ದರಿಂದ ದಯಾನಿಧಿಯೊಂದಿಗೆ ವಿವಾಹ ನಡೆದು.. ಎರಡು ತಿಂಗಳೊಳಗೆ ಪ್ರಶಾಂತಿ ಸಾವನ್ನಪ್ಪಿದ್ದಳು. 


ಈ ಸಂದರ್ಭದಲ್ಲಿ ಎಲ್ಲರೂ ಮಂಕಾದರೂ.. ಆ ಸಂದರ್ಭದಲ್ಲಿ ರವಿಶಂಕರ್ ಆತ್ಮೀಯನಂತೆ ಸಂತೈಸಿದ್ದ. "ಮನುಷ್ಯ ಅಂದ್ಮೇಲೆ ದುಃಖ-ದುಮ್ಮಾನ, ಕಷ್ಟ-ಸುಖ ಇದ್ದಿದ್ದೆ. ಹಾಗಂತ ಭಾವನೆಗಳ ಅಲೆಯಲ್ಲಿ ಬಂಧಿಯಾಗಿಬಿಡೋದೇ? ಭಾವನೆಗಳ ಮೇಲೆ ನಾವು ಹಿಡಿತ ಸಾಧಿಸಬೇಕೆ ವಿನಃ ಭಾವನೆಗಳು ನಮ್ಮ ಮೇಲೆ ಹಿಡಿತ ಸಾಧಿಸಬಾರದು" ಎಂದಿದ್ದ. 


ಎರಡು ವರ್ಷ ಕಳೆದ ನಂತರ ಪ್ರತಿಭಾಳನ್ನು ದಯಾನಿಧಿಗೆ ಕೊಟ್ಟು ವಿವಾಹ ಮಾಡಬೇಕು ಎಂದು ಶೇಷಗಿರಿರಾಯರು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಪ್ರತಿಭಾ ವಿರೋಧಿಸಿದ್ದಳು. ಆದರೆ, ದಯಾನಿಧಿ ಇದಕ್ಕೆ ಒಪ್ಪಿದ್ದ. ಪ್ರಶಾಂತಿಯ ಸಾವಿನ ನಂತರ ಚಿನ್ನ, ಒಡವೆ ಮರಳಿಸಿ ಸಂತೈಸಿದ್ದ ಚಿನ್ನದಂತಹಾ ಅಳಿಯನನ್ನು ಅವರು ಮತ್ತೆ ಅಳಿಯನ್ನಾಗಿಸಿಕೊಳ್ಳುತ್ತಿದ್ದರು.


ಇದೇ ಸಂದರ್ಭದಲ್ಲಿ ರವಿಶಂಕರ್ ಶೇಷಗಿರಿರಾಯರನ್ನು ಕೆಲಸಕ್ಕೆ ರೆಕಮೆಂಡ್ ಮಾಡಲು ಕೇಳಿಕೊಂಡು ಬಂದಿದ್ದನಾದರೂ.. ಶೇಷಗಿರಿರಾಯರು ಅದಕ್ಕೆ ಸುಮ್ಮನೆ ತಲೆಯಾಡಿಸಿದ್ದರೇ ಹೊರತು ಆತನನ್ನು ರೆಕಮೆಂಡ್ ಮಾಡಿರಲಿಲ್ಲ. ಆದರೆ, ಹಿತಾಳಿಗೆ ಈ ಕುರಿತು ಸುಳ್ಳಾಡಿದ್ದರು.


ಪ್ರತಿಭಾ ವಿವಾಹ ಹತ್ತಿರ ಬರುತ್ತಿದ್ದಾಗಲೇ ಹಿತಾ ಗಮನಿಸಿದಂತೆ ಯಾರೋ ಒಬ್ಬಳು ಹೆಂಗಸು ಮನೆಯ ಬಳಿ ಹೊಂಚು ಹಾಕುತ್ತಿದ್ದಳು. ಆದರೆ, ಆಕೆ ಕಳ್ಳಿಯಲ್ಲ. ಶ್ರೀಮಂತಿಕೆಯಿಂದ ತಂದೆ-ತಾಯಿ ಇಬ್ಬರು ಆಕೆಯನ್ನು ಬೆದರಿಸಿದಾಗಲೂ ಮತ್ತೆ ಬಂದಿದ್ದವಳನ್ನು ಹಿತಾ ರವಿಶಂಕರ್ ಮೂಲಕ ಕರೆಸಿದ್ದಳು. 


ಮನೆಗೆ ಬಾರದೆ, ಹೊಂಚು ಹಾಕುತ್ತಾ ನಿಂತಿದ್ದ ಆಕೆ ಯಾರು..?? ಆಕೆಯ ಹೇಳಿದ ಮಾತಿಗೂ ಪ್ರಶಾಂತಿಯ ಸಾವಿಗೂ ಸಂಬಂಧವಿತ್ತೇ? ಪ್ರತಿಭಾ ವಿವಾಹ ಮುಂದೇನಾಯ್ತು.. ಆಕೆ ಆ ಮದುವೆಗೆ ಒಪ್ಪದಿದ್ದದ್ದು ಏಕೆ..?? ರವಿಶಂಕರ್ ನನ್ನು ರೆಕಮೆಂಡ್ ಮಾಡಲು ಶೇಷಗಿರಿರಾಯರು ಒಪ್ಪದಿದ್ದು ಏಕೆ..?? ಹಿತಾಳಿಗೆ ಸುಳ್ಳಾಡಿದ್ದು ಏಕೆ...?? ಹಿತಾ ಹಾಗೂ ರವಿಶಂಕರ್ ಇಬ್ಬರ ನಡುವಿನ ಭಾಂದವ್ಯವೇನು..?? ಶೇಷಗಿರಿರಾಯರ ಮನಸ್ಸು ಬದಲಾಯಿತೇ..?? ಪ್ರಶಾಂತಿಯ ಪ್ರಸಂಗದಿಂದ ಅವರು ಪಾಠ ಕಲಿತರೇ..??


ದೈಹಿಕ ದೌರ್ಬಲ್ಯದ ಹಿತಾ ಹಾಗೂ ಸಾಮಾಜಿಕ ದೌರ್ಬಲ್ಯವಾದ ಬಡತನವೆಂಬ ದೋಣಿಯಲ್ಲಿ ಪಯಣಿಸುತ್ತಿದ್ದ ಹಿತಾ, ರವಿಶಂಕರ್ ಇಬ್ಬರ ಬದುಕಿನ ಕಥೆ ಇಲ್ಲಿದೆ. ಹಿತಾ ನಿಜವಾಗಿಯೂ ಸ್ಫೂರ್ತಿಯಾಗುತ್ತಾಳೆ. ಚಿಕ್ಕ ಚೊಕ್ಕ ಕಾದಂಬರಿಯ ಚೆಂದದ ಓದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ