ಪುಸ್ತಕದ ಶೀರ್ಷಿಕೆ : ಚಂದ್ರೋದಯ
ಲೇಖಕರು : ಹೆಚ್. ಜಿ. ರಾಧಾದೇವಿ
ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ
ಪ್ರಥಮ ಮುದ್ರಣ : 1999
ಎರಡನೇ ಮುದ್ರಣ : 2020 (ನನ್ನ ಓದಿಗೆ ಸಿಕ್ಕಿದ್ದು)
ಹೆಣ್ಣುಮಕ್ಕಳ ಬಾಳಲ್ಲಿ ಉದ್ಯೋಗ, ವಿವಾಹ ಯಾವುದೂ ಇಲ್ಲದೆ, ಅವಕಾಶಗಳೂ ಬಾರದೇ ಕತ್ತಲು ತುಂಬಿ ತುಳುಕುತ್ತಿರುವಾಗ ಚಂದ್ರೋದಯದಂತೆ ಅವಕಾಶವೇ ಅವರನ್ನು ಅರಸಿ ಬಂದರೆ..! ಅಂತಹದ್ದೇ ಸಂದರ್ಭದಲ್ಲಿ ತೊಳಲುತ್ತಿದ್ದ ತಾರಾಳ ಬದುಕಲ್ಲಿ ಚಂದ್ರೋದಯವಾದ ಕಥೆ ಇಲ್ಲಿದೆ.
ತಾರಾಳ ಓದಿಗೆ ತಕ್ಕ ಉದ್ಯೋಗ ಸಿಗುತ್ತಿತ್ತಾದರೂ.. ಆಕೆ ಬಹಳಷ್ಟು ಪ್ರಯತ್ನಗಳನ್ನು ಮಾಡಿ ಸೋತು, ದೂರದಾಸೆಯಿಂದ ಫೈನಾನ್ಸ್ ಕಂಪೆನಿಯ ಸಂದರ್ಶನಕ್ಕೆ ಬಂದಿದ್ದಳು. ಅಲ್ಲಿ ಕೇಳಿದ್ದ ಕೆಲ ಪುಕಾರುಗಳಿಂದ ತನಗೆ ಈ ಉದ್ಯೋಗ ಸಿಗುವುದಿಲ್ಲವೆಂಬ ಖಾತ್ರಿಯಾಗಿದ್ದವಳು.. ಸಂದರ್ಶನದ ಕೋಣೆ ಹೊಕ್ಕಾಗ... ಅಲ್ಲಿದ್ದವರೆಲ್ಲರಿಗೂ ಇಂಟರ್ವ್ಯೂನಲ್ಲಿ ಗೆಲ್ಲಬೇಕಾದರೆ ಛಾತಿ, ಆತ್ಮವಿಶ್ವಾಸ ಮುಖ್ಯವಲ್ಲ ಸರ್, ಹಣ ಇನ್ಫ್ಲುಯೆನ್ಸ್ ಎಂದು ತನ್ನ ಮನದಾಳದ ಮಾತುಗಳನ್ನು ಹೊರಹಾಕಿದಳಾದರೂ.. ಅಲ್ಲಿ ಸಿನಿಮಾದಂತೆ ಪವಾಡವೇನು ನಡೆದಿರಲಿಲ್ಲ. ಬದಲಾಗಿ ಅಲ್ಲಿ ಗೆಟ್ ಔಟ್ ಎನ್ನುವ ಉತ್ತರವೇ ಸಿಕ್ಕಿತ್ತು.
ತಾರಾಳ ತಂದೆ ಮೋಹನರಾಯರು ಖಾಸಗಿ ಶಾಲೆಯಿಂದ ನಿವೃತ್ತರಾದಾಗ ಹಣ ಬಂದಿತ್ತಾದರೂ.. ಐವರು ಮಕ್ಕಳ ತಾಯಿಯಾದ ಕಮಲಮ್ಮನಿಗೆ ಇರುವ ಹಣ ಹೆಣ್ಣುಮಕ್ಕಳಿಗೆ ಖರ್ಚು ಮಾಡಿ, ಗಂಡುಮಕ್ಕಳಿಗೆ ಚಿಪ್ಪು ಕೊಡಲೇ ಎನ್ನುವ ಭಾವನೆಯಿತ್ತು.
ತನ್ನ ತಂಗಿಗೆ ಸಹಾಯಕಳಾಗಿ ಹೋಗಿ ಅಲ್ಲಿದ್ದರೆ ಮದುವೆಗೆ ಹಣ ಕೊಡುತ್ತಾಳೆ. ನಿನ್ನ ಮದುವೆಯಾಗುತ್ತದೆ ಎಂದ ತಾಯಿಯ ಆಮಿಷಕ್ಕೆ ಒಪ್ಪದ ತಾರಾ ಓದಿನಲ್ಲಿ ಮುಂದುವರೆಯುತ್ತಿದ್ದಳು. ಅವಳ ಬದಲಿಗೆ ಆಕೆಯ ತಂಗಿ ಚಂದ್ರಿಕಾ ಅಲ್ಲಿ ಸೇರಿದ್ದಳು. ರೂಪದಲ್ಲಿ ಚೆನ್ನಾಗಿದ್ದ ಮತ್ತೊಬ್ಬಳು ತಂಗಿ ನಂದಿನಿಯನ್ನು ಅವರ ಮಾವನ ಮಗನೇ ಮೆಚ್ಚಿಕೊಂಡಿದ್ದ. ಇನ್ನಿಬ್ಬರು ಗಂಡು ಮಕ್ಕಳು. ತಮ್ಮಂದಿರು ತಾರಾಳ ಪರವಾಗಿಯೂ ಇರಲಿಲ್ಲ.
ತಾರಾಳ ಮದುವೆಗೆ ಹಣ ಬೇಕಾಗಿತ್ತು. ಆಕೆ, ಓದಿದ್ದರಿಂದ ಕೆಲಸಕ್ಕೆ ಸೇರಿ ಅದನ್ನು ಸಂಪಾದಿಸಬೇಕಾಗಿತ್ತು. ಹೀಗಾಗಿ ಎಲ್ಲೆಲ್ಲಿ ಕೆಲಸವಿದೆ ಎಂದು ಕಂಡರೂ.. ಅಲ್ಲೆಲ್ಲಾ ಅರ್ಜಿ ಹಾಕುತ್ತಿದ್ದರು. ಆದರೆ, ಕೆಲಸ ಮಾತ್ರ ಸಿಕ್ಕಿರಲಿಲ್ಲ. ಆಕೆಯ ತಾಯಿ ಆಗಾಗ ರಸಕಸಿ ಮಾಡುವುದೂ ಇತ್ತು.
ಅಂದು ಆಕೆ ಜಗಳವಾಡಿ ಬಂದಿದ್ದ ಇಂಟರ್ವ್ಯೂನಲ್ಲಿ ಕುಳಿತಿದ್ದ ಒಬ್ಬರು ಆ ಸಂಸ್ಥೆಯ ಪಾಲುದಾರರು. ಆಕೆಯನ್ನು ಬಸ್ ನಿಲ್ದಾಣದಲ್ಲಿ ಕಂಡು, ತನ್ನ ಮನೆಗೆ ಕರೆತಂದು.. ಅಲ್ಲಿ ಮತ್ತೊಂದು ಕೆಲಸಕ್ಕಾಗಿ ಆಫರ್ ನೀಡಿದರು. ಒಪ್ಪಲು ಬಲವಂತವೇನೂ ಇರಲಿಲ್ಲ. ಆತನದ್ದೇ ಒಂದು ಕಂಪನಿ ಇತ್ತಾದರೂ ಸದ್ಯಕ್ಕೆ ಕೆಲಸ ಖಾಲಿ ಇರಲಿಲ್ಲ. ಹಾಗೆ ಆಕೆಗೆ ಕೆಲಸ ಕೊಟ್ಟವನೇ ಅರವಿಂದ. ಆತನ ಪತ್ನಿ ಚಂದ್ರಕಲಾ ರಾಡ್ರಿಗ್ಸ್ ಸಂಸ್ಥೆಯಲ್ಲಿ ಶಿಕ್ಷಕಿಯಾಗಿದ್ದಳು.
ಆ ಮನೆಯಲ್ಲಿ ಹೌಸ್ ಕೀಪರ್ ಅಥವಾ ಆತನ ಎರಡು ಮಕ್ಕಳ ಗವರ್ನೆಸ್ ಆಗಿ ಇರುವಂತೆ ಕೇಳಿದ್ದ. ಅಲ್ಲಿ ಹಿಂದೆ ಇದ್ದ ಔಟ್ ಹೌಸ್ ನಲ್ಲಿ ಮುನಿಯಪ್ಪ ಹಾಗೂ ಆತನ ಸಂಸಾರ ವಾಸವಾಗಿದ್ದರು. ಮನೆಯ ಕೆಲಸವೇನೂ ಇರದಿದ್ದರೂ.. ಅಡುಗೆ ಕೆಲಸ ಹಾಗೂ ಮಕ್ಕಳನ್ನು ನೋಡಿಕೊಳ್ಳುವುದು, ಓದಿಸುವುದು ತಾರಾಳ ಕೆಲಸವಾಗಿತ್ತು.
ತನ್ನ ಪ್ರತಿಭೆಗೆ ತಕ್ಕ ಕೆಲಸ ಸಿಗದಾಗ, ಸಂಬಳ ನಿರೀಕ್ಷಿಸಿದಷ್ಟೇ ಇದ್ದುದರಿಂದ ಯಾವ ಕೆಲಸವಾದರೂ ಸರಿ ಎಂದು ಒಪ್ಪಿದ್ದಳು. ಅದುವರೆಗೂ ಆತನ ತಂದೆಯ ದೊಡ್ಡಪ್ಪನ ಮಗಳು ರಾಜಮ್ಮ ಅನ್ನುವರು ಆ ಕೆಲಸವನ್ನು ಮಾಡುತ್ತಿದ್ದರು. ಆದರೆ, ಆಕೆ ಏನೇನೋ ಕಾರಣ ಹೇಳಿ ಆತನಿಂದ ಹೆಚ್ಚು ಹಣ ಕೀಳಲು, ಹೆಚ್ಚು ಸೌಲಭ್ಯ ಪಡೆಯಲು ಹೊಂಚು ಹಾಕಿದ್ದರಿಂದ ಆತ ಈ ನಿರ್ಧಾರಕ್ಕೆ ಬಂದಿದ್ದ.
ಆ ಮನೆಯಲ್ಲಿ ಬೇರೇನಿತ್ತು, ಏನಿಲ್ಲ ಎಂಬುದನ್ನು ಕೆದಕಲು ಹೋಗದೆ ತನ್ನ ಕೆಲಸಕ್ಕೆ ಹೊಂದಿಕೊಂಡಳು ತಾರಾ. ಅರವಿಂದ್ ಹಾಗೂ ಚಂದ್ರಕಲಾರ ಮಕ್ಕಳಾದ ರಾಜು ಹಾಗೂ ಪಿಂಕಿಗೆ ಮೊದಲ ದಿನವೇ ತಾರಾ ಇಷ್ಟವಾಗಿದ್ದಳು. ಅಲ್ಲದೇ ಅವಳ ಪಡೆದಿದ್ದ ಶಿಕ್ಷಣ ಮಕ್ಕಳಿಗೆ ಹೇಳಿಕೊಡುವಲ್ಲಿಯೂ ಸಹಕಾರಿಯಾಗಿತ್ತು.
ನಿರಾತಂಕವಾಗಿ ಸಾಗುತ್ತಿದ್ದ ಅವಳ ಈ ಕೆಲಸ ತಾಯಿಗೆ ತಿಳಿದಿರಲಿಲ್ಲ. ಬದಲಾಗಿ,ಆಕೆ ತಾನೊಂದು ಕಂಪನಿಯಲ್ಲಿ ಕೆಲಸ ಮಾಡುತ್ತಾ.. ಗೆಳತಿಯರ ಜೊತೆಗೆ ರೂಮ್ ಮಾಡಿಕೊಂಡು ಇದ್ದೇನೆ ಎಂದು ಹೇಳಿದ್ದಳು. ಆಕೆಯ ತಾಯಿ ಒಮ್ಮೆ ನೋಡಲು ಬಂದಾಗ ಒಂದು ವಾರಕ್ಕೆ ಅರವಿಂದ್ ಕಂಪನಿಯಲ್ಲಿ ಮೋಹಿನಿಯ ಸಹಾಯದಿಂದ ಕೆಲಸ ಮಾಡಿದ್ದಳು.
ಒಮ್ಮೆ ಆಕೆ ಊರಿಗೆ ಹೋಗಿ ಬರುವಷ್ಟರಲ್ಲಿ ಪರಿಸ್ಥಿತಿಯೆಲ್ಲವೂ ಬದಲಾಗಿತ್ತು. ಚಂದ್ರಕಲಾ ಬೆಂಕಿ ಅವಘಡದಿಂದ ತೀರಿಕೊಂಡಿದ್ದರು. ಮೊದಲು ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ರಾಜಮ್ಮನ ಸಂಸಾರ ಬಂದಾಗಿತ್ತು. ತಾರಾಳನ್ನು ಕೆಲಸದಿಂದ ತೆಗೆಯದೇ ತನ್ನ ಕಂಪನಿಯಲ್ಲಿಯೇ ಕೆಲಸ ನೀಡಿದ್ದ ಅರವಿಂದ.
ಅದೇ ಕಂಪನಿಯ ಉದ್ಯೋಗಿಯಾದ ಶ್ರೀನಿವಾಸನಿಂದ ಆಗುತ್ತಿದ್ದ ಕಿರುಕುಳದಿಂದ ತಪ್ಪಿಸಿಕೊಳ್ಳಲು ಅದನ್ನು ಮೇಲಧಿಕಾರಿಗೆ ದೂರು ಸಲ್ಲಿಸಲು ಅರವಿಂದ್ ಬಳಿಗೆ ಹೋದಾಗ ಆತನ ಅಸಹಾಯಕತೆ ಅರ್ಥವಾಗಿತ್ತು. ಆಗ ಆತ ತನ್ನ ಹಾಗೂ ವೈಯಕ್ತಿಕ ಜೀವನದ ಚಿತ್ರಣವನ್ನು ಬಿಡಿಸಿಟ್ಟಿದ್ದ.
ಪ್ರೀತಿಸಿ ಮದುವೆಯಾಗಿದ್ದ ಅರವಿಂದ ಹಾಗೂ ಚಂದ್ರಕಲಾ ಅವರ ಪುಟ್ಟ ಪ್ರೇಮದ ಗೂಡು 'ಚಂದ್ರೋದಯ'ದಲ್ಲಿ ವಾಸವಾಗಿದ್ದರು. ಮಕ್ಕಳಾದ ನಂತರ ಆ ಅನ್ಯೋನ್ಯತೆ ಮೇಲ್ನೋಟಕ್ಕೆ ಕಂಡಂತಿರಲಿಲ್ಲ. ತಾರಾ ಆ ಮನೆಯಲ್ಲಿ ಗಮನಿಸಿದ್ದ ವೈರುಧ್ಯಗಳೇನು..? ತಾರಾಳ ತಾಯಿ ಆಕೆ ಕೆಲಸಕ್ಕೆ ಸೇರಿದ ನಂತರ ನೀಡಿದ ಪ್ರತಿಕ್ರಿಯೆ ಹೇಗಿತ್ತು..?? ಚಂದ್ರಕಲಾ ಸಾವು ಆಕಸ್ಮಿಕವೇ ಅಥವಾ ಉದ್ದೇಶಪೂರ್ವಕವೇ..?? ತಾರಾಳ ಬದುಕಲ್ಲಿ ಚಂದ್ರೋದಾಯವಾಗಿದ್ದು ಹೇಗೆ ಹಾಗೂ ಯಾರಿಂದ..?? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಹೆಚ್. ಜಿ. ರಾಧಾದೇವಿಯವರ 'ಚಂದ್ರೋದಯ' ಕಾದಂಬರಿಯನ್ನು.
ಕೆಲವೊಮ್ಮೆ ಅದೃಷ್ಟಕ್ಕೆ ತಕ್ಕ ಫಲ ಸಿಗದಿದ್ದರೂ.. ತನ್ನ ಪರಿಶ್ರಮ ಹಾಗೂ ಪ್ರೇಮಪೂರ್ವಕ ನಡವಳಿಕೆಯಿಂದ ಒಲಿದು ಬಂದ ಅದೃಷ್ಟಕ್ಕೆ ಉದಾಹರಣೆಯಾಗಿದ್ದಾಳೆ ತಾರಾ. ತಾನು ಒಂದು ತಪ್ಪು ಹೆಜ್ಜೆಯಿಟ್ಟು, ಅದು ತನ್ನ ಸಂಸಾರದ ಮೇಲೆ ಬೀರಿದ ಪರಿಣಾಮ ಎಂತಹದ್ದು ಎಂಬುದನ್ನು ಅರ್ಥ ಮಾಡಿಕೊಂಡು.. ಅದನ್ನು ಸರಿಪಡಿಸಿಕೊಂಡ ಅರವಿಂದ್. ಬದುಕಿನಲ್ಲಿ ತಪ್ಪಾದ ನಂತರವೂ ಹೇಗೆ ತಿದ್ದಿಕೊಳ್ಳಬೇಕು ಎಂಬುದಕ್ಕೆ ಉದಾಹರಣೆ. ಯಾವುದೋ ದ್ವೇಷಕ್ಕೆ ತನ್ನನ್ನೇ ತಾನು ಬದಲಾಯಿಸಿಕೊಂಡ ಹಾಗೂ ದ್ವೇಷಿಸುವ ನೆಪದಲ್ಲಿ ತಾನೇ ಹಿಂಸೆ ಅನುಭವಿಸಿದಳೇನೋ ಚಂದ್ರಕಲಾ ಎನ್ನಿಸಿತು.
ಅನ್ಯಾಯದ ವಿರುದ್ಧ ಸಿಡಿದ ತಾರಾ ಹಾಗೂ ಸ್ವಾವಲಂಬನೆಯನ್ನು ನೆಚ್ಚಿಕೊಂಡು ಪ್ರತಿಭಟಿಸಿದ ತಾರ ನಿಜಕ್ಕೂ ಮಾದರಿ ಎನ್ನಿಸುತ್ತಾಳೆ. ಚಿಕ್ಕ ಚೊಕ್ಕ ಕಾದಂಬರಿಯ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ