ಎಲ್ಲವೂ ಬದಲಾಗುತ್ತಿದೆ ಮತ್ತು ಬದಲಾಗಲೇ ಬೇಕು. ಹೌದಲ್ಲವಾ.. ಮೊದಲೆಲ್ಲಾ ಶೆಟ್ಟರ ಅಂಗಡಿಯಲ್ಲಿ ದಿನಸಿ ಸಾಮಾನು ತರುತ್ತಿದ್ದವರು ಮಾಲ್ ಗೆ ಲಗ್ಗೆ ಇಟ್ಟದ್ದು, ಮಾಮೂಲಿ ಸಿನಿಮಾ ಥಿಯೇಟರ್ ಗಳಲ್ಲಿ ಸಿನಿಮಾ ನೋಡುತ್ತಿದ್ದವರು ಈಗ ಮಾಲ್ ನ ಮಲ್ಟಿಫ್ಲೆಕ್ಸ್ ನಲ್ಲಿಯೇ ಸಿನಿಮಾ ನೋಡಬೇಕು ಎನ್ನುತ್ತಾ ಸಿನಿಮಾಗಿಂತ ಪಾಪ್ ಕಾರ್ನ್ ಗೇ ಹೆಚ್ಚು ಹಣ ಸುರಿಯುತ್ತಿರುವುದು, ಮೊದಲೆಲ್ಲಾ ಯಾವುದೋ ಪರಿಚಯದ ಅಂಗಡಿಗೆ ಹೋಗಿ ವರ್ಷಕ್ಕೆ ಎರಡು ಬಾರಿಯೋ ಮೂರು ಬಾರಿಯೋ ಬಟ್ಟೆ ತೆಗೆದುಕೊಳ್ಳುತ್ತಿದ್ದವರು ವಾರವಾರಕ್ಕೂ ಮಾಲ್ ಗೆ ಹೋಗಿ ಬೆಲೆ ಕೂಡಾ ನೋಡದೆ ಬೇಕಾಬಿಟ್ಟಿ ಕೊಂಡು ತರುವುದು. ತರಕಾರಿ, ಹಣ್ಣು ಬೇಕಾದಾಗ ಮಾರ್ಕೆಟ್ ಗೆ ಅಥವಾ ಸಂತೆಗೆ ಹೋಗಿ ತರುವ ಕಾಲ ಹೋಗಿ ಅದಕ್ಕೂ ಫ್ರೆಶ್, ಲೋ ಪ್ರೈಸ್ ಎಂದು ಜಾಹೀರಾತು ನೀಡಿರುವ ಮಾಲ್ ಗೆ ನುಗ್ಗುವುದಾಗಿದೆ. ಹತ್ತು ರೂಪಾಯಿಯ ಸೊಪ್ಪು ಒಂಬತ್ತು ರೂಪಾಯಿಗೆ ಸಿಗುತ್ತದೆ ಎನ್ನುವ ಆಸೆಗೆ ಒಂದು ಲೀಟರ್ ಪೆಟ್ರೋಲ್ ಖರ್ಚು ಮಾಡಿ ತರುವವರ ಸಂಖ್ಯೆಯೂ ಕಡಿಮೆಯೇನೂ ಇಲ್ಲ. ಅಷ್ಟೇ ಅಲ್ಲ, ವಾರಕ್ಕೆ ಬೇಕಾಗಿದ್ದನ್ನು ಸಂತೆಯಲ್ಲಿ ಹಾಗೂ ತಿಂಗಳಿಗೆ ಬೇಕಾದ ಸಾಮಾಗ್ರಿಗಳನ್ನು ಪಟ್ಟಿ ಮಾಡಿ ಹೋಲ್ ಸೇಲ್ ಅಂಗಡಿಯಲ್ಲಿ ತರುವ ಕಾಲ ಬದಲಾಗಿ ಈಗ ಸುಮ್ಮನೆ ಕೈ ಬೀಸಿಕೊಂಡು ಹೋಗಿ ಸಿಕ್ಕದ್ದನ್ನೆಲ್ಲಾ ಟ್ರಾಲಿಯಲ್ಲಿ ಹಾಕಿ ಬಿಲ್ಲಿಂಗ್ ಮಾಡಿಸುವ ಕಾಲ. ಇದು ಮಾಲ್ ಸಂಸ್ಕೃತಿಯ ಕಾಲ.
ನಿಧಾನವಾಗಿ ಇದೂ ಬದಲಾಗುತ್ತಿದೆ. ಆದರೆ ಇನ್ನೂ ಸಂಪೂರ್ಣವಾಗಿ ಬದಲಾಗಿಲ್ಲ. ಮಾಲ್ ಗಳ ಏಳು - ಬೀಳಿನ ಹಾದಿಯನ್ನೊಮ್ಮೆ ನೋಡೋಣ ಬನ್ನಿ.
ಬೆಂಗಳೂರು, ದೆಹಲಿ, ಚೆನ್ನೈ, ಕೊಲ್ಕತ್ತಾ ಹೀಗೆ ದೊಡ್ಡ ಸಿಟಿಗಳನ್ನು ನೋಡಿದರೆ ದೊಡ್ಡ ದೊಡ್ಡ ಮಾಲ್ ಗಳು ಕಣ್ಣಿಗೆ ರಾಚುವಂತೆ ಕಾಣುತ್ತಿರುತ್ತವೆ. ಬೆಳಿಗ್ಗೆ 10 ಕ್ಕೆ ನೋಡಿದರೂ ಜನಜಂಗುಳಿ. ರಾತ್ರಿ 10 ಕ್ಕೂ ಅಷ್ಟೇ ಜನಜಂಗುಳಿ. ವೀಕೆಂಡ್ ನಲ್ಲಿ ಮತ್ತೂ ಹೆಚ್ಚು.
ಯಾವುದೇ ಆದರೂ ಕಡಿಮೆ ಬೆಲೆಗೆ ಎಂದಾಗ ಕೊಳ್ಳುವ ಆಸೆ. ಜೊತೆಗೆ ಟಚ್ ಅಂಡ್ ಫೀಲ್ ಮಾಡಬಹುದಲ್ಲಾ.. ಟ್ರಯಲ್ ನೋಡಬಹುದಲ್ಲಾ ಎನ್ನುವ ಆಡೆಡ್ ಅಡ್ವಾನ್ಟೇಜ್ ಬೇರೆ. ಒಮ್ಮೆ ಮಾಲ್ ಒಳ ಹೊಕ್ಕರೆ ದಿನಸಿ ತೆಗೆದುಕೊಳ್ಳುವುದು, ಎಲೆಕ್ಟ್ರಾನಿಕ್ಸ್ ಗೂಡ್ಸ್, ಬಟ್ಟೆ, ಫುಟ್ ವೇರ್ ಹೀಗೆ ಎಲ್ಲಾ ರೀತಿಯ ದಿನ ಬಳಕೆಯ ವಸ್ತುಗಳು, ಶಾಪಿಂಗ್ ಮಾಡಿ ದಣಿವಾಯಿತು ಎಂದರೆ ಸಿನಿಮಾಗೆ ಮಲ್ಟಿಫ್ಲೆಕ್ಸ್, ತರಹೇವಾರಿಯಾಗಿ ಬೇಕಾದ ತಿನಿಸು ತಿನ್ನಲು ಫುಡ್ ಕೋರ್ಟ್. ಬೇಸರವಾದರೆ ವಿಂಡೋ ಶಾಪಿಂಗ್. ಅಂದ ಹಾಗೆ ಇಲ್ಲಿ ಬಂದ ಮೇಲೆ ಕೊಳ್ಳಲೇ ಬೇಕು ಎನ್ನುವ ನಿಯಮವೂ ಇಲ್ಲವಲ್ಲ.. ಟೈಮ್ ಪಾಸ್ ಗೆ ಮಾಲ್ ಎನ್ನುವಂತಾಗಿತ್ತು.
ಮೊದಲೆಲ್ಲಾ ಬೆಂಗಳೂರಿಗೆ ಬಂದಾಗ ಮಾಲ್ ಎಂದರೆ ಅದೊಂದು ಬೆರಗಿನ ಲೋಕದಂತೆ. ಆ ಎಸ್ಕಲೇಟರ್, ಲಿಫ್ಟ್ ಎಲ್ಲವೂ ವಿಭಿನ್ನ ಅನುಭವವನ್ನೇ ಕೊಡುತ್ತಿದ್ದವು. ಆದರೆ, ಏನನ್ನಾದರೂ ಕೊಳ್ಳಲು ಹಿಂದೆ ಮುಂದೆ ನೋಡಬೇಕಿತ್ತು. ಏಕೆಂದರೆ, ಮಾಲ್ ಎಂದರೆ ಆಗ ದುಬಾರಿ ಎನ್ನಿಸುತ್ತಿತ್ತು. ಈಗಲೂ ಕೆಲವೊಮ್ಮೆ ಹಾಗೆಯೇ ಅನ್ನಿಸುವುದಿದೆ. ಹಣಕಾಸಿನ ತೊಂದರೆ ಎಂದಲ್ಲ. ಆದರೆ, ಊರಿನಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದ್ದದ್ದು ಇಲ್ಲಿ ದುಬಾರಿ ಎಂಬ ಭಾವ. ಅದೇ 50% ಆಫರ್ ಎಂದೋ.. ಹಬ್ಬದ ರಿಯಾಯಿತಿ ಎಂದೋ ಅಥವಾ ಕೂಪನ್ ಗೆ ಇಷ್ಟು ದುಡ್ಡಿಗೆ ಕೊಂಡರೆ ಇಷ್ಟು ರಿಯಾಯಿತಿ ಎಂದೋ ಇದ್ದರೆ ಅದೇನೋ ಸೆಳೆತ. ಆನಂತರ, ನಮ್ಮ ಮನಸ್ಥಿತಿ ಬದಲಾಯಿತೋ ಅಥವಾ ಮಾಲ್ ಗಳ ವಸ್ತುಗಳು ಕೈಗೆಟುಕುವ ಬೆಲೆಗೆ ಸಿಗುವಂತಾಯಿತೋ ಅಂತೂ ಶ್ರೀಮಂತರಿಗೆ ಎಂದಿದ್ದ ಮಾಲ್ ಮಧ್ಯಮ ವರ್ಗದವರನ್ನೂ ಸೆಳೆಯತೊಡಗಿತು. ದೊಡ್ಡ ದೊಡ್ಡ ಸಿಟಿಗಳಲ್ಲಿ ಮಾತ್ರ ಇದ್ದ ಮಾಲ್ ಗಳು ಈಗ ಸಣ್ಣ ಪುಟ್ಟ ಪಟ್ಟಣಗಳಿಗೂ ಲಗ್ಗೆ ಇಟ್ಟವು. ದೊಡ್ಡ ದೊಡ್ಡ ನಗರಗಳಲ್ಲಿ ಒಂದೇ ರಸ್ತೆಯಲ್ಲಿ ಕಾಂಪಿಟೇಶನ್ ಎನ್ನುವಂತೆ ಅಕ್ಕ - ಪಕ್ಕವೇ ಮಾಲ್ ಗಳು ಬಂದವು.
ನಾನು ಚೆನ್ನೈಗೆ ಬಂದ ನಂತರ ಇಲ್ಲಿ ಗಮನಿಸಿದ್ದು ಜನರಿಗೆ ಏನೇ ಬೇಕಾದರೂ ಮೊದಲ ಆಯ್ಕೆ 'ಸರವಣ ಸೂಪರ್ ಸ್ಟೋರ್' ಎನ್ನುವ ಮಾಲ್. ಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ಎಲ್ಲವೂ ಒಂದೇ ಕಡೆ ಸಿಗುವ ಮಾಲ್. ಚಿಕ್ಕ ಸೂಜಿಯಿಂದ ಹಿಡಿದು ಎಲ್ಲವೂ ಇಲ್ಲಿ ಲಭ್ಯ. ಜೊತೆಗೆ ಇಲ್ಲಿ ಎಷ್ಟೇ ಹೆಸರಾಂತ ಮಾಲ್, ಬ್ರ್ಯಾಂಡೆಡ್ ಶಾಪಿಂಗ್ ಸೆಂಟರ್ ಗಳಿದ್ದರೂ ಇಲ್ಲಿ ಪ್ರಾದೇಶಿಕತೆಗೋ ಅಥವಾ ಅಲ್ಲಿನ ಸಿಸ್ಟಮ್ ಗೋ ಗೊತ್ತಿಲ್ಲ ಇಲ್ಲಿನವರ ಆಯ್ಕೆ ಸರವಣವೇ..
ಮಾಲ್ ಎಂಬುದರ ಅನ್ವರ್ಥ ನಾಮದಂತಿದ್ದ 'ಬಿಗ್ ಬಜಾರ್'ನ ಕಾನ್ಸೆಪ್ಟ್ ಕೂಡಾ ಈ ಸರವಣ ಸ್ಟೋರ್ಸ್ ನೋಡಿಯೇ ಬಂದದ್ದು ಎಂದರೆ ಅಚ್ಚರಿಯೇ. ಹಾಸನದಲ್ಲಿ ನಾನು ಕಂಡಂತೆ ಮೊದಲಿಗೆ ಬಂದ ಮಾಲ್ ಎಂದರೆ ಬಿಗ್ ಬಜಾರ್. ಆದರೆ, ನಂತರ ಅದು ಮುಚ್ಚಿ ಹೋದಾಗ ಬಹುಶಃ ಏನೋ ಬಿಲ್ಡಿಂಗ್ ಕೆಲಸ ನಡೆಯುತ್ತಾ ಇರಬಹುದು ಎಂದೇ ಭಾವಿಸಿದ್ದೆವು. ನಂತರ ತಿಳಿದದ್ದು ಬಿಗ್ ಬಜಾರ್ ಸಂಪೂರ್ಣವಾಗಿ ಮುಚ್ಚಿಹೋಗಿದೆ ಎಂದು. ಯಾಕೆ ಹೀಗಾಯ್ತು ಎಂದು ಹುಡುಕುತ್ತಾ ಹೋದಾಗ ತಿಳಿದದ್ದು ಒಂದು ಯಶೋಗಾಥೆಯ ದುರಂತಗಾಥೆ.
1961 ರಲ್ಲಿ ಮಾರವಾಡಿ ಕುಟುಂಬದಲ್ಲಿ ಹುಟ್ಟಿದ ಕಿಶೋರ್ ಬಿಯಾನಿಗೆ ರಕ್ತಗತವಾಗಿಯೇ ಸಿದ್ಧಿಸಿತು ಬಿಸಿನೆಸ್ ನ ಕಲೆ. ಆದರೆ , ಅದ್ಯಾಕೋ ಅವರದ್ದೇ ಸಿಲ್ಕ್ ಫ್ಯಾಕ್ಟರಿ ಮಾತ್ರ ನೋಡಿಕೊಳ್ಳುವುದರಲ್ಲಿ ಮನಸ್ಸಿರಲಿಲ್ಲ. ತಲೆಯಲ್ಲಿ ಹೊಸ ಹೊಸ ಆಲೋಚನೆಗಳು ಬರುತ್ತಿದ್ದವಾದರೂ ಅದನ್ನು ಕಾರ್ಯರೂಪಕ್ಕೆ ತರಲು ಐಡಿಯಾ ಸಿಕ್ಕಿರಲಿಲ್ಲ. ಆ ಸಮಯದಲ್ಲಿ ತನ್ನ ಸ್ನೇಹಿತನೊಬ್ಬ ತಯಾರಿಸಿದ 'ಸ್ಟೋನ್ ವಾಷ್ ಪ್ಯಾಬ್ರಿಕ್' ಎಂಬ ಬಟ್ಟೆಯನ್ನು ಕಂಡರು. ಇದರ ವಿಶೇಷತೆ ಎಂದರೆ ನೋಡಲು ಒರಟಾಗಿದ್ದರೂ ಸ್ಟೋನ್ ವಾಷ್ ಪ್ರಕ್ರಿಯೆಯಿಂದ ಗಟ್ಟಿ ಬಟ್ಟೆಗೆ ಮೃದುತ್ವ ನೀಡುತ್ತಿತ್ತು. ಮತ್ತು ಬಟ್ಟೆಯನ್ನು ಧರಿಸಿದರೂ ಹೊಸದಾಗಿಯೇ ಕಾಣುವಂತೆ ರೂಪಿಸಲಾಗಿತ್ತು. ಇದನ್ನು ಉಪಯೋಗಿಸಿಕೊಂಡ ಬಿಯಾನಿ 1987 ರಲ್ಲಿ ಕಲ್ಕತ್ತಾದಲ್ಲಿ ಪುರುಷರಿಗಾಗಿ ಮೆನ್ಸ್ ವೇರ್ ಹೋಲ್ ಸೇಲ್ ರಿಟೇಲ್ ಶಾಪ್ ಒಂದನ್ನು ಶುರು ಮಾಡುತ್ತಾರೆ. ಅದೇ 'ಪ್ಯಾಂಟಲೂನ್ಸ್'. ನಂತರ ವುಮನ್ಸ್ ವೇರ್ ಹಾಗೂ ಕಿಡ್ಸ್ ವೇರ್ ಗಳೂ ಬಂದವು.
ಇದೊಂದೇ ಅಲ್ಲ ಸೆಂಟ್ರಲ್, ಎಫ್.ಬಿ.ಬಿ, ಬ್ರ್ಯಾಂಡ್ ಫ್ಯಾಕ್ಟರಿ ಗಳನ್ನೂ ಶುರು ಮಾಡಿದರು. ಬೇರ್ ನೆಸೆಸಿಟಿಸ್ ಮತ್ತು ಜಾನ್ ಮಿಲ್ಲರ್ ಎನ್ನುವ ವಿದೇಶಿ ಕಂಪೆನಿಗಳ ಜೊತೆಗೆ ಟೈ ಅಪ್ ಮಾಡಿಕೊಂಡರು. ಇವೆಲ್ಲವನ್ನೂ ಸೇರಿ ತನ್ನ ಕಂಪೆನಿಗೆ 'ಫ್ಯೂಚರ್ ಗ್ರೂಪ್' ಎಂದು ಹೆಸರಿಟ್ಟರು. 2000 ನೇ ಇಸವಿಯ ಸಮಯದಲ್ಲಿ ಚೆನ್ನೈಗೆ ಭೇಟಿ ಕೊಟ್ಟಾಗ ಅಲ್ಲಿನ ಸರವಣ ಸ್ಟೋರ್ಸ್ ಅನ್ನು ಕಂಡು ಎಲ್ಲಾ ವಸ್ತುಗಳನ್ನು ಒಂದೇ ಸ್ಥಳದಲ್ಲಿ ನೀಡಬಾರದು ಏಕೆ ಎಂದು ಆಲೋಚಿಸಿ ಮೊದಲು ಕೋಲ್ಕತ್ತಾದಲ್ಲಿ, ನಂತರ ಹೈದರಾಬಾದ್ ನಲ್ಲಿ ನಂತರ ಬೆಂಗಳೂರಿನಲ್ಲಿ ಬಿಗ್ ಬಜಾರ್ ಅನ್ನು ಶುರು ಮಾಡಿಯೇ ಬಿಟ್ಟರು. ನಂತರ ವ್ಯಾಪಾರ ವಿಸ್ತರಣೆಯನ್ನೂ ಮಾಡಿದರು. ಇದೆಲ್ಲದಕ್ಕೂ ಮನೆ, ಆಸ್ತಿ ಮೇಲೆ ಹಾಗೂ ಬ್ಯಾಂಕ್ ಗಳಿಂದ ಸಾಲವನ್ನೂ ಮಾಡಿದ್ದರು. ಎಲ್ಲವೂ ಲಾಭದಾಯಕವಾಗಿಯೇ ನಡೆಯುತ್ತಿತ್ತು.
2006 ರ ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 26 ರಂದು 50% ಡಿಸ್ಕೌಂಟ್ ಸೇಲ್ ಅನ್ನು ಆಯೋಜಿಸಿದ್ದರು. ಬೆಂಗಳೂರು,ಪುಣೆ, ಕಲ್ಕತ್ತಾದಲ್ಲಿ ಜನ ಮುಗಿಬಿದ್ದು ಕೊಂಡದ್ದನ್ನು ಕಂಡು ಒಂದು ದಿನಕ್ಕೆ ಮಾತ್ರ ಇದ್ದ ಆಫರ್ ಅನ್ನು ಮೂರು ದಿನಕ್ಕೆ ವಿಸ್ತರಿಸಿದರು. ನಿರಂತರ ಲಾಭದಲ್ಲಿದ್ದ ಸಂಸ್ಥೆಗೆ ಮೊದಲ ಆರ್ಥಿಕ ಹೊಡೆತ ಬಿದ್ದದ್ದು 2008 ರಲ್ಲಿ. 2008 ರಲ್ಲಿ ಆದ ಆರ್ಥಿಕ ಮಹಾಕುಸಿತದಿಂದ ಎಲ್ಲೆಡೆ ರಿಸೆಷನ್ ಶುರುವಾಗಿತ್ತು. ಉದ್ಯೋಗಿಗಳ ಕೆಲಸ ಹೋಗುತ್ತಿದ್ದ ಕಾಲದಲ್ಲಿ ಬದುಕು ನಡೆಸಲು ದುಸ್ತರವಾದ ಕಾಲದಲ್ಲಿ ಎಂಟರ್ಟೈನ್ ಮೆಂಟ್ ಗೆಂದು ಜನ ವ್ಯಯಿಸಿಯಾರಾ ? 2012 ರ ಹೊತ್ತಿಗೆ ಬಿಯಾನಿಯ ಮೇಲೆ 8000 ಕೋಟಿ ಸಾಲವಿತ್ತು.
ಇದನ್ನು ಕೊಂಚವಾದರೂ ಸರಿಪಡಿಸಿಕೊಳ್ಳಬಹುದು ಎಂಬ ಆಶಾಕಿರಣದಿಂದ ಆದಿತ್ಯಾ ಬಿರ್ಲಾ ಗ್ರೂಪ್ ಗೆ 1600 ಕೋಟಿಗೆ ಪ್ಯಾಂಟಾಲೂನ್ಸ್ ಅನ್ನು ಮಾರಿದರು. ಇದಿಷ್ಟೇ ಆಗಿದ್ದರೆ ಚೇತರಿಸಿಕೊಳ್ಳುತ್ತಿದ್ದರೋ ಏನೋ.. ಆದರೆ, ಇನ್ಸುರೆನ್ಸ್ ಮತ್ತು ಈ- ಕಾಮರ್ಸ್ ಕೂಡಾ ಶುರು ಮಾಡಲು ಹೋಗಿ ಕೈ ಸುಟ್ಟುಕೊಂಡರು. ಹೆರಿಟೇಜ್ ಫ್ರೆಶ್, ಹೈಪರ್ ಸಿಟಿ, ಈಸಿ ಕ್ಲಬ್ ಗಳನ್ನು ಕೊಂಡು ರಿಟೇಲ್ ಚೈನ್ ಲಿಂಕ್ ಮಾಡುವ ಪ್ಲಾನ್ ಮಾಡಿದರು. ಆದರೆ, ಅದು ಪ್ಲಾಪ್ ಆಯಿತು. ಇವೆಲ್ಲದರಿಂದ ಸಾಲದ ಹೊರೆ ಹೆಚ್ಚಾಗಿ 12989 ಕೋಟಿ ಸಾಲವಾಯಿತು. ಪರಿಣಿತಿ ಹೊಂದಿದವರ ಮಾರ್ಗದರ್ಶನವಿಲ್ಲದೆ, ಸೂಕ್ತ ಮಾರ್ಗದರ್ಶನ ಇಲ್ಲದೆ ಹೋದಾಗ ಹೀಗಾಗಬಹುದು. ಬಿಸಿನೆಸ್ ಟ್ರೈಯಲ್ ಎರರ್ ಗಳ ಮೇಲೆ ನಿಂತಿದೆ ಎಂದಾದರೂ ಎಲ್ಲವೂ ಯಶಸ್ಸು ಕಾಣಲೇ ಬೇಕು ಎಂದಿಲ್ಲ.
2019 ರಲ್ಲಿ ಅಮೆಜಾನ್ ನವರು ಫ್ಯೂಚರ್ ಗ್ರೂಪ್ ಅನ್ನು ಖರೀದಿಸಲು ಮುಂದೆ ಬಂದರು. ಇನ್ನೇನು ಎಲ್ಲವೂ ಮಾರಾಟವಾಗಬೇಕು ಎನ್ನುವ ಸಂಧರ್ಭದಲ್ಲಿ 2020 ರಲ್ಲಿ ಕೋವಿಡ್ ನಿಂದ ಎಲ್ಲವೂ ಅಲ್ಲಲ್ಲಿಯೇ ನಿಂತಿತ್ತು. ನಂತರ ಕೋವಿಡ್ ದುರಿತ ಕಾಲ ಮುಗಿದ ಮೇಲೆ ರಿಲಯನ್ಸ್ ತಾನು 24,713 ಕೋಟಿಗೆ ಕೊಳ್ಳುವುದಾಗಿ ಹೇಳಿ ಮುಂದೆ ಬಂದಿತು. ಇನ್ನೇನು ಎಲ್ಲಾ ಒಪ್ಪಂದವೂ ಮುಗಿಯಬೇಕು ಎಂದಾಗ ಅಮೆಜಾನ್ ಕೋರ್ಟಿನಿಂದ ಲೀಗಲ್ ನೋಟಿಸ್ ತಂದಿತು. ಕಾರಣವೆಂದರೆ,
ಫ್ಯೂಚರ್ ಗ್ರೂಪ್ ನವರು 2000 ಕೋಟಿಗೆ ಕೂಪನ್ ಸ್ಟೇಕ್ ಅನ್ನು ಅದಾಗಲೇ ಅಮೆಜಾನ್ ಗೆ ಕೊಟ್ಟಿದ್ದರು. ಇದರ ಸಹವಾಸವೇ ಬೇಡವೆಂದು ಹಿಂದೆ ಸರಿಯಿತು ರಿಲಯನ್ಸ್. ಇದೆಲ್ಲದರ ಪರಿಣಾಮ ಬಿಗ್ ಬಜಾರ್ ಈಗ ಅಸ್ತಿತ್ವದಲ್ಲಿಲ್ಲ.
ಇವತ್ತಿನ ನಂಬರ್ ಒನ್ ಮಾಲ್ ಕೊಚ್ಚಿಯ ಲುಲು ಮಾಲ್. ಈ ನಂಬರ್ ಒನ್ ಪಟ್ಟ ಹಾಗೆಯೇ ಉಳಿಯುತ್ತದಾ ? ಬಿಸಿನೆಸ್ ಎಂಬುದು ಯಾವತ್ತಿಗೂ ಏರಿಳಿತದ ಹಾದಿ.
ಈ ಮಾಲ್ ಕಾನ್ಸೆಪ್ಟ್ ಮೊದಲು ಶುರುವಾಗಿದ್ದು ಅಮೆರಿಕಾದಲ್ಲಿ. ಶುರು ಮಾಡಿದ್ದು ವಿಕ್ಟರ್ ಗೃಯೆನ್. ಭಾರತದಲ್ಲಿ ಮೊದಲ ಮಾಲ್ ಶುರುವಾಗಿದ್ದು 1999 ರಲ್ಲಿ. ಅದೇ ದೆಹಲಿಯ ಅನ್ಸಾಲ್ಸ್ ಪ್ಲಾಜಾ. ನಂತರ ಮುಂಬಯಿಯಲ್ಲಿ 'ಕ್ರಾಸ್ ರೋಡ್ಸ್' ಎನ್ನುವ ಮಾಲ್ ಶುರುವಾಯಿತು. ನಂತರ ಬಂದದ್ದು ಚೆನ್ನೈನ 'ಸ್ಪೆನ್ಸರ್ ಪ್ಲಾಜಾ'. 2002 ರ ವರೆಗೂ ಭಾರತದಲ್ಲಿ ಇದ್ದದ್ದು ಮೂರು ಮಾಲ್ ಗಳು ಮಾತ್ರವೇ. 2003 ರಿಂದ ಮಾಲ್ ಗಳು ಹೆಚ್ಚಾಗತೊಡಗಿದವು. 2007 ರಿಂದ 2008 ರವರೆಗೂ ಮಾಲ್ ಗಳ ಭರಾಟೆ ಜೋರಾಗಿದ್ದ ಕಾಲ. 2008 ಕ್ಕೆ ರಿಸೆಷನ್ ಬಂದು ಹೆಚ್ಚಿನ ಉತ್ಸಾಹಿಗಳು ಹೊರ ನಡೆದರು. ಮಾಲ್ ಗಳು ಮಾತ್ರವಲ್ಲ ದೇಶದಲ್ಲೇ ಹಣದ ವಹಿವಾಟು ತೀರಾ ಮಂದಗತಿಯಾಗಿದ್ದ ಕಾಲ.
ಆದರೆ, 2011 ರಿಂದ ಮತ್ತೆ ಮಾಲ್ ಗಳ ಭರಾಟೆ ಜೋರಾಯಿತು. 2012 ರಲ್ಲಿ 190 ಮಾಲ್ ಗಳಿದ್ದರೆ 2018 ರ ಹೊತ್ತಿಗೆ 253 ಆಗಿದ್ದವು. 2022 ರಲ್ಲಿ 690 ಕ್ಕೂ ಹೆಚ್ಚು ಮಾಲ್ ಗಳಿವೆ ಮತ್ತು 150 ಇನ್ನೂ ನಿರ್ಮಾಣ ಹಂತದಲ್ಲಿವೆ. ಇಷ್ಟು ಮಾಲ್ ಗಳು ಇವೆಯಾದರೂ ಎಲ್ಲವೂ ಲಾಭದಾಯಕವಾಗಿವೆಯಾ ?
ಖಂಡಿತವಾಗಿಯೂ ಎಲ್ಲವೂ ಲಾಭದಾಯಕವಾಗಿಲ್ಲ. ಒಂದೇ ರೋಡಿನಲ್ಲಿ 10 ಬೇಕರಿಗಳು ಅಕ್ಕ - ಪಕ್ಕದಲ್ಲಿಯೇ ಇದ್ದಾಗ ನಮ್ಮ ಆಯ್ಕೆ ಶುಚಿ- ರುಚಿ, ಕ್ವಾಲಿಟಿ, ಕ್ವಾಂಟಿಟಿ ಜೊತೆಗೆ ಕಡಿಮೆ ಬೆಲೆ. ಎಲ್ಲವೂ ಬ್ಯಾಲೆನ್ಸ್ ಆಗಿರುವುದು ನಮ್ಮ ಆಯ್ಕೆ. ಅಲ್ಲವೇ..? ಈಗ ಮಾಲ್ ಗಳ ಆಯ್ಕೆ ಕೂಡಾ ಹಾಗೆಯೇ ಆಗುತ್ತಿದೆ. ಜನರ ಓಡಾಟ ಕಡಿಮೆಯಾಗಿ, ಮಾಲ್ ಬಾಡಿಗೆ ಕಟ್ಟಲಾಗದೆ ಎಷ್ಟೋ ಮಾಲ್ ಗಳು ಮುಚ್ಚಿವೆ. ಇಂತಹವುಗಳನ್ನು 'ಡೆಡ್ ಮಾಲ್' ಅಥವಾ 'ಜಾಂಬಿ ಮಾಲ್' ಪಟ್ಟಿಗೆ ಸೇರಿಸಲಾಗಿದೆ. ಕೆಲವನ್ನು ಮಾರ್ಪಾಡು ಮಾಡಿ ಅಪಾರ್ಟ್ಮೆಂಟ್ ಮಾಡಿದ್ದಾರೆ. ಮಾಲ್ ಗಳ ಮೈಂಟೆನೆನ್ಸ್ ಸುಲಭವಾಗಿಯೇನೂ ಇಲ್ಲ. ದೊಡ್ಡ ಪಾರ್ಕಿಂಗ್ ಏರಿಯಾ, ಸೆಕ್ಯೂರಿಟಿ ವ್ಯವಸ್ಥೆ, ಗಾರ್ಡ್ ಗಳು, ಸುರಕ್ಷತೆ, ಸ್ವಚ್ಛತೆ, ಒಳಾವರಣದ ಹವಾಮಾನ ಕಾಯ್ದುಕೊಳ್ಳುವಿಕೆ , ಲಿಫ್ಟ್, ಎಸ್ಕಲೇಟರ್, ವಿದ್ಯುಚ್ಛಕ್ತಿ ಹೀಗೆ ಎಲ್ಲವೂ ದುಬಾರಿಯೇ.. ಮಾಲ್ ಮಾತ್ರ ದೊಡ್ಡದಾಗಿರುವುದಲ್ಲ.. ಅದನ್ನು ನಿಭಾಯಿಸುವ ಖರ್ಚು ಕೂಡಾ ಹೆಚ್ಚೇ..
ಈಗ ಡಿಜಿಟಲ್ ಕಾಲ. ಈ- ಕಾಮರ್ಸ್ ಬೆಳೆಯುತ್ತಿರುವ ಕಾಲ. ಬಟ್ಟೆ ಕೊಳ್ಳಬೇಕೆಂದಾಗ ಮೊಬೈಲ್ ನಲ್ಲಿಯೇ ಆರ್ಡರ್ ಮಾಡಿಕೊಳ್ಳಬಹುದು. ಮಿಂತ್ರಾ, ಫ್ಲಿಪ್ ಕಾರ್ಟ್, ಅಮೆಜಾನ್, ಆಜಿಯೋ, ಮ್ಯಾಕ್ಸ್, ಮೀಶೋ, ಸ್ನಾಪ್ ಡೀಲ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಕೊಳ್ಳುವುದು ಹಾಗೂ ಹಿಂದಿರುಗಿಸುವುದು ಕೂಡಾ ಇಲ್ಲಿ ಸುಲಭವೇ. ಜೊತೆಗೆ ಮಾಲ್ ನಲ್ಲಿ ಅಂಗಡಿಯ ಬಾಡಿಗೆ, ಮೈಂಟೆನೆನ್ಸ್, ಜಾಹೀರಾತು ಎನ್ನುತ್ತಾ ಇನ್ನೂ ಹೆಚ್ಚಿನ ಬೆಲೆಯೇ ಇರುತ್ತದೆ. ಅಲ್ಲದೇ, ಈಗ ಫ್ಯಾಶನ್ ಟ್ರೆಂಡ್ ನಿಮಿಷ, ನಿಮಿಷಕ್ಕೂ ಬದಲಾಗುತ್ತಲೇ ಇರುತ್ತದೆ. ಈ- ಕಾಮರ್ಸ್ ವೆಬ್ಸೈಟ್ ಗಳು ತಮ್ಮ ಕ್ಯಾಟಲಾಗ್ ಅನ್ನು ಪ್ರತಿ ದಿನ, ಪ್ರತಿ ಗಂಟೆ ಅಷ್ಟೇ ಏಕೆ ಪ್ರತಿ ನಿಮಿಷವೂ ಬದಲಾಯಿಸುತ್ತಿರುತ್ತವೆ. ಆದರೆ, ಮಾಲ್ ನಲ್ಲಿ ಈ ಬದಲಾವಣೆ ಬಹಳ ನಿಧಾನದ ಪ್ರಕ್ರಿಯೆ.
ನಮ್ಮ ಗ್ರಾಹಕರ ಮನಸ್ಥಿತಿ , ಚಾಯ್ಸ್ ಹಾಗೂ ಮೈಂಡ್ ಸೆಟ್ ಆಗಾಗ ಬದಲಾಗುತ್ತಲೇ ಇರುತ್ತದೆ. ಒಮ್ಮೆ ಬೆಲೆ, ಒಮ್ಮೆ ಕ್ವಾಅಳಿತಿ, ಒಮ್ಮೆ ಟ್ರೆಂಡಿಂಗ್, ಒಮ್ಮೆ ಹಳೆಯ ಡಿಸೈನ್ ಹೀಗೆ ಬಯಸಿದ್ದು ಸಿಗುವುದು ಕೊಂಚ ಕಷ್ಟ ಹಾಗೂ ನಿಧಾನವೇ.
ಈಗ ಆರ್ಡರ್ ಮಾಡಿದ 10 ನಿಮಿಷಗಳಲ್ಲಿಯೇ ಕೂತಲ್ಲಿಗೆ ಬರುವ ದಿನಸಿ, ತರಕಾರಿ, ಹಣ್ಣು, ಆಹಾರ ಇವೆಲ್ಲಕ್ಕೂ ಸ್ವಿಗ್ಗಿ, ಜೊಮ್ಯಾಟೋ, ರ್ಯಾಪಿಡೋ, ಜೆಪ್ಟೋ ಇರುವಾಗ ಹೊರಗೆ ಕಾಲಿಡುವ ಅವಶ್ಯಕತೆಯೇ ಇಲ್ಲ ಎನ್ನುತ್ತಾರೆ ಕೆಲವರು. ಕೋವಿಡ್ ನ ಪರಿಣಾಮ ಕೂಡಾ ಕಡಿಮೆಯದ್ದೇನಲ್ಲ. ಆ ಕಾಲದಲ್ಲಿ ಉಂಟಾದ ನಿರುದ್ಯೋಗ ಸಮಸ್ಯೆ, ಹಣದ ಸಮಸ್ಯೆಯಿಂದಲೂ ಇನ್ನೂ ಚೇತರಿಸಿಕೊಳ್ಳಬೇಕಿದೆ.
ಮಾಲ್ ಗಳ ಬಳಕೆ ಹೆಚ್ಚಬೇಕೆಂದರೆ ಮಾಲ್ ಗಳಲ್ಲಿ ಕೂಡಾ ಕೆಲವು ಬದಲಾವಣೆ ಬೇಕೆನ್ನುತ್ತಾರೆ ಜನರು. ಅದರ ಲೇಔಟ್ ಹಾಗೂ ಡಿಸೈನ್ ನಲ್ಲಿ ಬದಲಾವಣೆಯಾಗಿದೆ. ಅಡ್ವಾನ್ಸ್ಡ್ ಟೆಕ್ನಾಲಜಿ ಗಳನ್ನು ಬಳಸಬೇಕಿದೆ. ಮತ್ತೆ ಗ್ರಾಹಕರನ್ನು ಅವರ ಕೊಂಡುಕೊಳ್ಳುವಿಕೆಯನ್ನು ಗಮನಿಸಿ, ಅರ್ಥ ಮಾಡಿಕೊಂಡು ಅವರ ವಿಶ್ವಾಸ ಗಳಿಸಬೇಕಿದೆ. ಒಂದೇ ಕಡೆ ಹೆಚ್ಚಿನ ಮಾಲ್ ನಿರ್ಮಾಣ ಮಾಡುವುದಕ್ಕಿಂತ ಮಾಲ್ ಗಳು ಇಲ್ಲದ ಪ್ರದೇಶದಲ್ಲಿಯೂ ಅವುಗಳನ್ನು ನಿರ್ಮಿಸಬಹುದಾಗಿದೆ.
ಎಲ್ಲವೂ ಬದಲಾಗುತ್ತಿದೆ ಮತ್ತು ಬದಲಾಗಲೇ ಬೇಕು. ಹೌದಲ್ಲವಾ..
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ