ಪುಸ್ತಕದ ಶೀರ್ಷಿಕೆ : ಬೆಳಕು ಹರಿವ ಮುನ್ನ
ಲೇಖಕರು : ಟಿ. ಎಸ್. ಶ್ರವಣಕುಮಾರಿ
ಪ್ರಕಾಶಕರು : ಸ್ನೇಹ ಬುಕ್ ಹೌಸ್
ಪ್ರಥಮ ಮುದ್ರಣ : 2023
ಪುಟಗಳು : 144
ಬೆಲೆ : 175 ರೂ.
ಟಿ. ಎಸ್. ಶ್ರವಣಕುಮಾರಿಯವರು ಹುಟ್ಟಿದ್ದು ಶಿವಮೊಗ್ಗದಲ್ಲಿ. ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ 38 ವರ್ಷಗಳ ಸೇವೆಯ ನಂತರ ನಿವೃತ್ತಿಯಾಗಿದ್ದಾರೆ. ವೃತ್ತಿಯಲ್ಲಿರುವಾಗಲೇ ಬರೆಯುತ್ತಿದ್ದರೂ, ಪ್ರವೃತ್ತಿಯಾಗಿ ಮಾರ್ಪಟ್ಟಿದ್ದು ನಿವೃತ್ತಿಯ ನಂತರವೇ ಎನ್ನುತ್ತಾರೆ. 2020ರ ಮೈತ್ರಿ ಸಂಭ್ರಮದಲ್ಲಿ ಗೆದ್ದು ಅವರಿಂದಲೇ ಪ್ರಕಟಿತವಾದ ಇವರ ಮೊದಲ ಕಥಾ ಸಂಕಲನ 'ಅಸ್ಪಷ್ಟ ತಲ್ಲಣಗಳು'. 'ಅಮೇರಿಕಾ- ಬೊಗಸೆಯಲ್ಲಿ ಕಂಡಷ್ಟು ನೆನಪಿನಲ್ಲಿ ಉಳಿದಷ್ಟು' ಇವರ ಪ್ರವಾಸ ಕಥನ. 'ಸಂಜೆಯ ಮಳೆ' ಲಲಿತ ಪ್ರಬಂಧಗಳ ಸಂಕಲನ. ಪ್ರಸಿದ್ಧ ಕಾದಂಬರಿಕಾರ ತ.ರಾ.ಸು ಇವರ ತಾಯಿಯ ಅಣ್ಣ, ಸೋದರ ಮಾವ. ಟಿ. ಎಸ್ ವೆಂಕಣ್ಣಯ್ಯನವರು ಹಾಗೂ ತ. ಸು. ಶಾಮರಾಯರು ಇವರ ದೊಡ್ಡ ಮತ್ತು ಚಿಕ್ಕ ತಾತಂದಿರು.
ಕುಟುಂಬದಲ್ಲಿ ಸಾಹಿತ್ಯದ ಹಿನ್ನೆಲೆ ಇದ್ದರೂ.. ವಿಭಿನ್ನವಾದ ಕಥಾ ಶೈಲಿಯಿಂದ ಸರಾಗವಾಗಿ ಓದಿಸಿಕೊಂಡು ಹೋಗುವ ಚಂದದ 10 ಕಥೆಗಳ ಸಂಕಲನವನ್ನು ಹೊರತಂದಿದ್ದಾರೆ. ಆದರೆ, ಇದರಲ್ಲಿ 11 ಕತೆಗಳಿವೆ. ಪರಿವಿಡಿಯಲ್ಲಿ ನನ್ನೊಳಗೆ ಅವಳಿದ್ದು ನಿನ್ನೊಳಗೆ ಅವನಿದ್ದು ಎಂಬ ಕಥೆಯ ಶೀರ್ಷಿಕೆ ಮಿಸ್ ಆಗಿದೆ. ಹಾಗಾಗಿ ಒಂದು ಕತೆಯ ಬೋನಸ್ ಓದಿನ ಸಂತಸ ನಮ್ಮದು.
ಬೆಳಕು ಹರಿವ ಮುನ್ನ : ಇದು ಮಧ್ಯಮ ವರ್ಗದ ಸಂಸಾರದ ಕಥೆ ಎನಿಸಿದರೂ.. ಸುಖೀ ದಾಂಪತ್ಯಕ್ಕೆ ಉದಾಹರಣೆಯಂತಿದ್ದ ವಿಕ್ರಮ ಹಾಗೂ ಕುಸುಮ, ಇಬ್ಬರು ಮುದ್ದು ಮಕ್ಕಳು ಸುಹಾಸ್ ಹಾಗೂ ಸ್ಮಿತಾ ಕುಟುಂಬದ ಸುಖದ ದಿನಗಳಿಗೂ.. ಎಲ್ಲರೂ ಹೊಟ್ಟೆಕಿಚ್ಚು ಪಡುತ್ತಿದ್ದಂತಹಾ ಸಂಸಾರದ ಕಳೆದು ಹೋದ ಸುಖದ ದಿನಗಳ ನೆನಪಿದೆ. ಹಠಾತ್ತನೆ ಬಂದೊದಗಿದ್ದ ಪರಿಸ್ಥಿತಿ, ಹಣದ ಮುಗ್ಗಟ್ಟು, ಗಂಡನ ವರ್ತನೆ, ಮಕ್ಕಳ ಓದು... ಗೃಹಿಣಿಗೆ ಬಂದ ಆಲೋಚನೆಗಳೆಲ್ಲವನ್ನೂ ಕಟ್ಟಿಕೊಟ್ಟ ಕಥೆ ರಾತ್ರಿ ಕಳೆದು ಬೆಳಕು ಮೂಡುವ ಮುಂಚಿನ ನಿದ್ದೆ ಬಾರದ ಕ್ಷಣಗಳ ಆಲೋಚನೆಯೂ ಹೌದು.. ಇದು ಕಷ್ಟಗಳೆಲ್ಲವೂ ಕಳೆಯಬಹುದಾ ಎಂದು ಬೆಳಕನ್ನು ನಿರೀಕ್ಷಿಸುವ ಪರಿಯೂ ಹೌದು.
ಗಿಣ್ಣಿನ ಪರಿಮಳ : ಶಾಲಾ ಸಮಯದಲ್ಲಿ ಸಹಪಾಠಿಗಳಾಗಿದ್ದ ಸುಶೀಲ ಹಾಗೂ ನಾಗಲಕ್ಷ್ಮಿ ತಮ್ಮ ಅಮ್ಮಂದಿರ ಪರಿಸ್ಥಿತಿಯಲ್ಲಿಯೇ ಇದ್ದರು. ನಾಗಲಕ್ಷ್ಮಿಯದ್ದು ಸುಶೀಲಳಿಗೆ ಹೋಲಿಸಿದಾಗ ಬಡತನದ ಬದುಕು. ಗೆಳೆತನವನ್ನು ಮುಂದುವರಿಸಿಕೊಂಡು ಆಗೀಗ ಸಹಾಯಕ್ಕೆ ನಾಗಲಕ್ಷ್ಮಿಯನ್ನು ಕರೆಯುತ್ತಿದ್ದಳು ಸುಶೀಲ. ಇದು ಅವಳ ಮಕ್ಕಳಿಗೂ ಮುಂದುವರೆದಂತೆ.. ನಾಗಲಕ್ಷ್ಮಿಯ ಮಗ ರಾಮ ಸುಶೀಲಮ್ಮನ ಮನೆಗೆ ಸಹಾಯಕನಾಗಿ ಹೋಗಿದ್ದ. ಆಕೆಗೆ ಇಬ್ಬರು ಮಕ್ಕಳು ಸ್ಮಿತಾ ಹಾಗೂ ಸುರೇಶ. ಸುಶೀಲಮ್ಮನ ಕೈ ಧಾರಾಳವೇ ಆದರೂ.. ಇವರ ಮನೆಯಲ್ಲಿದ್ದಂತೆ ಸ್ವಾತಂತ್ರ್ಯವಿರಲಿಲ್ಲ. ರಾಮನಿಗೂ ತೀರಾ ತೊಂದರೆಯೇನಿಲ್ಲ ಎಂದುಕೊಂಡಿದ್ದ ಸಂದರ್ಭದಲ್ಲಿ ಅವನಿಗಿಷ್ಟವೆಂದು ಗಿಣ್ಣನ್ನು ಮಾಡಿಕೊಂಡು ಹೊರಟಿದ್ದಾಗಲೇ ಆತ ನಾಪತ್ತೆಯಾದ ಸುದ್ದಿ ತಲುಪಿತ್ತು. ಆ ಗಿಣ್ಣಿನ ಪರಿಮಳ, ಅಮ್ಮನ ಸೆಳೆತ ಅವನನ್ನು ಮತ್ತೆ ಎಲ್ಲಿಗೆ ತಂದು ನಿಲ್ಲಿಸಿತು..??
ಯಾರು ಜೀವವೇ ಯಾರು ಬಂದವರು : ತಮ್ಮನ ಮಗಳಾದ ಶೀಲ ಬಂದಾಗ ವಿಶಾಲಕ್ಷ್ಮನವರ ನಿರುತ್ಸಾಹದ ಮುಖ ಅರಳಿತ್ತು. ಮಗ-ಸೊಸೆಯ ಜೊತೆ ಅಷ್ಟು ಹೊಂದಾಣಿಕೆಯಿಲ್ಲದೆ.. ಕೊನೆಗೆ ಮನಸ್ಸಿಲ್ಲದ ಮನಸ್ಸಿನಲ್ಲಿಯೇ ವೃದ್ಧಾಶ್ರಮ ಸೇರಿದ ಆಕೆಗೆ ಯಾರಾದರೂ ನೋಡಲು ಬರುತ್ತಾರಾ.. ಎಂಬ ನಿರೀಕ್ಷೆ ಇದ್ದಾಗಲೇ ಶೀಲಾ ಬಂದಿದ್ದಳು. ಶೀಲಾ ಹಣ ಕೊಡಲು ಸಿದ್ಧವಿದ್ದಳಾದರೂ ವಿಶಾಲಮ್ಮನ ನಿರೀಕ್ಷೆಯಂತೆ ಆಕೆ ಬಂದು ಹೋಗಿ ಮಾಡುವುದು ಅಷ್ಟು ಸುಲಭವಿತ್ತೇ..?? ತಮ್ಮ ಕಾಲದಲ್ಲಿ ಜಬರ್ದಸ್ತಿ ನಿಂದ ಬದುಕಿದವರು ಜೀವವನ್ನು ಹಿಡಿಯಾಗಿಸಿಕೊಂಡು ಬಾಳುವ, ವೃದ್ಧಾಶ್ರಮದವರ ಹಿಡಿ ಪ್ರೀತಿ, ಕಾಳಜಿಗೆ ಹಂಬಲಿಸುವ ಕತೆ.
ಹಿತ್ತಲ ಬಾಗಿಲು : ಅಮ್ಮ ತೀರಿಕೊಂಡ ನಂತರ ರಾಜಿ ಯಾರ ಮನೆಯಲ್ಲಿ ಇರುವುದೆಂದು ಚರ್ಚೆಯಾಗುತ್ತಿದ್ದಾಗ ಅನುಕೂಲಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದ ಮೂವರು ಅಕ್ಕಂದಿರಲ್ಲಿ ಕಮಲಾ ತನ್ನ ಮಗಳ ಬಾಣಂತನ ಎಂದು ಕರೆದುಕೊಂಡು ಹೋಗಲು ಸಿದ್ದಳಿದ್ದರೂ ಅಣ್ಣ ವಿಶ್ವನ, ಅಮ್ಮನ ಜೊತೆಗಿದ್ದವಳು ಒಪ್ಪಲಿಲ್ಲ. ಮದುವೆಯಾಗಿದ್ದರೂ ಎಲ್ಲರಂತೆ ಸಂಸಾರ ಮಾಡಿಕೊಂಡಿರದ ರಾಜಿಯ ದೃಷ್ಟಿಯಲ್ಲಿ ಆ ಮದುವೆಗೆ ಅರ್ಥವಿತ್ತೇ..?? ಅಂದಿನಿಂದ ಹಿಂದಿನವರೆಗೂ ಅವಳಿಗೆ ಹಿತ್ತಿಲ ಬಾಗಿಲ ಮೋಹ ಬಿಟ್ಟಿರಲಿಲ್ಲ. ಅವಳ ಅಳುವಿಗೆ, ಮೌನಕ್ಕೆ, ಎಲ್ಲರ ಅಸಡ್ಡೆಗೆ ಸಮಾಧಾನ ಮಾಡುವಂತಿದ್ದ ಹಿತ್ತಲನ್ನು ತೊರೆದು ಹೋಗುವುದು ಸುಲಭವಿತ್ತೇ..?? ಅವಳು ತೆಗೆದುಕೊಂಡ ನಿರ್ಧಾರಕ್ಕೆ ಒಡಹುಟ್ಟಿದವರ ಪ್ರತಿಕ್ರಿಯೆ ಏನು..?? ಅಬಲೆಯೆಂದು ಉಪಯೋಗಿಸಿಕೊಳ್ಳಲು ನೋಡುವವರಿಗೆ ಅಹಂಕಾರವೆನ್ನಿಸಿದರೆ.. ಇಲ್ಲಿ ಸ್ವಾಭಿಮಾನ ಕಾಣುತ್ತದೆ.
ಕರೆ : ಮದನನ ಕರೆ ಬಂದಾಗ ಸಂಜೀವನಿಗೆ ಕೆಲಸದ ಒತ್ತಡ. ಆದರೂ.. ಮತ್ತೆ-ಮತ್ತೆ ಕರೆ ಬರುತ್ತಿರುವಾಗ ಆತ ಗೆಳೆಯನ ಕರೆಯನ್ನು ಸ್ವೀಕರಿಸಿದನಾದರೂ.. ಗೆಳೆಯ ಹೇಳಿದ್ದನ್ನು ಪೂರ್ತಿ ನಂಬುವಂತೇನೂ ಇರಲಿಲ್ಲ. ಸಾಮಾನ್ಯವಾಗಿ ಆತ ಕರೆ ಮಾಡುತ್ತಿದ್ದದ್ದು ಯಾವುದಕ್ಕಾದರೂ ದುಡ್ಡು ಕೇಳುವ ವಿಚಾರಕ್ಕೆ. ಈ ಬಾರಿಯೂ ಹಾಗೆಯೇ ಇರಬೇಕು ಎಂದುಕೊಂಡಿದ್ದವನು ಮತ್ತೆ ಆತನ ಕರೆಗೆ ಓಗೊಟ್ಟು ಹೋಗುವಷ್ಟರಲ್ಲಿ ಕಾಲನ ಕರೆಗೆ ಗೆಳೆಯ ಹೋಗಿಯಾಗಿತ್ತು. ಎಷ್ಟೋ ಬಾರಿ ನಾವು ಹೀಗೆಯೇ ಪೂರ್ವಗ್ರಹಪೀಡಿತ ಮನಸ್ಥಿತಿಯಿಂದ ಯೋಚಿಸುತ್ತೇವೆ. ಮನುಷ್ಯನ ನಂಬಿಕೆ ಉಳಿಸಿಕೊಳ್ಳುವ ಪ್ರಸಂಗ, ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿಯೂ ಎಷ್ಟು ಮುಖ್ಯ ಎಂಬುದರ ಅರಿವಾಗಿಸುವ ಕಥೆ ಇದು.
ನನ್ನೊಳಗೆ ಅವಳಿದ್ದು ನಿನ್ನೊಳಗೆ ಅವನಿದ್ದು : ಮದುವೆಗೂ ಮುನ್ನ ನಿಮ್ಮ ಹಿಂದಿನ ಚರಿತ್ರೆ ಬೇಡವೆಂದರೂ ದಾಂಪತ್ಯದಲ್ಲಿ ಕೆಲವೊಮ್ಮೆ ಅನುಮಾನಗಳು ಹುಟ್ಟಿದಾಗ ಅಥವಾ ಹೊಸ ಸ್ನೇಹಗಳು ಸಂಬಂಧಗಳು ಹತ್ತಿರವಾದಾಗ.. ಇಲ್ಲವೇ ತೀರಾ ಆಪ್ತವಾಗಿದ್ದು.. ತಮ್ಮದೇ ಸ್ಪೇಸ್ ದೊರಕದೆ, ಬೇರಾಗುವಾಗ.. ಮದುವೆಯ ದಿನಗಳಲ್ಲಿ ಇದ್ದ ಆತ್ಮೀಯತೆ ಕರಗುತ್ತಾ ಬರುವಾಗ ಹಿಂದಿನದ್ದು ನೆನಪಾಗಬಹುದು. ಆಗ ಹೆಂಡತಿಯ ಹಳೆಯ ಕಥೆ ಅಥವಾ ಗಂಡನ ಹಿಂದಿನ ಅಥವಾ ಈಗಿನ ಸಂಬಂಧಗಳು, ನಡವಳಿಕೆ ಬೇರೆಯದ್ದೇ ಅರ್ಥವನ್ನು ಕೊಡಬಲ್ಲವು. ಇದರ ನಡುವೆ ಯಾರಾದರೂ ಇದ್ದರಂತೂ.. ಆ ದೂರ ಮತ್ತಷ್ಟು ದೂರವಾಗುತ್ತಲೇ ಹೋಗುತ್ತದೆ. ಹೀಗೆ ಸಂಬಂಧಗಳ ಸಂಕೀರ್ಣತೆಯನ್ನು ಆನಂದ ಹಾಗೂ ಲಾವಣ್ಯನ ಮನಸ್ಸಿನ ಮಾತುಗಳಲ್ಲಿ ಕಟ್ಟಿಕೊಟ್ಟಿರುವ ಕಥೆ ಇದು.
ತಿಥಿ : ಅಮ್ಮನ ಅಮ್ಮ ಅಂದರೆ ಅಜ್ಜಿಯ ತಿಥಿ ಕಾರ್ಯಕ್ಕೆ ಅತ್ತೆ ಕರೆ ಕಳುಹಿಸಿದಾಗ ಜಯಮ್ಮ ಮೊದಲು ಹೋಗಲಿಲ್ಲವಾದರೂ.. ಅತ್ತೆಯ ಜಬರ್ದಸ್ತಿಗೆ ಬಗ್ಗಿ ದೇವರ ಸಮಾಧಾನ ಸಮಾರಾಧನೆಯ ಕಾರ್ಯವನ್ನು ಬಿಟ್ಟು ಅಲ್ಲಿಗೆ ಹೋಗಲೇ ಬೇಕಾಯಿತು. ಆದರೆ, ಅಲ್ಲಿ ಎಂದಿನಂತೆ ಅನುಭವಿಸುತ್ತಿದ್ದ ಪರಿಸ್ಥಿತಿಯಿದ್ದರೂ.. ಹಂಗಿನಲ್ಲಿರುವುದು, ದುಡಿತಕ್ಕೆ ತಕ್ಕ ಪ್ರತಿಫಲವಿರಲಿ, ಗೌರವವೂ ದಕ್ಕದೆ ಇರುವುದು ಅವಳ ಸ್ವಾಭಿಮಾನವನ್ನು ರೊಚ್ಚಿಗೆಬ್ಬಿಸಿದ ಪರಿ ಕಾಣುತ್ತದೆ.
ಚದುರಂಗದ ಕುದುರೆ : ಬುದ್ಧಿವಂತೆಯಾಗಿದ್ದ ಚಂದ್ರಲೇಖ ಬದುಕನ್ನು ನೇರ ಮಾಡಿಕೊಳ್ಳದೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದು ಆತನ ಡಿವೋರ್ಸ್ ಆದ ನಂತರ ಮದುವೆಯಾದರೂ ಹುಟ್ಟಿದ ಧೃತಿ ಮೆಂಟಲಿ ರಿಟಾರ್ಡೆಡ್. ಈಗ ಗಂಡನ ಬೇರೆ ಸಂಬಂಧದ ಸುಳಿವು ಸಿಗುತ್ತಾ ಹೋದಂತೆ.. ಆಕೆಗೆ ಬೇರೆಯದ್ದೆ ಹೊಳವು ಹೊಳೆಯುತ್ತಾ ಹೋಗುತ್ತದೆ. ಹಠಮಾರಿಯಾದ್ದ ಮಗಳಾಗಿ ಬೆಳೆದಿದ್ದವಳ ಅಸಹಾಯಕ ಪರಿಸ್ಥಿತಿ ಆಕೆಗೆ ವಾಸ್ತವದ ದರ್ಶನ ಮಾಡಿಸುವಾಗ ಅವಳ ಭಾವಗಳು ಇದು ಅವಳ ಕರ್ಮಕ್ಕೆ ತಕ್ಕ ಪ್ರತಿಫಲವೋ ಅಥವಾ ಬದುಕಿಡೀ ಮುಗಿಯದಂತಹ ಶಿಕ್ಷೆಯೋ ಎಂದೆನಿಸುವಂತಹಾ ಭಾವ.
ನ್ಯಾಸ : ಸದಾಶಿವ ಹಾಗೂ ಗಿರಿಜಾರ ಮನೆಗೆ ಆ ಊರಿಗೆ ಮತ್ತೆ ನೆಲೆಸಲು ಬಂದ ಶಿವರಾಮ್ ಹಾಗೂ ವನಜಾಕ್ಷಿಯವರ ಪರಿಚಯವಾಗಿದ್ದು ಹೂವಿನ ಮಹಾಲಕ್ಷ್ಮಿಯಿಂದ. ಶಿವರಾಂರವರ ತಾತನ ಕಾಲದ ಮನೆ ಪಾಳು ಬಿದ್ದದ್ದನ್ನು ಈಗ ರಿಪೇರಿ ಮಾಡಿಸಿಕೊಂಡು ಅಲ್ಲಿಗೆ ಬಂದಿದ್ದರು. ಈಗ ಅವರ ಮನೆಗೆ ವನಜಾಕ್ಷಿ ಬಂದದ್ದು.. ಮುಂದಿನ ವಾರದ ಗೌರಿ-ಗಣೇಶನ ಹಬ್ಬದ ಕುರಿತಾಗಿ ಕೇಳಲು. ಅವರ ಅಜ್ಜಿ-ತಾತನ ಕಾಲದಲ್ಲಿದ್ದ ಕಲಶ ಇಟ್ಟು ಗೌರಿ ಕೂರಿಸೋ ಪದ್ಧತಿ ಕುರಿತಾಗಿ ವಿಚಾರಿಸಲು. ಆದರೆ, ಆಕೆಗೆ ತಿಳಿಯದ ರಹಸ್ಯವೊಂದಿತ್ತು. ಬಾಯಿಂದ ಬಾಯಿಗೆ ಹರಿದು ಬಂದಿದ್ದ ಆ ಕಥೆ ಕೇಳಿದ್ದ ಗಿರಿಜಾಳಿಗೆ ಅದರ ಕೊಂಡಿ ಸಿಕ್ಕಿತ್ತು. ಅಂತೂ ನ್ಯಾಸವಾಗಿ ಇವರ ಮನೆಗೆ ಬಂದಿದ್ದ ಗೌರಮ್ಮನನ್ನು ಅವರ ಮನೆಗೆ ಕಳಿಸಿಕೊಟ್ಟಳಾದರೂ.. ಆ ರಹಸ್ಯ ಬಯಲಾಗಲಿಲ್ಲವೇ..??ಈ ಕಥೆಯಲ್ಲಿ ದೇವರು ಹಾಗೂ ಮನುಷ್ಯರ ನಡುವೆ ನಂಬಿಕೆ ಹಾಗೂ ನಡವಳಿಕೆಗಳಿಗೂ ಸಿಗುವ ಕೊಂಡಿ ದೇವರ ಹಿರಿಮೆಯನ್ನು ನೆನಪಿಸುತ್ತದೆ.
ಪೋಗದಿರಲೋ ಬಾಗಿಲಿಂದಾಚೆಗೆ : ರತ್ನಮ್ಮನವರು ಮಗಳು ಶುಭಳಿಗೆ ಮದುವೆಯ ಪ್ರಯತ್ನ ಮಾಡುತ್ತಿದ್ದುನ್ನು ಕಂಡು ರಂಗನಾಥನಿಗೆ ಅಸಹನೆ ಶುರುವಾಗಿತ್ತು. ಆತನ ವಯಸ್ಸು ಕಡಿಮೆಯೇನಿರಲಿಲ್ಲ. ಶುಭಾಳ ಗಂಡ ತೀರಿ ಹೋದ ನಂತರ ಮಕ್ಕಳಿಲ್ಲದ್ದರಿಂದ ಆಕೆ ತಾಯಿಯ ಮನೆಯಲ್ಲಿ ಕೆಲಸಕ್ಕೆ ಹೋಗುತ್ತಲೇ ನೆಲೆಯಾಗಿದ್ದಳು. ಆದರೆ, ಮುಂದಿನ ಜೀವನ..??
ಒಬ್ಬಳೇ ಮಗಳಿದ್ದಾಗಿಗೂ.. ಮನೆಯಲ್ಲಿ ಗಂಡುಮಗನಿದ್ದಾಗ ನೆಲೆಸುವ ಮಗಳಿಗೂ ವ್ಯತ್ಯಾಸವಿರುತ್ತದೆ. ಮೊದಮೊದಲಿಗಿದ್ದ ಮಮತೆ ದಿನೇದಿನೇ ಕರ್ತವ್ಯಭಾರದ ನೆಪದಲ್ಲಿ ಕುಸಿಯುತ್ತಾ ಹೋಗುತ್ತದೆ. ಅಂತಹದ್ದೇ ಎಳೆಯ ಕಥೆ. ಜಗಳವಾಡಿಕೊಂಡು ಹೋದ ಮಗನನ್ನು ಕಾಯುತ್ತಾ ಕುಳಿತ ಅಮ್ಮ. ತಮ್ಮನ ಕೆಲ ಗುಟ್ಟುಗಳು ತಿಳಿದ ಅಕ್ಕ. ಆ ಸಮಯದಲ್ಲಿ ಅದೆಲ್ಲವನ್ನು ಬಿಚ್ಚಿಟ್ಟೋ.. ಅದಕ್ಕೆ ಪರಿಹಾರವಾಗಿ ಏನನ್ನೋ ಮಾಡಲಾಗದ ಪರಿಸ್ಥಿತಿಯ ತಲ್ಲಣ ಇಲ್ಲಿದೆ.
ಮುತ್ತಿನೋಲೆ : ಪಾತಜ್ಜಿ ತಮ್ಮ ತಿರುಪು ಮುರಿದು ಹೋದ ಮುತ್ತಿನ ಓಲೆಯನ್ನು ರಿಪೇರಿ ಮಾಡಿಸಿಕೊಳ್ಳಲು ಒಂದೇ ಸಮ ವರಾತ ತೆಗೆಯುತ್ತಿತ್ತು. ಸತೀಶನ ಅಜ್ಜಿ ಎಂದು ಮೊದಮೊದಲು ಸುಚಿತ್ರಾಳೇ ಅವರ ಸೇವೆಗೆ ನಿಂತಲಾದರೂ.. ಒಂದೆರಡು ತಿಂಗಳಲ್ಲಿ ಹೈರಾಣದ ನಂತರ ನರ್ಸ್ ಅನ್ನು ನೇಮಿಸಿಕೊಂಡಾಗಿತ್ತು. ತನ್ನ ಕಾಲದಲ್ಲಿ ಎಲ್ಲರಿಗೂ ಸಾಕಷ್ಟು ಮಾಡಿದ್ದಕ್ಕೆ ವಯಸ್ಸಾಗಿ ಕಾಲ್ಮುರಿದುಕೊಂಡು ಮೊಮ್ಮಗನ ಮನೆಯಲ್ಲಿದ್ದಾಗ ಎಲ್ಲೆಲ್ಲೋ ಇದ್ದ ನೆಂಟರಿಷ್ಟರೆಲ್ಲಾ ಹುಡುಕಿ ಬರಲು ಶುರುವಾಗಿದ್ದರು. ಅವರ ಉಪಚಾರವೂ ಸುಚಿತ್ರಾಳ ಮೇಲೆಯೇ ಬಿದ್ದಿತ್ತು. ಆ ಸಂದರ್ಭದಲ್ಲಿಯೇ ಓಲೆಯ ವಿಚಾರ ಬಂದವರೆಲ್ಲಾ ಹೇಳುತ್ತಿದ್ದುದರಿಂದ ಅಲ್ಲದೇ ಅದನ್ನು ರಿಪೇರಿ ಮಾಡಿಸಲು ಸಾಧ್ಯವಿಲ್ಲದರಿಂದ.. ಅದೇ ರೀತಿಯ, ಅದೇ ಅಳತೆಯ ಹೊಸ ಓಲೆಯನ್ನು ಮಾಡಿಸಿ ತಂದಳಾದರೂ.. ಪಾತಜ್ಜಿ ಅದನ್ನು ಧರಿಸಲಿಲ್ಲ. ಅದರ ಮೇಲೆ ಅವರಿಗೆ ಮೋಹವಿರಲಿಲ್ಲವೆಂದಲ್ಲ. ಆದರೆ, ಅವರು ಅಷ್ಟು ಜತನವಾಗಿ ನೋಡಿಕೊಂಡ ಓಲೆಯ ಕತೆಯೇನು..??
ಬದುಕಿನ ಹಲವು ಮಗ್ಗುಲುಗಳ ಪರಿಚಯ ಮಾಡಿಸಿರುವ ಈ ಕಥೆಗಳು ಮನಸ್ಸಿನ ಭಾವವನ್ನು, ಆ ಕ್ಷಣದ ಪ್ರತಿಕ್ರಿಯೆಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಡುತ್ತವೆ. ನಿರೂಪಣೆ ಆಕರ್ಷಕವಾಗಿ ಕೂಡಿದ್ದು ಜಗತ್ತಿನ ಕಣ್ಣಿಗೆ ಕಾಣುವ ಕಥೆಯ ಜೊತೆಗೆ ಪಾತ್ರಗಳ ಅಂತರಂಗವನ್ನು ಹೊಕ್ಕು ಬಿಡಿಸಿಟ್ಟಿರುವ ಪರಿ ಇಷ್ಟವಾಯಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ