ಮಂಗಳವಾರ, ಏಪ್ರಿಲ್ 14, 2026

ಅರ್ಧ ಬಿಸಿಲು ಅರ್ಧ ಮಳೆ (ಪುಸ್ತಕ ಯಾನ - 174)


ಪುಸ್ತಕದ ಶೀರ್ಷಿಕೆ : ಅರ್ಧ ಬಿಸಿಲು ಅರ್ಧ ಮಳೆ

ಲೇಖಕರು : ಸದಾಶಿವ ಸೊರಟೂರು

ಪ್ರಕಾಶಕರು : ವೀರಲೋಕ ಬುಕ್ಸ್

ಪ್ರಥಮ ಮುದ್ರಣ : 2022

ಪುಟಗಳು : 104

ಬೆಲೆ : 120 ರೂ. 


ಸದಾಶಿವ ಸೊರಟೂರು ಅವರು ಹುಟ್ಟಿದ್ದು ಬೆಳೆದಿದ್ದು ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದಲ್ಲಿ. ವೃತ್ತಿಯಲ್ಲಿ ಶಿಕ್ಷಕರು. ಇವರ ಇವರ ಬಿಡಿ ಲೇಖನಗಳು, ಕವಿತೆಗಳು ಹಾಗೂ ಅವಧಿಯಲ್ಲಿ ಕೆಲವು ಕಥೆಗಳನ್ನು ಓದಿದ್ದರೂ ನಾನು ಓದುತ್ತಿರುವ ಇವರ ಪುಸ್ತಕ. ಈ ಕಥಾ ಸಂಕಲನದಲ್ಲಿ ಒಟ್ಟು 10 ಕಥೆಗಳಿವೆ.


ನೀಲಿ : ಕಥೆಗಾರನ ಭಾವನೆಗಳು ಈ ಕಥೆಯಲ್ಲಿ ಮಿಳಿತವಾಗಿವೆ. ಒಂದು ಕಥೆಯ ಪಾತ್ರಗಳು ಹೇಗೆ ಕತೆಗಾರನ ಮನಸ್ಸಿನೊಳಗೆ ಇಳಿದು ಆ ಪಾತ್ರಗಳ ಮೂಲಕ ಕಥೆ ರಚನೆಯಾಗುತ್ತದೆ ಎಂದು ತೋರುತ್ತಲೇ.. ಆ ಜೀವಂತ ಪಾತ್ರಗಳು ಕಥೆಯಲ್ಲಿ ಹುಟ್ಟಿಸಬಹುದಾದ ಭಾವಕ್ಕೂ.. ಮಾಮೂಲಿನಂತೆ ಬದುಕಿರುವ ಬದುಕಿಗೂ ಬಹಳ ವ್ಯತ್ಯಾಸವಿದೆ. ಹಾಗೆ, ನಾಡಪ್ಪ ಕರೆದುಕೊಂಡು ಬಂದಿದ್ದ ನೀಲಿಯ ಕುರಿತಾಗಿ ಇದ್ದ ಊರ ಜನರ ಮಾತುಗಳು, ನೀಲಿಯ ಸಾವಿನಿಂದ ಶುರುವಾದರೂ.. ನೀಲಿ ಕಾಣುವುದೇಗೆ ಎನ್ನುವುದು ಬಿಂಬಿತವಾಗಿದೆ. 'ಇಂದು ನೀಲಿಗೆ ಬಿಡುಗಡೆ. ಆದರೆ, ಅದೇ ವಿಚಾರ ಇಟ್ಟುಕೊಂಡು ಬರೆಯಲು ಕೂತ ನನಗೆ ಪೂರ್ಣ ಸೆರೆ' ಎಂಬ ಉಲ್ಲೇಖ ಕಥೆಗಾರನೊಬ್ಬನಿಗೆ ಹುಟ್ಟಿಸುವ ಭಾವಗಳನ್ನು ಹೇಳುತ್ತಿದೆ. ಹೆಣ್ಣೊಬ್ಬಳ ಸಾವು ಹಾಗೂ ಆಕೆಯ ಘನತೆಗೆ ಕತೆಗೂ, ವಾಸ್ತವಕ್ಕೂ ಇರುವ ವ್ಯತ್ಯಾಸ ಮನಕಲಕದೇ ಇರುವುದಿಲ್ಲ.


ಬಿಸಿಲುಕೋಲು : ಶಾಲೆಯಲ್ಲಿ ಮಕ್ಕಳ ಮನಸ್ಸು ಎಲ್ಲೆಲ್ಲಿಗೆ ಹರಿದಾಡುತ್ತದೆ ಎಂಬುದನ್ನು ಹೇಳುತ್ತಲೇ.. ಪರಸುವಿನ ಹೊಯ್ದಾಟಗಳನ್ನು ತೋರುತ್ತಾರೆ. ಮಕ್ಕಳಿಗೆ ಆಸಕ್ತಿ ಹುಟ್ಟಿಸಬಹುದಾದ ಸಮಾರಂಭಗಳು ಇನ್ನೂ ಅವರ ವಯಸ್ಸಿಗೆ ನಿಲುಕುತ್ತಿಲ್ಲ ಎಂದಾದಾಗ ಮಕ್ಕಳ ಮನಸ್ಸು ಅತ್ತಿತ್ತ ಹರಿಯುತ್ತದೆ. ಅಲ್ಲಿ ಏನು ನಡೆಯುತ್ತಿದೆ ಎಂಬುದು ಅರಿವಾಗದೆಯೂ.. ಅವರ ಕಣ್ಣಲ್ಲಿ ಹುಟ್ಟುವ ಭಾವಗಳೇ ಬೇರೆ. ಬಿಸಿಲುಕೋಲಿನ ಮೇಲೆ ಮನಸ್ಸನ್ನು ಕೇಂದ್ರೀಕರಿಸಿದ ಪರಸುವಿನ ಪ್ರಸಂಗವನ್ನು ಹಾವಭಾವಗಳ ಮೂಲಕ ಹೇಳಿರುವ ಕಥೆ ಇಲ್ಲಿದೆ. ನೋವಿನ ರೂಪಕವೊಂದು ನಿಸೂರಾಗುವ ಭಾವವೂ ದಕ್ಕುತ್ತದೆ. 


ಹಾರಿದ ಪುಟ್ಟ ಹಕ್ಕಿಯ ಜಾಡು : ತೇಜುವಿನ ತಂದೆಯ ಎರಡನೇ ಮದುವೆಯ ಸಂದರ್ಭದಲ್ಲಿ ಆತನಿಗೆ ತನ್ನ ತಾಯಿಯ ಕುರಿತಾಗಿ ತಿಳಿಯುವ ಸತ್ಯ ಆತನನ್ನು ಒಂಟಿ ಹಕ್ಕಿಯಂತೆ ಮಾಡುತ್ತದೆ. ಆ ಪುಟ್ಟ ಹಕ್ಕಿ ಹಿಡಿದ ಜಾಡು ಯಾವುದು..?? ಸುತ್ತಮುತ್ತ ಯಾರಿದ್ದರೂ.. ಅಮ್ಮನಿಗಾಗಿ ಹಂಬಲಿಸುವ ಮಗುವೊಂದರ ತುಮುಲಗಳು ಹಾಗೂ ಅದರ ಭಾವಗಳ ಕಥೆ ಇಲ್ಲಿದೆ. 


ಕನಸಿನಲ್ಲಿ ಸುರಿದ ಕೆಂಪು ಮಳೆ : ಗೀತಾ ಎಲ್ಲರಂತೆ ಋತುಮತಿಯಾಗಿರಲಿಲ್ಲ. ಹಾಗಾಗಿ ಎಲ್ಲೆಡೆಯೂ ಅವಳನ್ನು ನೋಡುವ ನೋಟ ವಿಭಿನ್ನವಾಗಿತ್ತು. ಈ ಪ್ರಕ್ರಿಯೆ ಸ್ವಾಭಾವಿಕವೆಂದು ತಿಳಿದಿದ್ದರೂ.

ಅದರ ಕುರಿತು ಅರಿವು ಮೂಡಿಸಬೇಕಾದವರು ಸಹಾ ಅವಳನ್ನು ಅರ್ಥಮಾಡಿಕೊಳ್ಳದೆ ಇದ್ದಾಗ ಅಂತಹಾ ಮಗುವೊಂದು ಇಂಚಿಂಚಾಗಿ ಕೊರಗುವ ಕೊರಗು ಹಾಗೂ ಅವಳ ಸುತ್ತಲಿನವರ ಪ್ರತಿಕ್ರಿಯೆಗೆ ಆಕೆ ನೀಡುವ ಪ್ರತಿಕ್ರಿಯೆ, ಓದಿನಲ್ಲಿ ಕುಂಠಿತವಾದ ಆಸಕ್ತಿ, ಹೀಗೆ ಹೆಣ್ಣು ಮಗು ಒಂದರ ಮೇಲೆ ಬೀರುವ ಪರಿಣಾಮ ಕನಸಿನಲ್ಲಿ ಸುರಿದ ಕೆಂಪು ಮಳೆಯಾಗಿ ಕಾಣುತ್ತದೆ. ಗೀತಾಳ ಆಂತರ್ಯದ ನೋವು ಕಡಿಮೆಯಾಯಿತೇ..?? ಎಲ್ಲದಕ್ಕೂ ಅರ್ಥವಿರುವಂತೆ ಆ ಕನಸಿಗೆ ಅರ್ಥ ಸಿಕ್ಕಿತೇ..??


ಬಯಲು : ಅಲೆಮಾರಿ ಪಂಗಡದಲ್ಲಿದ್ದ ಈರಪ್ಪನನ್ನು ಕಟ್ಟಿಕೊಂಡ ಅವಳು ಈಗ ಒಂದು ವರ್ಷವೂ ತುಂಬದ ಮಗುವಿನ ಜೊತೆ ಒಬ್ಬಂಟಿಯಾಗಿದ್ದಾಳೆ. ತನ್ನವರೆಂಬುವರನ್ನು ಎಲ್ಲೋ ಕಳೆದುಕೊಂಡು ಒಂಟಿಯಾದ ಈಕೆಗೆ ಈಗ ಬಯಲೇ ಗತಿ. ಬೆಳಕಿರುವಾಗ ಪರವಾಗಿಲ್ಲ..! ಆದರೆ ಕತ್ತಲಾದ ನಂತರ ಶಾಲೆಯ ಸಿಮೆಂಟ್ ನೆಲವೇ ಆಶ್ರಯ. ಇಂತಹಾ ಹೆಣ್ಣು ಶೀಲದ ಹಾಗೂ ನೈತಿಕತೆಯ ಕಲ್ಪನೆಯ ಕುರಿತು ಆಲೋಚಿಸುವ ರೀತಿ, ಬಯಲಿಗೆ ಬಿದ್ದವರು ಬದುಕು ಹುಡುಕಿಕೊಳ್ಳುವ ದಾರಿಯನ್ನು ಸ್ಪಷ್ಟವಾಗಿಸುತ್ತದೆ. 


ಮುಗಿಲ ದುಃಖ - ಈ ಕಥೆಯನ್ನು ನಾನು ಕಥಾಭರಣ ಕಥಾ ಸಂಕಲನದಲ್ಲಿಯೂ ಓದಿದ್ದೆ. ಒಳ್ಳೆಯವರು ಸತ್ತಾಗ ಮುಗಿಲು ಭೋರ್ಗರೆದು ಅಳುತ್ತದಂತೆ.. ಹೀಗೆನ್ನುವ ಮಾತು ಹಳ್ಳಿಯ ಕಡೆ ಪ್ರಚಲಿತದಲ್ಲಿದೆ. ಅಷ್ಟೇ ಅಲ್ಲ.. ಕೆಲವರ ಅದರಲ್ಲೂ ಮನಸ್ಸಿಗೆ ಹತ್ತಿರವಾಗಿದ್ದವರ ಸಾವು ಅದಕ್ಕೂ ಮುನ್ನ ಯಾವುದೋ ರೀತಿಯಲ್ಲಿ ಸೂಚನೆ ನೀಡಿ ನಮ್ಮನ್ನು ತಳಮಳಗೊಳಿಸುತ್ತದೆ. ಅಚಾನಕ್ಕಾಗಿ ಮನೆಗೆ ಬಂದ ದೊಡ್ಡಪ್ಪ ಅವನ ಪಾಲಿಗೆ ಬಿಡಿಸಲಾರದ ಒಗಟಾಗಿ ಉಳಿದು ಹೋದರು. ಅಪ್ಪ - ಅಮ್ಮನನ್ನು ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಂಡವನಿಗೆ ಆಸರೆಯಾಗಿ ಮಗನಂತೆಯೇ ಸಾಕಿದ್ದ ದೊಡ್ಡಪ್ಪ ಹಾಗೆ ಬಂದು ಹೀಗೆ ಹೋದರು. ಆದರೆ, ಆ ದುಃಖ.. ಕೇವಲ ಅದು ಅವನ ದುಃಖವಾಗಿರಲಿಲ್ಲ. ಮುಗಿಲಿನದ್ದೂ.. ಮಳೆಯ, ಮುಗಿಲಿನ ಹಿನ್ನೆಲೆಯನ್ನು ರಚಿಸಲಾದ ಒಂದು ಭಾವನಾತ್ಮಕ ಕತೆ.


ಅರ್ಧ ಮಳೆ ಅರ್ಧ ಬಿಸಿಲು : ಸುಬ್ಬು ಮಾಸ್ತರರು ತನ್ನ ವಿದ್ಯಾರ್ಥಿ ಸಂಜೀವನ ಕುರಿತು ತೋರುತ್ತಿದ್ದ ಕಾಳಜಿ ಬೇರೆಯವರಿಗೆ ಬೇರೆ ರೀತಿಯಲ್ಲಿ ಕಾಣುತ್ತಿದ್ದರೂ.. ಸಂಜೀವನ ಸಮಸ್ಯೆಯನ್ನು ಅರ್ಥಮಾಡಿಕೊಂಡಿದ್ದ ಏಕೈಕ ವ್ಯಕ್ತಿ ಅವರೊಬ್ಬರೇ.. ಆದರೆ ಆ ಕುರಿತು ಸಂಜೀವನ ಮಾತನಾಡಿರದ ಅವರಿಗೆ ಸಂಜೀವನಿಗೆ ಧೈರ್ಯ ತುಂಬುವ ಸಂದರ್ಭ ಕೂಡಿಬಂದಿರಲಿಲ್ಲ. ಆದರೆ, ಆ ಸಂದರ್ಭ ಕೂಡಿಬರುವ ಮುನ್ನ ಅವಘಡವೊಂದು ಘಟಿಸಿತ್ತು. ಅಷ್ಟಕ್ಕೂ ಸುಬ್ಬು ಮಾಸ್ತರರಿಗೆ ಆ ಹುಡುಗ ಅಷ್ಟು ಕಾಡುತ್ತಿದ್ದದ್ದೇಕೆ..?? ಇನ್ನೇನು ಸಮಸ್ಯೆ ಸರಿಯಾಯಿತೆಂಬ ಭಾವ. ನಿರೀಕ್ಷೆಯಂತಾಯಿತೇ..?? ಅರ್ಧ ಬಿಸಿಲು, ಅರ್ಧ ಮಳೆಯ ಭಾವದಲ್ಲಿ.. ನಿರೀಕ್ಷೆ, ಕಾತುರತೆಯಲ್ಲಿಯೇ ಓದಿಸಿಕೊಂಡು ಹೋಗುತ್ತದೆ. 


ವಿದಾಯ : ಆಸ್ಪತ್ರೆಯಲ್ಲಿ ರೋಗಿಯೊಬ್ಬರ ಮಾನಸಿಕ ಆಲೋಚನೆ ಕನಸಿನಲ್ಲಿ ಪ್ರಾಣಿಯ ರೀತಿ ಬಂದು ಹೆದರಿಸುತ್ತಿತ್ತು. ಆಪರೇಷನ್ ಥಿಯೇಟರ್ ನ ಒಳಹೋಗುವ ಮುನ್ನ ಬಿದ್ದಿದ್ದ ಆ ಕನಸು ಯಾಕೋ ತೀರಾ ಹತ್ತಿರವೆನಿಸುತ್ತಿತ್ತು ಅವರಿಗೆ. ಅವರು ವಿದಾಯ ಹೇಳಿದ್ದ ಪರಿ ಹೇಗೆ..?? ಅದು ಅಂತಿಮ ವಿದಾಯವಾ ಅಥವಾ ಆಸ್ಪತ್ರೆಗೆ ವಿದಾಯವಾ..??


ಹುಚ್ಚು :  ಭಂಟಿಗೆ ಹುಚ್ಚು ಹಿಡಿದಿದೆ ಎಂದು ಗೋಪಾಲಪ್ಪನಿಗೆ ತಿಳಿದಾಗ ಆತನಿಗೆ ಹತಾಶೆಯೇ ಕವಿದಿತ್ತು. ಹುಚ್ಚು ಹಿಡಿದ ನಾಯಿಯನ್ನು ಮನೆಯಲ್ಲಿಟ್ಟುಕೊಳ್ಳಬಾರದಿತ್ತು ಎನ್ನುವ ಅವರಿವರ ಮಾತಿಗೂ ಲೆಕ್ಕಿಸಲಿಲ್ಲ. ಆದರೆ, ಅವರ ಪಾಲಿಗೆ ಭಂಟಿ ನಾಯಿಯಲ್ಲ. ಭಂಟಿ ಆತನ ಬದುಕಿಗೆ ಬಂದ ಸಂದರ್ಭಕ್ಕೂ.. ದಿನವೂ ಅವರಿಬ್ಬರೂ ನಿಂತು ನಿರುಕಿಸುವ ಟೆಲಿಫೋನ್ ಬೂತ್ ಗೂ ಒಂದು ಕಾಲದಲ್ಲಿ ತೀರಾ ಹತ್ತಿರದ ಸಂಬಂಧವೇ ಇತ್ತು. ಗೋಪಾಲಪ್ಪನಿಗೂ ಭಂಟಿ ಕಚ್ಚಿತು. ಆಗ ಗೋಪಾಲಪ್ಪನ ಪ್ರತಿಕ್ರಿಯೆ ಏನಿತ್ತು..?? ಭಂಟಿಯ ಹುಚ್ಚು ಆತನ ಮೇಲೆ ಬೀರಿದ ಪರಿಣಾಮವೇನು..?? ಮನುಷ್ಯನಿಗೆ ರಕ್ತಸಂಬಂಧಗಳು ದೂರವಾದಾಗ ಪ್ರಾಣಿಗಳ ಮೂಲಕ ಸಿಗುವ ಈ ರೀತಿಯ ಅಪ್ಯಾಯಮಾನವಾದ ಸಂಬಂಧವೊಂದು ಬದುಕಿಗೆ ಎಷ್ಟು ಜೀವಕಳೆ ತುಂಬುತ್ತದೆ ಎನ್ನುತ್ತಲೇ.. ಮನಮಿಡಿಯುವ ಕಥನ ಒಂದನ್ನು ಕಟ್ಟಿಕೊಟ್ಟಿದ್ದಾರೆ.


ಹೆಸರು ಬೇಡ ಊರು ಬೇಡ : ಪತ್ರಿಕೆಯಲ್ಲಿ ಬರುವ ಕೆಲವು ಕಾಲಂಗಳಲ್ಲಿ ಇಂತಹ ಹೆಸರಿಲ್ಲದ, ಊರಿಲ್ಲದ ಪ್ರಶ್ನೆ ಕೇಳುವವರನ್ನು ಗಮನಿಸಿರುತ್ತೇವೆ. ಹಾಗೆ ಪತ್ರಿಕೆಯೊಂದಕ್ಕೆ ಬಂದ ಪತ್ರಕ್ಕೂ ಹಾಗೂ ಉತ್ತರಿಸಿದವರೆಗೂ ಸಂಬಂಧ ಬೆಸೆಯಲ್ಲಿತ್ತು. ಆ ಪ್ರಶ್ನೆ ಅವರಿಬ್ಬರ ಬದುಕಿನ ದಿಕ್ಕನೇನಾದರೂ.. ಬದಲಾಯಿಸಿತೇ..?? ಅಥವಾ ಅವರಿಬ್ಬರ ಸಂಬಂಧಕ್ಕೆ ನಾಂದಿಯಾಯಿತೆ..??


ಇಲ್ಲಿನ ಒಂದೊಂದು ಕಥೆಗಳೂ ವಿಭಿನ್ನ ಸಂದೇಶವನ್ನು ತೆರೆದಿಡುತ್ತಾದರೂ.. ಇದರಲ್ಲಿ ಹೆಚ್ಚು ಕಂಡದ್ದು ಮನುಷ್ಯನ ನಡವಳಿಕೆಗಳು, ಮಾನವೀಯ ಸಂಬಂಧ ಹಾಗೂ ಸ್ಪಂದಿಸುವ ರೀತಿ. ಬೇಗುದಿಗಳು, ತೊಳಲಾಟಗಳು ಕಥಾರೂಪದಲ್ಲಿ ಬಂದು, ವಾಸ್ತವದ ತಲ್ಲಣಗಳು ಕಥೆಯಾಗಿವೆ. ಕಥೆಯ ಭಾಷೆ ಹಾಗೂ ಶೈಲಿಯಲ್ಲಿ ಒಂದು ವಿಭಿನ್ನತೆ ಇದೆ. ಲೇಖಕರು ಕಥಾಲೋಕದಲ್ಲಿ ಮತ್ತಷ್ಟು ಪ್ರಸಿದ್ಧರಾಗಲಿ ಎನ್ನುವ ಶುಭ ಹಾರೈಕೆಗಳು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ