ಪುಸ್ತಕದ ಶೀರ್ಷಿಕೆ : ಇಮ್ಮಡಿ ಮಡಿಲು
ಲೇಖಕರು : ಡಾ. ಕೆ. ಎನ್. ಗಣೇಶಯ್ಯ
ಪ್ರಕಾಶಕರು : ಅಂಕಿತ ಪುಸ್ತಕ
ಪ್ರಥಮ ಮುದ್ರಣ : 2024
ಪುಟಗಳು : 152
ಬೆಲೆ : 195 ರೂ.
ಡಾ| ಕೆ. ಎನ್ ಗಣೇಶಯ್ಯನವರ ಪುಸ್ತಕಗಳು ವಿಭಿನ್ನ ಹಾಗೂ ಚರಿತ್ರೆಯ ಓದಿನಲ್ಲಿ ಹೆಚ್ಚಿನ ಆಸಕ್ತಿ ಹುಟ್ಟಿಸುತ್ತವೆ. ಅವರ ಇತ್ತೀಚಿನ ಕಥಾಸಂಕಲನ 'ಇಮ್ಮಡಿ ಮಡಿಲು' ಕಥಾ ಸಂಕಲನದಲ್ಲಿ ಇರುವುದು ಮೂರು ಕಥೆಗಳೇ ಆದರೂ.. ಇದರಲ್ಲಿ ವಿಭಿನ್ನವಾದ ಕಥೆಗಳು ಸಿಗುತ್ತಾ ಹೋಗುತ್ತವೆ. ಇಮ್ಮಡಿ ಮಡಿಲು, ಮಸಾದ ಹಾಗೂ ಪರ್ಯಾಯ ಈ ಮೂರು ಕಥೆಗಳೂ ಇಷ್ಟವಾದವು. ನನಗೆ ಇದರಲ್ಲಿ 'ಪರ್ಯಾಯ' ಬಹಳವಾಗಿ ಸೆಳೆದ ಕಥೆ.
ಇಮ್ಮಡಿ ಮಡಿಲು :
ಸಾಧುಗೆ ಸಾಧು ಮಾಧುರ್ಯನ್ಗೆ ಮಾಧುರ್ಯಂ ಬಾಧಿಪ್ಪ ಕಲಿಗೆ |
ಕಲಿಯುಗವಿಪರೀತನ್ ಮಾಧವನ್ ಈತನ್ ಪೆರನಲ್ಲ ||
ಇದು ನಮಗೆ ಪ್ರೌಢಶಾಲಾ ಕನ್ನಡ ಪಠ್ಯದಲ್ಲಿ ಓದಿದ್ದ ಸಾಲುಗಳು. ಕಪ್ಪೆ ಅರಭಟ್ಟನ ಶಾಸನದ ಕುರಿತು ಸಹಾ ಪಠ್ಯದಲ್ಲಿತ್ತು. ಆಗ ಇಷ್ಟು ಆಲೋಚಿಸುವ ಶಕ್ತಿಯೂ ಇರಲಿಲ್ಲ.. ಅಲ್ಲದೆ, ಈಗ ಗೂಗಲ್ ಮಾಡುವಂತೆ ಗೂಗಲ್ ಮಾಡಿ ಉಳಿದ ಮಾಹಿತಿಯನ್ನು ತಿಳಿದುಕೊಂಡಿರಲಿಲ್ಲ. ಆದರೆ, ಕಪ್ಪೆ ಅರಭಟ್ಟನ ಶಾಸನದ ಈ ಸಾಲುಗಳನ್ನು ಬಹಳ ಚೆನ್ನಾಗಿ ವಿವರಿಸಿದ್ದರಿಂದ ಇನ್ನೂ ಅದು ಮರೆಯಲಾರದಂತೆ ಉಳಿದಿದೆ.
ಕಪ್ಪೆ ಅರಭಟ್ಟನ ಶಾಸನದಲ್ಲಿ ಇರುವ ಆ ವೀರ ಯೋಧ ಯಾರು ಎಂಬ ಖಚಿತತೆ ಇಲ್ಲದ್ದು, ಕಪ್ಪೆ ಅರಭಟ್ಟನೆಂದರೆ ಯಾರು ಎನ್ನುವ ಪ್ರಶ್ನೆ ಹಾಗೂ ಪುಲಕೇಶಿಯ ಸಾವಿನ ಕುರಿತ ಅಸ್ಪಷ್ಟತೆಯ ಉಲ್ಲೇಖ ಬೇರೆಯದ್ದೇ ಕತೆಯನ್ನು ತೆರೆದಿಡುತ್ತದೆ.
ಕಪ್ಪೆ ಅರಭಟ್ಟನ ಶಾಸನದಿಂದ ಶುರುವಾಗುವ ಈ ಕಥೆಗೆ ತಮಿಳುನಾಡಿನ ತಿರುಚಂಕಟ್ಟಂಕುಡಿಯಲ್ಲಿ ಇರುವ ಗಣೇಶನಿಗೂ.. ಚಾಲುಕ್ಯರ ರಾಜಧಾನಿಯಾದ ಬಾದಾಮಿಗೂ ಇದ್ದ ಚಾರಿತ್ರಿಕ ಸಂಬಂಧವೊಂದರ ಕುರಿತಾಗಿ ತಿಳಿದು ಬರುತ್ತದೆ. ಹಾಗಾದರೆ, ಇದು ಪಲ್ಲವರು ಹಾಗೂ ಚಾಲುಕ್ಯರ ನಡುವಿನ ಯುದ್ಧದ ಸಂದರ್ಭವಿರಬಹುದು ಎಂದುಕೊಂಡರೆ.. ಅದು ಕೇವಲ ಯುದ್ಧವಾಗಿರಲಿಲ್ಲ. ಪಲ್ಲವರ ಸೈನ್ಯದ ಪ್ರಮುಖ ದಂಡಾಧಿಕಾರಿಯಾಗಿದ್ದ ಪರಂಜ್ಯೋತಿಗೂ.. ಆ ಗಣೇಶನ ವಿಗ್ರಹಕ್ಕೂ ಹಾಗೂ ಆತ ಸನ್ಯಾಸತ್ವ ತೆಗೆದುಕೊಂಡದ್ದಕ್ಕೂ ಪರಸ್ಪರ ಕೊಂಡಿಯೊಂದಿದೆ.
ಸಂಗೀತದ ಕುರಿತು ಆಸಕ್ತರಾಗಿದ್ದರೆ 'ವಾತಾಪಿ ಗಣಪತಿ' ಕೀರ್ತನೆಯನ್ನು ಕೇಳಿಯೇ ಇರುತ್ತೀರಿ. ಮುತ್ತುಸ್ವಾಮಿ ದೀಕ್ಷಿತರ ಈ ಕೀರ್ತನೆಗೂ ಆ ಬಾದಾಮಿಯ ಗಣಪತಿಗೂ.. ತಿರುಚಂಕಟ್ಟಂಕುಡಿಯ ಗಣೇಶನ ವಿಗ್ರಹಕ್ಕೂ ಇರುವ ಕೊಂಡಿಯ ಪದರಗಳು ಒಂದೊಂದಾಗಿ ತೆರೆದುಕೊಳ್ಳುತ್ತಾ ಹೋಗುತ್ತವೆ. ಅಷ್ಟಕ್ಕೂ ಇಲ್ಲಿ ಪಲ್ಲವರ ರಾಜನಿಗಿಂತ ದಂಢಾಧಿಕಾರಿಯ ಪಾತ್ರವೇ ಹೆಚ್ಚೇಕೆ ಎನ್ನುವ ಪ್ರಶ್ನೆ ಹುಟ್ಟಿತೇ..?? ಉತ್ತರ ತಿಳಿಯಲು ಈ ಕತೆ ಓದಿ.
ಮಸಾದ :
ಇಸ್ರೇಲ್ ಇತ್ತೀಚೆಗೆ ಜಾಗತಿಕವಾಗಿ ಚಿರಪರಿಚಿತವಾಗಿರುವ ದೇಶದ ಹೆಸರು. ಲೇಖಕರು ಇಸ್ರೇಲಿನಲ್ಲಿ ಜೆರೋಸೆಲಂನ ಪವಿತ್ರ ಸ್ಥಳವಾದ 'ಪಶ್ಚಿಮ ಗೋಡೆ'ಗೆ ಭೇಟಿ ಕೊಟ್ಟಿದ್ದರು. ಅಲ್ಲಿನ ಯೆಹೂದಿಗಳು ಅತ್ಯಂತ ಪವಿತ್ರ ಎಂದು ಪರಿಗಣಿಸುವ ಒಂದು ಬೆಟ್ಟಕ್ಕೆ ಮಗಳು ಕರೆದುಕೊಂಡು ಹೋಗುತ್ತಾರೆ. ಆ ಬೆಟ್ಟದ ಹೆಸರು 'ಮಸಾದ'. ಅದು ಅಷ್ಟೇ ಆಗಿದ್ದರೆ.. ಅದು ಇಲ್ಲಿನ ಕಥೆ ಆಗುತ್ತಿರಲಿಲ್ಲವೇನೋ..!
ಮಸಾದ ಬೆಟ್ಟದ ಮೇಲೆ ನಡೆದ ಸಾಮೂಹಿಕ ಆತ್ಮಹತ್ಯೆಯನ್ನು ಕೇಳಿದಾಗ ಇಸ್ರೇಲಿನ ಪ್ರಜೆಗಳಲ್ಲಿ ಅದರಲ್ಲೂ ಸೈನಿಕರಲ್ಲಿ ಮತ್ತು ಯುವಜನತೆಯಲ್ಲಿ ರಾಷ್ಟ್ರೀಯತೆಯನ್ನು ಉದ್ದೀಪಿಸುತ್ತದೆ ಎಂದರೂ ತಪ್ಪಾಗಲಾರದು. ಆದರೆ, ಸಾಮೂಹಿಕ ಹತ್ಯೆಯ ಹಿನ್ನೆಲೆ ಕಂಡು ಬೆಚ್ಚುವಂತಾಗುವುದೂ ಹೌದು.
ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ನಡುವಿನ ಸಂಬಂಧವನ್ನು ಸುಗಮಗೊಳಿಸಿ ಅವರ ನಡುವೆ ಶಾಂತಿಯನ್ನು ನೆಲೆಯಾಗಿಸಲು ಪ್ರಯತ್ನಿಸುತ್ತಿದ್ದ ಅಮೆರಿಕಾದ ಅಧ್ಯಕ್ಷ ಟ್ರಂಪ್ ಈ ಸ್ಥಳಕ್ಕೂ ಭೇಟಿ ನೀಡಬೇಕಿತ್ತು. ಆದರೆ, ಇಸ್ರೇಲ್ ಸರ್ಕಾರ ಹಾಗೂ ಮಿಲಿಟರಿ ಅಧಿಕಾರಿಗಳು ಆತನನ್ನು ಅಲ್ಲಿಗೆ ಕರೆ ತರಲು ಹಿಂಜರಿಯುತ್ತಾರೆ. ಮಸಾದದ ಮೇಲೆ ಟ್ರಂಪ್ ಭಾಷಣ ಕೂಡಾ ಮಾಡಬೇಕಿತ್ತು, ಆದರೆ, ಅದಾವುದೂ ಆಗಲಿಲ್ಲ. ಮಸಾದದ ಹಿನ್ನೆಲೆಗೂ ಈ ಘಟನೆಗೂ ಇರುವ ಕೊಂಡಿ ಏನು..?? ತಿಳಿಯಲು ಓದಿ ಈ ಕಥೆ.
ಪರ್ಯಾಯ :
ಇದು ಅಕ್ಕಮಹಾದೇವಿಯ ಕುರಿತಾದ ಕಥೆಯಾದರೂ.. ಇದು ಕೇವಲ ಅಕ್ಕನ ಕಥೆಯಲ್ಲ. ಶಿವಮೊಗ್ಗದ ಉಡುತಡಿಯಿಂದ ಹೊರಟು, ಬಸವಣ್ಣನ ಕಲ್ಯಾಣ ಮುಂತಾದ ಸ್ಥಳಗಳನ್ನು ಸುತ್ತಿದ ಅಕ್ಕಮಹಾದೇವಿ ತನ್ನ ಮಾನಸ ಪತಿ ಚೆನ್ನಮಲ್ಲಿಕಾರ್ಜುನನ ದೇವಾಲಯವು ಶ್ರೀಶೈಲದಲ್ಲಿದೆ ಎಂಬ ಕಾರಣಕ್ಕಾಗಿ ಅಂತಿಮ ಪ್ರಯಾಣವನ್ನು ಅತ್ತ ಬೆಳೆಸಿದಳು ಎನ್ನುವುದು ಸಾಮಾನ್ಯವಾಗಿ ತಿಳಿದುಬರುವ ಚಾರಿತ್ರಿಕ ಚಿತ್ರಣ. ಆದರೆ, ವಿಶೇಷವೆಂದರೆ ಆಕೆ ದೇವಾಲಯದಲ್ಲಿಯೂ ಉಳಿಯದೆ ಅಲ್ಲಿನ ಗುಹೆಯೊಂದರಲ್ಲಿ ನೆಲೆಯಾಗಿ ಐಕ್ಯವಾದಳು ಎಂದು ನಂಬಲಾಗುತ್ತದೆ. ಎಲ್ಲವನ್ನೂ.. ಎಲ್ಲರನ್ನೂ.. ತೊರೆದು ಬಂದು ದಿಕ್ಕು-ದೆಸೆ ಇಲ್ಲದಂತೆ ಹೊರಟಾಕೆ ಎಲ್ಲ ಬಂಧಗಳಿಂದ ಮುಕ್ತಳಾದರೂ.. ಆಕೆಯ ಗಮ್ಯ ಇದಾಗಿತ್ತೇ..?? ಕಲ್ಯಾಣದಲ್ಲಿನ ರಾಜಕೀಯ ಸ್ಥಿತಿ ಹದಗೆಡುತ್ತಿದ್ದಂತೆ ಅಲ್ಲಮಪ್ರಭು ಕೂಡ ಶ್ರೀಶೈಲಕ್ಕೆ ಹೊರಟುಬಂದಿದ್ದರು. ಅವರ ಮನಸ್ಥಿತಿ ಏನಿತ್ತು..??
ಇಲ್ಲಿ ಲೇಖಕರು ಹೋದಾಗ ವೀಣಾ ಲಕ್ಕುಂಡಿ ಎನ್ನುವ ಸಂಶೋಧಕಿಯೊಬ್ಬರ ಪರಿಚಯವಾಗುತ್ತದೆ. ಆಗ ಅವರ ಸಂಶೋಧನೆಯ ವಿಚಾರ ಅಚ್ಚರಿಗೆ ದೂಡುತ್ತದೆ. ಕರ್ನಾಟಕದ ಅಕ್ಕಮಹಾದೇವಿಗೂ.. ಕಾಶ್ಮೀರದ ಲಲ್ಲೇಶ್ವರಿಗೂ ಇದ್ದ ಸಾಮ್ಯತೆಗಳೇನು..?? ಅಂತಹಾ ಅಪರೂಪವೆನ್ನಬಹುದಾದ ಸಾಮ್ಯತೆಗಳ ಹಿಂದೆ ಹೊರಟ ಆಕೆಗೆ ಸಿಕ್ಕ ಸತ್ಯವೇನು..?? ವೀಣಾರ ಬದುಕಿನ ಸಮಸ್ಯೆಯೊಂದಕ್ಕೆ ಅಕ್ಕಮಹಾದೇವಿಯ ಬದುಕಿನ ತಿರುವಿನಲ್ಲಿ ಸಿಕ್ಕ ಉತ್ತರ ಎಷ್ಟು ಸಮಂಜಸ..?? ಮನಸ್ಸಿನ ಸೋಲು-ಗೆಲುವುಗಳ ವಿಚಾರ, ಹಲವಾರು ಜಿಜ್ಞಾಸೆಗಳಿಂದ ಹಲವಾರು ಪ್ರಶ್ನೆಗಳನ್ನು ಹುಟ್ಟಿಸುತ್ತದೆ.
ಒಂದು ಪುಸ್ತಕವನ್ನು ಓದಿದಾಗ ಅದರಲ್ಲಿ ಉಲ್ಲೇಖವಾಗಿರುವ ಆಕರ ಅಥವಾ ಮಾಹಿತಿ, ಪುಸ್ತಕದ ಕುರಿತು ಓದಿ ಅದರ ಕುರಿತು ಆಸಕ್ತಿ ಉಂಟಾಗುವುದು ಅಪರೂಪ. ಹಾಗಾಗಿದ್ದು.. ಗಣೇಶಯ್ಯನವರ ಜಲ-ಜಾಲ ಓದಿದಾಗ. ಅವರದ್ದೇ ಕಥಾಸಂಕಲನವಾದ ಶಾಲಭಂಜಿಕೆಯ ಕುರಿತು ಆಸಕ್ತಿ ಮೂಡಿ ಓದಿದ್ದೆ. ಆದರೆ, ಇಲ್ಲಿ ಅದಕ್ಕಿಂತಲೂ ಹೆಚ್ಚಿನ ಆಸಕ್ತಿ ಮೂಡಿಸಿದ ಪುಸ್ತಕ 'ಡಾ. ಎಚ್.ಎಸ್ ಅನುಪಮ' ಅವರ 'ಬೆಳಗಿನೊಳಗು'.
ತಮ್ಮದಲ್ಲದ ಮತ್ತೊಂದು ಲೇಖಕರ ಪುಸ್ತಕದ ಕುರಿತು ಕುತೂಹಲ ಮೂಡಿಸಿರುವ ರೀತಿ ಅದನ್ನು ಆದಷ್ಟು ಬೇಗ ಕೊಂಡು ಓದಬೇಕೆಂಬ ಹಂಬಲ ಮೂಡಿಸಿದೆ. ಪರ್ಯಾಯ ಕತೆಯಲ್ಲಿ ಈ ಪುಸ್ತಕದ ಕುರಿತು ಇಷ್ಟು ಮೂಡಲು ಕಾರಣವೇನೆಂದು ತಿಳಿಯಲು ಕತೆ ಓದಿ.
ಲೇಖಕರು ತಮ್ಮ ಮಾತುಗಳಲ್ಲಿ "ಇಲ್ಲಿನ ಎಲ್ಲಾ ಕಥೆಗಳು ಹುಟ್ಟಲು ಕಾರಣ 'ಅಜ್ಞಾತದ ಆಕರ್ಷಣೆ' ಮತ್ತು ಚರಿತ್ರೆಯಲ್ಲಿನ ಬಿರುಕುಗಳು ಎನ್ನುತ್ತಾರೆ. ಆ ಬಿರುಕುಗಳನ್ನು ತುಂಬುವಲ್ಲಿ ನನಗೆ ಎಲ್ಲಿಲ್ಲದ ಖುಷಿ" ಎನ್ನುತ್ತಾರೆ. ಇಂತಹಾ ಅಜ್ಞಾತದ ಆಕರ್ಷಣೆಗೆ ಒಳಗಾಗಿಸುವ ಒಂದು ಚಂದದ ಕಥಾಸಂಕಲನದ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ