ಬುಧವಾರ, ಏಪ್ರಿಲ್ 15, 2026

ಜಾತಿ ಕೆಟ್ಟವಳು (ಪುಸ್ತಕ ಯಾನ - 180)


ಪುಸ್ತಕದ ಶೀರ್ಷಿಕೆ : ಜಾತಿ ಕೆಟ್ಟವಳು

ಲೇಖಕರು : ಎಂ. ಕೆ. ಇಂದಿರಾ

ಪ್ರಕಾಶಕರು : ಇಂದಿರಾ ಪ್ರಕಾಶನ

ಪ್ರಥಮ ಮುದ್ರಣ : 1981

ನಾಲ್ಕನೇ ಮುದ್ರಣ : 2020 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 128

ಬೆಲೆ : 80 ರೂ.


ಎಂ. ಕೆ. ಇಂದಿರಾ ಅವರ 'ಜಾತಿ ಕೆಟ್ಟವಳು ಕಾದಂಬರಿ' ನಿರೂಪಣೆಯ ಶೈಲಿಯಿಂದ ವಿಭಿನ್ನವಾಗಿ ಎನ್ನಿಸಿತು. ಈ ಕಥೆಯನ್ನು ನಿರೂಪಕರ ದೃಷ್ಟಿಯಲ್ಲಿ ಮಾತ್ರ ಹೇಳದೆ ಅಥವಾ ಒಂದು ಕಥಾ ಹಂದರವನ್ನು ಸುಲಲಿತವಾಗಿ ಹೇಳಿಕೊಂಡು ಹೋಗದೆ.. ಆತ್ಮಕಥನದ ರೀತಿ ಅಲ್ಲಲ್ಲಿ ಪಾತ್ರಗಳೇ ತಮ್ಮತಮ್ಮ ಭಾವನೆಗಳನ್ನು ಸಂದರ್ಭಗಳಿಗೆ ಹೇಳುತ್ತಾ ಹೋಗುವ ರೀತಿ ವಿಭಿನ್ನವಾಗಿದೆ. ಒಂದು ಪಾತ್ರಕ್ಕೆ ಅನ್ನಿಸಿದ ಭಾವನೆ ಮತ್ತೊಂದು ಪಾತ್ರಕ್ಕೆ ವಿಭಿನ್ನವಾಗಿರುವ ಪರಿಯೂ.. ಅವರವರ ಭಾವಕ್ಕೆ ಎಂಬ ರೀತಿಯಲ್ಲಿ ಕಾಣುತ್ತದೆ. 


ಕಾದಂಬರಿ ಶುರುವಾಗುವುದು ವಾಸುದೇವ ಭಟ್ಟರ 62ನೇ ವರ್ಷದಲ್ಲಿ. ಅವರು ಬಹಳ ಪ್ರೀತಿಸಿ ಮದುವೆಯಾಗಿದ್ದವರನ್ನು ನೆನೆದು ಕತೆ ಹೇಳಲು ಶುರುವಿಡುತ್ತಾರೆ. ಆಕೆ ನಿಧನರಾಗಿ ಎರಡು ವರ್ಷ ತುಂಬುತ್ತಾ ಬಂದಿತ್ತು. ಪ್ರೇಮವಿವಾಹವೆಂದರೆ ಆ ಕಾಲಕ್ಕೆ ಒಂದು ರೀತಿಯಲ್ಲಿ ಕ್ರಾಂತಿಕಾರಿ ವಿವಾಹವೇ ಸರಿ. ಅದರಲ್ಲೂ.. ಕಾದಂಬರಿಯ ಶೀರ್ಷಿಕೆ ಕಂಡಾಗಲೇ ಇದು ಅಂತರ್ಜಾತಿಯ ವಿವಾಹವಿರಬಹುದು ಎನ್ನುವ ಗುಮಾನಿ ಹುಟ್ಟಿಸಿತು. ಆದರೆ, ಇಲ್ಲಿ ವಿಭಿನ್ನ ಕತೆ ತೆರೆದುಕೊಳ್ಳುತ್ತದೆ. 


ಈ ಕಥೆ ಹೇಳುವಾಗ "ನನ್ನ ಈ ಕಥೆಗೆ 'ಜಾತಿ ಕೆಟ್ಟವಳು' ಎಂಬ ವಿರುದ್ಧ ಶೀರ್ಷಿಕೆ ಕೊಟ್ಟಿದ್ದೇನೆ. ಗಾಬರಿಯಾಗಬೇಡಿ, ಕಾದಂಬರಿ ಪೂರ್ಣ ಓದಿದ ಮೇಲೆ ನಿಮಗೆ ಅರ್ಥವಾಗುತ್ತದೆ. ನಿಜವಾಗಿ ಕೆಟ್ಟವರು ಯಾರು ? ಕೆಡದವರು ಯಾರು ?! ಎನ್ನುವುದು. ನಮ್ಮ ಸಮಾಜ ತಾನಾಗಿಯೇ ರಚಿಸಿಕೊಂಡಿರುವ ಮುಳ್ಳಿನ ಬೇಲಿಯೊಳಗೆ ತಾನೇ ಸಿಲುಕಿಕೊಂಡು ಒದ್ದಾಡುತ್ತದೆ. ಕೆಲವರಿಗಂತೂ ಆ ಕಂಟಕ ಜೀವನವೇ ನೆಮ್ಮದಿ, ಹಿತ ಇದರಿಂದ ಪಾರಾದರೆ ಹೊರಗೆ ಮತ್ತೊಂದು ನಿಷ್ಕಂಟಕ ಜೀವನವಿದೆ ಎಂಬುದನ್ನು ಅವರು ನಂಬುವುದೇ ಇಲ್ಲ. ನನಗೇ ಅರಿವಿಲ್ಲದಂತೆ ನಾನು ಅದರಿಂದ ಪಾರಾಗಿ ದೂರ ಸಿಡಿದು ನಿಂತೆ. ನಿಂದೆ-ನಿಷ್ಟುರ ಸಹಿಸಿದೆ. ನನ್ನ ಮಟ್ಟಿಗೆ ನಾನು ಗೆದ್ದೆ." ಎನ್ನುವ ಮಾತನ್ನು ಪಾತ್ರವೊಂದರ ಮುಖೇನ ಹೇಳಿಸುತ್ತಾರೆ. 


ಸೀತಾ ನದಿಯ ದಂಡೆಯಲ್ಲಿನ ಹೊನ್ನಡಕೆ ಎಂಬ ಗ್ರಾಮದಲ್ಲಿ ಸದಾಶಿವ ಕರ್ಣಿಕರ ಅಡಿಕೆ ತೋಟವನ್ನು ನೋಡಿಕೊಳ್ಳುತ್ತಾ.. ಅಲ್ಲಿಯೇ ಉಳಿದಿದ್ದ ಕುಟುಂಬದವರು ವಾಸುದೇವ ಭಟ್ಟರದ್ದು. ತಾತ ತೀರಿಕೊಳ್ಳುವ ಮುನ್ನ ಅಲ್ಲಿ ಐವತ್ತು ವರ್ಷಗಳ ಕಾಲ ಟೊಂಕ ಕಟ್ಟಿ ದುಡಿದಿದ್ದರು. ಹೊನ್ನಡಿಕೆ ಎಂಬ ಊರಿಗೆ ಅನ್ವರ್ಥನಾಮದಂತೆಯೇ ಆಗಿ ಹೋಗಿತ್ತು. ಅಲ್ಲಿನ ಪರಿಸರದಲ್ಲಿ ಬಾಲ್ಯ ಕಂಡಿದ್ದವರು ನಂತರ ಸೇರಿದ್ದು ಸೋಮೇಶ್ವರದ ಪ್ರೈಮರಿ ಸ್ಕೂಲಿಗೆ. 


ಅಲ್ಲಿನ ಮಾಧ್ಯಮಿಕ ಶಾಲೆಯ ಹೆಡ್ ಮಾಸ್ಟರ್ ಸಾಂಬಯ್ಯನವರು ಬಹಳ ಒಳ್ಳೆಯವರು. ಅವರ ಮೆಚ್ಚಿನ ಶಿಷ್ಯನಾಗಿ ಬೆಳೆದರು ವಾಸುದೇವ. ಸಾಂಬಯ್ಯನವರ ಶಿಫಾರಸ್ಸಿನ ಮೇಲೆ ಕರ್ಣಿಕರ ಮನೆಯಲ್ಲಿಯೇ ಉಳಿದು ಮುಂದಕ್ಕೆ ಚೆನ್ನಾಗಿ ಓದಿ ಅದರ ಜೊತೆಗೆ ಹಾರ್ಮೋನಿಯಂ ಕಲಿತರು. ಅವರಿಗೆ ಮಧುರ ಕಂಠವೂ ಇತ್ತು. ನಾಟಕದಲ್ಲಿ ಕೂಡ ಪಾರ್ಟ್ ಮಾಡಿದ್ದರು. 


ಅದಾದ ನಂತರ ಮುಂದಿನ ಓದಿಗಾಗಿ ಶಿವಮೊಗ್ಗಕ್ಕೆ ಹೋಗಲು ಮನೆಯಲ್ಲಿ ಅಷ್ಟಾಗಿ ಒಪ್ಪಿಗೆಯಿರಲಿಲ್ಲ. ಈಶ್ವರ ಭಟ್ಟರು ಹಾಗೂ ಸೌಭದ್ರಮ್ಮನವರು ಮಗನನ್ನು ದೂರಕ್ಕೆ ಕಳುಹಿಸಲು ಮನಃಪೂರ್ವಕವಾಗಿ ಒಪ್ಪದಿದ್ದರೂ.. ಮಗನ ಏಳಿಗೆಗೆ ಒಪ್ಪಿದ್ದರು. ಅಕ್ಕ ಶ್ರೀದೇವಿ, ವಾಗ್ದೇವಿಯರು ತಮ್ಮನ ಜವಾಬ್ದಾರಿ ತೆಗೆದುಕೊಂಡಿದ್ದರು. ಹಿರಿಯಕ್ಕ ಶ್ರೀದೇವಿಗೆ ತಾತ ತೀರಿಕೊಂಡ ವರ್ಷದಲ್ಲೇ ಮದುವೆಯೂ ಆಗಿತ್ತು. 


ಮುಂದೆ ಸೋಮೇಶ್ವರದಲ್ಲಿ ತಾನು ಓದಿದ ಶಾಲೆಯಲ್ಲಿಯೇ ಮಾಸ್ತರರೂ ಆಗುವ ಸುಯೋಗ ಬಂದಿತ್ತು ವಾಸುದೇವರಿಗೆ. ಕರ್ಣಿಕರ ಮಕ್ಕಳಿಗೆ ಪಾಠ, ಕತೆ ಹೇಳಿಕೊಡುತ್ತಿದ್ದವರಿಗೆ ಜೀವದ ಗೆಳೆಯನಾಗಿದ್ದು ಪದ್ಮನಾಭ. ಮಾಲೇರ ಪದ್ದು ಎಂದೇ ಎಲ್ಲರಿಗೂ ಪರಿಚಿತ. ಆತ ಸಕಲಕಲಾಭವಲ್ಲಭನಂತೆ.. ಹಾಸ್ಯದಲ್ಲಿ ಪರಿಣಿತನೂ ಹೌದು.. ಶಾಲೆಗೆ ಹೋಗಿರದಿದ್ದರೂ ಓದು ಕಲಿತು ಜೀವನದಲ್ಲಿ ಮುಂದೆ ಬಂದಿದ್ದ. ಆಗುಂಬೆಯವನಾಗಿದ್ದವನು ಈಗ ಸೋಮೇಶ್ವರದಲ್ಲಿ ಒಂದು ಜವಳಿ ಅಂಗಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದ. ಎಲ್ಲೆಡೆ ಸುತ್ತಿ ಬಂದಿದ್ದವನು ವಾಸುದೇವರ ಭಟ್ಟರಿಗೂ ಪಟ್ಟಣದ ಸಮಾಜ ಜೀವನದ ಪರಿಚಯ ಮಾಡುತ್ತಿದ್ದ. 


ತಾರುಣ್ಯ ಹೊಕ್ಕ ಹೊತ್ತಿನಲ್ಲಿ ನೀರಜ ವಾಸುದೇವರಿಗೆ ವಿಭಿನ್ನವಾಗಿ ಕಂಡದ್ದು. ಈ ವೇಳೆಗೆ ಹಲವಾರು ಪುಸ್ತಕಗಳನ್ನು ಓದಿದ್ದರಿಂದ ಆದರ್ಶವೂ ಇದ್ದಿತು. ಕರ್ಣಿಕರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹೆಂಗಸರಲ್ಲಿ ಮಾಲೇರ ನಾಗಮ್ಮನೂ ಒಬ್ಬಳು. ಆಕೆ ಬೇರೆ ಆಳುಗಳಂತಲ್ಲದೆ.. ಕುಲೀನ ಮನೆತವರ ಮನೆತನದವರಂತೆ ಶುಭ್ರವಾಗಿದ್ದು..  ಎಲ್ಲರೊಡನೆ ನಗುನಗುತ್ತಾ ಕೆಲಸ ಮಾಡುತ್ತಾ ಇದ್ದವಳು. ಆಕೆಯ ಮಗಳೇ ನೀರಜ. 


19 ವರ್ಷದ ವಾಸುದೇವರಿಗೆ 13 ವರ್ಷದ ನೀರಜ ಸೆಳೆದಿದ್ದಳು. ಎದ್ದು ಕಾಣುವ ರೂಪವಂತೆಯಲ್ಲದಿದ್ದರೂ.. ವಾಸುದೇವರ ಮನ ಗೆದ್ದಿದ್ದಳು. ಕರ್ಣಿಕರ ಮನೆಯಿಂದ ಕೊಂಚ ದೂರದಲ್ಲಿಯೇ ನಾಗಮ್ಮನ ಮನೆ. ಆಕೆಯ ತಾಯಿ ಬುಳ್ಳಮ್ಮನಿಗೆ ವಯಸ್ಸಾಗಿತ್ತು. ಈಗ ಆಕೆ ಹೊರಗೆಲ್ಲೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ನಾಗಮ್ಮನ ಕುರಿತು ಊರವರಿಗೆ ತಿಳಿಯದ್ದೇನಲ್ಲ.. ಕರ್ಣಿಕರು ಆಸರೆ ನೀಡಿ, ಬದುಕು ನೀಡಿದ್ದರು. ನಾಗಮ್ಮ ತನ್ನ ಮಗಳ ಬದುಕು ತನ್ನಂತಾಗಬಾರದು ಎಂದೇ ಬಯಸಿದ್ದಳು. ಅವಳ ಬದುಕು ಹಾಗಾಗಲು ಕಾರಣ ಆಕೆಯ ತಾಯಿ ಬುಳ್ಳಮ್ಮನೇ..


ಚಿಕ್ಕ ವಯಸ್ಸಿಗೇ ತನ್ನ ಪತಿಯನ್ನು ಕಳೆದುಕೊಂಡಿದ್ದ ಬುಳ್ಳಮ್ಮನಿಗೆ ಆತ ನ ಜೊತೆ ಸಂಸಾರ ಹೂಡಿದ್ದಾಗ ಮಕ್ಕಳಾಗಿರಲಿಲ್ಲ. ಆಕೆಯನ್ನು ಬಂಜೆ ಎಂದು ಹೀಯಾಳಿಸಿದ್ದರು. ಆಕೆಯೂ ಅದನ್ನೇ ನಂಬಿಕೊಂಡಿದ್ದಳು. ಆದರೆ ಒಂದು ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದಾಗ ಮನಸ್ಸು ಜಾರಿ ತಪ್ಪು ಹಾದಿ ಹಿಡಿದಳು. ನಾಗಮ್ಮ ಹುಟ್ಟಿದಳು.

 ಆತನೇನೋ ಸುಲಭವಾಗಿ ತಪ್ಪಿಸಿಕೊಂಡ. ಆದರೆ, ಈಕೆಯನ್ನು ಜಾತಿಯಿಂದ ಬಹಿಷ್ಕಾರ ಹಾಕಲಾಯಿತು. ಆಗ ಮಾಲೇರ ಜಾತಿಗೆ ಸೇರಿಕೊಂಡ ಬುಳ್ಳಮ್ಮನ ದೆಸೆಯಿಂದ ನಾಗಮ್ಮನನ್ನು ಕರ್ಣಿಕರೇ ಪೋಷಿಸುತ್ತಿದ್ದರು. ನೀರಜ ಅವರ ಮಗಳೇ ಆದರೂ.. ಹಾಗೆಂದು ಬಹಿರಂಗವಾಗಿ ಗುರುತಿಸಿಕೊಳ್ಳುವಂತಿರಲಿಲ್ಲ.


ಜಾತಿಯಿಂದ ತಮ್ಮವರೇ ಆಗಿದ್ದರೂ ತಮ್ಮ ಜಾತಿಯಲ್ಲಿ ಗುರುತಿಸಿಕೊಂಡಿರದ ನೀರಜಳನ್ನು ಪ್ರೇಮಿಸುತ್ತಿದ್ದರು. ಆದರೆ, ಆಕೆಯನ್ನು ವಿವಾಹವಾಗಲು ಆಕೆಗೆ 18 ವರ್ಷವಾಗಿರಬೇಕಿತ್ತು. ಅದಕ್ಕಾಗಿ ಇನ್ನೂ ಎರಡು ವರ್ಷ ಕಾಯಬೇಕಿತ್ತು.


ಪದ್ಮನಾಭನ ಜೊತೆ ಮೈಸೂರಿಗೆ ಹೋಗಿದ್ದಾಗ ಅಲ್ಲಿ ಗೋಪಾಲಯ್ಯನ ಹೋಟೆಲ್ ನಲ್ಲಿ ತಂಗುವ ಸಂದರ್ಭ ಬಂದಿತ್ತು. ಅವರಿಗೂ ವಯಸ್ಸಾಗುತ್ತಿತ್ತು. ಅಲ್ಲದೆ ಆರೋಗ್ಯವೂ ಹದಗೆಡುತ್ತಿದ್ದರಿಂದ ಹೋಟೆಲ್ ಮ್ಯಾನೇಜ್ಮೆಂಟ್ ನೋಡಿಕೊಳ್ಳಲು ಯಾರಾದರೂ ಒಬ್ಬರು ನಂಬಿಕೆಯ ವ್ಯಕ್ತಿ ಬೇಕಿತ್ತು. ಅದಕ್ಕಾಗಿ ವಾಸುದೇವನನ್ನೇ ಆರಿಸಿದ್ದರು. ಇದಕ್ಕೆ ಕರ್ಣಿಕರ, ಸಾಂಬಯ್ಯ ಮೇಷ್ಟ್ರ ಹಾಗೂ ಈಶ್ವರ ಭಟ್ಟರ ಒಪ್ಪುಗೆಯೂ ದೊರೆತು ವಾಸುದೇವರು ಇಲ್ಲಿಗೆ ಬಂದು ಸೇರುವಂತಾಯಿತು.


ಗೋಪಾಲಯ್ಯ ಹಾಗೂ ಯಮುನಮ್ಮರ ಪಾಲಿಗೆ ಮಗನಂತೆಯೇ ಆಗಿ ಹೋಗಿದ್ದರು ವಾಸುದೇವರು. ತಂದೆ-ತಾಯಿಯರ ಪಾಲಿಗೆ ಈ ಮಗ ಹೊರಗೆ ಉಳಿದರೆ, ಅಲ್ಲಿ ತೋಟವನ್ನು ನೋಡಿಕೊಳ್ಳಲು ಇವರ ತಮ್ಮ ಜಗನ್ನಾಥನಿದ್ದ. ಆತನ ವಿವಾಹವನ್ನು ಮಾಡಬೇಕಾಗಿದ್ದರಿಂದ ಇವರ ವಿವಾಹಕ್ಕೆ ಒತ್ತಾಯಿಸುತ್ತಿದ್ದರು. 


ಸ್ಥಳ ಬದಲಾದಂತೆ ವಾಸುದೇವರ ಮನಸ್ಸು ಬದಲಾಯಿತಾ..?? ನೀರಜಳ ಪರಿಸ್ಥಿತಿ ಏನಿತ್ತು..?? ಸಾಂಬಯ್ಯ ಮೇಷ್ಟ್ರಿಗೆ ತಮ್ಮ ಮಗಳು ಲಲಿತೆಯನ್ನು ವಿವಾಹ ಮಾಡಬೇಕೆಂದು ಮನಸಿನಲ್ಲಿದ್ದರೂ.. ಆಕೆ ಸರಿಯಾದ ಈಡು-ಜೋಡಲ್ಲ ಎಂದುಕೊಂಡಿದ್ದರು. ಇತ್ತ ಗೋಪಾಲಯ್ಯನವರು ತಮ್ಮ ಪರಿಚಿತರ ಒಂದು ಹುಡುಗಿಯನ್ನು ನೋಡಿಟ್ಟಿದ್ದರು. ವಾಸುದೇವರು ಕೈಹಿಡಿದದ್ದು ಯಾರನ್ನು..?? ನೀರಜಾಳು ತನ್ನ ಅಮ್ಮ, ಅಜ್ಜಿಯರಂತೆಯೇ ಬದುಕು ಸಾಗಿಸಬೇಕಾಯಿತೇ..?? ಅಥವಾ ಅವಳಿಗೆ ಬೇರೆಯ ಬಾಳು ದೊರೆತಿತೇ..?? ವಾಸುದೇವರು ಶಿಕ್ಷಕ ವೃತ್ತಿಯನ್ನು ಬಿಟ್ಟು ಒಂದು ಗೋಪಾಲಯ್ಯನವರ ಬಳಿ ಕೆಲಸಕ್ಕೆ ಸೇರಿದ್ದೇಕೆ..?? ಅವರ ಔದ್ಯೋಗಿಕ ಬದುಕು ಇಲ್ಲಿಗೆ ಅಂಟಿಕೊಂಡಿತೇ ಅಥವಾ ತಿರುಗಿ ತಂದೆ-ತಾಯಿಯ ಬಳಿ ಹೋದರೇ..?? ವಾಸುದೇವರ ಬದುಕು ಬದಲಾಗಲು ಪದ್ಮನಾಭನ ಪಾತ್ರವೆಷ್ಟಿತ್ತು....??

ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಜಾತಿ ಕೆಟ್ಟವಳು ಕಾದಂಬರಿಯನ್ನು. 


ಕಾದಂಬರಿಯಲ್ಲಿ ಪಾತ್ರಗಳು ಹಾಗೂ ಸ್ಥಳಗಳು ಕಥೆಗೆ ತಕ್ಕಂತೆ ಹೊಂದಿಕೆಯಾಗಿವೆ. 'ಬದಲಾವಣೆ ಜಗದ ನಿಯಮ' ಎನ್ನುತ್ತಾರೆ. ಬದಲಾಗಲು ಸಮಯವೂ ಹಿಡಿಯುತ್ತದೆ. ಆದರೆ, ಆ ಬದಲಾವಣೆಗೆ ಮೂಲಕ ಕಾರಣ ಹಾಗೂ ಆ ಬದಲಾವಣೆಯ ಹಾದಿ ಸೊಗಸಾಗಿ ಚಿತ್ರಿತವಾಗಿದೆ. 

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ