ಬುಧವಾರ, ಏಪ್ರಿಲ್ 15, 2026

'ಸ್ಮಾರ್ಟ್' ಆಗಿ 'ಸ್ಟಾರ್ಟ್' ಮಾಡೋಣ (ಟೆಕ್ - ಟಾಕ್ - 1)


'ಸ್ಮಾರ್ಟ್' ಆಗುವತ್ತ ಹೆಜ್ಜೆ ಹಾಕುತ್ತಿದ್ದೇವೆ ಸರಿ. ಆದರೆ, ಈ ಸ್ಮಾರ್ಟ್ ದೇಹ ಸೌಂದರ್ಯದ ಸ್ಮಾರ್ಟ್ ಅಲ್ಲ ಮತ್ತೆ. ಇದು ಆಲೋಚನೆಯನ್ನು ಬದಲಾಯಿಸಿಕೊಳ್ಳುತ್ತಾ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸ್ಮಾರ್ಟ್ ಆಲೋಚನೆ. ನಾವೂ ಸ್ಮಾರ್ಟ್ ಆಗೋಣ.. ಆಗುವುದೇನು ಈಗಾಗಲೇ ಆಗುತ್ತಲಿದ್ದೇವೆ. ಎಲ್ಲೆಲ್ಲಿ ನೋಡಿದರೂ ಸ್ಮಾರ್ಟ್ ಫೋನ್ ಗಳದ್ದೇ ಕಾರುಬಾರು. ಆದರೆ, ನಾವು ಈ ಸ್ಮಾರ್ಟ್ ಫೋನ್ ಗಳ ಬಗ್ಗೆ ಎಷ್ಟು ತಿಳಿದಿದ್ದೇವೆ ? ನಾವು ಬಳಸುವ ತಂತ್ರಜ್ಞಾನದ ಕುರಿತು ಎಷ್ಟು ಅರಿವು ಮುಡಿಸಿಕೊಂಡಿದ್ದೇವೆ ಹೇಳಿ ? ಅರಿವಿದ್ದರೆ ಸಂತೋಷ. ಅರಿವಿಲ್ಲದಿದ್ದರೆ ಅರಿವಾಗಿಸಿಕೊಳ್ಳುವುದರಲ್ಲಿ ತಪ್ಪಿಲ್ಲ ಅಲ್ಲವೇ ? 


ಅರಿವಿದ್ದವರಿಗೆ ಅರಿವಾಗಿಸುವ ಅಗತ್ಯವಿಲ್ಲ. ಅರಿವಿಲ್ಲದಿದ್ದವರಿಗೆ ಅರಿವು ಮೂಡಿಸುವುದರಲ್ಲಿ ತಪ್ಪಿಲ್ಲ. ಆದರೆ, ಅದೇ ಅರ್ಧಂಬರ್ಧ ಅರಿವಿದ್ದರೆ ಏನು ಮಾಡುವುದು ? ಅದನ್ನೇ ತಪ್ಪು ಮಾಹಿತಿಯಾಗಿ ರವಾನಿಸಿದಾಗ ಎಷ್ಟು ಜನ ಅದನ್ನು ತಪ್ಪಾಗಿಯೇ ಅರ್ಥೈಸಿಕೊಳ್ಳುತ್ತಾರೆ ಅಲ್ಲವಾ ? 


ಮೊನ್ನೆ ಹೀಗೆಯೇ ಆಗಿದ್ದು. ಬೇಕರಿಯೊಂದಕ್ಕೆ ಹೋಗಿ ಬೇಕಾದ ತಿನಿಸು ತೆಗೆದುಕೊಂಡ ನಂತರ ಈಗೀಗ ನನಗೆ ರೂಢಿಯಾಗಿರುವಂತೆ ಆನ್ಲೈನ್ ನಲ್ಲಿ ಪಾವತಿಸಲು ಸ್ಕ್ಯಾನ್ ಮಾಡಲು ಕೋಡ್ ಇದೆಯಾ ಎಂದು ವಿಚಾರಿಸುತ್ತಿದ್ದೆ. ನನಗಿಂತ ಸರದಿಯಲ್ಲಿ ಮುಂದಿದ್ದವರು ಸಹಾ "ಜಿ-ಪೇ" ಎಂದರು. ಕೋಡ್ ಇಲ್ಲ ನಂಬರ್ ಇದೆ ಎಂದು ನಂಬರ್ ನೀಡಿದರು. "ಕ್ಯೂ ಆರ್ ಕೋಡ್ ಅನುಕೂಲ ಅಲ್ಲವಾ?" ಎಂದಾಗ ಅಲ್ಲೇ ಕ್ಯಾಶಿಯರ್ ಪಕ್ಕ ಇದ್ದ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು "ಅಯ್ಯೋ ಈಗಿನ ಕಾಲದ ಹುಡುಗರು ಬಿಡಿ ಐದು ರೂಪಾಯಿ ಬಿಸ್ಕೆಟ್ ತೆಗೆದುಕೊಂಡರೂ ಸ್ಕ್ಯಾನ್ ಅನ್ನುತ್ತವೆ. ಹತ್ತು ರೂಪಾಯಿ ಟೀ ತೆಗೆದುಕೊಂಡರೂ ಸ್ಕ್ಯಾನ್ ಅನ್ನುತ್ತವೆ. ಹಾಗೆಲ್ಲಾ ಇವರು ದುಡ್ಡು ಸ್ಕ್ಯಾನ್ ಮಾಡಿದರೆ ಬ್ಯಾಂಕ್ ನಲ್ಲಿ ಒಂದು ಲಕ್ಷ ಇರೋ ಟರ್ನ್ ಓವರ್ ಹತ್ತು ಲಕ್ಷ ಅಂತಾ ತೋರಿಸುತ್ತೆ. ಅಲ್ಲದೇ, ಹೀಗೆಲ್ಲಾ ಸ್ಕ್ಯಾನ್ ಮಾಡಿದ ದುಡ್ಡು ಕೈಗೆ ಸಿಗುವುದಿಲ್ಲವಂತೆ. ಸ್ಕ್ಯಾನ್ ಮಾಡಿ ಹಾಕಿದ ದುಡ್ಡನ್ನು ಹೀಗೆಯೇ ಸ್ಕ್ಯಾನ್ ಮಾಡಿಯೇ ಖಾಲಿ ಮಾಡಬೇಕಂತೆ" ಎಂದರು. ಅಲ್ಲಿದ್ದವರೂ "ಹೌದಾ" ಎಂದು ಹೇಳಿ ಆ ನಂಬರ್ ಗೆ ಆನ್ಲೈನ್ ನಲ್ಲಿ ಪಾವತಿಸಿ ಮುನ್ನಡೆದರು. ಸ್ವಲ್ಪ ಗೊತ್ತಿದ್ದರೆ ತಿಳಿಸಿ ಹೇಳುತ್ತಿದ್ದರಾ ಎಂದೆನಿಸಿದರೂ ಮರುಕ್ಷಣಕ್ಕೆ ಇದರ ಗೊಡವೆ ನಮಗ್ಯಾಕೆ ಎಂದೆನಿಸಿ ಸುಮ್ಮನೆ ಹೋಗುತ್ತಿದ್ದರಾ ಎಂದೂ ಅನ್ನಿಸಿತು.


ಮತ್ತೆ ಕೆಲವರು ಇದನ್ನು 'ಕ್ಯಾಶ್ ಲೆಸ್ ಪೇಮೆಂಟ್' ಎನ್ನುತ್ತಾರೆ. ಆದರೆ, ಇದು 'ಕ್ಯಾಶ್ ಲೆಸ್' ಅಲ್ಲ 'ಕಾಂಟ್ಯಾಕ್ಟ್ ಲೆಸ್ ಪೇಮೆಂಟ್'. ಹಣವೇ ಇಲ್ಲದ ವಹಿವಾಟಲ್ಲ ಇದು. ಬದಲಿಗೆ ಒಬ್ಬರು ಮತ್ತೊಬ್ಬರ ಸಂಪರ್ಕಕ್ಕೆ ಬಾರದಂತೆ ಮಾಡುವ ಹಣದ ವಹಿವಾಟು ಇದು. ಮೊದಲಿದ್ದ 'ಬಾರ್ಟರ್ ಸಿಸ್ಟಮ್' ಎಂದರೆ ಒಂದು ವಸ್ತುವನ್ನು ಕೊಟ್ಟು ಮತ್ತೊಂದಕ್ಕೆ ಬದಲಿ ಮಾಡುವ ವ್ಯವಸ್ಥೆ ಬದಲಾಯಿತು. ನಂತರ ಒಂದು ವಸ್ತುವಿಗೆ ಬೆಲೆ ಕಟ್ಟಿ ಹಣ ಕೊಟ್ಟು ವಹಿವಾಟು ನಡೆಸುವ ಪದ್ದತಿ ಈಗ ಇದ್ದರೂ.. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಎ.ಟಿ.ಎಂ ಹೀಗೆ ವಿವಿಧ ಪದ್ಧತಿಗಳು ಬಂದರೂ ಸಣ್ಣ ಪುಟ್ಟ ವ್ಯಾಪಾರಗಳಿಗೆ, ಚಿಲ್ಲರೆ ವ್ಯವಹಾರಗಳಿಗೆ ಕಾರ್ಡ್ ಬಳಸುವುದು ಕಡಿಮೆಯೇ.. ಕೊರೊನಾ ಕಾಲಘಟ್ಟದಿಂದ ಈ 'ಕಾಂಟ್ಯಾಕ್ಟ್ ಲೆಸ್ ಪೇಮೆಂಟ್' ಹೆಚ್ಚೆಚ್ಚು ಬಳಕೆಯಲ್ಲಿದೆ. ಇದರಿಂದ ಚಿಲ್ಲರೆ ಸಮಸ್ಯೆಗೆ ಪರಿಹಾರ ಸಿಗುತ್ತಿದೆ. 


ಸ್ಕ್ಯಾನ್ ಮಾಡಲು ಬಳಸುವ ಕೋಡ್ ಕ್ಯೂ.ಆರ್.ಕೋಡ್ (QR code) ಎಂದರೇನು ? ಅದರ ಬಳಕೆ ಹೇಗೆ ? ಅದರ ಮೂಲಕ ಆನ್ಲೈನ್ ಪೇಮೆಂಟ್ ಆಗುವುದು ಮತ್ತು ಅದರ ಸಾಧಕ-ಭಾದಕಗಳ ಕುರಿತು ತಿಳಿಯೋಣ ಮುಂದಿನ 'ಟೆಕ್ - ಟಾಕ್' ಅಂಕಣದಲ್ಲಿ

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ