ರಜನೀಕಾಂತ್ ರ ಚಿಟ್ಟಿ ರೋಬೋ ನಿಮಗೆಲ್ಲರಿಗೂ ಪರಿಚಿತವಿದೆ ಅಲ್ಲವಾ ? ಅವರ ಎಂದಿರನ್ ಸಿನಿಮಾದ ರೋಬೋ ಚಿಟ್ಟಿಯನ್ನು ಕಂಡಾಗ ನಮಗೂ ಈ ರೀತಿಯ ರೋಬೋ ಅಸಿಸ್ಟೆಂಟ್ ಬೇಕು ಎನ್ನಿಸಿದೆ ತಾನೇ.. ಮನದ ಭಾವನೆಗಳನ್ನು ಅರಿತು ಕೆಲಸ ಮಾಡುವ ಹಾಗೂ ಒತ್ತಾಸೆಯಾಗಿ ನಿಲ್ಲುವ, ಪುಸ್ತಕಗಳನ್ನು ನಿಮಿಷಾರ್ಧದಲ್ಲಿಯೇ ಸ್ಕ್ಯಾನ್ ಮಾಡುವ, ಕಷ್ಟದಲ್ಲಿ ಧಾವಿಸುವ, ಸಹಾಯಕ್ಕೆ ನಿಲ್ಲುವ, ಮನೆ ಕೆಲಸವನ್ನೆಲ್ಲ ಮಾಡುವ, ಅಡುಗೆ - ತಿಂಡಿ ಕೆಲಸ ನಿರ್ವಹಿಸುವ ಹೀಗೆ ಒಂದೊಳ್ಳೆ ಜೊತೆ ನೀಡುವ ರೋಬೋ ಯಾರಿಗೆ ತಾನೇ ಬೇಡ ?? ರೋಬೋ ಎಂದರೆ ಹೀಗೂ ಇರುತ್ತದಾ ಎನ್ನುವ ಪರಿಕಲ್ಪನೆ ಒಂದು ಕಾಲದಲ್ಲಿ ನಾಟಕ, ಪುಸ್ತಕ, ಸಿನಿಮಾದಲ್ಲಿ ಮಾತ್ರವೇ ಕಾಣುತ್ತಿದ್ದು ಈಗ ಇದೆಲ್ಲವೂ ನಿಜವಾಗಿ ನಡೆಯುತ್ತಿರುವ ಕಾಲಘಟ್ಟದಲ್ಲಿ ಇದ್ದೇವೆ. ಇದೆಲ್ಲವನ್ನೂ ಸಾಧ್ಯವಾಗಿಸಿದೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್.
ಯಂತ್ರಮಾನವನಿಗೆ ರೋಬೋ ಅಥವಾ ರೋಬೋಟ್ ಗಳು ಹೇಗಾದರೂ ಹೇಳಬಹುದು. ಕೆಲವು ಇಂಗ್ಲೀಷ್ ಆಕ್ಸೆಂಟ್ ನಲ್ಲಿ ಇದರ ಕೊನೆಯ ಅಕ್ಷರ ಟಿ ಸೈಲೆಂಟ್ ಎಂದಾದರೆ ಮತ್ತೆ ಕೆಲವು ಆಕ್ಸೆಂಟ್ ಗಳಲ್ಲಿ ರೋಬೋಟ್ ಎನ್ನುತ್ತೇವೆ. ಇವುಗಳನ್ನು ಜನರಲ್ ಆಗಿ ಬಾಟ್ ಎಂದು ಕೂಡಾ ಕರೆಯುವುದರಿಂದ ಎರಡೂ ಶಬ್ಧಗಳನ್ನು ಬಳಸುತ್ತೇವೆ. ಅಷ್ಟಕ್ಕೂ ಈ ರೋಬೋಟ್ ಎಂಬ ಹೆಸರು ಹುಟ್ಟಿದ್ದಾದರೂ ಹೇಗೆ ಗೊತ್ತೇ ? ಟೆಕ್ನಾಲಜಿ ಸಂಶೋಧನೆಯಾಗುವಾಗ ಅಲ್ಲ. ಒಂದು ನಾಟಕಕ್ಕೆ ಪಾತ್ರದ ಹೆಸರು ಕೊಡುತ್ತಿರುವಾಗ.
ಅಷ್ಟಕ್ಕೂ ಈ ಹೆಸರುಗಳ ಹಿಂದಿನ ಕತೆ ತಿಳಿಸುವವರು ಯಾರು ಎಂಬ ಸಂದೇಹವಿದೆಯಾ ? ಇದಕ್ಕೆಂದೇ ಎಟಿಮಾಲಜಿ ಎಂಬ ವಿಭಾಗವಿದೆ. ಆಕ್ಸ್ಫರ್ಡ್ ಶಿಕ್ಷನರಿಯ ಪದಗಳ ಹಿಂದಿನ ಕತೆ ಇಲ್ಲಿ ಸಿಗುತ್ತದೆ. ಈ ರೋಬೋಟ್ ಅನ್ನು ಆಕ್ಸ್ಫರ್ಡ್ ಶಿಕ್ಷನರಿಗೆ ಸೇರಿಸಲು ಪತ್ರ ಬರೆದದ್ದು ಕಾರೆಲ್ ಕ್ಯಾಪೆಕ್. 1920 ರಲ್ಲಿ ಈತ ಜೆಕ್ ಭಾಷೆಯಲ್ಲಿ ನಾಟಕವೊಂದನ್ನು ರೂಪಿಸಿದಾಗ ಅಲ್ಲಿದ್ದ ಫಿಕ್ಷನಲ್ ಕ್ಯಾರೆಕ್ಟರ್ ಒಂದಕ್ಕೆ ಹೆಸರು ಬೇಕಿತ್ತು. ಆ ನಾಟಕ ಶುರುವಾಗುತ್ತಿದ್ದದ್ದು ಫ್ಯಾಕ್ಟರಿ ಒಂದರಲ್ಲಿ. ಅಲ್ಲಿ ಪ್ರೋಟೋಪ್ಲಾಸಂ ಎಂಬ ಕೆಮಿಕಲ್ ಅನ್ನು ಬಳಸಿ ಮನುಷ್ಯರಂತೆಯೇ ಕಾಣುವವರನ್ನು ತಮ್ಮ ಕೆಲಸಗಳಿಗೆ ಬಳಸಿಕೊಳ್ಳಲು ರೂಪಿಸುತ್ತಿರುತ್ತಾರೆ. ಈ ಕ್ಯಾರೆಕ್ಟರ್ ಗಳೇ ರೋಬೋ ಗಳು. ಇವುಗಳಿಗೆ ಈ ಹೆಸರು ನೀಡಿದ್ದು ಚಿತ್ರಕಾರ ಮತ್ತು ಬರಹಗಾರನೂ ಆಗಿದ್ದ ಕಾರೆಲ್ ಕ್ಯಾಪೆಕ್ ನ ಸಹೋದರ ಜೋಸೆಫ್ ಕ್ಯಾಪೆಕ್. ಇದರ ಅರ್ಥ ಗ್ರೀಕ್ ಭಾಷೆಯಲ್ಲಿ ಗುಲಾಮ ಎಂದು. ಈ ನಾಟಕ ಮೊದಲಿಗೆ ಜೆಕೊಸ್ಲೋವಿಯಾದಲ್ಲಿ 1921 ರಲ್ಲಿ ತೆರೆ ಕಂಡರೆ 1922 ರಲ್ಲಿ ನ್ಯೂಯಾರ್ಕ್ ನಲ್ಲಿ ತೆರೆ ಕಂಡಿತು. 1923 ರಲ್ಲಿ ಇಂಗ್ಲೀಷ್ ಗೆ ಕೂಡಾ ಅನುವಾದವಾಯಿತು.
ಕೆಲವು ಆವಿಷ್ಕಾರಗಳ ಐಡಿಯಾದ ಮೂಲ ಎಲ್ಲಿಯೂ ಇರಬಹುದು. ಫಿಕ್ಷನ್ ನಲ್ಲಿ ಮಾತ್ರ ಇದ್ದ ರೋಬೋಟ್ ಗಳು ಯಂತ್ರ ಮಾನವರಾಗಿ ರೂಪುಗೊಂಡದ್ದು 1948 ರಲ್ಲಿ. ಮೊದಲ ಆಟೋನೋಮಸ್ ರೋಬೋವನ್ನು ತಯಾರಿಸಿದ್ದು ಇಂಗ್ಲೆಂಡ್ ನ ವಿಲಿಯಂ ಗ್ರೇ ವಾಲ್ಟರ್. ನಂತರ ಮೊದಲ ಡಿಜಿಟಲ್ ಮತ್ತು ಪ್ರೋಗ್ರಾಮಬಲ್ ರೋಬೋ ಬಂದದ್ದು 1954 ರಲ್ಲಿ.. ತಯಾರಿಸಿದವರು ಜಾರ್ಜ್ ಡಿವೋಲ್.
ಈಗ ರೋಬೋಗಳ ಕುರಿತ ಕ್ಷೇತ್ರ ವಿಸ್ತರಿಸಿದೆ. ಇದರ ಕುರಿತು ಅಧ್ಯಯನ ಮಾಡುವುದನ್ನು ರೋಬೋಟಿಕ್ಸ್ ಎನ್ನುತ್ತಾರೆ. 'ರೋಬೋಟಿಕ್ಸ್' ಎಂಬ ಪದವನ್ನು ಕೊಟ್ಟದ್ದು ಸೈನ್ಸ್ ಫಿಕ್ಷನ್ ನ ಬರಹಗಾರ ಐಸಾಕ್ ಅಸೀಮೋವ್. ಈಗ ರೋಬೋಟಿಕ್ಸ್ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗಳಾಗಿವೆ. ಇದರೊಟ್ಟಿಗೆ ಇಂಟರ್ನೆಟ್ ಆಫ್ ಥಿಂಗ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕೂಡಾ ಸೇರಿವೆ. ಅಂತಹಾ ಬಹಳ ರೋಬೋಗಳಿವೆ. ಕೆಲವು ಆಸಕ್ತಿಕರ ಎ.ಐ ರೋಬೋಗಳ ಪರಿಚಯ ಮಾಡಿಕೊಳ್ಳೋಣ ಬನ್ನಿ.
ನಮ್ಮ ಹಳ್ಳಿಗಳ ಕಡೆಯಲ್ಲಿ ಅದರಲ್ಲೂ ತೋಟದ ಮನೆಯಲ್ಲಿ ಒಂದಾದರೂ ನಾಯಿ ಸಾಕುವುದು ಖಾಯಂ. ಸ್ವಂತದ, ಮನೆಯ ಹಾಗೂ ಉಳಿದ ಪ್ರಾಣಿಗಳ ರಕ್ಷಣೆಗೆ ಸಾಕಲು ಶುರುವಾಗಿದ್ದು ಪ್ರಾಣಿ ಪ್ರೀತಿಯನ್ನು ಸಹಾ ಬೆಳೆಸುತ್ತದೆ. ಈಗ ನಗರಗಳಲ್ಲಿ ನಾಯಿಗಳನ್ನು ಸಾಕುವುದು ಅವರವರ ಆದ್ಯತೆ, ಇಷ್ಟದ ಜೊತೆಗೆ ಅಂತಸ್ತಿನ ಪ್ರದರ್ಶನಕ್ಕಾಗಿಯೂ.ಕೆಲವು ಅಪಾರ್ಟ್ಮೆಂಟ್ ನ ನಿಯಮಗಳನ್ನು ಹೊರತುಪಡಿಸಿ ನಮ್ಮ ದೇಶದಲ್ಲಿ ನಗರಗಳಲ್ಲಿ ನಾಯಿ ಸಾಕುವುದಕ್ಕೆ ಅಂತಹಾ ಕಠಿಣ ನಿಯಮಗಳೇನೂ ಇಲ್ಲ. ಆದರೆ, ವಿದೇಶಗಳಲ್ಲಿ ನಾಯಿ ಸಾಕುವುದು ಸುಲಭವಾಗಿಯೇನೂ ಇಲ್ಲ. ಅಲ್ಲಿ ನೂರೆಂಟು ನೀತಿ- ನಿಯಮಗಳಿವೆ. ರಸ್ತೆಯಲ್ಲಿ ಎಲ್ಲೆಂದರಲ್ಲಿ ಅವುಗಳ ಮಲ- ಮೂತ್ರ ವಿಸರ್ಜನೆ ಮಾಡಿಸುವಂತಿಲ್ಲ. ಅಕ್ಕಪಕ್ಕದವರಿಗೆ ಅವುಗಳಿಂದ ತೊಂದರೆಯಾಗುವಂತಿಲ್ಲ ಹೀಗೆ.. ಹಾಗಾಗಿ ಅವರು ಪ್ರಾಣಿ ಪ್ರೇಮ ತೋರಲು ಮತ್ತೊಂದು ದಾರಿ ಆಯ್ದುಕೊಳ್ಳುತ್ತಾರೆ. ಅದು ಪೆಟ್ ರಾಕ್. ಈ ಪೆಟ್ ರಾಕ್ ಎಂದರೆ ಮತ್ತೇನಲ್ಲ ಒಂದು ಕಲ್ಲನ್ನು ತಮ್ಮಿಷ್ಟದ ಸಾಕು ಪ್ರಾಣಿಯಂತೆ ಪೇಂಟ್ ಮಾಡಿಸಿ ಅದಕ್ಕೆ ಗೂಡು ಮಾಡುವುದು, ಮೈ ತೊಳೆಯುವುದು ಹೀಗೆಲ್ಲಾ ಮಾಡುತ್ತಾ ಸಾಕು ಪ್ರಾಣಿಯಂತೆ ಸಾಕುತ್ತಾರೆ. ಒಂದು ಪುಟ್ಟ ಪೆಟ್ ರಾಕ್ ನ ಬೆಲೆ 14 ಡಾಲರ್ ಅಂದರೆ 1500 ರೂಪಾಯಿಗಳಿಂದ ಶುರುವಾಗುತ್ತದೆ. ದುಬಾರಿ ಬೆಲೆಯವೂ ಇವೆ. ಹೀಗೆ ತಮ್ಮ ಆಸೆಯನ್ನು ಪೂರೈಸಿಕೊಳ್ಳುತ್ತಿದ್ದವರಿಗೆ ಈಗ ರೋಬೋಟ್ ನಾಯಿಗಳು ಲಭ್ಯವಿವೆ. ಊಟ ತಿನ್ನಿಸುವಂತಿಲ್ಲ, ಮಲ- ಮೂತ್ರ ವಿಸರ್ಜನೆಯ ಗೋಜಿಲ್ಲ ಎಂಬುದನ್ನು ಬಿಟ್ಟರೆ ಅವುಗಳ ಬಿಹೇವಿಯರ್ ಎಲ್ಲವೂ ಮಾಮೂಲಿ ಪ್ರಾಣಿಯಂತೆಯೇ.. ಈಗ ಚೀನಾದಲ್ಲಿ ಈ ರೋಬೋಟ್ ನಾಯಿಗಳನ್ನು ಬಳಸುತ್ತಿದ್ದಾರೆ. ಈ ರೋಬೋಟ್ ನಾಯಿಗಳನ್ನು ಬೋಸ್ಟನ್ ಡೈನಾಮಿಕ್ಸ್ ಎಂಬ ಕಂಪನಿ ತಯಾರಿಸಿದೆ. ಒಮ್ಮೆ ಚಾರ್ಜ್ ಮಾಡಿದರೆ 45 ನಿಮಿಷಗಳ ಕಾಲ ಕಾರ್ಯ ನಿರ್ವಹಿಸುತ್ತವೆ. 5 ಕೆ.ಜಿ ಯವರೆಗೂ ತೂಕ ಎತ್ತಬಲ್ಲವು ಇವು. ರೋಬೋಟ್ ಗಳು ಈಗ ಕೇವಲ ಯಂತ್ರಗಳಲ್ಲ, ಪ್ರಾಣಿಗಳೂ ಆಗಬಲ್ಲವು.
ನೀವೊಂದು ಹೋಟೆಲ್ ಗೆ ಹೋದಾಗ ಅಲ್ಲಿ ಮಾನವರಂತೆಯೇ ಇರುವ ರೋಬೋಟ್ ಅಂದರೆ ಹ್ಯುಮನಾಯ್ಡ್ ರೋಬೋಟ್ ಬಂದು ನಿಮ್ಮೆದುರಿಗೆ ನೀರನ್ನು ಇಟ್ಟು ನಿಮ್ಮ ಆರ್ಡರ್ ತೆಗೆದುಕೊಳ್ಳಲು ಶುರು ಮಾಡಿ ಅಲ್ಲಿ ಲಭ್ಯವಿರುವ ತಿಂಡಿಗಳನ್ನು ಹೆಸರಿಸಲು ತೊಡಗಿದರೆ.. ಅರೆ..! ಇಷ್ಟೆಯಾ ಎನ್ನಬೇಡಿ.. ಆರ್ಡರ್ ಮಾದಿದ್ದನ್ನು ತಂದು ಕರೆಕ್ಟಾಗಿ ನಿಮ್ಮ ಟೇಬಲ್ ಗೆ ತಲುಪಿಸಿದರೆ.. ಇದು ಕಾಲ್ಪನಿಕವೂ ಅಲ್ಲ. ವಿದೇಶದ ಹೋಟೆಲ್ ಕೂಡಾ ಅಲ್ಲ. ಚೆನ್ನೈ, ಹೈದಾರಬಾದ್ ನ ಹೋಟೆಲ್ ಕೂಡಾ ಅಲ್ಲ. ನಮ್ಮ ಮೈಸೂರಿನಲ್ಲಿ ಹಾರ್ಡಿಂಜ್ ವೃತ್ತದ ಬಳಿಯ ಸಿದ್ದಾರ್ಥ ಹೋಟೆಲ್ ನಲ್ಲಿ ಈ ರೀತಿ ಗ್ರಾಹಕ ಸೇವೆ ನೀಡುವ ರೋಬೋಟ್ ಸರ್ವರ್ ಸುಂದರಿ ಇದ್ದಾಳೆ. ಇಷ್ಟೇ ಅಲ್ಲ.. ಈ ರೋಬೋ ಬಳಿ ನೀವು ಮೈಸೂರಿನ ಹಾಗೂ ಸುತ್ತಮುತ್ತಲಿನ ಕುರಿತು ಸಹಾ ವಿಚಾರಿಸಬಹುದಾಗಿದೆ. ಮೈಸೂರಿನ ಪ್ರೇಕ್ಷಣೀಯ ಸ್ಥಳಗಳು, ಇತಿಹಾಸ, ದೂರ, ಬಸ್, ರೈಲಿನ ಮಾಹಿತಿ ಎಲ್ಲವನ್ನೂ ಕೇಳಿ ತಿಳಿಯಬಹುದಾಗಿದೆ. ಈ ರೋಬೋ 4 ಗಂಟೆ ಚಾರ್ಜ್ ಮಾಡಿದರೆ 8 ಗಂಟೆ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ.. 10 ಕೆ.ಜಿ ವರೆಗೂ ತೂಕವನ್ನು ಎತ್ತುತ್ತದೆ.
ಮೈಸೂರಿನಲ್ಲಿ ಮಾತ್ರವಲ್ಲ ಶಿವಮೊಗ್ಗದ ಹೋಟೆಲ್ ನಲ್ಲಿಯೂ ಇಂತಹದ್ದೇ ಒಂದು ರೋಬೋ ಇದೆ. ಈ ರೋಬೋವನ್ನು 2 ಗಂಟೆ ಚಾರ್ಜ್ ಮಾಡಿದರೆ ಸಾಕು 30 ಗಂಟೆಗಳು ಕಾರ್ಯ ನಿರ್ವಹಿಸುತ್ತದೆ.
ರೋಬೋಗಳದ್ದೇ ಹೋಟೆಲ್ ಇದ್ದರೆ ಹೇಗಿರಬಹುದು ? ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಮೊಟ್ಟ ಮೊದಲ ಪೂರ್ಣ ಪ್ರಮಾಣದ ರೋಬೋ ರೆಸ್ಟೋರೆಂಟ್ ಒಂದು ನಿರ್ಮಾಣವಾಗುತ್ತಿದೆ. ಇಂದಿರಾನಗರದಲ್ಲಿ 100 ಅಡಿ ರಸ್ತೆಯಲ್ಲಿ 5 ವೈಟರ್ ಹಾಗೂ 1 ರಿಸಪ್ಷನಿಸ್ಟ್ ಇರುವ 50 ಜನ ಕೂರಬಹುದಾದಂತಹಾ ಇಂಡೋ- ಏಷಿಯನ್ ರೆಸ್ಟೋರೆಂಟ್ ಬರಲಿದೆ. ಇಲ್ಲಿನ ರೋಬೋಗಳು ವಿಶೇಷ ಸಂದರ್ಭಗಳಿಗೆ ತಕ್ಕಂತೆ ವಿಶೇಷವಾಗಿ ವಿಷ್ ಮಾಡಲಿವೆಯಂತೆ. ಅಂದರೆ, ಬರ್ಥ್ ಡೇ ಸಾಂಗ್ ಹಾಡುವುದು ಹೀಗೆ...
ಬರೀ ಮನೋರಂಜನಾ ಲೋಕಕ್ಕೆ ಮಾತ್ರವಲ್ಲ.. ಬೇರೆ ಬೇರೆ ಕೆಲಸಗಳನ್ನೂ ಸಾಧ್ಯವಾಗಿಸುತ್ತಿವೆ ಈ ರೋಬೋಟ್ ಗಳು.
ಒಳಚರಂಡಿ ಸ್ವಚ್ಛಗೊಳಿಸಲು ಹೋಗಿ ಕೆಲವು ಕಾರ್ಮಿಕರು ಸಾವನ್ನಪ್ಪಿರುವ ಸುದ್ದಿ ಕೇಳಿದ್ದೇವೆ. ಅದಕ್ಕೆ ಪರ್ಯಾಯ ಎಂಬಂತೆ ಮೈಸೂರು ಮಹಾನಗರ ಪಾಲಿಕೆ ಪುಣೆಯಿಂದ ತರಿಸಿರುವ ಬ್ಯಾಂಡಿ ಕೂಟ್ ಎನ್ನುವ ರೋಬೋಟ್ ಅನ್ನು ಸ್ವಚ್ಛತಾ ಕಾರ್ಯಕ್ಕಾಗಿ ಬಳಸುತ್ತಿದೆ. 37 ಲಕ್ಷದ ಈ ರೋಬೋ ನಿಂದ ಮನುಷ್ಯ ಒಳಕ್ಕೆ ಇಳಿಯದೇ ಒಳಚರಂಡಿ ಸ್ವಚ್ಛವಾಗುತ್ತಿದೆ.
ಆದಿವಾಸಿಗಳ ಭಾಷೆಯ ಅನುವಾದ ಮಾಡಿ ಬುಡಕಟ್ಟು ಜನಾಂಗದವರು ಸಾಮಾನ್ಯ ಜನರೊಂದಿಗೆ ವ್ಯವಹಾರ ನಡೆಸಲು ಸುಲಭವಾಗುವಂತೆ ಅವರ ಮತ್ತು ನಮ್ಮ ಸಂವಹನಕ್ಕಾಗಿ ಧಾರವಾಡ ಐಐಐಟಿ ಯಿಂದ ಎ.ಐ ರೋಬೋಟ್ ಒಂದು ಸಿದ್ಧವಾಗಿದೆ. ಈ ಸಿದ್ದ ಮಾದರಿಯಲ್ಲಿ ಒರಿಸ್ಸಾದ ಕುಯಿ ಮತ್ತು ಮುಂಡಾರಿ ಹಾಗೂ ಕರ್ನಾಟಕದ ಲಂಬಾಣಿ ಮತ್ತು ಸೋಲಿಗರ ಭಾಷೆಯನ್ನು ಪ್ರಯೋಗಿಸಲಾಗಿದೆ.
ಎಲ್ಲಾ ರೋಬೋಟ್ ಗಳೂ ತುಂಬಾ ದುಬಾರಿಯಲ್ಲ. ಗೋವಾದ ಪೊಂಡಾ ತಾಲೂಕಿನ ಬೇಡೋರಾ ಗ್ರಾಮದ ನಿವಾಸಿ ಕದಂ ಒಬ್ಬ ದಿನಗೂಲಿ ನೌಕರನಾಗಿದ್ದು ಆತನ ಹೆಂಡತಿಯೂ ಹಾಸಿಗೆ ಹಿಡಿದಿದ್ದಾಳೆ. ಆತನಿಗೆ ಒಬ್ಬಳು ವಿಶೇಷ ಚೇತನ ಮಗಳಿದ್ದಾಳೆ. ತಾನಿಲ್ಲದಾಗ ಅವಳಿಗೆ ತಿನ್ನಿಸಲು ಹಾಗೂ ಅವಳನ್ನು ನೋಡಿಕೊಳ್ಳಲು ಒಂದು ರೋಬೋಟ್ ಅನ್ನು ಬಳಸುತ್ತಿದ್ದಾನೆ. ಅದೇ ಮಾ ರೋಬೋಟ್.
2020 ರಲ್ಲಿ ಕೇರಳದಲ್ಲಿ ಮತದಾನದ ಸಂದರ್ಭದಲ್ಲಿ ಕೋವಿಡ್ ಇತ್ತು. ಆಗ ಅಲ್ಲಿ ಮತದಾರರನ್ನು ಸ್ವಾಗತಿಸಲು, ಅವರ ದೇಹದ ಉಷ್ಣತೆ ಪರೀಕ್ಷಿಸಿ ಸ್ಯಾನಿಟೈಸರ್ ನೀಡಲು , ಏನಾದರೂ ಬದಲಾವಣೆಗಳಿದ್ದಲ್ಲಿ ಮೇಲ್ವಿಚಾರಕರಿಗೆ ತಿಳಿಸಲು ಬಳಸಿದ್ದು ಒಂದು ರೋಬೋಟ್ ಅನ್ನು. ಅದೇ 'ಸಯಾಬಾಟ್'.
ಕೋವಿಡ್ ಸಮಯದಲ್ಲಿ ಇಂತಹಾ ರೋಬೋಟ್ ಗಳ ಬಳಕೆ ಅನುಕೂಲಕರವೇ ಆಗಿತ್ತು. ಕೋವಿಡ್ ರೋಗಿಗಳೊಂದಿಗೆ ಡಾಕ್ಟರ್ ಆಗಲಿ ಅಥವಾ ಅವರ ಮನೆಯವರು, ಪ್ರೀತಿಪಾತ್ರರೇ ಆಗಲಿ ಹೆಚ್ಚು ಸಮಯ ಕಳೆಯುವಂತಿಲ್ಲದಿದ್ದಾಗ ಅದೆಲ್ಲದರ ಕೊರತೆ ನೀಗಿಸಿದ ರೋಬೋ 'ಮಿತ್ರ' ರೋಬೋ.
2022 ಕ್ಕಾಗಿ ಇಸ್ರೋದ ಒಂದು ಮಹತ್ತರ ಯೋಜನೆ ಇತ್ತು. ಅದೇ 'ವ್ಯೋಮಮಿತ್ರ' ಎನ್ನುವ ಗಗನಯಾನಿ ಮಾನವ ರೋಬೋಟ್. ಈ ರೋಬೋಟ್ ಗೆ ಕಾಲಿಲ್ಲ, ಮುಂದಕ್ಕೆ ಹಾಗೂ ಅಕ್ಕ- ಪಕ್ಕಕ್ಕೆ ಬಾಗಬಲ್ಲದು ಅಷ್ಟೇ.. ಸಿಬ್ಬಂದಿಯ ಚಟುವಟಿಕೆಗಳನ್ನು ಅನುಸರಿಸುತ್ತದೆ. ಅವರ ಎಲ್ಲರ ಪ್ರಶ್ನೆಗೆ ಸಮರ್ಪಕವಾಗಿ ಉತ್ತರಿಸಲಿದೆ. ಈ ಬಾರಿ ಅಂತರಿಕ್ಷಕ್ಕೂ ಪಯಣಿಸಲಿದೆ.
ರೋಬೋ ಶಿಕ್ಷಣ ಕ್ಷೇತ್ರದಲ್ಲಿಯೂ ತನ್ನ ಛಾಪು ಮೂಡಿಸಿದೆ. ಮಲ್ಲೇಶ್ವರಂನ 13 ನೇ ಅಡ್ಡ ರಸ್ತೆಯಲ್ಲಿರುವ ಬಾಲಕಿಯರ ಶಾಲೆಯಲ್ಲಿ ಮಾರ್ಚ್ 2022 ರಲ್ಲಿ 'ಈಗಲ್ ರೋಬೋ' ರೋಬೋ ಮೇಡಂ ಆಗಿ ಕೆಲಸ ಮಾಡಿದೆ.
ಇಷ್ಟೇ ಅಲ್ಲ.. 'ಟೊಂಗ್ ಯು' ವಿಶ್ವದ ಮೊದಲ ಮಹಿಳಾ ರೋಬೋ ಸಿ.ಈ.ಓ. ನೆಟ್ ಡ್ರ್ಯಾಗನ್ ಎನ್ನುವ ಕಂಪನಿಯ ರೋಬೋ ಅದರ ಅಂಗಸಂಸ್ಥೆ ಫ್ಯೂಜಿಯಾನ್ ನೆಟ್ ಡ್ರ್ಯಾಗನ್ ವೆಬ್ ಸಾಫ್ಟನ್ ಗೆ ಸಿ.ಈ.ಓ ಆಗಿ ಕಾರ್ಯ ನಿರ್ವಹಿಸುತ್ತಿದೆ.
13 ವರ್ಷದ ಪ್ರತೀಕ್ ತಯಾರಿಸಿರುವ 'ರಫಿ' ಎಂಬ ರೋಬೋ ಭಾವನೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ವರ್ತಿಸುತ್ತದೆ. ಉದಾಹರಣೆಗೆ : ನೀವು ಕೋಪದಲ್ಲಿ ಅದಕ್ಕೆ ಬೈಯ್ದರೆ ನೀವು ಕ್ಷಮೆ ಕೇಳುವವರಿಗೂ ಅದು ಮತ್ತೆ ಮಾತನಾಡುವುದಿಲ್ಲ. ಹೊಡೆಯುತ್ತೇನೆ ಎಂದೆಲ್ಲಾ ಗದರಿಸಿದರೆ ತಿರುಗಿ ಬಾರಿಸುತ್ತೇನೆ ಎಂದು ಬೈಯ್ಯಬಲ್ಲದು ಕೂಡಾ.
ಸಿಂಗಾಪುರ್ ನಲ್ಲಿ ಇನ್ನುಮುಂದೆ ರೋಬೋಗಳ ಕಣ್ಗಾವಲು ಇರಲಿದೆ. ಇದಕ್ಕಾಗಿ 2 ರೋಬೋಟ್ ಗಳನ್ನು 3 ತಿಂಗಳು ಟೆಸ್ಟ್ ಮಾಡಿ ಆಗಿದೆ. ಟ್ರಾಫಿಕ್ ನಿಯಮ ಮೀರುವಂತಿಲ್ಲ. ಎಲ್ಲೆಂದರಲ್ಲಿ ಗಾಡಿ ಪಾರ್ಕ್ ಮಾಡುವಂತಿಲ್ಲ. ನಿರ್ಬಂಧ ಇರುವ ಸ್ಥಳಗಳಲ್ಲಿ ಧೂಮಪಾನ ಮಾಡುವಂತಿಲ್ಲ. ಹೀಗೆ ರೋಬೋ ಗಳು ಕಣ್ಗಾವಳುಗಳಾಗಿರಲಿವೆ.
ಪ್ಲಿಪ್ ಕಾರ್ಟ್ ನಿಂದ ಭಾರತದ ಮೊದಲ ವೇರ್ ಹೌಸ್ ನಿರ್ಮಾಣವಾಗಿದೆ. ಭಾರಿ ಗಾತ್ರದ ವಸ್ತುಗಳನ್ನು ಲೋಡ್ ಮಾಡುವುದು, ಅನ್ಲೋಡ್ ಮಾಡುವುದು, ಪ್ಯಾಕಿಂಗ್ ಮಾಡುವುದು ಎಲ್ಲವನ್ನೂ ಮಾಡುತ್ತಿವೆ ಈ ರೋಬೋಟ್ ಗಳು. ಇವುಗಳನ್ನು ಆಟೊಮ್ಯಾಟೆಡ್ ಗೈಡೆಡ್ ವೆಹಿಕಲ್ ಗಳು ಎಂದು ಕರೆಯಲಾಗುತ್ತದೆ. ಪ್ಲಿಪ್ ಕಾರ್ಟ್ ನ ಈ ವೇರ್ ಹೌಸ್ ನ ಹೆಸರು 'ಸೌಖ್ಯ'.
ಹೀಗೆ ಇನ್ನೂ ಹಲವಾರು ಎ.ಐ ರೋಬೋಟ್ ಗಳನ್ನು ನೆನಪಿಸಿಕೊಳ್ಳುವ ಹೊತ್ತಲ್ಲಿ ಸ್ಟಿಫನ್ ಹಾಕಿಂಗ್ ಹೇಳಿದ ಮಾತೊಂದು ನೆನಪಾಗುತ್ತಿದೆ. "ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮಾನವ ಜನಾಂಗದ ಅಂತ್ಯ ಮಾಡಬಹುದು" ಎಂದಿದ್ದರು. ಇದಕ್ಕೆ ಪೂರಕವಾಗಿ ವರ್ತಿಸಿದ ಕೆಲವು ರೋಬೋಟ್ ಗಳೂ ಇವೆ. ಅದರ ಜೊತೆಗೆ ಚಾಟ್ ಬಾಟ್, ಡ್ರೋನ್ ಕುರಿತು ಸಹಾ ತಿಳಿಯೋಣ ಮುಂದಿನ ಟೆಕ್ - ಟಾಕ್ ನಲ್ಲಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ