ಪುಸ್ತಕದ ಶೀರ್ಷಿಕೆ : ಅನುರಾಗದ ಅಂತಃಪುರ
ಲೇಖಕರು : ಹೆಚ್. ಜಿ. ರಾಧಾದೇವಿ
ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ
ಎರಡನೇ ಮುದ್ರಣ : 2021 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 152
ಬೆಲೆ : 120 ರೂ.
ಹೆಚ್.ಜಿ ರಾಧಾದೇವಿಯವರ ಕಾದಂಬರಿಗಳಲ್ಲಿ ಹೆಚ್ಚಿನವು ನಾಯಕಿ ಪ್ರಧಾನವಾದ ಕಾದಂಬರಿಗಳು. ಆದರೆ, ಬೆರಳೆಣಿಕೆಯಷ್ಟು ಮಾತ್ರವೇ ನಾಯಕ ಪ್ರಧಾನವಾದ ಕಾದಂಬರಿಗಳು. ಹಾಗೆ ನಾನು ಓದಿದ ಕಾದಂಬರಿಗಳಲ್ಲಿ 'ಪ್ರೇಮ ಸಾಮ್ರಾಜ್ಯ'ದ ನಂತರ ಓದಿದ ನಾಯಕ ಪ್ರಧಾನ ಕಾದಂಬರಿ 'ಅನುರಾಗದ ಅಂತಃಪುರ'.
'ಅನುರಾಗದ ಅಂತಃಪುರ' ಎಂದರೆ ಹೆಚ್ಚಿನವರಿಗೆ ತಕ್ಷಣಕ್ಕೆ ತಿಳಿಯದಿದ್ದರೂ.. ಡಾ. ರಾಜಕುಮಾರ್, ಮಾಧವಿ ಹಾಗೂ ಗೀತಾರವರ ಅಭಿನಯದ 'ಅನುರಾಗ ಅರಳಿತು' ಎಂದರೆ ಬೇಗ ತಿಳಿಯುತ್ತದೆ. ದೃಶ್ಯ ರೂಪದಲ್ಲಿಯೂ ಸಮರ್ಥವಾಗಿ ಮೂಡಿಬಂದಿರುವ ಚಲನಚಿತ್ರ. 'ಅನುರಾಗ ಅರಳಿತು' ಕಾದಂಬರಿ ಆಧಾರಿತ ಚಲನಚಿತ್ರ. 1985ರಲ್ಲಿ ಗೆಳತಿ ಮಾಸ ಪತ್ರಿಕೆಯಲ್ಲಿ ಧಾರಾವಾಹಿಯಾಗಿಯೂ ಪ್ರಕಟಗೊಂಡಿತ್ತು.
ರಾಧಾದೇವಿಯವರ ಕಾದಂಬರಿಗಳಲ್ಲಿ ಹೆಣ್ಣು ತೀರಾ ಮೃದು ಅಥವಾ ದುರ್ಬಲೆಯಲ್ಲ. ಬದಲಾಗಿ, ಆಕೆ ಸ್ವಾಭಿಮಾನಿ, ದಿಟ್ಟೆ ಹಾಗೂ ಧೈರ್ಯಶಾಲಿ. ಆದರೆ, ಹೆಣ್ಣು ಆ ಹಂತವನ್ನು ಮೀರಿ ಸ್ವಾತಂತ್ರ್ಯವನ್ನು ಸ್ವೇಚ್ಛೆಯನ್ನಾಗಿಸಿಕೊಂಡು ಮದ, ಅಹಂಕಾರದಿಂದ ವರ್ತಿಸಿದರೆ ಆಕೆಯ ವ್ಯಕ್ತಿತ್ವ ಹೇಗಿರುತ್ತದೆ ಎಂಬುದು ಈ ಕಾದಂಬರಿಯಲ್ಲಿ ಚಿತ್ರತವಾಗಿದೆ. ಹೆಣ್ಣು, ಗಂಡಿನ ದಬ್ಬಾಳಿಕೆಯನ್ನು ಮೆಟ್ಟಿನಿಲ್ಲಬೇಕು. ಹಾಗೆಂದು.. ಗಂಡು ಹೆಣ್ಣಿನ ಕಾಲ ಕೆಳಗೆ ಅವಳ ಅಹಂನಿಂದ ನಲುಗಬಾರದು. ಇಲ್ಲಿನ ದಿಟ್ಟ, ಧೈರ್ಯಶಾಲಿ, ಧೀಮಂತ ಹಾಗೂ ಸ್ವಾಭಿಮಾನಿ ನಾಯಕ ಶ್ರೀಮಂತಿಕೆಯ ಅಹಂ ಹಾಗೂ ಅವಳ ಅಹಂಕಾರಕ್ಕೆ ತಲೆಬಾಗದೆ.. ಸಡ್ಡು ಹೊಡೆದು ನಿಲ್ಲುತ್ತಾನಾದರೂ.. ಆಕೆಯನ್ನೇನೂ ತನ್ನ ಕಾಲಕಸದಂತೆಯೂ ನೋಡುವುದಿಲ್ಲ. ಆಕೆಗೆ ಕೊಡುವ ಗೌರವವನ್ನು ಕಡಿಮೆ ಮಾಡುವುದಿಲ್ಲ. ಇಲ್ಲಿನ ನಾಯಕ ಇಷ್ಟವಾಗಿದ್ದು ಅದೇ ಕಾರಣಕ್ಕೆ.
ಮೋಹನರಾಯರು ಹಾಗೂ ಚಂದ್ರಿಕಾ ದಂಪತಿಗಳ ಮುದ್ದಿನ ಮಗಳು ಆಶಾ. ಮೋಹನರಾಯರಿಗೆ ತಮ್ಮ ಗತಿಸಿದ ಮಡದಿಯ ನೆನಪು ತರುವ ಅದ್ವಿತೀಯ ಸುಂದರಿ. ಮಗಳನ್ನು ಮೆಚ್ಚಿದರೂ.. ಪತ್ನಿಯ ಸೌಮ್ಯ ಸ್ವಭಾವಕ್ಕಿಂತ ವಿಭಿನ್ನ ಸ್ವಭಾವ ಎಂಬುದು ಅವರಿಗೆ ಅರಿವಾಗಿತ್ತು. ಆಶಾ ಹುಟ್ಟಿದ ಮೇಲೆ ಅವರ ಶ್ರೀಮಂತಿಕೆ ಹೆಚ್ಚಾಗಿದ್ದ ಕಾರಣಕ್ಕೆ ಮಗಳನ್ನು ಹೆಚ್ಚು ಮುದ್ದು ಮಾಡಿದ್ದರ ಫಲವೂ ಆಗಿರಬಹುದು.
ಒಂದೇ ಮನೆಯಲ್ಲಿದ್ದರೂ.. ತಂದೆ-ಮಗಳು ಊಟ, ಉಪಹಾರಕ್ಕೆ ಒಟ್ಟಿಗೆ ಕೂರುತ್ತಿರಲಿಲ್ಲ. ಆಶಾಳಿಗೆ ಅವಳಿದ್ದ ಜಾಗಕ್ಕೆ ಅಡುಗೆಯ ಸುಬ್ಬಣ್ಣನಿಂದ ಸರಬರಾಜಾಗುತ್ತಿತ್ತು. ರಾಯರು ಅವಳ ಜೊತೆ ಮಾತನಾಡಬೇಕಿದ್ದರೆ ಆಕೆಗೆ ಕರೆ ಮಾಡುತ್ತಿದ್ದರು. ಇಂದು ಆಕೆಯ ಜೊತೆಗೆ ಉಪಹಾರಕ್ಕೆಂದು ಹೋದಾಗ.. ಆಕೆ ಫ್ಯಾಕ್ಟರಿಯ ಬೋನಸ್ಸಿನ ವಿಷಯ ಮಾತನಾಡಲಿಕ್ಕೆ ಎಂದುಕೊಂಡಳು. ಆದರೆ, ರಾಯರ ಮನಸಿನಲ್ಲಿ ಹೆಚ್ಚಿನ ಚಿಂತೆ ಇದ್ದದ್ದು ಆಶಾ ತನ್ನ ಮದುವೆಗೆ ಯಾವ ವರನನ್ನು ಒಪ್ಪದೇ ಇರುವುದು.
ಹುಡುಗ ಎಷ್ಟೇ ಓದಿ ಎಲ್ಲದರಲ್ಲೂ ಪರಿಪೂರ್ಣವಾಗಿದ್ದರೂ.. ಅವಳ ಸುಪಿರಿಯಾರಿಟಿ ಕಾಂಪ್ಲೆಕ್ಸ್ ಮುಂದೆ ಅವನು ತನಗೆ ಯಾವ ರೀತಿಯಲ್ಲೂ ಸರಿಸಾತಿಯಿಲ್ಲವೆಂದೇ ತಿರಸ್ಕರಿಸುತ್ತಿದ್ದಳು. ತಂದೆಯ ಫ್ಯಾಕ್ಟರಿಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಳು ಅಮೆರಿಕದಲ್ಲಿ ಎಂ.ಬಿ.ಎ ಮುಗಿಸಿ ಬಂದಿದ್ದಳು.
ಕಥೆ, ಕಾದಂಬರಿ, ಸಿನಿಮಾಗಳನ್ನು ಓದಿ.. ನೋಡಿದರೂ.. ಆ ಸೆಂಟಿಮೆಂಟ್ ಗಳಿಗೆ ಒಳಗಾಗದವಳಿಗೆ ಅವಳದ್ದೇ ಆದ ಭಾವನೆಯೊಂದಿತ್ತು. "ನನ್ನ ಹೃದಯದ ಅರಮನೆಯಲ್ಲಿ ಒಂದು ಪುಟ್ಟ ಅನುರಾಗದ ಅಂತಃಪುರವಿದೆ. ಆದರೆ, ಆ ಅಂತಃಪುರ ಪ್ರವೇಶಿಸಲಿಕ್ಕೆ ಆತ ಬಹಳ ಯೋಗ್ಯವಾಗಿರಬೇಕು. ಬರೀ ರೂಪ, ಐಶ್ವರ್ಯ ಮೆಚ್ಚಿ ಬರುವ ವ್ಯಕ್ತಿ ನಿಜವಾದ ಸಂಗಾತಿಯಾಗಲಾರ" ಎನ್ನುವ ಅಭಿಪ್ರಾಯವಿತ್ತು.
ಬಿಸಿರಕ್ತ, ಮುಂಗೋಪ, ಬಾಸಿಂಗ್ ನೇಚರ್ ನಿಂದ ಕಂಪನಿಯನ್ನು ಆಳಲು ಮುಂದೆ ನೋಡುತ್ತಿದ್ದಳು. ಅದರ ಫಲವಾಗಿ ಕಂಪನಿಯ ಮುಷ್ಕರ ನಿಲ್ಲಿಸಲು ಕಾರ್ಮಿಕರಲ್ಲಿ ಮುಖ್ಯಸ್ಥರಾಗಿದ್ದ ರಾಮಲಿಂಗಂ, ಮುನಿಸ್ವಾಮಿ ಹಾಗೂ ಚೆನ್ನವೀರಯ್ಯನವರನ್ನು ತನ್ನ ಚೇಂಬರಿಗೆ ಕರೆಸಿ ಆಪಾದನೆಯನ್ನು ಅವರ ಮೇಲೆ ಹೊರಿಸಿ, ಕೆಲಸದಿಂದ ತೆಗೆದುಹಾಕಿ.. ಇದಾವುದೂ ತಿಳಿಯದ ಉಳಿದ ಕಾರ್ಮಿಕರನ್ನು ಸವಿ ಮಾತುಗಳಿಂದಲೇ ಓಲೈಸಿದ್ದಳು.
ಮೈಸೂರಿನ ಗೆಳೆಯ ಸೋಮನಾಥ್ ರವರ ಮನೆಗೆ ಹೋಗಲು ಹೊರಟಿದ್ದ ರಾಯರನ್ನು ರಾಮಲಿಂಗಂ ಮುಂತಾದವರು ಸೇರಿ ಹಲ್ಲೆ ಮಾಡಲು ಯತ್ನಿಸಿದಾಗ.. ಅವರೆಲ್ಲರನ್ನು ತಡೆದು ರಾಯರ ಪ್ರಾಣ ಉಳಿಸಿದ್ದು ರಾಜೇಂದ್ರಬಾಬು. ಡಾಕ್ಟರ್ ರಂಗರಾಜ್ ವತಿಯಿಂದ ಈ ವಿಚಾರ ತಿಳಿದ ಆಶಾ ಆತಂಕಗೊಂಡರೂ.. ತಂದೆ ಹುಷಾರಾಗಿರುವುದು ಸಮಾಧಾನಕರವಾಗಿತ್ತು.
ರಾಜೇಂದ್ರನಿಗೆ ಏನನ್ನಾದರೂ ಕೂಡಲೇ ಬೇಕೆಂಬ ರಾಯರ ಹಂಬಲಕ್ಕೆ.. ಆತ ಅವರ ಪರಿಚಿತರಾದ ಪಾಪಣ್ಣನವರಿಂದ ಪತ್ರ ತಂದು ಕಾರ್ಖಾನೆಯಲ್ಲಿ ಒಂದು ಕೆಲಸ ಕೇಳಿದ್ದ. ಮುಂಬೈಯ ಕಾರ್ಖಾನೆಯಲ್ಲಿ ಯಾಂತ್ರಿಕ ವಿಭಾಗದಲ್ಲಿ ಎಂಟು ವರ್ಷ ಕೆಲಸ ಮಾಡಿದ ಅನುಭವದ ಆಧಾರದ ಮೇಲೆ ದಕ್ಷ ಹಾಗೂ ಕರ್ತವ್ಯಶಾಲಿ ಎಂದು ರಾಯರು ಕೆಲಸಕ್ಕೆ ಕೊಟ್ಟಿದ್ದರು. ಕಾರ್ಖಾನೆಯಲ್ಲಿಯೂ ಆ ಹುದ್ದೆಗೆ ಯಾರಾದರೊಬ್ಬರು ಯೋಗ್ಯರ ಅವಶ್ಯಕತೆಯಿತ್ತು.
ರಾಜೇಂದ್ರ ಮುಂಬೈಯಿಂದ ಕೆಲಸ ಬಿಡಲು ಕಾರಣ ಆತನ ತಾಯಿಯ ಅನಾರೋಗ್ಯ. ತಾಯಿಯನ್ನು ನೋಡಿಕೊಳ್ಳುವ ಸಲುವಾಗಿ ಬಂದವನು ಪಾಪಣ್ಣನವರ ಕೆಲಸದ ಮೇಲೆ ದಾರಿಯಲ್ಲಿ ಹೋಗುತ್ತಿದ್ದಾಗ ರಾಯರನ್ನು ಅಡ್ಡಗಟ್ಟಿದವರನ್ನು ಉಪಾಯವಾಗಿ ಓಡಿಸಿ ಪ್ರಾಣ ಕಾಪಾಡಿದ್ದ.
ತನ್ನನ್ನು ಕೇಳದೇ, ತಂದೆ ಆತನಿಗೆ ಕೆಲಸ ಕೊಟ್ಟದ್ದು ಆಶಾಳ ಅಹಂಗೆ ಪೆಟ್ಟು ಕೊಟ್ಟಿತ್ತು. ಅಲ್ಲದೆ, ಆತನ ಸ್ವಾಭಿಮಾನ ಹಾಗೂ ಮಾತುಗಳು ತೀರ ಅವಳನ್ನು ಮೆಚ್ಚಿಸುವಂತಿರುತ್ತಿರಲಿಲ್ಲ. ಇದು ಅವಳಿಗೆ ಎರಡನೇ ಪೆಟ್ಟು. ಹೀಗೆ ಆತ ಕೆಲಸಕ್ಕೆ ಸೇರಿದ ನಂತರ ತನ್ನ ಪ್ರಭಾವದಿಂದ ಕಾರ್ಮಿಕರ ಜೀವನ ಶೈಲಿಯಲ್ಲಿಯೂ ಬಹಳಷ್ಟು ಬದಲಾವಣೆಗಳನ್ನು ತಂದ. ಕಾರ್ಮಿಕರ ನಾಯಕನೆಂದು ಅಲ್ಪ ಕಾಲದಲ್ಲಿಯೇ ಹೆಸರು ಗಳಿಸಿಕೊಂಡ. ಕಾರ್ಖಾನೆಯ ಯಾವ ಮೇಲಾಧಿಕಾರಿಗೂ ಕೊಡದಷ್ಟು ಗೌರವವನ್ನು ಕಾರ್ಮಿಕರು ಆತನಿಗೆ ಕೊಡುತ್ತಿದ್ದರು.
ಹೀಗೆ ಹಲವಾರು ಸಂದರ್ಭಗಳು ಘಟನೆಗಳು ಆಶಾಳಿಗೆ ಆತನ ಮಹತ್ವವನ್ನು ಸಾರಿ ಸಾರಿ ಹೇಳುತ್ತಿದ್ದರೂ ಆಕೆ ಆತನನ್ನು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಆತನ ಕೆಲಸದಲ್ಲಿ ತಪ್ಪು ಕಂಡುಹಿಡಿಯಲೆಂದು ಹೋದಾಗ ನಡೆದ ಘಟನೆಯೊಂದು ಇಬ್ಬರ ಬದುಕಿನಲ್ಲಿಯೂ ದೊಡ್ಡ ಬದಲಾವಣೆಯನ್ನೇ ತಂದಿತ್ತು.
ಆತನಿಗೆ ಪಾಠ ಕಲಿಸುತ್ತೇನೆಂಬ ದುರುದ್ದೇಶದಿಂದ ಆಶಾ ತನ್ನ ತಂದೆಯ ಬಳಿ ಬಂದು ಆತನನ್ನೇ ವಿವಾಹವಾಗುತ್ತೇನೆಂದು ಹೇಳಿದಳು. ರಾಜೇಂದ್ರ ಮೊದಲಿಗೆ ಅದನ್ನು ಒಪ್ಪದಿದ್ದರೂ.. ರಾಯರ ಮಾತಿಗೆ ಬೆಲೆ ಕೊಟ್ಟು ಆಕೆಯನ್ನು ಮದುವೆಯಾಗುತ್ತಾನೆ. ಆದರೆ, ಮದುವೆಯಾದ ನಂತರವೂ ತಾನು ಕಾರ್ಮಿಕನಾಗಿ ಅದೇ ಸ್ಥಾನದಲ್ಲಿ ಮುಂದುವರೆಯುತ್ತಾನೆ.
ಆಶಾಳನ್ನು ನೋಡುವ ಆಸೆ ವ್ಯಕ್ತಪಡಿಸಿದ ತನ್ನ ತಾಯಿಯ ಮಾತಿಗೂ ಆಕೆ ಬೆಲೆಕೊಡದಾದಾಗ ರಾಜೇಂದ್ರನಿಗೆ ಅವಳ ಅಹಂಕಾರದ ಪರಮಾವಧಿಯ ಅರಿವಾಗುತ್ತದೆ. ಅಲ್ಲದೆ, ಆತನನ್ನು ಅವಳು ನಡೆಸಿಕೊಳ್ಳುವ ರೀತಿ ಪ್ರತಿಕ್ಷಣಕ್ಕೂ ಆತನ ಸಹನೆಯನ್ನು ಕೆಣಕುತ್ತಾ ಹೋಗುತ್ತದೆ.
ರಾಯರ ಅಂತರಂಗಕ್ಕೆ ಮಗಳಿಗಿಂತಲೂ ಅಳಿಯನೇ ಹೆಚ್ಚು ಹತ್ತಿರವಾಗುತ್ತಾ ಹೋಗುತ್ತಾನೆ. ಆಶಾಳ ದರ್ಪ, ಧಿಮಾಕನ್ನು ಮೆಟ್ಟಿ ನಿಲ್ಲುವ ಪ್ರಯತ್ನದಲ್ಲಿ ರಾಜೇಂದ್ರ ಎಡವಿದನೇ ಅಥವಾ ಯಶಸ್ವಿಯಾದನೇ..?? ಆಶಾ ತನ್ನ ಸರ್ವಾಧಿಕಾರಿ ಮನೋಭಾವವನ್ನು ರಾಜೇಂದ್ರನ ಮೇಲೆ ಪ್ರಯೋಗಿಸಲು ಹೋಗಿ ಏನೆಲ್ಲಾ ಪಾಡು ಪಟ್ಟಳು..?? ರಾಜೇಂದ್ರನ ತಾಯಿಯ ಆರೋಗ್ಯ ಸ್ಥಿತಿ ಏನಾಯಿತು..?? ಮೋಹನರಾಯರಿಗೆ ಮಗಳ ಬಾಳಿನ ಸತ್ಯ ತಿಳಿಯಿತೇ..?? ಆಶಾಳ ಅನುರಾಗದ ಅಂತಃಪುರಕ್ಕೆ ರಾಜೇಂದ್ರ ಪ್ರವೇಶಿಸುತ್ತಾನಾ..?? ರಾಜೇಂದ್ರನಿಗೆ ಶಿಕ್ಷೆ ನೀಡಲು ಹೋಗಿ ತನಗೆ ತಾನು ಶಿಕ್ಷೆ ಕೊಟ್ಟುಕೊಂಡದ್ದು ಆಶಾಳಿಗೆ ಅರಿವಾಯಿತೇ..?? ರಾಜೇಂದ್ರ ಕೆಲಸ ಮಾಡುತ್ತಿದ್ದಕ್ಕೂ ಮೀರಿ ಅವನು ಪಡೆದಿದ್ದ ಯೋಗ್ಯತೆಗಳೇನು..?? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಹೆಚ್.ಜಿ ರಾಧಾದೇವಿಯವರ 'ಅನುರಾಗದ ಅಂತಃಪುರ'.
ಗಂಡಾಗಲೀ.. ಹೆಣ್ಣಾಗಲೀ ತಮ್ಮ ಅಹಂ ಅನ್ನು ಬದಿಗಿಟ್ಟು ವರ್ತಿಸಿದಾಗಲೇ ಸಂಸಾರ ಅನುರಾಗದ ಅಂತಪುರವಾಗಲು ಸಾಧ್ಯ. ಅದಕ್ಕಾಗಿ ಮಾಡಿಕೊಳ್ಳಬೇಕಾದ ಬದಲಾವಣೆಗಳು ಈ ಕಾದಂಬರಿಯಲ್ಲಿ ಬಹಳ ಚೆಂದವಾಗಿ ಚಿತ್ರಿತವಾಗಿವೆ. ನಾಯಕನ ಧೀಮಂತ ಗುಣವಂತೂ ಬಹಳವೇ ಸೆಳೆಯಿತು. ಕಾದಂಬರಿಯಲ್ಲಿ ರಾಜೇಂದ್ರಬಾಬುವಿನ ಪಾತ್ರದಲ್ಲೆಲ್ಲಾ ಡಾ. ರಾಜ್ ಕುಮಾರ್ ಹಾಗೂ ಆಶಾಳ ಪಾತ್ರದಲ್ಲಿ ಮಾಧವಿಯರನ್ನೇ ಕಂಡಂತಾಯಿತು. ಬಹುಶಃ, ನಾನು ಸಿನಿಮಾ ನೋಡಿದ ನಂತರ ಕಾದಂಬರಿ ಓದಿದ್ದು ಒಂದು ಕಾರಣವಾದರೆ.. ಅವರ ಅಭಿನಯ ಚಾತುರ್ಯವೂ ಮತ್ತೊಂದು ಕಾರಣ. ಕಾದಂಬರಿಯೊಂದು ದೃಶ್ಯರೂಪದಲ್ಲಿ ಇಷ್ಟು ಚೆಂದವಾಗಿ ಚಿತ್ರತವಾದಿದ್ದು ಲೇಖಕಿಯ ಬರವಣಿಗೆಯ ಗೆಲುವೂ ಹೌದು. ನಿರ್ದೇಶಕರು ಹಾಗೂ ನಟರ ಗೆಲುವು ಹೌದು.
ರಾಧಾದೇವಿಯವರ ಕಾದಂಬರಿಗಳಲ್ಲಿ ನಾಯಕಿಯರು ಹೆಚ್ಚು ಪ್ರಿಯವಾಗುತ್ತಾರಾದರೂ.. ಈ ಕಾದಂಬರಿಯಲ್ಲಿ ರಾಜೇಂದ್ರಬಾಬು ಹಾಗೂ ಮೋಹನರಾಯರ ಪಾತ್ರಗಳು ಹೆಚ್ಚು ಇಷ್ಟವಾದವು. ಒಂದು ವಿಭಿನ್ನ ಕಾದಂಬರಿಯ ಓದು. ಈ ವಿಭಿನ್ನತೆಯಿಂದಲೇ ರಾಧಾದೇವಿಯವರ ಕಾದಂಬರಿಗಳಲ್ಲಿ ಈ ಕಾದಂಬರಿ ನನ್ನ ಇಷ್ಟದ ಕಾದಂಬರಿಯಾಗಿಯೂ.. ವಿಭಿನ್ನವಾಗಿಯೂ ಮನಸ್ಸಿನಲ್ಲುಳಿದಿದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ