ನಾವು ನಮ್ಮ ಸರ್ಚ್ ಇಂಜಿನ್ ಬಳಸಿ ಹುಡುಕುತ್ತೇವೆಲ್ಲಾ ಇಂಟರ್ನೆಟ್ ಡೇಟಾ ಎಷ್ಟು ಸಿಗಬಹುದು ಗೊತ್ತೇ..?? ಏನೇ ಕೇಳಿದರೂ ಗೂಗಲ್ ಮಾಡುತ್ತೇವಲ್ಲಾ.. ಗೂಗಲ್ ಗೆ ಲಭ್ಯವಾಗುವ ಡೇಟಾ ಕೇವಲ 3 ರಿಂದ 4 % ಮಾತ್ರವೇ.. ಹೌದು ನಮಗೆ ಕಾಣದ ಮಾಹಿತಿ ಶೇಕಡಾ 96 ಕ್ಕಿಂತಲೂ ಹೆಚ್ಚು. ಹಿಮಬಂಡೆಗಳನ್ನು ನೋಡಿದ್ದರೆ ನಿಮಗೆ ನನ್ನ ಮಾತು ಹೆಚ್ಚು ಅರ್ಥವಾಗಬಹುದು. ಟೈಟಾನಿಕ್ ಹಡಗಿಗೆ ತಾಗಿ ಅದನ್ನು ಛಿದ್ರಗೊಳಿಸಿದ ಹಿಮಬಂಡೆ ಚಿಕ್ಕದಿರಲಿಲ್ಲ. ಮೇಲೆ ಕಾಣುವಷ್ಟು ಮಾತ್ರ ನಮ್ಮ ಮಾಮೂಲು ಇಂಟರ್ನೆಟ್ ಸರ್ಚ್ ಡೇಟಾಗೆ ದಕ್ಕುವುದು. ಗೂಗಲ್, ಸಫಾರಿ, ಬಿಂಗ್, ಫೈರ್ ಫಾಕ್ಸ್ ಯಾವುದರಲ್ಲಿ ಹುಡುಕಿದರೂ ಅಷ್ಟೇ.. ಕಾಣದ ಹಿಮಬಂಡೆಯಷ್ಟು ಅಗಾಧವಾಗಿರುತ್ತದೆ ಡೀಪ್ ವೆಬ್. ನೀರಿನ ಮೇಲ್ಮೈಗೆ ತಾಗಿಕೊಂಡು ನೀರಿನ ಒಳಗೆ ಇರುವಂತಹಾ ಒಂದು ಚಿಕ್ಕ ಪೋರ್ಷನ್ ಅನ್ನು ಅಂದರೆ ಡೀಪ್ ವೆಬ್ ನ ಪುಟ್ಟ ಭಾಗವನ್ನು ಡಾರ್ಕ್ ವೆಬ್ ಎನ್ನಬಹುದು.
ಅಷ್ಟು ಡೇಟಾ ಯಾಕೆ ಎಲ್ಲರಿಗೂ ಲಭ್ಯವಾಗುವುದಿಲ್ಲ ?
ನಿಮ್ಮ ಬಳಿ ಎಷ್ಟು ದುಡ್ಡಿರುತ್ತದೋ ಅಷ್ಟನ್ನೂ ಜೇಬಲ್ಲಿ ಇಟ್ಟುಕೊಂಡು ಓಡಾಡುವಿರಾ..?? ಇಲ್ಲ ತಾನೇ.. ಹಾಗೆಂದು ಎಲ್ಲರೂ ದುಡ್ಡನ್ನು ಅಡಗಿಸಿಟ್ಟಿರುವುದಿಲ್ಲ. ಆದರೆ, ಸೇಫ್ ಆದ ಜಾಗದಲ್ಲಿ ಭದ್ರ ಮಾಡಿರುತ್ತಾರೆ. ಇಲ್ಲಿನ ಡಾರ್ಕ್ ಹಾಗೂ ಡೀಪ್ ವೆಬ್ ಡೇಟಾಗಳು ಯಾರ ಕೈಗೂ ಸುಲಭವಾಗಿ ದಕ್ಕದಂತೆ ಇರುತ್ತವೆ. ಇಂಟರ್ನೆಟ್ ಬಳಸುವಾಗ ನಿರ್ದಿಷ್ಟ ಸಾಫ್ಟ್ವೇರ್, ಕಾನ್ಫಿಗರೇಷನ್ ಹಾಗೂ ಬಳಸಲು ಧೃಡೀಕರಣದ ಅಗತ್ಯವಿರುತ್ತದೆ. ಅಂತಹಾ ಡೇಟಾಗಳು ಇಲ್ಲಿರುತ್ತವೆ.
ಡಾರ್ಕ್ ವೆಬ್ ಎನ್ನುವ ಪದ ಬಳಕೆಗೆ ಬಂದದ್ದು 2009 ರಲ್ಲಿ. ಇಯಾನ್ ಕ್ಲಾರ್ಕೆ ಎನ್ನುವವರು ಬಳಕೆದಾರರಿಗೆ ಸುರಕ್ಷಿತವಾಗಿ ವ್ಯವಹಾರ ಮಾಡಲು ಹಾಗೂ ಯಾರೂ ಅವರನ್ನು ತಡೆಯೊಡ್ಡದಿರಲು ಫ್ರೀ ನೆಟ್ ವ್ಯವಸ್ಥೆ ಮಾಡಿದರು. ಅದೇ ಡಾರ್ಕ್ ವೆಬ್. ಇಲ್ಲಿ ಸೈಬರ್ ಅಟ್ಯಾಕ್ ಆಗದಂತೆ ಹಾಗೂ ಸರ್ಕಾರ ಯಾವುದಕ್ಕೂ ತಡೆಯೊಡ್ಡದಂತೆ ಸುಲಭವಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದೆಂಬ ಉದ್ದೇಶದಿಂದ ರೂಪಿಸಿದರು. ಆದರೆ, ಇವತ್ತು ಡಾರ್ಕ್ ವೆಬ್ ಎಂದರೆ ಇಲ್ಲೀಗಲ್ ಅಡ್ಡ ಎಂಬಂತಾಗಿಬಿಟ್ಟಿದೆ. ಇಂದು ಇಲ್ಲಿ ಏನೆಲ್ಲಾ ನಡೆಯುತ್ತಿದೆ ? ಏನೆಲ್ಲಾ ಸಿಗುತ್ತದೆ ಗೊತ್ತೇ ?
ಕ್ರೆಡಿಟ್ ಕಾರ್ಡ್ ನಂಬರ್ ಗಳು, ಎಲ್ಲಾ ರೀತಿಯ ಡ್ರಗ್ ಗಳು, ವೀಡಿಯೋ, ಗನ್, ನಕಲಿ ಹಣ, ಕದ್ದ/ ಹ್ಯಾಕ್ ಮಾಡಲಾಗಿರುವ ಅಮೆಜಾನ್ , ನೆಟ್ ಫ್ಲಿಕ್ಸ್ ಅಕೌಂಟ್ ಯೂಸರ್ ನೇಮ್ ಹಾಗೂ ಪಾಸ್ವರ್ಡ್, ಬೇರೆಯವರ ಮೊಬೈಲ್ ಅಥವಾ ಕಂಪ್ಯೂಟರ್ ಡೇಟಾ ಹ್ಯಾಕ್ ಮಾಡಲು ಬೇಕಾಗುವ ಸಾಫ್ಟ್ವೇರ್ ಗಳು, ಬೇರೆ ದೇಶಗಳಲ್ಲಿ ಬ್ಯಾಂಕ್ ಖಾತೆ ತೆರೆಯಲು ಬೇಕಾಗುವ ಲಾಗಿನ್ ಕ್ರೆಡೆನ್ಶಿಯಲ್ಸ್, ಪ್ರಿಪೇಡ್ ಡೆಬಿಟ್ ಕಾರ್ಡ್.. ಅಷ್ಟೇ ಯಾಕೆ ಹ್ಯಾಕರ್ಸ್ ಗಳನ್ನು ಕೂಡಾ ಕೊಂಡುಕೊಳ್ಳಬಹುದು.
ಈ ಡಾರ್ಕ್ ವೆಬ್ ಎಷ್ಟು ಮುಂದುವರಿದಿದೆ ಎಂದರೆ ಈಗ ನಾಲ್ಕೈದು ದಿನಗಳ ಹಿಂದೆ ಪಾಕಿಸ್ತಾನದ ಪ್ರಧಾನಿ ಶೆಹ್ ಬಾಜ್ ಷರೀಫ್ ರ ಪ್ರೈಮ್ ಮಿನಿಸ್ಟರ್ ಆಫೀಸ್ ನಿಂದ ಡೇಟಾವನ್ನು ಹ್ಯಾಕ್ ಮಾಡಿ 8 ಜಿಬಿ ಯಷ್ಟು ಡೇಟಾವನ್ನು ಮಾರಾಟಕ್ಕಿಡಲಾಗಿದೆ. ಒಂದು ದೇಶದ ಪ್ರೈಮ್ ಮಿನಿಸ್ಟರ್ ಆಫೀಸ್ ನಿಂದ ಅಷ್ಟು ಸೆಕ್ಯೂರಿಟಿಯನ್ನು ದಾಟಿ ಹ್ಯಾಕ್ ಮಾಡಿ ಮಾರಾಟ ಮಾಡುವುದು ಸುಲಭವಂತೂ ಅಲ್ಲವೇ ಅಲ್ಲ. ಹಾಗೆಂದು ಇದು ಎಷ್ಟರ ಮಟ್ಟಿಗೆ ಸರಿ ಎನ್ನುತ್ತಿದ್ದೀರಾ..?? ಡಾರ್ಕ್ ವೆಬ್ ಲೋಕದಲ್ಲಿ ಎಲ್ಲಕ್ಕೂ ಬೆಲೆ ಇದೆ. ಇಲ್ಲಿ ಡೇಟಾಗೆ ಹೆಚ್ಚಿನ ಬೆಲೆ ಕಟ್ಟಲಾಗುತ್ತದೆ.
ಇಂತಹಾ ಡೇಟಾ ರಶ್ ನಿಂದ ಹಣ ಮಾಡಿಕೊಳ್ಳುವ ಸಲುವಾಗಿ ಜೀವಕ್ಕೆ ಕುತ್ತು ತಂದಿಟ್ಟವರೂ ಇದ್ದಾರೆ. ಫಿಲಿಫ್ ಬುಡೈಕಿನ್ ಎಂದರೆ ಯಾರು ಎಂದರೆ ಅಷ್ಟು ಸುಲಭವಾಗಿ ಗೊತ್ತಾಗದು. ಆದರೆ, 'ಬ್ಲೂ ವೇಲ್' ಗೇಮ್ ಗೊತ್ತಾ ಎಂದರೆ ಹೌದು.. ಇದು ಮಾಮೂಲಿನ ಆಟವಲ್ಲ. ಡಾರ್ಕ್ ವೆಬ್ ನ ಕೆಲವು ಗುಂಪುಗಳು ಅಪಾಯಕಾರಿ ಟಾಸ್ಕ್ ಗಳನ್ನು ನೀಡುತ್ತಾ 50 ದಿನಕ್ಕೆ 50 ಟಾಸ್ಕ್ ಗಳನ್ನು ನೀಡುತ್ತಾ ಈ ಆಟ ಆಡುವವರನ್ನು ಪ್ರಚೋದಿಸುತ್ತಿತ್ತು. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್. ಇದು ಹಲವು ಗುಂಪುಗಳಲ್ಲಿ ಎಫ್57 ಅಥವಾ ಓಷನ್ ವೇಲ್ ಎಂದೇ (ಕು)ಖ್ಯಾತಿ ಪಡೆದಿತ್ತು.
ಇದು ಮೊದಲು ಶುರುವಾಗಿದ್ದು ರಷ್ಯಾದಲ್ಲಿ. 2015 ರ ನವೆಂಬರ್ 22 ರಂದು ರೀನಾ ಪಾಲೆನ್ಕೋವಾ ಎನ್ನುವ ಟೀನೇಜರ್ ಒಬ್ಬಳು ತನ್ನ ಸೋಶಿಯಲ್ ಮೀಡಿಯಾ ವಿಕೊನ್ಟಾಟೆಯಲ್ಲಿ "ನ್ಯಾ ಬೈ" ಎನ್ನುವ ಕ್ಯಾಪ್ಷನ್ ನೀಡಿ ಸೂಸೈಡ್ ಸೆಲ್ಪಿಯನ್ನು ಪೋಸ್ಟ್ ಮಾಡುತ್ತಾಳೆ. ಇದಕ್ಕೆ ಕಾರಣ ಯಾರಿಗೂ ಗೊತ್ತಿರಲಿಲ್ಲ. ಈ ಘಟನೆಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಕಾರಣ, ಆತ್ಮಹತ್ಯೆಗೆ ಕೇವಲ ಒಂದೇ ಕಾರಣ ಇರುವುದಿಲ್ಲವಲ್ಲಾ. ಏಕಾಂಗಿತನ, ಒತ್ತಡ ಹೀಗೆ ಹಲವಾರು ಇರುತ್ತವಲ್ಲಾ.
ಮೇ 2016 ರಲ್ಲಿ ಅಲ್ಲಿನ ನ್ಯೂಸ್ ಪೇಪರ್ ನೋವಾಯಾ ಗಾಜೆಟಾದಲ್ಲಿ ಜರ್ನಲಿಸ್ಟ್ ಗಲಿನಾ ಮುರ್ಸಾಲಿಯೆವಾ ಇಂತಹಾ ಟೀನೇಜರ್ ಗಳ ಹತ್ಯೆಯ ಕುರಿತು ಬರೆಯುತ್ತಾರೆ. ಇದುವರೆಗೂ ಅಂತಹಾ 130 ಆತ್ಮಹತ್ಯೆ ನಡೆದಿವೆ ಎನ್ನುತ್ತಾರೆ. ಆದರೆ, ಯಾರೂ ಅದನ್ನು ನಂಬಲು ಸಿದ್ಧರಿರುವುದಿಲ್ಲ. ಇವರ ಬಳಿ ಗಟ್ಟಿ ಸಾಕ್ಷ್ಯಗಳೂ ಇರುವುದಿಲ್ಲ. ಆದರೆ, ಇಂತಹಾ ಒಬ್ಬ ಆತ್ಮಹತ್ಯೆ ಮಾಡಿಕೊಂಡ ಟೀನೇಜರ್ ತಂದೆ ಸರ್ಜೆ ಪೆಸ್ಟೋವ್ ಹಾಗೂ ತಾಯಿ ಸೈಬರ್ ಕ್ರೈಮ್ ನಿಂದ ಮಕ್ಕಳನ್ನು ಆಚೆಗೆ ಕರೆತರುವ ಸಂಸ್ಥೆ ನಡೆಸುತ್ತಿರುತ್ತಾರೆ. ಅವರು ಕೂಡಾ ಇದಕ್ಕೆ ಅನುಮೋದಿಸುತ್ತಾರೆ. ಆದರೆ, ಆ ಸಂಖ್ಯೆ ಅಷ್ಟೊತ್ತಿಗೆ 200 ದಾಟಿರುತ್ತದೆ.
2016 ರಲ್ಲಿ 21 ವರ್ಷದ ಬ್ಲ್ಯೂ ವೇಲ್ ಗೇಮ್ ಕಂಡು ಹಿಡಿದ ಫಿಲಿಫ್ ಬುಡೈಕಿನ್ ಬಂಧನವಾಗುತ್ತದೆ. ಆಗ ಇನ್ನಷ್ಟು ಮಾಹಿತಿಗಳು ತಿಳಿಯುತ್ತವೆ. ಬ್ಲೂ ವೇಲ್ ಎಂದು ಆಟದ ಹೆಸರಿಟ್ಟದ್ದು ಏಕೆ ಗೊತ್ತಾ ? ಈ ಬ್ಲೂ ವೇಲ್ ಗಳು ತಾವು ಸಾಯುವಾಗ ತಾವಾಗಿಯೇ ಸಾಗರದಂಚಿಗೆ ಬಂದು ದಂಡೆಯ ಮೇಲೆ ಸತ್ತು ಬೀಳುತ್ತವೆ. ಇದಕ್ಕೆ 'ಬೀಚಿಂಗ್' ಎನ್ನುತ್ತಾರೆ. ಈ ಆಟವನ್ನೂ ಇದೇ ರೀತಿ ರೂಪಿಸಲಾಗಿತ್ತಲ್ಲಾ ಹಾಗಾಗಿ ಈ ಹೆಸರು. ಈತನ ಹೆಸರಿನ ಉಚ್ಚಾರಣೆಯ ಮೊದಲ ಅಕ್ಷರ ಹಾಗೂ ಈತನ ಫೋನ್ ನಂಬರ್ ನ ಎರಡು ಅಂಕಿಗಳನ್ನು ಸೇರಿಸಿ ಎಫ್57 ಎಂದೂ ನಾಮಕರಣ ಮಾಡಿದ್ದ. ಮೊದಮೊದಲು ತಾನು ಸಮಾಜದಿಂದ ಕೆಲವರನ್ನು ತಾವಾಗಿಯೇ ದೂರ ಮಾಡಲು ಈ ಮಾರ್ಗ ಅನುಸರಿಸುತ್ತಿದ್ದೆ ಎಂದು ಹೇಳಿಕೊಳ್ಳುತ್ತಿದ್ದನಾದರೂ ನಿಜ ವಿಚಾರ ಬೇರೆಯೇ ಇತ್ತು. ಈ ರೀತಿಯ ಅತಿ ಹೆಚ್ಚು ಬೇಡಿಕೆಯ ಡೇಟಾಗಳನ್ನು ಪೂರೈಸಿ ಹಣ ಮಾಡಿಕೊಳ್ಳುತ್ತಿದ್ದ. ರಷ್ಯಾ ಮಾತ್ರವಲ್ಲದೇ ಭಾರತ ಸೇರಿದಂತೆ ಎಷ್ಟೋ ದೇಶಗಳಲ್ಲಿ ಮಕ್ಕಳು ಇದರಿಂದ ಬಲಿಯಾದದ್ದು ವಿಪರ್ಯಾಸ.
ಹೀಗೆ ಡಾರ್ಕ್ ವೆಬ್ ನಲ್ಲಿ ಸಿಲ್ಕ್ ಬೋರ್ಡ್ ಎನ್ನುವ ವೆಬ್ಸೈಟ್ ಅನ್ನು ನಿರ್ಮಾಣ ಮಾಡಿ ಅದರಲ್ಲಿ ಡ್ರಗ್ಸ್ ಅಲ್ಲಿ ಕೊಳ್ಳುವುದು ಹಾಗೂ ಮಾರುತ್ತಿದ್ದದ್ದನ್ನು ಮಾಡುತ್ತಿದ್ದ ರಾಸ್ ಅಲ್ಬ್ರಿಕ್ಚ್ ಅನ್ನು 2013 ರಲ್ಲಿ ವಿಚಾರಣೆ ನಡೆಸಿ ಬಂಧಿಸಲಾಯಿತು.
ಈ ಡಾರ್ಕ್ ವೆಬ್ ನಲ್ಲಿ ಸೈಬರ್ ಕ್ರಿಮಿನಲ್ಸ್ ಗಳಿಂದ ಕ್ರಿಪ್ಟೋ ಕರೆನ್ಸಿಯ ಬಳಕೆ ಇತ್ತೀಚೆಗೆ ಹೆಚ್ಚಾಗಿದೆ. ಏಕೆಂದರೆ, ಇಲ್ಲಿ ಯಾವುದೇ ರೀತಿಯ ಗುರುತುಗಳನ್ನೂ ಬಿಟ್ಟುಕೊಡಲಾಗುವುದಿಲ್ಲ ಎಂಬ ಧೈರ್ಯ ಅವರಿಗೆ. ಇದನ್ನು ಗಮನಿಸಿದ ಜಿ-20 ಹಾಗೂ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಆನ್ಲೈನ್ನಲ್ಲಿ ಕ್ರಿಪ್ಟೋ ವ್ಯವಹಾರ ಮಾಡುವವರ ಮಾಹಿತಿ ಬಹಿರಂಗ ಮಾಡಿ ಎಂದು ಕ್ರಿಪ್ಟೋ ಕರೆನ್ಸಿ ಕಂಪೆನಿಗಳಿಗೆ ಹೇಳಿದೆ. ಆದರೆ, ಯಾವ ಮಾಹಿತಿಯೂ ಅವರಿಗೆ ಲಭ್ಯವಾಗುತ್ತಿಲ್ಲ.
ಈ ಡಾರ್ಕ್ ವೆಬ್ ಅಲ್ಲಿ ಸರ್ಚ್ ಮಾಡಲು ಬಳಸುವ ಬ್ರೌಸರ್ ಹೆಸರು ಟಾರ್ ಬ್ರೌಸರ್. ನಾವು ಗೂಗಲ್ ಕ್ರೋಮ್ ಅನ್ನು ಬಳಸುತ್ತೇವಲ್ಲಾ ಅದರ ಬದಲು ಟಾರ್ ಬ್ರೌಸರ್ ಅನ್ನು ಬಳಸಲಾಗುತ್ತದೆ. ಇದು ಯು.ಎಸ್ ನೇವಲ್ ರಿಸರ್ಚ್ ಲ್ಯಾಬ್ ಫಂಡ್ ನೀಡಿದ್ದ ಪ್ರಾಜೆಕ್ಟ್ ದ ಆನಿಯನ್ ರೂಟರ್. ಅದನ್ನೇ ಶಾರ್ಟ್ ಆಗಿ ಟಾರ್ ಎನ್ನುವುದು. ವೈಯಕ್ತಿಕ ಡೇಟಾ ಸುರಕ್ಷಿತವಾಗಿರಲಿ ಎನ್ನುವ ಉದ್ದೇಶದಿಂದ ಸುರಕ್ಷಿತ ಹಾಗೂ ಸುಲಭವಾಗಿ ಸರ್ಚ್ ಮಾಡುವ ಉದ್ದೇಶದಿಂದ ರೂಪಿಸಲಾಯಿತು. ನಾವು .ಕಾಮ್, .ಇನ್ ಎಂದೆಲ್ಲಾ ಬಳಸುವ ವೆಬ್ಸೈಟ್ ಗಳಿಲ್ಲ ಇಲ್ಲಿ. ಬದಲಾಗಿ, .ಆನಿಯನ್ ಎಂದು ಬಳಸಲಾಗುತ್ತದೆ.
ಡಾರ್ಕ್ ವೆಬ್ ನಲ್ಲಿ ಎಲ್ಲವೂ ಆಕ್ರಮವಲ್ಲ. ನಾವು ಯಾವ ರೀತಿ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಇದರ ಪರಿಣಾಮ ಇದೆ. ಇದರಲ್ಲಿ ಚೆಸ್ ಕ್ಲಬ್ ಹಾಗೂ ಬ್ಲಾಕ್ ಬುಕ್ ಇದೆ. ಇದು ಒಂದು ರೀತಿಯಲ್ಲಿ ಡಾರ್ಕ್ ವೆಬ್ ನ ಫೇಸ್ಬುಕ್ ಎಂದರೂ ತಪ್ಪಾಗಲಾರದು. ಯಾರ ಭಯವೂ ಇಲ್ಲದೆ, ಯಾರಾದರೂ ತಡೆಯುತ್ತಾರೆ ಎನ್ನುವ ಅಳುಕಿಲ್ಲದೆ ಇಲ್ಲಿ ನಿಮ್ಮ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು.
ಪ್ರೈವೆಸಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲಿನ ಪಾಸಿಟಿವ್ ಪಾಯಿಂಟ್ ಎನ್ನಬಹುದು. ಸುಲಭವಾಗಿ ಸಾಧ್ಯವಾಗುವ ಕ್ರಿಮಿನಲ್ ಆಕ್ಟಿವಿಟಿ ಹಾಗೂ ಮತ್ತೊಬ್ಬರ ಪ್ರೈವೆಸಿಯನ್ನು ಹ್ಯಾಕ್ ಮಾಡುವುದು ಇಲ್ಲಿನ ನೆಗೆಟಿವ್ ಎನ್ನಬಹುದು. ಇದು ಒಂದು ರೀತಿಯಲ್ಲಿ ಎರಡು ಅಲಗಿನ ಕತ್ತಿಯಂತೆ ಎಂದರೂ ತಪ್ಪಾಗಲಾರದು.
ಟಾರ್ ಬ್ರೌಸರ್ ಅನ್ನು ಬಳಸಲು ವಿ.ಪಿ.ಎನ್ ಮೂಲಕ ಅದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಇದು ಪಬ್ಲಿಕ್ ನೆಟ್ವರ್ಕ್ ನಲ್ಲಿ ಕೂಡಾ ಪ್ರೈವೆಸಿಯನ್ನು ಒದಗಿಸುತ್ತದೆ. ನಂತರ ಇದರ ಮೂಲಕ ಡಾರ್ಕ್ ವೆಬ್ ಹಾಗೂ ಡೀಪ್ ವೆಬ್ ಗೆ ಕನೆಕ್ಟ್ ಆಗಬಹುದು. ಆದರೆ, ಬಹಳ ಎಚ್ಚರವಾಗಿರಿ. ನಿಮ್ಮ ಕಂಪ್ಯೂಟರ್ ನಲ್ಲಿ ಸ್ಟ್ರಾಂಗ್ ಆದ ಸೆಕ್ಯೂರಿಟಿ ಸಾಫ್ಟ್ವೇರ್ ಇದ್ದರೆ ಮಾತ್ರ ನೀವು ಇದನ್ನು ಬಳಸಬಹುದು. ಇಲ್ಲವಾದಲ್ಲಿ ಯಾವುದಾದರೂ ಮಾಲ್ವೇರ್ ಅಥವಾ ಫಿಶಿಂಗ್ ಸ್ಕ್ಯಾಮ್ ಗಳಿಗೆ ಸಿಲುಕಿ ಕೊಳ್ಳಬಹುದು ಹುಷಾರ್.
ಡಿಜಿಟಲ್ ಫೂಟ್ ಪ್ರಿಂಟ್ ಮೂಡಿಸದ ಹಾಗೆ ಇಂಟರ್ನೆಟ್ ಬಳಕೆ ಸಾಧ್ಯ ಎನ್ನುವುದು ನಿಜವಾದರೂ ಇಲ್ಲಿ ಬೇರೆಯದ್ದೇ ರೀತಿಯ ಸಮಸ್ಯೆಗಳೂ ಇವೆ. ಇಂತಹಾ ಸಮಸ್ಯೆಗಳಲ್ಲಿ ಹ್ಯಾಕಿಂಗ್ ಕೂಡಾ ಒಂದು. ವೈರಸ್, ಮಾಲ್ವೇರ್, ಫಿಶಿಂಗ್ ಹಾಗೂ ಹ್ಯಾಕಿಂಗ್ ನ ಎರಡು ಮುಖಗಳನ್ನು ತಿಳಿಯೋಣ ಮುಂದಿನ 'ಟೆಕ್ - ಟಾಕ್' ನಲ್ಲಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ