ಬುಧವಾರ, ಏಪ್ರಿಲ್ 15, 2026

ಸೋಶಿಯಲ್ ಮೀಡಿಯಾಗಳಲ್ಲಿನ ನಮ್ಮ ಡೇಟಾ ( ಟೆಕ್ - ಟಾಕ್ - 5)


ನಾವು ಸೋಶಿಯಲ್ ಮಿಡಿಯಾಗಳಿಗೆ ನಾವು ಅಪ್ಲೋಡ್ ಮಾಡುವ ಕೆಲವು ಮಾಹಿತಿಗಳು ಒಂದು ಕಾಲಾವಧಿಯವರೆಗೂ ಮಾತ್ರ ಇದ್ದರೆ ಇನ್ನು ಕೆಲವು ನಮ್ಮ ಅಕೌಂಟ್ ಅಳಿಸಿ ಹೋಗುವವರೆಗೂ ಇರುತ್ತವೆ. 


ಈಗ ಕೆಲ ದಿನಗಳ ಹಿಂದೆ ನನ್ನ ಫೇಸ್ಬುಕ್ ಪ್ರೊಫೈಲ್ ಟೆಂಪರರಿಯಾಗಿ ಲಾಕ್ ಆಗಿತ್ತು. ಹಾಗೆ ಲಾಕ್ ಆದ ಪ್ರೊಫೈಲ್ ಅನ್ನು ಓಪನ್ ಮಾಡಲು ಕೆಲವೊಮ್ಮೆ ಡೇಟ್ ಆಫ್ ಬರ್ತ್ ಅಥವಾ ನಮ್ಮ ವೈಯಕ್ತಿಕ ಮಾಹಿತಿ ನೀಡಿರುವುದರ ಆಧಾರದ ಮೇಲೆ ಪ್ರಶ್ನೆಯೊಂದು ಬರುತ್ತದೆ. ಅದಕ್ಕೆ ಉತ್ತರಿಸಿದರೆ ಆಗುತ್ತಿತ್ತು. ಆದರೆ, ಈ ಬಾರಿ ಹಾಗಾಗಲಿಲ್ಲ. ಅದು ನನ್ನದೇ ಪ್ರೊಫೈಲ್ ಎಂದು ಪ್ರೂವ್ ಮಾಡಲು ನನ್ನ ಹೆಸರು ಅಥವಾ ನನ್ನ ಫೋಟೋ ಐ.ಡಿ ಪ್ರೂಫ್ ಒಂದನ್ನು ಕೊಡಬೇಕಿತ್ತು. ಇರುವ ಐ.ಡಿ 

ಪ್ರೂಫ್ ತೋರಿಸುವುದೇನೂ ದೊಡ್ಡ ಕೆಲಸವಲ್ಲ. ಆದರೆ, ಅದೊಂದು ಸ್ಕ್ಯಾಮ್ ಆಗಿದ್ದರೆ..?? ಈ ಭಯವೂ ಯಾವಾಗಲೂ ಜೊತೆಗೇ ಇರುತ್ತದಲ್ಲಾ. ಆಗ ನಿಧಾನವಾಗಿ ಅದರ ಪ್ರೈವೆಸಿ ಪಾಲಿಸಿಗಳ ಕುರಿತು ಓದಲು ಮೊದಲು ಮಾಡಿದಾಗ ಹೀಗಿತ್ತು. ನಾವು ನೀಡಿದ ಆ ಐ.ಡಿ ಪ್ರೂಫ್ ಒಂದು ವರ್ಷದವರೆಗೂ ಅವರಲ್ಲಿಯೇ ಸ್ಟೋರ್ ಆಗಿರುತ್ತದೆ. ಆನಂತರ ಅದು ಡಿಲೀಟ್ ಆಗುತ್ತದೆ. ಮತ್ತೊಮ್ಮೆ ಏನಾದರೂ ಫೇಸ್ಬುಕ್ ಟೆಂಪರರಿ ಲಾಕ್ ಆದಲ್ಲಿ ನಾವು ಐ.ಡಿ ಪ್ರೂಫ್ ಸಲ್ಲಿಸುವ ಅಗತ್ಯವೇ ಇರುವುದಿಲ್ಲ.


ಈ ಮಾಹಿತಿಯೇನೋ ಸರಿ. ಆದರೆ, ಫೇಸ್ಬುಕ್, ಟ್ವಿಟ್ಟರ್, ಸರ್ಚ್ ಎಂಜಿನ್ ಗಳಲ್ಲಿ ನಮ್ಮ ಮಾಹಿತಿ ಎಷ್ಟು ಕಾಲದವರೆಗೂ ಇರುತ್ತದೆ ಎಂದು ತಿಳಿಯಲು ಹೊರಟರೆ ಅವರ ಪ್ರೈವೆಸಿ ಪಾಲಿಸಿ ಪೇಜ್ ಅನ್ನು ಹುಡುಕಬೇಕಾಗುತ್ತದೆ. ಯಾವುದೇ ಆಪ್ ಗಳನ್ನು ನಾವು ಮೊದಲಿಗೆ ಇನ್ಸ್ಟಾಲ್ ಮಾಡಿಕೊಳ್ಳುವಾಗಲೇ ಅವರು ಈ ಕುರಿತು ತಿಳಿಸಿರುತ್ತಾರೆ. ಆದರೆ, ನಾವು ಅದನ್ನು ಗಮನಿಸದೇ, ಓದದೇ ಸುಮ್ಮನೆ ನೆಕ್ಸ್ಟ್ ಎಂದೋ ಅಥವಾ ಅಕ್ಸೆಪ್ಟ್ ಎಂದು ಒತ್ತಿ ಮುಂದಕ್ಕೆ ಹೋಗಿರುತ್ತೇವೆ. ಅದನ್ನು ತಿಳಿದುಕೊಳ್ಳುವ ಆಸಕ್ತಿ ಇರುವುದಿಲ್ಲವೋ ಅಥವಾ ಓದುವಷ್ಟು ಸಹನೆ ಇರುವುದಿಲ್ಲವೋ ಅಥವಾ ನಮ್ಮ ಪರಿಚಯದವರು ಬಳಸುತ್ತಿದ್ದಾರೆ. ಅವರಿಗೆ ಏನೂ ಆಗಿಲ್ಲ. ನಮಗೇನಾಗಲು ಸಾಧ್ಯ ಎಂಬ ಉಢಾಫೆ ಮನಸ್ಥಿತಿಯೋ ಗೊತ್ತಿಲ್ಲ. 


ಯಾವುದೇ ಸೋಶಿಯಲ್ ಮೀಡಿಯಾ ಆಪ್ ಗಳಿದ್ದರೂ ಅವುಗಳ ಡೇಟಾದ ಮಾಹಿತಿಯ ಹಕ್ಕುದಾರರು ನಾವೇ.. ಫೇಸ್ಬುಕ್ ನಲ್ಲಿ ನಮ್ಮ ಡೇಟಾವನ್ನು ನಾವು ಅಳಿಸದೇ ಇದ್ದಲ್ಲಿ ಒಂದೋ ಅವರು ಸರ್ವಿಸ್ ನಿಲ್ಲಿಸುವವರೆಗೂ ಇರುತ್ತದೆ ಇಲ್ಲವೇ ನಾವಾಗಿಯೇ ಡಿಲೀಟ್ ಮಾಡುವವರೆಗೂ ಇರುತ್ತದೆ. ನಾವು ಅಕೌಂಟ್ ಡಿಲೀಟ್ ಮಾಡುವಾಗ ನಮಗೆ ಅಲ್ಲಿ ಎರಡು ಆಪ್ಷನ್ ಇರುತ್ತದೆ. ತಾತ್ಕಾಲಿಕವಾಗಿ ಅಕೌಂಟ್ ಡಿಲೀಟ್ ಮಾಡಬಹುದು ಅಥವಾ ಪರ್ಮನೆಂಟ್ ಆಗಿ.. ತಾತ್ಕಾಲಿಕವಾಗಿ ಡಿಲೀಟ್ ಮಾಡುವ ಅಕೌಂಟ್ ನ ಮಾಹಿತಿ ಮತ್ತು ಅಕೌಂಟ್ ಬೇರೆಯವರಿಗೆ ಕಾಣುವುದಿಲ್ಲ. ಆದರೆ, ನಾವು ಅದನ್ನು ಡಿಲೀಟ್ ಮಾಡುವವರೆಗೂ ಇರುತ್ತದೆ.


ಇನ್ನು ಟ್ವಿಟ್ಟರ್ ನಲ್ಲಿ ಕೊನೆಯ 18 ತಿಂಗಳ ಡೇಟಾ ಒಂದು ಫೈಲ್ ನಲ್ಲಿರುತ್ತದೆ. ಟ್ವಿಟ್ಟರ್ ಅಕೌಂಟ್ ಡಿಲೀಟ್ ಆದ 30 ದಿನಗಳವರೆಗೂ ಡೇಟಾ ಇನ್ನೂ ಅವರಲ್ಲಿಯೇ ಇರುತ್ತದೆ. ಅಕಸ್ಮಾತ್ ಮನಸ್ಸು ಬದಲಾಯಿಸಿ ವಾಪಾಸ್ ಹೋದರೆ ಮತ್ತೆ ಆ ಡೇಟಾವನ್ನು ಅಳಿಸುವುದಿಲ್ಲ. ಇಲ್ಲವೇ ಮತ್ತೆ ಹೊಸದಾಗಿ ಆ ಮಾಹಿತಿಯನ್ನು ಸ್ಟೋರ್ ಮಾಡಬೇಕಾಗಿರುತ್ತದೆ.


ಸರ್ಚ್ ಇಂಜಿನ್ ಗಳಾದ ಗೂಗಲ್, ಸಫಾರಿ, ಬಿಂಗ್ ಗಳಲ್ಲಿನ ನಮ್ಮ ಮಾಹಿತಿ ಸಂಪೂರ್ಣವಾಗಿ ಡಿಲೀಟ್ ಆಗುವುದಿಲ್ಲ. ನಾವು ಅಲ್ಲಿನ ಅಕೌಂಟ್ ಡಿಲೀಟ್ ಮಾಡಿದರೂ ಕೆಲವೊಂದಕ್ಕೆ ಬರೆದಿರುವ ರಿವ್ಯೂ ಅಥವಾ ಕಾಮೆಂಟ್ ಹಾಗೆಯೇ ಉಳಿಯಬಹುದು. ಅಳಿಸಿದ ನಂತರವೂ ಡೇಟಾ ಪ್ರತಿ ಇರಬಹುದು.


ಗೌಪ್ಯತೆ ಉಲ್ಲಂಘನೆಯಾದದ್ದು ತಿಳಿದು ಬಂದರೆ ನಾವು ಯಾರಿಗೆ ದೂರು ನೀಡಬಹುದು ಗೊತ್ತಾ..?? ಸೈಬರ್ ಅಟ್ಯಾಕ್ ಆದರೆ ಸೈಬರ್ ಸೆಲ್ ಗೆ ದೂರು ನೀಡಬಹುದು. ಆದರೆ, ಇದು ಬೇರೆಯ ರೀತಿಯ ಕಂಪ್ಲೇಂಟ್. ಮೊದಲಿಗೆ ನಾವು ಆ ಸೋಶಿಯಲ್ ಮೀಡಿಯಾಗೆ ಅದಕ್ಕೆ ಸಂಬಂಧಿಸಿದ ಕ್ಲಾರಿಟಿ ಕೇಳಿ ಮೇಲ್ ಕಳುಹಿಸಬಹುದು. ಅವರು ಯಾವುದಕ್ಕೂ ಜಗ್ಗದಿದ್ದಾಗ ಸಿ.ಎಂ.ಎಸ್ (ಕಂಪ್ಲೇಂಟ್ ಮ್ಯಾನೇಜ್ ಮೆಂಟ್ ಸಿಸ್ಟಮ್) ಗೆ ದೂರು ನೀಡಬಹುದು. 


ಇನ್ನು ಸೋಶಿಯಲ್ ಮೀಡಿಯಾದಲ್ಲಿ ನಮ್ಮ ಡೇಟಾ ಎಲ್ಲಿ, ಹೇಗೆ ಸ್ಟೋರ್ ಆಗುತ್ತದೆ ತಿಳಿಯೋಣ.

ನಾವು ಮೊಬೈಲ್ ಬಳಸುವಾಗ ಕೆಲವೊಮ್ಮೆ ಫೋಟೋ, ವಿಡಿಯೋಗಳೆಲ್ಲಾ ಹಾಗೆಯೇ ಉಳಿದು ಹೊಸದಕ್ಕೆ ಜಾಗವಿಲ್ಲದೆ "ಇಂಟರ್ನಲ್ ಸ್ಟೋರೇಜ್ ಡೇಟಾ ರನ್ನಿಂಗ್ ಔಟ್"ಎಂದು ಬರುತ್ತಿರುತ್ತದೆ. ಹೌದಲ್ಲವಾ..?? ಅಕ್ಕಿ ಡಬ್ಬಿಗೆ ರಾಶಿ ಅಕ್ಕಿ ತಂದು ಸುರಿದರೆ ಡಬ್ಬಿ ತುಂಬಿ ಹೋಗುತ್ತದೆ. ಮತ್ತೆ ಸಂಗ್ರಹ ಮಾಡಲು ಒಂದೋ ಮತ್ತೊಂದು ಡಬ್ಬಿ ತರಬೇಕು ಇಲ್ಲವೇ ಅಕ್ಕಿ ಡಬ್ಬಿಯನ್ನು ಬದಲಿಸಿ ಅಲ್ಲಿ ಅದಕ್ಕಿಂತ ದೊಡ್ಡ ಪಾತ್ರೆಯನ್ನು ಇಡಬೇಕು ಇಲ್ಲವೇ ಬಳಸಿ ಖಾಲಿ ಮಾಡಬೇಕು.


ಮಾಹಿತಿ ಸಂಗ್ರಹ ಮಾಡುವಾಗಲೂ ಹಾಗೆಯೇ.. ವಾಟ್ಸಾಪ್ ಗೆ ಬಂದದ್ದನ್ನೆಲ್ಲಾ ಡೌನ್ಲೋಡ್ ಮಾಡಿ ಡಿಲೀಟ್ ಮಾಡದೆ ಹಾಗೆಯೇ ಬಿಟ್ಟರೆ ಹೆಚ್ಚಿನ ಮಾಹಿತಿ ಸಂಗ್ರಹಣೆಗೆ ಜಾಗವೇ ಇಲ್ಲದಂತಾಗುತ್ತದೆ. ಆಗ, ಒಂದೋ ಡೇಟಾ ಡಿಲೀಟ್ ಮಾಡಬೇಕು ಇಲ್ಲವೇ ಮೆಮೊರಿ ಕಾರ್ಡ್ ಅನ್ನು ಫೋನ್ ಗೆ ಹಾಕಿ ಅದರಲ್ಲಿ ಮಾಹಿತಿ ಸಂಗ್ರಹಿಸಬಹುದು ಇಲ್ಲವೇ ಫೋನ್ ನಲ್ಲಿನ ಡೇಟಾವನ್ನು ಮತ್ತೊಂದರಲ್ಲಿ ಅಂದರೆ ಲ್ಯಾಪ್ಟಾಪ್ ಸಂಗ್ರಹಿಸಬಹುದು. ಈಗಿನ ದಿನಗಳಲ್ಲಿ ಕ್ಲೌಡ್ ನಲ್ಲಿ ಕೂಡಾ ಸಂಗ್ರಹ ಮಾಡಬಹುದು. ಕ್ಲೌಡ್ ಅನ್ನುವುದಕ್ಕಿಂತ ಗೂಗಲ್ ಡ್ರೈವ್ ಎಂದರೆ ಬೇಗ ಅರ್ಥವಾಗುತ್ತದೆ. ಗೂಗಲ್ ಡ್ರೈವ್ ಕ್ಲೌಡ್ ಗೆ ಒಂದು ಉತ್ತಮ ಉದಾಹರಣೆ.


ಬರೀ ಮೊಬೈಲ್ ಗೆ ಹೀಗಾದರೆ.. ಸೋಶಿಯಲ್ ಮೀಡಿಯಾಗಳು ಸಾವಿರಾರು ಜನರ ಡೇಟಾವನ್ನು ತನ್ನೊಳಗೆ ಇಟ್ಟುಕೊಳ್ಳುತ್ತವೆ. ಅಷ್ಟೇ ಅಲ್ಲ, ಅವರು ಅದನ್ನು ನೋಡಬೇಕೆಂದಾಗ ಅಥವಾ ಅವರು ಅದನ್ನು ಮತ್ತೆ ಡೌನ್ಲೋಡ್ ಮಾಡಬೇಕು ಎಂದುಕೊಂಡಾಗ ಅವರು ಅಪ್ಲೋಡ್ ಮಾಡಿದ ಹಾಗೆಯೇ ಅವರಿಗೆ ವಾಪಾಸ್ ಕೊಡುತ್ತದೆ. ಇದಕ್ಕೆ ತಗುಲುವ ಸಮಯ ಕೂಡಾ ಕಡಿಮೆಯೇ.. ನಾವು ಈ ಕಡೆಯಿಂದ ಫೋಟೋ ಅಥವಾ ವಿಡಿಯೋ ಅಪ್ಲೋಡ್ ಮಾಡಿದಾಗ ಅಲ್ಲಿ ಯಾರಾದರೂ ಕುಳಿತು ನಮ್ಮ ಮಾಹಿತಿ ಸಂಗ್ರಹಿಸುತ್ತಾರಾ..?? ಅಥವಾ 24 ಗಂಟೆಯೂ ಕಾದಿದ್ದು ನಾವು ಬೇಕು ಎಂದು ಕೇಳಿದಾಗ ಹುಡುಕಿ ವಾಪಾಸ್ ಕಳುಹಿಸುತ್ತಾರಾ..??ಸಾಧ್ಯವೇ ಇಲ್ಲ. ಅಲ್ಲವಾ..?? 


ಈಗೀಗಲಂತೂ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾದಂತೆ ಫೋಟೋ ಹಾಗೂ ಸೆಲ್ಪಿಗಳ ಹಾವಳಿ ಹೆಚ್ಚಾಗಿದೆ. ಅದರ ಜೊತೆಗೆ ಈಗೀಗ ರೀಲ್ಸ್ ಟ್ರೆಂಡ್ ಹೆಚ್ಚುತ್ತಿದೆ. ಇವೆಲ್ಲವನ್ನೂ ಸೋಶಿಯಲ್ ಮೀಡಿಯಾಗಳಿಗೆ ಅಪ್ಲೋಡ್ ಮಾಡುತ್ತಲೇ ಇರುವಾಗ ಡೇಟಾ ಹೆಚ್ಚಾಗಿಯೇ ಆಗುತ್ತದೆ. 


ಮೊದಲಿಗೆ ಡೇಟಾ ಸಂಗ್ರಹಿಸಲು ಇದ್ದದ್ದು ಪಂಚ್ ಕಾರ್ಡ್ ಗಳು. ನಂತರ ಆ ಪಂಚ್ ಕಾರ್ಡ್ ಗಳಲ್ಲಿ ಮಾಹಿತಿ ಸಂಗ್ರಹ ಮಾಡುವಾಗ ಕೆಲಸವೂ ಹೆಚ್ಚೇ ಇರುತ್ತಿದ್ದುದರಿಂದ ಮ್ಯಾಗ್ನೆಟಿಕ್ ಟೇಪ್ ಗಳು ಬಂದವು. ಇವುಗಳು ಬಂದದ್ದು 1920 ರಲ್ಲಿ ನಂತರ ಪೇಪರ್ ಟೇಪ್ ಹಾಗೂ ಕ್ಯಾಸೆಟ್ ಟೇಪ್ ಗಳಾದವು.

1956 ರಲ್ಲಿ ಐ.ಬಿ.ಎಂ ಹಾರ್ಡ್ ಡ್ರೈವ್ ಅನ್ನು ಪರಿಚಯಿಸಿತು. ಇದು ಗಾತ್ರದಲ್ಲಿ ದೊಡ್ಡದು ಹಾಗೂ ಡೇಟಾ ತುಂಬಲು ಹಾಗೂ ಮತ್ತೆ ಪಡೆದುಕೊಳ್ಳಲು ಸಮಯ ಹೆಚ್ಚಾಗುತ್ತಿದ್ದರೂ ಮ್ಯಾಗ್ನೆಟಿಕ್ ಟೇಪ್ ಗಿಂತಲೂ 20 ಪಟ್ಟು ಹೆಚ್ಚು ಪರಿಣಾಮಕಾರಿ.


ಕಂಪ್ಯೂಟರ್ ನ ಸಂಪರ್ಕದಿಂದ ಮಾಹಿತಿ ಶೇಖರಿಸಿ ಇಡಲು ಮತ್ತು ಅದರಿಂದ ಮತ್ತೊಂದು ಕಂಪ್ಯೂಟರ್ ಗೆ ಹಾಕಲು ಎಕ್ಸ್ಟರ್ನಲ್ ಸ್ಟೋರೇಜ್ ನ ಅಗತ್ಯವಿತ್ತು. ಒಂದು ರೂಮ್ ನಷ್ಟು ದೊಡ್ಡದಿದ್ದ ಹಾರ್ಡ್ ಡ್ರೈವ್ ಅನ್ನು ನಾವು ಒಂದೆಡೆಯಿಂದ ಮತ್ತೊಂದೆಡೆಗೆ ಸುಲಭಕ್ಕೆ ಸಾಗಿಸಲು ಸಾಧ್ಯವಿರಲಿಲ್ಲ.ಆಗ ಬಂದದ್ದು ಪ್ಲಾಫಿ ಡಿಸ್ಕ್. ಅದಾದ ನಂತರ ಸಿ.ಡಿ. ಇವುಗಳು ಗಾತ್ರದಲ್ಲಿ ಚಿಕ್ಕವು ಹಾಗೂ ತೆಳು. ಆದರೆ, ಹಿಂದಿನದ್ದಕ್ಕಿಂತ 486 ಪಟ್ಟು ಹೆಚ್ಚು ಡೇಟಾ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರುವಂತವು. ಸಿ.ಡಿಯನ್ನು ಮೊದಲು ಬಳಕೆಗೆ ತಂದದ್ದು ಯು.ಎಸ್ ನಲ್ಲಿ.


ಡಿ.ವಿ.ಡಿ ಸಿ.ಡಿ ಯ ನಂತರ ಬಂದದ್ದು. 1996 ರಲ್ಲಿ ಇದನ್ನು ಬಳಸಲು ಶುರು ಮಾಡಿದರು. ಇದರಲ್ಲಿ ಮೊದಲಿಗೆ ಟ್ವಿಸ್ಟರ್ ಎನ್ನುವ ಸಿನಿಮಾವೊಂದನ್ನು ಸಂಗ್ರಹಿಸಿದ್ದರು. ಇದು ಸಿ.ಡಿಗಿಂತಲೂ 7 ಪಟ್ಟು ಹೆಚ್ಚಿನ ಸಾಮರ್ಥ್ಯ ಹೊಂದಿತ್ತು. 


ಯಾವುದನ್ನೇ ಕಂಡು ಹಿಡಿದಾಗಲೂ ಅದು ಆ ಕಾಲದ ಶ್ರೇಷ್ಠ ಅನ್ವೇಷಣೆ. ಇದಕ್ಕಿಂತಲೂ ಉತ್ತಮವಾದದ್ದು ಬರಲಾರದು ಎಂದುಕೊಳ್ಳುವಷ್ಟರಲ್ಲಿ ಮತ್ತೊಬ್ಬರು ಅದನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಹೆಜ್ಜೆ ಮೂಡಿಸಿಯೇ ಇರುತ್ತಾರೆ. ಹಾಗೆಯೇ.. 2000 ನೇ ಇಸವಿಯಲ್ಲಿ ಬಂದದ್ದು ಯು.ಎಸ್.ಬಿ. ಯುನಿವರ್ಸಲ್ ಸ್ಟೋರೇಜ್ ಡಿವೈಸ್. ಪೆನ್ ಡ್ರೈವ್ ಇದಕ್ಕೆ ಉತ್ತಮ ಉದಾಹರಣೆ. ಇದು ಡಿ.ವಿ.ಡಿ ಗಿಂತ 140 ಪಟ್ಟು ಹೆಚ್ಚು ಸಾಮರ್ಥ್ಯ ಹೊಂದಿದೆ. ಎಲ್ಲದಕ್ಕೂ ಒಂದಲ್ಲಾ ಒಂದು ಅನಾನುಕೂಲತೆಗಳು ಇರುತ್ತವೆ ಇಲ್ಲವೇ.. ಬಳಕೆದಾರರು ಅದರ ಕುಂದು ಕೊರತೆಗಳನ್ನು ಆರೋಪಿಸುತ್ತಾರೆ. ಹಾಗೆಯೇ ಇದಕ್ಕೆ ಹೇಳಿದ್ದು ಇದು ಇಟ್ಟುಕೊಳ್ಳಲು ತುಂಬಾ ಚಿಕ್ಕ ಡಿವೈಸ್. ಸುಲಭಕ್ಕೆ ಕಳೆದುಹೋಗುತ್ತದೆ. ಜೋಪಾನವಾಗಿ ಇಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ ಅಲ್ಲವಾ..? 


ಅದಕ್ಕೇ ಕಳೆದುಕೊಳ್ಳುವ ಡಿವೈಸ್ ಇಲ್ಲದೇ ಸ್ಟೋರ್ ಮಾಡಿ ಬಳಸಲು 81,92,000 ಪಟ್ಟು ಹೆಚ್ಚಿನ ಸಾಮರ್ಥ್ಯದ ಕ್ಲೌಡ್ ಸ್ಟೋರೇಜ್ ಸಿಕ್ಕಿದೆ. 1961 ರಲ್ಲಿಯೇ ಇದರ ಪರಿಕಲ್ಪನೆ ಇದ್ದರೂ ಬಳಕೆಗೆ ತಂಡದ್ದು ಅಮೆಜಾನ್. 2006ರಲ್ಲಿ ಎ.ಡಬ್ಲ್ಯು.ಎಸ್ (ಅಮೆಜಾನ್ ವೆಬ್ ಸರ್ವೀಸ್) ಇದನ್ನು ಪರಿಚಯಿಸಿತು. ಇದು ವೈಯಕ್ತಿಕಕ್ಕಿಂತಲೂ ಕಾರ್ಪೊರೇಟ್ ಕಂಪನಿಗಳ ಬಳಕೆಗೆ ಹೆಚ್ಚು ಉಪಯುಕ್ತವೆನಿಸಿತು. 


ಫೇಸ್ಬುಕ್ ಕೂಡಾ ಸ್ಟೋರೇಜ್ ಗೆ ಬಳಸುವುದು ಇಂತಹಾ ಕ್ಲೌಡ್ ಸ್ಟೋರೇಜ್ ಸರ್ವೀಸ್ ಅನ್ನೇ.. ಆದರೆ, ಅದು ಮತ್ತೊಂದು ಕಂಪನಿಯ ಜೊತೆಗೆ ಕೈ ಜೋಡಿಸಿ ಬಳಸುವ ಪಬ್ಲಿಕ್ ಕ್ಲೌಡ್ ಅಲ್ಲ. ಅದು ಪ್ರೈವೇಟ್ ಕ್ಲೌಡ್ ಸ್ಟೋರೇಜ್. ಅದರ ಡೇಟಾ ಸೆಂಟರ್ ಗಳಿಂದ ಬಳಸಲ್ಪಡುವ ವಿಶೇಷ ಪ್ರೈವೇಟ್ ಕ್ಲೌಡ್ "ಟ್ವೈನ್".


ಕ್ಲೌಡ್ ಸ್ಟೋರೇಜ್ ಕುರಿತು ವಿಸ್ಕೃತ ಮಾಹಿತಿ, ಡೇಟಾ ಸೆಂಟರ್ ಹಾಗೂ ಅದರ ಕಾರ್ಯ ನಿರ್ವಹಣೆ, ಫೇಸ್ಬುಕ್ ಡೇಟಾ ಸೆಂಟರ್ ಗಳು ಇರುವ 18 ಜಾಗಗಳು, ಅದರ ವಿಸ್ತಾರ, ಕಾರ್ಯ ನಿರ್ವಹಣೆ ಹಾಗೂ ಅದಕ್ಕೆ ಬೇಕಾಗುವ ಪವರ್ ಕುರಿತು ಮುಂದಿನ 'ಟೆಕ್-ಟಾಕ್'ನಲ್ಲಿ ತಿಳಿಯೋಣ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ