ಗುರುವಾರ, ಏಪ್ರಿಲ್ 16, 2026

ಎಲ್ಲಿ ಹೋದವು 2000 ರೂಪಾಯಿ ನೋಟುಗಳು ?


2000 ರೂಪಾಯಿಯ ಪಿಂಕ್ ಬಣ್ಣದ ನೋಟುಗಳನ್ನು ಮೊದಲು  ಕಂಡಾಗ, ಕೈಯ್ಯಲ್ಲಿ ಹಿಡಿದಾಗ ಹೊಸದೇನನ್ನೋ.. ಬೆಳೆಬಾಳುವಂತಹದ್ದೇನನ್ನೋ ಕೈಯ್ಯಲ್ಲಿ ಹಿಡಿದಂತೆ. ಭಾರತದಲ್ಲಿ ಮೊದಲ ಬಾರಿಗೆ ಅಷ್ಟು ಮುಖಬೆಲೆಯ ನೋಟು ನೋಡಿದ್ದು ಎಂದು ಒಂದು ಕಾರಣವಾದರೆ , ಪಿಂಕ್ ಬಣ್ಣದ ನೋಟು ಸಹಾ ಮನಸೆಳೆದಿತ್ತು. ಹೀಗೆ 2000 ನೋಟು ಚಲಾವಣೆಗೆ ಬಂದದ್ದು 2016 ರ ನವೆಂಬರ್ 8 ರಿಂದ. ಆಗ 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳ ಡಿ-ಮಾನಿಟೈಸೇಷನ್ ಅನ್ನು ಸರಿದೂಗಿಸುವ ಸಲುವಾಗಿ ಬಂದ 2000 ರೂಪಾಯಿ ನೋಟುಗಳು ಈಗ ಎಲ್ಲಿವೆ ? ಇತ್ತೀಚೆಗೆ ಕಾಣುತ್ತಿಲ್ಲವಾದ ಆ ನೋಟುಗಳ ಆಯುಷ್ಯ ಅಷ್ಟೆಯೇ ? ಕೇವಲ ಆ ಡಿ-ಮಾನಿಟೈಸೇಷನ್ ಅನ್ನು ಸರಿದೂಗಿಸಲು ಮಾತ್ರ ಈ ನೋಟುಗಳು ಚಲಾವಣೆಗೆ ಬಂದವಾ..?? ಈ ಪ್ರಶ್ನೆ ನಿಮಗೂ ಕಾಡುತ್ತಿದೆಯೇ ? ಇಂದು ಬ್ಯಾಂಕ್ ಗೆ ಹಣ ಡ್ರಾ ಮಾಡಲು ಹೋದರೆ ಅಥವಾ ಎ.ಟಿ.ಎಂ ಗೆ ಹೋದರೆ ನಿಮಗೆ 2000 ರೂಪಾಯಿಯ ನೋಟಿಗಳ ಬದಲಾಗಿ 500 ರೂಪಾಯಿಯ ನೋಟುಗಳೇ ಹೆಚ್ಚಾಗಿವೆಯಲ್ಲಾ.. ಇದಕ್ಕೆ ಕಾರಣವಾದರೂ ಏನು ? 2000 ರೂಪಾಯಿಗಳೆಲ್ಲವೂ ಕಾಣೆಯಾಗಿವೆ ಎಂಬುದು ಇದರ ಅರ್ಥವಲ್ಲ. ಬದಲಾಗಿ, ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಕಾಣಸಿಗಬಹುದು. ಅವುಗಳ ಚಲಾವಣೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಹಾಗಾದರೆ, ಬ್ಯಾಂಕ್ ಗೆ ಬಂದ 2000 ನೋಟುಗಳೇನಾದರೂ ಮತ್ತೆ ಚಲಾವಣೆಗೆ ಹೋಗುತ್ತಿಲ್ಲವಾ.. ಹೇಗೆ ? ಅಥವಾ 2023 ರಿಂದ 2000 ರೂಪಾಯಿಯ ಹೊಸ ಮುದ್ರಣದ ಸೀರೀಸ್ ಏನಾದರೂ ಮುದ್ರಣಗೊಂಡು ಚಲಾವಣೆಗೆ ಬರಲಿದೆಯಾ..?? ಹೀಗೆ 2000 ರೂಪಾಯಿಯ ನೋಟಿನ ಕುರಿತು ಸುಮಾರು ಅನುಮಾನಗಳು ಸೃಷ್ಟಿಯಾಗಿವೆ. 


ಈ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಗಬಹುದೇ ? ಯಾಕಿಲ್ಲ. ಆದರೆ , ಆ ಸಿಕ್ಕ ಉತ್ತರ ಎಷ್ಟು ಸಮರ್ಪಕ ಎನ್ನುವುದನ್ನು ನೀವೇ ನಿರ್ಧರಿಸಿ. ಆರ್.ಟಿ.ಐ ಎಂದರೆ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಎ.ಐ.ಎನ್.ಎಸ್ ಇದೇ ಪ್ರಶ್ನೆ ಕೇಳಿತ್ತು. ಮತ್ತು ಆರ್.ಟಿ.ಐ ಮೂಲಕ ಇದಕ್ಕೆ ಉತ್ತರ ಕೂಡಾ ದೊರೆತಿದೆ. ಅದನ್ನು ತಿಳಿಯುವ ಮುನ್ನ 2016 ರಿಂದ 2000 ರೂಪಾಯಿ ನೋಟುಗಳು ಎಷ್ಟಿದ್ದವು ಎಂಬುದನ್ನು ತಿಳಿಯೋಣ. 


ಮೊದಲಿಗೆ 2016-17 ನೇ ವರ್ಷದಲ್ಲಿ 3,542.991 ಮಿಲಿಯನ್ ಗಳಷ್ಟು ನೋಟು ಮುದ್ರಣವಾಗಿದ್ದರೆ, 2017-18 ರಲ್ಲಿ ಇದಕ್ಕಿಂತ ಕಡಿಮೆ ಅಂದರೆ 111.507 ಮಿಲಿಯನ್ ನೋಟು ಮುದ್ರಣವಾಗಿವೆ. ಅದರ ನಂತರದ ವರ್ಷದಲ್ಲಿ ಅಂದರೆ 2018-19 ರ ವರ್ಷದಲ್ಲಿ 46. 690 ಮಿಲಿಯನ್ ನೋಟುಗಳು ಮುದ್ರಣವಾಗಿವೆ. ಆರ್.ಟಿ.ಐ ನ ಮಾಹಿತಿಯ ಪ್ರಕಾರ ಹಾಗೂ ಕೇಂದ್ರ ಸರ್ಕಾರ ಲೋಕ ಸಭೆಯಲ್ಲಿ ಹೇಳಿರುವ ಪ್ರಕಾರ ಕಳೆದ 3 ವರ್ಷಗಳಲ್ಲಿ ಎಂದರೆ 2019 ರಿಂದ ಈಚೆಗೆ 2000 ರೂಪಾಯಿಯ ಒಂದು ನೋಟು ಸಹಾ ಮುದ್ರಣವಾಗಿಲ್ಲ. ಅಂದರೆ, 2000 ರೂಪಾಯಿ ನೋಟು ಮುದ್ರಣವಾದ ಸಂಖ್ಯೆ ಸೊನ್ನೆ. ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಸಹಾ ಇದನ್ನು ಹೌದು ಎಂದಿದೆ. 2022 ರ ಮಾರ್ಚ್ 31 ರ ಸರ್ಕ್ಯುಲೇಷನ್ ನ ಪ್ರಕಾರ ಈಗ ಚಾಲ್ತಿಯಲ್ಲಿ ಇರುವ 2000 ರೂಪಾಯಿಯ ನೋಟುಗಳ ಸಂಖ್ಯೆ ಕೇವಲ 21,420 ಲಕ್ಷ. ನೋಟು ಮುದ್ರಣವಾಗದೇ ಇರುವುದೇ 2000 ರೂಪಾಯಿ ನೋಟುಗಳು ಕಾಣೆಯಾಗಿರುವುದಕ್ಕೆ ಕಾರಣ ಎಂದಿದೆ. ನೋಟುಗಳ ಮುದ್ರಣ ಏಕೆ ಆಗಿಲ್ಲ ಎಂಬುದರ ಜಾಡು ಹಿಡಿದು ಹೊರಟರೆ..


ಎನ್.ಸಿ.ಆರ್.ಬಿ ಯ ಪ್ರಕಾರ 2016 ರಿಂದ ಇತ್ತೀಚೆಗೆ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. ಅದರಲ್ಲಿಯೂ ಈ 2000 ರೂಪಾಯಿಯ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ ಎನ್ನುತ್ತಿದ್ದಾರೆ. 2016 ರಲ್ಲಿ 2272 ರಷ್ಟು ನಕಲಿ ನೋಟುಗಳು ಪತ್ತೆಯಾಗಿದ್ದರೆ 2017 ರಲ್ಲಿ 74,898 ನಕಲಿ ನೋಟುಗಳು, 2018 ರಲ್ಲಿ 54,776 ನಕಲಿ ನೋಟುಗಳು, 2019 ರಲ್ಲಿ 90,566 ನಕಲಿ ನೋಟುಗಳು, 2020 ರಲ್ಲಿ 2,44,834 ನಕಲಿ ನೋಟುಗಳು ಪತ್ತೆಯಾಗಿವೆ. ಈ ನಕಲಿ ನೋಟುಗಳನ್ನು ಚಲಾವಣೆಗೆ ಬಿಟ್ಟು ಅಸಲಿ ನೋಟುಗಳನ್ನು ಬಳಸಿ ಆ ಹಣವನ್ನು ಭಯೋತ್ಪಾದಕರ ಚಟುವಟಿಕೆಗಳಿಗೆ ನೀಡಲಾಗುತ್ತಿದೆ ಎನ್ನಲಾಗುತ್ತಿದೆ. 


ಈ 2000 ರೂಪಾಯಿಯ ನೋಟುಗಳ ನಕಲಿ ಏಕೆ ಹೆಚ್ಚು ಎಂದು ಹೇಳುವುದಕ್ಕೆ ಮುನ್ನ ನಾವು ಬಳಸುವ ನೋಟು ಮುದ್ರಿಸಲು ಆಗುವ ಖರ್ಚು ಎಷ್ಟು ಎಂದು ತಿಳಿದು ಬರೋಣ. 

ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿಯ ಪ್ರಕಾರ ಒಂದು 200 ರೂಪಾಯಿ ನೋಟು ಮುದ್ರಿಸಲು 2.93 ರೂಪಾಯಿ ಖರ್ಚಾದರೆ 500 ರೂಪಾಯಿಯ ನೋಟು ಮುದ್ರಣಕ್ಕೆ 2.94 ರೂಪಾಯಿ ಖರ್ಚಾಗುತ್ತದೆ. 2000 ರೂಪಾಯಿ ನೋಟು ಮುದ್ರಣಕ್ಕೆ 3.54 ರೂಪಾಯಿ ಖರ್ಚಾಗುತ್ತದೆ. 2000 ರೂಪಾಯಿಯನ್ನು ಮುದ್ರಿಸಲು ಐನೂರರ ನಾಲ್ಕು ನೋಟು ಮುದ್ರಣ ಮಾಡುವ ಖರ್ಚಿಗಿಂತ ಅತಿ ಕಡಿಮೆ ಖರ್ಚಿನಲ್ಲಿ ಎರಡು ಸಾವಿರದ ಒಂದು ನೋಟು ಮುದ್ರಣವಾಗುತ್ತದೆ. 

ಇದೇ ಸೂತ್ರವನ್ನೇ ಖೋಟಾ ನೋಟು ಮಾರುತ್ತಿರುವವರು ಸಹಾ ಬಳಸುತ್ತಿರುವುದು. ನೋಟು ಮುದ್ರಿಸಲು ಖರ್ಚಾಗುವ ಹಣಕ್ಕೂ ಖೋಟಾ ನೋಟು ಮುದ್ರಣಕ್ಕೂ ಕೆಲವು ರೂಪಾಯಿಗಳ ವ್ಯತ್ಯಾಸ ಕಂಡು ಬಂದರೂ 500 ಕ್ಕಿಂತ 2000 ರೂಪಾಯಿಯ ನೋಟು ಮುದ್ರಿಸುವುದೇ ಲಾಭಕರ ಎನ್ನಿಸಿರಲೂಬಹುದು. 


ಇತ್ತೀಚಿನ 3 ವರ್ಷಗಳಲ್ಲಿ 2000 ರೂಪಾಯಿಯ ಒಂದು ನೋಟು ಸಹಾ ಮುದ್ರಣವಾಗದೇ ಇರಬಹುದು. ಆದರೆ, ಈಗಾಗಲೇ ಮುದ್ರಣವಾದ ನೋಟುಗಳು ಏನಾದವು ? 


ಇದಕ್ಕೆ ಇನ್ನೂ ಎಲ್ಲಿಯೂ ಸರಿಯಾದ ಉತ್ತರ ದೊರೆತಿಲ್ಲ.ಇನ್ನೂ ಈ ಕುರಿತು ಸರಳವಾಗಿ ಹೇಳಬೇಕು ಎಂದರೆ.. ನೀವು ಕಳೆದ ಮೂರು ವರ್ಷದಿಂದ ಯಾವುದೇ ಬಟ್ಟೆ ಕೊಂಡಿಲ್ಲ ಎಂದರೆ ನಿಮ್ಮ ಬಳಿ ಇರುವ ಬಟ್ಟೆಗಳು ಕಡಿಮೆ ಸಂಖ್ಯೆಯಲ್ಲಿವೆ ಎಂದಲ್ಲ. ಹಾಗೆ, ನಿಮ್ಮ ಬಳಿ ಈಗಾಗಲೇ ಇರುವ ಬಟ್ಟೆಗಳು ಒಂದೋ ಹರಿದಿರಬೇಕು ಇಲ್ಲವೇ ಬಳಸಲಾಗಷ್ಟು ಹಾಳಾಗಿ ಎಸೆದಿರಬೇಕು. ಇಲ್ಲವೇ, ನಿಮ್ಮ ವಾರ್ಡ್ ರೋಬ್ ನಿಂದ ಆ ಬಟ್ಟೆಗಳು ಮಾಯವಾಗಿರಬೇಕು. ಅಲ್ಲವೇ ? ಹಾಗಾದಾಗ ಮಾತ್ರವೇ ನೀವು ತೊಡುವ ಬಟ್ಟೆಗಳು ಕಡಿಮೆಯಾಗಿವೆ ಎಂದು ಪರಿಗಣಿಸಬಹುದು.


2000 ರೂಪಾಯಿ ನೋಟುಗಳ ವಿಚಾರಕ್ಕೆ ಬಂದಾಗಲೂ ಹೀಗೆಯೇ ಏನಾದರೊಂದು ಆಗಿರಬೇಕು. ಒಂದೋ ಬ್ಯಾಂಕ್ ಈ ನೋಟುಗಳನ್ನು ಮತ್ತೆ ಹಂತ ಹಂತವಾಗಿ ಹಿಂಪಡೆಯುತ್ತಿರಬಹುದು. ಇಲ್ಲವೇ, ಕಪ್ಪು ಹಣದ ರೂಪದಲ್ಲಿ ಎಲ್ಲೋ ಶೇಖರಣೆಯಾಗುತ್ತಿರಬೇಕು. ಅಲ್ಲವಾ..?? 


ಒಂದು ಬಾರಿ ಮುದ್ರಿಸಿದ ನೋಟುಗಳನ್ನು ಹಿಂಪಡೆದ ಇತಿಹಾಸವಿದೆಯೇ ಎಂದು ಗಮನಿಸುವುದಾದರೆ.. ಆಗಿನ ಕಾಲದಲ್ಲಿ ಚಲಾವಣೆಯಲ್ಲಿದ್ದ 500, 1000 ಮತ್ತು 10000 ರೂಪಾಯಿ ನೋಟುಗಳನ್ನು ಜನವರಿ 1946 ರಲ್ಲಿ ಅಮಾನ್ಯಗೊಳಿಸಿ. ಹೆಚ್ಚಿನ ಮುಖಬೆಲೆಯ 1000, 5000 ಮತ್ತು 10000 ರೂಪಾಯಿ ನೋಟುಗಳನ್ನು 1954 ರಲ್ಲಿ ಪುನಃ ಪರಿಚಯಿಸಲಾಯಿತು ಮತ್ತು ಈ ಬ್ಯಾಂಕ್‌ನೋಟುಗಳು ಅಂದರೆ 1000, 5000 ಮತ್ತು ₹10000 ರೂಪಾಯಿಗಳನ್ನು ಜನವರಿ 1978 ರಲ್ಲಿ ಮತ್ತೊಮ್ಮೆ ಡಿ-ಮಾನಿಟೈಜ್ ಮಾಡಲಾಯಿತು. 


ನಮ್ಮ ದೇಶವನ್ನು ಹೊರತುಪಡಿಸಿದರೆ 2018 ರಲ್ಲಿ ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ 500 ಯೂರೋಗಳನ್ನು ಹಿಂಪಡೆದಿತ್ತು. 2010 ರಲ್ಲಿ ಸಿಂಗಾಪುರ ಕೂಡಾ 10000 ಸಿಂಗಾಪುರ ಡಾಲರ್ ಗಳನ್ನು ಹಿಂಪಡೆದಿತ್ತು.


ಒಮ್ಮೆಗೆ ಹೀಗೆ ಮುದ್ರಿಸಿದ ನೋಟುಗಳನ್ನು ಒಮ್ಮೆಗೆ ಹಿಂಪಡೆಯುವುದನ್ನು ಹೊರತುಪಡಿಸಿದರೆ ನಮ್ಮ ದೇಶದಲ್ಲಿ 2005 ರಿಂದ ಹಿಂದೆ ಮುದ್ರಿತವಾಗಿದ್ದ ನೋಟುಗಳನ್ನು ಹಂತ ಹಂತವಾಗಿ ಬ್ಯಾಂಕ್ ಗೆ ಬಂದಾಗಲೆಲ್ಲಾ ಹಿಂಪಡೆದು ಅವುಗಳನ್ನು ಮರು ಚಲಾವಣೆಗೆ ನೀಡಲಾಗುತ್ತಿಲ್ಲ. ಇದಕ್ಕೆ ಕಾರಣ, ಇವುಗಳನ್ನು ಸುಲಭವಾಗಿ ನಕಲಿಸಬಹುದು ಎಂಬುದು ಇದರ ಕಾರಣ. ಇದು ಬ್ಯಾಂಕ್ ಗಳೇ ನೀಡಿರುವ ಅಧಿಕೃತ ಮಾಹಿತಿ. 2000 ರೂಪಾಯಿ ನೋಟುಗಳ ವಿಚಾರದಲ್ಲಿಯೂ ಹೀಗೆಯೇ ಆಗಿರಬಹುದಾ ಎಂದು ಈಗಾಗಲೇ  ರೈಟ್ ಟು ಇನ್ಫರ್ಮೇಶನ್ ಅಡಿಯಲ್ಲಿ ಮನೋರಂಜನ್ ಎಸ್. ರಾಯ್ ಎನ್ನುವವರು ಪ್ರಶ್ನಿಸಿದ್ದಾರೆ. ಇದಕ್ಕೆ ದೊರೆತಿರುವ ಉತ್ತರದ ಪ್ರಕಾರ "ಸಾಯಿಲ್ಡ್ ಅಥವಾ ಮ್ಯುಟಿಲೇಟೆಡ್" ಆಗಿರುವ 2000 ರೂಪಾಯಿ ನೋಟುಗಳನ್ನು ಮಾತ್ರ ಹಿಂಪಡೆಯಲಾಗಿದೆ ಎನ್ನುತ್ತಿದ್ದಾರೆ. ಸಾಯಿಲ್ಡ್ ನೋಟುಗಳು ಎಂದರೆ ಹರಿದು ಜೋಡಿಸಿರುವ, ಕಣ್ಣೀರಿನಿಂದ ಹಾಳಾಗಿರುವ ಅಥವಾ ಹರಿದು ಜೋಡಿಸಿದಂತೆ ಕಾಣುವ ಹಾಳಾಗಿರುವ ನೋಟುಗಳು. ಮ್ಯುಟಿಲೇಟೆಡ್ ನೋಟುಗಳು ಎಂದರೆ ಆ ನೋಟಿನಲ್ಲಿ ಒಂದು ಭಾಗ ಹರಿದು ಹೋಗಿದ್ದರೆ ಅಥವಾ ಸ್ವಲ್ಪ ಕಾಣೆಯಾದಂತೆ ಕಾಣುವ ಭಾಗ. ಇಂತಹಾ ನೋಟುಗಳನ್ನು ಮಾತ್ರ ಹಿಂಪಡೆದು ಬೇರೆ ನೋಟುಗಳನ್ನು ರಿಪ್ಲೇಸ್ ಮಾಡಲಾಗಿದೆ ಎನ್ನುತ್ತಿದ್ದಾರೆ. 


ಡಿ- ಮಾನಿಟೈಸೇಷನ್ ಮಾಡಲು ನೀಡಿದ ಕಾರಣವೆಂದರೆ ಹೆಚ್ಚಾಗಿ ಸಂಗ್ರಹಿಸಿದ ಹಣ ಕಪ್ಪು ಹಣದ ರೂಪದಲ್ಲಿ ಸೇರ್ಪಡೆಯಾಗಿದೆ. ಅದನ್ನು ಸರಿಪಡಿಸಲು ಎಂಬುದಾಗಿ. ಆದರೆ, ಈಗ 2000 ರೂಪಾಯಿಗಳನ್ನು ಕೂಡಾ ಹೀಗೆಯೇ ಸಂಗ್ರಹಿಸಲಾಗಿದೆ ಎನ್ನುತ್ತಿದ್ದಾರೆ. 1000 ರೂಪಾಯಿ ಅಥವಾ 500 ರೂಪಾಯಿಯನ್ನು ಕೂಡಿಡುವುದಕ್ಕಿಂತ 2000 ರೂಪಾಯಿಗಳನ್ನು ಕೂಡಿಡುವುದೇ ಸುಲಭ ಎಂದಾಗಿರಬಹುದೇ ? ಕಡಿಮೆ ಜಾಗದಲ್ಲಿ ಹೆಚ್ಚಿನ ಮೊತ್ತ ಪೇರಿಸಿಡುತ್ತಿರಬಹುದೇ ? ಹೀಗೆ ಸಂಗ್ರಹವಾದ ಮೊತ್ತದಿಂದ ಡ್ರಗ್ ಟ್ರಾಫಿಕಿಂಗ್, ಭಯೋತ್ಪಾದಕರಿಗೆ ಫಂಡಿಂಗ್ ಹಾಗೂ ತೆರಿಗೆ ಕಳ್ಳತನ ನಡೆಯುತ್ತಿವೆ ಎಂಬ ಪುಕಾರುಗಳೂ ಇವೆ. 


ಈ 2000 ರೂಪಾಯಿಗಳ ನೋಟುಗಳ ಚಲಾವಣೆ ಡಿಜಿಟಲ್ ಟ್ರ್ಯಾನ್ಶ್ಯಾಕ್ಶನ್ ಕಾರಣಕ್ಕೆ ಕಾಣೆಯಾಗುತ್ತಿವೆ ಎನ್ನುತ್ತಿದೆ ಕೇಂದ್ರ ಸರ್ಕಾರ. ಇದು ನಿಜವೇ ಆಗಿದ್ದಲ್ಲಿ ಎಲ್ಲಾ ನೋಟುಗಳ ಚಲಾವಣೆಯೂ ಕಡಿಮೆ ಆಗಬೇಕಿತ್ತು. ಅಲ್ಲವಾ ? ಆದರೆ, ನಾವು ಗಮನಿಸಬೇಕಾದ ಮತ್ತೊಂದು ಮುಖ್ಯವಾದ ಅಂಶವೂ ಇದೆ. ಈಗ ಚಲಾವಣೆಯಾಗುತ್ತಿರುವ ಹಣದಲ್ಲಿ ಪ್ರತಿ ಮೂರು ಚಲಾವಣೆಯಲ್ಲಿ ಒಂದು 500 ರೂಪಾಯಿಯ ನೋಟು ಇರುತ್ತದೆ. 500 ರೂಪಾಯಿಯ ಚಲಾವಣೆಯಲ್ಲಿ ಈಗ 64.8 % ರಷ್ಟು ಹೆಚ್ಚಾಗಿದೆ. ಪ್ರತಿ ವರ್ಷ ಇಂತಿಷ್ಟು ಬೆಲೆಯ ಇಂತಿಷ್ಟು ನೋಟು ಮುದ್ರಣವಾಗಬೇಕಾದರೆ ಅದರ ನಿರ್ಧಾರವನ್ನು ಭಾರತ ಸರ್ಕಾರ ಮತ್ತು ಆರ್.ಬಿ.ಐ ಇಬ್ಬರೂ ಜಂಟಿಯಾಗಿ ನಿರ್ಧರಿಸಬೇಕಾಗುತ್ತದೆ. ಇತ್ತೀಚಿನ ನೋಟು ಮುದ್ರಣದ ಅಂಕಿ- ಅಂಶಗಳನ್ನು ಗಮನಿಸಿದರೆ ಹೇಗೆ 2000 ರೂಪಾಯಿಯ ನೋಟುಗಳು ಮುದ್ರಣವಾಗಿಲ್ಲವೋ ಹಾಗೆಯೇ 200 ಮತ್ತು 500 ರೂಪಾಯಿಯ ನೋಟುಗಳ ಮುದ್ರಣದ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇದು ರಿ - ಮಾನಿಟೈಸೇಷನ್ ಸಂಕೇತವಾ ? ಅಥವಾ ಕ್ರಮೇಣ ಕಡಿಮೆ ಮುಖಬೆಲೆಯ ನೋಟುಗಳು ಮಾತ್ರ ಚಲಾವಣೆಯಲ್ಲಿರಬಹುದಾ ?? 


ಈಗ ಅಮೆರಿಕಾದಲ್ಲಿ 100 ಯು.ಎಸ್.ಡಿ, ಚೀನಾದಲ್ಲಿ 100 ಯುಹಾನ್, ಕೆನಡಾದಲ್ಲಿ 100 ಕೆನಡಿಯನ್ ಡಾಲರ್, ಯುರೋಪಿಯನ್ ಯೂನಿಯನ್ ನಲ್ಲಿ 200 ಯುರೋ ಗಳೇ ಅಲ್ಲಿನ ಅತಿ ಹೆಚ್ಚು ಮುಖಬೆಲೆಯ ಹಣಗಳು. ನಮ್ಮ ದೇಶವೂ ಇದೇ ಹಾದಿ ಹಿಡಿಯಬಹುದಾ..?? ಡಿಜಿಟಲ್ ಟ್ರಾನ್ಸ್ಯಾಕ್ಷನ್ ಜೊತೆಗೆ ಈಗ ಡಿಜಿಟಲ್ ರುಪೀ ಕೂಡಾ ಜೊತೆಯಾಗಿದೆ. 2000 ರೂಪಾಯಿ ನೋಟು ಸಂಪೂರ್ಣ ಕಾಣೆಯಾದರೂ ಅಚ್ಚರಿಯೇನಿಲ್ಲ.


ಅಲ್ಲದೇ, 2023 ರಿಂದ 2000 ರೂಪಾಯಿಯ ನೋಟಿನ ಜೊತೆಗೆ 1000 ರೂಪಾಯಿಯ ನೋಟುಗಳು ಮರು ಮುದ್ರಣಗೊಂಡು ಚಲಾವಣೆಗೆ ಬರಲಿವೆ ಎಂಬ ಸುದ್ದಿ ಹಾಗೂ ವಿಡಿಯೋ ಹರಿದಾಡುತ್ತಿದ್ದು ಇದು ಸಂಪೂರ್ಣ ಸುಳ್ಳು ಎಂದು ಫ್ಯಾಕ್ಟ್ ಚೆಕ್ ಸ್ಪಷ್ಟ ಪಡಿಸಿದೆ. 2000 ರೂಪಾಯಿಯ ನೋಟು ಬಂದಾಗ ಇದರಿಂದ ಚಿಲ್ಲರೆ ಪಡೆಯಲು ತೊಂದರೆ ಪಡೆಯಲು ತೊಂದರೆ ಎಂದು ಹೇಳಿದ್ದರೆ, ಈಗ ಕಾಣೆಯಾಗುತ್ತಿರುವ ಸಂಧರ್ಭದಲ್ಲಿ ನೋಟು ಸಂಗ್ರಹಣೆಗೆ ಸುಲಭ ಎನ್ನುತ್ತಿದ್ದಾರೆ. ಒಟ್ಟಾರೆ 2000 ರೂಪಾಯಿ ನೋಟು ಅಂದಿನಿಂದ ಇಂದಿನವರೆಗೂ ಒಂದಲ್ಲಾ ಒಂದು ಸುದ್ದಿಯಲ್ಲಿದೆ. ಇದೀಗ, 2000 ರೂಪಾಯಿ ನೋಟು ಏನಾಗಿರಬಹುದು, ಏನಾಗುತ್ತಿರಬಹುದು ಎಂಬುದನ್ನು ಸಿಕ್ಕ ಮತ್ತು ಸಿಗದ ಉತ್ತರಗಳ ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಒಪ್ಪಬೇಕಿದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ