ಬುಧವಾರ, ಏಪ್ರಿಲ್ 15, 2026

ಅರ್ಪಣೆ (ಪುಸ್ತಕ ಯಾನ - 189)


ಪುಸ್ತಕದ ಶೀರ್ಷಿಕೆ : ಅರ್ಪಣೆ

ಲೇಖಕರು : ವಾಣಿ

ಪ್ರಕಾಶಕರು : ಡಿ. ವಿ. ಕೆ ಮೂರ್ತಿ

ಪ್ರಥಮ ಮುದ್ರಣ : 1957

ನಾಲ್ಕನೇ ಮುದ್ರಣ : 2004 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 131

ಬೆಲೆ : 40 ರೂ. 


ವಾಣಿಯವರ ಈ ಸಣ್ಣ ಕಥೆಗಳ ಸಂಕಲನದಲ್ಲಿ 10 ಚೆಂದದ ಕಥೆಗಳಿವೆ.


ಅರ್ಪಣೆ : ಕಥಾಸಂಕಲನದ ಶೀರ್ಷಿಕೆಯೇ ಆಗಿರುವ ಕಥೆ ಇದು. ತಂದೆ ಕೆಲಸಕ್ಕೆ ಹೊರಟ ನಂತರ ಅಮ್ಮ ನಾಳೆಯ ಕೃಷ್ಣ ಜನ್ಮಾಷ್ಟಮಿಗೆ ತರಹೇವಾರಿ ತಿಂಡಿಗಳನ್ನು ಮಾಡುತ್ತಿದ್ದಾಗ, ಆಕೆ ತಂದೆ ಹೇಳಿದಂತೆ ಸಿದ್ದನನ್ನು ಕಾಯುವ ಕೆಲಸ ಮಾಡುತ್ತಿದ್ದಳು. ಸಿದ್ದನ ಪರಿಚಯವಿತ್ತಾದರೂ.. ಆತನ ಕೆಲಸದ ಮೇಲೆ ಕಣ್ಣಿಟ್ಟಿರುವಂತೆ ಪುಟ್ಟ ಗೌರಿಗೆ ಹೇಳಿದ್ದರು. ಆಕೆಗೆ ಆಟವಾಡುವ, ತಿಂಡಿ ತಿನ್ನುವ ತವಕ. ಅದಕ್ಕಾಗಿ ಸಿದ್ದ ಮನೆಗೆ ಹೋಗುವುದನ್ನೇ ಕಾಯುತ್ತಿದ್ದಳು. ಆದರೆ, ಮನೆಯಲ್ಲಿ ಯಾರೂ ಇಲ್ಲದೆ, ಜೊತೆಗೆ ಬಡತನವೂ ಗಂಟು ಬಿದ್ದುದರಿಂದ ಆತ ತಿನ್ನಲು ಏನೂ ಇಲ್ಲವೆಂದು ಮಾತಿನ ಮಧ್ಯೆ ಹೇಳಿದಾಗ ಮರುಗಿದ ಆಕೆ, ನಾಳಿನ ನೈವೇದ್ಯದ ತಿಂಡಿಗಳನ್ನೇ ಆತನಿಗೆ ತಂದುಕೊಟ್ಟಳು. ಆದರೆ, ಆಕೆಯ ತಾಯಿ ಅದಕ್ಕೆ ನೀಡಿದ ಪ್ರತಿಕ್ರಿಯೆಯಿಂದಾಗಿ ಗೌರಿ ಅಂದ್ರೆ ಮಾಯವಾಗಿದ್ದಳು. ಆಕೆ ಮತ್ತೆ ಸಿಕ್ಕಿದಳೇ..?? ಇಲ್ಲಿನ ಅರ್ಪಣೆಗೆ ನಾನಾರ್ಥವಿದೆ. 


ಮುಕುಂದನ ಉಡುಗೊರೆ : ಮುಕುಂದ ಹಾಗೂ ಶಾಂತರ ಚಂದದ ದಾಂಪತ್ಯದಲ್ಲಿ ಪ್ರೀತಿಯ ಪತ್ನಿಗೆ ಆಕೆ ಬಹಳ ದಿನಗಳಿಂದ ಬಯಸುತ್ತಿದ್ದ ಬನಾರಸ್ ಸೀರೆಯೊಂದನ್ನು ಉಡುಗೊರೆಯಾಗಿ ನೀಡಬೇಕೆಂದುಕೊಂಡಾಗ ಆತನ ಆಲೋಚನೆಯೆಲ್ಲಾ ತಲೆಕೆಳಕಾಗುವಂತೆ ಆಸ್ಪತ್ರೆಯಿಂದ ಬಂದ ಫೋನು ಆತನ ನೆಮ್ಮದಿ ಕೆಡಿಸಿತ್ತು. ಆದರೆ, ಅಲ್ಲಿನ ಪರಿಸ್ಥಿತಿ ಬೇರೆಯೇ ಇತ್ತು. ಮುಕುಂದ ಕೊಡಬೇಕೆಂದಿದ್ದ ಉಡುಗೊರೆ ಏನಾಯ್ತು..??


ಒಡೆದ ಕನಸು : ಸಮುದ್ರ ತೀರದಲ್ಲಿ ಕಂಡ ಆ ಜೀವಕಳೆ ಇಲ್ಲದ ಮುಖ ಸುಧಾಳಳದ್ದೇ ಎಂದು ತಿಳಿದಾಗ ಅಚ್ಚರಿಯಾಗಿತ್ತು. ದಂಡಿನಲ್ಲಿದ್ದ ಆಕೆಯ ಗಂಡ ಹಾಗೂ ಈ ಗುಜರಾತಿ ಹುಡುಗಿ ಸುಧಾ ಇಬ್ಬರನ್ನು ನೋಡಿ ಅವರ ಸಂಸಾರದ ಸಾಮರಸ್ಯವನ್ನೇ ಉದಾಹರಣೆಯಾಗಿ ನೀಡುತ್ತಾ.. ಅವರನ್ನೇ ನೆನೆಸಿಕೊಳ್ಳುತ್ತಿದ್ದವರಿಗೆ ಹೀಗೆ ನಿರ್ಲಿಪ್ತೆಯಂತೆ ಕುಳಿತಿದ್ದ ಸುಧಾಳನ್ನು ಕಂಡು ಅಚ್ಚರಿಯಾದುದರ ಜೊತೆಗೆ ಅವಳ ಒಡೆದ ಕನಸನ್ನು ಕೇಳಿದ ಮೇಲೆ ವ್ಯಥೆಯೂ ಆಗಿತ್ತು. ಅವಳ ಒಡೆದ ಕನಸಿಗೆ ಕಾರಣವೇನು..??


ಮನೆಗೆ ಬಂದಾಗ : ಪರದೇಶಿಯಾಗಿ ಉಟ್ಟ ಬಟ್ಟೆಯಲ್ಲಿ ಬಂದು ಮಾವನ ಮನೆ ಸೇರಿದ್ದ ನಂಜಪ್ಪ ಏಕಾಏಕಿಯಾಗಿ ಒಂದು ದಿನ ಸೀತಮ್ಮನನ್ನು ಹಾಗೂ ಮಕ್ಕಳನ್ನು ಬಿಟ್ಟು ಆಕೆ ಕೂಡಿಟ್ಟಿದ್ದ ಅಲ್ಪ ಹಣದ ಜೊತೆಗೆ ಮಾಯವಾಗಿದ್ದ. ಹಾಗೆ ಮಾಯವಾದ ನಂಜಪ್ಪನಿಂದ ಸೀತಮ್ಮನಿಗೆ ತೀರಾ ಕಷ್ಟವೆಂದೇನೂ ಅನ್ನಿಸದಿದ್ದರೂ.. ಮನಸ್ಸಿನಲ್ಲಿ ವ್ಯಥೆಯಂತೂ ಇದ್ದೇ ಇತ್ತು. ಆದರೆ, ಮನೆ ಬಿಟ್ಟು ಹೋಗಿದ್ದ ನಂಜಪ್ಪ ಮರಳಿ ಬಂದಾಗ ಆತ ಬೇರೆಯದ್ದೇ ರೀತಿಯಲ್ಲಿ ಜೀವನಪಾಠಗಳನ್ನು ಕಲಿತಿದ್ದ. ಆತ ಮನೆ ಬಿಟ್ಟು ಹೋದದ್ದೇಕೆ..?? ಮತ್ತೆ ಬಂದಾಗ ಆತನಲ್ಲಿ ಕಂಡ ಬದಲಾವಣೆಗಳೇನು..??  ಜಗತ್ತೇ ಮನೆಯಾಗಬಹುದಾದರೂ ತನ್ನದೇ ಮನೆ, ತನ್ನದೇ ಸಂಸಾರ ಎಷ್ಟು ಮುಖ್ಯವೆಂದು ಅರಿವಾಗಿಸುವ ಕಥೆ ಇದು. 


ಮಿಂಚು : ವಾಣಿಯವರ ಎರಡು ಕನಸು ಕಾದಂಬರಿಯನ್ನು ಒಂದು ಕತೆಯ ರೂಪದಲ್ಲಿ ಓದಬಹುದಾಗಿದೆ. ಅದೇ ಪಾತ್ರಗಳು ಆದರೆ ಪಾತ್ರದ ಹರವು ಅಲ್ಲಿಗಿಂತ ಇನ್ನೂ ಕೊಂಚ ಕಡಿಮೆ. ಕಾದಂಬರಿಯಲ್ಲಿ ಕಥೆಯ ಹರವಿಗೆ ಬೇಕಾದಂತೆ ಪಾತ್ರಗಳ ವಿಸ್ತರಣೆ ಕಂಡು ಬರುತ್ತದೆ. ಕಥೆಗಿಂತ ಕಾದಂಬರಿ ಇನ್ನು ಹೆಚ್ಚು ಆವರಿಸುತ್ತಾದರೂ.. ಕಾದಂಬರಿಗಿಂತ ಮೊದಲು ಕತೆ ಓದಿದವರಿಗೆ ಈ ಕಥೆ ಇಷ್ಟವಾಗುತ್ತದೆ. 


ನಾವೆಯಲ್ಲಿ : ನಾವೇಯನ್ನು ನಡೆಸುತ್ತಿದ್ದ ಚೆನ್ನ, ರಾಮಭಟ್ಟರನ್ನು ಕರೆದುಕೊಂಡು ಕಪ್ಪಡಿಗೆ ಹೊರಟಾಗ ಜೊತೆಯಾಗಿದ್ದವಳು ಲಕ್ಷ್ಮಿ. ಲಕ್ಷ್ಮಿ ಮೇಲೆ ಕಲ್ಲಿನಂತಹಾ ನಡೆಯಿಂದ ದೃಢ ಹಾಗೂ ಸ್ವಾಭಿಮಾನದ ಮುಸುಕು ಹೊದ್ದಿದ್ದರೂ.. ಅವಳಲ್ಲಿ ಹೆಣ್ತನವಂತೂ ಇದ್ದೇ ಇತ್ತು. ಮದುವೆಯ ಕುರಿತು ಕಪ್ಪಡಿಗೆ ಹೋಗುವಾಗ ಇದ್ದ ಭಾವನೆಗಳು ಬರುವಷ್ಟರಲ್ಲಿ ಬದಲಾಗಿತ್ತು. ಅದಕ್ಕೆ ಪ್ರೇಮಕ್ಕಿಂತ ಅಂದು ನಡೆದ ಘಟನೆಯೊಂದು ಕಾರಣವಾಗಿತ್ತು. ನಾವೆಯಲ್ಲಿ ಅಂದು ನಡೆದ ಪ್ರಮುಖ ಘಟನೆ ಚೆನ್ನ ಹಾಗೂ ಲಕ್ಷ್ಮೀಯರ ಬದುಕಿನ ಗತಿಯನ್ನೇ ಬದಲಿಸಿದ ಕಥೆ ಕಾಣಸಿಗುತ್ತದೆ. 


ಮನೆ ಬಾಡಿಗೆಗೆ ಇದೆ : ಸರೋಜಾ ಹಾಗೂ ಶೇಖರರ ಪಕ್ಕದ ಮನೆ ಬಾಡಿಗೆಗೆ ಇದೆ ಎಂದು ಶೇಖರನೇ ಬೋರ್ಡು ಬರೆದಿದ್ದನು. ಹಿರಿಯರಿಂದ ಬಂದ ಆಸ್ತಿಯಾದ ಅದಕ್ಕೂ.. ಇವರ ಮನೆಗೆ ನಡುವೆ ಇದ್ದದ್ದು ಒಂದೇ ಬಾಗಿಲು. ಎರಡೂ ಮನೆಯನ್ನೂ ಇದು ಪ್ರತ್ಯೇಕಿಸುತ್ತಿತ್ತು. ಮೊದಲಿದ್ದ ಬಾಡಿಗೆಯವರು ಕೊಟ್ಟ ಕಿರುಕುಳವಂತೂ ಅಂತಿಂಥದ್ದಲ್ಲ. ನಂತರ ಬಂದ ವಿಲಕ್ಷಣವಾದ ವ್ಯಕ್ತಿಯ ನಡತೆ ಹಾಗೂ ಅವನ ಜೀವನ ಇವರ ಜೊತೆಗೆ ತಳುಕು ಹಾಕಿಕೊಂಡದ್ದೇಕೆ..?? ಪ್ರಭಾಕರ ಅವರ ಕುಟುಂಬದಲ್ಲಿ ಪಡೆದ ಸ್ಥಾನ ಯಾವುದು..?? ಮತ್ತೆ ಮನೆ ಬಾಡಿಗೆಗೆ ಇದೆ ಎಂಬ ರಟ್ಟು ತೂಗುತ್ತಿದ್ದದ್ದೇಕೆ..??


ಎರಡು ರಾತ್ರಿ : ಮೋಹನ ಉಷಾರಾಣಿ ಚಿಕ್ಕವಳಿದ್ದಾಗ ಅವರ ಮನೆಯಲ್ಲೇ ಬಾಡಿಗೆಗಿದ್ದವನು. ಆಕೆಯನ್ನು ರಾಣಿ ಎಂದೇ ಕರೆಯುತ್ತಿದ್ದ. ಆಕೆಯ ಕನಸನ್ನು ನನಸು ಮಾಡುವ ತವಕದಲ್ಲಿದ್ದ. ಆದರೆ, ಪುಟ್ಟ ಹುಡುಗಿಯಾದ ರಾಣಿಗೆ ಆತನ ಭಾವನೆಗಳ ತಾಕಲಾಟಗಳ ಅರಿವಿರಲಿಲ್ಲ. ಆತ ವಾಪಸ್ ಬಂದಾಗ ಉಷಾ ದೊಡ್ಡವಳಾಗಿದ್ದಳು. ಆತನ ಅದೃಷ್ಟ ಕುಲಾಯಿಸಿ ಆತ ಶ್ರೀಮಂತನಾಗಿದ್ದ. ಆತನ ಕಣ್ಣಿನ ಭಾವನೆಗಳು ಅವಳಿಗೆ ಅರಿವಾದ ಪರಿ ಹಾಗೂ ಆಕೆಯ ಮನಸ್ಸು ಈತನಿಗೆ ಅರ್ಥವಾದ ಪರಿ ಇಬ್ಬರ ಬದುಕಿನ ಗತಿಯನ್ನು ಬದಲಾಯಿಸಿದ ಕಥೆ ಕಾಣುತ್ತದೆ. ಆ ಎರಡು ರಾತ್ರಿಗಳ ಕತೆ ನೀವೇ ಓದಿ ನೋಡಿ.


ಪುನರಾಗಮನ : ಮನೆಯ ಮುದ್ದಿನ ಮಗಳು ಲಲಿತಾ 'ಲೀಲಿ' ಆಗಿದ್ದಳು. ಬಹಳ ಮುದ್ದಾಗಿದ್ದ, ಚೂಟಿಯಾಗಿದ್ದ ಅವಳು ಮನೆಯ ಬೆಳಕಂತೆ ಇದ್ದವಳು ಪ್ರವಾಸ ಹೋಗಿದ್ದಾಗ ಕಳೆದು ಹೋದಳು. ಆಗಿನ್ನೂ ಅವಳಿಗೆ ಮೂರು ವರ್ಷ. ಮನೆಯ ಬೆಳಕು ಕಣ್ಮರೆಯಾಗಿತ್ತು. ಮತ್ತೆ ಆ ಮನೆಯ ಬೆಳಕು ಪುನರಾಗಮನವಾದದ್ದು ಹೇಗೆ..?? ಅದರ ಅರಿವಾದದ್ದು ಹೇಗೆ..??

ಅಣ್ಣನ ಭಾವಗಳು ಹಾಗೂ ಮಗನಾಗಿ ಅಮ್ಮನ ಭಾವಗಳನ್ನು ಆತ ಅರ್ಥೈಸಿಕೊಂಡು ತೆಗೆದುಕೊಂಡ ತೀರ್ಮಾನಗಳು, ಆತನ ಮನಸ್ಸಿನ ತುಮುಲಗಳು ಕಂಡುಬರುತ್ತವೆ.


ರೇಷ್ಮೆ ವಸ್ತ್ರ : ವೆಂಕಟರಾಮವಿನ ಸಂಸಾರ ಸಿರಿವಂತ ಸಂಸಾರವಲ್ಲ. ಆದರೆ, ಆತನ ಪತ್ನಿಗೆ ಒಂದು ಬಯಕೆ ಇತ್ತು. ಆತನಿಗೆ ಬಹುಮಾನವಾಗಿ ಬಂದ ಹಣದಲ್ಲಿ ಆ ಆಸೆಯೂ ಈಡೇರಿತ್ತು. ಅಂದುಕೊಂಡ ಆ ವಸ್ತ್ರಕ್ಕೂ.. ಇಂದು ಖಾದಿ ನೇಯುತ್ತಾ ಕುಳಿತಿರುವ ಸುಂದರುಗೂ ಆಲೋಚನೆಗಳಲ್ಲಿ ವ್ಯತ್ಯಾಸವಿತ್ತು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬದಲಾದ ಹೆಣ್ಣು ಮಗಳಬದುಕಿನ ಕಥೆ ಇಲ್ಲಿದೆ. ಸ್ವತಂತ್ರ ಭಾರತದ, ಸ್ವತಂತ್ರ ಪ್ರಜೆಯಾದ ಅವಳ ದಿಟ್ಟ ನಿಲುವು ಕಾಣುತ್ತದೆ.


1957ರ ಸಮಯಕ್ಕೂ ಹಿಂದೆ ಬರೆದ ಕಥೆಗಳು ಇವಾದರೂ.. ಕೆಲವು ಕಥೆಗಳಲ್ಲಿ ಇಂದಿಗೂ ಹೊಂದುವ ಕಥಾವಸ್ತುವಿದೆ. ಇಲ್ಲಿ ಮುಖ್ಯವಾಗಿ ಪಾತ್ರಗಳ ಭಾವನೆಗಳು, ತುಮುಲಗಳು, ತಾಕಲಾಟಗಳನ್ನು ಸೂಕ್ಷ್ಮವಾಗಿಯೂ, ಭಾವನಾತ್ಮಕವಾಗಿಯೂ ಹೆಣೆದಿರುವ ಪರಿ ಇಷ್ಟವಾಯಿತು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ