ಗುರುವಾರ, ಏಪ್ರಿಲ್ 16, 2026

'ಡ್ರೋನ್' ಹಾರುತಿದೆ ನೋಡಿದಿರಾ.. (ಟೆಕ್ - ಟಾಕ್ - 21)


ಮೊದಲೆಲ್ಲಾ ಏರೋ ಪ್ಲೇನ್ ಸದ್ದು ಕೇಳಿದರೆ ಅಥವಾ ಜೆ.ಸಿ.ಬಿ ಸದ್ದು ಕೇಳಿದರೆ ಅಥವಾ ನೋಡಿದರೆ ಏನೋ ಅದ್ಭುತವಾದದ್ದನ್ನು ನೋಡಿದಂತೆ ಕಣ್ಣರಳಿಸಿಕೊಂಡು ನೋಡುತ್ತಿದ್ದೆವು. ಮೊದಮೊದಲು 'ಡ್ರೋನ್' ಕಂಡಾಗಲೂ ಅಷ್ಟೇ.. ಅಷ್ಟೇ ಬೆರಗಿತ್ತು. ಅದು ಹಾರುವ ಪರಿ, ಕಂಟ್ರೋಲಿಂಗ್ ಎಲ್ಲವೂ ಒಂದು ರೀತಿ ಸೆಳೆಯುತ್ತಿತ್ತು. ಈಗ ಎಲ್ಲೆಡೆ ಹೆಚ್ಚಾಗುತ್ತಿರುವ ಈ ಪರಿಯ ವಾಹನಗಳೋ ಅಥವಾ ಕಳೆದು ಹೋಗುತ್ತಿರುವ ಮುಗ್ಧತೆಯೋ..ಕುತೂಹಲವೋ ಮೊದಲಿನಷ್ಟು ಬೆರಗು ಮೂಡಿಸುತ್ತಿಲ್ಲ. ಕಾರಣ, ಇಂಟರ್ನೆಟ್ , ಯೂಟ್ಯೂಬ್ ಗಳಲ್ಲಿ ಈಗ ಎಲ್ಲವೂ ದೊರೆಯುತ್ತದೆ ಎನ್ನುವ ಭಾವ. 


ಆದರೆ, ಇಂಟರ್ನೆಟ್ ನಲ್ಲಿ ಕಾಣುವಷ್ಟು ಅಥವಾ ಯೂಟ್ಯೂಬ್ ನಲ್ಲಿ ಕಾಣಸಿಗುವಷ್ಟು ಸುಲಭವಾಗಿರುವುದಿಲ್ಲ ಈ ಡ್ರೋನ್ ಗಳ ಹಾರಾಟ. ಈಗ ಬಿಡಿ.. ಮಕ್ಕಳು ಸಹಾ ಡ್ರೋನ್ ಹಾರಿಸುತ್ತಾರೆ ಎನ್ನುತ್ತೀರಾ..?? ಇವು ಬೇರೆಯದ್ದೇ ರೀತಿಯ ಡ್ರೋನ್ ಗಳು. ಇವುಗಳನ್ನು ಟಾಯ್ ಡ್ರೋನ್ ಎಂದು ಕರೆಯುತ್ತೇವೆ.  ವಿದ್ಯಾರ್ಥಿಗಳ, ಆಸಕ್ತ ಮಕ್ಕಳ ಕಲಿಕೆಗೆ ಸುಲಭವಾಗುವಂತೆ, ಅನುಕೂಲವಾಗುವಂತೆ ನಿರ್ಮಾಣ ಮಾಡಲ್ಪಟ್ಟಿರುವ ಡ್ರೋನ್ ಗಳು ಇವು. ಇವು ಹೆಚ್ಚು ಮೇಲೆ ಹಾರುವುದಿಲ್ಲ.. ಹೆಚ್ಚು ದೂರ ಹಾರುವುದಿಲ್ಲವಾದ್ದರಿಂದ ಎಂಜಾಯ್ ಮೆಂಟ್ ಪರ್ಪಸ್ ಗಾಗಿ ಮನೆಯಂಗಳದಲ್ಲಿಯೋ ಅಥವಾ ಒಂದು ಮೈದಾನದಲ್ಲಿಯೋ ಇವುಗಳ ಹಾರಾಟ ಕಂಡು ಬರುತ್ತದೆ. ಟಾಯ್ ಡ್ರೋನ್ ಗಳು 20 ರಿಂದ 20 ರಿಂದ 90 ಮೀಟರ್ ವರೆಗೂ ಹಾರಬಲ್ಲವು. ಕಮರ್ಷಿಯಲ್ ಪರ್ಪಸ್ ಡ್ರೋನ್ ಗಳು 4 ರಿಂದ 8 ರಿಂದ ಎಂಟು ಕಿಲೋ ಮೀಟರ್ ಹಾರಬಲ್ಲವು. ಇತ್ತೀಚೆಗೆ ಬರುತ್ತಿರುವ ಡ್ರೋನ್ ಗಳು 11 ಕಿಲೋಮೀಟರ್ ವರೆಗೂ ಹಾರಬಲ್ಲವು. ಆದರೆ, ಈ ಡ್ರೋನ್ ಗಳ ಹಾರಾಟಕ್ಕೆ ಕೆಲವು ನಿಯಮಗಳಿವೆ. ಎಲ್ಲೆಂದರಲ್ಲಿ, ಹೇಗೆ ಬೇಕೆಂದರೆ ಹಾಗೆ ಡ್ರೋನ್ ಹಾರಿಸುವಂತಿಲ್ಲ.


ಎಫ್.ಎ.ಎ ಅಂದರೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಈ ಕುರಿತು ಕೆಲವು ಮಾರ್ಗಸೂಚಿಗಳನ್ನು ನೀಡಿದೆ.


'ಡ್ರೋನ್'ಗಳನ್ನು ಹಾರಿಸಲು ಮೊದಲು ಡ್ರೋನ್ ಗಳನ್ನು ರಿಜಿಸ್ಟರ್ ಮಾಡಿರಬೇಕು. ಎಲ್ಲಾ ಡ್ರೋನ್ ಗಳನ್ನೂ ರಿಜಿಸ್ಟರ್ ಮಾಡಬೇಕಾ ? ಎಂದು ಕೇಳುವಿರಾದರೆ.. 250 ಗ್ರಾಮ್ ಮೇಲ್ಪಟ್ಟ ಎಲ್ಲಾ ಡ್ರೋನ್ ಗಳನ್ನೂ ರಿಜಿಸ್ಟರ್ ಮಾಡಿಸಿ ಅದರ ಮೇಲ್ಮೈಯಲ್ಲಿ ಮತ್ತು ಎಂಜಿನ್ ಮೇಲೆ ಅದರ ರಿಜಿಸ್ಟ್ರೇಷನ್ ನಂಬರ್ ಅನ್ನು ಅಂಟಿಸಿರಬೇಕು. ನಾವು ನಮ್ಮ ಟು-ವ್ಹಿಲರ್, ಫೋರ್- ವ್ಹಿಲರ್ ಗಳಿಗೆ ರಿಜಿಸ್ಟ್ರೇಷನ್ ಮಾಡಿಸಿ ನಂಬರ್ ತೆಗೆದುಕೊಳ್ಳುತ್ತೇವಲ್ಲಾ ಹಾಗೆ. 

ನಾನು ಇದನ್ನು ಕೇವಲ ಪ್ರಯೋಗಕ್ಕೆ ಮಾತ್ರ ಬಳಸುತ್ತೇನೆ ಎಂದು ಹೇಳಿದರೂ ಎಫ್.ಎ.ಎ ಅಡಿಯಲ್ಲಿ ರಿಜಿಸ್ಟರ್ ಮಾಡಲೇಬೇಕು. ಇದಕ್ಕೆ ಕಡಿಮೆ ಮೊತ್ತ ಅಂದರೆ 5 ಡಾಲರ್ ನಷ್ಟಿರುತ್ತದೆ. ಮತ್ತು ಇದರ ಅವಧಿ 3 ವರ್ಷಕ್ಕೆ ಮಾತ್ರ. ಅಮೇರಿಕಾದಲ್ಲಿ ಹೆಚ್ಚಿನ ಡ್ರೋನ್ ಬಳಸುವವರಿರುವುದು. ಅಲ್ಲಿ ಡ್ರೋನ್ ರಿಜಿಸ್ಟ್ರಾರ್ ಮಾಡದೇ ಬಳಸುವುದು ತಿಳಿದರೆ $275000 ದಷ್ಟು ದಂಡ ವಿಧಿಸಲಾಗುತ್ತದೆ.


ಡ್ರೋನ್ ರಿಜಿಸ್ಟರ್ ಆದ ಬಳಿಕ ಡ್ರೋನ್ ಅನ್ನು ಹೆಚ್ಚು ಜನಸಂದಣಿ ಇರುವ ಕಡೆ, ಹೆಚ್ಚು ಪ್ರಾಣಿಗಳು ಇರುವ ಕಡೆಯಲ್ಲಿ, ಹೆಚ್ಚು ಕಾರುಗಳಿರುವ ಕಡೆ ಹಾರಿಸುವಂತಿಲ್ಲ. ವಿಮಾನ ನಿಲ್ದಾಣಗಳ ಸುತ್ತಲಿನ 5 ಕಿ.ಮೀ ಸುತ್ತಳತೆಯಲ್ಲಿ ಡ್ರೋನ್ ಅನ್ನು ಹಾರಿಸುವಂತಿಲ್ಲ. ಅಪಘಾತಗಳಾದ ಕಡೆ ಅವುಗಳನ್ನು ಉಪಯೋಗಿಸುವಂತಿಲ್ಲ. ಆದರೆ, ತದನಂತರ ಅಲ್ಲಿನ ಮುಂದಿನ ವ್ಯವಸ್ಥೆ ಹಾಗೂ ಮೆಡಿಕಲ್ ಎಮರ್ಜೆನ್ಸಿಗೆ ಬಳಸಬಹುದು ಅಷ್ಟೇ.. ಅಲ್ಲದೇ, ಡ್ರೋನ್ 400 ಮೀಟರ್ ಅಥವಾ ಅದಕ್ಕಿಂತ ಕೆಳಗಡೆ.. 50 ಮೀಟರ್ ಗಿಂತ ಮೇಲೆ ಹಾರಾಟ ನಡೆಸಬಹುದು. ಇದಕ್ಕೆ ಕಾರಣವೂ ಇಲ್ಲದ್ದೇನಿಲ್ಲ.


ಡ್ರೋನ್ ಗಳು 10 ಕಿ.ಮೀ ಮೇಲಿನವರೆಗೂ ಹಾರುತ್ತವೆ. ಆದರೆ, ಅದನ್ನು ಅಷ್ಟು ಮೇಲೆ ಹಾರಿಸಲು ಹೋಗಬಾರದು. ಅಲ್ಲದೇ, ಅದರಲ್ಲಿ ಕ್ಯಾಮೆರಾ ಇಲ್ಲದಿದ್ದಾಗ ನಮ್ಮ ಕಣ್ಣಳತೆಯನ್ನು ಮೀರಿ ಹೋಗಬಾರದು. ಅದರ ಮೇಲೆ ನಮ್ಮ ನಿಯಂತ್ರಣವಿರಬೇಕು. ಕೆಲವೊಮ್ಮೆ ತನ್ನ ರೇಂಜ್ ಮೀರಿ ಹೋಗಿ ಡ್ರೋನ್ ಅಪಘಾತಗಳು ಸಂಭವಿಸಿದ್ದೂ ಇದೆ. ಡ್ರೋನ್ ಗಳು ಸಿನಿಮಾಗಳಲ್ಲಿ ಅಥವಾ ವಿಡಿಯೋಗಳಲ್ಲಿ ತೋರಿಸುವಂತೆ ನಾವು ನಿಯಂತ್ರಿಸಿದಂತೆಯೇ ಹೋಗುವುದಿಲ್ಲ. ಪರಿಸರದ ಕೆಲವು ಅಂಶಗಳು ಅದಕ್ಕೆ ಸಂಪೂರ್ಣವಾಗಿ ಅವಕಾಶ ನೀಡುವುದಿಲ್ಲ. ನಾವು ಯಾವ ರೀತಿಯ ಪರಿಸರದಲ್ಲಿ ಇದ್ದೇವೆ ಎನ್ನುವುದು ಸಹಾ ಮುಖ್ಯವಾಗುತ್ತದೆ. 


ಗಾಳಿಪಟ ಹಾರಿಸುವಾಗ ನಾವು ಎಷ್ಟು ಎಚ್ಚರಿಕೆ ತೆಗೆದುಕೊಳ್ಳುತ್ತೇವಲ್ಲಾ.. ಮತ್ತೊಬ್ಬರ ಪಟಕ್ಕೆ ನಮ್ಮ ಗಾಳಿಪಟ ತಾಕದ ಹಾಗೆ. ಗಿಡ- ಮರಗಳು ಅಡ್ಡ ಬರದೆ ಒಂದು ವಿಸ್ತಾರವಾದ ಬಯಲು ಪ್ರದೇಶದಲ್ಲಿ.. ಅದರ ಬಾಲಂಗೋಚಿ ಹಾಗೂ ಗಾಳಿ ಪಟದ ತೂಕ ಮತ್ತು ವಿನ್ಯಾಸದ ಜೊತೆಗೆ ಗಾಳಿ ಬೀಸುವ ದಿಕ್ಕು ಸಹಾ ಮುಖ್ಯ. ಇಲ್ಲಿಯೂ ಅಷ್ಟೇ.. ಸೂತ್ರದ ಬದಲಿಗೆ ಕಾಣದ ಕಂಟ್ರೋಲಿಂಗ್, ಡ್ರೋನ್ ನ ತೂಕ ಜೊತೆಗೆ ಅದರ ಬ್ಯಾಟರಿ ಬ್ಯಾಕಪ್ ಜೊತೆಗೆ ಗಾಳಿ ಬೀಸುವ ದಿಕ್ಕು. ಮೋಡ ಇದೆಯಾ.. ಗಾಳಿಯ ದಿಕ್ಕು ಹೇಗಿದೆ, ಸಿಗ್ನಲ್ ಎಷ್ಟು ಸ್ಟ್ರಾಂಗ್ ಆಗಿದೆ, ಸಿಗ್ನಲ್ ರಿಸೀವರ್ ಹೇಗೆ ಕೆಲಸ ಮಾಡುತ್ತದೆ.. ಡ್ರೋನ್ ಮೇಲೇಳುವಾಗ ಹಾಗೂ ಹಾರುವಾಗ ಎಷ್ಟು ಡಿಗ್ರಿಯಲ್ಲಿದೆ ಎಂಬುದು ಸಹಾ ಮುಖ್ಯವಾಗುತ್ತದೆ. ಇಷ್ಟೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡರೂ 60% ಡ್ರೋನ್ ಪೈಲಟ್ ಗಳು ಒಂದಲ್ಲಾ ಒಂದು ಬಾರಿ ಕ್ರ್ಯಾಶ್ ಮಾಡಿದ್ದಾರೆ. 


2016 ರ ಜನವರಿಯಲ್ಲಿ ಅಮೆರಿಕಾದಲ್ಲಿ ವೈಟ್ ಹೌಸ್ ನ ಲಾನ್ ಗೆ ಡ್ರೋನ್ ಕ್ರ್ಯಾಶ್ ಆಗಿತ್ತು. ಆ ಡ್ರೋನ್ ಹಾರಿಸಿದವರ ಮೇಲೆ ಕೇಸ್ ಕೂಡಾ ಫೈಲ್ ಮಾಡಲಾಗಿತ್ತು. ಆದರೆ, ಅದು ಆಕಸ್ಮಿಕವಾಗಿ ಹಾಗೆ ಆದದ್ದು ಎಂದು ತಿಳಿದ ನಂತರ ಆತನನ್ನು ಬಿಡುಗಡೆ ಮಾಡಲಾಯಿತು.

ಪ್ರವಾಸಿ ತಾಣಗಳು, ಸ್ಮಾರಕಗಳು, ಉದ್ಯಾನವನಗಳ ಮೇಲೆ ಡ್ರೋನ್ ಹಾರಿಸಬಾರದು ಎಂಬ ನಿಯಮಗಳಿವೆ. ಅಂದರೆ, ಉದಾಹರಣೆಗೆ ಮೈಸೂರು ಅರಮನೆ, ಲಾಲ್ ಬಾಗ್ ಇಂತಹಾ ಪ್ರದೇಶಗಳಲ್ಲಿ ಡ್ರೋನ್ ಹಾರಿಸಬಾರದೆಂದು ಹೇಳುತ್ತಾರೆ. ಆದರೆ, ಕೆಲವರಿಗೆ ಈ ರೀತಿಯ ನಿರ್ಬಂಧದಿಂದ ವಿನಾಯಿತಿ ಇದೆ. ಅದು ಪೋಲೀಸ್ ಮತ್ತು ಮಿಲಿಟರಿಯವರಿಗೆ ಮಾತ್ರ. 

ಸಿನಿಮಾಗಳಲ್ಲಿ ತೋರಿಸುವಂತೆ ಕ್ಯಾಮೆರಾ ಹಾಗೂ ಮೈಕ್ರೋ ಫೋನ್ ಅಳವಡಿಸಿಕೊಂಡ ಡ್ರೋನ್ ಒಂದು ನಿಮಗೆ ಅರಿವಿಲ್ಲದ ಹಾಗೆ ನಿಮ್ಮ ವಿಡಿಯೋ ಹಾಗೂ ಆಡಿಯೋ ರೆಕಾರ್ಡ್ ಮಾಡುತ್ತಿದ್ದರೆ.. ಅದು ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ಅಲ್ಲವೇ ? ಅದು ನಮ್ಮ ಮೂಲಭೂತ ಹಕ್ಕುಗಳನ್ನು ಉಲ್ಲಂಘನೆ ಮಾಡಿದಂತಾಯಿತು. ಅಲ್ಲವೇ ? ಆದರೆ, ಕಾನೂನಿನ ಅಡಿಯಲ್ಲಿ ಪೋಲೀಸರಿಗೆ ಡ್ರೋನ್ ಅನ್ನು ಹೀಗೆ ಬಳಸುವುದಕ್ಕೆ ಅವಕಾಶವಿದೆ. ಮತ್ತು, ಅವರು ಅದನ್ನು ಸಾಕ್ಷಿಯಾಗಿಯೂ ಉಪಯೋಗಿಸಬಹುದು. ಈ ರೀತಿಯ ಆಡಿಯೋ ಹಾಗೂ ವಿಡಿಯೋ ಸಾಕ್ಷಿಗಳು ಕೋರ್ಟ್ ನಲ್ಲಿ ಬಲವಾದ ಸಾಕ್ಷಿಯಾಗಬಲ್ಲವು. ಆದರೆ, ಆ ಡ್ರೋನ್ ನಿರ್ಬಂಧಿತ ಪ್ರದೇಶವನ್ನು ಪ್ರವೇಶಿಸದಿದ್ದರೆ ಮಾತ್ರ. 


ಪ್ರಿಡೇಟರ್ ಎಂಬ ಮಿಲಿಟರಿ ಡ್ರೋನ್ ಅನ್ನು ಒಸಾಮಾ ಬಿನ್ ಲಾಡೆನ್ ಅನ್ನು ಟಾರ್ಗೆಟ್ ಮಾಡಿತ್ತು. ಆ ಚಹರೆಯ ವ್ಯಕ್ತಿ ಕಂಡು ಬಂದರೂ ಆ ಡ್ರೋನ್ ನಲ್ಲಿ ಆಟೊಮ್ಯಾಟಿಕ್ ಡೆಸ್ಟ್ರಾಯರ್ ಇರಲಿಲ್ಲವಾದ್ದರಿಂದ ಆ ವ್ಯಕ್ತಿಯನ್ನು ಏನೂ ಮಾಡಲು ಸಾಧ್ಯವಾಗಲಿಲ್ಲ. 

2001 ರಲ್ಲಿ ಮೊದಲ ಬಾರಿಗೆ ಡ್ರೋನ್ ಅನ್ನು ಬಳಸಿ ಒಬ್ಬ ವ್ಯಕ್ತಿಯನ್ನು ಕೊಲ್ಲಲಾಯಿತು. ಆತನೇ, ಆಗಿನ ಅಲ್ ಖೈದಾ ಕಮ್ಯಾನ್ಡರ್ ಎನ್ನಿಸಿಕೊಂಡಿದ್ದ ಮೊಹಮ್ಮದ್ ಅಟೆಲ್.

ಈ ರೀತಿಯ ವ್ಯಕ್ತಿಗಳನ್ನು ಕೊಂದ ಹಾಗೆ ಸಾಮಾನ್ಯ ಜನರು ಕೂಡಾ ಈ ರೀತಿಯ ಡ್ರೋನ್ ಅಟ್ಯಾಕ್ ಗಳಿಂದ ಸತ್ತಿದ್ದಾರೆ. ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಶನ್ ಪ್ರಕಾರ ಮಕ್ಕಳು ಸೇರಿದಂತೆ 4756 ಜನರ ಹತ್ಯೆಯಾಗಿದೆ. 


ಡ್ರೋನ್ ತನ್ನ ನಿಗದಿತ ಎತ್ತರಕ್ಕಿಂತ ಮೇಲೆ ಹಾರುವುದರಿಂದ ಏನು ತೊಂದರೆಯಾಗುತ್ತದೆ ಎಂಬುದಕ್ಕೆ ಈ ಘಟನೆಯೊಂದು ಉದಾಹರಣೆ. 2013 ರ ಮಾರ್ಚ್ ನಲ್ಲಿ ಯು.ಎಸ್ ಏರ್ ವೇ ನ "ಏರ್ ಕ್ರಾಫ್ಟ್ 4650" 50 ಜನ ಪ್ರಯಾಣಿಕರನ್ನು ಹೊತ್ತು ನಾರ್ಥ್ ಕೊರೊಲಿನಾದಿಂದ ಫ್ಲೋರಿಡಾಗೆ ಹಾರುತ್ತಿದ್ದಾಗ 2300 ಮೀಟರ್ ಎತ್ತರದಲ್ಲಿ ಹಾರುತ್ತಿದ್ದ ಕೋಮೋಫ್ಲೆಗ್ ಡ್ರೋನ್ ಬಂದು ಕ್ರ್ಯಾಶ್ ಆಗಿ ಎರಡರ ಎಂಜಿನ್ ಕೂಡಾ ಫೇಲ್ ಆಯಿತು. ಒಂದು ಹಕ್ಕಿ ಬಂದು ವಿಮಾನಕ್ಕೆ ಡಿಕ್ಕಿ ಹೊಡೆದರೇ ಅಪಾಯ ಅಂತಹದ್ದರಲ್ಲಿ ಲೋಹದ ವಸ್ತು ಅದರಲ್ಲೂ ಲಿಥಿಯಂ ಅಯಾನ್ ಬ್ಯಾಟರಿ ಇರುವಂತಹದ್ದು ಡಿಕ್ಕಿಯಾದರೆ..?? 

2009 ರಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಆದರೆ, ಆಗ ವಿಮಾನಕ್ಕೆ ಡಿಕ್ಕಿ ಹೊಡೆದದ್ದು ಒಂದು ಹಕ್ಕಿ. ಆ ಹಕ್ಕಿ ಇಂಜಿನ್ ಒಳ ಸಿಕ್ಕಿ ಘರ್ಷಣೆ ಉಂಟಾಗಿತ್ತು. ಇದನ್ನು "ಡಬಲ್- ಬರ್ಡ್ ಸ್ಟ್ರೈಕ್" ಎನ್ನುತ್ತಾರೆ. ಆಗ ಚಾಲಕ ಚೆಸ್ಲೇ ಸುಲ್ಲೆನ್ಬರ್ಗರ್ ಸಮಯಪ್ರಜ್ಞೆಯಿಂದ ಹತ್ತಿರದಲ್ಲಿದ್ದ ಹಡ್ಸನ್ ನದಿಯಲ್ಲಿ ಲ್ಯಾನ್ಡ್ ಮಾಡಲಾಗಿತ್ತು.

ಈ ರೀತಿಯ ಘಟನೆಗೆ ಹತ್ತಿರವಿದ್ದ ಘಟನೆ ಹಾಗೂ ಈಗಾಗಲೇ ಅಪಾಯದಿಂದ ಪಾರಾಗುವ ಉಪಾಯ ತಿಳಿದಿದ್ದ ಚಾಲಕ ಅಲ್ಲೇ ಹತ್ತಿರದಲ್ಲಿದ್ದ ಡೊಮ್ಯಾಸ್ಟಿಕ್ ಏರ್ ಪೋರ್ಟ್ ನಲ್ಲಿ ಸಮಯಪ್ರಜ್ಞೆಯಿಂದ ವಿಮಾನವನ್ನು ಲ್ಯಾನ್ಡ್ ಮಾಡಿದ್ದ. ಇದರಿಂದ ಆಗಬೇಕಾದ ಅನಾಹುತ ಕೂದಲೆಳೆಯಲ್ಲಿ ತಪ್ಪಿತ್ತು. ಆದರೆ, ಆ ಡ್ರೋನ್ ಯಾರದ್ದು ಎಂಬುದು ಮಾತ್ರ ಪತ್ತೆಯಾಗಲಿಲ್ಲ. 


ಈ ರೀತಿಯ ಘಟನೆಗಳಿಂದ ಎಫ್.ಎ.ಎ ನಿಯಮಗಳು ಮತ್ತಷ್ಟು ಬಲವಾದವು. ಈ ರೀತಿಯ ನಿಯಮಗಳನ್ನು ರೂಪಿಸುವುದಕ್ಕೆ "ಡಿಟೆಕ್ಟ್ ಅಂಡ್ ಅವಾಯ್ಡ್ ಸ್ಟಾಂಡರ್ಡ್" ಎನ್ನುತ್ತಾರೆ.


ಇತ್ತೀಚೆಗೆ ಕೃಷಿ ಕ್ಷೇತ್ರದಲ್ಲಿ ಡ್ರೋನ್ ಗಳು ಹೆಚ್ಚುಚ್ಚು ಉಪಯುಕ್ತವಾಗುತ್ತಲಿವೆ. ಬೆಳೆಗಳು ಆರೋಗ್ಯಕರವಾಗಿವೆಯೇ ಇಲ್ಲವೇ ಎಂದು ಪರೀಕ್ಷಿಸಲು, ಕೀಟನಾಶಕ ಸಿಂಪಡಿಸಲು, ಅಡಿಕೆ ಕೊಯ್ಲು ಮಾಡಲು, ಗಿಡಗಳಿಗೆ ಬೇಕಾದಷ್ಟು ಬೆಳಕು ಬೀಳುತ್ತಿದೆಯೇ ಎಂದು ಪರೀಕ್ಷಿಸಲು, ಪಾತಿಗಳನ್ನು ಪರೀಕ್ಷಿಸಲು, ಬೆಳೆಗಳು ಯೋಗ್ಯ ಸಮಯಕ್ಕೆ ಕಟಾವಿಗೆ ಬರುತ್ತವೆಯೇ ಎಂದು ಪರೀಕ್ಷಿಸಲು, ಬೆಳೆಗಳಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿದೆಯೇ.. ಅಥವಾ ಬೆಳೆಗಳಿಗೆ ನೀರು ಕಡಿಮೆಯಾಗಿ ಒಣಗುತ್ತಿವೆಯೇ ಎಂದು ಪರೀಕ್ಷಿಸಲು ಡ್ರೋನ್ ಗಳ ಬಳಕೆಯಾಗುತ್ತಿವೆ. ಥರ್ಮಲ್ ಕ್ಯಾಮೆರಾ ಹೊಂದಿರುವ ಡ್ರೋನ್ ಗಳು ನೀರಿನ ಲೀಕೇಜ್ ಇದ್ದಲ್ಲಿ ಕಂಡು ಹಿಡಿಯಲು ಹಾಗೂ ಕ್ಯಾಮೆರಾ ಹೊಂದಿರುವ ಡ್ರೋನ್ ಗಳನ್ನು ಬಳಸಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೊಲದ ಪ್ರತಿ ಇಂಚನ್ನೂ, ಪ್ರತಿ ಗಿಡವನ್ನೂ ಕೂಲಂಕಷವಾಗಿ ಪರೀಕ್ಷಿಸಬಹುದು. 


ಇನ್ನು ಸ್ಟೇಡಿಯಂಗಳಲ್ಲಿ, ಸಿನಿಮಾಗಳಿಗೆ, ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಇವೆಂಟ್ ಮ್ಯಾನೇಜ್ಮೆಂಟ್ ಸುಲಭವಾಗುವಂತೆ ಮಾಡಿದೆ ಈ ಡ್ರೋನ್.


ಈ ರೀತಿಯ ಡ್ರೋನ್ ಗಳನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದನೆ ಮಾಡುವ ದೇಶವೇ ಡ್ರೋನ್ ಉತ್ಪಾದನೆಗೆ ಮೊದಲು ಕೈ ಹಾಕಿದ್ದು. ಅದೇ ಇಸ್ರೇಲ್. ಈಗ 24 ದೇಶಗಳಲ್ಲಿ ಇಸ್ರೇಲ್ ಏರೋ ಸ್ಪೇಸ್ ಇಂಡಸ್ತ್ರಿಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಡ್ರೋನ್ ಗಳನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಬಳಸುವ ದೇಶ ಅಮೆರಿಕಾ.


ಇಷ್ಟು ಉಪಯುಕ್ತವಾಗುವ ಡ್ರೋನ್ ಗಳು ಫುಡ್ ಡೆಲಿವರಿಗೆ, ಅಥವಾ ಆನ್ಲೈನ್ ಆರ್ಡರ್ ಮಾಡಿದ್ದನ್ನು ತಲುಪಿಸಲು ಬಳಕೆಯಾದರೆ ಹೇಗೆ ? ಆರ್ಡರ್ ಮಾಡಿದರೆ ಈಗ 3 ದಿನಕ್ಕೆ ಬರುವ ಪಾರ್ಸೆಲ್ 30 ನಿಮಿಷದಲ್ಲಿಯೇ ನಿಮ್ಮ ಕೈಯ್ಯಲ್ಲಿದ್ದರೆ ಹೇಗೆ ? ಈ ದಿನ ದೂರವಿಲ್ಲ. ಈ ರೀತಿಯ ಡ್ರೋನ್ ಡೆಲಿವರಿ ಕಾನ್ಸೆಪ್ಟ್ ಅನ್ನು ಆದಷ್ಟು ಬೇಗ ಬಳಸುವುದಾಗಿ ಹೇಳಿಕೊಂಡಿದೆ ಅಮೆಜಾನ್. ಡಾಮಿನೋಸ್ ಕೂಡಾ ಹೀಗೆಯೇ ಹೇಳಿಕೊಂಡಿದೆ.


ಮೆಡಿಕಲ್, ಆಹಾರ, ಆನ್ಲೈನ್ ಆರ್ಡರ್ ಮಾಡಿದ ಸಾಮಾಗ್ರಿಗಳು ಇವೆಲ್ಲವನ್ನೂ ತಲುಪಿಸಲು ಡ್ರೋನ್ ಹಾರಾಟದ ಸಮಯ ಕೂಡಾ ಹೆಚ್ಚಬೇಕಿದೆ. ಇಲ್ಲವೇ, ಇದಕ್ಕೆ ಇನ್ನೊಂದು ಬದಲಿ ವ್ಯವಸ್ಥೆಯಾಗಬೇಕಿದೆ. ಈಗ ಏರ್ ಪೋರ್ಟ್ ಗಳು ಹಾಗೂ ಬಸ್ ನಿಲ್ದಾಣಗಳಿರುವಂತೆ ಡ್ರೋನ್ ಗಳಿಗೆ ವಿಶ್ರಾಂತಿಗೆ ಒಂದು ತಾಣವಿದ್ದರೆ. ಬ್ಯಾಟರಿ ಚಾರ್ಜ್ ಮಾಡಲು, ಬ್ಯಾಟರಿ ಬದಲಾಯಿಸಲು ಅಥವಾ ಬದಲಿ ಡ್ರೋನ್ ವ್ಯವಸ್ಥೆ ಮಾಡಲು, ಅಥವಾ ಆ ತಂಗುದಾಣದಿಂದ ಮತ್ತೊಂದು ಡ್ರೋನ್ ಕಾರ್ಯ ಶುರು ಮಾಡಲು. ಈ ನಿಟ್ಟಿನಲ್ಲಿಯೇ ಸಿದ್ಧವಾಗುತ್ತಿದೆ "ಡ್ರೋನ್ ಕಾರಿಡಾರ್". ಆದರೆ, ಇದಿನ್ನೂ ಪ್ರಾರಂಭಿಕ ಹಂತದಲ್ಲಿದೆ. ಇಂಡಸ್ಟ್ರಿಯಲ್ ಹಾಗೂ ಕಮರ್ಷಿಯಲ್ ಕ್ರಾಂತಿಯಾಗಲಿದೆ ಈ ಡ್ರೋನ್ ಕಾರಿಡಾರ್ ಗಳಿಂದ. ಈ ನಿಟ್ಟಿನಲ್ಲಿ ದೊಡ್ಡ ಡ್ರೋನ್ ಕಾರಿಡಾರ್ ಪ್ರಾಜೆಕ್ಟ್ "ಸ್ಕೈ ವೇ" ಯು.ಕೆ ಯಲ್ಲಿ ಶುರುವಾಗಿದೆ. 2024 ರ ಹೊತ್ತಿಗೆ ಸಂಪೂರ್ಣ ಕಾರ್ಯ ನಿರ್ವಹಿಸಲು ಸಿದ್ಧವಾಗಲಿದೆ.

ನಮ್ಮ ಭಾರತದಲ್ಲಿ ಜೂನ್ 2022 ರಿಂದ ಎ.ಐ.ಐ.ಎಂ.ಎಸ್ ದೆಹಲಿ ಹಾಗೂ ಜಜ್ಜಾರ್ ನಲ್ಲಿ ಮೆಡಿಕಲ್ ಡ್ರೋನ್ ಗಳಿಗೆ ಡ್ರೋನ್ ಕಾರಿಡಾರ್ ಸಿದ್ಧವಾಗುತ್ತಿದೆ. ಒಂದೂವರೆ ಗಂಟೆಯ ಪ್ರಯಾಣಕ್ಕೆ, 50 ಕಿಲೋಮೀಟರ್ ಪ್ರಯಾಣಕ್ಕೆ ಈ ಡ್ರೋನ್ ಕಾರಿಡಾರ್ ಸಾಕ್ಷಿಯಾಗಲಿದೆ.


ಹಕ್ಕಿ ಹಾರುತಿದೆ ನೋಡಿದಿರಾ ಎನ್ನುವ ಕಾಲ ಹೋಗಿ ಡ್ರೋನ್ ಹಾರುತಿದೆ ನೋಡಿದಿರಾ ಎನ್ನುವ ಕಾಲ ದೂರದಲ್ಲಿಲ್ಲ. ಇಂಟರ್ನೆಟ್ ಯುಗದಲ್ಲಿ ಅದೆಷ್ಟು ಬದಲಾವಣೆಗಳು ಆಗುತ್ತಿವೆ. ಅಲ್ಲವಾ ? ಇಂಟರ್ನೆಟ್ ಸ್ಪೀಡ್ ಕೂಡಾ ಈಗ ಬದಲಾಗಿದೆ. 2ಜಿ ಇಂದ 5ಜಿ ವರೆಗಿನ ಪ್ರಯಾಣ ಮಾಡೋಣ ಮುಂದಿನ ಟೆಕ್ - ಟಾಕ್ ನಲ್ಲಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ