ಬುಧವಾರ, ಏಪ್ರಿಲ್ 15, 2026

ಕಾರ್ಮುಗಿಲ ತಾರೆ (ಪುಸ್ತಕ ಯಾನ - 184)


ಪುಸ್ತಕದ ಶೀರ್ಷಿಕೆ : ಕಾರ್ಮುಗಿಲ ತಾರೆ

ಲೇಖಕರು : ಡಾ. ಆರತಿ ವೆಂಕಟೇಶ್

ಪ್ರಕಾಶಕರು : ಓಂ ಶಕ್ತಿ ಪ್ರಕಾಶನ

ಪ್ರಥಮ ಮುದ್ರಣ : 2004

ದ್ವಿತೀಯ ಮುದ್ರಣ : 2016 (ನನ್ನ ಓದಿಗೆ ಸಿಕ್ಕಿದ್ದು)


ಡಾ. ಆರತಿ ವೆಂಕಟೇಶ್ ಅವರ ಹೆಸರು ಚಿರಪರಿಚಿತವಾಗಿದ್ದರೂ.. ಇದು ನಾನು ಓದುತ್ತಿರುವ ಅವರ ಮೊದಲ ಕಾದಂಬರಿ. ಇವರು ವೃತ್ತಿಯಿಂದ ವೈದ್ಯರು ಪ್ರವೃತ್ತಿಯಿಂದ ಬರಹಗಾರರು. ಉಷಾ ನವರತ್ನರಾಮ್ ಅವರ ಮಗಳು. ಇವರ ಹಲವಾರು ಕಾದಂಬರಿಗಳು ವಾರಪತ್ರಿಕೆ ಹಾಗೂ ಮಾಸಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಜನಪ್ರಿಯವಾಗಿವೆ. ಕಿರುತೆರೆಯ ಧಾರಾವಾಹಿಗಳ ಕಥಾ ವಿಸ್ತರಣೆ ಹಾಗೂ ಸಂಭಾಷಣೆ ರಚನೆಯಲ್ಲಿ ಕೂಡ ತೊಡಗಿಕೊಂಡಿದ್ದಾರೆ. 'ಮುಕ್ತ' ಧಾರಾವಾಹಿಯ ಮೊದಲ 150 ಕಂತುಗಳ ಸಂಭಾಷಣೆ ರಚಿಸಿದ್ದಾರೆ. ಆಕಾಶವಾಣಿಯ ವನಿತಾ ವಿಹಾರ ಕಾರ್ಯಕ್ರಮದಲ್ಲಿ ಇವರ ಕಥೆಗಳು ನಾಟಕ ರೂಪದಲ್ಲಿ ಪ್ರಸಾರಗೊಂಡಿದೆ. 


ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಅದರಲ್ಲೂ ಬೆಳೆದ ಮಕ್ಕಳ ಮೇಲೆ ವಿದ್ಯಾಭ್ಯಾಸದ ವಿಚಾರಕ್ಕಾಗಿ ಹೆಚ್ಚಿನ ಒತ್ತಡ ಹೇರುವುದು, ಅವರಿಗೆ ಮನೆಯ ವಾತಾವರಣವೇ ಬೇಡವೆನಿಸಿ ಓಡಿ ಹೋಗುವ ನಿದರ್ಶನಗಳು ಇಲ್ಲದ್ದಿಲ್ಲ. ಇಂತಹಾ ಮಕ್ಕಳು ಒಳ್ಳೆಯ ದಾರಿ ಸಿಕ್ಕು ನಾಗರೀಕರಾದರೂ ಅಂತಹವರು ವಿರಳ. ಕೆಲವರು ಭಿಕ್ಷಾಟನೆಯ ಜಾಲಕ್ಕೋ ಅಥವಾ ದುಷ್ಟರ ಕೈಗೋ ಸಿಲುಕಿ ನಲುಗುವುದೋ ಇದೆ. ಮನೆಯ ವಾತಾವರಣ ಹಾಗೂ ತಂದೆ-ತಾಯಿಯ ನಡವಳಿಕೆ ಅವರಿಗೆ ಉಸಿರು ಕಟ್ಟಿಸಿತೆಂದರೆ.. ಮುಂದೆ ಅವರ ಮನಸ್ಸಿನ ಮೇಲೆ ಆಗುವ ಪರಿಣಾಮಗಳು ಏನಿರಬಹುದು..?? ಇಂತಹದ್ದೊಂದು ಸೂಕ್ಷ್ಮ ವಿಚಾರಗಳನ್ನು ಇಟ್ಟುಕೊಂಡವ ಹೆಣೆದಿರುವ ಕಾದಂಬರಿ 'ಕಾರ್ಮುಗಿಲ ತಾರೆ'. ಈ ಕಾದಂಬರಿ ಹಂಸರಾಗ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. 


ತನ್ನ ಮಕ್ಕಳನ್ನು ನೋಡಿಕೊಳ್ಳಲು ಹಾಗೂ ಮನೆ ಮೇಲ್ವಿಚಾರಣೆಗೆ ಒಬ್ಬಳು ಕೆಲಸದವಳು ಬೇಕೆಂದು ಹೇಳಿದ್ದಳಾದರೂ.. ಸುಮತಿ ತಂದು ನಿಲ್ಲಿಸಿದ ಹುಡುಗಿಯನ್ನು ನೋಡಿ ವತ್ಸಲ ಅಚ್ಚರಿಗೊಂಡಳು. ಆಕೆ ಕೆಲಸದ ಹುಡುಗಿಯ ಎಂದು ಒಂದು ಕ್ಷಣ ಸಂದೇಹ ಬಂದರೂ 'ಅಮ್ಮಿ' ಹೇಳಿದ್ದು ಹಾಗೂ ಆಕೆಯ ನಡವಳಿಕೆಗಳು ವತ್ಸಲಾಳಿಗೆ ಮೆಚ್ಚುಗೆಯಾಗಿತ್ತು.


ವತ್ಸಲಳ ಮನೆ ಕೆಲಸಕ್ಕೆ ಲಿಂಗಮ್ಮ ಇದ್ದರೂ.. ಮಕ್ಕಳಾದ ಸುಜಯ ಹಾಗೂ ವಿಜಯರನ್ನು ನೋಡಿಕೊಳ್ಳಬೇಕಿತ್ತು. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ವಿಜಯ ಹಾಗೂ ಒಂದನೇ ತರಗತಿಯಲ್ಲಿದ್ದ ಸುಜಯಳ ಮೇಲ್ವಿಚಾರಣೆ ನಡೆಸಬೇಕಿತ್ತು. ಪ್ರತಿಷ್ಠಿತ ಕಂಪನಿಯಲ್ಲಿ ಆರ್ಕಿಟೆಕ್ಟ್ ಆಗಿ ಕೆಲಸ ಮಾಡುತ್ತಿದ್ದ ವತ್ಸಲಾಳಿಗೆ, ಮಕ್ಕಳ ಹಾಗೂ ವೃತ್ತಿಯನ್ನು ಸರಿದೂಗಿಸಲು ಕಷ್ಟವಾಗುತ್ತಿತ್ತು. ಆಕೆಯ ಪತಿ ಜಗದೀಶ್ ರಾಯ್ ಬರೇಲಿಯ ಕಾರ್ಖಾನೆಯಲ್ಲಿ ವೈದ್ಯನಾಗಿದ್ದರಿಂದ ಎರಡು ತಿಂಗಳಿಗೊಮ್ಮೆ  ಶಿವಮೊಗ್ಗಕ್ಕೆ ಬಂದು ಹೋಗುತ್ತಿದ್ದುದರಿಂದ, ಮಕ್ಕಳನ್ನು ಮೇಲ್ವಿಚಾರಣೆ ಮಾಡಲು ಯಾರಾದರೂ ಒಬ್ಬರು ನಂಬಿಕಸ್ಥರು ಬೇಕಿತ್ತು.


ಸುಮತಿ ವತ್ಸಲಳ ಆಫೀಸಿನಲ್ಲಿ ಪಾರ್ಟ್ ಟೈಮ್ ಲೀಗಲ್ ಅಡ್ವೈಸರ್ ಆಗಿದ್ದವಳು. ಅಲ್ಲದೆ, ಸಮಾಜ ಸೇವಕಿಯಾಗಿ 'ಮಹಿಳಾ ಜಾಗೃತಿ' ಎಂಬ ಅಬಲಾಶ್ರಮವನ್ನು ಸ್ಥಾಪಿಸಿ ಮಹಿಳೆಯರ ಸುಧಾರಣೆಗಾಗಿ ಕೆಲಸ ಮಾಡುತ್ತಿದ್ದಳು. ಒಮ್ಮೆ 12 ವರ್ಷದ ಹುಡುಗಿಯೊಬ್ಬಳು ಮಹಿಳಾ ಜಾಗೃತಿಗೆ ಬಂದಾಗ, ಅವಳು ಇನ್ನೂ 18 ವರ್ಷಕ್ಕಿಂತ ಕಡಿಮೆ ಇದ್ದುದರಿಂದ.. ಅಲ್ಲದೆ, ಆಕೆಯನ್ನು ಯಾರೂ ಕೇಳಿಕೊಂಡು ಬಾರದಿದ್ದುದರಿಂದ ಹಾಗೂ ಯಾವುದೇ ಮಿಸ್ಸಿಂಗ್ ಕಂಪ್ಲೇಂಟ್ ಇಲ್ಲದಿದ್ದರೆ ವತ್ಸಲಾಳ ಮನೆಗೆ ಕರೆತಂದಿದ್ದಳು ಸುಮತಿ. 


ಅಮ್ಮಿಯನ್ನು ಯಾರು ಕೇಳಿದರೂ ಅವಳು ತನ್ನ ತಾಯಿ ತೀರಿಕೊಂಡಿದ್ದರು ಹಾಗೂ ತಂದೆಯು ಕಾಯಿಲೆ ಬಂದು ಇತ್ತೀಚೆಗೆ ಸತ್ತು ಹೋಗಿದ್ದರಿಂದ, ಚಿಕ್ಕಮ್ಮ ನನ್ನನ್ನು ಮನೆ ಬಿಟ್ಟು ಓಡಿಸಿದ್ದಾಳೆ ಎಂದು ಹೇಳುತ್ತಿದ್ದಳು. ಬಹಳ ಬುದ್ಧಿವಂತೆಯಾಗಿದ್ದರೂ.. ಶಾಲೆಯ ಓದಿನಲ್ಲಿ ತನಗೆ ಆಸಕ್ತಿ ಇಲ್ಲವೆಂದೇ ಹೇಳುತ್ತಿದ್ದಳು. 


ಕ್ರಮೇಣ ವತ್ಸಲ ಹಾಗೂ ಅವರ ಮಕ್ಕಳ ಜೊತೆ ಆತ್ಮೀಯತೆಯಿಂದ ಹೊಂದಿಕೊಂಡಳು. ಮೊದಲಿಗೆ ಜಗದೀಶ್ ಅವರು ಬಂದಾಗ ಅವರ ಜೊತೆ ಅಷ್ಟಾಗಿ ಹೊಂದಿಕೊಳ್ಳದ ಅಮ್ಮಿ ನಂತರ ಅವರಿಗೂ ಆತ್ಮೀಯಳಾದಳು. ಆದರೆ, ಜಗದೀಶ್ ರವರಿಗೆ ಆಕೆಯನ್ನು ತಾನು ಎಲ್ಲೋ ನೋಡಿದ್ದೇನೆ ಅವಳು ಶಿವಮೊಗ್ಗದವಳಲ್ಲವೆಂಬ ಸಂದೇಹವಿತ್ತು. 


ಮುಂದಿನ ದಿನಗಳಲ್ಲಿ ಜಗದೀಶ್ ರವರಿಗೆ ಶಿವಮೊಗ್ಗದಲ್ಲೇ ಕೆಲಸ ಸಿಕ್ಕು ಮನೆಗೆ ವಾಪಸು ಬಂದಾಗ, ಅಮ್ಮಿಯನ್ನು ಸಂಪೂರ್ಣವಾಗಿ ಹಾಗೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅವಳ ಸುಶಿಕ್ಷಿತ ನಡವಳಿಕೆ ಇಂಗ್ಲಿಷ್ ಅರಿವು ಹಾಗೂ ಮಕ್ಕಳ ಜೊತೆ ನಡೆದುಕೊಳ್ಳುತ್ತಿದ್ದ ರೀತಿ ಇವೆಲ್ಲದರಿಂದ ಆಕೆಯ ಹಿಂದಿನ ವಿಚಾರಗಳನ್ನು ತಿಳಿಯಲು ಯತ್ನಿಸಿದರು. ಅದರಿಂದ ಹೆದರಿ, ವಿಮುಖಳಾಗುತ್ತಿದ್ದರಿಂದ ಅವರು ಅಷ್ಟಕ್ಕೇ ಸುಮ್ಮನಾಗಿ ಅವಳ ಹಿಂದಿನದ್ದನ್ನು ಹೆಚ್ಚು ಕೆದಕಲು ಹೋಗಲಿಲ್ಲ ಜಗದೀಶ್.


ಸುಜಯಳ ಹುಟ್ಟುಹಬ್ಬಕ್ಕೆ ಬಂದ ಜಗದೀಶ್ ಅವರ ಗೆಳೆಯ ಪ್ರಭಾಕರ್ ಅವಳನ್ನು ಗುರುತಿಸಿದಾಗ ಅಮ್ಮಿ ಹೆದರಿ, ತಾನವಳಲ್ಲವೆಂದೇ ಹೇಳಿದ್ದಳು. ಅವಳು ತಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೆಕ್ಯಾನಿಕಲ್ ಇಂಜಿನಿಯರ್ ರಾಹುಲ್ ಗುಪ್ತ ಹಾಗೂ ಸಂಧ್ಯಾ ರ ಮಗಳು. ತಮ್ಮ ಮಗಳಾದ ರಜನಿಯ ಆಪ್ತ ಗೆಳತಿ ಅಮೂಲ್ಯ ಎಂದಿದ್ದರು ಪ್ರಭಾಕರ್.


ಅತ್ತ ರಾಹುಲ್ ಹಾಗೂ ಸಂಧ್ಯಾ ತಮ್ಮ ಕಳೆದು ಹೋದ ಮಗಳಿಗಾಗಿ ಪರಿತಪಿಸುತ್ತಿದ್ದರ.  ಓದಿಗಾಗಿ ಹೆಚ್ಚು ಒತ್ತಡ ನೀಡುತ್ತಿದ್ದ ಸಂಧ್ಯಾ.. ಮಗಳು ಮನೆ ಬಿಟ್ಟು ಹೋದಾಗಿನಿಂದ ಕುಸಿದೇ ಹೋಗಿದ್ದಳು. 


ವತ್ಸಲಾಳಿಗೆ ಅಮ್ಮಿ ಬಹಳ ಹೊಂದಿಕೊಂಡಿದ್ದಳು. ಅವಳನ್ನು ಎಲ್ಲಿಗೂ ಕಳಿಸುವ ಹಾಗೂ ಅವಳ ನಿಜವನ್ನು ಅರಿಯುವ ಅದಕ್ಕೆ ಒಪ್ಪಿಕೊಳ್ಳುವ ಮನಸ್ಥಿತಿ ಇರಲಿಲ್ಲ. ಅಮ್ಮಿ ಹೇಳುತ್ತಿದ್ದದ್ದೇ ನಿಜವೇ.. ಅಥವಾ ಪ್ರಭಾಕರ್ ಅವರು ಹೇಳಿದ್ದೇ ನಿಜವೇ..??


ಪ್ರಭಾಕರ್ ಅವರು ಹೇಳಿದ್ದ ಅಮೂಲ್ಯ ಹಾಗೂ ಅಮ್ಮಿ ಇಬ್ಬರೂ ಒಬ್ಬರೇ ಅಥವಾ ಇಬ್ಬರಲ್ಲೂ ಹೋಲಿಕೆ ಇತ್ತೇ..??


ಸಂಧ್ಯಾ ಮಗಳ ಮೇಲೆ ಅಷ್ಟು ಒತ್ತಡ ಹೇರುತ್ತಿದ್ದದ್ದೇಕೆ..?? ಸಂಧ್ಯಾಳ ನಡವಳಿಕೆ ಹಾಗೂ ಮನಸ್ಥಿತಿ ಹೇಗಿತ್ತು..?? ಅಮ್ಮಿಯ ಬುದ್ದಿವಂತಿಕೆ ತಿಳಿದಿದ್ದ ಸುಜಯ, ವಿಜಯಾರು ಅದನ್ನು ಮನೆಯಲ್ಲಿ ತಿಳಿಸದೇ ಗುಟ್ಟಾಗಿ ಇಟ್ಟದ್ದೇಕೆ..?? ಅಮ್ಮಿ ಒಮ್ಮೆ ವರ್ಡ್ ಬಿಲ್ಡಿಂಗ್ ಆಟ ಆಡುತ್ತಿರುವಾಗ ಮನೆ ಎಂದರೆ ಹೆಲ್, ತಾಯಿ ಇಲ್ಲ ಹಾಗೂ ಟೀಚರ್ ಎಂದರೆ ಅತ್ತೆ ಎಂದದ್ದು ಏಕೆ..?? 


"ಮಕ್ಕಳು ಆಕಾಶದಲ್ಲಿ ತಾರೆಗಳಿದ್ದ ಹಾಗೆ. ಅವರಿಗೆ ಅವರದೇ ಆದ ಜ್ಞಾನ ಜ್ಯೋತಿ ಇರುತ್ತೆ- ಐ ಮೀನ್, ದೇ ಆರ್ ಸೆಲ್ಫ್ ಲ್ಯೂಮಿನಸ್. ಅವರನ್ನು ನಿಮ್ಮ ಸುತ್ತಲೂ ಸುತ್ತುವ ಉಪಗ್ರಹಗಳನ್ನಾಗಿ ಮಾಡಿಕೊಳ್ಳುವುದು ವಿಪರ್ಯಾಸ ಆಗುತ್ತೆ." ಎಂದ ಜಗದೀಶ್ ಅವರ ಮಾತುಗಳು ಎಷ್ಟು ಅರ್ಥಪೂರ್ಣ ಹಾಗೂ ಎಷ್ಟು ಆಳವಾದ ಜ್ಞಾನಗಳನ್ನು ಹೊಂದಿವೆ ಎಂದು ಅನ್ನಿಸುತ್ತದೆ. 


ಐದು ಬೆರಳು ಒಂದೇ ರೀತಿ ಇರುವುದಿಲ್ಲ. ಹಾಗೆಯೇ.. ಎಲ್ಲಾ ಮಕ್ಕಳ ಬುದ್ಧಿಮತ್ತೆಯೂ ಒಂದೇ ರೀತಿ ಇರುವುದಿಲ್ಲ. ಮಕ್ಕಳ ಸೂಕ್ಷ್ಮ ಮನಸ್ಥಿತಿಗಳನ್ನು ಹಾಗೂ ತಂದೆ-ತಾಯಿಗಳು ಬದಲಿಸಿಕೊಳ್ಳಬೇಕಾದ ಅವರ ನಡೆಗಳನ್ನು ಮನಮುಟ್ಟುವಂತೆ ಚಿತ್ರಿಸಿರುವ ಕಾದಂಬರಿ ಇದು. ಇಂದಿನ ತಾಯಿ-ತಂದೆಯರು ಅವಶ್ಯಕವಾಗಿ ಓದಲೇಬೇಕಾದ ಕಾದಂಬರಿ ಎಂದೆನಿಸಿತು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ