ಬುಧವಾರ, ಏಪ್ರಿಲ್ 15, 2026

ಬಂದಾ ಬಂದಾ ಬಕಾಸುರ (ಪುಸ್ತಕ ಯಾನ - 196)


ಪುಸ್ತಕದ ಶೀರ್ಷಿಕೆ : ಬಂದಾ ಬಂದಾ ಬಕಾಸುರ

ಲೇಖಕರು : ಸು. ರುದ್ರಮೂರ್ತಿ ಶಾಸ್ತ್ರಿ

ಪ್ರಕಾಶಕರು : ಹರ್ಷಿತಾ ಪ್ರಕಾಶನ

ಪ್ರಥಮ ಮುದ್ರಣ : 2001

ಪುಟಗಳು : 168

ಬೆಲೆ : 95 ರೂ.

ಲಭ್ಯತೆ : ಹಳೆಯ ಪುಸ್ತಕದ ಅಂಗಡಿಗಳು


ಐತಿಹಾಸಿಕ ಕಾದಂಬರಿಗಳಿಗೆಂದೇ ಹೆಸರಾಗಿರುವ ಸು. ರುದ್ರಮೂರ್ತಿ ಶಾಸ್ತ್ರಿಯವರ ಈ ಕಾದಂಬರಿ ಶೀರ್ಷಿಕೆ ಹಾಗೂ ಮುಖಪುಟದಿಂದ ಇದು ವೈಜ್ಞಾನಿಕ ವಿಚಾರಕ್ಕೆ ಸಂಬಂಧಿಸಿದ ಕಾದಂಬರಿ ಇರಬಹುದಾ..?? ಎಂದೇ ತೆರೆದದ್ದು. ಆದರೆ, ಇಲ್ಲಿನ ಕಥೆ ವಿಭಿನ್ನವಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಇದು ನಾನು ಓದಿದ ಇವರ ಮೊದಲ ಕಾದಂಬರಿಯೂ ಹೌದು. 


ಪುಟ್ಟಳ್ಳಿಯ ಚೆನ್ನಮ್ಮನ ಮಗ ಗುಂಡನಿಗೆ ಹಸಿವೆಂದರೆ ಹಸಿವು. ವಿಪರೀತ ಹಸಿವು. ಆಕೆ ತನ್ನ ಮಗನಿಗೆ ಊಟ, ತಿಂಡಿ ಪೂರೈಕೆ ಮಾಡುವುದು ಬಹಳವೇ ಕಷ್ಟವಿತ್ತು. ಹಾಗಾಗಿ ಮುದ್ದೆಯೇ ಅವನ ಖಾಯಂ ಆಹಾರದಂತಾಗಿತ್ತು. ಅಲ್ಲದೇ ಆತ ಬೇರೆ ಯಾವ ಕೆಲಸವನ್ನೂ ಮಾಡದೆ, ಕೇವಲ ಊಟ-ತಿಂಡಿ ತಿಂದು, ನಿದ್ದೆ ಮಾಡುತ್ತಾ.. ಸುಮ್ಮನೆ ಅಡ್ಡಾಡುತ್ತಾ ಕಾಲ ಕಳೆಯುತ್ತಿದ್ದದ್ದು ಅವಳಿಗೆ ಸಿಟ್ಟು ತರಿಸುತ್ತಿತ್ತು. ಊರವರೆಲ್ಲರಿಗೂ ಇದು ಗೊತ್ತಿರುವ ಸಾಮಾನ್ಯ ವಿಚಾರದಂತಾಗಿತ್ತು. ಅಲ್ಲದೇ ಇಂತಹಾ ತಿಂಡಿ ಬೇಕೆಂದು ಆಗಾಗ ಹಠ ಮಾಡುವುದು ಹಾಗೂ ಚೆನ್ನಮ್ಮನೇ ಹೋಗಿ ಆತನನ್ನು ಒಲಿಸಿ ಕರೆದುಕೊಂಡು ಬರುವುದು.. ಆಗಾಗ ನಡೆದು ಊರಿನವರಿಗೆ ಮನೋರಂಜನೆಯ ಸರಕಾಗಿತ್ತು. ಊರಿಗೆ ಹೊಸದಾಗಿ ಬಂದು ಹೋಟೆಲ್ ಇಟ್ಟಿದ್ದ ರುದ್ರಣ್ಣನಿಗೆ ಇದಾವುದೂ ಅರಿವಿರಲಿಲ್ಲ. ಹಾಗಾಗಿ, ಆತನ ಒಂದು ದಿನದ ತಿಂಡಿಗೆ ತಿನ್ನುವಷ್ಟು ದೋಸೆಯನ್ನು ಪೂರೈಸುವುದಾಗಿ ಹೇಳಿ ತನಗೆ ನಷ್ಟ ಮಾಡಿಕೊಂಡಿದ್ದಲ್ಲದೇ.. ತಿನ್ನುವ ವಿಚಾರಕ್ಕೆ ಪಂದ್ಯ ಕಟ್ಟಿಯೂ ನಷ್ಟ ಮಾಡಿಕೊಂಡಿದ್ದ. 


ಚೆನ್ನಮ್ಮ ಗಂಡನನ್ನು ಕಳೆದುಕೊಂಡಿದ್ದ ಹೆಂಗಸು, ಮಗನು ಕೆಲಸ ಮಾಡದ್ದರಿಂದ.. ತನಗೂ ಕೆಲಸ ಮಾಡುವ ಶಕ್ತಿ ಇಲ್ಲದಿರುವುದರಿಂದ ಸಿದ್ದಪ್ಪನ ಪಾಲಿಗೆ ತನ್ನ ತೋಟವನ್ನು ಕೊಟ್ಟಿದ್ದರು. ಅದರಿಂದ ಬರುವ ಒಂದಷ್ಟು ರಾಗಿ,ತೊಗರಿ, ಅವರೆ ಇತ್ಯಾದಿಗಳಿಂದ ವರ್ಷಪೂರ್ತಿ ಜೀವನ ಸಾಗಬೇಕಿತ್ತು. ಸಿದ್ದಪ್ಪ ಊರಿನ ಗೌಡನಲ್ಲದಿದ್ದರೂ.. ಗೌರವಸ್ಥ ಹಿರಿಯ, ಅನುಕೂಲಸ್ತ. ಆತನಿಗೆ ಹೆಂಡತಿ ಇರಲಿಲ್ಲ. ಇದ್ದದ್ದು ಒಬ್ಬಳೇ ಮಗಳು ಗೌರಿ. ಚೆನ್ನಮ್ಮ ಆತನ ದೂರದ ಬಂಧು ಕೂಡಾ.


ಗೌರಿಗೆ ಗುಂಡನ ಮೇಲೆ ಒಂದು ರೀತಿಯ ಮಮಕಾರ. ಚೆನ್ನಮ್ಮನಿಗೂ ಅವಳನ್ನು ಕಂಡರೆ ಅಕ್ಕರೆ. ಇಬ್ಬರೂ ಗುಂಡನನ್ನು ತಿದ್ದಲು ಆಗಾಗ ಬಹಳಷ್ಟು ಪ್ರಯತ್ನ ಮಾಡಿ, ಮಂತ್ರ-ತಂತ್ರಗಳನ್ನೂ ಮಾಡಿಯಾಗಿತ್ತು. ಈಗ ಸಿದ್ದಪ್ಪನಿಗೆ ಹೇಳಿ, ಗುಂಡನನ್ನು ಆತನ ಜೊತೆ ಮಾಡಿ ಬೆಂಗಳೂರಿನ ಡಾಕ್ಟರ್ ಬಳಿ ಕಳುಹಿಸಿದರು. ಅಲ್ಲಿಯಾದರೂ ಗುಂಡನ ಹಸಿವು ಕಡಿಮೆಯಾಗಬಹುದೆಂದು. ಆದರೆ, ಅಲ್ಲಿಯೂ ಏನು ಪ್ರಯೋಜನವಾಗಲಿಲ್ಲ. ಅವರು ಹೇಳಿದ ಚಿಕಿತ್ಸೆಗಾಗಿ ಬಹಳ ಹಣ ಬೇಕಾಗಿತ್ತು. ಅಷ್ಟು ಅನುಕೂಲವಿಲ್ಲದ್ದರಿಂದ.. ಕೊನೆಗೆ ಚೆನ್ನಮ್ಮ ಮಾಡಿಕೊಡುತ್ತಿದ್ದ ಮುದ್ದೆಯೇ ಗತಿಯಾಗಿತ್ತು.


ಮುಗ್ಧನಂತಿದ್ದ ಗುಂಡ.. ಊರಿನಲ್ಲಿದ್ದ ಅವರ ಓರಿಗೆವರಿಗಿಂತ ಒಳ್ಳೆಯವನು. ರಂಗಪ್ಪ, ಚಂದ್ರಪ್ಪ ಹಾಗೂ ಶ್ರೀನಿವಾಸರು ಆತನ ವಯಸ್ಸಿನವರೇ.. ಆದರೂ ಪಡ್ಡೆಗಳಂತೆ ತಿರುಗುತ್ತಿದ್ದರು. ಗುಂಡನಿಂದ ತಮಗೆ ಬೇಕಾದ ಕೆಲಸವನ್ನು ಉಪಾಯವಾಗಿ ಊಟ-ತಿಂಡಿಯ ಆಸೆ ಹುಟ್ಟಿಸಿ ಮಾಡಿಸಿಕೊಳ್ಳುತ್ತಿದ್ದರು. 


ಚೆನ್ನಮ್ಮ ಕಾಯಿಲೆ ಬಿದ್ದು ಮಲಗಿರುವ ಸಂದರ್ಭದಲ್ಲಿ ಹಾಗೂ ಅಂದೇ ಗೌರಿಯ ಬುದ್ಧಿಮಾತುಗಳನ್ನು ಕೇಳಿದ್ದ ಗುಂಡನಿಗೆ ಕೊಂಚ ಜ್ಞಾನೋದಯವಾಗಿಮ್ಮ್ಬ್ತಾನು ದುಡಿಯಬೇಕೆಂಬ ಬುದ್ಧಿ ಹುಟ್ಟಿದ ದಿನವೇ ಈ ಮೂವರೂ ಊರಿನ ದೇವರ ಒಡವೆ ಕಳ್ಳತನ ಮಾಡಲು ನಿಶ್ಚಯಿಸಿ, ಗುಂಡನಿಗೆ ಬೇರೆ ರೀತಿ ಹೇಳಿ ಯಾಮಾರಿಸಿ ಆತನ ಮುಗ್ಧತೆಯನ್ನು ಬಳಸಿಕೊಂಡು, ಒಡವೆ ತರಿಸಿ ಆತನನ್ನು ಕಳ್ಳನನ್ನಾಗಿಸಿ ತಾವೆಲ್ಲರೂ ತಪ್ಪಿಸಿಕೊಂಡರು. ಅಮ್ಮನೂ ಮಗನನ್ನು ನಂಬಲಿಲ್ಲ. ಅದೇ ಸಂದರ್ಭದಲ್ಲಿ ಗೌರಿ ಆತನ ಪಾಲಿನ ದೇವರಂತೆ ಬಂದು ಕಟ್ಟು ಬಿಚ್ಚಿ.. ನಾಳೆ ಪೋಲೀಸ್ ಬರುವ ಹೊತ್ತಿಗೆ ಎಲ್ಲಿಯಾದರೂ ತಪ್ಪಿಸಿಕೋ ಎಂದು ಕಳುಹಿಸಿದಾಗ ಆತ ಹೋಗಿದ್ದು ಪಕ್ಕದಲ್ಲಿದ್ದ ಕಾಡಿಗೆ. 


ಕಾಡಿಗೆ ಹೋದ ದಿನ ನಡೆದ ಘಟನೆಯೊಂದು ಆತನನ್ನು ಬಕಾಸುರನ ಜೊತೆಯಾಗಿಸಿತು. ಹೌದು, ಬಕಾಸುರನೆಂದರೆ ಆತನೇ.. ಏಕಚಕ್ರ ನಗರದಲ್ಲಿದ್ದಾಗ ಭೀಮನು ಕೊಂದಿದ್ದ ಬಕಾಸುರನೇ.. ಪಾಂಡವರ ಕಾಲದಲ್ಲಿ ರಾಕ್ಷಸನಾಗಿದ್ದವನು ಅಂದು ಗುಂಡನ ಪಾಲಿಗೆ ದೇವತೆಯಂತೆ ಭಾಸವಾಗಿದ್ದ. ಕಲ್ಲಿನ ರೂಪದಲ್ಲಿದ್ದ ಆತನಿಗೆ ಗುಂಡನಿಂದ ಬಿಡುಗಡೆ ಸಿಕ್ಕಿತ್ತು. ಆತ ಗುಂಡನ ಜೊತೆ ಊರಿಗೆ ಬಂದ ನಂತರ ಗುಂಡನ ಅದೃಷ್ಟವೇ ಬದಲಾವಣೆಯಾಯಿತು. ದ್ವಾಪರದ ಬಕಾಸುರ ಕಲಿಯುಗದ ಬಕಾಸುರನಿಗೆ ಜೋಡಿಯಾದ. ಗುಂಡ ದೇವರ ಒಡವೆ ಎಲ್ಲವೂ ಸಿಕ್ಕಿ, ಕಳ್ಳತನದಿಂದ ಮುಕ್ತನಾಗಬೇಕಿತ್ತು. ಅದು ಸಾಧ್ಯವಾಯಿತೇ..?? 


ಮುಗ್ಧನಾಗಿದ್ದ ಗುಂಡ ಜೀವನದಲ್ಲಿ ಅನುಭವವನ್ನು ಪಡೆದುಕೊಂಡು ಹೊಸ ಮನುಷ್ಯನಾದದ್ದು ಹೇಗೆ..?? ಬಕಾಸುರನ ಅಷ್ಟು ರಾಕ್ಷಸ ಹಸಿವು ಈಗಲೂ ಹಾಗೆಯೇ ಇತ್ತೇ..?? ಗುಂಡನ ಹಸಿವು ಹಾಗೂ ಹೊಟ್ಟೆಬಾಕತನ ಏನಾಯ್ತು..?? ಬಕಾಸುರನ ಕುರಿತು ಮತ್ತಾರಿಗಾದರೂ ತಿಳಿಯಿತೇ..?? ಅಂದಿನ ಬಕಾಸುರನನ್ನು ಕಲಿಯುಗದಲ್ಲಿ ಗುಂಡ ಕಂಡ ಪರಿ ಹೇಗೆ..?? ಗುಂಡ ಹಾಗೂ ಗೌರಿಯರ ವಿವಾಹವಾಯಿತೇ..?? ಆ ಮೂವರಿಗೂ ತಕ್ಕ ಶಾಸ್ತಿಗಾಗಿ, ಕಳ್ಳತನ ಬಯಲಾಯಿತೇ..?? ಗುಂಡನ ಜೊತೆಗೆ ಬಂದ ಬಕಾಸುರ ಶಾಶ್ವತವಾಗಿ ಇಲ್ಲಿಯೇ ಉಳಿದನೇ..?? 


ಇಂದಿನ ಕಾಲದ ಕಥೆಗೆ, ಅತಿಮಾನುಷ ಶಕ್ತಿಯೊಂದರ ಜೊತೆ ಮಾಡಿ ಬರೆದಿರುವ ಕಾಲ್ಪನಿಕ ಕಥೆ ಇದು. ಇದನ್ನು ಓದುವಾಗ ಅಲ್ಲಾವುದ್ದೀನ್ ಹಾಗೂ ಜೀನಿಯ ಕಥೆ ನೆನಪಾಯಿತು. 


ಏಕಚಕ್ರ ನಗರದಲ್ಲಿದ್ದಾಗ ಭೀಮ ಬಕಾಸುರನನ್ನು ಕೊಂದನಾದರೂ.. ರಾಕ್ಷಸನಿಗೆ ಶಾಪವೇನಾದರೂ ಇತ್ತೇ.. ಆತನ ಮರುಜನ್ಮಕ್ಕೆ ಕಾರಣವೇನು ? ಶಿಲ್ಪಿ ಅಗ್ನಿದತ್ತನಿಗೂ ಈ ಪ್ರಸಂಗಕ್ಕೂ ಇರುವ ಸಂಬಂಧವೇನು..?? ತಿಳಿಯಲು ಓದಿ ಬಂದಾ ಬಂದಾ ಬಕಾಸುರ.


ದ್ವಾಪರ ಯುಗದ ಕಥೆಯನ್ನು ಇಲ್ಲಿಗೆ ಲಿಂಕ್ ಮಾಡಿರುವ ರೀತಿ ಇಷ್ಟವಾಯಿತು. ಅಲ್ಲದೆ, ಇಲ್ಲಿ ಕಾದಂಬರಿಯನ್ನು ಕಟ್ಟಿಕೊಟ್ಟಿರುವ ರೀತಿ  ಅಲ್ಲಲ್ಲಿ ಹಾಸ್ಯದ ಶೈಲಿಯಿಂದ ಓದುಗರನ್ನು ನಗಿಸುತ್ತಾ.. ಗಂಭೀರ ವಿಷಯದ ಕಡೆ ಬಂದಾಗ ಗಂಭೀರವಾಗಿಯೂ, ಬುದ್ಧಿವಂತಿಕೆಯಿಂದ ಆಲೋಚಿಸುವಂತೆಯೂ ಮಾಡುವಂತಹಾ ಸರಾಗವಾಗಿ ಓದಿಸಿಕೊಂಡು ಹೋಗುವ ಕಾದಂಬರಿ. ಇವರ ಬರಹದ ಶೈಲಿ ನನಗೆ ಪರಿಚಿತವಲ್ಲದರಿಂದ ಐತಿಹಾಸಿಕ ಕಾದಂಬರಿಗಳಲ್ಲಿ ಇವರ ಬರಹದ ಶೈಲಿಯನ್ನು ಅರಿಯಬೇಕಿದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ