ಗುರುವಾರ, ಏಪ್ರಿಲ್ 16, 2026

ಸೈಬರ್ ಅಟ್ಯಾಕ್ ಮೂಲಕ ಡಿಜಿಟಲ್ ವಾರ್ (ಟೆಕ್ - ಟಾಕ್ -14)


ಯುದ್ಧ ಅಥವಾ ಜಗಳ ಕೇವಲ ಮನುಷ್ಯ ಮನುಷ್ಯರ ನಡುವೆ ಮಾತ್ರ ಆಗುವಂತಹದ್ದಾ.. ಖಂಡಿತಾ ಈಗ ಆ ರೀತಿ ಇಲ್ಲ. ಯಂತ್ರಕ್ಕೂ ಮನುಷ್ಯನಿಗೂ ಜಟಾಪಟಿ ನಡೆಯುತ್ತಿದೆ. ಹಿಂದೆ ಯುದ್ಧ ಮಾಡುವಾಗ ಒಂದು ನಿಯಮವಿತ್ತಂತೆ.. ಸಮಬಲರ ನಡುವೆ ಮಾತ್ರ ಯುದ್ಧ ನಡೆಯಬೇಕು ಅಂತಾ. ಅಂದರೆ ರಥದಲ್ಲಿ ಇರುವವರು ರಥದಲ್ಲಿ ಇರುವವರ ಜೊತೆಗೆ.. ಕಾಲಾಳುಗಳು ಕಾಲಾಳುಗಳು ಜೊತೆಗೆ ಅಂತಾ.. ಮೋಸ ಇರಲಿಲ್ಲ ಎಂದಲ್ಲ. ಆದರೂ, ಹೆಚ್ಚಿನವರು ಇದೇ ರೀತಿ ಯುದ್ಧ ಮಾಡುತ್ತಿದ್ದರು. ಇವುಗಳ ಜೊತೆಗೆ ಯುದ್ಧ ತಂತ್ರಗಳು ಸಹಾ ಇರುತ್ತಿದ್ದವು. ವ್ಯೂಹಗಳನ್ನು ರಚಿಸಿ ಯುದ್ಧ ಮಾಡುತ್ತಿದ್ದರು ಉದಾಹರಣೆಗೆ ಚಕ್ರವ್ಯೂಹ.. ಬರುಬರುತ್ತಾ ತಂತ್ರಜ್ಞಾನ ಮುಂದುವರಿದಂತೆ ಯುದ್ಧ ಡಿಜಿಟಲ್ ಆಗುತ್ತಾ ಬಂತು. ಈಗ ಇಂಟರ್ನೆಟ್ ನಿಂದ ಎಲ್ಲಿ ಬೇಕಾದರೂ ಕುಳಿತು ಯಾರಿಗಾದರೂ ತೊಂದರೆ ಕೊಡಬಹುದು ಅಂತಾ ಆಗಿ ಹೋಗಿದೆ. ಇದು ವೈಯಕ್ತಿಕವಾಗಿ ಕೊಡುವ ತೊಂದರೆಯಲ್ಲ. ಯಾವುದೋ ದೇಶದ ಮೇಲೆ ಹಗೆ ಸಾಧಿಸಲಿಕ್ಕೆ ಅಥವಾ ಮತ್ತೇನೋ ಕಾರಣಕ್ಕಾಗಿ ನಡೆಯಬಹುದು. ಮತ್ತ್ಯಾರೋ ಬಲಿಯಾಗಬಹುದು.


ಇಂತಹಾ ಡಿಜಿಟಲ್ ವಾರ್ ಗಳ ಗುರಿ ಇಂತಹದ್ದೇ ಅಂತಾ ಇರುವುದಿಲ್ಲ. ಹಾನಿ, ನಾಶ ಅಥವಾ ಸಾವು. ಯಾವುದಾದರೂ ಆಗಬಹುದು. ಮೋಜಿಗಾಗಿ, ವಿಕೃತ ಸಂತೋಷಕ್ಕಾಗಿ ಸಹಾ ವೈರಸ್ ಅಟ್ಯಾಕ್ ಮಾಡಿ ಖುಷಿ ಪಡುವವರಿದ್ದಾರೆ. ಈ ಡಿಜಿಟಲ್ ವಾರ್ ನಲ್ಲಿ ಸೈಬರ್ ಅಟ್ಯಾಕ್ ಸರ್ವೇ ಸಾಮಾನ್ಯ. ಡಿಜಿಟಲ್ ವಾರ್ ನಲ್ಲಿ ಸೈಬರ್ ಅಟ್ಯಾಕ್ ಒಂದು ಭಾಗ ಅಷ್ಟೇ.. ಡಿಜಿಟಲ್ ವಾರ್ ಬರೀ ಹಾನಿ ಮಾಡುವುದಷ್ಟೇ ಅಲ್ಲ.. ಮನುಷ್ಯನನ್ನು ಕೊಲ್ಲಲೂಬಹುದು. ಆದರೆ, ಸೈಬರ್ ಅಟ್ಯಾಕ್ ಕೇವಲ ಹಾನಿ ಮಾಡುತ್ತದೆ ಅಷ್ಟೇ..


ವೈರಸ್ ಗಳನ್ನು ಬಳಸಿ ಸೈಬರ್ ಅಟ್ಯಾಕ್ ಮಾಡುವಂತೆ ಈಗ ರ‌್ಯಾನ್ಸಂವೇರ್ ಗಳನ್ನು ಬಳಸಿ ಸೈಬರ್ ಅಟ್ಯಾಕ್ ಮಾಡುತ್ತಾರೆ. ಈ ರ‌್ಯಾನ್ಸಂವೇರ್ ವೈರಸ್ ಗಿಂತ ಹೇಗೆ ಭಿನ್ನ ಗೊತ್ತಾ ? ವೈರಸ್ ಗಳು ಹಾನಿ ಮಾಡಿದ ನಂತರ ಆಂಟಿ ವೈರಸ್ ಬಳಸಿ ಅಥವಾ ಮತ್ತೊಂದು ವಿಧಾನ ಬಳಸಿ ಅವುಗಳನ್ನು ಸಿಸ್ಟಮ್ ನಿಂದ ತೆಗೆದು ಹಾಕಬಹುದು. ಆದರೆ, ರ‌್ಯಾನ್ಸಂವೇರ್ ಹಾಗಲ್ಲ.. ಒಂದಿಷ್ಟು ಹಣದ ಬೇಡಿಕೆ ಬರುತ್ತದೆ. ಆ ಹಣ ನೀಡಿ ಅವುಗಳನ್ನು ನಿವಾರಿಸಿಕೊಳ್ಳಬೇಕಾಗುತ್ತದೆ. ಇಲ್ಲವೇ, ಎಕ್ಸ್ಪರ್ಟ್ ಟೆಕ್ ಸಪೋರ್ಟ್ ಬೇಕಾಗುತ್ತದೆ.


ಒಂದು ದಿನ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಇದ್ದಕ್ಕಿದ್ದ ಹಾಗೆ ಸೊನ್ನೆ ತೋರಿಸಬಹುದು. ನಂತರ ಇದ್ದಕ್ಕಿದ್ದಂತೆ ಮಿಲಿಯನ್ ಗಟ್ಟಲೆ ಹಣ ಬರಬಹುದು. ಸ್ಟಾಕ್ ಮಾರ್ಕೆಟ್ ಪ್ರೈಸ್ ಹೆಚ್ಚಾಗಬಹುದು. ನಿಮ್ಮ ಹಣದ ಹರಿವು ಇದರ ಮೇಲೆ ಡಿಪೆಂಡ್ ಆಗಬಹುದು.

ಇದ್ದಕ್ಕಿದ್ದಂತೆ ನಿಮ್ಮ ಟ್ರೈನ್ ಅಥವಾ ಫ್ಲೈಟ್ ಟಿಕೆಟ್ ಬಲವಂತವಾಗಿ ಕ್ಯಾನ್ಸಲ್ ಆಗಬಹುದು. ನಿಮಗೆ ಅರಿವಿಲ್ಲದಂತೆ ಕ್ಯಾನ್ಸಲ್ ಆಗಬಹುದು 

ಟ್ರಾಫಿಕ್ ಸಿಗ್ನಲ್ ಕೆಂಪು ಆಗಿಯೇ ಉಳಿದು ಟ್ರಾಫಿಕ್ ಪ್ರಾಬ್ಲಮ್ ಹೆಚ್ಚಾಗಬಹುದು. 

ಇದೆಲ್ಲವೂ ಒಬ್ಬ ಹ್ಯಾಕರ್ ನಿಂದ ಆಗಬಹುದು. ಇಲ್ಲವೇ, ಹ್ಯಾಕರ್ ಗಳ ಗುಂಪು ಇದರ ಹಿಂದಿರಬಹುದು.


ಈ ವೈರಸ್ ಅಟ್ಯಾಕ್ ಹೇಗಿರುತ್ತದೆ ಎಂದರೆ. ನಮಗೇ ಅರಿವಿಲ್ಲದಂತೆ ನಮ್ಮ ಮನೆಗೆ ಯಾರೋ ಬಂದು ನಮ್ಮನ್ನೇ ಕಂಟ್ರೋಲ್ ಮಾಡಿದರೆ ಹೇಗಿರುತ್ತದೋ ಹಾಗೆ. ಎಲ್ಲವೂ ಮೇಲ್ನೋಟಕ್ಕೆ ಇದ್ದ ಹಾಗೆಯೇ ಇದ್ದಂತೆ ಕಾಣುತ್ತದೆ. ಅಡುಗೆ ಮನೆಯಲ್ಲಿ ಅಡುಗೆ ಸಿದ್ಧವಿದೆ. ಆದರೆ, ಊಟ ಮಾಡಲು ಸಾಧ್ಯವಾಗದಿರಬಹುದು. ಟಿ.ವಿ ಯ ಹೆಚ್ಚಿನ ವಾಲ್ಯೂಮ್ ಕಿರಿಕಿರಿ ಉಂಟು ಮಾಡುತ್ತಿದ್ದರೂ ಏನೂ ಮಾಡದಂತೆ ಕೈ ಕಟ್ಟಿ ಕುಳಿತ ಪರಿಸ್ಥಿತಿ. ಅವರು ಹೆಚ್ಚು ಹಾನಿ ಮಾಡದಿರಲು, ಮನೆ ಬಿಟ್ಟು ಹೋಗಲು ನಾವೇ ಬೆಲೆ ತೆರಬೇಕಾಗಬಹುದು. ಅದು ನಮ್ಮದೇ ತಪ್ಪಿನ ಫಲವಾಗಿರಬಹುದು.. ಹಿಂದಿನ ಬಾಗಿಲು ತೆರೆದಿರಬಹುದು ಅಥವಾ ಅಪರಿಚಿತ ಮಾರ್ಕೆಟಿಂಗ್ ಮಾಡುವ ಯಾರನ್ನೋ ಮನೆಯೊಳಗೆ ಬಿಟ್ಟುಕೊಂಡದ್ದಿರಬಹುದು ಹೀಗೆ.. ವೈರಸ್ ಈ ಆಗಂತುಕ, ಅಪರಿಚಿತ ವ್ಯಕ್ತಿ ಎಂದು ಭಾವಿಸಿದರೆ ಸಿಸ್ಟಮ್ ಅನ್ನು ಮನೆ ಎಂದು ಭಾವಿಸಿ.


ಈ ಡಿಜಿಟಲ್ ವಾರ್ ಮತ್ತು ಸೈಬರ್ ಅಟ್ಯಾಕ್ ಗಳನ್ನು ಮಾಡುವುದರಲ್ಲಿ ರಷ್ಯಾ ಎತ್ತಿದ ಕೈ ಎಂದು ಯು.ಕೆ ಡಿಫೆನ್ಸ್ ಮಿನಿಸ್ಟ್ರಿ 2018 ರಲ್ಲಿಯೇ ಹೇಳಿದೆ. ಈ ರೀತಿಯ ಅಟ್ಯಾಕ್ ಗಳನ್ನು ನಿಲ್ಲಿಸಲು 20 ವರ್ಷಗಳೇ ಬೇಕಂತೆ.. ರಷ್ಯಾ ಡಿಜಿಟಲ್ ವಾರ್ ನಡೆಸಲು ಇಷ್ಟರ ಮಟ್ಟಿಗೆ ಬಲವಾಗಿದೆ. 


ಈಗ ರಷ್ಯಾ ಮತ್ತು ಉಕ್ರೇನ್ ವಾರ್ ನಡೆಯುವ ಸಂಧರ್ಭದಲ್ಲಿ ಉಕ್ರೇನ್ ತೀವ್ರವಾದ ಸೈಬರ್ ಅಟ್ಯಾಕ್ ಗೆ ತುತ್ತಾಗಿದೆ. ಅದರ ಸರ್ಕಾರಿ ವೆಬ್ಸೈಟ್ ಗಳ ಡೇಟಾ ಹ್ಯಾಕ್ ಆಗಿದ್ದು ಅದರಲ್ಲಿ ಒಂದು ಸಂದೇಶವನ್ನು ಸಹಾ ಬರೆಯಲಾಗಿದೆ. "ಉಕ್ರೇನಿಯನ್ನರೇ.. ನಿಮ್ಮ ಎಲ್ಲಾ ಮಾಹಿತಿಗಳು ಈಗ ಸಾರ್ವಜನಿಕವಾಗಿವೆ. ಪರಿಸ್ಥಿತಿ ಇದಕ್ಕಿಂತ ವಿಷಮವಾಗಲಿದೆ. ನೀವು ಇನ್ನಷ್ಟು ಹೆದರಿಕೊಳ್ಳಿ. ಇದೇ ನಿಮ್ಮ ಹಿಂದಿನ, ಇಂದಿನ ಹಾಗೂ ಮುಂದಿನ ಪರಿಸ್ಥಿತಿ" ಎಂದು ಬರೆಯಲಾಗಿದ್ದು ಉಕ್ರೇನ್ ನ ಬಾವುಟವನ್ನು ಕ್ರಾಸ್ ಮಾಡಿಸುವ ಇಮೇಜ್ ಅನ್ನು ಹಾಕಲಾಗಿದೆ. 


ಅಮೆರಿಕಾ ಹಾಗೂ ಯು.ಕೆ ಇಂಟಲಿಜೆನ್ಸ್ ಏಜೆನ್ಸಿಗಳ ಪ್ರಕಾರ ಈ ಘಟನೆಗೆ ಕಾರಣ ಹೊಸ ಮಾಲ್ವೇರ್ "ಸೈಕ್ಲೋಪ್ಸ್ ಬ್ಲಿಂಕ್". ಇದನ್ನು ರಷ್ಯಾದ 'ಸ್ಯಾನ್ಡ್ ವರ್ಮ್' ಎಂಬ ಗುಂಪು ಮಾಡಿದೆ. ಆದರೆ, ರಷ್ಯಾ ಇದನ್ನು ಒಪ್ಪಲು ಸಿದ್ದವಿಲ್ಲ.


ಉಕ್ರೇನ್ ಗೆ ಈ ರೀತಿಯ ಅಟ್ಯಾಕ್ ಮೊದಲಲ್ಲ. 2014 ರಿಂದ ಈ ರೀತಿಯ ದಾಳಿಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. 2020 ರಲ್ಲಿ 3,97,000 ದಷ್ಟು ಡಿಜಿಟಲ್ ಅಟ್ಯಾಕ್ ಗಳಾಗಿದ್ದರೆ.. 2021 ರ ಜನವರಿ ತಿಂಗಳೊಂದರಲ್ಲಿಯೇ 2,88,000 ಅಟ್ಯಾಕ್ ನಡೆದಿದೆ ಎಂಬ ಅಧಿಕೃತ ಮಾಹಿತಿ ಇದೆ.

2015 ರಲ್ಲಿ ಚಳಿಗಾಲದಲ್ಲಿ ಅಲ್ಲಿನ ಪವರ್ ಗ್ರಿಡ್ ಸೈಬರ್ ಅಟ್ಯಾಕ್ ಗೆ ಒಳಗಾಗಿದ್ದು.. ಕಾಲು ಭಾಗದ ಉಕ್ರೇನಿಯನ್ನರು ವಿದ್ಯುಚ್ಛಕ್ತಿ ಹಾಗೂ ಹೀಟ್ ಇಲ್ಲದೆ ಬಳಲಿದರು. ಇದೇ ಸಮಯದಲ್ಲಿ, ಇದೇ ರೀತಿ 2016 ರಲ್ಲಿಯೂ ಡಿಜಿಟಲ್ ಅಟ್ಯಾಕ್ ಆಯಿತು. 

2017 ರಲ್ಲಿ ನಾಟ್ಪೆಟ್ಯಾ ಎಂಬ ವೈರಸ್ ಮೂಲಕ ಅಲ್ಲಿನ ಬ್ಯಾಂಕ್, ನ್ಯೂಸ್ ಪೇಪರ್ ಹಾಗೂ ಕೆಲ ಹೆಸರಾಂತ ಕಂಪನಿಗಳ ಮೇಲೆ ದಾಳಿ ಮಾಡಲಾಯಿತು. ಇದಾದ ನಂತರ ಈ ರೀತಿಯ ಡಿಜಿಟಲ್ ದಾಳಿಗಳು ನಡೆಯುತ್ತಲೇ ಇವೆ. 


ಈ ರೀತಿ ಇಡೀ ಜಗತ್ತಿನಲ್ಲಿ ಹೆಚ್ಚು ಹಾನಿ ಮಾಡಿದ ಪ್ರಮುಖ ವೈರಸ್ ಹಾಗೂ  ರ‌್ಯಾನ್ಸಂವೇರ್ ಗಳ ಕುರಿತು ಈಗ ತಿಳಿಯೋಣ. ಇವುಗಳು ಅತ್ಯಂತ ಹಾನಿ ಮಾಡಿದ ವೈರಸ್ ಮೂಲಕದ ಸೈಬರ್ ಅಟ್ಯಾಕ್ ಗಳು.


ಕ್ರಿಪ್ಟೋ ಲಾಕರ್ : ಇದು ರ‌್ಯಾನ್ಸಂವೇರ್. ಇದು ಹಾನಿ ಉಂಟು ಮಾಡಿದ್ದು ಸೆಪ್ಟೆಂಬರ್ 2013 ರಲ್ಲಿ. ವೈಯಕ್ತಿಕ ಡೇಟಾ ಕದಿಯಲು ಹಾಗೂ ಬ್ಯಾಂಕ್ ಡೇಟಾ ಕದಿಯಲು ಇದನ್ನು ಈ-ಮೇಲ್ ಅಟ್ಯಾಚ್ ಮೆಂಟ್ ಗಳ ಮೂಲಕ ಕಳುಹಿಸಲಾಯಿತು. ಇದನ್ನು ಕಳುಹಿಸಿದ್ದು ಸೈಬರ್ ಕ್ರಿಮಿನಲ್ ಎವ್ಜುನೈ ಮಿಕೈಲೋವಿಚ್. ಆತ ಇದಕ್ಕಾಗಿ ಬೇಡಿಕೆ ಇಟ್ಟದ್ದು 3 ಮಿಲಿಯನ್ ಡಾಲರ್ ಗಳನ್ನು.


ಪ್ಲಗ್ -ಎಕ್ಸ್ : 2012 ರ ಈ ಮಾಲ್ವೇರ್ ಅನ್ನು ಕೋರ್ ಪ್ಲಗ್ ಎಂದೂ ಕರೆಯುತ್ತಾರೆ. ಸರ್ಕಾರಿ ಕಚೇರಿ ಹಾಗೂ ಬಿಸಿನೆಸ್ ಆರ್ಗನೈಜೇಶನ್ ಇದರ ಟಾರ್ಗೆಟ್. ಇದನ್ನು ಈ ಮೇಲ್ ಅಟ್ಯಾಚ್ಮೆಂಟ್ ಮೂಲಕ ಕಳುಹಿಸಲಾಗುತ್ತಿತ್ತು. ಅಡಾಬ್ ಅಥವಾ ಮೈಕ್ರೋಸಾಫ್ಟ್ ವರ್ಡ್ ಇದರ ಟಾರ್ಗೆಟ್. 2016 ರಲ್ಲಿ ಜಪಾನಿನ ಟ್ರಾವೆಲ್ ಏಜೆನ್ಸಿ ಜೆ.ಟಿ.ಬಿ ಯಿಂದ 7.93 ಮಿಲಿಯನ್ ಬಳಕೆದಾರರ ಮಾಹಿತಿ ತೆಗೆದುಕೊಳ್ಳಲಾಗಿದೆ.


ಜೇಯುಸ್ ಗೇಮ್ ಓವರ್ : ಸೆನ್ಸಿಟಿವ್ ಬ್ಯಾಂಕ್ ಅಕೌಂಟ್ ಮಾಹಿತಿ ಹಾಗೂ ಫಂಡ್ ಗಳನ್ನು ಕದಿಯಲು ಸ್ಪಾಮ್ ಮೆಸೇಜ್ ಮೂಲಕ ಮೈಕ್ರೋಸಾಫ್ಟ್ ವಿಂಡೋಸ್ ಡೇಟಾವನ್ನು ಟಾರ್ಗೆಟ್ ಮಾಡಲಾಗಿತ್ತು. ಇದು ಬಂದದ್ದು 2011 ರಲ್ಲಿ


ಸ್ಟಕ್ಸ್ ನೆಟ್ : 2010 ರಲ್ಲಿ ಇರಾನ್ ನ ನ್ಯೂಕ್ಲಿಯರ್ ಸೌಲಭ್ಯವನ್ನು ಮತ್ತು ಜರ್ಮನಿಯ 14 ಕಂಟ್ರೋಲ್ ಸಿಸ್ಟಮ್ ಗಳನ್ನು ಹ್ಯಾಕ್ ಮಾಡಿದ ಈ ವೈರಸ್ ಮೈಕ್ರೋಸಾಫ್ಟ್ ವಿಂಡೋಸ್ ಹಾಗೂ ಯು.ಎಸ್.ಬಿ ಮೂಲಕ ಹರಡಿತ್ತು. ಇದರ ಮೂಲ ರೂವಾರಿ ಅಮೆರಿಕಾ ಹಾಗೂ ಇಸ್ರೇಲ್.


ಮೈ ಡೂಮ್ : ಇದರ ಮೂಲ ದೇಶ ರಷ್ಯಾ. ಜನವರಿ 26, 2004 ರಲ್ಲಿ ಈ-ಮೇಲ್ ಮೂಲಕ ಇದನ್ನು ಹರಡಲಾಯಿತು. ಫೆಬ್ರವರಿ 12 ರಂದು ಇದ್ದರಷ್ಟಕ್ಕೆ ಇದೇ ಕಾರ್ಯ ನಿರ್ವಹಿಸಲು ನಿಂತು ಹೋಯಿತಾದರೂ ಆರಂಭದಲ್ಲಿ ಮಾಡಿದ್ದ ಇನ್ಫೆಕ್ಷನ್ ಹೆಚ್ಚಿನ ತೊಂದರೆ ಉಂಟು ಮಾಡಿತು.


ಸಾಸ್ಸೇರ್ ಮತ್ತು ನೆಟ್ ಸ್ಕೈ : ಇವೆರಡನ್ನೂ ನಿರ್ಮಿಸಿದ್ದು ಜರ್ಮನಿಯ 17 ವರ್ಷದ ಹುಡುಗ ಸ್ವೆನ್ ಜಾಸ್ ಛಾನ್. ಸಾಸ್ಸೇರ್ ನಿಂದಾಗಿ ಇಂಟರ್ನೆಟ್ ಬಹಳ ನಿಧಾನವಾಯಿತು. ಮತ್ತು ಕೆಲ ವೆಬ್ಸೈಟ್ ಗಳು ಕಾರ್ಯ ನಿರ್ವಹಿಸುವುದನ್ನೇ ನಿಲ್ಲಿಸಿಬಿಟ್ಟವು. ಇದರಿಂದ ಫಿನ್ ಲ್ಯಾನ್ಡ್ ನಲ್ಲಿ 130 ಬ್ಯಾಂಕ್ ಬ್ರ್ಯಾಂಚ್ ಕೆಲಸ ನಿಲ್ಲಿಸುವಂತಾಯಿತು. ಅಷ್ಟೇ ಅಲ್ಲದೆ, ರೈಲು ಹಾಗೂ ವಿಮಾನಗಳು ಬಲವಂತವಾಗಿ ಕ್ಯಾನ್ಸಲ್ ಮಾಡಲ್ಪಟ್ಟವು.

ನೆಟ್ ಸ್ಕೈ ಕೂಡಾ ಇದೇ ರೀತಿ ಕಾರ್ಯ ನಿರ್ವಹಿಸಿತು. ಇದು 2002 ರಲ್ಲಿ ಅತಿ ಹೆಚ್ಚು ಹಾನಿ ಮಾಡಿದ ವೈರಲ್ ವೈರಸ್ ಎಂದೇ (ಕು)ಖ್ಯಾತಿಯಾಗಿದೆ.


ಕೋಡ್ ರೆಡ್ : ಇದು ವೆಬ್ ಸರ್ವರ್ ಗಳ ಮೂಲಕ ಮಾಡಲಾಗುವ ಹಾನಿ. ವೈಟ್ ಹೌಸ್ ವೆಬ್ಸೈಟ್ ಕೂಡಾ ಇದರಿಂದ ಹಾನಿಗೊಳಗಾಗಿತ್ತು. ಇದರ ಹೆಸರು ಬಂದದ್ದು ಕೂಡಾ ವಿಭಿನ್ನ. ಇದಕ್ಕೆ ಆಂಟಿ ವೈರಸ್ 'ಪ್ಯಾಚ್' ಅನ್ನು ಕಂಡುಹಿಡಿದ ಇಬ್ಬರು ಮೈಕ್ರೋಸಾಫ್ಟ್ ನ ಉದ್ಯೋಗಿಗಳು ಕೋಡ್ ರೆಡ್ ಮೌಂಟೇನ್ ಡ್ಯು ಕುಡಿಯುತ್ತಿದ್ದರಂತೆ. ಹಾಗಾಗಿ, ಇದಕ್ಕೂ 'ಕೋಡ್ ರೆಡ್' ಎಂದೇ ಕರೆದರು. ಆ ಇಬ್ಬರು ಉದ್ಯೋಗಿಗಳ ಹೆಸರು ಮಾರ್ಕ್ ಮೈಫ್ರೇಟ್ ಮತ್ತು ರ್ಯಾನ್ ಪೆರ್ಮೆಹ್.


ನಿಂಬಾ : ಇದು ಪತ್ತೆಯಾದದ್ದು 2001 ರಲ್ಲಿ. ಇದು ಚೀನಾದಿಂದ ಬಿಡುಗಡೆ ಮಾಡಲಾದ ವೈರಸ್. ಇಂಟರ್ನೆಟ್ ಮೂಲಕ ಬಹಳ ವೇಗವಾಗಿ ಅಂದರೆ 22 ನಿಮಿಷದ ಒಳಗೆ ಹರಡುವಂತಹಾ ವೈರಸ್.  ಇದರಿಂದಾಗಿ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ನೆಟ್ವರ್ಕ್ ಕ್ರಾಶ್ ಆಯಿತು.


ಐ ಲವ್ ಯು : ಇದು ಫಿಲಿಫೈನ್ಸ್ ಮೂಲದ ಈ-ಮೇಲ್ ಮೂಲಕ ಹರಡಿದ ವಿಚಿತ್ರ ವೈರಸ್. 2000 ಇಸವಿಯಲ್ಲಿ ಮೇಲ್ ನಲ್ಲಿ 'ಐ ಲವ್ ಯು' ಎಂಬ ಸಬ್ಜೆಕ್ಟ್ ಇರುತ್ತಿತ್ತು. ತೆರೆದು ನೋಡಿದರೆ, ಲವ್-ಲೆಟರ್-ಫಾರ್-ಯು ಎನ್ನುವ ಅಟ್ಯಾಚ್ ಮೆಂಟ್ ಇರುತ್ತಿತ್ತು. ತೆರೆದರೆ, ಹಾನಿ ಕಟ್ಟಿಟ್ಟ ಬುತ್ತಿ. ಇದರಿಂದ ಹಾನಿಯಾದದ್ದು 10 ಬಿಲಿಯನ್ ಡಾಲರ್. ಜಗತ್ತಿನ ಶೇಕಡಾ 10 ರಷ್ಟು ಕಂಪ್ಯೂಟರ್ ಗಳು ಹಾನಿಗೊಳಗಾದವು.


ಮೆಲಿಸ್ಸಾ : 1999 ರಲ್ಲಿ ಮೊದಲು ರಿಪೋರ್ಟ್ ಆಗಿದ್ದು ಫ್ಲೋರಿಡಾದಲ್ಲಿ. ಇದೊಂದು ಇನ್ಫೆಕ್ಟೆಡ್ ಫೈಲ್. ಇದನ್ನು ಒಮ್ಮೆ ತೆರೆದರೆ ಮೇಲ್ ಲಿಸ್ಟ್ ನಲ್ಲಿದ್ದ 50 ಜನರಿಗೆ ಮೇಲ್ ಹೋಗುತ್ತಿತ್ತು.  ಇದು ಹಣ ಅಥವಾ ಡೇಟಾ ಬೇಕೆಂದು ಮಾಡುತ್ತಿದ್ದ ಹಾನಿಯಲ್ಲ. ಹಾನಿ ಮಾಡಲೆಂದೇ ಸೃಷ್ಟಿಯಾಗಿದ್ದ ವೈರಸ್. ಇದರಿಂದಾಗಿ ಮೈಕ್ರೋಸಾಫ್ಟ್ ಮೇಲ್ ಓವರ್ ಲೋಡ್ ಸಮಸ್ಯೆಯನ್ನು, ಇಂಟರ್ನೆಟ್ ನಿಧಾನವಾದ ಸಮಸ್ಯೆ ಎದುರಿಸಿ ಕಂಪನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಇದನ್ನು ತೆಗೆದುಹಾಕಲು ಅವರಿಗೆ ಖರ್ಚಾಗಿದ್ದು 80 ಮಿಲಿಯನ್ ಡಾಲರ್.


ಇಂತಹಾ ಬಹಳಷ್ಟು ಹಾನಿ ಡಿಜಿಟಲ್ ಮೂಲಕ ಆಗಿದೆ. ಈಗ ಇಂಟರ್ನೆಟ್ ಬಳಕೆ ಹೆಚ್ಚಾದ ಮೇಲೆ ಇನ್ನಷ್ಟು ಹೆಚ್ಚಳವಾಗಿದೆ. ಈಗ ವೈರಸ್ ಅನ್ನು ಮಾತ್ರವಲ್ಲ ನಿಮ್ಮ ಮನೆಯ ಲೈಟ್, ಡೋರ್ ಎಲ್ಲವನ್ನೂ ಕುಳಿತಲ್ಲಿಂದಲೇ ಕಂಟ್ರೋಲ್ ಮಾಡುವ ಸೌಲಭ್ಯ 'ಇಂಟರ್ನೆಟ್ ಆಫ್ ಥಿಂಗ್ಸ್' ಮೂಲಕ ಒದಗಿದೆ. ಈಗ ಟೆಕ್ ಲೋಕದ ಮುಂಚೂಣಿಯಲ್ಲಿರುವ 'ಇಂಟರ್ನೆಟ್ ಆಫ್ ಥಿಂಗ್ಸ್' ಕುರಿತು ತಿಳಿಯೋಣ ಮುಂದಿನ ಟೆಕ್ - ಟಾಕ್ ನಲ್ಲಿ.

- ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ