ಕ್ಲೌಡ್ ಅಂದ ಕೂಡಲೇ ಕೆಲವರು ಕ್ಲೌಡ್ ಸ್ಟೋರೇಜ್ ಅಂತಾರೆ ಇನ್ನೂ ಕೆಲವರು ಕ್ಲೌಡ್ ಕಂಪ್ಯೂಟಿಂಗ್ ಅಂತಾರೆ. ನಾವು ಬಳಸುವುದು ಯಾವುದನ್ನು ? ಕಂಪ್ಯೂಟರ್ ಬಳಸುವುದಿಲ್ಲ ಎಂದ ಮಾತ್ರಕ್ಕೆ ನೀವು ಬಳಸುವುದು ಕ್ಲೌಡ್ ಸ್ಟೋರೇಜ್ ಎಂದು ತೀರ್ಮಾನ ಮಾಡಿ ಬಿಡಬೇಡಿ ಮತ್ತೆ..
ಎರಡಕ್ಕೂ ವ್ಯತ್ಯಾಸವಿದೆ. ಕ್ಲೌಡ್ ಸ್ಟೋರೇಜ್ ನಲ್ಲಿ ನಾವು ನೇರವಾಗಿ ನಮಗೆ ಬೇಕಾದ ಮಾಹಿತಿಯನ್ನು ಅಂದರೆ ಫೋಟೋ, ವೀಡಿಯೋ, ಟೆಕ್ಸ್ಟ್, ಆಡಿಯೋ ಯಾವುದನ್ನಾದರೂ ಸ್ಟೋರ್ ಮಾಡಬಹುದು. ಆದರೆ, ಕ್ಲೌಡ್ ಕಂಪ್ಯೂಟಿಂಗ್ ನಲ್ಲಿ ನೇರವಾಗಿ ನಾವು ಆ ಮಾಹಿತಿಗಳನ್ನು ಸ್ಟೋರ್ ಮಾಡುವುದಿಲ್ಲ. ನೀವು ನಿಮ್ಮ ಸಾಫ್ಟ್ವೇರ್ ಮೂಲಕ ನಿಮ್ಮ ಬ್ಯುಸಿನೆಸ್ ಡೇಟಾ ಅಥವಾ ಇತರ ಪ್ರಾಜೆಕ್ಟ್ ಡೇಟಾಗಳನ್ನು ಸ್ಟೋರ್ ಮಾಡಬಹುದು.
ಈ ಕ್ಲೌಡ್ ಎಂದರೆ ಅಂತರ್ಜಾಲದಲ್ಲಿ ಬಳಸಲಾಗುವ ಸರ್ವರ್ ಎನ್ನಬಹುದು. ಆದರೆ, ಆ ಜಾಗದಲ್ಲಿ ಸರ್ವರ್ ಇರಲೇ ಬೇಕಿಲ್ಲ. ಇಂಟರ್ನೆಟ್ ಸೌಲಭ್ಯ ಇದ್ದರಾಯಿತು. ಜಗತ್ತಿನ ಯಾವ ಮೂಲೆಯಿಂದಲಾದರೂ ಮತ್ತೊಂದು ಮೂಲೆಗೆ ತಲುಪಿಸಬಹುದು. ಆನ್-ಸೈಟ್ ಸರ್ವರ್ ಇರುವುದಿಲ್ಲ ಅಷ್ಟೇ.. ಕನಿಷ್ಠ ಒಂದಾದರೂ ಸರ್ವರ್ ನ ಬಳಕೆ ಇದ್ದೇ ಇರುತ್ತದೆ. ಸ್ಟೋರೇಜ್ ಗಾಗಿ ಕ್ಲೌಡ್ ಬಳಸುವುದರಲ್ಲಿ ಮುಖ್ಯವಾಗಿ ಮೂರು ರೀತಿಯವುಗಳಿವೆ. ನಮ್ಮ ನಮ್ಮ ಸೌಕರ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬೇಕು.
ಈಗ ಹೋಟೆಲ್ ಗೆ ಹೋಗಿ ಪುಟ್ಟ ಮಗುವಿಗೂ ಹಾಗೂ ದೊಡ್ಡವರಿಗೂ ಊಟ ಆರ್ಡರ್ ಮಾಡಿದರೆ ಏನಾಗುತ್ತದೆ..?? ಮಗು ಸ್ವಲ್ಪ ತಿಂದು ಹೆಚ್ಚಿನದ್ದನ್ನು ಹಾಗೆಯೇ ಉಳಿಸುತ್ತದೆ. ಅಲ್ಲವಾ..?? ಕೆಲವರು ಊಟದಲ್ಲಿಯೂ ಮಿನಿ ಮೀಲ್ಸ್ ಮತ್ತು ಮೀಲ್ಸ್ ಎಂದು ಆರ್ಡರ್ ಮಾಡುತ್ತಾರಲ್ಲಾ ಇದೂ ಹಾಗೆಯೇ.. ದುಡ್ಡು ಇದ್ದವರು ವೇಸ್ಟ್ ಆದರೂ ಪರವಾಗಿಲ್ಲ ಎನ್ನಬಹುದು. ಆದರೆ, ಅನ್ನಕ್ಕೆ ಬೆಲೆ ಕೊಡುವವರು ಹಾಗೂ ಮಧ್ಯಮ ವರ್ಗದವರು ತಮಗೆ ಬೇಕಾದದ್ದನ್ನಷ್ಟೇ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲವಾ..?? ಇದರಿಂದ ಉಳಿಸಿದ್ದು ಮತ್ತೆಲ್ಲಿಯಾದರೂ ಸರಿಯಾದ ಉಪಯೋಗಕ್ಕೆ ಅಥವಾ ಕಷ್ಟ ಕಾಲಕ್ಕೆ ಆಗಬಹುದು.. ಈ ಕ್ಲೌಡ್ ಕೂಡಾ ಹಾಗೆಯೇ.. ನೀವು ನಿಮ್ಮ ಆಯ್ಕೆಯ ನೆಟ್ ಪ್ಯಾಕ್ ಅಥವಾ ಡೇಟಾ ಪ್ಯಾಕ್ ಆರಿಸಿ ರೀಚಾರ್ಜ್ ಮಾಡಿಕೊಳ್ಳುತ್ತೀರಲ್ಲಾ ಹಾಗೆಯೇ ಜತನದಿಂದ ಆಯ್ದುಕೊಳ್ಳಬೇಕು. ದೈತ್ಯ ಕಂಪನಿಗಳು ಹಾಗೂ ಸ್ಟಾರ್ಟಪ್ ಗಳ ಆಯ್ಕೆ ಒಂದೇ ರೀತಿಯದ್ದಾಗಿರುವುದಿಲ್ಲ.
ಮೊದಲನೆಯದ್ದು ಪ್ರೈವೇಟ್ ಕ್ಲೌಡ್ ಸ್ಟೋರೇಜ್ ಅಥವಾ ಎಂಟರ್ಪ್ರೈಸ್ ಕ್ಲೌಡ್ ಸ್ಟೋರೇಜ್. ಇದು ಸಂಪೂರ್ಣ ಕಂಪನಿಯ ಬಳಕೆಗೆ ಮಾತ್ರ. ಇಲ್ಲಿ ಮತ್ತೊಬ್ಬ ಬಳಕೆದಾರರಿಗೆ ಅವಕಾಶ ಇರುವುದಿಲ್ಲ. ಇದರ ಸೆಕ್ಯೂರಿಟಿ ಹೊಣೆ ಕೂಡಾ ಅದರದ್ದೇ.. ಇದರಲ್ಲಿ ಡೇಟಾ ಬಹಳ ಸೇಫ್ ಎನ್ನಬಹುದು.
ಎರಡನೆಯದ್ದು ಪಬ್ಲಿಕ್ ಕ್ಲೌಡ್. ಇದರಲ್ಲಿ ಬಳಕೆದಾರರು ಯಾವುದೇ ಸೆಕ್ಯೂರಿಟಿಯ ಕುರಿತು ತಲೆ ಕೆಡಿಸಿಕೊಳ್ಳುವಂತಿಲ್ಲ. ಎಷ್ಟು ಬಳಕೆದಾರರು ಬೇಕಾದರೂ ಇದರಲ್ಲಿ ಆಕ್ಸೆಸ್ ಪಡೆಯಬಹುದು. ಹೆಚ್ಚಿನ ಬಳಕೆದಾರರಿಗೆ ಅವರಿಗೆ ಕೈಗೆಟಕುವ ಬೆಲೆಯಲ್ಲಿ ಇದು ಲಭ್ಯ. ಅಮೆಜಾನ್ ವೆಬ್ ಸರ್ವಿಸ್, ಐ.ಬಿ.ಎಂ, ಗೂಗಲ್ ಕ್ಲೌಡ್, ಮೈಕ್ರೋಸಾಫ್ಟ್ ಅಸ್ಯುರ್ ಈ ಗುಂಪಿಗೆ ಸೇರಿದವು.
ಮೂರನೆಯದ್ದು ಹೈಬ್ರಿಡ್ ಕ್ಲೌಡ್ ಸ್ಟೋರೇಜ್. ಪ್ರೈವೇಟ್ ಕ್ಲೌಡ್ ನ ಭದ್ರತೆ ಮತ್ತು ಪಬ್ಲಿಕ್ ಕ್ಲೌಡ್ ನಂತೆ ಬಳಕೆದಾರರಿಗೆ ಬೇಕಾದಂತೆ ಬೇಕಾದಷ್ಟು ಸ್ಟೋರೇಜ್ ಒದಗಿಸುತ್ತದೆ.
ಕೆಲವು ಬ್ಯುಸಿನೆಸ್ ಗೆ ಅಥವಾ ಕೆಲವು ಕಮ್ಯೂನಿಟಿಗಳಿಗೆ ಬೇಕಾದ ಹಾಗೆ ಕ್ಲೌಡ್ ಸ್ಟೋರೇಜ್ ಒದಗಿಸುವ ಕಮ್ಯೂನಿಟಿ ಸ್ಟೋರೇಜ್ ಕೂಡಾ ಇದೆ. ಇದು ನಮ್ಮ ಪರ್ಸನಲ್ ಬಳಕೆಗಲ್ಲ.
2015 ರಲ್ಲಿ ಕೇವಲ 30% ಕಂಪನಿಗಳು ಮಾತ್ರ ಕಾರ್ಪೊರೇಟ್ ಡೇಟಾವನ್ನು ಕ್ಲೌಡ್ ನಲ್ಲಿ ಸ್ಟೋರ್ ಮಾಡುತ್ತಿದ್ದರೆ.. 2020 ರಲ್ಲಿ ಅದು 50% ಆಗಿತ್ತು. 2022 ರಲ್ಲಿ ಅದು 65% ಗೂ ಹೆಚ್ಚಿದೆ.
ಹಾಗಾದರೆ ಕಾರ್ಪೊರೇಟ್ ಕಂಪನಿಗಳಲ್ಲಿ ಪ್ರತಿಯೊಂದನ್ನೂ ಕುಳಿತು ನಾವು ಫೋಟೋ ಅಪ್ಲೋಡ್ ಮಾಡುವ ಹಾಗೆ ಅಪ್ಲೋಡ್ ಮಾಡುತ್ತಾರಾ..??ಖಂಡಿತಾ ಇಲ್ಲ.
ಗಣಿತದಲ್ಲಿ ಸಮೀಕರಣಗಳ ಅಂದರೆ ಫಾರ್ಮುಲಾಗಳ ಬಳಕೆ ಮಾಡಿದ್ದೀರಿ. ಅಲ್ಲವೇ..?? ಅಂತಹಾ ಫಾರ್ಮುಲಾಗಳ ಸಮುಚ್ಚಯದ ಹಾಗೆ ಕೋಡಿಂಗ್ ಬರೆಯುತ್ತಾರೆ. ಅದೆಲ್ಲವೂ ಸೇರಿ ಸಾಫ್ಟ್ವೇರ್ ಆಗುತ್ತದೆ. ಕ್ಲೌಡ್ ನಲ್ಲಿ ಈ ರೀತಿಯ ಸಾಫ್ಟ್ವೇರ್ ನಿಂದ ಡೇಟಾ ಅಪ್ಲೋಡ್ ಮಾಡಲು ಯಾವುದೇ ಆಪರೇಟಿಂಗ್ ಸಿಸ್ಟಮ್ ನ ಮಿತಿ ಇಲ್ಲ. ಯಾವುದನ್ನೂ ಡೌನ್ಲೋಡ್ ಮಾಡಿಕೊಳ್ಳುವುದು ಅಪ್ಲೋಡ್ ಮಾಡಿಕೊಳ್ಳುವುದು ಅಥವಾ ಅಪ್ಡೇಟ್ ಮಾಡಿಕೊಳ್ಳುವುದರ ಅವಶ್ಯಕತೆ ಇಲ್ಲ. ಎಲ್ಲವೂ ವೆಬ್ ಬ್ರೌಸರ್ ನಿಂದಲೇ ಮಾಡಬಹುದು.
ಕ್ಲೌಡ್ ಕಂಪ್ಯೂಟಿಂಗ್ ನಲ್ಲಿ ಮುಖ್ಯವಾಗಿ ಮೂರು ರೀತಿ ಇದೆ. ಮೊದಲನೆಯದ್ದು ಸಾಫ್ಟ್ವೇರ್ ಆಸ್ ಸರ್ವೀಸ್. ಡ್ರೈವ್, ನೆಟ್ ಪ್ಲಿಕ್ಸ್, ಜಿ-ಮೇಲ್, ಡ್ರಾಪ್ ಬಾಕ್ಸ್, ಸ್ಪಾಟಿಫೈ, ಗೂಗಲ್ ವರ್ಕ್ ಸ್ಪೇಸ್, ಗೋ ಮೀಟಿಂಗ್ ಇವೆಲ್ಲವೂ ಸಾಫ್ಟ್ವೇರ್ ಆಧಾರದ ಮೇಲೆ ತಮ್ಮಷ್ಟಕ್ಕೆ ತಮ್ಮ ಡೇಟಾವನ್ನು ಕ್ಲೌಡ್ ಗೆ ಅಪ್ಲೋಡ್ ಮಾಡುತ್ತವೆ. ಮತ್ತು ಯಾವಾಗ ಬೇಕು ಆಗ.. ಯಾರು ಬೇಕು ಅವರು ಯಾವುದೇ ಸ್ಥಳದಿಂದ ಇದೇ ಸಾಫ್ಟ್ವೇರ್ ಅನ್ನು ಬಳಸಿ ಕ್ಲೌಡ್ ನಿಂದ ಡೇಟಾ ಪಡೆದುಕೊಳ್ಳಬಹುದು.
ಎರಡನೆಯದ್ದು ಪ್ಲಾಟ್ ಫಾರ್ಮ್ ಆಸ್ ಸರ್ವೀಸ್ ನಲ್ಲಿ ಈ ಸಾಫ್ಟ್ವೇರ್ ಗಳಿಗೆ ತಮ್ಮದೇ ಒಂದು ಪ್ಲಾಟ್ ಫಾರ್ಮ್ ಇರುತ್ತದೆ. ಮೊದಲನೆಯದ್ದಕ್ಕಿಂತ ಇದು ಕೊಂಚ ಹೆಚ್ಚಿನ ಸೌಲಭ್ಯ ಹೊಂದಿರುತ್ತದೆ. ಜೊತೆಗೆ ಸುಲಭ ಕೂಡಾ.. ಗೂಗಲ್ ಆಪ್ ಇಂಜಿನ್, ಓಪನ್ ಶಿಫ್ಟ್, ವಿಂಡೋಸ್ ಅಸ್ಯುರ್, ಫೋರ್ಸ್. ಕಾಮ್ ಇವುಗಳು ಇದರಡಿಯಲ್ಲಿ ಬರುತ್ತವೆ.
ಮೂರನೆಯದ್ದು ಇನ್ಪ್ರಾಸ್ಟ್ರಕ್ಚರ್ ಆಸ್ ಸರ್ವೀಸ್ ನಲ್ಲಿ ಕೆಲಸ ಸುಲಭ ಮತ್ತು ಸಲೀಸು. ಇಲ್ಲಿ ಡೇಟಾ ಕಳುಹಿಸಲು ಅವಶ್ಯಕತೆ ಇದ್ದಾಗ ಕ್ಲಿಕ್ ಮಾಡುವ ರೀತಿಯ ಸುಲಭ ವ್ಯವಸ್ಥೆ ಡಿಸೈನ್ ಮಾಡಲಾಗಿದೆ. ಡಿಜಿಟಲ್ ಓಷನ್, ಲಿನೋಡ್, ರ್ಯಾಕ್ ಸ್ಪೇಸ್, ಮೈಕ್ರೋಸಾಫ್ಟ್ ಅಸ್ಯುರ್ ಈ ಗುಂಪಿಗೆ ಸೇರಿದ್ದು.
ಮೊದಲನಯದ್ದು ಒಂಟಿ ಮನೆಯಂತೆ. ಬೇರೆಯವರ ಹಂಗಿಲ್ಲ.. ಆದರೆ, ಕೊಂಚ ರಿಸ್ಕ್. ಎರಡನೆಯದ್ದು ಅಪಾರ್ಟ್ಮೆಂಟ್ ನಂತೆ ಎಲ್ಲವೂ ಸುಲಭ ಜೊತೆಗೆ ಸೆಕ್ಯೂರ್ ಕೂಡಾ. ಮೂರನೆಯದ್ದು ಲೇಔಟ್ ನಂತೆ. ಎಲ್ಲವೂ ಬೇಕಾದಾಗ ಬೇಕಾದಲ್ಲಿ ಸುಲಭವಾಗಿ ದೊರಕಿಸಿಕೊಳ್ಳುವಂತೆ.
ಕ್ಲೌಡ್ ಯಾಕೆ ಬೇಕು ? ಇದರ ಪರಿಣಾಮಕಾರಿ ಉಪಯೋಗಗಳೇನು ಎಂದು ನೋಡುವುದಾದರೆ..
ಲಾಕ್ ಡೌನ್ ನಲ್ಲಿ ಎಲ್ಲಿ ನೋಡಿದರೂ ಮೀಟಿಂಗ್ ಗಳಿಗೆ, ಪಾಠಕ್ಕೆ ಎಲ್ಲೆಡೆ ಜೂಮ್ ಆಪ್ ಬಳಕೆ ಹೆಚ್ಚಿತ್ತು. ಅಲ್ಲವಾ ? ಇದೂ ಕೂಡಾ ಕ್ಲೌಡ್ ಬಳಸಿಯೇ ರಚಿಸಲಾಗಿದ್ದ ಅಪ್ಲಿಕೇಶನ್. ಈ ಅಪ್ಲಿಕೇಶನ್ ಅನ್ನು ಉದಾಹರಣೆಯಾಗಿ ತೆಗೆದುಕೊಂಡು ಕ್ಲೌಡ್ ನ ಉಪಯೋಗಗಳನ್ನು ತಿಳಿಯೋಣ.
ಹಾಸನದ ಮೂಲೆಯ ಹಳ್ಳಿಯೊಂದಲ್ಲಿ ಕುಳಿತು ಉತ್ತರ ಭಾರತದ ಯಾವುದೋ ಮೂಲೆಗೆ ಪಾಠ ಮಾಡಿದ್ದಾರೆ. ಬರೀ ಭಾರತವಲ್ಲ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಇದನ್ನು ಬಳಸಬಹುದು. ಇಂಟರ್ನೆಟ್ ಸೌಲಭ್ಯ ಇರಬೇಕು. ಅಷ್ಟೇ..
ನೆಟ್ ಪ್ಲಿಕ್ಸ್ ಬಳಸಲು ಎಷ್ಟು ಹಣ ನೀಡುತ್ತೀರಿ ? ಇದರ ಖರ್ಚು ಕೂಡಾ ಭರಿಸುವಂತಹದ್ದೇ.. ಅಲ್ಲದೇ, ಡೇಟಾ ಬ್ಯಾಕಪ್ ಇದ್ದೇ ಇರುತ್ತದೆ. ಅಪ್ಲೋಡ್ ಹಾಗೂ ಡೌನ್ಲೋಡ್ ಗೆ ಹೆಚ್ಚಿನ ಸಮಯ ಬೇಕೇ..?? ಎಲ್ಲವೂ ಇಂಟರ್ನೆಟ್ ಮೇಲೆ ಅವಲಂಬಿತ.
ಕ್ಲೌಡ್ ಸರ್ವೀಸ್ ಆಯ್ಕೆ ಮಾಡಿಕೊಳ್ಳುವಾಗ ಗಮನಿಸಬೇಕಾದ ಮುಖ್ಯ ಅಂಶ. ಕ್ಲೌಡ್ ಅಪ್ಲೋಡ್ ಮತ್ತು ಡೌನ್ಲೋಡ್ ಟೈಮ್. ಹಣ ಪಡೆದುಕೊಂಡು ನೀಡುವ ಈ ಸರ್ವೀಸ್ ನಲ್ಲಿ ನಮ್ಮ ಡೇಟಾ ಭದ್ರ. ಅಲ್ಲದೇ, ಯಾವುದೇ ನೈಸರ್ಗಿಕ ವಿಕೋಪಗಳಿಗೂ ತುತ್ತಾಗದಂತೆ ಡಿಸೈನ್ ಆಗಿವೆ ಡೇಟಾ ಸೆಂಟರ್ ಗಳು.
ಕ್ಲೌಡ್ ಕ್ಲೌಡ್ ಕ್ಲೌಡ್... ಅನ್ ಲಿಮಿಟೆಡ್ ಸ್ಟೋರೇಜ್ ಎನ್ನುತ್ತರಲ್ಲಾ ಇದು ಎಷ್ಟು ನಿಜ ??
ಆಕಾಶಕ್ಕೂ ಒಂದು ಅಂಚು ಇರಬೇಕಲ್ಲವಾ..?? ಹಾಗೆಯೇ ಈ ಕ್ಲೌಡ್ ಸ್ಟೋರೇಜ್ ಗೂ ಒಂದು ಮಿತಿ ಇರಬೇಕು. ಅಲ್ಲವಾ..?? ಹಾಗಿದ್ದರೆ ಈಗಿನ ಬಳಕೆ ಎಷ್ಟು ?ಅದರ ಮಿತಿ ಎಷ್ಟು ಎಂದು ತಿಳಿಯೋಣ.
ಪ್ರಸ್ತುತ ದಿನಗಳಲ್ಲಿ ಕ್ಲೌಡ್ ಬಳಸುತ್ತಿರುವವರು 3.6 ಬಿಲಿಯನ್ ಮಂದಿ. ಅವರೆಲ್ಲರ ಬಳಕೆಯಿಂದ ಈಗಾಗಲೇ 40 ಬಿಲಿಯನ್ ಟೆರಾ ಬೈಟ್ ಡೇಟಾ ಇದೆ. ನಮಗೆ ಹೀಗೆ ಹೇಳಿದರೆ ಅರ್ಥವಾಗುವುದಿಲ್ಲ ಎನ್ನುತ್ತೀರಾ.. ಹಾಗಾದರೆ ಕೇಳಿ..
ಪ್ರತಿ ನಿಮಿಷಕ್ಕೆ ಸುಮಾರು 15.2 ಮಿಲಿಯನ್ ಟೆಕ್ಸ್ಟ್ ಮೆಸೇಜ್ ಗಳು ರವಾನೆಯಾದಷ್ಟು.. ಪ್ರತಿ ನಿಮಿಷಕ್ಕೆ ಸುಮಾರು 46000 ಇನ್ಸ್ಟಾ ಫೋಟೋಗಳು ಅಪ್ಲೋಡ್ ಆದಷ್ಟು.. ಪ್ರತಿ ನಿಮಿಷಕ್ಕೆ ಸುಮಾರು 4 ಮಿಲಿಯನ್ ಪೋಸ್ಟ್ ಗಳಿಗೆ ಲೈಕ್ ಗಳನ್ನು ಒತ್ತಿದಷ್ಟು.. ಪ್ರತಿ ನಿಮಿಷಕ್ಕೆ ಸುಮಾರು 10 ಲಕ್ಷ ಸ್ಪಾಮ್ ಮೇಲ್ ಗಳಷ್ಟು..
ಈಗ ನಿಮಗೆ ಅಂದಾಜಾಗುತ್ತಿರಬೇಕಲ್ಲಾ ನಾವು ಪ್ರತಿ ನಿಮಿಷಕ್ಕೆ ಬಳಸಿರುವ ಡೇಟಾ. ನಾವು ನಿತ್ಯವೂ ಬಳಸದಿದ್ದರೂ ಇಷ್ಟು ಡೇಟಾ ಅಂತೂ ಕ್ಲೌಡ್ ಸ್ಟೋರೇಜ್ ನಲ್ಲಿದೆ.
ಇಲ್ಲಿ ಯಾವುದೂ ಅನ್ ಲಿಮಿಟೆಡ್ ಆಗಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಅದೆಷ್ಟೇ ಡೇಟಾ ಸೆಂಟರ್ ಗಳನ್ನು ಕಟ್ಟಿದರೂ ಅದಕ್ಕೆ ಮಿತಿಯಿದೆ. ಅದಕ್ಕೆ ಬಳಸಲಾಗುವ ಫೈಬರ್ ಆಪ್ಟಿಕಲ್ ಕೇಬಲ್ ಗಳಿಗೆ ಮಿತಿಯಿದೆ. ಅದರ ತಯಾರಿಕೆಗೆ ಬಳಸುವ ಸೆಮಿ ಕಂಡಕ್ಟರ್, ಚಿಪ್, ಮಾನವ ಸಂಪನ್ಮೂಲ ಎಲ್ಲಕ್ಕೂ ಒಂದು ಮಿತಿಯಿದೆ. ಆದರೆ, ಆ ಮಿತಿ ಹೆಚ್ಚಿನದ್ದು..
ಈಗ ಜಗತ್ತಿನಲ್ಲಿ ಇರುವ ಅತಿ ದೊಡ್ಡ ಡೇಟಾ ಸೆಂಟರ್ ಒಂದು ಬಿಲಿಯನ್ ಟೆರಾ ಬೈಟ್ ಡೇಟಾ ಹಿಡಿದಿಟ್ಟುಕೊಳ್ಳಬಲ್ಲದು. ಇಂತಹದ್ದು ಸಾವಿರಾರು ನಿರ್ಮಿಸಬಹುದು. ಅಥವಾ ಇವುಗಳ ಕೆಪ್ಯಾಸಿಟಿ ಹೆಚ್ಚು ಮಾಡಬಹುದು. ಆದರೆ, ಯಾವುದೂ ಅನ್ ಲಿಮಿಟೆಡ್ ಅಲ್ಲ.. ಇಲ್ಲಕ್ಕೂ ಮಿತಿಯಿದೆ.
ಡೇಟಾಗೆ ಇಷ್ಟು ಮಿತಿ ಇದೆ ಎಂದ ಮೇಲೆ ಇದನ್ನೆಲ್ಲಾ ಬಳಸಲು ಮೂಲ ಕಾರಣ ಇಂಟರ್ನೆಟ್. ಹಾಗಾದರೆ ಇಂಟರ್ನೆಟ್ ಎಷ್ಟು ಬೇಕಾಗಬಹುದು ? ಇದೀಗ 5-ಜಿ ಕಾಲ. ಈಗ ಇಂಟರ್ನೆಟ್ ನಾವು ಬಳಸುತ್ತಿರುವ ಇಂಟರ್ನೆಟ್ ನಿಜಕ್ಕೂ 4-ಜಿ ಯಾ ? ನಾವು ಬಳಸುವ ಇಂಟರ್ನೆಟ್ ಹಾಗೂ ಅವರು ಕೊಡುವ ಇಂಟರ್ನೆಟ್ ಸ್ಪೀಡ್ ಒಂದೆಯಾ ? ಈ ಮಾಹಿತಿಗಳನ್ನು ಹೊತ್ತ "ಇಂಟರ್ನೆಟ್ ಅಲ್ಲಿ ಅಲ್ಲ.. ಇಂಟರ್ನೆಟ್ ಅನ್ನೇ ಜಾಲಾಡೋಣ" ಮುಂದಿನ ವಾರದ ಟೆಕ್-ಟಾಕ್ ನಲ್ಲಿ.
- ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ