ಪುಸ್ತಕದ ಶೀರ್ಷಿಕೆ : ಹೊಕ್ಕಳ ಮೆದುಳು
ಲೇಖಕರು : ಡಾ| ಕೆ.ಎನ್. ಗಣೇಶಯ್ಯ
ಪ್ರಕಾಶಕರು : ಅಂಕಿತ ಪುಸ್ತಕ
ಪ್ರಥಮ ಮುದ್ರಣ : 2024
ಪುಟಗಳು : 104
ಬೆಲೆ : 150 ರೂ.
ಕಥಾಸಂಕಲನ ಅಥವಾ ಕಾದಂಬರಿ ಎನ್ನುವ ಹೆಸರು ಚಿರಪರಿಚಿತವಾದದ್ದು. ಆದರೆ, ಕಥಾಂಬರಿ ಎಂಬ ಶಬ್ದವೇ ನನ್ನಲ್ಲಿ ಮೊದಲಿಗೆ ಕುತೂಹಲ ಹುಟ್ಟಿಸಿತು. ಕಥಾಂಬರಿ ಎಂದರೆ ಕಥೆ ಹಾಗೂ ಕಾದಂಬರಿಗಳೆರಡರ ನಡುವಿನ ಪದವಿರಬಹುದು ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕದ್ದು ಹೊಕ್ಕಳ ಮೆದುಳು ಕಾದಂಬರಿಯನ್ನು ತೆರೆದಾಗ
'ಈ ಕೃತಿ ಕಾದಂಬರಿಯೋ, ನೀಳ್ಗಥೆಯೋ ಎಂಬ ಪ್ರಶ್ನೆ. ಮಿನಿ-ಕತೆ, ಕಿರುಗತೆ, ಕತೆ, ನೀಳ್ಗತೆ, ಕಿರು ಕಾದಂಬರಿ, ಕಾದಂಬರಿ ಬೃಹತ್ ಕಾದಂಬರಿ... ಹೀಗೆ ಕಥಾ-ಕೃತಿಗಳನ್ನು ಅವುಗಳ ಗಾತ್ರದ ಮೇಲೆ ವರ್ಗೀಕರಿಸುವ ಕ್ರಮಕ್ಕೆ ಯಾವುದೇ ವಸ್ತುನಿಷ್ಟವಾದ ನಿಯಮಗಳಿಲ್ಲ ಎನ್ನಬಹುದು' ಎನ್ನುತ್ತಾರೆ ಲೇಖಕರು. ಕಿರುಕಾದಂಬರಿ ಎಂದು ಕರೆಯುವುದು ಸರಿ ಕಾಣದಾದಾಗ ನೀಳ್ಗತೆಯೂ ಅಲ್ಲದ ಇದಕ್ಕೆ ಎರಡು ವರ್ಗಗಳ ನಡುವಿನ ಕೃತಿಯನ್ನು ಕಥಾಂಬರಜೆ ಎಂಬ ಹೈಬ್ರಿಡ್ ಪದವಾಗಿ ಬಳಸಿದರು. ಹೊಸ ಪದವೊಂದು ಭಾಷೆಗೆ ಸೇರುವುದೇ ಈಗಲ್ಲವೇ..?! ಹಾಗಾದರೆ, ಈ ರೀತಿಯ ಕಥಾಂಬರಿ ಬೇರೆ ಯಾವುದಾದರೂ ಇದೆಯಾ ಎಂಬುದಕ್ಕೆ ಇಲ್ಲಿಯೇ ಉತ್ತರವೂ ಸಿಕ್ಕಿತು. ಅಕ್ಷರ ಪ್ರಕಾಶನದ ಎಂ. ಎಸ್. ಶ್ರೀರಾಮ್ ಅವರ 'ಬೇಟೆಯೆಲ್ಲ ಆಟವೆಲ್ಲ' ಎನ್ನುವ ಕೃತಿಯನ್ನೂ ಅವರು ಕಥಾಂಬರಿ ಎಂದೇ ಕರೆದುಕೊಂಡಿದ್ದಾರೆ ಎನ್ನುವ ವಿಚಾರ ತಿಳಿದು ಬಂತು.
ನ್ಯೂಯಾರ್ಕ್ ನ ಮೌಂಟ್ ಸಿನಾಯ್ ಆಸ್ಪತ್ರೆಯ ಮನೋವೈದ್ಯ ವಿಭಾಗದ ಡಾಕ್ಟರಾದ ಬ್ಯಾಕರ್ ಅವರು ಸಾಯುವ ಮುನ್ನ ಚಿಕಿತ್ಸೆ ಮಾಡಿದ್ದ ರೋಗಿ ಹತ್ತು ತಿಂಗಳಿಂದ ಮನೋವಿಕಲತೆಗೆ ಚಿಕಿತ್ಸೆ ಪಡೆಯುತ್ತಿದ್ದ 30 ವರ್ಷದ ಕಾರ್ಲೋಸ್. ಆತ ಸಂಪೂರ್ಣ ಗುಣಮುಖನಾಗಿದ್ದಾನೆ ಎಂದು ಆತನನ್ನು ಬಿಡುಗಡೆಗೊಳಿಸಿಯಾಗಿತ್ತು. ಆದರೂ.. ಆತನನ್ನು ಬಿಡುಗಡೆ ಮಾಡುವಾಗ ಕಾರ್ಲೋಸ್ ಗೆ ಪ್ರತಿದಿನವೂ ಔಷಧಿ, ಮಾತ್ರೆಗಳನ್ನು ಕನಿಷ್ಠ ಒಂದೂವರೆ ವರ್ಷದವರೆಗೆ ವಾರಕ್ಕೊಮ್ಮೆ ತಪ್ಪದೇ ಸೇವಿಸಬೇಕೆಂದೂ ಹಾಗೂ ತಾಜಾ ಮಾತ್ರೆಗಳನ್ನೇ ಸೇವಿಸಬೇಕೆಂದು ಹೇಳಿದ್ದು ಅವರ ಇಂಟರ್ನ್ ಆಗಿದ್ದ ವೈಜರ್ ಗೆ ಅಚ್ಚರಿಯಾಗಿ ಕಂಡಿತ್ತು. ಏಕೆಂದರೆ, ಇಲ್ಲಿ ತಾಜಾ ಮಾತ್ರೆಗಳ ಅಗತ್ಯತೆ ಏನಿತ್ತು ಎಂಬುದು ಒಂದು ಪ್ರಶ್ನೆಯಾದರೆ, ಡಿಸ್ಚಾರ್ಜ್‌ನ ಪ್ರತಿಯಲ್ಲಿ ಆ ಯಾವುದೇ ಔಷಧಿ, ಮಾತ್ರೆಯನ್ನು ಅವರು ಸೂಚಿಸದಿದ್ದದ್ದು ವಿಚಿತ್ರವೆನಿಸಿತ್ತು. ಆದರೆ, ಬೇರೆಯ ರೀತಿಯಲ್ಲಿ ಯೋಚಿಸಿ ತನಗೆ ತಾನೇ ಸಮಜಾಯಿಷಿ ಕೊಟ್ಟುಕೊಂಡಿದ್ದ.
ಅದಾದ ಮೂರು ತಿಂಗಳ ನಂತರ ಇನ್ನೇನು ವೈಜರ್ ನ ಇಂಟರ್ನ್ ಶಿಪ್ ಅವಧಿ ಮುಗಿದು ಆತ ಅಲ್ಲಿಂದ ಹೊರಡಬೇಕೆಂಬ ಸಂದರ್ಭದಲ್ಲಿ ನಡೆದ ಮಾತಿನ ಚಕಮಕಿ ಡಾಕ್ಟರ್ ಬ್ಯಾಕರ್ ಅವರ ಸಾವಿಗೆ ಕಾರಣವಾಗಿತ್ತು. ಡಾಕ್ಟರ್ ಬ್ಯಾಕರ್ ರ ಸಹಾಯಕನಾಗಿದ್ದ ವೈಜರ್ನಿಂದಲೇ ಕೊಲೆಗೀಡಾಗಿದ್ದರೇ..?? ಅದಕ್ಕೆ ಕಾರಣವೇನಿತ್ತು..??
ನ್ಯೂಯಾರ್ಕ್ ನಲ್ಲಿ ನಡೆಯಲಿರುವ 'ವಿಜ್ಞಾನ, ಧರ್ಮ ಮತ್ತು ಆಧ್ಯಾತ್ಮಿಕತೆ' ಎಂಬ ಅಂತರರಾಷ್ಟ್ರೀಯ ಕಮ್ಮಟದಲ್ಲಿ ಭಾಗವಹಿಸಲೆಂದು ಕೋರಿ ನಿರ್ವಾಹಕ ಮಂಡಳಿಯ ಮುಖ್ಯಸ್ಥರಿಂದಲೇ ಬಂದಿದ್ದ ಆಹ್ವಾನಕ್ಕೆ ಓಗೊಟ್ಟು ಶಂಕರದೇವ ಗುರುಗಳು ನ್ಯೂಯಾರ್ಕ್ ಗೆ ಹೊರಟಿದ್ದರು. ಆದರೆ, ಅವರ ದೃಷ್ಟಿಯಲ್ಲಿ ಈ ಆಹ್ವಾನ ವಿಚಿತ್ರವಾಗಿ ಕಂಡಿತ್ತು. ಈ ಚರ್ಚೆ 'ವ್ಯಕ್ತಿ ಮತ್ತು ವ್ಯಕ್ತಿತ್ವ' ಎಂಬುದರ ಕುರಿತಾಗಿ ಎಂದು ನಡೆಸಲು ಯೋಚಿಸಿರುವುದು ಎಂದು ಉತ್ತರ ಸಿಕ್ಕಿತ್ತಾದರೂ.. ಇದೊಂದು ಕ್ಲೋಸ್ಡ್ ರೂಮ್ ಚರ್ಚೆ ಎಂದಿದ್ದರು. ಇದರ ಕುರಿತು ಪೂರ್ಣ ಸ್ಪಷ್ಟತೆ ಇಲ್ಲದೆಯೇ ಪ್ರಯಾಣ ಕೈಗೊಂಡಿದ್ದು.. ಅವರಿಗೆ ಒಂದು ರೀತಿಯ ಆತಂಕವನ್ನೂ ಬೇಸರವನ್ನೂ ತಂದಿತ್ತು.
ಆ ಚರ್ಚೆಯಲ್ಲಿ ಇವರಂತೆಯೇ ಹಲವರಿದ್ದರು. ಅಲ್ಲಿದ್ದ 20 ಮಂದಿ ಕೂಡಾ ಇದೇ ಪರಿಸ್ಥಿತಿಯಲ್ಲಿದ್ದರು.
ಈ ಚರ್ಚೆಗೂ.. ಡಾಕ್ಟರ್ ಬ್ಯಾಕರ್ ಅವರ ಕೊಲೆಗೂ ಒಂದು ಕೊಂಡಿಯಿತ್ತು. ಆ ಕೊಂಡಿ ಯಾವುದು..??
10 ತಿಂಗಳು ಸ್ನೇಹಿತನಂತೆ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದ ವೈಜರ್ ಹಾಗೂ ಬ್ಯಾಕರ್ ಅವರ ನಡುವೆ ನಡೆದ ಮಾತಿನ ಚಕಮಕಿಯೇನು..?? ಡಾಕ್ಟರ್ ಬ್ಯಾಕರ್ ಅವರ ಸಾವಿನ ನಂತರ ವೈಸರ್ ಕಾಣೆಯಾಗಿದ್ದವನು, ಪತ್ತೆಯಾಗಿದ್ದು ಎಲ್ಲಿ..?? ನ್ಯಾಯಾಲಯ ಅವನನ್ನು ಆರೋಪಿ ಎಂದು ಪರಿಗಣಿಸಿದ್ದರೂ.. ಆತನ ವಿಚಿತ್ರವಾದ ವಾದ ನ್ಯಾಯಾಧೀಶರನ್ನು ಗೊಂದಲಕ್ಕೆ ತಳ್ಳಿದ್ದಕ್ಕೆ ಕಾರಣವೇನು..?? ಆತನ ರೋಗಿ ಕಾರ್ಲೋಸ್ ನ ಪ್ರಸಂಗಕ್ಕೂ, ಇದಕ್ಕೂ ಏನಾದರೂ ಸಂಬಂಧವಿದೆಯಾ..?? ಆತನ ಹಿನ್ನೆಲೆಯೇನು..?? ಕ್ಯಾಥರೀನ್ ತನ್ನ ವಾದವನ್ನು ಮುಂದಿಟ್ಟಿದ್ದರೆ ಏನಾಗುತ್ತಿತ್ತು..?? ಆಕೆ ಸುಮ್ಮನೆ ಉಳಿದದ್ದೇಕೆ..?? ಈ ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಈ ರೋಚಕವಾದ ಕಥಾಂಬರಿಯನ್ನು.
ಇಲ್ಲಿ ಗಟ್-ಬ್ರೈನ್ ಆಕ್ಸಿಸ್ ಕುರಿತ ಉಲ್ಲೇಖವಿದೆ. ಎಂದರೆ ಕರುಳು ಮೆದುಳಿನ ಪದದ ಸಂಬಂಧವನ್ನು ಹೇಳಿದ್ದಾರೆ. ಶೀರ್ಷಿಕೆಯ ಕುರಿತು ತಿಳಿಯಲು ಇದನ್ನು ಅವಶ್ಯಕವಾಗಿ ಓದಲೇಬೇಕು. ಕುತೂಹಲಕ್ಕಾಗಿ ಇದರ ಒಂದು ಉದಾಹರಣೆಯನ್ನು ಕೊಡುವುದಾದರೆ.. ಹೊಟ್ಟೆಯೊಳಗೆ ಚಿಟ್ಟೆ ಓಡಾಡಿದಂತಾಗುತ್ತದೆ ಎನ್ನುವ ಪದವನ್ನು ನಾವು ಉಪಯೋಗಿಸುವುದನ್ನು ನೀವು ಕೇಳಿರಬಹುದು. ಪರೀಕ್ಷೆ ಬರೆಯುವ ಮುನ್ನ ಕೆಲವರಿಗೆ ತಳಮಳ ಉಂಟಾಗುವುದು.. ಅದಕ್ಕೂ, ಇದಕ್ಕೂ ಏನಾದರೂ ಸಂಬಂಧವಿದೆಯಾ ಎಂದಿರಾ..? ಖಂಡಿತವಾಗಿಯೂ ಇದೆ.
ನಮ್ಮನ್ನು 'ನಾವು' ಎನ್ನುವುದಕ್ಕೆ ಸರಿಯೋ ಅಥವಾ 'ನಾನು' ಎನ್ನುವುದು ಸರಿಯೇ..??
ಹೊಸ ಜೀವಾಣುಗಳಿಂದ ಮನೋರೋಗ ಉದ್ಭವಿಸಬಹುದಾ..??
ಸೂಕ್ಷ್ಮಾಣುಗಳಿಂದ ದೇಹದ ಆರೋಗ್ಯ ಮಾತ್ರವಲ್ಲದೆ, ಮಾನಸಿಕ ಆರೋಗ್ಯದಲ್ಲೂ ವ್ಯತ್ಯಾಸವಾಗುತ್ತದಾ..??
ಕೆಲವು ಅನುವಂಶಿಕ ಧಾತುಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎನ್ನುತ್ತಾರೆ. ಇದಕ್ಕೆ ಅನುವಂಶಿಕ ಧಾತುಗಳು ಮಾತ್ರ ಕಾರಣವೇ..??
ಇಂತಹ ಹಲವಾರು ಪ್ರಶ್ನೆಗಳಿಗೆ ನಮಗೆ ಉತ್ತರ ದೊರೆಯುತ್ತಾ ಹೋಗುತ್ತದೆ. ಇವು ಕೇವಲ ಸ್ಯಾಂಪಲ್ ಗಳಷ್ಟೇ..
ಇಲ್ಲಿ ಮನೋವೈದ್ಯಕೀಯ ವಿಶ್ಲೇಷಣೆ, ವಿಜ್ಞಾನ, ತಂತ್ರಜ್ಞಾನ, ಆಧ್ಯಾತ್ಮ ಎಲ್ಲವೂ ಮೇಳೈಸಿ ಕುತೂಹಲಕರವಾಗಿ ಓದಿಸಿಕೊಂಡು ಹೋಗುತ್ತದೆ. ಕ್ಲಿಷ್ಟವಾದ ಸಂಗತಿಗಳನ್ನು ಸರಳವಾಗಿ ಅರ್ಥೈಸಿಕೊಳ್ಳುವಂತೆ ಕಥಾರೂಪದಲ್ಲಿ ಕೊಡುವುದರಲ್ಲಿ ಕೆ. ಎನ್. ಗಣೇಶಯ್ಯನವರದ್ದು ಎತ್ತಿದ ಕೈ. ಇದರಲ್ಲಿ ಎರಡು ಮಾತಿಲ್ಲ . ಈ ಕಥಾಂಬರಿ ಕೊಂಚ ಹೆಚ್ಚೇ ಇಷ್ಟವಾಯಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ