ಪುಸ್ತಕದ ಶೀರ್ಷಿಕೆ : ಸುರಕ್ಷಿತೆ
ಲೇಖಕರು : ಮಾಲತಿ ರಾಮಕೃಷ್ಣಭಟ್
ಪ್ರಕಾಶಕರು : ವಾಣಿ ಪ್ರಕಾಶನ
ಪ್ರಥಮ ಮುದ್ರಣ : 2014
ಪುಟಗಳು : 88
ಬೆಲೆ : 70 ರೂ.
ಸುತ್ತಮುತ್ತಲಿನವರ ನೋಟದಿಂದಲೇ ಅಥವಾ ಇರುವಿಕೆ, ತೋರುವ ಭಾವಗಳಿಂದಲೇ ಅವರ ಒಳ್ಳೆಯ ಅಥವಾ ಕೆಟ್ಟ ಭಾವಗಳನ್ನು ಅಳೆಯುವುದು ಕೇವಲ ಸೂಕ್ಷ್ಮ ನೋಟ ಅಥವಾ ಗಮನಿಸುವಿಕೆಗೆ ಮಾತ್ರ ದಕ್ಕುವಂತಹದ್ದು. ಹೆಣ್ಣಿಗೆ ಈ ಸೂಕ್ಷ್ಮ ಅವಲೋಕನ ಪ್ರಕೃತಿದತ್ತ ವರವೇನೋ ಎಂದು ಕೆಲವೊಮ್ಮೆ ಅನ್ನಿಸುತ್ತದೆ. ಸುತ್ತಲಿನವರ ಕೆಟ್ಟ ಆಲೋಚನೆಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅವಳು ಯಾವ ದಾರಿ ಹಿಡಿಯುತ್ತಾಳೆ ಎಂಬುದೂ ಮುಖ್ಯವಾಗುತ್ತದೆ. ತಾನು ಸುರಕ್ಷಿತೆ ಎಂಬ ಭಾವ ಮೂಡುವುದು ಸುತ್ತಲೂ ತನ್ನ ಹಿತೈಷಿಗಳು ತುಂಬಿದ್ದಾಗ. ಆದರೆ, ಹಿತಶತ್ರುಗಳ ರೂಪದಲ್ಲಿ ಕೆಲವರು ಈ ಸುರಕ್ಷಿತ ಭಾವಕ್ಕೆ ನೆಮ್ಮದಿ ಇಲ್ಲದಂತೆ ಮಾಡುತ್ತಾ ಮನಸ್ಸನ್ನು ಕದಡುತ್ತಾರೆ. ಅಂತಹಾ ಒಂದು ಕೌಟುಂಬಿಕ ಚಿತ್ರಣದೊಂದಿಗೆ ಸಾಗುವ ಸಾಮಾಜಿಕ ಕಾದಂಬರಿ ಮಾಲತಿ ರಾಮಕೃಷ್ಣಭಟ್ ಅವರ ಸುರಕ್ಷಿತೆ.
ಮದುವೆ ಎನ್ನುವುದು ಪ್ರತಿಯೊಬ್ಬ ಹೆಣ್ಣಿನ ಸುಂದರ ಕನಸು. ತನ್ನ ಸಂಗಾತಿಯ ಕುರಿತು ಹಾಗೂ ಜೀವನದ ಉದ್ದಕ್ಕೂ ಸಹಬಾಳ್ವೆ ನಡೆಸುವ ದೀರ್ಘ ಕೌಟುಂಬಿಕ ಬದುಕಿನ ಕುರಿತು ಆಕೆ ಬಹಳಷ್ಟು ಕನಸು ಕಟ್ಟಿರುತ್ತಾಳೆ. ಆದರೆ, ಎಲ್ಲರ ಪಾಲಿಗೂ ಈ ಕನಸು ಸುಂದರ ಹಾದಿಯಾಗಿರುವುದಿಲ್ಲ. ಬದಲಾಗಿ ಅಲ್ಲಿ ಕಲ್ಲು-ಮುಳ್ಳುಗಳಿರುತ್ತವೆ. ಆದರೆ, ಮದುವೆ ಒಂದು ಸುಂದರ ಜೀವನದ ಕನಸಿನಂತೆ, ಅಷ್ಟೇ ಬೇಗ ಮುಗಿದೇ ಹೋಗುತ್ತದೆ ವಿನುತಾಳಿಗೆ.
ಅಪ್ಪ-ಅಮ್ಮನ ಮುದ್ದಿನ ಏಕೈಕ ಪುತ್ರಿಯಾಗಿದ್ದ ವಿನುತಾ ಅತ್ತೆಯ ಮನೆಯಲ್ಲಿ ಹೊಸ ಸೊಸೆಯಾಗಿ ಸಂಸಾರ ಪ್ರಾರಂಭಿಸಿದ ನಂತರ ಮಗಳಂತೆಯೇ ಆದರಿಸುತ್ತಿದ್ದರು. ಡಿಗ್ರಿ ಓದಿದ್ದ ವಿನುತಾಳಿಗೆ ತುಂಬು ಜೀವನೋತ್ಸಾಹ. ಅಲಂಕಾರಗಳಲ್ಲಿ ಹೆಚ್ಚು ಆಸಕ್ತಿ. ವಿನುತಾಳ ಶಿಸ್ತು, ಸ್ವಚ್ಛತೆಗಳಿಂದ ಮನೆ ಲಕಲಕಿಸುತ್ತಿತ್ತು. ಅದರ ಜೊತೆಗೆ ಹೂದೋಟದ ನಿರ್ವಹಣೆ ಹಾಗೂ ಲವಲವಿಕೆಯ ಓಡಾಟ.. ಹೀಗೆ ತನ್ನ ಚಟುವಟಿಕೆಗಳಿಂದ ಇಡೀ ಮನೆಗೆ ಜೀವಕಳೆ ತುಂಬುತ್ತಿದ್ದಳು. ಸ್ವಂತ ಮಗಳಂತೆ ಆದರಿಸುತ್ತಿದ್ದ ಅತ್ತೆ, ಮಿತರಭಾಷಿ ಮಾವ ಜೊತೆಗೆ ಅರ್ಥ ಮಾಡಿಕೊಳ್ಳುವ ಗಂಡ ದಿನೇಶ.
ಅಪ್ಪನಂತೆಯೇ ಮಿತಭಾಷಿಯಾಗಿದ್ದವನು ಸ್ವಲ್ಪ ಸಂಕೋಚ ಸ್ವಭಾವದವನೂ ಆಗಿದ್ದವನು ವಿನುತಾ ಆತನ ಬದುಕಿಗೆ ಅಡಿ ಇಟ್ಟ ನಂತರ ಕೊಂಚಕೊಂಚವೇ ಬದಲಾದ. ಆ ಬದಲಾವಣೆ ಎಲ್ಲರಿಗೂ ಮತ್ತಷ್ಟು ಹುರುಪು ತಂದಿತ್ತು. ಸಹಜ ಬದುಕಿನ ಜೀವಂತ ಲಹರಿಯಲ್ಲಿ ತೇಲುತ್ತಿದ್ದ ಆ ಸಂಸಾರ ನೌಕೆಯನ್ನು ಕಂಡು ಅಕ್ಕದವರೆಲ್ಲರೂ ಬಹಳ ಮೆಚ್ಚುಗೆ ಸೂಚಿಸುತ್ತಿದ್ದರು. ಪೇಟೆಯಲ್ಲಿನ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ ದಿನೇಶನದು ಸುಖೀ ಸಂಸಾರಕ್ಕೆ ಕುಂದಣವಿಟ್ಟಂತೆ ಪುಟ್ಟ ಮಗ ಆದಿತ್ಯನೂ ಬಂದಾಗಿತ್ತು .
ದಿನೇಶನ ಅಕ್ಕ ದೀಪಾಳಿಗೂ ಅಚ್ಚುಮೆಚ್ಚಿನ ನಾದಿನಿಯಾಗಿದ್ದಳು. ಹೀಗೆ ಸಾಗುತ್ತಿದ್ದ ಚಂದದ ಸಂಸಾರ ಹಳಿತಪ್ಪಿದ್ದು ಮೊದಲಿಗೆ ದಿನೇಶ ಹುಷಾರು ತಪ್ಪಿದಾಗ. ಹುಷಾರಿಲ್ಲದವನಿಗೆ ಚಿಕಿತ್ಸೆ ನೀಡಿದಾಗ ಚೇತರಿಸಿಕೊಂಡಂತಿದ್ದವನು ನಂತರ ಎಲ್ಲರನ್ನೂ ನಡು ನೀರಿನಲ್ಲಿ ಕೈ ಬಿಟ್ಟು ಹೊರಟಿದ್ದ. ಜೊತೆಗೆ ಆತನ ಅಪ್ಪನೂ ತೀರಿಕೊಂಡರು
ಅಪ್ಪ, ಅಮ್ಮ ಎಷ್ಟು ದಿನ ತಾನೇ ವಿನುತಾಳೊಡನೆ ಇರಲು ಸಾಧ್ಯ..?? ಈಗ, ಅತ್ತೆ ಸುಭದ್ರಮ್ಮನವರೊಂದಿಗೆ ಹಾಗೂ ಮಗ ಆದಿತ್ಯನೊಂದಿಗೆ ಅವಳ ಒಂಟಿ ಜೀವನ ಆ ಅಂಗಡಿಯನ್ನು ನೋಡಿಕೊಳ್ಳುವುದರ ಜೊತೆ ಜೊತೆಗೆ ಸಾಗುತ್ತಿತ್ತು. ಅಂಗಡಿಯ ಕೆಲಸವಿದ್ದರೂ ಮಗನ ಮೇಲೆ ಆದಷ್ಟು ಗಮನಹರಿಸುತ್ತಾ ಆತನನ್ನು ತಿದ್ದುತ್ತಿದ್ದಳು ವಿನುತಾ.
ದಿನೇಶ ತೀರಿಕೊಂಡ ನಂತರ ಒಂದು ದಿನ ಅಂಗಡಿಗೆ ಬಂದ ಆತನ ಗೆಳೆಯ ಸುಹಾಸ ತಾನೇ ಮುಂದಾಗಿ ಪರಿಚಯ ಮಾಡಿಕೊಂಡು ಆಕೆಯ ಕುರಿತು ಆಸಕ್ತಿ ತೋರುತ್ತಿದ್ದ. ತನ್ನ ಮಾತು ವರ್ತನೆಗಳಿಂದ ಆಕೆ ಸಹಕಾರ ನೀಡುತ್ತಿದ್ದಾನೇನೋ ಎನ್ನಿಸಿದರೂ ಇರುಸುಮುರಿಸಾಗುತ್ತಿತ್ತು ವಿನುತಾಳಿಗೆ. ಆತನಿಗೂ ಹೆಂಡತಿ, ಮಕ್ಕಳ ಸುಂದರ ಕುಟುಂಬವಿತ್ತು. ದಿನೇಶನ ತಾಯಿಗೆ ಹಾಗೂ ಅಕ್ಕನಿಗೂ ಪರಿಚಯವಾದ ನಂತರ ಒಡನಾಟ ಅವ್ಯಾಹತವಾಗಿ ಸಾಗಿತ್ತು. ಆದರೂ.. ಆತನಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುತ್ತಿದ್ದಳು ವಿನುತಾ.
ಸುಭದ್ರಮ್ಮನವರು ಎಷ್ಟೇ ಅಂತಃಕರಣ ತೋರಿದರೂ.. ವಿನುತಾ ಮರು ಮದುವೆಯಾದರೆ..! ಎನ್ನುವ ಭಾವವೇ ಅವರಲ್ಲೊಂದು ಅಸುರಕ್ಷತೆಯ ಭಾವ ಹುಟ್ಟಿಸುತ್ತಿತ್ತು. ವಿಧವೆಯಾದ ಹೆಣ್ಣು ಸಮಾಜದಲ್ಲಿ, ಚಿಕ್ಕ ವಯಸ್ಸಿನಲ್ಲಿ ವಿರಾಗಿಣಿಯಂತೆ ಜೀವನ ನಡೆಸುವುದು ಅಷ್ಟೊಂದು ಸುಲಭವಲ್ಲ. ಅವಳು ಎಷ್ಟೇ ಎಚ್ಚರಿಕೆಯಿಂದಿದ್ದರೂ.. ಆಕೆಯ ನಡವಳಿಕೆಯಲ್ಲಿ ಕೊಂಚ ಏರುಪೇರಾದರೂ.. ಅದಕ್ಕೆ ವಿಶೇಷವಾದ ಅರ್ಥವೇ ಬಂದು ರೆಕ್ಕೆ-ಪುಕ್ಕ ಹುಟ್ಟಿಕೊಳ್ಳುತ್ತದೆ.
ತೀರಾ ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ಹೆಣ್ಣುಮಕ್ಕಳ ಬದುಕು ಹೇಗಿರುತ್ತದೆ ಎಂಬುದರ ಚಿತ್ರಣ ಇಲ್ಲಿ ಕಾಣಸಿಗುತ್ತದೆ. ಆದರೆ, ಈ ಕಾದಂಬರಿಯಲ್ಲಿ ವಿನುತಾಳ ಪಾತ್ರ ಜೀವನ್ಮುಖಿಯ ಪಾತ್ರವಾಗಿದ್ದು.. ಅದು ಓದುವವರಲ್ಲಿಯೂ ಸ್ಪೂರ್ತಿ ತುಂಬುತ್ತದೆ. ಯಾರಿಲ್ಲದಿದ್ದರೂ ಬದುಕು ಸಾಗುತ್ತದೆ ಎಂಬುದು ಸತ್ಯವಾದರೂ.. ಆ ಬದುಕು ಸಾಗಿಸಲು ಅವಶ್ಯಕತೆ ಏನೆಂಬುದಕ್ಕೆ ಜೀವಂತ ಉದಾಹರಣೆಯಾಗಿ ನಿಲ್ಲುತ್ತಾಳೆ. ಬದುಕನ್ನು ಹೇಗೋ ಬದುಕದೆ ಜೀವಂತಿಕೆಯಿಂದ, ಶಿಸ್ತಾಗಿ ಬದುಕುವ ಆಕೆಯ ಛಲ ಇಷ್ಟವಾಯಿತು.
ದಿನೇಶ ಹಾಗೂ ಆತನ ತಂದೆಯ ಸಾವಿಗೆ ಕಾರಣವೇನು..?? ಸುಹಾಸ್ ವಿನುತಾಳ ಜೊತೆ ನಡೆದುಕೊಳ್ಳುತ್ತಿದ್ದ ರೀತಿ ಹೇಗಿತ್ತು..?? ಸುಹಾಸ್ ನಿಜಕ್ಕೂ ಆ ಮನೆಗೆ ಸಹಾಯ ಮಾಡುತ್ತಿದ್ದನೇ.. ಆತನ ನಿಷ್ಕಲ್ಮಶವಾದ ಮನಸ್ಸನ್ನು ವಿನುತಾ ತಪ್ಪಾಗಿ ಭಾವಿಸಿದ್ದಳೇ ಅಥವಾ ಸುಹಾಸನ ನಡವಳಿಕೆಯಲ್ಲಿ, ಆಲೋಚನೆಯಲ್ಲಿ ಏನಾದರೂ ತಪ್ಪು ಕಾಣಿಸಿತೇ..?? ಆಕೆ ತನಗೆ ತಾನೇ ಕಟ್ಟಿಕೊಂಡ ಸುರಕ್ಷಾ ಕವಚ ಹೇಗಿತ್ತು..?? ಅದನ್ನು ಮೀರಿ ಯಾರಾದರೂ ಆಕೆಯ ಬಳಿ ಬಂದರೇ..?? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಈ ಕಾದಂಬರಿಯನ್ನು.
ದಿನೇಶ ತೀರಿಕೊಂಡ ನಂತರದ ವಿನುತಾಳ ಬದುಕಿನ ಚಿತ್ರಣದಿಂದ ಕಾದಂಬರಿ ಶುರುವಾದರೂ.. ಅಲ್ಲಲ್ಲಿ ನೆನಪುಗಳ ಮೂಲಕ ಆಕೆಯ ಜೀವನವನ್ನು ಕಟ್ಟಿ ಕೊಡುವುದು ಏಕತಾನತೆಯನ್ನು ಸೃಷ್ಟಿಸದೇ, ಎರಡೂ ಸಂದರ್ಭಗಳ ವಿಭಿನ್ನ ಚಿತ್ರಣವನ್ನು ನಮ್ಮ ಮುಂದಿಡುತ್ತದೆ. ಸರಾಗವಾಗಿ ಓದಿಸಿಕೊಂಡು ಹೋಗುವ ಚೆಂದದ ಕಾದಂಬರಿಯ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ